ಈ ನಂದಾದೇವಿಯೆಂಬ ಹಿಮಪರ್ವತದ ನೆನಪಿನಲ್ಲಿ

ಹುಟ್ಟಿದ್ದು, ಬೆಳೆದಿದ್ದು ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ. ಓದಿದ್ದು ಪತ್ರಿಕೋದ್ಯಮ. ಏಳೆಂಟು ವರ್ಷ ಕನ್ನಡದ ಪತ್ರಿಕೆ, ಟಿವಿ ಮಾಧ್ಯಮಗಳಲ್ಲಿ ವರದಿಗಾರ್ತಿ, ಬರಹಗಾರ್ತಿಯಾಗಿ ಕೆಲಸ ಮಾಡಿದ್ದಾರೆ.

ಸದ್ಯ ದೆಹಲಿಯ ಹಿಂದಿ ಗಾಳಿಯಲ್ಲಿ ಕನ್ನಡ ಉಸಿರಾಡುತ್ತಿದ್ದಾರೆ. ಕಳೆದೊಂದು ವರ್ಷದಿಂದ ಇಲ್ಲಿನ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ಮಹಿಳಾ ಸ್ವಾವಲಂಬನೆ ವಿಭಾಗದಲ್ಲಿ ಗ್ರಾಮೀಣ ಮಹಿಳೆಯರಿಗೆ ಕಲಾ ತರಬೇತಿ ನೀಡುತ್ತಿರುವುದು ತೃಪ್ತಿಕೊಟ್ಟಿದೆ.

ತಿರುಗಾಟಹುಚ್ಚು. ಸ್ಟ್ರೆಂತೂ, ವೀಕ್ನೆಸ್ಸುಗಳೆರಡೂ ಹಿಮಾಲಯವೇ.  ಬದುಕಿನ ಚಿಕ್ಕ ಚಿಕ್ಕ ಸಂಗತಿಗಳು ಕ್ಯಾಮೆರಾ ಫ್ರೇಮಿನೊಳಗೆ ಇಳಿವಾಗ ಅವುಗಳು ರೂಪಾಂತರ ಹೊಂದುವ ಅದ್ಭುತ ಸಾಧ್ಯತೆಗಳ ಬಗ್ಗೆ ಸದಾ ಬೆರಗು.

ಅಂದೊಮ್ಮೆ ಉತ್ತರಾಖಂಡದ ಔಲಿಯ ತುತ್ತತುದಿಯಲ್ಲಿ ಕೂತು ಮಂಜೆಲ್ಲ ಇದ್ದಕ್ಕಿದ್ದಂತೆ ಮಾಯವಾಗಿ ಕಣ್ಣೆದುರು ಧಿಗ್ಗನೆ ಪ್ರತ್ಯಕ್ಷವಾದಂತೆ ಹಿತವಾದ ಬಿಸಿಲಿನಲ್ಲಿ ಬೆಳ್ಳಗೆ ಪ್ರಜ್ವಲಿಸುತ್ತಿದ್ದ ನಂದಾದೇವಿಯನ್ನು ನೋಡುತ್ತಿದ್ದಾಗ ಇಹಲೋಕವನ್ನೇ ಮರೆತುಬಿಟ್ಟಿದ್ದೆ. ಅಂಥ ಅದ್ಭುತ ದೃಶ್ಯವದು. ಶಬ್ದಗಳಲ್ಲೆಲ್ಲ ವರ್ಣಿಸಲು ಸಾಧ್ಯವಿಲ್ಲ ಅಂತಾರಲ್ಲ ಹಾಗೆ, ಅನುಭವಿಸಿ ಮೌನವಾಗಿ ಒಳಗಿಳಿಸಿಕೊಳ್ಳುವಂಥದ್ದು. ಇದಾದ ಮೇಲೆ ನಂದಾದೇವಿಯ ದಿಗ್ದರ್ಶನ ಇಷ್ಟು ಚೆಂದಕ್ಕೆ ಎಂದಿಗೂ ಆಗಲಿಲ್ಲ. ಮೊನ್ನೆ ಮೊನ್ನೆಯ ಅವಘಡದ ನಂತರವಂತೂ ದಿನವೂ ಈ ನಂದಾದೇವಿ ಕಣ್ಣ ಮುಂದೆ ಪದೇ ಪದೇ ಬರುತ್ತಿದ್ದಾಳೆ.

ಸ್ವಲ್ಪ ಹೊತ್ತು ಅಲ್ಲೇ ನಿಂತು ನನ್ನ ಕಣ್ಣೆದುರು ಬಲಗಡೆಯಲ್ಲಿ ಆಗಸಕ್ಕೆ ಚಾಚಿ ನಿಂತಿದ್ದ ಆ ಬೃಹತ್‌ ಹಿಮಪರ್ವತ ದೇವಿಯನ್ನು ಇಡಿಯಾಗಿ ಕಣ್ತುಂಬಿಕೊಂಡು, ಆಕೆಗೆ ತಾಗಿಕೊಂಡೇ ನಿಂತಿರುವ ಗಡ್‌ವಾಲ್‌ ಹಿಮಾಲಯದ ಅಷ್ಟೂ ಹಿಮಪರ್ವತಗಳನ್ನು ಹಾಗೆಯೇ ನೋಡುತ್ತಾ ನಿಂತಿದ್ದೆ. ನಂದಾದೇವಿ ಬಿಡಿ, ಏನಿದ್ದರೂ ಆಕೆ ಷೋ ಸ್ಟಾಪರ್.‌ ಮಿಕ್ಕಂತೆ ಆಕೆಗೆ ತಾಗಿಕೊಂಡೇ ನಿಂತಿರುವ ದ್ರೋಣಗಿರಿ (ರಾಮ-ರಾವಣರ ಯುದ್ಧದಲ್ಲಿ ಲಂಕೆಯಿಂದ ನೆಗೆದು ಸಂಜೀವಿನಿಗಾಗಿ ಹೊತ್ತೊಯ್ದನೆನ್ನಲಾದ ಪರ್ವತವಿದು ಎಂಬ ನಂಬಿಕೆ), ಹಾಥಿ-ಘೋಡಾ, ತ್ರಿಶೂಲ, ಚೌಕಂಬಾ, ನೀಲಕಂಠ ಹೀಗೆ ಸಾಲು ಸಾಲು ಪರ್ವತಗಳು ಎದೆಯುಬ್ಬಿಸಿ ನಿಂತಂತೆ ಕಾಣುವ ದಿವ್ಯ ಕ್ಷಣವದು. ಅಲ್ಲಿಂದ ನಡೆದು ಬರುವಾಗ ನಮ್ಮ ಕನ್ನಡ ಕೇಳಿದ ಯಾರೋ ಒಬ್ಬರು, ಯಾವೂರು ನಿಮ್ದು ಅಂದಾಗ, ಮಂಗಳೂರು ಹತ್ತಿರ ಅಂತ ಗೊತ್ತಾಗಿ, ʻಮಂಗಳೂರಿಗೆ ಒಂದೆರಡು ಬಾರಿ ಹೋಗಿರುವೆ, ಕೆಲಸಕ್ಕಾಗಿ. ಅಲ್ಲೆಲ್ಲ ಅಕ್ಕ ಪಕ್ಕ  ಪುಟ್ಟಪುಟಾಣಿ ಬೆಟ್ಟಗಳಿವೆ ಅಲ್ವಾ?ʼ ಅಂದುಬಿಟ್ಟಿದ್ದರು. ʻಅಯ್ಯೋ ರಾಮ, ನಮ್ಮ ಪಶ್ಚಿಮ ಘಟ್ಟವನ್ನೆಲ್ಲ ಇವರು ಎಷ್ಟು ಸುಲಭವಾಗಿ ಸಣ್ಣಪುಟ್ಟ ಬೆಟ್ಟ ಅಂದುಬಿಟ್ರಲ್ಲಾ!ʼ ಅಂತ ಒಮ್ಮೆ ಸೂಜಿಯಲ್ಲಿ ಚುಚ್ಚಿದ ಹಾಗಾದ್ರೂ, ಈ ಭವ್ಯ ದಿವ್ಯ ನಂದಾದೇವಿಯೆದುರು ನಮ್ಮ ದಕ್ಷಿಣದ ಪರ್ವತಗಳೆಲ್ಲ ಅವಳ ಮಡಿಲಲ್ಲಿ ಆಡುವ ಮಕ್ಕಳಂತೆ ಕಾಣಬಹುದಲ್ಲ ಅನಿಸಿಬಿಟ್ಟಿತು. ಆತನಿಗೆ ಹುಂ ಎಂಬಂತೆ ಸಣ್ಣಗೆ ನಕ್ಕು ಮುಂದುವರಿದಿದ್ದೆ.

ಈ ನಂದಾದೇವಿ ಉತ್ತರಾಖಂಡದಲ್ಲಿ ಹೋದಲ್ಲೆಲ್ಲ ದರ್ಶನ ಕೊಡುವುದಿಲ್ಲ. ಚೌಕಂಬಾ, ತ್ರಿಶೂಲ, ನೀಲಕಂಠ, ದ್ರೋಣಗಿರಿ, ಕೇದಾರನಾಥದ ಶ್ರೇಣಿಗಳನ್ನು ಕಾಣಲು ಹಲವಾರು ದಾರಿಗಳಿವೆ. ಪಂಚಕೇದಾರದ ಚಾರಣಗಳೂ ಸೇರಿದಂತೆ ಹಲವು ಸಣ್ಣಪುಟ್ಟ ಚಾರಣಗಳಲ್ಲೂಇವುಗಳ ದರ್ಶನವಾಗುತ್ತದೆ. ಬದರೀನಾಥದಲ್ಲಿ ನಿಂತರೆ ನೀಲಕಂಠನ ಅದ್ಭುತ ದರ್ಶನವಾಗುತ್ತದೆ. ಮೊದಲು ನೀಲಕಂಠನೆಂಬ ಪರ್ವತವೇ ಈ ಜಾಗದಲ್ಲಿ ಇರಲಿಲ್ಲವೆಂದೂ, ಕೇದಾರ, ಬದರಿಗಳಲ್ಲಿ ಅರ್ಚಕನೊಬ್ಬ ಪೂಜೆ ಮಾಡಿ ತೊಳೆದುಕೊಂಡ ಆತನ ಪಾಪವೇ ಈ ನೀಲಕಂಠ ಪರ್ವತದ ರೂಪದಲ್ಲಿ ಎದ್ದು ನಿಂತಿತು ಎಂಬಂತ ಮಜವಾದ ಕಥೆಯೂ ಇದೆ.

ಸತೋಪಂಥ್‌, ಸ್ವರ್ಗಾರೋಹಣ, ವಸುಧಾರಾ ಜಲಪಾತದ ಚಾರಣಗಳಲ್ಲಿ ನೀಲಕಂಠ ಪರ್ವತವನ್ನು ಬಹಳ ಚೆಂದಕ್ಕೆ, ಬೆಳಗಿನ ಸೂರ್ಯನ ಹೊಂಬಣ್ಣದಲ್ಲಿ ಅದ್ದಿ ತೆಗೆದಂತೆ ನೋಡಬಹುದು. ಆದರೆ ನಂದಾದೇವಿ ಮಾತ್ರ ಹಾಗಲ್ಲ. ರಾಣಿಕೇತ್‌, ಅಲ್ಮೋರಾಗಳ ಕಡೆಯಿಂದ ಈಕೆ ಕಂಡರೂ ಅಲ್ಲಿ ಬೇರೆಯದೇ ಸ್ವರೂಪ. ಅಡಿಯಿಂದ ಮುಡಿಯವರೆಗಿನ ಪೂರ್ಣ ದರ್ಶನ ಸಿಗಬೇಕಾದರೆ ಕನಿಷ್ಟ ಪಕ್ಷ ಔಲಿಯ ತುದಿಗಾದರೂ ಹೋಗಬೇಕು. ಇದು ಬಿಟ್ಟರೆ, ಕುವರಿ ಪಾಸ್‌ ಚಾರಣ ನಂದಾದೇವಿಯ ದರ್ಶನಕ್ಕೆಂದೇ ಹೇಳಿ ಮಾಡಿಸಿದಂಥದ್ದು. ಇದನ್ನೂ ಬಿಟ್ಟರೆ, ಧನಾರ್ಸಿ ಪಾಸ್‌ ಚಾರಣವೂ ಬಹಳ ಹತ್ತಿರದಿಂದ ನಂದಾದೇವಿಯ ದರ್ಶನ ಮಾಡಿಸುತ್ತದೆ. ಈ ಎರಡೂ ಚಾರಣಗಳಲ್ಲಿ ನಂದಾದೇವಿ ಅದ್ಭುತವಾಗಿ ಹತ್ತಿರದಿಂದ ಕಾಣುತ್ತಾಳೆ.

ನಂದಾದೇವಿಯೆಂದರೆ ಉತ್ತರಾಖಂಡದ ಜನರಿಗೆ ಭಯ ಭಕ್ತಿ. ಮನೆದೇವರ ಹಾಗೆ. ಗಡ್‌ವಾಲ್‌ ಮತ್ತು ಕುಮಾಂವ್‌ ಪ್ರದೇಶದ ಜನರ ಜನಪದ ಕಥೆಯೂ ಇದರೊಂದಿಗೆ ಬೆಸೆದುಕೊಂಡಿದೆ. ಭಾಗೇಶ್ವರ್‌, ಪಿಥೋರಾಗಡ್‌, ಚಮೋಲಿ, ಅಲ್ಮೋರಾ ಜಿಲ್ಲೆಗಳಲ್ಲಿ ಈಗಲೂ ನಂದಾದೇವಿಯ ಹೆಸರಿನಲ್ಲಿ ಯಾತ್ರೆಯೊಂದು ೧೨ ವರ್ಷಗಳಿಗೊಮ್ಮೆ ನಡೆಯುತ್ತದೆ.

ಕರ್ಣ ಪ್ರಯಾಗದಿಂದ ರೂಪಕುಂಡದವರೆಗೂ ಕುರಿಗಳೊಂದಿಗೆ ಮೂರು ವಾರಗಳ ಯಾತ್ರೆ ಹೋಗುತ್ತಾರೆ. ಇಲ್ಲಿ ಹೋದಲ್ಲೆಲ್ಲ ನಂದಾದೇವಿ ದೇವಸ್ಥಾನಗಳೂ ಸಾಕಷ್ಟಿವೆ. ಜನಪದದ ಪ್ರಕಾರ, ಚಮೋಲಿಯ ಚಂದ ರಾಜಮನೆತನದ ರಾಜನ ಮಗಳು ನಂದಾ ಸುರಸುಂದರಿ. ರೋಹಿಲ್ಲಾದ ರಾಜಕುಮಾರನೊಬ್ಬ ಈ ನಂದಾಳ ಸೌಂದರ್ಯಕ್ಕೆ ಮರುಳಾಗಿ ಆಕೆಯನ್ನು ಪಡೆಯಲು ಇನ್ನಿಲ್ಲದಂತೆ ಹವಣಿಸಿ ಆಕೆ ಸಿಗದಾದಾಗ, ಕೊನೆಗೆ ಯುದ್ಧಕ್ಕೆ ಬಂದ. ಆತ ಯುದ್ಧದಲ್ಲಿ ಗೆದ್ದೂ ಬಿಟ್ಟ. ಸೋತ ಮೇಲೆ ಇನ್ನು ತಾನು ಅವನವಶವಾದಂತೆ ಎಂದರಿತ ನಂದಾ ಅದು ಇಷ್ಟವಿಲ್ಲದೆ, ಬೇರೆ ಉಪಾಯ ಕಾಣದೆ, ಆತನಿಂದ ತಪ್ಪಿಸಿಕೊಳ್ಳಲು ಪರ್ವತವೇರತೊಡಗಿದಳು.

ಹೀಗೆ ಹೋದ ಅವಳು ಮರಳಲಿಲ್ಲ, ಹಾಗೂ ಆಕೆಯೇ ನಂದಾದೇವಿಯಾದಳು ಎಂಬುದು ಕಥೆ. ಇದೇ ನಂದಾದೇವಿಯೇ ಗಡ್‌ವಾಲ್‌/ ಕುಮಾಂವ್‌ ಪ್ರದೇಶವನ್ನು ಪೊರೆಯುತ್ತಾಳೆ ಎಂಬುದು ಬಹುಕಾಲದ ನಂಬಿಕೆ. ನಂದಾದೇವಿಯ ಎರಡು ತುದಿಗಳಲ್ಲಿ, ಎತ್ತರದಲ್ಲಿರುವುದು ನಂದಾ ಎಂದೂ ತಗ್ಗಿನಲ್ಲಿರುವ ಶಿಖರವು ಸುನಂದಾ (ತಂಗಿ) ಎಂದೂ ಸ್ಥಳೀಯರೇ ಕೊಟ್ಟ ಅನಾದಿಕಾಲದ ಹೆಸರುಗಳು. ಈ ನಂದಾದೇವಿ ತಾಯಿ ದುರ್ಗೆಯ ಅವತಾರವೆಂಬುದೂ ಕೂಡ ನಂಬಿಕೆ.

ಇದರ ಜೊತೆಗೆ ತ್ರೇತಾಯುಗದ ಕಥೆಯೂ ಸೇರುತ್ತದೆ. ನಂದಾದೇವಿಯ ಪಕ್ಕದ ದ್ರೋಣಗಿರಿಯಲ್ಲಿ ಸಂಜೀವಿನಿ ಹುಡುಕಿ ಗೊತ್ತಾಗದೆ ಹನುಮಂತ ಪರ್ವತವನ್ನೇ ಎತ್ತಿ ಲಂಕೆಯ ಕಡೆಗೆ ಹಾರುತ್ತಾನೆ. ತನ್ನ ಅನುಮತಿ ಪಡೆಯದೆ ಪರ್ವತ ಕಿತ್ತು ಹಾರಿದ್ದಕ್ಕೆ ಕುಪಿತಗೊಂಡ ನಂದಾ ಇನ್ನು ಮುಂದೆ ಈ ಪರಿಸರದಲ್ಲಿ ಯಾರೂ ಹನುಮಂತನ ಹೆಸರೆತ್ತಬಾರದು ಎಂದು ಆಜ್ಞೆ ಮಾಡುತ್ತಾಳೆ. ಇದಕ್ಕಾಗಿಯೇ ಈಗಲೂ ಈ ಭಾಗದ ಜನರು ಹನುಮಂತನ ಆರಾಧನೆ ಮಾಡುವುದಿಲ್ಲ. ಇದನ್ನು ಪಾಲಿಸಿಕೊಂಡೂ ಬರಲಾಗುತ್ತಿದೆ.

೧೯೮೮ರಿಂದ ಇದು ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾದರೂ, ೧೯೮೩ರಿಂದಲೇ ನಂದಾದೇವಿ ಚಾರಣಿಗರಿಗೆ ಹಾಗೂ ಸ್ಥಳೀಯರಿಗೆ ನಿಷಿದ್ಧವೆಂದು ಘೋಷಿಸಿಬಿಟ್ಟಿದೆ. ಇದಕ್ಕೆ ಕಾರಣವೂ ಇದೆ.

೧೯೩೬ರಿಂದ ಶುರುವಾದ ಇದನ್ನೇರುವ ಸಾಹಸಗಳು ಮುಗಿಯಲೇ ಇಲ್ಲ. ಹಲವರು ಸಫಲರೂ ಆದರು. ಇದರ ಪರಿಣಾಮ ಸೇರಿದ ರಾಶಿ ಕಸಗಳು, ನಂದಾದೇವಿಯ ಸುತ್ತಮುತ್ತಲ ಜೀವವೈವಿಧ್ಯಕ್ಕೆ ಆದ ಧಕ್ಕೆ ಎಲ್ಲವೂ ಒಂದು ಕಾರಣವಾದರೂ, ನಮ್ಮ ಭದ್ರತೆಯ ದೃಷ್ಠಿಯೂ ಇನ್ನೊಂದು. ೧೯೬೫ರಲ್ಲಿ ಸೆಂಟ್ರಲ್‌ ಇಂಟಲಿಜೆನ್ಸ್‌ ಏಜೆನ್ಸಿ, ಇಂಟಲಿಜೆನ್ಸ್‌ ಬ್ಯೂರೋ ಸಹಕಾರದೊಂದಿಗೆ ನಂದಾದೇವಿಯೇರಿ ನ್ಯೂಕ್ಲಿಯರ್‌ ಟೆಲಿಮೆಟ್ರಿಯೊಂದನ್ನು ನೆತ್ತಿಯಲ್ಲಿ ಬಿಟ್ಟು ಬಂದಿದ್ದು. ಮತ್ತೆ ಅದನ್ನು ಹುಡುಕಲು ಹೋಗಿ ವಿಫಲರಾಗಿ ಮರಳಿದ್ದು, ಈ ಟೆಲಿಮೆಟ್ರಿ ನಂದಾದೇವಿಯ ಗರ್ಭದಲ್ಲಿ ಹೂತುಹೋಗಿ ಮರಳಿ ಪಡೆಯಲಾಗದೆ ಇದ್ದಿದ್ದು, ಬೇಧಿಸಲಾಗದೆ ಉಳಿದ ರಹಸ್ಯ. ಇದೆಲ್ಲದರಿಂದ ಪಾಠ ಕಲಿತು ಶಾಶ್ವತವಾಗಿ ವಿದೇಶೀಯರಿಗಂತೂ ೧೯೭೦ರ ಸುಮಾರಿಗೆ ನಂದಾದೇವಿ ಮುಚ್ಚಲ್ಪಟ್ಟಿತು.

ಇದರ ನಂತರ ಮತ್ತೆ ತೆರೆಯಲ್ಪಟ್ಟು, ಭಾರತೀಯ ಸೇನೆಯೂ ಸೇರಿದಂತೆ ಹಲವು ತಂಡಗಳು ಇದನ್ನು ಹತ್ತಲು ವಿಫಲ ಯತ್ನ ನಡೆಸಿವೆ. ಎತ್ತರದಲ್ಲಿ ಮೌಂಟ್‌ ಎವರೆಸ್ಟ್‌ ಮೀರಿಸದಿದ್ದರೂ, ಏರಲು ಮಾತ್ರ ಎವರೆಸ್ಟ್‌ಗಿಂತಲೂ ಇದು ಕಷ್ಟವಾದದ್ದು ಎಂದು ಸ್ವತಃ ಎವರೆಸ್ಟ್‌ ಏರಿ ಬಂದವರು ನಂದಾದೇವಿಗೆ ಕೈಮುಗಿದುಬಿಟ್ಟಿದ್ದರು. ಇಂಥ ನಂದಾದೇವಿಯ ನೀರ್ಗಲ್ಲಿನ ಒಂದು ಭಾಗ ಕುಸಿಯಿತು ಎಂದರೆ ಯಾರಿಗೆ ಆಶ್ಚರ್ಯವಾಗಲಿಕ್ಕಿಲ್ಲ. ಅದೂ ಈ ಚಳಿಗಾಲದಲ್ಲಿ!

ಕಳೆದ ನಾಲ್ಕೈದು ವರ್ಷಗಳಿಂದ, ವರ್ಷದಲ್ಲಿ ಕಡಿಮೆ ಅಂದರೆ ಒಮ್ಮೆಯಾದರೂ ಈ ಉತ್ತರಾಖಂಡವೆಂಬ ದೇವಭೂಮಿಯಲ್ಲಿ ಅಡ್ಡಾಡುವ ಪ್ರಸಂಗ ಬಂದೇ ಬರುತ್ತಿದೆ. ಈ ದೇವಭೂಮಿಯ ಸಡಿಲ ಮಣ್ಣಿನ ನೆಲದಲ್ಲಿ ಭೂಕುಸಿತ ಎಂಬುದು ಪ್ರತಿನಿತ್ಯದ ಕಥೆಯಾದರೂ, ಆ ನೆಲದ ಸೆಳೆತ ಇದನ್ನೆಲ್ಲ ನೆಪವಾಗಿಸುವುದಿಲ್ಲ. ಹರಿದ್ವಾರ, ರಿಷಿಕೇಶ, ದೇವಪ್ರಯಾಗ, ಕರ್ಣಪ್ರಯಾಗ, ಶ್ರೀನಗರ ದಾರಿಯಾಗಿ ಸಾಗುವಾಗಲೆಲ್ಲ ಅನಿಶ್ಚಿತತೆಯ ಗಂಟೆಗಟ್ಟಲೆ ಪಯಣ, ದಾರಿಯಲ್ಲಿ ಇದ್ದೇ ಇರುವ ಹಲವು ಅಡೆತಡೆಗಳ ನಡುವೆ ಒಂದರ್ಧ ಗಂಟೆ ಬಿಡುವು ಮಾಡಿಕೊಂಡು, ಮಧ್ಯದಲ್ಲಿ ಅಲಕನಂದೆಯ ಮಡಿಲಲ್ಲಿ ಕೂರುತ್ತೇವೆ.

ಗಾಳಿ ಬಂದರೆ ಹಾರಿಹೋಗುವಂಥ ನಯವಾದ ಬೆಳ್ಳನೆಯ ಹೊಳೆಯುವ ಆ ಮರಳಿನಲ್ಲಿ ಮಗ ಹೊರಳಾಡಿಕೊಂಡಿದ್ದರೆ ನಾನು ಮಾತ್ರ ಮೌನವಾಗಿ, ನದಿಯುದ್ದಕ್ಕೂ ಚಾಚಿಕೊಂಡಿರುವ ಮನೆಗಳನ್ನೂ, ಅವರ ಹಸಿರು ಹಸಿರಾದ ಗದ್ದೆಗಳನ್ನೂ, ಪ್ರವಾಸಿಗರ ಮನ ತಣಿಸಿ ಅವರನ್ನು ರಿಲ್ಯಾಕ್ಸ್‌ ಮಾಡಿಸಲು ತಲೆಯೆತ್ತಿರುವ ಸಾಲುಸಾಲು ರಿವರ್‌ ವ್ಯೂ ರೆಸಾರ್ಟುಗಳನ್ನೂ, ಅವುಗಳ ಅಂಗಳದಲ್ಲಿ ಕಾಲು ಚಾಚಿ ಕೂರಲು ಬೇಕಾದ ಐಷಾರಾಮಿ ಆಸನಗಳನ್ನೂ ನೋಡುತ್ತಾ, ಒಮ್ಮೆ ಈ ಅಲಕನಂದೆಯೋ, ಗಂಗೆಯೋ ಮುನಿದು ಪ್ರವಾಹ ಬಂದರೆ ಇದೆಲ್ಲವುಗಳ ಗತಿಯೇನಾಗಬೇಕು ಎಂಬ ಯೋಚನೆಯೊಂದು ಬಂದು ಕ್ಷಣಕಾಲ ಕಂಪಿಸಿಬಿಡುತ್ತೇನೆ. ಕಣ್ಣ ನಿರುಮ್ಮಳವಾಗಿ ಕಾಣುವ ಆ ನದೀಪಾತ್ರದ ಜನರ ಅನಿಶ್ಚಿತತೆಯ ಬದುಕಿನ ಬಗ್ಗೆ ಕಳವಳಗೊಂಡು ಮುಂದೆ ಸಾಗುತ್ತೇನೆ.

ಉತ್ತರಾಖಂಡದಲ್ಲಿ ಭೂಕುಸಿತ ಅನ್ನೋದು ದಿನನಿತ್ಯದ ಆಗುಹೋಗುಗಳಲ್ಲೊಂದು ಎಂಬುದು ನಿತ್ಯ ಸತ್ಯ. ಅದೆಲ್ಲೋ ಮಣ್ಣು ಜರಿದು ಇನ್ನೊಂದು ದಿನ ಆ ಕಡೆಗೆ ವಾಹನ ಸಾಗುವುದಿಲ್ಲ ಎಂಬುದನ್ನು ಸಹಜ ಸಮಾಚಾರವೆಂಬಂತೆ ಹೇಳಿಬಿಡುತ್ತಾರೆ. ಈಗೆಲ್ಲ ರಸ್ತೆಗೆ ಜರಿದು ಬೀಳುವ ಮಣ್ಣು, ಮರ ಎಲ್ಲವೂ ಆದಷ್ಟು ಬೇಗ ಸರಿಮಾಡಿಕೊಂಡು ಹೋಗುವುದೂ ಸಾಮಾನ್ಯವಾಗಿದೆ. ಜನರ ಅಗತ್ಯವೂ ಹಾಗಿದೆ. ಇನ್ನು ಮಳೆಗಾಲದ ಸಮಾಚಾರ ಹೇಳಿ ಸುಖವಿಲ್ಲ.

ನಮ್ಮ ಮಲೆನಾಡಿನ ಮಳೆ ಇದರ ಮುಂದೆ ಏನೇನೂ ಅಲ್ಲ. ದೇವದಾರು, ರೋಡೋಡೆಂಡ್ರಾನ್‌ ಮರಗಳೇ ತುಂಬಿರುವ ದಟ್ಟ ಹಸಿರು ಕಾಡು.  ಕಡು ಹಸಿರಹಾಸು. ಕೊಚ್ಚಿ ಹೋಗುವಂಥ ಮಳೆ. ಅಲ್ಲೆ ಬೆಟ್ಟದ ಮೇಲೆ ಮೇಘಸ್ಪೋಟವಾಗಿದೆ, ಅದಕ್ಕೇ ಮಳೆ ಎಂದು ನಿರಾತಂಕವಾಗಿ ಹೇಳಿಬಿಡುತ್ತಾರೆ ಅಲ್ಲಿನ ಜನ. ಹೀಗಿದ್ದರೂ ಅವರ ಬದುಕು ಎಂದಿನಂತೆ ಸಾಗುತ್ತದೆ. ಈಗ ಅಂಥ ಜನ ವಾರವಾದರೂ ಕೊಚ್ಚಿ ಹೋದ ಕುಟುಂಬದವರು ಸಿಗದೆ ಕಂಗೆಟ್ಟಿರುವುದು ನೋಡುತ್ತಿದ್ದರೆ ಪ್ರಾಕೃತಿಕ ವಿಕೋಪದಂತೆ ಕಾಣುವ ನಾವೇ ತಂದುಕೊಳ್ಳುವ ಅಪಾಯಗಳು ನಿಚ್ಛಳವಾಗಿ ಕಾಣುತ್ತದೆ.

ಆಗಸ್ಟ್‌ ತಿಂಗಳೆಂಬ ಮಳೆಗಾಲದಲ್ಲೊಂದು ದಿನ ಇದೇ ಜೋಶಿಮಠದ ಹತ್ತಿರದಲ್ಲೇ ಇರುವ ಗೋವಿಂದಘಾಟಿನಲ್ಲಿ ಕಾರು ಪಾರ್ಕು ಮಾಡಿ ಹೂಕಣಿವೆಯ ಚಾರಣಕ್ಕೆ ಹೊರಟು ನಿಂತಾಗ ಸತ್ಯವಾಗಿಯೂ, ನಾಲ್ಕೈದು ದಿನ ಬಿಟ್ಟು ಚಾರಣ ಮುಗಿಸಿ ಬರುವಾಗ ನಮ್ಮ ಕಾರು ಅಲ್ಲೇ ಇದ್ದೀತೆಂಬ ನಂಬಿಕೆಯಂತೂ ಖಂಡಿತವಾಗಿಯೂ ನಮಗೆ ಇರಲಿಲ್ಲ. ಹೊರಟ ಮೇಲೆ ಹಿಂತಿರುಗುವವರೆಗೂ ಎಡೆಬಿಡದೆ ಸುರಿದ ಮಳೆಯೊಂದಿಗೆ ಚಾರಣ ಮಾಡಿ, ಅಷ್ಟೂ ದಿನ ಪ್ರಪಂಚದ ಸಂಪರ್ಕವನ್ನೇ ಕಡಿದುಕೊಂಡಿದ್ದರಿಂದ, ಈಚೆಕಡೆ ಪ್ರಪಂಚದಲ್ಲೇನಾಗುತ್ತಿದೆ ಎಂಬ ಸಮಾಚಾರವೂ ತಿಳಿದಿಲ್ಲದಿರುವಾಗ ನಾವು ಹಾಗೆ ನಂಬಿಕೆಯಿಟ್ಟುಕೊಳ್ಳದೆ ಇರುವುದರಲ್ಲಿ ಆಶ್ಚರ್ಯವೇನೂ ಇಲ್ಲ.

ಪ್ರವಾಹವೊಂದು ಬಂದರೆ ನದೀಪಾತ್ರದ ಕಟ್ಟಡಗಳು ಪುಟ್ಟ ಪೆಟ್ಟಿಗೆಗಳಂತೆ ಆಟಿಕೆಗಳಂತೆ ನೀರು ಪಾಲಾಗುವ ದೃಶ್ಯಗಳು ಕಣ್ಣಿಗೆ ಕಟ್ಟಿದಂತಿರುವಾಗ, ಅಲ್ಲೇ ಬದಿಯಲ್ಲಿ ನಿಲ್ಲಿಸಿದ ಕಾರೇನು ಮಹಾ. ಎಂಥಾ ವಿಚಿತ್ರವೆಂದರೆ, ನಾವು ಮರಳಿ ವಾರವಾಗಿತ್ತಷ್ಟೇ. ಗೋವಿಂದಘಾಟಿನ ನಾವು ಕಾರು ನಿಲ್ಲಿಸಿದ್ದ ಅದೇ ಭಾಗ ಕುಸಿದು ನದಿಯಲ್ಲಿ ಮಣ್ಣಾಗಿ, ಅಲ್ಲಿದ್ದ ಅಷ್ಟೂ ಕಾರುಗಳು ನೀರು ಪಾಲಾಗಿದ್ದವು.

ಆಗಾಗ ಪ್ರಕೃತಿ ನಮಗೆ ಎಚ್ಚರಿಕೆ ಕೊಡುತ್ತಲೇ ಇರುತ್ತದೆ. ಆದರೆ ನಾವು ಮಾತ್ರ ಪಾಠ ಕಲಿಯುವುದಿಲ್ಲ. ಪಾಠ ಕಲಿಯಬೇಕು ಎಂದು ಹೇಳುತ್ತಲೇ, ಮತ್ತೆ ಇನ್ನೊಂದೆರಡು ಯೋಜನೆಗಳಿಗೆ ಸಾಕ್ಷಿಯಾಗಲು ರೆಡಿಯಾಗುತ್ತೇವೆ. ನಮ್ಮಂಥ ಹುಲು ಮಾನವರದ್ದು ಎಂಥ ಹಠ ಎಂದರೆ, ಹತ್ತತ್ತು ವರ್ಷಗಳ ಕಾಲ ಚಳಿ ಮಳೆ, ಹಿಮಪಾತಗಳನ್ನು ಲೆಕ್ಕಿಸದೆ ಭಗೀರಥ ಪ್ರಯತ್ನ ಮಾಡಿ ಹಿಮ ಪರ್ವತಗಳನ್ನು ಕೊರೆದು ಕಿಮೀಗಟ್ಟಲೆ ಉದ್ದದ ಸುರಂಗ ಮಾರ್ಗ ನಿರ್ಮಿಸಿ ಬಿಡುತ್ತೇವೆ. ಜಲಶಕ್ತಿಯ ಬಳಕೆಗೆಂದು ಸಿಕ್ಕಸಿಕ್ಕಲ್ಲೆ ಅಣೆಕಟ್ಟು ಕಟ್ಟಿಬಿಡುತ್ತೇವೆ. ಆ ಮೂಲಕ ಅಭಿವೃದ್ಧಿಯಾಗುತ್ತಿದೇವೆಂದು ಅಂದುಕೊಳ್ಳುತ್ತೇವೆ. ಅಷ್ಟರಲ್ಲಿ ಮೊನ್ನೆಯಂತೆ, ಮಾಡಿದ ಅಷ್ಟೂ ಅಭಿವೃದ್ಧಿ ನೀರು ಪಾಲಾಗುತ್ತದೆ. ತನ್ನ ಮೇಲಾದ ವೈಪರೀತ್ಯಗಳನ್ನು ಸಮದೂಗಿಸಲು ಪ್ರಕೃತಿಗೇ ಗೊತ್ತಿದೆ ಅಷ್ಟೇ.

ಯಾವ ಪರ್ವತ ಶ್ರೇಣಿಗಳನ್ನು ನಮ್ಮ ದೇಶದ ಭದ್ರತೆಯ ಗೋಡೆಯೆಂದುಕೊಂಡೆವೋ ಅದೇ ಗೋಡೆ ಶಿಥಿಲಗೊಂಡರೆ?! ಪರಿಸ್ಥಿತಿ ಗಂಭೀರವಾಗಿದೆ ಎಂದು ನಮಗಿನ್ನೂ ಅನಿಸುತ್ತಿಲ್ಲವೇ?

‍ಲೇಖಕರು ರಾಧಿಕ ವಿಟ್ಲ

February 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಂಘರ್ಷ-ಸಂಭ್ರಮ

ಸಂಘರ್ಷ-ಸಂಭ್ರಮ

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ...

ಎದೆಬಿಲ್ಲೆಯೂ ಮಾತುಕತೆಯೂ…

ಎದೆಬಿಲ್ಲೆಯೂ ಮಾತುಕತೆಯೂ…

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್...

‘ಲೇಖ’ಕಿ ‘ಲೋಕ’ದ ಅನಾವರಣ

‘ಲೇಖ’ಕಿ ‘ಲೋಕ’ದ ಅನಾವರಣ

ಗಿರಿಜಾ ಶಾಸ್ತ್ರಿ ಕರ್ನಾಟಕ ಲೇಖಕಿಯರ ಸಂಘವು ಕೆಲವು ವರ್ಷಗಳಿಂದ ಲೇಖಕಿಯರು ತಮ್ಮ ಜೀವನಾನುಭವಗಳನ್ನು ಹಂಚಿಕೊಳ್ಳುವ 'ಲೇಖಕಿಯರ ಆತ್ಮ ಕಥೆಗಳ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This