ಈ ನೆನಪಿಗೆ ಅಂಗೈಗೆ ತೆಂಗಿನ ನಾರಿನ ಕೊಳೆ ನಾತ…

h-t-tallana
‘ಹೊಸ ತಲೆಮಾರಿನ ತಲ್ಲಣ’ ರಹಮತ್ ತರೀಕೆರೆ ಕನ್ನಡ ವಿಶ್ವ ವಿದ್ಯಾಲಯಕ್ಕೆ ಸಂಪಾದಿಸಿದ ಪುಸ್ತಕ. ಇಲ್ಲಿ ಕನ್ನಡದ ಹೊಸತಲೆಮಾರಿನ ಲೇಖಕರು ತಮ್ಮ ಬರೆಹದ ಅನುಭವಗಳನ್ನು ಬಿಚ್ಚಿಟ್ಟಿದ್ದಾರೆ. ಮಹಿಳಾ ಬರಹ ಲೋಕದ ಅನುಭವವನ್ನು ಅರಿಯುವ ನಿಟ್ಟಿನಲ್ಲಿ ಡಾ ವಿನಯಾ ಹಾಗೂ ದು ಸರಸ್ವತಿ ಅವರ ಅನುಭವವನ್ನು ಇಲ್ಲಿ ಮಂಡಿಸಲಾಗಿದೆ.
 
ಬರೆಹ: ಬದುಕಿಗೆ ಹಾಕಿಕೊಳ್ಳುವ ಹಾಜರಿ

-ವಿನಯಾ
potofgold
 
 
 
 
 
‘ಬಾಯಿಲ್ಲದವನ ಬಸವನ ನೆನೆದ್ಯಾರ!ಬಾರದ ಪದಗೋಳು ಬಂದ್ಯಾವೋ’ ನನ್ನ ಬಾಲ್ಯದಲ್ಲಿ ಬೆಸೆದ ನೂರಾರು ಸಾಲುಗಳಲ್ಲಿ ನನ್ನ ಅಜ್ಜಿ ಗುನುಗುನಿಸುತ್ತಿದ್ದ ಈ ಸಾಲೂ ಒಂದು. ತುಂಬ ಅಚ್ಚರಿಯಾಗುತ್ತಿತ್ತು. ಬಾಯಿಲ್ಲದವನನ್ನು ನೆನೆದರೆ ಅದು ಹೇಗೆ ಪದ ಬರುತ್ತದೆ? ನೀರಿನ ಹೊಂಡದಲ್ಲಿ ಬಿದ್ದು ಕೊಳೆತು ಅದೇ ಆಗ ಆರಿಕೆಗೆ ಬಂದಿದ್ದ ತೆಂಗಿನನಾರನ್ನು ಸಣ್ಣ ಕಟ್ಟಿಗೆ ಚೌಕದ ಮೇಲಿಟ್ಟು ಕೋಲಿಂದ ಬಡಿಯುತ್ತ, ಹತ್ತಿಯನ್ನು ಹಿಂಜಿದಂತೆ ತೆಂಗಿನ ನಾರನ್ನು ಹಿಂಜಿ ಅಜ್ಜಿಗೆ ಹಗ್ಗ ಹೊಸೆಯಲು ಅನುವು ಮಾಡಿಕೊಡುತ್ತ ಕುಳಿತಿರುತ್ತಿದ್ದ ನನಗೆ, ಎಂದೂ ಹಾಗೆಂದರೇನೆಂದು ಕೇಳುವ ಪುರುಸೊತ್ತು ಸಿಗಲಿಲ್ಲ. ಕೇಳಿದ್ದರೆ ಅಜ್ಜಿ ಉತ್ತರ ಹೇಳುತ್ತಿದ್ದಳೇ ಗೊತ್ತಿಲ್ಲ. ಬಲಗಾಲ ಹೆಬ್ಬೆರಳ ಸಂಧಿಯಲ್ಲಿ ಹಗ್ಗದ ಹುರಿ ಸಿಕ್ಕಿಸಿ ಎರಡೂ ಕೈಯಲ್ಲಿ ಎಳೆ ಹೊಸೆಯುತ್ತ ಕಾಲಿಂದ ತಲೆಮಟ್ಟ ಕೈಯಾಡಿಸುತ್ತ ವೀಣಾಪಾಣಿ ಸರಸ್ವತಿಯ ಭಂಗಿಯಲ್ಲಿ ಕುಳಿತಿರುತ್ತಿದ್ದ ಅಜ್ಜಿ, ಬಿಗಿದ ತುಟಿ ಬಿಚ್ಚಿ ಹೀಗೆ ಏನೋ ಗುನುಗಿ ಮತ್ತೆ ತುಟಿಕಚ್ಚಿ ಕೊಡುತ್ತಿದ್ದಳು. ಈ ಸಾಲುಗಳು ತೆವಳುತ್ತ ಹರಿಯುತ್ತ ಬಂದು ನನ್ನೊಳಗೆ ಅರೆಬರೆ ಇಳಿಯುತ್ತಿದ್ದವು. ಈ ನೆನಪಿಗೆ ಅಂಗೈಗೆ ತೆಂಗಿನ ನಾರಿನ ಕೊಳೆಕೊಳೆ ನಾತವೂ ಹತ್ತಿದಂತಿದೆ.
ನನ್ನೊಳಿಗಿನ ತಳಮಳ ಹೇಳುವ ಹಾದಿ ಗೊತ್ತಿಲ್ಲದ ನಾನು ಸಂಭಾಳಿಸಿಕೊಂಡು -ನನ್ನ ಬರವಣಿಗೆ ಬಗ್ಗೆ ಯೋಚಿಸಿದರೆ ತಲೆತುಂಬ ಈ ಚಿತ್ರವೇ ತುಂಬಿದೆ. ಅಸ್ಪಷ್ಟವಾದರೂ ಒಳಗೊಳಗೆ ಏನೋ ತಿಳಿಸುವ ಕನಸಿನ ಹಾಗೆ.
potofgold
ನಾನು ಎಂ. ಎ. ಓದುತ್ತಿದ್ದಾಗ, ಅದೇ ತಾನೇ ಕವಿತೆ ಬರೆವ ಸಂಭ್ರಮದಲ್ಲಿದ್ದೆ. ಸಹಪಾಠಿ ಸ್ನೇಹಿತರೊಬ್ಬರು ರೇಡಿಯೊ ಕಾರ್ಯಕ್ರಮಕ್ಕಾಗಿ ಹೊಸಬರ ಸಂದರ್ಶನ ಮಾಡ್ತಾ ಆ ಪಟ್ಟಿಯಲ್ಲಿ ನನ್ನನ್ನೂ ಸೇರಿಸಿಕೊಂಡು ‘ನೀವು ಯಾಕೆ ಬರೀತೀರಿ?’ ಅಂತ ಕೇಳಿದ್ದರು. ಏನು ಉತ್ತರಿಸೋದು? ಬರೀ ದಿಗಿಲು. ‘ನೋವು ಮರೆಯಲು’ ಅಂದೆ. ಮತ್ತೆ… ಮತ್ತೆ ಅಂತ ಅವರು ಹೊಸದಾಗಿ ಕೊಂಡ ಟೇಪರೆಕಾರ್ಡರ್-ಆಫ್-ಆನ್ ಮಾಡಿದ್ದೇ ಬಂತು. ನನ್ನಿಂದ ಒಂದಕ್ಷರವೂ ಹೊರಡಲಿಲ್ಲ. ಆಗ ನನ್ನ ಸಹಪಾಠಿ ಮಾತ್ರ ಆಗಿದ್ದ ಎಂ. ಡಿ. ಒಕ್ಕುಂದ ‘ ಏನ್ರೀ ನೀವು ಬರೀ ನೋವಿಗಷ್ಟೇ ಬರೀತೀರಾ? ನಿಮಗೆ ಖುಷಿಯಾದಾಗ ಬರೆಯೋದಿಲ್ಲವಾ ಅಥವಾ ನಿಮಗೆ ಖುಷಿ ಅಗೋದೇ ಇಲ್ಲವಾ?’ ಎಂದು ರೇಗಿಸಿ ಎಲ್ಲರೂ ಗೊಳ್ಳನೆ ನಕ್ಕಾಗ ಅಳು ಬಂದಿತ್ತಾದರೂ ಅತ್ತಿರಲಿಲ್ಲ. ಹಾಸ್ಟೆಲ್ಲಿನ ಕೋಣೆಯಲ್ಲಿ ಪಕ್ಕದ ಮಂಚದಲ್ಲಿ ಮಲಗಿದವಳ ನಿದ್ದೆ ಕೆಡದ ಹಾಗೆ ಅತ್ತಿದ್ದು ನನಗೆ ಮಾತ್ರ ಗೊತ್ತು. ಆನಂತರ ಯಾವ್ಯಾವಾಗಲೋ ಈ ಪ್ರಶ್ನೆ ಬೇರೆ ಬೇರೆ ಬಣ್ಣಗಳಲ್ಲಿ ಎದುರಾಗಿದೆ. ಉತ್ತರ ಮಾತ್ರ ಯಾವ ರಂಗು ಧರಿಸಲೂ ನಿರಾಕರಿಸಿ ದಿಗಂಬರವಾಗಿ ಉಳಿದು ಬಿಟ್ಟಿದೆ.
ನನ್ನ ಬಾಲ್ಯದ ಸಂಗಾತಿ ಅಜ್ಜ ಮಹಾನ ಪುಸ್ತಕ ಪ್ರೇಮಿಯಾಗಿದ್ದ. ಅವನ ಕಣ್ಣು ಕಾಣದ ದಿನಗಳಲ್ಲಿ ‘ಒಳ್ಳೆಯವರು’ ಅನ್ನಿಸಿಕೊಳ್ಳೋ ಹುಕಿ ಹೊಕ್ಕ ನಾನು, ನನಗಷ್ಟೇ ಬೇಡವಾದರೂ ಭಾರವಾದರೂ ಪುಸ್ತಕ ಓದಿ ಹೇಳುವ ವೃತ್ತಿ ಒಪ್ಪಿಕೊಂಡೆ. ನಡುನಡುವೆ ಪ್ರಶ್ನೋತ್ತರ ಆಮೇಲಾಮೇಲೆ ‘ಕೇಳಜ್ಜ’ ಅಂತ ನಾನೇ ಅವನನ್ನು ಒತ್ತಾಯಿಸುವಷ್ಟು ಪುಸ್ತಕದ ನಂಟು ಬೆಳೆಯಿತು. ಅಷ್ಟಕ್ಕೇ ಬರೆಯುವುದು ಸಾಧ್ಯವಾಗಿದ್ದರೆ ಸೌಂದರ್ಯ ಮೀಮಾಂಸೆಯ ಪದ್ಯಗಳನ್ನು ಬರೆಯುತ್ತಿದ್ದೆನೇನೋ. ಬದುಕು ನನ್ನ ಉಡಿಯಲ್ಲಿಟ್ಟ ಅನುಭವಗಳು ತುಂಬ ಭಿನ್ನವಾಗಿದ್ದವು. ದಂಗುಬಡಿದು ನಿಂತ ಎಷ್ಟೆಲ್ಲ ಗಳಿಗೆಗಳು!
ಬದುಕು ಕೊಟ್ಟ ಒಳಗುದಕಿಗಳಿಗೆ ಭಾಷೆ ಯಾವುದೋ?
ನನ್ನ ಅನುಭವದ ಸಂಕಟ ಸವಾಲುಗಳನ್ನು ಅತ್ಯಂತ ಸಣ್ಣ ರೀತಿಯಲ್ಲಾದರೂ ಮರು ನಿರ್ಮಿಸಿಕೊಳ್ಳಲು ಶಕ್ಯಳಾಗಿದ್ದೇನೆ ಅನ್ನಿಸಿಲ್ಲ. ಸತ್ತ ಪ್ರಾಣಿಯ ಚರ್ಮವನ್ನು ಹತ್ತಿ ತುಂಬಿ ಹೊಲಿದು ಇಟ್ಟಂತೆ ನನ್ನ ಬರಹ. ಬಾಯ್ತೆಗೆದ ಹುಲಿ. ಆದರದಕೆ ಜೀವವಿಲ್ಲ-ಅಂತ ನನಗೆ ಪದೇ ಪದೇ ಅನ್ನಿಸುತ್ತದೆ. ಇದಕ್ಕೆ ಕಾರಣ ನನ್ನ ಮಿತಿಯೇ? ನನ್ನ ಕಾಲದ ಸೂತಕಗಳೇ ಸ್ಪಷ್ಟವಿಲ್ಲ. ನನ್ನ ಮಿತಿಯೆಂದರೆ, ಹೆಣ್ಣಾಗಿರುವುದರಿಂದ ಸೋರೆಯ ಮಿಡಿಗೆ ಕಬ್ಬಿಣದ ಸುತ್ತುಗಟ್ಟಿದಂತಹ ಕಾರಣವಿರಬಹುದು. ಕಬ್ಬಿಣದ ಸುತ್ತಿನ ರಕ್ಷಣೆಯೊಳಗೆ ತೇವಗಟ್ಟಿ ಕೊಳೆವ ಸೋರೆಯ ಮಿಡಿಯ ಕುದಿತ ಹೊರಬರೋದು ಹೊಲಸು ದುರ್ನಾತದಿಂದ. ಅದರ ರಸಾಸ್ವಾದ ಹೇಗೆ ಸಾಧ್ಯ? ಸ್ತ್ರೀವಾದಿ ಚಿಂತನೆ ಮತ್ತು ದಲಿತ ಬಂಡಾಯ ಕಾವ್ಯ ಸಂದರ್ಭಗಳು ವೈಯಕ್ತಿಕ ಬದುಕಿನ ಸಂಕಟದ ಕಿಂಡಿಯಲ್ಲಿ ಹಾದು ಬಯಲಿನ ಸಂಕಟವನ್ನು ಕಾಣುವುದನ್ನು ಕಲಿಸಿವೆ. ಯಾವುದನ್ನು ‘ನನ್ನದು’ ಎನ್ನುತ್ತೇನೋ ಅದು ನನ್ನದು ಮಾತ್ರವಲ್ಲ ಎಂಬ ಸತ್ಯ ಗೋಚರವಾಗಿದೆ.
potofgold
ಬರಹ ರಕ್ತ ಪಡೆಯುವುದು ತನ್ನ ಕಾಲದಿಂದ ಕಾಲದ ಗೋಚರಗಳು ನೀರೊಳಗಿನ ಪಾಚಿಯಂತೆ. ಕಪ್ಪು ಹಸಿರಾಗಿ ಕಣ್ಣಿಗೆ ರಾಚುತ್ತದೆ. ಹಿಡಿಯ ಹೋದರೆ ಜಾರಿಕೊಳ್ಳುತ್ತದೆ. ಪ್ರಜ್ಞಾವಂತ ಬರಹಗಾರರು ಕೂಡ ಅಧಿಕಾರ ರಾಜಕಾರಣದ ಪಾರ್ಟಿ ಆಗಿ ಬದಲಾಗುತ್ತಿರೋ ಸಂದರ್ಭವಿದು. ಭ್ರಷ್ಟತೆ ಅನೈತಿಕತೆಗಳನ್ನು ‘ಸಹಜ’ ಎಂದು ಒಪ್ಪಿಕೊಳ್ಳುವ ಹಂತಕ್ಕೆ ಸಮಾಜ ತಲುಪಿದೆ. ಮಾರಿಕೊಳ್ಳುವುದು ಮತ್ತು ಕೊಂಡುಕೊಳ್ಳುವುದು ಬದುಕಿನ ವಿನ್ಯಾಸವಾಗಿದೆ. ಹೀಗೆ ಮಾರಿಕೊಳ್ಳುವ ಪಟ್ಟಿಯಲ್ಲಿ ಪ್ರತಿಭೆ-ಕಲೆಗಳೆಲ್ಲ ಸೇರಿಕೊಂಡಿವೆ. ಎಲ್ಲವನ್ನೂ ತೂಗಿ ನೋಡುವ ಬ್ರಹ್ಮಾಂಡ ಶಕ್ತಿಯನ್ನು ಹಣಕ್ಕೆ ನೀಡಿದ ಸಮಾಜ ವ್ಯಕ್ತವಾದಿತನ ಮತ್ತು ಸ್ವಾರ್ಥವನ್ನು ಪಡೆದುಕೊಳ್ಳುತ್ತದೆ. ಮನುಷ್ಯ ಸಂಬಂಧಗಳೂ ವ್ಯವಹಾರವಾದ ಸಮಾಜ ಹುಳುಹತ್ತಿದ ಗಿಡದಂತೆ ಮುರುಟುತ್ತದೆ. ಇಂಥಲ್ಲಿ ಬರಹ ಕೂಡ ತನ್ನ ಸುಂದರತೆಯನ್ನು ಕಾಪಾಡಿಕೊಳ್ಳುವುದು ಕಷ್ಟ. ಎಷ್ಟೆಲ್ಲ ವಿಭಿನ್ನ ಸಾಧ್ಯತೆಗಳು ತೆರೆದುಕೊಳ್ಳುತ್ತಿರೋ ಕಾಲ-ಎಂಬ ಎಚ್ಚರದಲ್ಲಿಯೂ ನಿರಾಸೆಯೇ ಇದೆ ಅನ್ನಿಸುತ್ತದೆ.
ಪತ್ರಿಕೆಗಳು ಮಾಧ್ಯಮಗಳು ಸಾಕಷ್ಟು ಅವಕಾಶಗಳನ್ನು ನೀಡುತ್ತಿವೆ. ಆದರೆ ಅದೇ ಕ್ಷಣದಲ್ಲಿ ಅವು ನಮ್ಮ ಬರವಣಿಗೆಯ ಸ್ವರೂಪ ಮತ್ತು ಆಶಯ ಎರಡನ್ನೂ ನಿರ್ದೇಶಿಸುತ್ತವೆ. ಸಣ್ಣ-ಪುಟ್ಟ ಪುಟಾಣಿ ಕಥೆಗಳಿಗಾಗಿ ಯಾವ ಮರ್ಮ ಭೇದಕವಿಲ್ಲದ ಈಸಿ ಅನ್ನಿಸೋ ಕವಿತೆಗಳಿಗಾಗಿ, ನಾವು ನಮ್ಮ ಸಂವೇದನೆಯನ್ನೇ ಬೊನ್ಸಾಯ್ ಮಾಡಬಲ್ಲೆವು. ಈ ಒಪ್ಪಂದಕ್ಕೆ ಒಳಗಾದ ಮೇಲೆ ಎಂತೆಂತಹ ಪತ್ರಿಕೆಗಳಲ್ಲಿಯೇ ನಿತ್ಯ ಭವಿಷ್ಯ ವಾರ ಭವಿಷ್ಯ, ವಾಸ್ತು, ಹರಳಿನ ಜ್ಯೋತಿಷ್ಯಗಳಂತಹ ತರಹೇವಾರಿಗಳು ಹನುಮಂತನ ಬಾಲದಂತೆ ಬೆಳೆಯುತ್ತಿರುವುದರ ಬಗ್ಗೆ ಕಂಡೂ ಕಾಣದ ಅಸಹಾಯಕ ಗಾಂಭೀರ್ಯದಲ್ಲಿ ಉಳಿಯುತ್ತೇವೆ. ನಡೆಯುತ್ತಿರುವ ಎಲ್ಲ ಸಾಮಾಜಿಕ ಬದಲಾವಣೆಗಳನ್ನೂ ಮೌನವಾಗಿ ಒಪ್ಪಿಕೊಳ್ಳುವ ಒತ್ತಡ ನಿರ್ಮಾಣವಾಗಿದೆ. ಸಾಮಾಜಿಕ ಸಂಪನ್ನತೆ ಮತ್ತು ಸುಸ್ಥಿತಿಯನ್ನು ಬಯಸುವವರಲ್ಲಿ ಒಡಮೂಡದಿರುವ ಐಕ್ಯತೆ, ಬಂಡವಾಳಶಾಹಿಗಳಿಗೆ, ಕೋಮುವಾದಿಗಳಿಗೆ ರಾಜಕೀಯ ಭ್ರಷ್ಟತೆಗೆ ದಾರಿ ಸರಳಗೊಳಿಸಿದೆ.
potofgold
ಇದು ಯಾವುದೇ ಬರಹಗಾರನಿಗೆ ಸವಾಲಿನ ಮತ್ತು ತಬ್ಬಿಬ್ಬುಗೊಳಿಸುವ ಸ್ಥಿತಿ. ತೀವ್ರವಾಗಿ ಅನ್ನಿಸಿದ್ದನ್ನು ಹೇಳಲಾಗದ ಸಾಮಾಜಿಕ ತುರ್ತುಪರಿಸ್ಥಿತಿ ಸದಾ ಜಾರಿಯಲ್ಲಿದೆ. ಇನ್ನೊಂದೆಡೆ ನನ್ನ ಕಾಲದ ಸಂವೇದನೆಗಳನ್ನು ಅಭಿವ್ಯಕ್ತಿಸಲು ಅಗತ್ಯವಾದ ಸೃಜನಶೀಲ ಬಿಕ್ಕಟ್ಟುಗಳನ್ನು ಎದುರಿಸಬೇಕಾಗುತ್ತದೆ. ಬೇರು ಹೀರಿದ ನೀರು ಹೂವಿನ ಮಕರಂದವಾಗಿ ಹೊಮ್ಮಲು ಬೇಕಾದ ವ್ಯವಧಾನ ಮತ್ತು ಶ್ರದ್ಧೆಗಳಿಗೆ ನೂರೆಂಟು ಸಣ್ಣ ಪುಟ್ಟ ಅಡಚಣೆಗಳು. ಬೇಡನ ಗುರಿ ತಪ್ಪಿಸುವ ಕರಿ ಇರುವೆಯ ಹಾಗೆ ಕಾಡುತ್ತವೆ. ಹೇಳಲೂ ಕೇಳಲೂ ಕ್ಲೀಷೆ ಅನ್ನಿಸಬಹುದಾದರೂ ‘ಹೆಣ್ಣೆಂಬ’ ಸ್ಥಿತಿಗೆ ಮೆತ್ತಿಕೊಂಡಿರುವ ಅಸಂಖ್ಯ ಅಣುರೂಪಿ ಸಂಕಟಗಳು, ಲೋಕದ ಜಂಝಾವಾತಗಳು ವಿಚಿತ್ರ ದಣಿವನ್ನು ನೀಡುತ್ತವೆ. ‘ಬರೆದು ಮುಗಿಸೇನೆಂದರಿಂದು ನುಡಿ ನಿಲ್ಲದಿದೆ’ ಎಂಬ ಪ್ರತಿಭೆಯೊಂದಿಗಿನ ಅನುಸಂಧಾನ ನಮ್ಮ ಅನುಭವವಲ್ಲ. ನಮ್ಮ ನುಡಿ ಕುಕ್ಕರಿನ ಸೀಟಿಗೋ, ಮಗುವಿನ ಅಳುವಿಗೋ, ಮನೆಗೆ ಬಂದವರನ್ನು ಸ್ವಾಗತಿಸುವ ಸುಂದರ ನಗೆಗೋ ಕಾಣೆಯಾಗುತ್ತದೆ.
ಕಡೆಗೂ ಎಲ್ಲವನ್ನೂ ಕೊಡವಿಕೊಂಡು ಬರೆಯುವುದು ಎಂದರೆ, ನನ್ನ ಬದುಕಿಗೆ ನಾನೇ ಹಾಜರಿ ಹಾಕಿಕೊಳ್ಳುವುದು.

‍ಲೇಖಕರು avadhi

April 15, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

2 ಪ್ರತಿಕ್ರಿಯೆಗಳು

 1. Meera

  ವಿನಯಾ, ಚೆನ್ನಾಗಿ ಬರ್ದಿದೀರ. ಕೊನೆಯ ಸಾಲು ಮಾತ್ರ ನಿಜಕ್ಕೂ ಸುಳ್ಳಿಗೂ ನಡುವೆ ಎಲ್ಲೋ ಸಿಕ್ಕಿಕೊಂಡಿರುವ ಹಾಗೆ ಅನ್ನಿಸ್ತು.
  ~ಮೀರ.

  ಪ್ರತಿಕ್ರಿಯೆ
 2. ಮಾಲ ರಾವ್

  ನಮ್ಮ ನುಡಿ ಕುಕ್ಕರಿನ ಸೀಟಿಗೋ, ಮಗುವಿನ ಅಳುವಿಗೋ, ಮನೆಗೆ ಬಂದವರನ್ನು ಸ್ವಾಗತಿಸುವ ಸುಂದರ ನಗೆಗೋ ಕಾಣೆಯಾಗುತ್ತದೆ…
  nannadE maatugaLu annisitu…
  sogasaasa lEKana

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: