ಈ ಭಾನುವಾರ ಬೆಂಗಳೂರಿನಲ್ಲಿ ಬಿಡುಗಡೆ

ಈ ಅನಾತ್ಮ ಕಥನದ ಆತ್ಮ ಇರುವುದು ಇಲ್ಲಿಯೇ …
-ಎಚ್.ವೈ . ರಾಜಗೋಪಾಲ್
ನ್ಯೂಜೆರ್ಸಿಯಲ್ಲಿ ‘ಎಚ್ಚೆಸ್ವಿ ಅನಾತ್ಮ ಕಥನ’ ಬಿಡುಗಡೆ ಮಾಡಿ ಆಡಿದ ಮಾತು.
ಎಚ್ಹೆಸ್ವಿ ಯವರಂಥ  ಉತ್ತಮ ಲೇಖಕರ ಹೊಸ ಪುಸ್ತಕವೊಂದು ಪ್ರಸ್ತಾಪದಲ್ಲಿ ಬಿಡುಗಡೆಯಾಗುತ್ತಿರುವುದು ಒಂದು ದೊಡ್ಡ ವಿಚಾರ. ಈ ಪುಸ್ತಕ ಬಿಡುಗಡೆ ಮಾಡುವ ಅವಕಾಶ ನನಗೆ ಸಿಕ್ಕಿದ್ದು ನನಗೆ ಸಂದ ಒಂದು ದೊಡ್ಡ ಗೌರವ ಎಂದೇ  ಭಾವಿಸುತ್ತೇನೆ. ಅದಕ್ಕಾಗಿಯೂ ಎಚ್ಹೆಸ್ವಿ ಯವರನ್ನು ವಂದಿಸುತ್ತೇನೆ.
ಪುಸ್ತಕ ಬಿಡುಗಡೆ ಎಂದರೇನು ? ಬರೀ ಒಂದು ಬಣ್ಣದ ದಾರ ಎಳೆದು ಒಂದು ಥಳ ಥಳಿಸುವ  ಕಾಗದದ ಕಟ್ಟು ಬಿಚ್ಹಿ  ಎಲ್ಲರಿಗು ಪುಸ್ತಕ ಹಂಚುವುದು , ಫೋಟೋ ತೆಗೆಸಿಕೊಳ್ಳುವುದು ಅಷ್ಟೇನೆ? ಅಷ್ಟೇ ಅಲ್ಲ  ಎನ್ನಿಸುತ್ತದೆ .
ಪುಸ್ತಕದ ಬಿಡುಗಡೆಯ ಜೊತೆಗೆ ನಮ್ಮನ್ನು ಸ್ವಲ್ಪ ಬಿಡುಗಡೆ  ಮಾಡಿಕೊಂಡರೆ ಅದಕ್ಕೆ ಹೆಚ್ಹು ಅರ್ಥವಿರುತ್ತದೆ. ನಮ್ಮನ್ನು ನಾವು ಬಿಡುಗಡೆ ಮಾಡಿಕೊಳ್ಳುವುದು ಎಂದರೆ, ಲೇಖಕರ ಆಲೋಚನೆಗಳನ್ನು ಬರಮಾಡಿಕೊಳ್ಳಲು, ಅವರ ಮಾತನ್ನು ಕೇಳಿಸಿಕೊಳ್ಳಲು  ನಮ್ಮ ಮನಸ್ಸನ್ನು  ಸ್ವಲ್ಪ ತೆರವು ಮಾಡಿಕೊಳ್ಳುವುದು. ಅಂದರೆ ಪೂರ್ವನಿಶ್ಚಿತ  ಭಾವಗಳನ್ನು ಸ್ವಲ್ಪ ಹೊತ್ತಾದರೂ ಬದಿಗೆ ಸರಿಸಿ, ಲೇಖಕರ ಮಾತಿಗೆ ಅಲ್ಲಿ ಸ್ವಲ್ಪ ಜಾಗಮಾಡಿಕೊಡುವುದು. ಹೊಸ  ಆಲೋಚನೆಗಳನ್ನು ಸ್ವೀಕರಿಸುವುದು, ಹೊಸಬರನ್ನು ಪರಿಚಯ ಮಾಡಿಕೊಳ್ಳುವುದು.
ಪ್ರಸ್ತುತ ಪುಸ್ತಕದ ವಿಷಯ ಹೇಳುವುದಾದರೆ, ಇಲ್ಲಿ ಲೇಖಕರೂ ಅದೇ ಕೆಲಸ ಮಾಡಿದ್ದಾರೆ. ತಮ್ಮ ಅತ್ಯಂತ ವೈಯುಕ್ತಿಕ  ಅನುಭವಗಳು , ಆಲೋಚನೆಗಳು , ಭಾವನೆಗಳು ಅವರ ಕವಿತೆ ಕಥೆಗಳಲ್ಲಿ ಅಭಿವ್ಯಕ್ತವಾಗಿದ್ದರೂ, ಅವರ  ಜೀವನದಲ್ಲಿ  ಹಾದುಹೋದ  ಅನೇಕ ವ್ಯಕ್ತಿಗಳ ನೆನಪು  ಅಲ್ಲಿ ಕಾಣಸಿಗುವುದಿಲ್ಲ – ‘ಉತ್ತರಾಯಣ ‘ ದಂಥ ವಿಶಿಷ್ಟ  ಕಾವ್ಯವನ್ನು ಬಿಟ್ಟರೆ . ಅಂಥ ವ್ಯಕ್ತಿಗಳಿಗೆ ಇಲ್ಲಿ ಎಚ್ಹೆಸ್ವಿ  ಜಾಗ ಮಾಡಿ ಕೊಟ್ಟಿದ್ದಾರೆ. ನಮಗೆ ಅವರನ್ನು ಪರಿಚಯ ಮಾಡಿಸಿದ್ದಾರೆ .
ಗೊರೂರರ  ಬಗ್ಗೆ ಕಾರಂತರು ಬರೆಯುತ್ತ, ಗೊರೂರರು ತಮ್ಮ ಹಳ್ಳಿಯ ಯಾರು ಯಾರೋ ಸಾಬಿಗಳನ್ನೆಲ್ಲಾ ನಮಗೆ  ಪರಿಚಯ ಮಾಡಿಸಿದ್ದಾರೆ  ಎಂದು ಪ್ರೀತಿಯಿಂದ  ಅನ್ನುತ್ತಾರೆ. ಅದು ಇಲ್ಲೂ ನಿಜ . ಎಚ್ಹೆಸ್ವಿ ತಮ್ಮ ಸಂಸಾರದ, ತಮ್ಮ ಹಳ್ಳಿಯ ಅನೇಕರನ್ನು ಪರಿಚಯ ಮಾಡಿಸಿದ್ದಾರೆ. ಪರಿಚಯಿಸಿರುವುದು ಮಾತ್ರವೇ ಅಲ್ಲ, ಅವರನ್ನು ನಮಗೆ ತೀರ ಹತ್ತಿರದವರನ್ನಾಗಿ ಮಾಡಿದ್ದಾರೆ . ಅವರ ದೊಡ್ಡ ಅಜ್ಜಿ ಭೀಮಕ್ಕ ನಮ್ಮೆಲ್ಲರಿಗೂ  ಬೇಕಾದ ವ್ಯಕ್ತಿಯಾಗುತ್ತಾರೆ . ಅವರ ಕಥಾನಕದಲ್ಲಿ  ತಮ್ಮ  ಸ್ವಂತ ಅಜ್ಜಿ , ಸೀತಜ್ಜಿ ಇದ್ದಾರೆ , ಪಿಳ್ಳೆ  ಪಂಡಿತರಿದ್ದಾರೆ , ಅವರ ಬಾಲ್ಯ ಸ್ನೇಹಿತರಿದ್ದಾರೆ , ಅವರು ಉಪಾಧ್ಯಾಯ ವೃತ್ತಿ ಸೇರಿದಾಗ ತಮ್ಮ ಹೆಸರಿನವನೇ ಆದ ಅವರ ಅತಿ ಮೆಚ್ಹಿನ ವಿದ್ಯಾರ್ಥಿಯೋಬ್ಬನಿದ್ದಾನೆ , ಮುಂದೆ  ಕಾಲೇಜಿನಲ್ಲಿ ಅವರ ಶಿಷ್ಯೆಯರಾದ ಮುಗ್ಧ ಹುಡುಗಿಯರಿದ್ದಾರೆ … ಇದೊಂದು ಅತಿ ದೊಡ್ಡ ಪ್ರಪಂಚವಲ್ಲ , ಆದರೆ ಪ್ರೀತಿಮಯ ಪ್ರಪಂಚ . ಅವರೆಲ್ಲ ತೋರಿದ ಪ್ರೀತಿಯನ್ನು ನೆನೆಯುತ್ತ ಎಚ್ಹೆಸ್ವಿ “ಪ್ರೀತಿ ಯಾವಾಗಲು ಮನಸ್ಸನ್ನು ವಿನಯದಲ್ಲಿ ಅದ್ದುತ್ತದೆ ..” ಎನ್ನುತ್ತಾರೆ . ಅದನ್ನು ಇಲ್ಲಿ ನೀವು ನೋಡಬಹುದು .
ಅನಾತ್ಮ ಕಥನ ಎಂಬ ಹೆಸರು ಸ್ವಲ್ಪ ಅಪರೂಪದ್ದು ಎಂದೇ ಅನ್ನಬಹುದು. ಮೇಲುನೋಟಕ್ಕೆ ಇದು ತಮ್ಮ ಆತ್ಮ ಚರಿತ್ರೆ ಅಲ್ಲ , ಮುಖ್ಯವಾಗಿ ಇದು ಇತರರ ಚರಿತೆ , ಕಥನ ಆದ್ದರಿಂದಲೇ ಈ ಹೆಸರು ಕೊಟ್ಟಿದ್ದಾರೆ ಎನ್ನಿಸಬಹುದು . ಆದ್ರೆ ಇಲ್ಲಿನ ಬರಹವೊಂದರಲ್ಲಿ ಇದಕ್ಕೆ ಇನ್ನೊಂದು ಆಯಾಮ ಸಿಕ್ಕುತ್ತದೆ. ಆ ಬರಹ “ವೇಣು ಎಂಬ ಹುಡುಗಿ”.
ವೇಣು ಮತ್ತು ಸಾರಿಕಾ ಕಾಲೇಜಿನಲ್ಲಿ ಇವರ ಶಿಷ್ಯೆಯರು. ಉತ್ತಮ ವಿದ್ಯಾರ್ಥಿಗಳು . ಇವರಲ್ಲಿ, ವೇಣುಗೆ ಮದುವೆ  ಗೊತ್ತಾಗಿದೆ . ಇನ್ನೊಂದು ವಾರದಲ್ಲೇ ಮದುವೆ. ಅದನ್ನು ತನ್ನ ಮೇಷ್ಟರಿಗೆ ಹೇಳಿಕೊಳ್ಳಬೇಕು . ಅದಕ್ಕಾಗಿ ಅವರನ್ನು ಕಾಲೇಜಿನ ಹಿಂಭಾಗದ ಬಯಲಿಗೆ ಕರೆದು ತಂದು ತನ್ನ ಫಿಯಾನ್ಸಿಯ ಫೋಟೋ ತೋರಿಸಿ ವಿಷಯ ತಿಳಿಸುತ್ತಾಳೆ. ಆ ಸಂದರ್ಭವನ್ನು ಕುರಿತು ಎಚ್ಹೆಸ್ವಿ  ಹೀಗೆ ಹೇಳುತ್ತಾರೆ .
ಇಲ್ಲಿ ಅವರ ಮನಸ್ಸು ಹೇಗೆ ಒಂದು ಲಘುವಾದ ಸರಸವಾದ ವಿಷಯದಿಂದ ಗಹನವಾದ ಒಳನೋಟಕ್ಕೆ ಜಿಗಿಯುತ್ತದೆ ಎಂಬುದನ್ನು ಗಮನಿಸಬೇಕು .
ಈ ಏಕಾಕಿತನ ಕವಿಯಾದವನಿಗೆ ಇರಬೇಕಾದ ಗುಣ ಎನ್ನಿಸುತ್ತದೆ. ಪುತಿನ ತಮ್ಮ ಗೋಕುಲ ನಿರ್ಗಮನದ ಮುನ್ನುಡಿಯಲ್ಲಿ ತಮಗೆ ಪ್ರಿಯ ಸ್ನೇಹಿತನಂತೆ ಇರುವ ಒಂದು ಬಗೆಯ ಅಲೌಕಿಕ ವಿಷಾದದ ಬಗ್ಗೆ ಹೇಳುತ್ತಾರೆ . ಜೊತೆಗೆ , ಎಚ್ಹೆಸ್ವಿ ಯವರ ಸ್ವಂತ ಜೀವನದಲ್ಲಿ ಆಗತಾನೇ ನಡೆದಿದ್ದ ಘಟನೆಗಳು ಸೇರಿ ಈ ಏಕಾಂಗಿತನ , ಒಂದು ಬಗೆಯ ಅನಾತ್ಮಕತೆ ಅವರಲ್ಲಿ ಆಗ ತೀವ್ರ ವಾಗಿದ್ದಿರಬೇಕು .
ಆದರೆ, ಹೆಸರು ಅನಾತ್ಮ ಕಥನವಾದರೂ ಇಲ್ಲಿ ತಾದಾತ್ಮ್ಯ ವಿದೆ. ಅನಾತ್ಮಕತೆ , ತಾದಾತ್ಮ್ಯ ಎರಡನ್ನು ಒಟ್ಟಿಗೆ ಕಾಪಾಡಿಕೊಂಡಿದ್ದಾರೆ ಎಚ್ಹೆಸ್ವಿ . ಉತ್ತಮವಾದ ಬರವಣಿಗೆಯ ಲಕ್ಷಣ  ಇದು ಎಂದು ನನ್ನ ಭಾವನೆ . ಅವರ ನೆನಪುಗಳು ಅವರವೇ ಆದರು ಅವುಗಳಲ್ಲಿ ಇತರರಲ್ಲೂ ಅಂಥ ನೆನಪನ್ನು ಹುಟ್ಟಿಸುವ ಶಕ್ತಿ ಇದೆ.
ಇಂಥ ಚಿತ್ರಣಗಳಲ್ಲಿ ಇನ್ನೂ ಒಂದು ಅಂಶ ಗಮನಿಸಬಹುದು . ಎಲ್ಲ ಚಿತ್ರಣಗಳು ಸಂಪೂರ್ಣವಾಗಿ , ಸ್ಪುಟವಾಗಿಯೇ ಇರಬೇಕಿಲ್ಲ , national geographic ನಲ್ಲಿ ಬರುವ ಚಿತ್ರಗಳಂತೆ. ಉತ್ತಮ ಛಾಯಾ ಗ್ರಾಹಕರು ಕೆಲವು ಚಿತ್ರಗಳನ್ನು ಬೇಕೆಂದೇ ಸ್ವಲ್ಪ ಮುಸುಕು ಮಾಡಿ ಅದರ ದೃಶ್ಯ ಪ್ರಭಾವವನ್ನು ಹೆಚ್ಹಿಸುತ್ತಾರೆ. ಅಸ್ಪಷ್ಟತೆಯೇ  ಅವುಗಳ ನಿಗೂಢತೆಯನ್ನು ಹೆಚ್ಹಿಸುತ್ತದೆ. ಇವರ ಬರಹದಲ್ಲೂ ಇಂಥ ಸನ್ನಿವೇಶಗಳು ಕಾಣುತ್ತವೆ . ಯಾವೊಬ್ಬ ವ್ಯಕ್ತಿಯ ಅಥವಾ ಯಾವೊಂದು ಸಂದರ್ಭದ ಸಂಪೂರ್ಣ ಅರ್ಥ ನಮಗೆ ಎಷ್ಟು ಮಟ್ಟಿಗೆ ತಿಳಿಯಬಹುದು ? ಅದನ್ನು ಎಚ್ಹೆಸ್ವಿ  ಗುರುತಿಸುತ್ತಾರೆ . ಹಲವಾರು ಕಡೆ ಅವರು “ಅದು ಯಾಕೆ ಹೀಗಾಯಿತು” ಅನ್ನುವ ಪ್ರಶ್ನೆ ನಿಗೂಢ ಎನ್ನುತ್ತಾರೆ.
ಇಲ್ಲಿನ ಎಲ್ಲ ಕಥನಗಳು ತುಂಬಾ ಹೃದ್ಯವಾಗಿದೆ . ಈ ಕಥಾನಕದಲ್ಲಿ ಕೆಲವನ್ನು ಬಿಟ್ಟರೆ ಉಳಿದವುಗಳೆಲ್ಲ  ಒಂದು ಅತ್ಯಂತ ಹಿತವಾದ ತಿಳಿಹಾಸ್ಯ ಇದೆ. ಎಲ್ಲ ಒಳ್ಳೆಯ ಬರಹಗಾರರು ಜೀವನದ ಸಣ್ಣಪುಟ್ಟ ಐರನಿಗಳನ್ನೂ , ವಿರೋದಾಭಾಸಗಳನ್ನು ಗಮನಿಸಿಯೇ ಇರುತ್ತಾರೆ . ಎಚ್ಹೆಸ್ವಿ ಯವರು ಹಾಗೆ . ಅದು ಅವರ ಬರಹದಲ್ಲಿ ತುಂಬಾ ಮನೋಹರವಾಗಿ ಬರುತ್ತದೆ. ತಮ್ಮ ದೊಡ್ಡ ಅವಿಭಕ್ತ  ಸಂಸಾರದ ಸಂಬಂಧಗಳನ್ನು  ಬಣ್ಣಿಸುತ್ತಾ  ವಾವೆಯಲ್ಲಿ ಇವರ ಅಜ್ಜಂದಿರಾಗ ಬೇಕಾದ ಇಬ್ಬರು ಇವರು ೭ನೆ  ಕ್ಲಾಸಿನಲ್ಲಿದ್ದರೆ ಅವರು ೬ನೆ ಕ್ಲಾಸಿನಲ್ಲಿದ್ದರು ಎನ್ನುತ್ತಾರೆ .
ಇವುಗಳಲ್ಲಿ ಕೆಲವನ್ನು ನಾನೂ ‘ಅವಧಿ’ ವೆಬ್ ಸೈಟ್ ನಲ್ಲೇ ಓದಿದ್ದೆ . ಆದರೆ ಮತ್ತೆ ಎಲ್ಲವನ್ನು ಸಮಗ್ರವಾಗಿ ಓದಿದ್ದು ತುಂಬಾ ಸಂತೋಷ ಕೊಟ್ಟಿದೆ. ತುಂಬಾ ಸ್ವಾರಸ್ಯವಾದ ಭಾಗಗಳನ್ನು ನಿಮಗೆಲ್ಲ ಓದಿ ಹೇಳಲೆಂದು ಆ ಭಾಗಗಳನ್ನು ಕೆಂಪು ಸ್ಟಿಕ್ಕರ್ ಇಟ್ಟು ಗುರುತು ಮಾಡುತ್ತಾ  ಹೋದೆ. ಪುಸ್ತಕವನ್ನೆಲ್ಲ ಗುರುತು ಮಾಡುವ ಸ್ಥಿತಿ ಬಂದು ಆ ಪ್ರಯತ್ನ ನಿಲ್ಲಿಸಿದೆ ! ಆದ್ದರಿಂದ ಕೇವಲ ಮೂರು ನಾಲ್ಕನ್ನು ಮಾತ್ರ  ಕುರಿತು ಹೇಳುತ್ತೇನೆ .
ತಮ್ಮ ಪ್ರಿಯ ಶಿಷ್ಯ ಮತ್ತು ಮುಂದೆ ಆತ್ಮೀಯ ಗೆಳೆಯನಾದ ತಮ್ಮದೇ ಹೆಸರಿನ ವೈದ್ಯ ಡಾ.ಎಚ್.ಎಸ್ . ವೆಂಕಟೇಶ ಮೂರ್ತಿಯ ಬಗ್ಗೆ ಬರೆದ ಕಥನ ಓದುವಾಗ ಗಂಟಲು ಉಬ್ಬಿ ಬರುತ್ತದೆ . ಯಾರದೋ ಮನೆಯ ಫೋಟೋ ಆಲ್ಬಮ್ಮಿನಲ್ಲೋ  ಅಥವಾ ಯಾವುದೋ ಗ್ರೂಪ್ ಫೋಟೋ ದಲ್ಲೋ ನಮಗೆ ಪರಿಚಿತರಾದವರನ್ನು  ಕಂಡಾಗ ಸಂತೋಷವಾಗುವಂತೆ , ಇಲ್ಲಿ ‘ಅಮೆರಿಕಾದಲ್ಲೊಂದು ವೈಶಂಪಾಯನ ಸರೋವರ’ ಓದುವಾಗ ಆಗುತ್ತದೆ. ಅಲ್ಲಿ ನಮಗೆ ಕಾಣುವವರು ನಮ್ಮೆಲ್ಲರ ಪ್ರಿಯ ಮಿತ್ರರಾದ ರಂಗಾಚಾರ್ ಮತ್ತು ಪದ್ಮ , ಜೊತೆಗೆ ರಾಮಮೂರ್ತಿ ಮತ್ತು ಹೇಮಾ . ಮಕ್ಕಳ ನಾಟಕ ರಂಗದ ಪ್ರಮುಖ ಚೇತನವೆನಿಸಿದ ‘ಗಟ್ಟಿಗಿತ್ತಿ ‘ ಪ್ರೇಮಾ ಕಾರಂತರ ಬಗ್ಗೆ ಬರೆದ ಲೇಖನ ತುಂಬಾ ಮನಸ್ಪರ್ಶಿಯಾಗಿದೆ. ಅದರಲ್ಲಿ ಪ್ರೇಮಾ ಕಾರಂತರು ಒಂದು ಕಡೆ ಹೇಳಿರುವ ಮಾತನ್ನು ಎಚ್ಹೆಸ್ವಿ  ನೆನೆದಿದ್ದಾರೆ . ‘ಭೇಟಿ ಆಕಸ್ಮಿಕ ; ಅಗಲಿಕೆ ಅನಿವಾರ್ಯ ;ನೆನಪುಗಳು ನಿರಂತರ ‘ ಈ ಅನಾತ್ಮ ಕಥನದ ಆತ್ಮ ಇರುವುದು ಇಲ್ಲಿಯೇ  ಎನ್ನಿಸುತ್ತದೆ .
]]>

‍ಲೇಖಕರು avadhi

October 21, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

೧ ಪ್ರತಿಕ್ರಿಯೆ

  1. Mahesh

    ಅನಾತ್ಮ ಕಥನ , ಹೆಸರೇ ತುಂಬಾ ಇಂಟರೆಸ್ಟಿಂಗ್ ಆಗಿದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: