ಈ ಸಾಮೂಹಿಕ ಹಿಂಸಾರತಿಗೆ ಏನೆನ್ನಬೇಕು?

ನೆಲದ ಜನರನ್ನು ಪ್ರದರ್ಶನದ ಸರಕಾಗಿಸುವ ಆಧುನಿಕತೆ

ಪಿ. ಭಾರತೀ ದೇವಿ

ಕೃಪೆ : ದ ಸ೦ಡೆ ಇ೦ಡಿಯನ್

ನೀರಿನಿಂದ ಮೀನನ್ನು ತೆಗೆದು ನೆಲಕ್ಕೆ ಬಿಡಿ, ಅದು ವಿಲವಿಲ ಒದ್ದಾಡುತ್ತದೆ. ’ಅರೆ, ನೋಡಿ ಅದು ಹೇಗೆ ಒದ್ದಾಡುತ್ತಿದೆ…..!’ ಎನ್ನುತ್ತಾ ಚಪ್ಪಾಳೆ ತಟ್ಟಿ ಕೇಕೆ ಹಾಕಿ ಒಬ್ಬ ವ್ಯಕ್ತಿ ನಗುತ್ತಾ ಇದ್ದರೆ ಅವನನ್ನು ಏನೆಂದು ಕರೆಯಬೇಕು? ಆದರೆ ಕರ್ನಾಟಕದ ಲಕ್ಷಾಂತರ ಜನ ರಿಯಾಲಿಟಿ ಶೋಗಳಲ್ಲಿ ಇಂಗ್ಲಿಷ್ ಹಾಡು ಹಾಡಲಾಗದ, ಹುಡುಗಿಯರ ಸೊಂಟ ಬಳಸಿ ಕುಣಿಯಲಾಗದ, ಹಸಿ ಮಾಂಸ ತಿಂದು ಕಾರಿಕೊಳ್ಳುವ ಹುಡುಗ ಹುಡುಗಿಯರನ್ನು ’ಮನೋರಂಜನೆ’ ಹೆಸರಲ್ಲಿ ನೋಡಿ ನಕ್ಕಿದ್ದಾರೆ. ಈ ಸಾಮೂಹಿಕ ಹಿಂಸಾರತಿಗೆ ಏನೆನ್ನಬೇಕು? ತನ್ನ ಸ್ವಭಾವದಿಂದಲೋ ಭ್ರಮೆಯ ಜಗತ್ತನ್ನು ಸಂಭಾಳಿಸಲಾಗದ್ದರಿಂದಲೋ ಆಸ್ಪತ್ರೆಗೆ ಸೇರಿರುವ ಹುಡುಗನನ್ನು ಪದೇ ಪದೇ ತೋರಿಸುತ್ತಾ ಜನಪ್ರಿಯತೆ ಪಡೆಯಲು ಹವಣಿಸುವ ಜನರಿಗೆ ಏನು ಹೇಳಬೇಕು? ಇಲ್ಲಿ ನಿಜಕ್ಕೂ ಸಮಸ್ಯೆ ಇರುವುದು ಎಲ್ಲಿ? ರಿಯಾಲಿಟಿ ಎಂಬ ಹೆಸರಿನಲ್ಲಿ ವಾಸ್ತವವನ್ನು ತಿರುಚಿ ಮನುಷ್ಯರ ಅಸಹಾಯಕತೆಯನ್ನೂ ನಗದೀಕರಿಸಿಕೊಳ್ಳುವ ರಿಯಾಲಿಟಿ ಶೋಗಳು ಮತ್ತೆ ಸುದ್ದಿಯಲ್ಲಿವೆ. ಇನ್ನೊಬ್ಬರ ಖಾಸಗಿ ಬದುಕಿಗೆ ಇಣುಕಿ ವಿಕೃತ ಸಂತೋಷ ಪಡೆಯುವ, ಇನ್ನೊಬ್ಬರ ಸಂಕಟವನ್ನು ಪ್ರದರ್ಶನದ ಸರಕಾಗಿಸುವ, ಟಿಆರ್‌ಪಿಯ ಹೆಸರಿನಲ್ಲಿ ಎಲ್ಲವನ್ನೂ ಹಸಿಹಸಿಯಾಗಿ ಬಿತ್ತರಿಸುವ ಇವುಗಳ ಬಗ್ಗೆ ಮಾತಾಡಿ ಮಾತಾಡಿ ಕ್ಲೀಷೆಯೆನಿಸಿದರೂ ಮತ್ತೆ ಅವುಗಳನ್ನು ಹೇಳದೇ ಬೇರೆ ವಿಧಿಯಿಲ್ಲ. ಇವು ಬೀರುತ್ತಿರುವ ಪರಿಣಾಮ, ಬಿತ್ತುತ್ತಿರುವ ಮೌಲ್ಯಗಳು ಆರೋಗ್ಯಕರವಾದವಲ್ಲ ಎಂಬುದನ್ನು ಮತ್ತೆ ಮತ್ತೆ ನಮ್ಮೆದುರು ನಡೆಯುತ್ತಿರುವ ಘಟನೆಗಳೇ ಸಾರಿ ಹೇಳುತ್ತಿವೆ. ಕಳೆದ ವರ್ಷದ ಮಯೂರ ಮಾಸಪತ್ರಿಕೆಯಲ್ಲಿ ರಂಗಕರ್ಮಿ ಪ್ರಸನ್ನ ಜನಪ್ರಿಯ ಮಾಧ್ಯಮಗಳ ಬಗ್ಗೆ ನಡೆಸಿದ ಚಿಂತನೆ ಪ್ರಕಟವಾಗಿತ್ತು. ಹಿಂದೊಮ್ಮೆ ಜನಪದ ಕಲೆಗಳು, ಕಾದಂಬರಿಗಳು ಮುಂತಾದವು ಜನರಲ್ಲಿ ಸದಭಿರುಚಿಯನ್ನು ಮೂಡಿಸುವಲ್ಲಿ ವಹಿಸಿದ ಪಾತ್ರವೇನು ಎನ್ನುತ್ತಾ ಅವರು ಬಯಲಾಟ ಮುಂತಾದವುಗಳು, ತರಾಸು, ಅನಕೃ ಮುಂತಾದವರ ಕಾದಂಬರಿಗಳು ಹೇಗೆ ಜನರ ಪ್ರಜ್ಞೆಯ ಭಾಗವಾಗಿದ್ದವು ಎಂಬುದನ್ನು ಹೇಳುತ್ತಾರೆ. ಅದೇ ಇಂದು ಅತ್ಯಂತ ಪ್ರಭಾವಿ ಜನಪ್ರಿಯ ಮಾಧ್ಯಮ ಎನಿಸಿದ ಚಾನೆಲ್‌ಗಳು ನಮ್ಮ ಸಮಾಜದ ಮೇಲೆ ಬೀರಿರುವ ಪ್ರಭಾವ ಎಂತಹುದು ಎಂದೂ ಚರ್ಚಿಸುತ್ತಾರೆ. ಇವೆರಡರ ನಡುವೆ ಎದ್ದು ಕಾಣುವ ಅಂತರವಿದೆ. ಅತ್ಯಂತ ಆಧುನಿಕವೆನ್ನುವಂತೆ ಕಾಣುವ ಹಲವು ಕಾರ್ಯಕ್ರಮಗಳು ಅತ್ಯಂತ ಪ್ರತಿಗಾಮಿಗಳಾಗಿವೆ ಎಂಬುದಕ್ಕೆ ಮುಂದೆ ನಿದರ್ಶನವನ್ನು ನೀಡಬಯಸುತ್ತೇನೆ. ಜೊತೆಗೆ ಇವು ಮುಗ್ಧರ ಬದುಕಿನ ಮೇಲೆ ತಮ್ಮ ಲಾಭಕ್ಕಾಗಿ ಎಂತಹ ಆಟ ಆಡುತ್ತವೆ ಎಂಬ ನೆಲೆಯಲ್ಲಿ ನಾವಿದನ್ನು ಗಮನಿಸಬೇಕಾಗುತ್ತದೆ. ಇಲ್ಲಿ ಮುಖ್ಯವಾಗಿ ಮೂರು ಸಂಗತಿಗಳನ್ನು ಚರ್ಚಿಸಬಯಸುತ್ತೇನೆ. ಮೊದಲನೆಯದಾಗಿ, ಬೆರೆತುಹೋಗಿರುವ ಖಾಸಗಿ ಮತ್ತು ಸಾರ್ವಜನಿಕ ಬದುಕಿನ ಗೆರೆಗಳು. ನಾಡಿನ ಯಾವುದೋ ಭಾಗದ, ಯಾವುದೋ ಮೂಲೆಯಲ್ಲಿ ನಡೆಯುವ ಗಂಡ-ಹೆಂಡಿರ ಅಥವಾ ಅಪ್ಪ-ಮಗನ ಜಗಳ ನಮಗೆ ಯಾಕೆ ಕುತೂಹಲ ಕೆರಳಿಸಬೇಕು? ಗಂಡು-ಹೆಣ್ಣಿನ ಆಪ್ತ ಸಂಬಂಧದಲ್ಲಿ ಅವರ ಏಕಾಂತದಲ್ಲಿ ವ್ಯಕ್ತವಾಗುವ ಭಾವಗಳನ್ನು ತೆರೆಯ ಮುಂದೆ ತರುವುದು ಯಾವ ಪರಿಯ ಮನೋರಂಜನೆಯಾದೀತು? ಯಾವುದು ಸುದ್ದಿ, ಯಾವುದು ಸುದ್ದಿ ಅಲ್ಲ, ಯಾವುದು ಮನೋರಂಜನೆ, ಯಾವುದು ಮನೋರಂಜನೆ ಅಲ್ಲ ಎಂಬ ಗಡಿಗೆರೆಗಳೇ ಇಂದು ಇಲ್ಲವಾಗಿವೆ. ಇನ್ನೊಬ್ಬರ ಖಾಸಗಿ ಬದುಕಿನಲ್ಲಿ ಇಣುಕುವ ಕುತೂಹಲ, ಇನ್ನೊಬ್ಬರ ಸೋಲು, ಮುಜುಗರ ನೋಡಿ ಸದ್ಯ ನಾನು ಆ ಸ್ಥಿತಿಯಲ್ಲಿಲ್ಲ ಎಂಬ ವಿಕೃತ ಸಮಾಧಾನ ಪಡುವ ಮನಸ್ಸು ಇವುಗಳೇ ರಿಯಾಲಿಟಿ ಶೋಗಳನ್ನು ಆಳುತ್ತಿರುವುದು. ಇವು ನಡೆಸುತ್ತಿರುವುದು ಭಾವನಾತ್ಮಕ ಅತ್ಯಾಚಾರ. ಸುವರ್ಣ ವಾಹಿನಿಯಲ್ಲಿ ಬರುತ್ತಿದ್ದ ’ಹಳ್ಳಿ ಹೈದ ಪ್ಯಾಟೆಗ್ ಬಂದ’ ಕಾರ್ಯಕ್ರಮದಲ್ಲಿ ಪೇಟೆಯ ಹುಡುಗಿಯರ ವರ್ತನೆಯಿಂದ ಆ ಹುಡುಗರು ಕೆಲವೊಮ್ಮೆ ಅನುಭವಿಸುತ್ತಿದ್ದ ಮುಜುಗರ, ಯಾತನೆ ಮನೋರಂಜನೆಯ ಹೆಸರಿನಲ್ಲಿ ಅವರ ಮೇಲೆ ಎಸಗುತ್ತಿರುವ ಅತ್ಯಾಚಾರವಲ್ಲದೆ ಇನ್ನೇನೂ ಅಲ್ಲ. ರಾಜೇಶ್ ವಿಚಾರವನ್ನೇ ತೆಗೆದುಕೊಂಡರೆ ಆ ಶೋನಲ್ಲಿ ಅವನ ಜೊತೆಗೆ ಇದ್ದ ಹುಡುಗಿ ಹಲವು ಸಂದರ್ಭದಲ್ಲಿ ನನ್ನನ್ನು ಹಾಗೆ ಹಿಡಿ, ಇಲ್ಲಿ ಹಿಡಿದುಕೋ ಹೀಗೆಲ್ಲ ಅಂದಾಗ ಇಂತಹ ಜಗತ್ತಿನ ಪರಿಚಯವೇ ಇಲ್ಲದವರಿಗೆ ಮಾನಸಿಕವಾಗಿ ಎಷ್ಟು ಯಾತನೆಯಾಗಿರಬೇಡ? ಆದರೆ ಟಿವಿ ಮುಂದೆ ಕುಳಿತಿರುವ ಜನ ಅವನ ವಿಚಿತ್ರ ಮುಜುಗರವನ್ನು ನೋಡಿ ಆನಂದಿಸಿದ್ದಾರೆ. ಎರಡನೆಯದಾಗಿ, ಈ ಶೋಗಳು ದ್ವಿಮಾನ ವೈರುಧ್ಯದಲ್ಲೇ ಎಲ್ಲವನ್ನೂ ನೋಡುತ್ತವೆ. ’ಹಳ್ಳಿ ಹೈದ ಪ್ಯಾಟೆಗ್ ಬಂದ’ ಕಾರ್ಯಕ್ರಮದಲ್ಲಿ ಬುಡಕಟ್ಟುಗಳಿಗೆ ಸೇರಿದ ಹುಡುಗರನ್ನು ಅವರು ’ಶಿಲಾಯುಗಕ್ಕೆ ಸೇರಿದ ಬರ್ಬರ’ ಜನರು ಎಂಬಂತೆ ಪ್ರೊಮೋದಲ್ಲಿ ಚಿತ್ರಿಸಲಾಗಿದೆ. ಅವರಿಗೆ ಏನೂ ತಿಳಿಯದು, ಅವರನ್ನು ಶಿಕ್ಷಿತರನ್ನಾಗಿಸುವ ಮಹತ್ತರ ಜವಾಬ್ದಾರಿ ಈ ಪೇಟೆ ಹುಡುಗಿಯರ ಹೆಗಲಿಗೇರಿದೆ. ’ಟ್ವಿಂಕಲ್ ಟ್ವಿಂಕಲ್ ಲಿಟ್ಟಲ್ ಸ್ಟಾರ್’ ಕಲಿಯುವುದೋ ಅಥವಾ ಸೊಂಟ ಕುಣಿಸಿ ನೃತ್ಯ ಮಾಡುವುದೋ ಬಹಳ ಶ್ರೇಷ್ಠ ವಿದ್ಯೆ ಎಂಬಂತೆ ಇಲ್ಲಿ ತೋರಿಸುತ್ತಾರೆ. ಬುಡಕಟ್ಟು ಜನರಿಗೆ ಕಾಡಿನ ಬಗ್ಗೆ, ಔಷಧೀಯ ಗಿಡಗಳ ಬಗ್ಗೆ, ಪ್ರಾಣಿಗಳ ಬಗ್ಗೆ, ಪರಿಸರದ ಬಗ್ಗೆ ಇರುವ ಅಪಾರ ತಿಳುವಳಿಕೆಯ ಮುಂದೆ ಈ ಪೇಟೆಯ ಮೊದ್ದುಗಳು ಏನೇನೂ ಅಲ್ಲ. ಹೀಗಿದ್ದರೂ ಪೇಟೆಯ ತಿಳುವಳಿಕೆಯೇ ಸರ್ವಸ್ವ ಎಂಬ ನೆಲೆಗೆ ಇದು ಒಯ್ಯುತ್ತದೆ. ಹಾಗೆಯೇ ಇನ್ನು ಪೇಟೆಯ ಮಂದಿ ಹಳ್ಳಿಗೆ ಬಂದೊಡನೆ ಭಾರ ಹೊರುವುದು, ಹಾರುವುದು, ಸೆಣಸುವುದು ಇವೇ ಹಳ್ಳಿಗಳ ಮೂಲಸತ್ವ ಎಂಬಂತೆ ತೋರಿಸಲಾಗುತ್ತದೆ. ಹಳ್ಳಿಗಳ ಸಾಮುದಾಯಿಕ ಬದುಕು, ಜ್ಞಾನದ ನೆಲೆಗಳು ಇವರಿಗೆ ಗೋಚರವಾಗುವುದೇ ಇಲ್ಲ. ಈ ಬಗೆಯ ಎರಡು ಅತಿಗಳಲ್ಲೇ ಇವರು ಕಾರ್ಯಕ್ರಮವನ್ನು ನಡೆಸುತ್ತಾ ರಂಜನೆಯನ್ನೇ ಗುರಿಯಾಗಿಸಿಕೊಂಡಿರುತ್ತಾರೆ ಹೊರತು ಸತ್ಯದ, ವಾಸ್ತವದ ನೆಲೆ ಇವರಿಗೆ ಬೇಕಾಗಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಇಂದಿನ ಬಹುತೇಕ ಚಾನೆಲ್‌ಗಳ ಕಾರ‍್ಯಕ್ರಮಗಳು ಜನರನ್ನು ವೈಚಾರಿಕವಾಗೇನೂ ಬೆಳೆಸುತ್ತಿಲ್ಲ. ಬೆಳ್ಳಂಬೆಳಗ್ಗೆ ಆರಂಭವಾಗುವ ಜ್ಯೋತಿಷ್ಯದ ಕಾರ್ಯಕ್ರಮದಿಂದ ಹಿಡಿದು ರಾತ್ರಿಯ ಕ್ರೈಮ್ ಶೋನವರೆಗೆ ಎಲ್ಲವೂ ಜನರನ್ನು ಇನ್ನಷ್ಟು ಭಯದಲ್ಲಿ, ಬಂಧನದಲ್ಲಿರಿಸುವ ಕಾರ್ಯಕ್ರಮಗಳೇ. ರಾಜೇಶ್‌ನಂತಹ ಹುಡುಗರು ನಿಜವಾದ ಅರ್ಥದಲ್ಲಿ ಆಧುನಿಕರಾಗುವುದರ ಬಗ್ಗೆ ಇವರು ತಲೆಕೆಡಿಸಿಕೊಳ್ಳುವುದಿಲ್ಲ. ಇಲ್ಲಿ ನಡೆಯುವುದು ಆಧುನಿಕತೆಯ ‘ಅಣಕ’. ಅವರು ಹಾಗೇ ಒರಟಾಗಿ ಇರಬೇಕು, ಇವರು ಅವರನ್ನು ಪ್ರದರ್ಶನದ ಸರಕಾಗಿಸಬೇಕು, ಅವರು ಇಂಗ್ಲಿಷ್ ಕಲಿಯುವಾಗ ತೊದಲುವುದನ್ನು ಇವರು ಆನಂದಿಸಬೇಕು. ನಿಜಕ್ಕೂ ಇಂತಹ ಕಾರ್ಯಕ್ರಮಗಳ ಉದ್ದೇಶವೇನು? ಅವು ತಮ್ಮೊಳಗೆ ಹುದುಗಿಸಿಕೊಂಡಿರುವ ಅಶಯವೇನು? ಈ ಕಾರ್ಯಕ್ರಮ ನಿಜಕ್ಕೂ ಹಳ್ಳಿ ಮತ್ತು ಪೇಟೆಗಳ ನಡುವಣ ಕಂದರವನ್ನು ಬೆಸೆಯುತ್ತವೆಯೇ? ಹಳ್ಳಿಗೆ ಬಂದ ಪೇಟೆಯ ಹುಡುಗಿಯರು ನಿಜಕ್ಕೂ ಹಳ್ಳಿಯ ಮೌಲ್ಯಗಳನ್ನು ಒಂದಿನಿತಾದರೂ ತಮ್ಮ ವ್ಯಕ್ತಿತ್ವದೊಂದಿಗೆ ಬೆಸೆದುಕೊಳ್ಳುತ್ತಾರಾ? ಹಳ್ಳಿಯ ಹೈದರಿಗೆ ಪೇಟೆ ಹೊಸ ಘನತೆಯ ಬದುಕನ್ನು ತೋರುತ್ತದಾ? ಹೋಗಲಿ, ಒಂದು ಆರೋಗ್ಯಕರ ಸ್ಪರ್ಧಾ ಮನೋಭಾವವಾದರೂ ಇಲ್ಲಿದೆಯಾ? ಈ ಯಾವ ಪ್ರಶ್ನೆಗೂ ಸಕಾರಾತ್ಮಕವಾದ ಉತ್ತರ ದೊರೆಯುವುದಿಲ್ಲ. ಆದರೆ ನಿಜಕ್ಕೂ ಆಘಾತಕಾರಿಯಾದ ಸಂಗತಿ ಎಂದರೆ ಲಕ್ಷಾಂತರ ಜನ ಇವುಗಳನ್ನು ನೋಡಿ ಆನಂದಿಸುತ್ತಿರುವುದು. ಯಾವುದೋ ಅನ್ಯಗ್ರಹದ ಜೀವಿಗಳನ್ನು ನೋಡುವಂತೆ ಇವರನ್ನು ನೋಡಿ, ಸಂಕಟದ ಚೀರಾಟಗಳನ್ನೆಲ್ಲ ನೋಡಿ ಗಹಗಹಿಸುವ ನಾಗರಿಕ ಸಮಾಜ ದಿಗಿಲು ಹುಟ್ಟಿಸುತ್ತದೆ. ಇವರಿಂದ ವ್ಯಕ್ತವಾದ ಪ್ರತಿರೋಧ ತೀರಾ ಸಣ್ಣ ಪ್ರಮಾಣದ್ದು. ರಾಜೇಶ್ ಮಾನಸಿಕ ಅಸ್ವಸ್ಥನಾಗಿರುವುದಕ್ಕೆ ಎಷ್ಟರಮಟ್ಟಿಗೆ ರಿಯಾಲಿಟಿ ಶೋ ನೇರ ಹೊಣೆ ಎಂಬುದನ್ನು ನಾನು ಗೆರೆಕೊರೆದಂತೆ ಹೇಳಲಾರೆ. ಆದರೆ ಅವರ ಲೋಕದಲ್ಲಿ ಅವರ ಪಾಡಿಗೆ ನಿರಾಳವಾಗಿದ್ದ ಜನರಿಗೂ ಹಣದ, ಹೆಸರಿನ ಹುಚ್ಚು ಹಿಡಿಯುವಂತೆ ಮಾಡಿದ ವ್ಯವಸ್ಥೆ ಯಾವುದು? ಅನಿವಾರ್ಯವಾಗಿ ಅವರು ಥಳಕುಬಳುಕಿನ ಲೋಕಕ್ಕೆ ದಿಢೀರನೆ ಧುಮುಕಬೇಕಾಗಿ ಬಂದಾಗ ಅವರಲ್ಲಾದ ಮಾನಸಿಕ ಒತ್ತಡಕ್ಕೆ ಯಾರು ಹೊಣೆ? ಮುಗ್ಧ ಜನರ ಮನಸ್ಸಿನಲ್ಲಿ ಇಲ್ಲದ ಭ್ರಮೆ ಹುಟ್ಟಿ ಅವರು ತಮ್ಮ ಬದುಕಿನ ನೆಲೆಯನ್ನೇ ಕಳೆದುಕೊಳ್ಳುವ ಸ್ಥಿತಿ ಬರಲು ಏನು ಕಾರಣ? ಅವನ ಮುಜುಗರ, ಅವನ ದುಃಖ, ಕೊನೆಗೆ ಅವನ ಅಸ್ವಸ್ಥತೆ ಎಲ್ಲವೂ ಮಾರಾಟದ ಸರಕಾಯಿತಲ್ಲವೇ? ಬುಡಕಟ್ಟು ಜನರ ಬದುಕಿಗೂ ಅದರದೇ ಆದ ಘನತೆ ಇದೆ. ನಾವಿಂದು ಕಲಿಯಲೇಬೇಕಾದ ಹಲವು ಜೀವಪರ ಮೌಲ್ಯಗಳು ಅವರ ಬದುಕಿನಲ್ಲಿ ಹುದುಗಿವೆ. ಯುರೋಪಿನ ಜನ ಅಮೆರಿಕ ಕಂಡು ಹಿಡಿದು ಅಲ್ಲಿ ತಮ್ಮ ಹಿಡಿತ ಸಾಧಿಸುವ ಸಂದರ್ಭದಲ್ಲಿ ಅಲ್ಲಿನ ಜನರನ್ನು ಬರ್ಬರವಾಗಿ ಕೊಲ್ಲುತ್ತಾರೆ. ಅವರ ವಾಸದ ನೆಲೆಗಳನ್ನು ಸುಟ್ಟು ಬೂದಿಯಾಗಿಸುತ್ತಾರೆ. ಅವರ ಸಂಸ್ಕೃತಿಯನ್ನೇ ನಾಶ ಮಾಡುತ್ತಾರೆ. ಆದರೆ ಅಲ್ಲಿನ ವಸ್ತುಸಂಗ್ರಹಾಲಯಗಳಲ್ಲಿ ಬಿಲ್ಲುಬಾಣ ಹಿಡಿದು ನಿಂತಿರುವ ಇಂಡಿಯನ್ನರ ಚಿತ್ರಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ; ಅವರ ಸಂಸ್ಕೃತಿಯ ಕುರುಹುಗಳನ್ನು ಜತನದಿಂದ ಕಾಯ್ದಿರಿಸಲಾಗಿದೆ. ಇದನ್ನು ರೂಪಕಾತ್ಮಕವಾಗಿ ಗ್ರಹಿಸುವುದಾದರೆ ಅವರ ನಿಜದ ನೆಲೆಯನ್ನೇ ‘ಆಧುನಿಕತೆ’ ಎಂಬ ಖಡ್ಗ ಝಳಪಿಸಿ ಅಲುಗಾಡಿಸುತ್ತಾ ಅವರ ಮೆಲುಸ್ತರದ ಬದುಕನ್ನು ಪ್ರದರ್ಶನಕ್ಕಿಟ್ಟು ಅದರಿಂದಲೂ ಹಣ ಗಳಿಸುವ ಇಂತಹ ಕೃತ್ಯಗಳಿಗೆ ಏನು ಹೇಳಬೇಕೋ ತಿಳಿಯುತ್ತಿಲ್ಲ. ಇಂತಹವುಗಳನ್ನೂ ಮನೋರಂಜನೆಗಾಗಿ ನಾವು ನೋಡುತ್ತೇವೆಂದರೆ ನಾವು ನಮ್ಮನ್ನೇ ಚಿಕಿತ್ಸೆಗೊಳಪಡಿಸಬೇಕು.]]>

‍ಲೇಖಕರು G

July 28, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎ ದಿಲ್ ಕಾ ಮಾಮ್ಲಾ ಹೈ…

ಎ ದಿಲ್ ಕಾ ಮಾಮ್ಲಾ ಹೈ…

ಶ್ರೀ ಮುರಳಿ ಕೃಷ್ಣ  ಈ ‘ಲವ್ ಜಿಹಾದ್’ ಎಂಬ ಪದಗಳ ಬ್ರಹ್ಮ ಯಾರು ಎಂಬುದು ನನಗೆ ತಿಳಿದಿಲ್ಲ. ಆದರೆ ಒಂದಂತೂ ನಿಜ, ಆ...

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಅಬ್ ಕಿ ಬಾರ್ ಡೆಮೊಕ್ರಟಿಕ್ ಸರ್ಕಾರ್

ಮ ಶ್ರೀ ಮುರಳಿ ಕೃಷ್ಣ ಈ ಕಿರು ಬರಹಕ್ಕೆ ‘ಅಬ್ ಕಿ ಬಾರ್ ಬೈಡನ್ ಕಿ ಸರ್ಕಾರ್’ ಎಂಬ ಶೀರ್ಷಿಕೆಯನ್ನು ಬಳಸಲು ಮುಂದಾಗಿದ್ದೆ. ಆದರೆ ಒಬ್ಬ...

5 ಪ್ರತಿಕ್ರಿಯೆಗಳು

 1. Samvartha 'Sahil'

  The case of Rajesh is an extremely disturbing one. I dont know if there can be a debate on the role of the channel in distrubing the peace of mind of Rajesh. I dont think there can be any debate.
  Moving out of the issue of Rajesh for a while i would like to remember the article by Uddipana Goswami on the recent Guwahati issue where she tried to draw a connection between state violence and the violent behaviour of the people. She says that state violence has “criminalized society” and “legitimized violence.” This connection made by Uddipana Gowami is to be taken very seriously, it appears to me. Imagine an entire generation growing up witnessing violence by the state and coming to believe that violence is legitimate! What would be the result? Not to say the state violence alone led to the Guwahati incident. There are other intersecting factors. Agreed. But this “legitimization of violence” has undoubtedly played a crucial role.
  I am trying to bring in the issue raised by Uddipana Goswami here because what these reality shows have done is, they have legitimized violence and worse have made violence “fun”. When thousands of people are watching these shows as ‘entertainment’ it is a proof not of insensitivity alone but also of legitimization of violence. There is a generation that is growing up watching these shows and coming to believe that some acts of violence are legitimate and are also fun. This will eventually lead to “criminalization of society.”
  Not just Rajesh but the entire society now needs counselling and treatment…

  ಪ್ರತಿಕ್ರಿಯೆ
 2. shama, nandibetta

  ಭಾರತಿ “ಇಂತಹವುಗಳನ್ನೂ ಮನೋರಂಜನೆಗಾಗಿ ನಾವು ನೋಡುತ್ತೇವೆಂದರೆ ನಾವು ನಮ್ಮನ್ನೇ ಚಿಕಿತ್ಸೆಗೊಳಪಡಿಸಬೇಕು” ಇದು ನಿಜ.
  ಆದರೆ ನಮಗೆ ಖಾಯಿಲೆಯೇ ಇಲ್ಲ ಅಂತಾರಲ್ಲ ????
  ದುಡ್ಡಿನ ಮರಗಳಾದ ಇಂಥದ್ದನ್ನು ತಡೆಯಲು ಮಾಧ್ಯಮಗಳು ಪ್ರಯತ್ನ ಮಾಡಿಯಾವು ಅಂದುಕೊಂಡರೆ ಅದು ನಮ್ಮ ಮೂರ್ಖತನವಾದೀತು. “ಆಂಟಿ ನೀವು ’ಹಳ್ಳಿ ಹೈದ ಪ್ಯಾಟೆಗ್ ಬಂದ’ ನೋಡಲ್ವಾ ? ತುಂಬಾ ಚನ್ನಾಗಿದೆ ಗೊತ್ತಾ ? ನೀವು ಮತ್ತೇನ್ ನೊಡ್ತೀರ ? ನಿಮ್ಗೆ ಅದನ್ನೆಲ್ಲ ನೋಡದೇ ಇದ್ರೆ ಬೋರಾಗಲ್ವಾ” ಅಂತ ನನ್ನನ್ನು ಕೇಳಿದ ಹುಡುಗಿಯ ವಯಸ್ಸು ಕೇವಲ ಆರು. ಕುಡಿತ, ಜೂಜುಗಳಂತೆ ಇದು ಸಾಮಾಜಿಕ ಪಿಡುಗಾಗಿದೆ. ಆದರೆ ಅವುಗಳಂತೆ ಇದು ಅಸಹ್ಯವಲ್ಲ ಸುಸಂಸ್ಕೃತ ಎಂಬಂತೆ ಬಿಂಬಿಸುವ ಮತ್ತು ನಂಬಿಸುವ ಪ್ರಯತ್ನಗಳು ನಿರಂತರ ನಡೆಯುತ್ತಿದ್ದು ಒಂದು ಮಟ್ಟದ ಯಶಸ್ಸು ಕುಡ ದೊರಕಿದೆ. ಬಹಳಷ್ಟು ಮನೆಗಳಲ್ಲಿ ಗೃಹಿಣಿಯರು, ಮಕ್ಕಳು ಒಂದಿನವು ತಪ್ಪಿಸದೆ ನೋಡುವ ಈ ಕಾರ್ಯಕ್ರಮಗಳನ್ನು ನಾವು ನೋಡುವುದಿಲ್ಲ ಎಮದರೆ ನಮಗೆ ಅಭಿರುಚಿಯಿಲ್ಲ ಎಂದು ನೇರಾನೇರ ಹೇಳಿಬಿಡುತ್ತಾರೆ. ಈ ಅನುಭವ ನನಗೇ ಆಗಿದೆ. ವಿಕೃತಿಯೂ ಒಂದು ಆನಂದಾನುಭೂತಿ ಎನ್ನುವ ಈ ಕಾಳಮಾನದಲ್ಲಿ ಉ್ತರವಿಲ್ಲದ ಪ್ರಶ್ನೆ “ಚಾನೆಲ್ ಎಂಬ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಮತ್ತು ಆ ತಾಕತ್ತು ಯಾರಿಗಿದೆ ?”

  ಪ್ರತಿಕ್ರಿಯೆ
 3. Nagesh. KM

  The indian society is been degenerating fast.it is polarized, selfcentered and insensitive. Only aim of majorty indians now is to make money and more money by any means.

  ಪ್ರತಿಕ್ರಿಯೆ
 4. jaya

  As long as the audience are passive to such kind of ‘shows’ in television people like rajesh will be suffering… again it manifests that we are in a materialist world where humanity is less concerned. Hence people should protest to such kind of inhuman shows.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: