ಈ ವ್ಯಕ್ತಿ ಮುತಾಲಿಕ್, ಹೆಚ್ಚುಕಡಿಮೆ 29 ಕ್ರಿಮಿನಲ್ ಮೊಕದ್ದಮೆ

-ಶ್ರೀ 
ಇತ್ತೀಚೆಗೆ ದೆಹಲಿಯಲ್ಲಿರುವ ಪತ್ರಕರ್ತ ಡಿ.ಪಿ.ಸತೀಶ್ ತಮ್ಮ ಬ್ಲಾಗಲ್ಲಿ ಬರೆದುಕೊಂಡಿದ್ದುದು ನನ್ನ ಗಮನ ಸೆಳೆದಿದೆ, ಲಿಂಕ್ ಇಲ್ಲಿದೆ.http://ibnlive.in.com/blogs/author/237/d.p.satish.html ಇದು ದಿನಾ ನನ್ನನ್ನು ಕಾಡುವ ವಿಚಾರವಾದ್ದರಿಂದ ಇಲ್ಲಿ ನನ್ನ ಪ್ರಶ್ನೆಗಳಿಗೆ ಉತ್ತರ ಸಿಗುತ್ತದೇನೋ ಅನ್ನುವ hope ನನ್ನದು.
pub_012609-1
ಈ ವ್ಯಕ್ತಿ, ಮುತಾಲಿಕ್, ತನ್ನ ಕೆಲಸವನ್ನು ಆರಂಭಿಸಿದ್ದು 90 ದಶಕದಲ್ಲಿ. ಅಂದಿನಿಂದ ಇಂದಿನವರೆಗೆ ಹೆಚ್ಚುಕಡಿಮೆ 29 ಕ್ರಿಮಿನಲ್ ಮೊಕದ್ದಮೆ ಮುತಾಲಿಕ್ ಮೇಲೆ ದಾಖಲಾಗಿದೆ. ಸತೀಶ್ ಬರೆದ ಹಾಗೆ, ಮಾಧ್ಯಮಗಳು ಹಾಗೂ ಪಬ್ಲಿಸಿಟಿ ಅಂದ್ರೆ ಮುತಾಲಿಕ್-ಗೆ ಬಲು ಇಷ್ಟ. ಕೆಟ್ಟದೋ, ಒಳ್ಳೆಯದೋ, ಒಟ್ಟಿನಲ್ಲಿ ಪಬ್ಲಿಸಿಟಿ ಬೇಕು. ಏನಾದರೊಂದು ಹೇಳುತ್ತಲೇ ಇರಬೇಕು, ಸುದ್ದಿಯಲ್ಲಿರಬೇಕು, ಇದು ಚಟದಂತಾಗಿಬಿಟ್ಟಿದೆ. ಇವರ ಇತ್ತೀಚೆಗಿನ ಘೋಷಣೆಗಳೆಂದರೆ, ಪಾಕಿಸ್ತಾನಿ ಆಟಗಾರರು ಹಾಗೂ ಕಲಾವಿದರಿಗೆ ಭಾರತಕ್ಕೆ ಬರಲು ಬಿಡುವುದಿಲ್ಲವೆಂಬ ಬೆದರಿಕೆ, ಬಾಬಾಬುಡನ್-ಗಿರಿಯಲ್ಲಿ ಕರಸೇವೆ, ಚಿಕ್ಕಮಗಳೂರಿನಲ್ಲಿ ಕಾರ್ಯಕರ್ತರ ಸಭೆ, ಲೋಕಸಭೆ ಚುನಾವಣೆಯಲ್ಲಿ ಹಿಂದುತ್ವಕ್ಕೆ ಬೆಂಬಲಿಸುವವರಿಗೆ ಬೆಂಬಲ ನೀಡುವ ನಿರ್ಧಾರ. ಬುರ್ಖಾ ಹಾಕಿ ಮತದಾನ ಮಾಡುವುದನ್ನು ನಿಷೇಧಿಸಿ ಎಂಬ ಬೇಡಿಕೆ. ಗಡೀಪಾರು ಮಾಡಿದರೆ 10,000 ಕಾರ್ಯಕರ್ತರೊಡನೆ ದಕ್ಷಿಣ ಕನ್ನಡವನ್ನು ಪ್ರವೇಶಿಸುವ ಘೋಷಣೆ.
ಮುತಾಲಿಕ್ ಬೆಳೆದಿದ್ದು ಈಹಿಂದೆಯೂ ಇದೇ ರೀತಿ ಘೋಷಣೆಗಳನ್ನು ಮಾಡುತ್ತ, ಪ್ರಚೋದನಾತ್ಮಕ ಹೇಳಿಕೆ ನೀಡುವ ಮೂಲಕ. ಶಿವಸೇನೆಯಿಂದ ಹೊರಬಂದ ಮೇಲೆ ತಮ್ಮ ವಿಚಾರಧಾರೆಗಳನ್ನು ಇಷ್ಟಪಡುವವರನ್ನು ಬೆಂಬಲಿಗರನ್ನಾಗಿಸಿಕೊಂಡು ರಾಷ್ಟ್ರೀಯ ಹಿಂದೂ ಸೇನೆ ಕಟ್ಟಿದರು. 2008ರ ಚುನಾವಣೆಯಲ್ಲಿ ಸ್ಪರ್ಧೆ, ಸೋಲು. ಪಬ್ ದಾಳಿ ಮುನ್ನ ಶ್ರೀರಾಮಸೇನೆಯ ಹೆಸರು ದೊಡ್ಡದಾಗಿ ಯಾರೂ ಕೇಳೇ ಇರಲಿಲ್ಲವಾದರೂ, ಅದಕ್ಕಿಂತ ದೊಡ್ಡ ಕೆಲಸಗಳನ್ನು ತಾವು ಮಾಡಿದ್ದೇವೆ, ಅದು ತುಂಬಾ ಚಿಕ್ಕದು ಅಂತ ಶ್ರೀರಾಮಸೇನೆಯವರೇ ಹೇಳಿಕೊಂಡಿದ್ದಾರೆ. ಹೌದು, ಮಾಡಿದ್ದು ನಿಜ. ಶಂಕಿತ ಉಗ್ರರನ್ನು ಉಡಾಯಿಸಲಿಕ್ಕೋಸ್ಕರ ಹುಬ್ಬಳ್ಳಿ ನ್ಯಾಯಾಲಯದ ಸ್ಫೋಟಕ್ಕೆ ಸಂಚು ರೂಪಿಸಿದ್ದು ಇವರೇ. ಇದರ ಹಿಂದೆ-ಮುಂದೆ ಇರುವ ಕಥೆಗಳು ನಿಮಗೆಲ್ಲರಿಗೂ ಗೊತ್ತು ಅಂದುಕೊಂಡಿರುವೆ. ಝೀ ಕನ್ನಡ, ಕಸ್ತೂರಿ ಮತ್ತು ಕನ್ನಡಪ್ರಭಾ ಬಿಟ್ರೆ ಬೇರ್ಯಾರೂ ‘ಆಫ್-ದ-ರೆಕಾರ್ಡ್ ‘ ಇದ್ದಿದ್ದಕ್ಕೆ ಪಬ್ಲಿಸಿಟಿ ಕೊಟ್ಟಿರಲಿಲ್ಲ.
ಗುಜರಾತಿನಲ್ಲಿ ನಡೆದ ಗೋಧ್ರಾ ರೈಲು ಭಸ್ಮದ ಘಟನೆ, ಹಾಗೂ ನಂತರದ ಕೋಮುಗಲಭೆ ಘಟನೆಗಳು ಯಾವ ಪ್ರಾಮಾಣಿಕ ಪತ್ರಕರ್ತನಿಗೂ ಸಹ್ಯವಾಗಲಾರವು. ಇಂತಹಾ ಶಕ್ತಿಗಳನ್ನು ಬೆಳೆಯಲು ಬಿಟ್ಟರೆ ಕರ್ನಾಟಕ ಇನ್ನೊಂದು ಗುಜರಾತ್ ಆಗುವ ದಿನ ದೂರವಿಲ್ಲ. ಯಾವ ರಾಜಕೀಯ ಶಕ್ತಿಗಳಿಂದ ಕರ್ನಾಟಕದ ಭಟ್ಕಳ, ಬೀದರ್ ಮುಂತಾದೆಡೆ ಭಯೋತ್ಪಾದಕ ಚಟುವಟಿಕೆಗಳು ತಡೆರಹಿತವಾಗಿ ಸಾಗುತ್ತಿದ್ದವೋ ಅವೇ ಶಕ್ತಿಗಳೇ ಮುತಾಲಿಕ್ ಅಂತಹವರನ್ನೂ ಬೆಳೆಯಲು ಬಿಟ್ಟಿವೆ. ಇದರಲ್ಲಿ ಬಿಜೆಪಿ ಸರಕಾರದ ಪಾಲು ಕಡಿಮೆಯೆಂದೇ ಹೇಳಬೇಕು.
ಬಾಗಲಕೋಟೆ, ದಾವಣಗೆರೆ, ಹುಬ್ಬಳ್ಳಿ-ಧಾರವಾಡದ ನಿರುದ್ಯೋಗಿ ಯುವಕರನ್ನು ಬುಟ್ಟಿಗೆ ಹಾಕಿಕೊಂಡು ಶ್ರೀರಾಮಸೇನೆಯ ಜತೆಗೆ ಇವರು ‘ರಾಷ್ಟ್ರರಕ್ಷಾಸೇನೆ’ ಕಟ್ಟಿದ್ದಾರೆ, ನಿವೃತ್ತ ಮಿಲಿಟರಿ ಅಧಿಕಾರಿಗಳಿಂದ ಸೇನಾತರಬೇತಿ ನೀಡುವ ಪ್ಲಾನ್ ಕೂಡ ಇದೆ. ಅವರೇ ಹೇಳಿಕೊಳ್ಳುವಂತೆ, ಅದು ಆತ್ಮಹತ್ಯಾದಳ. ಹಿಂದುತ್ವದ ಹೆಸರಲ್ಲಿ, ರಾಷ್ಟ್ರರಕ್ಷಣೆಯ ಹೆಸರಲ್ಲಿ ಏನನ್ನಾದರೂ ಮಾಡಲು ಅವರು ಸಿದ್ಧ. ಇವರು ರೀತಿನೀತಿಯಲ್ಲಿ ನಕ್ಸಲರಿಗಿಂತ ಯಾವ ರೀತಿ ಭಿನ್ನ?
ಈಗ ನನ್ನ ಪ್ರಶ್ನೆಗಳೆಂದರೆ,
1) ಈ ಹಂತಕ್ಕೆ ಬೆಳೆದು ನಿಂತವರ ಬಣ್ಣ ಬಯಲು ಮಾಡಿದರೆ ತಪ್ಪಾ ? ನಮ್ಮ ಕಾಲದ ಬೆಳವಣಿಗೆಗಳಿಗೆ ಸ್ಪಂದಿಸುವುದೇ ಪತ್ರಿಕೋದ್ಯಮದ ಕರ್ತವ್ಯ ತಾನೇ?
2) ಇನ್ನೊಂದು ರೀತಿ ಯೋಚಿಸುವಾಗ, ಡಿ.ಪಿ.ಸತೀಶ್ ಹೇಳಿದ ಹಾಗೆ ಇಂಥದಕ್ಕೆ ಪಬ್ಲಿಸಿಟಿ ಕೊಟ್ಟಷ್ಟು ಅವರು ಬೆಳೆಯುತ್ತಾರೆ ಅನ್ನುವುದು ಸತ್ಯ. ಪಬ್ ದಾಳಿಯಾದ ನಂತರ 9 ರಾಜ್ಯಗಳಲ್ಲಿ ಇವರ ಸೇನೆಗೆ ಬೇಡಿಕೆ ಬಂದಿದೆ, ಸಂಖ್ಯಾಬಲ ಹೆಚ್ಚಾಗಿದೆ ಎಂಬುದು ಸತ್ಯ. ಅವರಿಗೆ ಸಿಕ್ಕ ಪಬ್ಲಿಸಿಟಿಯನ್ನು ಸಮರ್ಥವಾಗಿ ಉಪಯೋಗಿಸಿಕೊಂಡು, ಇನ್ನಷ್ಟು ಬೆಳೆದಿರುವುದು ಸತ್ಯ.
ಹಾಗೆಂದು ಕೆಲವು ಸಂದರ್ಭಗಳಲ್ಲಿ, ಇಲ್ಲಿನ ಬಹುಸಂಖ್ಯಾತ ಹಿಂದುಗಳ ಸಾಂಪ್ರದಾಯಿಕ ಮನೋಭಾವವನ್ನೇ ಬಂಡವಾಳವಾಗಿರಿಸಿಕೊಂಡು ಆಟವಾಡುತ್ತಿರುವ ಇಂಥವರ ಮೇಲೆ ಕೆಲವೊಮ್ಮೆ ಏನು ಹೇಳುವುದೂ ಕಷ್ಟವಾಗಿಬಿಡಬಹುದು. (ಉದಾಹರಣೆಗೆ, ಪಬ್ ದಾಳಿಯನ್ನು ವಿರೋಧಿಸಿದ 90 ಶೇಕಡಾ ಜನ ಪಬ್ ಸಂಸ್ಕೃತಿಯನ್ನೂ ವಿರೋಧಿಸಿದ್ರು, ಅವರು ಮಾಡಿದ್ದು ಸರಿಯಿದೆ, ಮಾಡಿದ ರೀತಿ ಮಾತ್ರ ಸರಿಯಿಲ್ಲ ಅಂದ್ರು. ಅದಕ್ಕೆ ಎಡ-ಬಲ-ಕಾಂಗ್ರೆಸ್-ಬಿಜೆಪಿ ಅನ್ನೋ ಬೇಧ ಇರಲಿಲ್ಲ)
ಒಟ್ಟಿನಲ್ಲಿ ಹೇಳುವುದಾದರೆ ಈ ವಿಷಯ ತುಂಬಾ ಸೂಕ್ಷ್ಮ. ಇಂಥಾ ಸಮಯದಲ್ಲಿ ಪತ್ರಿಕೋದ್ಯಮದ ಜವಾಬ್ದಾರಿ ಏನು, ಹೇಗಿದ್ದರೆ ಸರಿ? ಏನೂ ಇಲ್ಲವೆಂಬಂತೆ ಸುಮ್ಮನಿರುವುದು ಸರಿಯೋ, ಅಥವಾ ಇರುವ ಸತ್ಯವನ್ನು ಒಪ್ಪಿಕೊಂಡು ಅದರಲ್ಲಿರುವ ತಪ್ಪನ್ನು ಎತ್ತಿಹಿಡಿಯುವುದು, ಓದುಗರ ಹಾಗೂ ಸಂಬಂಧಪಟ್ಟವರ ಗಮನಕ್ಕೆ ತರುವುದು ಸರಿಯೋ?

‍ಲೇಖಕರು avadhi

March 8, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ...

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

3 ಪ್ರತಿಕ್ರಿಯೆಗಳು

 1. ಅಜಯ್

  ಇಂತಹಾ ಶಕ್ತಿಗಳನ್ನು ಬೆಳೆಯಲು ಬಿಟ್ಟರೆ ಕರ್ನಾಟಕ ಇನ್ನೊಂದು ಗುಜರಾತ್ ಆಗುವ ದಿನ ದೂರವಿಲ್ಲ
  ಅಯ್ಯೋ, ಇದನ್ನ ಕೇಳೀ ಕೇಳೀ ಬೇಜಾರಾಗಿ ಹೋಗಿದೆ. ಒಮ್ಮೆ ಎಲ್ಲರಿಗೂ ಗುಜರಾತ್ ಟ್ರಿಪ್ ಮಾಡಿಸಬೇಕು. ಆಗಲಾದರೂ ತಿಳಿಯುತ್ತದೆ ಗುಜರಾತ್ ಅಂದರೆ ಏನು ಅಂತ. ಮುತಾಲಿಕ್ ಗಿಂತ ಕೆಲವು ಪತ್ರಕರ್ತರು, ಮಾಧ್ಯಮ ಪ್ರತಿನಿಧಿಗಳೇ ಅಪಾಯಕಾರಿಯಾಗಿ ಕಾಣಿಸಿತ್ತಾ ಇದ್ದಾರೆ ಜನಸಾಮಾನ್ಯರಿಗೆ ಮತ್ತು ಈ ದೇಶಕ್ಕೆ !

  ಪ್ರತಿಕ್ರಿಯೆ
 2. Shree

  ಪ್ರತಿಕ್ರಿಯೆಗೆ ಧನ್ಯವಾದ ‘ಅಜಯ್’.
  ಗುಜರಾತ್ ಟ್ರಿಪ್ ಮಾಡಿಸುವುದಾದರೆ ಬರಲು ನಾವು ರೆಡಿ! 😎

  ಪ್ರತಿಕ್ರಿಯೆ
 3. jinke subbanna

  ಇ೦ತಹುದೇ ವಿಷಯ ಬಿ ವಿ ಸೀತಾರಾಮ್ ಅವರ ಬಗೆಗೂ ಮ೦ಗಳೂರಿನ ಅನೇಕ ಪ್ರಜ್ನಾವ೦ತರನ್ನು ಕಾಡುತ್ತಿದೆ, ಕಳೆದ ಒ೦ದೆರಡು ರ್ಷಗಳಿ೦ದಲ್ಲ ೧೫ – ೨೦ ವರ್ಷಗಳಿ೦ದ, ಈ ವ್ಯಕ್ತಿಗೆ transperency ಪ್ರಶಸ್ತಿ ಸಿಗುವುದು ಎ೦ದರೆ ನಿಜಕ್ಕೂ ಅಚ್ಚರಿ. ದೆಹಲಿಯಲ್ಲಿ ಸತತ ಹಲವು ಬಾರಿ ಸ೦ಸದರಾಗಿದ್ದ ಎಚ್ ಕೆ ಎಲ್ ಭಗತ್, ಜಗದೀಶ್ ಟೈಟ್ಲರ್, ಸಜ್ಜನ್ ಕುಮಾರ್ ಮೊದಲಾದವರ ವಿರುದ್ಧ ದಾಖಲಾಗಿದ್ದ ಸಿಖ್ ನರಮೇಧ, (ಇದೊ೦ದೇ ಅಲ್ಲ, ಇ೦ತಹಾ ಬೇರೆ ಕೆ/ಹಲವು ಮೊಕದ್ದಮೆಗಳಿದ್ದಿರಬಹುದು) ಮೊಕದ್ದಮೆ ಬೆಚ್ಚಿಬೀಳಿ
  ಸುವ೦ತಹುದು, ಅದೇ ರೀತಿ ನಮ್ಮ ಗಣಿದೊರೆಗಳಿ೦ದ ತೊಡಗಿ ಹಲವಾರು ಹಾಲೀ ಮತ್ತು ಮಾಜೀ ಮ೦ತ್ರಿ ಮುಖ್ಯಮ೦ತ್ರಿಗಳ ವಿರುದ್ಧ ಕೇಳಿಬ೦ದ ಸಾ೦ಸ್ಥೀಕೃತ ಭ್ರಷ್ಟ್ಟಾಚಾರ, ಅಧಿಕಾರ ದುರುಪಯೋಗ, ಸರಕಾರದ ಬೊಕ್ಕಸಕ್ಕೆ ನಷ್ಟ,, ಇತ್ಯಾದಿ ನಮ್ಮ ಕುಸಿಯುತ್ತಿರುವ
  ನೈತಿಕತೆಯ ಸೂಚಕಗಳೇ ಅಲ್ಲವೇ ? ಜಿ೦ಕೆ ಸುಬ್ಬಣ್ಣ,

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: