ಉಗಮ ಶ್ರೀನಿವಾಸ್ ಮೆಚ್ಚಿದ ನಾಟಕ – “ಮಣೆಗಾರ”

ದಲಿತರ ಸಂಕಟ ಅನಾವರಣಗೊಳಿಸಿದ `ಮಣೆಗಾರ’

– ಉಗಮ ಶ್ರೀನಿವಾಸ್

ಉಗಮಶ್ರೀ

ದಲಿತ ಆತ್ಮಕಥೆಗಳು ಅಂದ ಕೂಡಲೇ ಮರಾಠಿ ಭಾಷೆಯತ್ತ ಬೊಟ್ಟು ತೋರುತ್ತಿದ್ದ ಹೊತ್ತಲ್ಲಿ ಕನ್ನಡದಲ್ಲೂ ಸತ್ವಶಾಲಿ ದಲಿತ ಆತ್ಮಕಥೆಗಳು ಬಂದಿರುವುದು ಇತಿಹಾಸ. ಈಗ ತುಂಬಾಡಿ ರಾಮಯ್ಯ ನವರ `ಮಣೆಗಾರ’ ನಾಟಕವನ್ನು ರಂಗಕ್ಕೆ ಅಳವಡಿಸಿದ್ದು ಮಾದಿಗ ಜನಾಂಗದ ಹಸಿವು, ಬಡತನ, ಅಪಮಾನಗಳನ್ನು ರಂಗಕೖತಿಯಲ್ಲಿ ಅನಾವರಣಗೊಳಿಸಲಾಗಿದೆ.

ಇಡೀ ಆತ್ಮಕಥೆ ಆ ಮೂಲಕ ರಂಗ ಪ್ರಯೋಗ ತಣ್ಣಗೆ ಸಾಗುತ್ತದೆ. ರಂಗಕೖತಿಯಲ್ಲಿ ಬಡತನಕ್ಕಿಂತ ಹಸಿವು ಹೆಚ್ಚು ಧ್ವನಿಪೂಣ೯ವಾಗಿ ಕಾಣಿಸಲಾಗಿದೆ. ಇದು ಕೖತಿಯ ಶಕ್ತಿಯು ಹೌದು, ರಂಗ ನಿದೇ೯ಶಕರ ಶಕ್ತಿ ಕೂಡ.

ಇಡೀ ಪ್ರಯೋಗದಲ್ಲಿ ಸಾಗರದ ಅಲೆಯಂತೆ ಮನುಷ್ಯ ಪ್ರೀತಿ ಎಂಬುವುದು ಹರಿದಾಡಿದೆ. ಅನ್ನಕ್ಕಾಗಿ ಬೇಡುವುದು, ಕೀಳು ಜಾತಿ ಎಂದು ಹೀಯಾಳಿಸುವುದು, ದಲಿತ ಲೋಕದಲ್ಲಿನ ಬಡತನ, ದಲಿತೇತರ ಭಂಡತನಗಳನ್ನು ಎಲ್ಲೂ ದ್ವೇಷ, ಪ್ರತೀಕಾರದ ರೀತಿಯಲ್ಲಿ ಚಿತ್ರಿಸಿಲ್ಲ. ಎಲ್ಲವನ್ನು ನದಿ ನೀರಿನಂತೆ ಹರಿ ಬಿಡಲಾಗಿದೆ. ಹಾಗಾಗಿ ಈ ಕೖತಿ ಏಕಕಾಲದಲ್ಲಿ ದಲಿತರ ಸಂಕಟದ ಅನಾವರಣ ಮಾಡುವುದರ ಜತೆಗೆ ನಮ್ಮೆಲ್ಲರ ಪಾಪ ಪ್ರಜ್ಞೆಯನ್ನು ಗೋಚರಿಸುವಂತೆ ಮಾಡುತ್ತದೆ.

ಕೆಲಸದ ಸಲುವಾಗಿ ಕೖತಿಕಾರ ತುಂಬಾಡಿ ರಾಮಯ್ಯ ಹಳ್ಳಿ ಹಳ್ಳಿಗೆ ಭೇಟಿ ಕೊಟ್ಟಾಗ ಎದುರಿಸುವ ಅಸ್ಪೖಶ್ಯತೆ, ಅದರಿಂದ ಆಗುವ ಮುಜುಗರವನ್ನು ರಂಗಕೖತಿಯಲ್ಲಿ ಪರಿಣಾಮಕಾರಿಯಾಗಿ ಕಾಣಿಸಲಾಗಿದೆ. ಆತ್ಮಕಥೆಗಳು ಅಂದ ಕೂಡಲೇ ಒಂದಷ್ಟು ರಂಜನೆ ಇದ್ದೇ ಇರುತ್ತದೆ ಎಂಬುದು ರೂಢಿ. ಆದರೆ ಮಣೆಗಾರದಲ್ಲಿ ಈ ಅಂಶ ಇದ್ದರೂ ಅದು ಹಾಸ್ಯದ ಸರಕಾಗದೆ ನಮ್ಮ ಅಂತಃಕರಣವನ್ನು ತಟ್ಟಿ ಬಿಡುತ್ತದೆ.

ಸಕಾ೯ರದ ರಕ್ಷಣೆ ಇಲ್ಲದಿರುವುದರಿಂದ ದಲಿತರ ಹತ್ಯೆಗಳು, ಅಟ್ರಾಸಿಟಿ ಪ್ರಕರಣಗಳು ನಿರಂತರವಾಗಿ ನಡೆಯುತ್ತಿರುವ ಹೊತ್ತಲ್ಲಿ `ಮಣೆಗಾರ’ ರಂಗಕೖತಿ ಒಂದು ರೀತಿಯಲ್ಲಿ ಪ್ರತಿಭಟನೆಯ ಅಸ್ತ್ರವಾಗುತ್ತದೆ. ನಗುವಿನ ಹಿಂದಿನ ಅಸಹಾಯಕತೆ, ಬೇಡಿ ತಿನ್ನುವ ಹಿಂದಿನ ಹಸಿವು, ಇವೆಲ್ಲಾ ದಾಟಿ ಬಂದರೆ ದುತ್ತೆಂದು ನುಗ್ಗುವ ಅಸ್ಪೖಶ್ಯತೆ ನೋಡುಗರ ಅಂತಃಕರಣವನ್ನು ತಟ್ಟಿ ಬಿಡುತ್ತದೆ.

ಇನ್ನು ನಟರಂತೂ ಅಲ್ಲಿ ಅಭಿನಯಿಸುತ್ತಿದ್ದಾರೆ ಎನ್ನುವುದಕ್ಕಿಂತ ಅಲ್ಲಿ ಬದುಕಿದ್ದಾರೆ ಅನ್ನುವಷ್ಟು ಸಹಜವಾಗಿ ಅಲ್ಲಿನ ಘಟನೆಗಳಿಗೆ ಸಾಕ್ಷಿಯಾಗುತ್ತಾರೆ. ನಾಟಕವನ್ನು ಎಲ್ಲೂ ವಾಚ್ಯಗೊಳಿಸದೆ, ಕ್ಲೀಷೆಗೊಳಿಸದೆ ಯಥಾವತ್ತಾಗಿ ಅನಾವರಣಗೊಳಿಸಲಾಗಿದೆ.

ಕೆ.ಬಿ. ಸಿದ್ದಯ್ಯನವರ ಹಾಡುಗಳನ್ನು ಪ್ರಯೋಗದಲ್ಲಿ ಬಳಸಿದ್ದು ಅದು ಕೂಡ ನಾಟಕದ ಗಂಭೀರತೆಯನ್ನು ಹೆಚ್ಚಿಸುತ್ತದೆ. ಹೆಚ್ಚು ರಂಗ ಸಜ್ಜಿಕೆಯಿಲ್ಲದೆ, ಆಪ್ತ ರಂಗಭೂಮಿಯಲ್ಲಿ ಈ ನಾಡಿನ ದಲಿತರ ಅದರಲ್ಲೂ ಎಡಗೈ ಜನಾಂಗದವರ ಸಂಕಟ, ಹಸಿವನ್ನು ತಣ್ಣಗೆ ಅನಾವರಣಗೊಳಿಸಿದ್ದಾರೆ. ನಮ್ಮೆಷ್ಟೆತ್ತರದ ಬಾಚಣಿಗೆಯನ್ನು ಸಂಕೇತವಾಗಿ ರಂಗಪ್ರಯೋಗದಲ್ಲಿ ಬಳಸಲಾಗಿದೆ. ರಂಗದಲ್ಲಿ ನೋಡುವಾಗ ಹಾಸ್ಯಕ್ಕೆ ಒತ್ತು ಕೊಡಲಾಗಿದೆ ಎಂದು ಅನಿಸಿದರೂ ಪ್ರಯೋಗದಿಂದ ಹೊರ ಬಂದಾಗ ನಮ್ಮನ್ನು ತಣ್ಣಗೆ ಮಣೆಗಾರ ಆವರಿಸಿಕೊಳ್ಳುತ್ತೆ. ಜತೆಗೆ ಅರಿವಿನ ಕಡೆ ಹೋಗಲು ಸಜ್ಜುಗೊಳಿಸುತ್ತದೆ.

‍ಲೇಖಕರು G

February 4, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This