
ಹೇಮಂತ್ ಎಲ್ ಚಿಕ್ಕಬೆಳವಂಗಲ
ಇದು ಇಂದು ನಿನ್ನೆಯದಲ್ಲ!
ಸಾಗರದಂತಹ ನಿನ್ನೂರಿಗೆ
ನಾನು ಬರುವಾಗಲೆಲ್ಲಾ
ನಿನಗೆ
ಹೇಳಿಯೇ ಇರುತ್ತೇನೆ..
ಎಲ್ಲ ಕೆಲಸಗಳ ನಡುವೆಯೂ,
ಬಿಡುವು ಮಾಡಿಕೊಂಡು
ನೀನು..,
ಸಿಗಬಹುದೆಂಬ ಆಸೆ,
ನನಗರಿವಿಲ್ಲದೆಯೇ
ಗರ್ಭಧರಿಸುತ್ತದೆ..
ಬರುವ ದಾರಿಯುದ್ದಕ್ಕೂ
ನಿನ್ನದೇ ಯೋಚನೆ..
ಹೋಗಬೇಕಾದ ಜಾಗ,
ಆಡಬೇಕಾದ ಮಾತು,
ಕಳೆಯಬೇಕಾದ ಸಮಯ,
ಹೀಗೇ..
ಕೂಸು ಕಿಬ್ಬೊಟ್ಟೆಯಲಿ
ಬೆಳೆಯುತ್ತಲೇ ಸಾಗುತ್ತದೆ

ಅಲ್ಲಿ ಬಂದು,
ನಿನಗೆ ಕರೆ ಮಾಡಿ;
ಅದನ್ನು ಸ್ವೀಕರಿಸದೆ,
ನಾನು ಪರದಾಡಿ
ಮೆಸೇಜು ಮಾಡಿ
ಮೆಸೇಜನ್ನೂ ನೋಡದೆ
ನನ್ನನ್ನು ಕಾಯಿಸುತ್ತಲೇ
ಸತಾಯಿಸುತ್ತೀಯಲ್ಲ!?
ಆಗ
ಪ್ರಸವವೇದನೆ ಶುರು..
ಅದೆಷ್ಟೋ ಮರಗಳ ಕೆಳಗೆ,
ಬಸ್ಟಾಪುಗಳ ಪಕ್ಕದಲ್ಲಿ,
ಮಾಲು – ಅಂಗಡಿ – ಹೋಟೆಲು,
ಕಂಡವರ ಮನೆಯ ಗೇಟುಗಳ
ಮುಂದೆ, ಗಂಟೆಗಟ್ಟಲೆ
ನಿನಗಾಗಿ ಸುಖಾಸುಮ್ಮನೆ
ಕಾಯುವಾಗಲೆಲ್ಲ
ಈ ಆಸೆಯ
ಬಸುರ ಭಾರ, ತಲ್ಲಣಿಸಿಬಿಡುತ್ತದೆ..
ಕೊನೆಗೂ ..
ನೀನಾಗಲೀ,
ಫೋನು ಕರೆಗೆ ಉತ್ತರವಾಗಲೀ,
ಸಿಗದೆ ಮನೆಗೆ ಮರಳಿದಾಗ
ಸಿಟ್ಟು, ನೋವು, ಹತಾಶೆ,
ಪ್ರೀತಿಗಳೆಲ್ಲವೂ…
ಹೀಗೆ , ಹಾಳೆಯ ಮೇಲೆ
‘ಕವನ’ ಗಳಾಗಿ
ಗರ್ಭಪಾತವಾಗುತ್ತದೆ
ನಿನ್ನೂರಿಗೆ
ಮತ್ತೊಮ್ಮೆ ಹೊರಟಾಗಲೂ
ಇದೇ ಕಥೆ..
0 ಪ್ರತಿಕ್ರಿಯೆಗಳು