ಈತ ರಾಜೇಶ್..

-ಅಭಯ ಸಿಂಹ
ಅಭಯ ಟಾಕೀಸ್
ಮುಂದಿನ ಚಿತ್ರ, ‘ಶಿಕಾರಿ’ ನಿರ್ಮಣಕ್ಕೆ ತಯಾರಿಗಳು ಭರದಿಂದ ಸಾಗಿದೆ. ಒಂದು ಸಂಜೆ ಗೆಳೆಯ ರಾಜೇಶನ ದೂರವಾಣಿ ಕರೆ ಬಂತು. ಅವನು ಐ.ಎ.ಎಸ್ ಪರೀಕ್ಷೆಯಲ್ಲಿ ಪಾಸ್ ಆಗಿದ್ದ! ಎಂಥಾ ಸಂತೋಷದ, ಸಂಭ್ರಮದ ಸಮಯ ಅದು! ಕಳೆದ ಸುಮಾರು ಹತ್ತು ವರುಷಗಳ ಸ್ನೇಹ ನಮ್ಮದು. ಅದರ ಉದ್ದಕ್ಕೂ ಐ.ಎ.ಎಸ್ ತಯಾರಿಯಲ್ಲಿ ರಾಜೇಶ ಕಳೆದ ದಿನಗಳು, ರಾತ್ರಿಗಳು ನನಗೆ ಗೊತ್ತು. ದೆಹಲಿಯಲ್ಲಿನ ಚಳಿಯಲ್ಲಿ, ಸುಡು ಬಿಸಿಲಿನಲ್ಲಿ, ಮಂಗಳೂರಿನ ಕೊಂಪೆಯಂಥಾ ಹಾಸ್ಟೆಲ್ಲಿನಲ್ಲಿ, ಬೆಂಗಳೂರಿನ ಬಿಡುವಿಲ್ಲದ ಟ್ರಾಫಿಕ್ಕಿನಲ್ಲಿ, ಕಾಫೀ-ಹೌಸ್ ಕಾಫಿಯೊಂದಿಗೆ ಅದೆಷ್ಟೋ ಬಾರಿ ಭೇಟಿ ಮಾಡಿದ್ದೆವು, ಮನೆಯಲ್ಲಿ ರಾತ್ರಿ ಊಟ ಮಾಡಿ ಕೈ ಒಣಗುವವರೆಗೆ ಮಾತನಾಡಿ ಸಿಸ್ಟಂ ಸರಿ ಇಲ್ಲ ಎಂದು ಗೊಣಗಾಡಿದ್ದೆವು. ಅದಕ್ಕೆಲ್ಲ ಒಂದು ಸುಂದರ ಅಂತ್ಯವಾಗಿ ಈ ಸುದ್ದಿ ಕೊಟ್ಟ ರಾಜೇಶ, ಅನೇಕ ನಿಮಿಷಗಳವರೆಗೆ ನನ್ನನ್ನು ಮೂಕನನ್ನಾಗಿಸಿದ್ದ. ಆದರೆ ಇದು ಅಂತ್ಯವೇ? ಅಥವಾ ಹಳೇ ಸಿನೆಮಾಗಳಲ್ಲಿ ಹೇಳುವಂತೆ, “ಇದು ಅಂತ್ಯವಲ್ಲ, ಕೇವಲ ಆರಂಭ ಮಾತ್ರವೇ?!”
ಪದವಿ ಮಾಡುತ್ತಿರುವಾಗಲೇ ನನಗೆ ಮುಂದಿನ ವೃತ್ತಿ ಜೀವನದ ಕುರಿತಾಗಿ ನಿರ್ದಿಷ್ಟ ಗುರಿ ಸಿಕ್ಕಿದ್ದದ್ದು. ಆದರೆ ರಾಜೇಶನಿಗೋ ಅದು ಪಿ.ಯೂ.ಸಿ ಓದುತ್ತಿರುವಾಗಲೇ ಸ್ಪಷ್ಟವಾಗಿತ್ತು. ತಾನು ಐ.ಎ.ಎಸ್ ಆಗಲೇ ಬೇಕು ಎಂದು ಹಠವನ್ನು ಅವನು ಆಗಲೇ ತೊಟ್ಟಿದ್ದ. ಮಂಗಳೂರಿನ ಅಲೋಷಿಯಸ್ ಕಾಲೇಜಿಗೆ ಆರ್ಟ್ಸ್ ಓದಲು ಅವನು ಬಂದದ್ದೇ ಆ ಕಾರಣದಿಂದ. ನಾನು ಸಿನೆಮಾ ಆಯ್ಕೆ ಮಾಡಿದೆ, ಅವನು ಸಿವಿಲ್ ಸರ್ವೀಸ್. ಬ್ಯೂರೋಕ್ರಸಿ ಬಗ್ಗೆ ಒಳಗೊಳಗೆ ಇಬ್ಬರಿಗೂ ಅಷ್ಟಕ್ಕಷ್ಟೇ ಗೌರವ ಇದ್ದದ್ದಕ್ಕೆ ನಮ್ಮ ವ್ಯವಸ್ಥೆ ಕಾರಣ ಎನ್ನಲೇ? ಅಥವಾ, ನಾವು ವ್ಯವಸ್ಥೆಯನ್ನು ನೋಡುವ ನೋಟವನ್ನು ನೀಡಿದವರು ಕಾರಣವೇ ನಾನು ಅರಿಯೆ. ಆದರೆ ದಿನದಿಂದ ದಿನಕ್ಕೆ ವೃತ್ತಿಯ ಮೂಲಕ ನಮ್ಮಿಬ್ಬರ ಜಗತ್ತುಗಳು ಸಾಕಷ್ಟು ದೂರವಾದವು. ಆದರೆ ಅಭಿರುಚಿಗಳಿಂದಾಗಿ ಒಟ್ಟಿಗೇ ಇದ್ದೆವು, ಮತ್ತೆ ಮತ್ತೆ ಭೇಟಿಯಾಗುತ್ತಿದ್ದೆವು. ಭೇಟಿಯಾದಾಗಲೆಲ್ಲ, ಚಿತ್ರಜಗತ್ತಿನ, ಸೃಜನೇತರ ವಿಷಯಗಳ ಕುರಿತು ನಾನು ಮಾತನಾಡಿ ಬೇಸರಪಟ್ಟರೆ, ಅವನು ಅಧಿಕಾರವರ್ಗದ ಒಳತೋಟಿಗಳಿಗೆ ಧ್ವನಿಯಾಗುತ್ತಿದ್ದ. ಇಂಥವನು ಹೇಗೆ ಐ.ಎ.ಎಸ್ ಆಗಲು ಸಾಧ್ಯ ಎಂದು ಮನದೊಳಗೇ ನನಗೆ ಮೊದಲು ಪ್ರಶ್ನೆಗಳು ಇದ್ದವು.

ಬಿಹಾರದಂಥಾ ಹಿಂದುಳಿದ ರಾಜ್ಯದಲ್ಲಿ ಬಡತನದ ಬೇಗೆಯಲ್ಲಿ ಬಳಲುತ್ತಿರುವ ಅಸಂಖ್ಯ ಜನರು, ಕನಿಷ್ಟ ಅಧಿಕಾರದಿಂದ ನಮ್ಮ ಬಡತನ ನೀಗಲಿ ಎಂದು ಐ.ಎ.ಎಸ್ ಆಗುವ ಪ್ರಯತ್ನ ಮಾಡುವುದು, ಹೀಗೆ ಬಯಸಿ ಅಕಸ್ಮತ್ತಾಗಿ ಅಧಿಕಾರ ಸಿಕ್ಕಾಗ ಅದರ ದುರುಪಯೋಗ ಮಾಡಿ ಸ್ವಾರ್ಥ ಸಾಧಿಸುವವರು ಅನೇಕರು. ಇದು ಕೇವಲ ಬಿಹಾರಕ್ಕೆ ಸೀಮಿತವಲ್ಲ. ಇಂಥಾ ಅಧಿಕಾರದ ಹಸಿವಿನ ಜನರು, ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಬಯಸುವವರು ಅಸಂಖ್ಯರು. ಇಂಥವರ ಸಾಗರದಲ್ಲಿ ಈಜಿ ತಾನು ನಂಬಿದ ಮೌಲ್ಯಗಳಿಗೆ ಬದ್ಧವಾಗಲು ಹೊರಟಿದ್ದಾನೆ ನನ್ನ ಗೆಳೆಯ ಎಂದು ಅನೇಕ ಬಾರಿ ಹೆಮ್ಮೆಯೆನಿಸಿದರೂ, ಸಾಗರದ ಅಗಾಧತೆಯಲ್ಲಿ ನನ್ನ ಗೆಳೆಯ ಕೆಳೆದು ಹೋದಾನೇ ಎಂಬ ಆತಂಕವೂ ನನ್ನನ್ನು ಅನೇಕ ಬಾರಿ ಕಾಡಿದೆ. ಆದರೆ ಅದನ್ನೆಂದೂ ಆತನಿಗೆ ನಾನು ಹೇಳಿಲ್ಲ!
ಅದ್ಯಾವುದೋ ಒಂದು ಸಂದರ್ಭದಲ್ಲಿ ನನ್ನ ವೃತ್ತಿ ಸಂಬಂಧ, ದೆಹಲಿಯ ಜೆ.ಎನ್.ಯೂ ವಿದ್ಯಾರ್ಥಿಯೊಬ್ಬನ ಸಂದರ್ಶನ ಮಾಡುತ್ತಿದ್ದೆ. ಆಗ ಭಾರತೀಯ ರಾಜಕೀಯದ ಬಗ್ಗೆ, ಅಧಿಕಾರ ಕ್ರಮದ ಕುರಿತಾಗಿ ಒಂದು ಪ್ರಶ್ನೆ ಬಂತು. ಅದಕ್ಕೆ ಉತ್ತರಿಸುತ್ತಾ ಅವನು, “ನಮ್ಮ ರಾಜಕೀಯ ಬಹಳ ಚೆನ್ನಾಗಿದೆ. ಅದು ಕ್ರೂರಿಯಾಗಿದೆ, ಕುರೂಪಿಯಾಗಿದೆ, ಕುರುಡಾಗಿದೆ, ಹುಚ್ಚುಚ್ಚಾಗಿದೆ ಆದರೆ ಜೆನ್ನಾಗಿದೆ ಯಾಕೆಂದರೆ ಭಾರತ ಇರುವುದೇ ಹಾಗೆ. ನಮ್ಮ ರಾಜಕೀಯ ನಮ್ಮನ್ನು ಹೊರತಾದುದ್ದಲ್ಲ” ಎಂದ! ಹೌದಲ್ಲಾ! ನಾವು ಎಷ್ಟು ಬಾರಿ ನಾವೇ ಗಣತಂತ್ರ ದೇಶದ ಪ್ರತಿನಿಧಿಗಳು ಎಂದರೂ, ನಮ್ಮೊಳಗೆ, ನಮ್ಮ ಸಮಸ್ಯೆಗಳಿಗೆಲ್ಲಾ ಸರಕಾರ, ಅಧಿಕಾರಿಗಣ ಕಾರಣ ಎನ್ನುವ ಪಲಾಯನವಾದ ಇದ್ದೇ ಇದೆಯಲ್ಲವೇ? ಗೆಳೇಯ ರಾಜೇಶ ಇದನ್ನೇ ಎದುರಿಸಲು ಹೊರಟು ನಿಂತಿದ್ದ ಎಂದು ಅರಿವಾಗಿದ್ದು ಅಂದೇ. ಹೀಗೆ ಪಯಣ ಹೊರಟ ಆಳು, ಐದುವರೆ ಅಡಿ ಎತ್ತರ ಇಲ್ಲದ, ಸರಳ, ಹಸನ್ಮುಖಿ ರಾಜೇಶ!
ವ್ಯವಸ್ಥೆಯನ್ನು ದೂರುವುದನ್ನು ಬಿಟ್ಟು, ಅದರೊಳಗಿನ ಗುಣಾತ್ಮಕ ಬದಲಾವಣೆಯಾಗಲು ಹೊರಟ ಗೆಳೆಯನಿಗೆ ಅಭಿನಂದನೆಗಳು. ನಮ್ಮ ದೇಶದ ಆತ್ಮಕ್ಕೆ ಒಂದು ಒಳ್ಳೆಯ ದನಿ ನಮ್ಮ ಗೆಳೆಯನದಾಗಲಿ ಎಂದು ಹಾರೈಸೋಣ. ಭ್ರಷ್ಟ ಸಾಗರದಲ್ಲಿ ಈಜಿ ಗೆಲ್ಲುವ ನಿಜ ಪರೀಕ್ಷೆ ಈಗ ಆರಂಭವಾಗಲಿದೆ, ಅಲ್ಲಿ ನಮ್ಮ ಗೆಳೆಯ ರಾಜೇಶ್ ಪಾಸಾಗಲಿ ಎಂದು ನಾವೆಲ್ಲ ಆಶಿಸೋಣ

‍ಲೇಖಕರು avadhi

May 7, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

4 ಪ್ರತಿಕ್ರಿಯೆಗಳು

 1. Laxminarayana Bhat P

  ರಾಜೇಶನಿಗೆ ಹಾರ್ದಿಕ ಅಭಿನಂದನೆಗಳು!
  ನಮ್ಮೆಲ್ಲಾ ಆಸೆ, ನಿರೀಕ್ಷೆಗಳು ನಿಜವಾಗುವ ಹಾಗಿದ್ದರೆ ಎಷ್ಟು ಚೆನ್ನ!!
  ಹಾಗೆಂದು ಆಸೆ, ನಿರೀಕ್ಷೆಗಳನ್ನು ಮೀರಿ ಬದುಕು ಇರಲು ಸಾಧ್ಯವೇ?!!!
  ಪ್ರೀತಿಯಿಂದ,

  ಪ್ರತಿಕ್ರಿಯೆ
 2. harsha

  a prompt IAS officer can only crate some illusions about our corrupt system. Not more than that. It can be a good film story if one go and find out what has happened to all those goog heartd IAS officers in Indian politics. they r made to suffer like anything…and most of them finally made copmpromises with the corruption n all. isn’s it dear abhay simha?.

  ಪ್ರತಿಕ್ರಿಯೆ
 3. subbanna

  ರಾಜೇಶನಿಗೆ ಹಾರ್ದಿಕ ಅಭಿನ೦ದನೆಗಳು. ಜೆ ಎನ್ ಯೂ ವಿದ್ಯಾರ್ಥಿ ಅ೦ದ೦ತೆ “ನಾವು ನಮಗೆ ಯೋಗ್ಯವಾದುದನ್ನೇ ಪಡೆಯುತ್ತೇವೆ”. ನಿನ್ನ, ನಮ್ಮ ಸಮಾನ ಮನಸ್ಕನನ್ನು ಐಎ ಎಸ್ ಅಧಿಕಾರಿಯಾಗಿ ಪಡೆಯುತ್ತಿದ್ದೇವೆ. ಖ೦ಡಿತ ಒಳ್ಳೆಯದಾಗುತ್ತದೆ. ವ೦ದನೆಗಳು.

  ಪ್ರತಿಕ್ರಿಯೆ
 4. ಜಿ.ಎನ್.ಅಶೋಕವರ್ಧನ

  ರಾಜೇಶನಿಗೆ ಮಜಬೂತಾದ ಬೈಕ್ ಸಿಕ್ಕಿದೆ. ಆದರೆ ದಾರಿಯುದ್ದಕ್ಕೂ ಭಾರೀ ವಾಹನಗಳ ಸಮ್ಮರ್ದ, ಆಳವಾಗುಳಿದ ಗಾಲಿಜಾಡುಗಳ ಗೊಂದಲ. ಹೆಲ್ಮೆಟ್ ಬಿಗಿಯಿರಲಿ, ಗುರಿ ಶುದ್ಧವಿರಲಿ, ಸಾಹಸಯಾತ್ರೆಗೆ ಶುಭಾಶಯಗಳು.
  ಅಶೋಕವರ್ಧನ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: