ಉಂಡು ಮಲಗಿದ ನಂತರ…

ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ

 

ರಾತ್ರಿ ಹಗಲು ಎಂಬ ಯಾವ ಭೇದವಿಲ್ಲದೆ ಅವರಿಬ್ಬರ ಜಗಳ ತಾರಕಕ್ಕೇರುತ್ತಿತ್ತು. ಗಂಡನಿಗೆ ವೃದ್ಧಾಪ್ಯ ಸಮೀಪಿಸುತ್ತಿತ್ತು…. ಹೆಂಡತಿಗೂ ಹತ್ತಿರಹತ್ತಿರ 50 ಆಗುತ್ತಿತ್ತೇನೋ. ಸುಂದರವಾಗಿಯೇ ಇದ್ದಳು. ಅವರು ಯಾವ ಕಾರಣಕ್ಕಾಗಿ ಜಗಳ ಮಾಡುತ್ತಾರೆ ಎಂಬುದು ಸುತ್ತಮುತ್ತಲಿನ ಜನರಿಗೂ ಅವರ ಮನೆಯಲ್ಲಿದ್ದ ಬಾಡಿಗೆದಾರರಿಗೂ ದೊಡ್ಡ ಒಗಟಿನ ಪ್ರಶ್ನೆಯಾಗಿತ್ತು. ಒಮ್ಮೊಮ್ಮೆ ಆ ಜಗಳ ಎಷ್ಟರ ಮಟ್ಟಿಗೆ ಮೀತಿಮೀರುತ್ತಿತ್ತೆಂದರೆ ಮನೆಯೊಳಗಿದ್ದ ಕುರ್ಚಿಗಳನ್ನು ಎತ್ತಿ ಒಬ್ಬರಿಗೊಬ್ಬರು ಹೊಡೆದಾಡಿಕೊಳ್ಳುವುದು ಮಕ್ಕಳಿಬ್ಬರೂ ದೊಡ್ಡದಾಗಿ ಕಿರುಚುವುದು ನಂತರ ಮತ್ತೆ ಒಬ್ಬರಿಗೊಬ್ಬರನ್ನು ತುಳಿಯುವಷ್ಟರ ಮಟ್ಟಿಗೆ ಕದನ ವಿಕಾರವಾಗಿರುತ್ತಿತ್ತು.

ಹೊಸದಾಗಿ ಅವರ ಮನೆ ಸೇರಿದ್ದ ಆ ಮೂವರು ಹುಡುಗಿಯರಿಗೆ ಮಾತ್ರ ಇದು ಅತ್ಯಂತ ಭಯಾನಕ ಅನಿಸತೊಡಗಿತ್ತು ಆರಂಭದಲ್ಲಿ. ಜಗಳ ಯಾವಾಗ ಆರಂಭವಾಗುತ್ತದೆ ಎಂದು ಹೇಳಲಿಕ್ಕಾಗದು. ಯಾಕಾದರೂ ಇಲ್ಲಿ ಬಂದುಬಿಟ್ವಪ್ಪಾ ಎಂದು ಬಾಯಿ ಬಾಯಿಬಡಿದುಕೊಳ್ಳುವ ಪರಿಸ್ಥಿತಿ.

471634239_8aa6879098

ಯಜಮಾನಿಯನ್ನು ಕೈಗೆ ಸಿಕ್ಕ ವಸ್ತುವಿನಿಂದ ಹೊಡೆಯುವ ಯಜಮಾನ, ನೋವಿನಿಂದ ತಾಯಿ ಗೋಳಿಡುವಾಗ ಸಹಿಸಲು ಸಾಧ್ಯವಾಗದೆ ತಂದೆಯನ್ನು ಹಿಡಿದೆಳೆಯುವ ಮಕ್ಕಳು, ಸಿಟ್ಟಿನ ಭರದಲ್ಲಿ ಒಮ್ಮೆ ಬಾಗಿಲ ಮೇಲೆ ಇನ್ನೊಮ್ಮೆ ಗೋಡೆ ಮೇಲೆ ಬೀಳುವ ಆ ಕುಟುಂಬದ ಸದಸ್ಯರ ಆರ್ತನಾದ ಕೂಗು ಭಯ ಮೂಡಿಸುತ್ತದೆ. ಆರಂಭದಲ್ಲಿ ಈ ಮನೆ ಬಿಟ್ಟು ಹೋಗೋಣ ಎಂದುಕೊಂಡವರು ಮನೆಯೊಡತಿಯ ಪ್ರೀತಿ ಮಾತುಗಳಿಗೆ ಇನ್ನೇನೂ ಹೇಳಲಾಗದೆ ಇದ್ದಷ್ಟು ದಿನ ಹೊಂದಿಕೊಂಡರಾಯ್ತು ಅಂತ ನಿರ್ಧರಿಸುತ್ತಾರೆ.

ಅವರ ಮನೆಯಲ್ಲಿ ಪೇಯಿಂಗ್ ಗೇಸ್ಟ್ ಆದಷ್ಟು ದಿನ ಊಟ ತಿಂಡಿಗೇನೂ ಕೊರತೆಯಿರುವುದಿಲ್ಲ. ಕೊಟ್ಟ ದುಡ್ಡಿಗೆ ಯಾವುದೇ ಮೋಸವಿಲ್ಲ. ತಿಂಗಳಿಗೆ ಸಾವಿರದೈನೂರು ಕೊಟ್ಟರೂ ರುಚಿರುಚಿ ಊಟ ಸಿಗುತ್ತಿತ್ತು. ಭಾನುವಾರ ಬಂತೆಂದರೆ ಚಿಕನ್ನೋ,ಮೀನೋ ಹೀಗೆ ಏನಾದರೊಂದು ವಿಶೇಷ. ಸುಸ್ತಾಗಿ ಬಂದವರಿಗೆ ಮನೆಯಲ್ಲಿ ತಾಯಿನೋ ಅಕ್ಕನೋ ಬಂದು ಕಷ್ಟ ಸುಖಕೇಳಿದ ಅನುಭವ. ಮನೆಯ ಯಜಮಾನರಿಗೂ ಮತ್ತು ಈ ಹೆಣ್ಣುಮಕ್ಕಳಿಗೂ ಒಂದು ಬಾಗಿಲು ಎಂಬ ಅಂತರ ಬಿಟ್ಟರೆ ಅವರ ಮಾತು, ಜಗಳ, ಕೇಕೆ,ರಗಳೆ ಎಲ್ಲವೂ ಕಿವಿಗೆ ಸೊಂಪಾಗಿ ಕೇಳುತ್ತಿತ್ತು. ಊಟ ತಿಂಡಿ ಸರಬರಾಜಾಗುವ ಸಮಯದಲ್ಲಿ ಆ ಬಾಗಿಲು ತೆರೆದಿರುತ್ತಿತ್ತು. ಭಯ,ಅಸಹ್ಯ ಹುಟ್ಟಿಸುವಂಥ ಜಗಳ ಬಿಟ್ಟರೆ ಉತ್ತಮ ವಾತಾವರಣ ಸೃಷ್ಟಿಸಿದ ಆ ಮನೆಯಲ್ಲಿ ಆ ಮೂವರು ಹೆಣ್ಣುಮಕ್ಕಳಿಗೆ ತಾವು ಪೇಯಿಂಗ್ ಗೆಸ್ಟ್ ಎಂಬುದು ಮರೆತು ಹೋಗುವಷ್ಟು ಪ್ರೀತಿ ಸಲುಗೆ ಸಿಕ್ಕಿದ್ದು ಖುಷಿ ತರಿಸಿತ್ತು.

ಮನೆ ಯಜಮಾನನದ್ದು, ಚಿಕ್ಕ ಸಂಸಾರ. ಅನುಕೂಲಸ್ಥರೇ. ಒಬ್ಬ ಮಗ ಒಬ್ಬಳು ಮಗಳು.ಬೆಂಗಳೂರಿನಂಥಾ ಬೆಂಗಳೂರಿನಲ್ಲಿ ಅವರದ್ದು ಒಂದು ದೊಡ್ಡದೇ ಮನೆ. ಮನೆ ಯಜಮಾನ ನಿವೃತ್ತಿ ವೇತನ ಪಡೆಯುತ್ತಿದ್ದ. ಮೂರು ಮಹಡಿಯ ಮನೆಯಲ್ಲಿ ಇಬ್ಬರಿಗೆ ಬಾಡಿಗೆ, ಮೂವರು ಹೆಣ್ಣುಮಕ್ಕಳಿಗೆ ಚಿಕ್ಕ ರೂಮಿನಲ್ಲೇ ಪೇಯಿಂಗ್ ಗೆಸ್ಟ್ ಹೀಗೆ ಆದಾಯ ಗಳಿಕೆಗೆ ಒಂದು ದಾರಿ ಮಾಡಿಕೊಂಡಿದ್ದರು. ಇಷ್ಟೆಲ್ಲಾ ಇದ್ದು ತಾವು ತುತ್ತತುದಿಯ ಮಹಡಿಯಲ್ಲಿದ್ದುದು ಯಾಕೆ ಎಂದು ಆ ಮೂವರು ಹುಡುಗಿಯರಿಗೆ ಆಶ್ಚರ್ಯ.

ಒಂದು ಪುಟ್ಟ ಕಿಚನ್, ದೊಡ್ಡ ಹಾಲ್ , ಶೌಚಾಲಯ ಬಿಟ್ಟರೆ ಮತ್ತೇನಿರಲಿಲ್ಲ. ಹಾಲ್ ನಲ್ಲಿರುವ ಒಂದು ಮಂಚ ನೋಡಿ ಇವರೆಲ್ಲ ಎಲ್ಲಿ ಮಲಗುತ್ತಾರೆ ಎಂಬ ಸಂಶಯ ಪಿಳಿಪಿಳಿ ಕಣ್ಣುಬಿಡುವ ಹೆಣ್ಣುಮಕ್ಕಳಿಗೆ. ಅದಕ್ಕೆ ಹೊಂದಿಕೊಂಡೇ ಇರುವ ಈ ಮೂವರು ಹುಡುಗಿಯರ ರೂಮಿನಲ್ಲಿ ಹೆಚ್ಚು ಕಡಿಮೆ ಬೇಕಾದ ಎಲ್ಲ ಸೌಲಭ್ಯಗಳೂ ಇದ್ದವು. ಪುಟ್ಟದಾದ ಮೂರು ಮಂಚಗಳು,ಪೋರ್ಟೆಬಲ್ ಟಿ.ವಿ, ಚೊಕ್ಕದಾದ ಬಚ್ಚಲಮನೆ, ಹೀಗೆ ಇರೋಕೆ ಬೇಕಾದ ಎಲ್ಲ ವ್ಯವಸ್ಥೆ. ಹೆಚ್ಚು ಕಡಿಮೆ ಮನೆಯಲ್ಲಿ ಬಾಡಿಗೆ ಇದ್ದ ಎಲ್ಲರೂ ಬೆಳಿಗ್ಗೆ ಹೋದರೆಂದರೆ ಮತ್ತೆ ಬರುವುದು ಸಂಜೆ 7ಘಂಟೆಗೆನೇ.

ಈ ಮೂವರು ಹುಡುಗಿಯರು ಬರುತ್ತಲೇ ಕಾಫಿ ಬಟ್ಟಲಿನೊಂದಿಗೆ ಬಂದು ನಗು ಸೂಸುವ ಮನೆಯ ಒಡತಿ ಬಗ್ಗೆ ಇವರಿಗೆಲ್ಲ ಸ್ವಲ್ಪ ಹೆಚ್ಚಿಗೆನೇ ಗೌರವ. ಈ ಹೆಣ್ಣುಮಕ್ಕಳ ವಿದ್ಯಾಭ್ಯಾಸ, ಅವರ ಮನೆ ತಂದೆತಾಯಿ, ಕೆಲಸ ಹೀಗೆ ಎಲ್ಲವನ್ನೂ ವಿಚಾರಿಸುವ ಅವಳ ಕಾಳಜಿಯಲ್ಲಿ ಸ್ವಲ್ಪ ಮಟ್ಟಿಗೆ ತನ್ನ ಮನೆ ಜನರನ್ನು ಆ ಹುಡುಗಿಯರು ಮರೆತುಬಿಟ್ಟಿದ್ದಂತೂ ಹೌದು. ಬೆಳಿಗ್ಗೆ ಅಷ್ಟು ಬೇಗನೇ ಎದ್ದು, ನಮ್ಮನ್ನೆಲ್ಲ, ನಿಮ್ಮ ಸಂಸಾರ ನೋಡ್ಕೊತಿರಲ್ವಾ ನಿಮಗೆ ಸುಸ್ತಾಗಲ್ವ ಆಂಟಿ ಅವರ ಪ್ರಶ್ನೆಗೆ ಅವಳು ನಕ್ಕು ಬೆಂಗಳೂರಿನಲ್ಲಿ ಸುಮ್ಮನೆ ಕುತ್ಕೊಂಡು ತಿನ್ನೋಕಂತೂ ಸಾಧ್ಯ ಇಲ್ಲ ಅಲ್ವಾ. ನಾನು ಪೋಸ್ಟ್ ಗ್ರ್ಯಾಜುಯೆಟ್. ಮದುವೆಯಾಯ್ತು. ಸಂಸಾರ ನಡೆಸ್ಬೇಕಾಯ್ತು. ಹೊರಗಡೆ ಹೋಗಿ ಏನೂ ಮಾಡೋಕೆ ಆಗಲಿಲ್ಲ. ನನ್ನದು ಅಂಥ ಒಂದು ಅರ್ನಿಂಗ್ ಇರ್ಬೇಕಲ್ವಾ…. ಅಂಕಲ್ ರಿಟೈರ್ ಆದ್ರು. ನಮಗೆ ಅಂಥದ್ದೇನು ಕಡಿಮೆ ಇಲ್ಲ. ಆದ್ರೂ ನಂಗ್ಯಾಕೋ ಸುಮ್ಮನೆ ಕುತ್ಕೊಳ್ಳಕ್ಕಂತೂ ಮನಸ್ಸಾಗಲ್ಲ ನೋಡು ಎಂದು ಮತ್ತೆ ತನ್ನ ಪಾಡಿಗೆ ಕೆಲಸದಲ್ಲಿ ಮಗ್ನಳಾಗುವ ಅವಳನ್ನು ಕಂಡು ಈ ಹುಡುಗಿಯರಿಗೂ ಅಭಿಮಾನ.

ಎಲ್ಲಿಯಾದರೂ ಪುರುಸೊತ್ತು ಸಿಕ್ಕಿತೆಂದರೆ ಪಕ್ಕದ ಮನೆಯ ಹೆಂಗಸಿನೊಂದಿಗೆ ಹೊರಗೆ ಶಾಪಿಂಗ್ ಗೆ ಹೋಗುವ ಅವಳನ್ನು ಇವರು ಎವೆಯಿಕ್ಕದೆ ನೋಡುತ್ತಾರೆ. 50 ದಾಟಿದೆ. ಆದರೆ ಫ್ಫ್ಯಾನ್ಸಿ ಸೀರೆ ಅದಕ್ಕೆ ತಕ್ಕನಾದ ಮ್ಯಾಚಿಂಗ್ ರವಿಕೆ, ಬಳೆ, ಕುಂಕುಮ, ಲಿಪ್ ಸ್ಟಿಕ್ ಎಲ್ಲದರಲ್ಲೂ ಒಂದು ವಿಶೇಷತೆ. ಅವಳು ಹಾಗೆ ನಡೆದುಕೊಂಡು ಹೋದರೆ ಈ ಹುಡುಗಿಯರು ಅವಳನ್ನು ದಿಟ್ಟಿಸುತ್ತಾರೆ. ಮತ್ತೊಂದು ಮಹಡಿಯಿಂದ ಆಕೆಯ ಗಂಡ ಕೂಡ ಅವಳನ್ನು ಕಸಿವಿಸಿ ಯಿಂದ ದಿಟ್ಟಿಸುತ್ತಿರುವುದನ್ನು ಈ ಹುಡುಗಿಯರು ಗಮನಿಸುತ್ತಾರೆ. ನೋಡೇ ಅಂಕಲ್ ಆಂಟೀನ ಹೆಂಗೆ ನೋಡ್ತಾರೆ. ಆದ್ರೂ ಆಂಟಿ ಯಂಗ್ ಆಗಿದ್ದಾರೆ ಮತ್ತೆ ಲವ್ಲಿ. ಆದ್ರೆ ಈ ಅಂಕಲ್ ಮಾತ್ರ ಯಾವಾಗ್ಲೂ ಮುಖ ಸಿಂಡರಿಸಿಕೊಂಡೇ ಇರ್ತಾರಲ್ಲಾ. ಅವರಲ್ಲಿ ಒಬ್ಬಳ ಉವಾಚ.

ಅವರಿಗೆ ಆಂಟಿ ಬಗ್ಗೆ ಪೊಸೆಸಿವ್ ನೆಸ್ ಇರ್ಬೇಕು.. ಈ ವಯಸ್ನಲ್ಲಿ ಅದೆಂಥಾ ಪೊಸೆಸಿವ್ ನೆಸ್ ಬಿಡೆ. ಮತ್ತೊಬ್ಬಳು ತನ್ನ ತರ್ಕ ಮುಂದಿಡುತ್ತಾಳೆ. ತಾತಂಗೆ ಆಂಟಿ ಬಗ್ಗೆ ಹೊಟ್ಟೆಕಿಚ್ಚು ಬಿಡು ಎಂದು ತಮ್ಮತಮ್ಮಲ್ಲೇ ಹೇಳಿಕೊಂಡು ನಗುತ್ತಾರೆ. ಅವಳು ಹೊರಗೆ ಹೋಗಿ ಬಂದಳೆಂದರೆ ಆ ದಿನದ ಮಟ್ಟಿಗೆ ಜಗಳ ಇನ್ನೂ ಬೇಗನೆ ಶುರುವಾಗಿ ದೀರ್ಘಕಾಲದವರೆಗೆ ನಡೆಯುವುದನ್ನು ಅವರು ಗಮನಿಸಿದ್ದಾರೆ. ಇಂಥ ದಿನ ಎಂದಿಲ್ಲ. ದಿನವೂ ಯಾವ ಸಮಯದಲ್ಲಾದರೂ ಒಂದು ಸಲ ಜಗಳ ನಡೆಯಲೇ ಬೇಕು. ಜಗಳ ಆಡಿದ ನಂತರ ಎಲ್ಲರೊಂದಿಗೆ ಚೆನ್ನಾಗಿಯೇ ನಕ್ಕು ಮಾತನಾಡುವ ಆಂಟಿ, ಸಿಟ್ಟಿನಿಂದ ಹೊರಗೆದ್ದು ನಡೆಯುವ ಯಜಮಾನನನ್ನು ಕಂಡು ಬಾಡಿಗೆದಾರರಲ್ಲಿ ಕೆಲವರು ನಿತ್ಯದ ಗೋಳು ಎಂದು ಮುಖ ಸಿಂಡರಿಸಿದರೆ ಈ ಹುಡುಗಿಯರು ಮಾತ್ರ ತಮ್ಮ ಮನೆಯಲ್ಲಿಯೇ ಜಗಳವಾದಂತೆ ಅದನ್ನು ಹೇಗಾದರೂ ಸರಿಪಡಿಸಬೇಕು ಎಂಬ ಮನಸ್ಥಿತಿಗೆ ತಲುಪುತ್ತಾರೆ. ಆದರೆ ಅವರಿಗೆ ಕೇಳುವ ಧೈರ್ಯವಿಲ್ಲ. ಒಮ್ಮೊಮ್ಮೆ ಯಜಮಾನತಿಯ ಮುಖದಲ್ಲೂ ಹತಾಶೆಯ ಸ್ಥಿತಿಯನ್ನು ಅವರು ಗಮನಿಸುತ್ತಾರೆ.

ಜಗಳದ ನಂತರ ಅವಳ ಮೈ ಮುಖದ ಮೇಲಾಗೋ ಗಾಯಗಳನ್ನು ಇವರು ನೋಡಿಯೂ ನೋಡದವರಂತೆ ನಕ್ಕು ಅವಳೊಂದಿಗೆ ತಮಾಷೆಯ ಮಾತುಗಳನ್ನಾಡುತ್ತಾರೆ.. ಬೆಳೆದುನಿಂತ ಇಬ್ಬರೂ ಮಕ್ಕಳು. ಅಪ್ಪ ಅಮ್ಮನ ಜಗಳ ತಪ್ಪಿಸಲು ಹೋಗಿ ತಾವು ಗಾಯ ಮಾಡಿಕೊಂಡು ಕೊನೆಗೆ ಬೇರೆಯವರ ಮುಂದೆ ಬರಲು ಸಾಧ್ಯವಾಗದೆ ಅಡುಗೆ ಮನೆಯಲ್ಲಿರುವ ಚಿಕ್ಕ ಮಂಚದ ಮೇಲೆ ಅಭ್ಯಾಸದಲ್ಲಿ ನಿರತರಾಗುವುದು ಬಾಗಿಲು ತೆರೆದಿರೋ ಸಂದರ್ಭದಲ್ಲಿ ಇವರ ಕಣ್ಣಿಗೆ ಬೀಳುತ್ತಾರೆ. ಎಲ್ಲ ಇದ್ದು ಹತಾಶ ಪರಿಸ್ಥಿತಿಯಲ್ಲಿ ಬದುಕುವ ಅವರಿಬ್ಬರನ್ನು ಕಂಡು ಈ ಹುಡುಗಿಯರು ಮರುಗುತ್ತಾರೆ. ಮಕ್ಕಳಿಬ್ಬರೂ ಮೆರಿಟ್ ವಿದ್ಯಾರ್ಥಿಗಳು. ಹಿರಿಯವಳು ಮೆಡಿಕಲ್ ಸೀಟು ಪಡೆದರೆ ಮಗ ಎಸ್ಸೆಸ್ಸೆಲ್ಸಿಯಲ್ಲಿ ಟಾಪರ್ ಎನಿಸಿದ್ದ. ಇಷ್ಟೊಂದು ಅಶಾಂತಿ ಇರುವ ಮನೆಯಲ್ಲಿ ಈ ಮಕ್ಕಳು ಅದ್ಹ್ಯಾಗೆ ಇಷ್ಟು ಓದುತ್ತಾರೆ ಎಂಬುದು ಮೂವರಿಗೂ ಆಶ್ಚರ್ಯ..ಸಂಜೆ ಕೆಲಸದಿಂದ ಬರುವಾಗ ಅವರಿಗಾಗಿ ಕುರುಕಲು ತಿಂಡಿನೋ, ಚಾಕ್ಲೆಟ್ಟೋ, ಹೇರ್ ಬ್ಯಾಂಡೋ ಹೀಗೆ ಏನಾದರೊಂದು ತಂದಿರುತ್ತಾರೆ. ಅದನ್ನು ಕಂಡು ಅವರ ಮುಖ ಅರಳುತ್ತದೆ.

ಇವರು ಮನೆಯಲ್ಲಿರುವಾಗ ಹಿರಿಯ ಮಗಳು ಬಂದು ಒಮ್ಮೊಮ್ಮೆ ಹರಟುತ್ತಾಳೆ. ತನ್ನ ಕಾಲೇಜು, ಓದಿನ ಬಗ್ಗೆ ಹೇಳುತ್ತಾಳೆ. ಮಗನ ಮಾತು ಕಡಿಮೆ. ಸ್ವಲ್ಪ ಮಟ್ಟಿಗೆ ಅಂತರ್ಮುಖಿ. ಹೊರಗಡೆ ಗೆಳೆಯರ ಜೊತೆ ಆಟ ಆಡಲಾಗಲೀ ಅಥವಾ ಬೇರೆಯವರೊಂದಿಗೆ ಬೆರೆಯುವುದು ಅಷ್ಟಾಗಿ ಕಂಡು ಬರುವುದಿಲ್ಲ. ಭಾನುವಾರ ದಿನ ಇವರೆಲ್ಲ ಏಳುವುದನ್ನೇ ಯಜಮಾನಿ ಕಾಯುತ್ತಿರುತ್ತಾಳೆ. ಸದ್ದಿಲ್ಲದೇ ಬಂದು ನೋಡುತ್ತಾಳೆ. ನಿದ್ದೆಗಣ್ಣಿನಲ್ಲಿರುವವರಿಗೆ ಇವತ್ತು ಭಾನುವಾರ ಆರಾಮಾಗಿ ಮಲಕ್ಕೊಳ್ಳಿ ಎನ್ನುತ್ತಾಳೆ. ಬಿಸಿಬಿಸಿ ಬೆಡ್ ಕಾಫಿನೂ ಆಗುತ್ತದೆ. ಇವರು ಮತ್ತೆ ನಿದ್ದೆ ಹೋಗುತ್ತಾರೆ. 11 ಘಂಟೆ ಸುಮಾರಿಗೆ ಬಿಸಿ ಬಿಸಿ ನಾಷ್ಟಾ. ನಂತರ ತಲೆಗೆ ಎಣ್ಣೆ ಸವರಿಕೊಂಡು ಇವರು ಕುಳಿತುಕೊಳ್ಳುತ್ತಾರೆ. ಟಿವಿ.ಚಾನೆಲ್ ಚೆಂಜ್ ಆಗ್ತಾ ಇರುತ್ತದೆ. ಮಧ್ಯಾಹ್ನದ ಊಟಕ್ಕೆ ರುಚಿ ರುಚಿ ಚಿಕನ್ ಅನ್ನ ಸಾಂಬಾರ್, ಸೈಡ್ ಗೆ ಇನ್ನೇನಾದರೂ ರುಚಿರುಚಿ ತಿಂಡಿ ಹೀಗೆ ಅವರು ನೆಮ್ಮದಿಯಿಂದ ಊಟ ಮಾಡುತ್ತಾರೆ. ಅವರು ಊಟ ಮುಗಿಸುವವರೆಗೂ ಕಾಯುವ ಅವಳು ನಂತರ ಎಲ್ಲಿಗೂ ಹೋಗದಂತೆ ತಾಕೀತು ಮಾಡುತ್ತಾಳೆ. ಸುಮ್ಮನೆ ರೆಸ್ಟ್ ತಗೊಳ್ಳಿ ಎನ್ನುತ್ತಾಳೆ. ಸಂಜೆಗೆ ಮತ್ತೆ ಬಿಸಿಬಿಸಿ ಈರುಳ್ಳಿ ಬಜ್ಜಿಯೋ, ಅವಲಕ್ಕಿನೋ,ಬೋಂಡಾ ಸೂಪೋ ರೆಡಿ…ಸಾಯಂಕಾಲ ಸುಮ್ಮನೆ ಒಂದು ರೌಂಡ್ ಹೊರಗಡೆ ಓಡಾಡಿ ಬನ್ನಿ ಎಂದು ಅವಳೇ ಸಲಹೇ ನೀಡುತ್ತಾಳೆ. ರಾತ್ರಿ ಮತ್ತೆ ರುಚಿ ರುಚಿ ಬೋಜನ.ಯಾರಿಗುಂಟು ಯಾರಿಗಿಲ್ಲ. ಆದರೂ ಇವರ್ಯಾರು ಯಾಕೆ ಆರಾಗಿಲ್ಲ. ಇದು ಮೂವರನ್ನು ತುಂಬಾ ಕಾಡುತ್ತದೆ.

ಅವರೇ ತಿಳಿದುಕೊಂಡ ಪ್ರಕಾರ ಮನೆಯ ಯಜಮಾನನಿಗೆ ಸಾಕಷ್ಟು ಆಸ್ತಿ ಇದೆ. ಈ ಮನೆಯಿಂದಲೂ ಸಾಕಷ್ಟು ಬಾಡಿಗೆ ಬರುತ್ತೆ. ಹೀಗಿದ್ದರೂ ಅವರೆಲ್ಲ ಒಂದೇ ಒಂದು ಹಾಲ್ ನಲ್ಲಿ ಇರುವಂಥ ಪ್ರಮೇಯ ಏನು. ಬೆಳೆದ ಮಗಳಿದ್ದಾಳೆ. ಓದಿಕೊಳ್ಳೋಕೆ ಮಗನಿಗೂ ಒಂದು ಚಿಕ್ಕ ಕೋಣೆ ಬೇಡ್ವೆ.ಸರಿ ಹಾಲ್ ನಲ್ಲಿರೋ ಮಂಚದಲ್ಲಿ ಯಜಮಾನ ಮಲಗುತ್ತಾನೆ. ಇವರೆಲ್ಲ ಎಲ್ಲಿ ಮಲಗುತ್ತಾರೆ. ಅಷ್ಟಕ್ಕೂ ಜಗಳ ಯಾಕೆ ನಡೆಯುತ್ತದೆ…ಮೂವರು ತಲೆಕೆಡಿಸಿಕೊಳ್ಳೋದು ಜಾಸ್ತಿ ಆಗುತ್ತದೆ. ಆಂಟಿ ಯಾಕೆ ಅಂಕಲ್ ಯಾವಾಗ್ಲೂ ಸಿಟ್ಟಿನಿಂದಲೇ ಇರ್ತಾರೆ. ತಮಾಷೆ ತಮಾಷೆಯಾಗಿಯೇ ಅಂತೂ ಧೈರ್ಯ ಮಾಡಿ ಒಬ್ಬಳು ಪ್ರಶ್ನಿಸುತ್ತಾಳೆ. ಅಯ್ಯೋ ಗಂಡಸರಿಗೇನೂ..ಸದಾಶಿವನಿಗೆ ಒಂದೇ ಧ್ಯಾನ. ಹೆಣ್ಮಕ್ಕಳ ಗೋಳು ಯಾರಿಗೆ ಅರ್ಥ ಆಗುತ್ತೆ..ಮಾರ್ಮಿಕವಾಗಿ ನುಡಿದು ಅವಳು ಒಳಹೋಗುತ್ತಾಳೆ..

ಇನ್ನೂ ಸುಂದರಿಯಾಗಿರೋ ಆಂಟಿ, ಬದುಕಿನ ಬಗ್ಗೆ ಇನ್ನೂ ಜೀವಂತ ವಾಗಿರೋ ಅವಳ ಆಸಕ್ತಿ, ಅವಳು ಹೊರಗಡೆ ನಡೆದರೆ ಮೇಲಿನಿಂದ ಗುರಾಯಿಸೋ ಅವಳ ಗಂಡ ಇವನ್ನೆಲ್ಲ ನೋಡಿದಾಗ ಅವರಿಗೆ ಸಂಶಯ ಉಂಟಾಗುತ್ತದೆ. ಎಲ್ಲೋ ಒಂದು ಕಡೆ ಹೀಗೆ ಇರಬಹುದಾ ಎಂದು ಅವರು ಸಂಶಯ ಪಡುತ್ತಾರೆ. ಅವರು ಜಗಳ ವಾಡುವ ರೀತಿ ಅದರಲ್ಲೂ ಮನೆಯ ಯಜಮಾನನಲ್ಲಿ ಕಂಡು ಬರುವ ಹತಾಶೆ, ಅವಳ ಮೇಲೆ ನಡೆಸುವ ಹಲ್ಲೆ ನೋಡಿದ ಯಾರಿಗಾದರೂ ಹೀಗೆ ಇರಬಹುದೇನೋ ಅನ್ನಿಸುತ್ತೆ. ಬದುಕಿನ ಅನಿವಾರ್ಯತೆಗಳು ಸೃಷ್ಟಿಸುವ ಸಂದರ್ಭಗಳು, ಮನುಷ್ಯ ಜೀವನ ಎಲ್ಲವೂ ಅಸಹ್ಯ ಎಂದು ಮೂವರಿಗೂ ಅನ್ನಿಸುತ್ತದೆ.

ಬರುಬರುತ್ತ ಎಲ್ಲವೂ ಸ್ಪಷ್ಟವಾಗತೊಡಗುತ್ತದೆ. ವಯಸ್ಸು 65 ದಾಟಿದರೂ ಮನೆಯ ಯಜಮಾನನಲ್ಲಿ ಕಡಿಮೆ ಆಗದ ಲೈಂಗಿಕ ಆಸಕ್ತಿ, ಅವಳಲ್ಲಿ ಸ್ತ್ರೀಸಹಜವಾದ ದೈಹಿಕ ಬದಲಾವಣೆಗಳು, ಬದುಕಿನ ಸಹಜ ವಾಂಛೆಗಳ ಬಗ್ಗೆ ಅವಳಲ್ಲಿ ಹೆಚ್ಚುವ ನಿರಾಸಕ್ತಿ ,ಆ ಇಡೀ ಮನೆಯನ್ನೇ ಸುಡತೊಡಗಿದ್ದು ಸ್ಪಷ್ಟವಾಗಿ ಗೋಚರಿಸತೊಡಗಿತ್ತು. ತನಗೆ ಸಿಗುವ ಒಂದುವರೆಸಾವಿರ ರೂಪಾಯಿಗೆ ಇಡೀ ದಿನ ತನ್ನ ದೇಹ ಸವೆಸುವ ಮನೆಯ ಯಜಮಾನಿಯನ್ನು ಕಂಡು ಅವರಿಗೂ ಕನಿಕರ ಎನಿಸುತ್ತದೆ. ಅವಳಲ್ಲಿ ಇನ್ನೂ ಮನೆಮಾಡಿರುವ ಸೌಂದರ್ಯ, ಲೈಂಗಿಕಾಸಕ್ತಿ ಬಿಟ್ಟು ದಿನನಿತ್ಯದ ಬದುಕಿನ ಬಗ್ಗೆ ಅವಳಿಗಿದ್ದ ಪ್ರೀತಿ ಭಕ್ತಿ ಮತ್ತಷ್ಟು ಮನೆಯ ಯಜಮಾನನನ್ನು ಕೆರಳಿಸುವುದು ಅವರ ಗಮನಕ್ಕೆ ಬರುತ್ತದೆ. ಚೆಂದದ ಸೀರೆಯುಟ್ಟು ಅವಳು ಹೊರನಡೆದರೆ ಕೆಣಕಿದ ನಾಗರನಂತೆ ಭುಸುಗುಟ್ಟುವ ಯಜಮಾನನನ್ನು ಕಂಡು ಇವರು ಹೆದರುತ್ತಾರೆ.

ದಿನನಿತ್ಯ ಕದನಕ್ಕೆ ಅವಕಾಶ ಕೊಡುವ ಗಂಡ ಹೆಂಡಿರ ಮಧ್ಯದ ಬೇಕುಬೇಡಗಳು ಚೆಂದದ ಮನೆಯನ್ನು ನರಕಸದೃಶ ಮಾಡಿರುವುದು ಬೆಳೆಯುವ ಮಕ್ಕಳ ಮನಸ್ಸಲ್ಲೂ ಕಹಿ ತುಂಬುವಂತೆ ಮಾಡಿದ್ದು ಎಷ್ಟೋ ದಿನಗಳ ಕಾಲ ಆ ಮೂವರನ್ನೂ ಕಾಡುತ್ತದೆ. ದೂರದೂರಿನಿಂದ ಬೆಂಗಳೂರಿಗೆ ಬಂದು ಕಮರ್ಷಿಯಲ್ ತಲೆಗಳೇ ವ್ಯವಹರಿಸುವ ಪ್ರಪಂಚದಲ್ಲಿ ಮಾತೃಹೃದಯಿಯೊಬ್ಬಳು ನೀಡುವ ಪ್ರೀತಿ ಎಲ್ಲ ಮರೆಯುವಂತೆ ಮಾಡುವುದು ತಮ್ಮ ಅದೃಷ್ಟವೇ ಸರಿ ಎಂದು ಅವರು ಅಂದುಕೊಳ್ಳುತ್ತಾರೆ. ಆ ಮನೆ ಬಿಟ್ಟು ಹೋದ ನಂತರವೂ ಮೂವರಿಗೆ ಮನೆಯೊಡತಿಯ ಪ್ರೀತಿಯನ್ನು ಮರೆಯಲಾಗುವುದಿಲ್ಲ. ಅದರೊಂದಿಗೆ ದಿನನಿತ್ಯ ನಡೆಯುವ ಆ ಭಯಾನಕ ಜಗಳ, ಆ ಕೂಗು, ಮೂಲೆಯಲ್ಲಿ ಹೆದರಿ ಕುಳಿತುಕೊಳ್ಳುವ ಆ ಮಕ್ಕಳು ಮತ್ತೆ ಮತ್ತೆ ನೆನಪಾಗಿ ಕಣ್ಣುಗಳು ಹನಿಗೂಡುತ್ತವೆ.

‍ಲೇಖಕರು avadhi

November 18, 2008

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

4 ಪ್ರತಿಕ್ರಿಯೆಗಳು

 1. pradyumna

  ನವೋಮಿ ಅವರಿಗೆ,

  ನಿಮ್ಮ ಬರಹ ಚೆನ್ನಾಗಿದೆ
  ಇಷ್ಟು ದಿನ ಬರೀ ನವಿರು ನವಿರಾದ ಬರವಣಿಗೆಯನ್ನು ಮಾತ್ರ ಓದುತ್ತಿದ್ದ ನಮಗೆ ನೀವು ತೆರೆದಿಡುತ್ತಿರುವ ಪ್ರಪಂಚ ಸೆಳೆಯುತ್ತಿದೆ. ಒಂದು ನೋವನ್ನು ಹೇಗೆಲ್ಲಾ ಎಲ್ಲರ ನೋವಾಗಿ ಹರಡುತ್ತೀರಿ ಎಂಬುದೇ ಆಶ್ಚರ್ಯ.
  ನೀವು ಒಂದು ದೊಡ್ಡ ಸಮಸ್ಯೆಯನ್ನು ಹೆಣ್ಣಿನ ದೃಷ್ಟಿಯಲ್ಲಿ ಬಣ್ಣಿಸುತ್ತಾ ಹೋಗಿದ್ದೀರಿ. ಗಂಡಸರಿಗೆ ಇಂತಹ ಸಮಸ್ಯೆಗಳನ್ನು ಮಾತನಾಡಿಕೊಳ್ಳುವ ಅವಕಾಶಗಳು ಸಾಕಷ್ಟು ಸಿಗುತ್ತದೆ. ಆದರೆ ಹೆಣ್ಣಿಗೆ ಇಂತಹ ಮಾರ್ಗಗಳಿಲ್ಲ. ನಿಮ್ಮ ಬರವಣಿಗೆ ಹೆಣ್ಣಿನ ಮನೋಲೋಕವನ್ನು ಇನ್ನಷ್ಟು ಬೆಳಕಿಗೆ ತರಲಿ
  -ಪ್ರದ್ಯುಮ್ನ

  ಪ್ರತಿಕ್ರಿಯೆ
 2. padmapani

  navomi aunty,
  keep writing on various topics similarly with same simple abut effctive style

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: