ಉಗಿದ ತಕ್ಷಣ ಬಿತ್ತು ಮೀನು..

ಮಲೆನಾಡು ಡೈರಿ

ಗಾಳಕ್ಕೆ ಬಿದ್ದ ಔಲು

nempe-devaraj

ನೆಂಪೆ ದೇವರಾಜ್

ಈ ವರ್ಷ ಹಾಲಿಗೆ ಸಮೀಪ ಕಲ್ಲು ಮೊಗ್ಗುಗಳನ್ನು ಹಿಡಿಯಬೇಕೆಂಬ ಮದುದ್ದೇಶದಿಂದ ಹೊರಟ ನಮ್ಮ ತಂಡಕ್ಕೆ ಬಾರೀ ನಿರಾಶೆಯುಂಟಾಗಿದ್ದು ಮಾತ್ರವಲ್ಲ. ಈ ಬಾರಿ ಮೀನುಗಳ ಅಭಾವದಿಂದ ಹೊಟ್ಟೆಯುರಿಸಿಕೊಳ್ಳುವುದಷ್ಟೇ ನಮ್ ಆ ಜನ್ಮ ಸಿದ್ದ ಹಕ್ಕು ಎಂದು ತಲೆ ಮೇಲೆ ಕೈ ಹೊತ್ತುಕೊಂಡು ಕೂತಿದ್ದವು.

ಏಕೆಂದರೆ ಮಳೆ ತನ್ನ ಆರ್ಭಟ ಮುಗಿಸಿತ್ತು.

fishಅಲ್ಲಿ ಸಿಕ್ಕ ಅಲ್ಪ ಸ್ವಲ್ಪ ಮೀನುಗಳು ತೃಪ್ತಿ ನೀಡಲು ಅಸಮರ್ಥವಾಗಿದ್ದವು. ಇನ್ನಷ್ಟು ತಿನ್ನ ಬೇಕು,ಇನ್ನಷ್ಟು ಹಿಡಿಯಬೇಕಲು ಎಂಬ ಒತ್ತಡಕ್ಕೆ ಸಿಕ್ಕಿದ್ದೆವು. ನಮ್ಮೂರ ಕೆರೆಯಲ್ಲಿ ಸಣ್ಣ ಪುಟ್ಟ ಚೇಣಿ ಮೀನುಗಳ ಮೇಲೆ ಕಣ್ಣು ಬಿದ್ದರೂ ಇವುಗಳ ಸೆರೆಗೆ ಆಯಾ ಮಳೆಗಾಲಕ್ಕೆ ಹೊಸ ಹೊಸ ಸಂಶೋಧನೆ ಮಾಡುತ್ತಾ ಇವುಗಳಿಗೆ ಮಹಾನ್ ಶತೃಗಳಾಗಿದ್ದವರ ಜೊತೆ ನಮ್ಮಂತಹ ಚಳ್ಳೆ ಪಿಳ್ಳೆಗರಿಗೆ ಏಗಲು ಸಾಧ್ಯವಿರಲಿಲ್ಲ.

ಮೀನುಗಳ ಯಾವ ಕುಣಿಗೆ ಕೈ ಹಾಕಿದರೆ ಯಾವ ಮೀನು ಸಿಗುತ್ತದೆ. ಯಾವ ಕುಣಿಯಲ್ಲಿ ಹಾವಿದೆ, ಮುರುಗುಂಡು ಇದೆ. ಮೊದಲ ಮಳೆಯಲ್ಲಿ ಯಾವಾಗ ಏಡಿಗಳು ಎಲ್ಲಿ ಹೊರ ಬರುತ್ತವೆ ? ಗೊಜ್ಜಲೆ- ಕುಸುಬಗಳಿಗೆ ಎಷ್ಟು ಪ್ರಮಾಣದ ಮಳೆ ಬೇಕು?ಮುರುಗುಂಡುಗಳು ಎಲ್ಲಿ ಹತ್ತುತ್ತವೆ ಎಂಬುದಕ್ಕೆಲ್ಲ ಇವರಲ್ಲಿ ದಿವ್ಯ ಔಷಧಿಗಳಿವೆ.

ಒಮ್ಮೆ ಶೇಖರನೆಂಬಾತ ಮಧ್ಯ ರಾತ್ರಿಯ ನಂತರ ಮೀನು ಕಡಿಯಲು ಹುಮ್ಮಸ್ಸಿನಿಂದ ಹೊರಟಿದ್ದ. ಬೇರೆಯವರೆಲ್ಲ ಮೀನುಗಳಿಗಾಗಿ ಸುತ್ತಾಡಿ ಸುತ್ತಾಡಿ ವಾಪಾಸು ಬರುವ ವೇಳೆ. ಆದರೆ ಈತನಿಗೆ ಸ್ಪಷ್ಟ ಅರಿವಿತ್ತು. ಹಾರ್ಸಿಡಿ ಗೊಜ್ಜಲೆಯಂತಹ ಬೆಲೆ ಬಾಳುವ ಮೀನುಗಳು ಹೊರ ಬರುವುದು ಮಧ್ಯ ರಾತ್ರಿಯಾದ ನಂತರ ಎಂದು. ಈತನ ಬರುವಿಕೆ ಬೆಳಗಿನ ಜಾವ ನಾಲಕ್ಕಾಗುತ್ತಿತ್ತು. ಆದರೂ ಕೈ ಚೀಲದ ತುಂಬಾ ಮೀನು ತರುವುದೂ ನಮ್ಮನ್ನು ನೋಡಿ ನಗುವುದೂ ಪ್ರತಿವರ್ಷ ನಡೆದೇ ಇರುತ್ತದೆ.

ಈಗ್ಗೆ ಐದಾರು ವರ್ಷಗಳ ಹಿಂದೆ ಈತನೂ ನಾವೆಲ್ಲ ನಮ್ಮ ಊರಿನ ಕೆರೆಗೆ ಗಾಳ ಹಾಕಲು ಹೋಗಿದ್ದೆವು. ನನ್ನ ಗಾಳಕ್ಕೆ ಮೀನು ಬೀಳುತ್ತಲೇ ಇರಲಿಲ್ಲ. ಶೇಖರ ಮತ್ತಿತರರು ಔಲಿನಂತಹ ಮೀನುಗಳನ್ನು ಲೀಲಾ ಜಾಲವಾಗಿ ತಮ್ಮ ಗಾಣಕ್ಕೆ ಬೀಳಿಸಿಕೊಂಡು ಕಿರು ನಗೆಯೊಂದನ್ನು ನನ್ನ ಗಾಣದ ಕಡೆ ನೋಡಿ ಬೀರುತ್ತಿದ್ದರು.

ಅವನಂತೆ ನಾನೂ ಗಾಳಕ್ಕೆ ಎರೆ ಹುಳು ಸುರಿದು ಹಾಕುತ್ತಿದ್ದೆ. ಗಾಳವನ್ನು ಬೀಸುತ್ತಿದ್ದೆ. ಇಬ್ಬರದೂ ಒಂದೇ ಕೆರೆ. ಆದರೂ ನನ್ನ ಗಾಳ ಅನಾಥತೆಯಿಂದ ನಲುಗಿ ಹೋಗಿತ್ತು. ಇದೇನೂ ನನಗೆ ಹೊಸ ವಿಚಾರವಲ್ಲ. ಗಾಳ ಹಾಕುವ ವಿಷಯದಲ್ಲಿ ಇಂತಹ ನೂರಾರು ಪ್ರಯತ್ನದಲ್ಲಿ ಬಂದ ದಾರಿಗೆ ಸುಂಕವಿಲ್ಲದಂತೆ ಮನೆ ಸೇರಿದ್ದೇನೆ. ಇಡೀ ಹಗಲೆಲ್ಲ ತುಂಗಾ ನದಿಯಲ್ಲಿ ಸಿಗುವ ಒಂದೇ ಒಂದು ಮೀನಿಗಾಗಿ ಪರಿತಪಿಸಿದ್ದೇನೆ. ಕುಸುಬವೋ, ಗಿರ್ಲೋ ಗಾಳಕ್ಕೆ ಬಿದ್ದಾಗ ಬಾರೀ ಖುಷಿ ಪಟ್ಟಿದ್ದೇನೆ.

ಸಣ್ಣವನಿರುವಾಗ ಕೋಲು ಗಾಳದಿಂದ ಹತ್ತಾರು ತೊಳ್ಳೆ ಮೀನುಗಳನ್ನು ಹಿಡಿದಿದ್ದು ಬಿಟ್ಟರೆ ಇತ್ತೀಚಿನ ದಿನಗಳಲ್ಲಿ ಗಾಳ ಹಾಕಿದ್ದರಿಂದ ಮಹತ್ತರ ಫಲಾನುಭವ ಪಡೆಯಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ನನ್ನದು.

ಈ ಜೋಡು ಕೆರೆಗಳು ಔಲು ಮತ್ತು ಚೇಳಿ ಮೀನುಗಳಿಗೆ ಸುಪ್ರಸಿದ್ದಿ ಪಡೆದಿವೆ. ಚೇಳಿ ಮೀನುಗಳು ಎರೆ ಹುಳು ಹುಡುಕಿಕೊಂಡು ಬಂದು ಗಾಳಕ್ಕೆ ಬಿದ್ದಂತೆ ಔಲು ಮೀನು ಬೀಳುವುದು ಅಪರೂಪವೇಂದೇ ಹೇಳಬೇಕು. ಬಹು ಸೂಕ್ಷ್ಮತೆ ಇವುಗಳಿಗೆ. ಶೇಖರನಂತವರೋ, ಜಾವಗಲ್ಲು ಮಂಜನಂತವರೋ ಈ ವಿಷಯದಲ್ಲಿ ಔಲು ಮೀನಿನ ಸೂಕ್ಷ್ಮಗಳಿಗೆ ಸವಾಲು ಒಡ್ಡುತ್ತಲೇ ಬರುತ್ತಿರುತ್ತಾರೆ.

fishing3ನನ್ನ ಗಾಳ ಬರಪೀಡಿತ ಪ್ರದೇಶದ ಎತ್ತಿನ ತರಹ ಬಿದ್ದುಕೊಂಡಿತ್ತು. ಶರವೇಗದಲ್ಲಿ ಎರಡು ಔಲು ಮೀನುಗಳಿಗೆ ಶೇಖರ ಧಣಿಯಾಗಿದ್ದ. ನನ್ನ ಕಡೆ ಪಾಪದ ದೃಷ್ಟಿಯೊಂದನ್ನು ಬೀರಿ ತಾನು ಗಾಳಕ್ಕೆ ಮೇವು ಹಾಕಿಕೊಡುತ್ತೇನೆಂದಾಗ ಯಾವುದೇ ಬಿಗುಮಾನ ತೋರಿಸದೆ ಕೆರೆಯೊಳಗೆ ಸೋಮಾರಿಯಾಗಿದ್ದ ಗಾಳ ಎಳೆದು ಅವನ ಕೈಗೆ ಕೊಟ್ಟೆ. ಗಾಳಕ್ಕೆ ಎರೆ ಹುಳುವೊಂದನ್ನು ಸುರಿದು ಅರ್ಧ ಬಾಗ ಎರೆಯನ್ನು ಚರಕ್ಕನೆ ಕೈ ಉಗುರಿನಿಂದ ಕಟ್ ಮಾಡಿ ಗರಟಕ್ಕೆ ಹಾಕಿ ಆ ಎರೆ ಹುಳಕ್ಕೆ ತನ್ನ ಬಾಯಲ್ಲಿದ್ದ ಎಲೆ ಅಡಿಕೆ ಮಿಶ್ರಿತ ಕಫವನ್ನು ತುಪ್ಪಿ ಕೆರೆಯ ದೂರಕ್ಕೆ ಗಾಳವನ್ನು ಎಸೆದು “ನೋಡಿ ಈಗ… ಎಂದು ತನ್ನ ಗಾಣದತ್ತ ನಡೆದ.

ಕ್ಷಣ ಮಾತ್ರದಲ್ಲಿ ನನ್ನ ಗಾಳವನ್ನು ಮೀನು ಎಳೆಯಲಾರಂಭಿಸಿತು. ಇದು ಗ್ಯಾರೆಂಟಿ ಔಲು ಎಂದು ದೂರದಿಂದಲೇ ಶೇಖರ ಹೇಳತೊಡಗಿದ. ಮೀನು ಅತ್ತ ಇತ್ತ ಹೊರಳಾಡಿ ಗಾಳವನ್ನು ಮತ್ತಷ್ಟು ಬಿಗಿಗೊಳಿಸಿತು. “ಈಗ ಎಳೆಯಿರಿ” ಎಂಬ ಆತನ ಆದೇಶ ಪಾಲಿಸುವ ವಿಧೇಯ ವಿದ್ಯಾರ್ಥಿಯಂತೆ ಬಿರಬಿರನೆ ಗಾಳ ಎಳೆದು ಹೊರ ಹಾಕಿದಾಗ ನೋಡುವುದೆಂತ.? ಒಂದು ಕೆ.ಜಿ ಗಾತ್ರದ ಔಲು ಮೀನು ಹೊರಳಾಡತ್ತಾ ಹೊರಳಾಡುತ್ತಾ ದಡದಲ್ಲಿ ಕೊನೆಯುಸಿರೆಳೆಯಿತು.

ಈ ಗಾಳ ಹಾಕುವ ಕೆಲಸ ಮಹಾ ಹಿರುಗಲು. ಆದ್ರೆ ಶಿಖಾರಿ ಇಲ್ಲದಿದ್ದರೆ ಭಿಕಾರಿ ಎಂಬ ಗಾದೆ ಮಾತು ಗಾಳ ಹಾಕುವುದಕ್ಕೆ ಸಂಪೂರ್ಣ ಅನ್ವಯಿಸುತ್ತದೆ. ನಾನು ಹೊಳೆ ಕೆರೆಗಳಿಗೆ ಗಾಳ ಹಾಕಿ ಮೀನು ಹಿಡಿಯಲು ಹೋದಾಗಲೆಲ್ಲ ಸಂಪೂರ್ಣ ಬರಬಾತಾಗಿ ಬಂದದ್ದೆ ಹೆಚ್ಚು. ಓಂಟ್ರುಕ, ಅರುಗಲಿ, ಕ್ವಳಸದಂತಹ ಮೀನುಗಳು ಆವಾಗಾವಾಗ ಸಿಕ್ಕಿದ್ದೂ ಉಂಟು. ನಮ್ಮ ಕೆರೆಯ ಚೇಣಿ ಮೀನು ಬಿಟ್ಟರೆ ನನ್ನ ಕೈ ಯಾವಾಗಲೂ ಮೇಲಾಗಿದ್ದು ನಾ ಕಾಣೆ.ಇದಕ್ಕೆ ಬೇಕಾಗುವ ತಾಳ್ಮೆ, ಗಾಳ ಹಾಕಲು ಕೂರುವ ಜಾಗ, ಮೀನುಗಳಿಗೆ ಬೇಕಾದ ಗುಂಡಿ ಈ ಬಗ್ಗೆ ನಾನೆಂದೂ ತಲೆ ಕೆಡಿಸಿಕೊಂಡಿಲ್ಲದಿರುವುದೇ ನನ್ನ ಈ ಬರಗಾಲಕ್ಕೆ ಕಾರಣವೆಂದು ಭಾವಿಸಿದ್ದೇನೆ.

fishing4ತುಂಗಾ ನದಿಯ ದಡದ ಮೇಲೆ ನನ್ನ ಮುಸಲ್ಮಾನ ಅನೇಕ ಗೆಳೆಯರು ಇಡೀ ಹಗಲು ಕೆಜಿ ಗಟ್ಟಲೆ ರಾಗಿ ಹಿಟ್ಟಿನ ಮಿಣ್ಣೆ ಮಾಡಿಕೊಂಡು ಕುಕ್ಕರು ಗಾಲಿನಲ್ಲಿ ಕೂತು ಬೀಡಿಯ ಹೊಗೆ ಬಿಡುತ್ತಾ ಮೀನಿಗಾಗಿ ದೊಡ್ಡ ದೊಡ್ಡ ಉದ್ದನೆಯ ಗಾಣ ಹಾಕಿ ಕನಸು ಹೆಣೆಯುತ್ತಿರುತ್ತಾರೆ. ಅಪೂರ್ವ ತಾಳ್ಮೆಯಿಂದ ಗಾಳದ ಅಲುಗಾಟಕ್ಕಾಗಿ ಕಾಯುತ್ತಾರೆ. ಹದಿನೈದು ಇಪ್ಪತ್ತು ದಿನಗಳ ಹಿಂದೆ ಸಿಕ್ಕ ಮೀನೊಂದರ ನೆನಪೇ ಇಡೀ ಹಗಲನ್ನು ಚೇತೋಹಾರಿಗೊಳಿಸಿರುತ್ತದೆ.

ಕಳೆದ ಗಣಪತಿ ಸೀಸನ್ ನಲ್ಲಿ ಗಾಳಕ್ಕೆ ಬಿದ್ದ ಮೀನಿನ ಗಾತ್ರ, ಬೀಣೆಯನ್ನು ಎಳೆದ ರೀತಿ, ಅದನ್ನು ಸುಸ್ತಾಗುವಂತೆ ಮಾಡಿದ ಕೈ ಚಳಕಗಳನ್ನು ಅದ್ಭತವಾಗಿ ವರ್ಣಿಸ ಹತ್ತುತ್ತಾರೆ. ತುಂಗೆಯ ತಟದಲ್ಲಿ ಈ ಸೀಸನ್ ನಲ್ಲಿ ಪರಾಂಬರಿಸಿ ನೋಡಿದಾಗ ಸಾಲಾಗಿ ಕಾಣ ಸಿಗುತ್ತಾರೆ.

ನನ್ನ ಗಾಳಕ್ಕೆ ಯಾವಾಗಲೋ ಶೇಖರನ ಎಲೆ ಅಡಿಕೆ ಮಿಶ್ರಿತ ಕಫಕ್ಕೆ ಕಣ್ಣು ಮಿಟುಕಿಸುವುದರೊಳಗೆ ಬಿದ್ದ ಔಲು ಮೀನಿನ ಕಥೆಯೂ ವರ್ಷಾನುಗಟ್ಟಲೆ ಗುನುಗಲು ಬಹು ದೊಡ್ಡ ವಸ್ತು. ನಾನೇ ಸಾಹಸ ಮಾಡಿ ಹಿಡಿದ ರೀತಿಯಲ್ಲೆ ಅಲ್ಲಲ್ಲಿ ನನ್ನಿಂದ ವರ್ಣಿತಗೊಳ್ಳುತ್ತಲೇ ಇರುತ್ತದೆ. ಈ ಅವಧಿಯಲ್ಲಿ ಶೇಖರ ಲೆಕ್ಕಕ್ಕೆ ಸಿಗದಷ್ಟು ಮೀನುಗಳಿಗೆ ಸರದಾರನಾಗಿರುವುದನ್ನು ಮಾತ್ರ ಈತ ಬಾಯಿ ಬಿಡುವುದೇ ಇಲ್ಲ.

‍ಲೇಖಕರು Admin

October 1, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹುಲಿಹೊಂಡದ ಹುಲಿಯಪ್ಪ ನೆನಪು

ಹುಲಿಹೊಂಡದ ಹುಲಿಯಪ್ಪ ನೆನಪು

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ...

2 ಪ್ರತಿಕ್ರಿಯೆಗಳು

 1. subhash kulal

  ನಿಜ ಸಾರ್ ಮೊದಲೆಲ್ಲ ನಮ್ಮ ಊರಿನ ಗದ್ದೆ ಬದುಗಳಲ್ಲಿ ಸಣ್ಣಪುಟ್ಟ ಹಳ್ಳ ಕೆರೆಗಳಲೆಲ್ಲ ಹೇರಳವಾಗಿ ಮೀನುಗಳು ಕಾಣಸಿಗುತ್ತಿದ್ದವು … ನೀವು ಹೇಳಿದಂತೆ ಗಾಳ ಹಾಕಲು ಹೋಗಿ ಬರಿಗೈಯಲ್ಲಿ ಬಂದ ಅದೆಷ್ಟೊ ನಿದರ್ಶನಗಳು ಈಗ ನೆನಪಾಗುತ್ತಿದೆ.. ಒಮ್ಮೊಮ್ಮೆ ಅನ್ನಿಸುತ್ತೆ ಓಹೋ ಈ ಮೀನುಗಳಿಗೆಲ್ಲಾ ಯಾರೋ ತಮ್ಮ ಜೀವ ಉಳಿಸಿಕೊಳ್ಳುವಂತಹ ಕಲೆಯನ್ನು ಕಲಿಸಿರಬಹುದಾ ಅಂತ… ಆದರೆ ವಾಸ್ತವ ಅಲ್ಲಿ ಮೀನುಗಳ ಸಂಖ್ಯೆಯೆ ವಿರಳವಾಗಿಬಿಟ್ಟಿದೆ…
  ಈ ವಿಚಾರವಾಗಿ ಅತ್ಯಂತ ಸೂಕ್ತ ಲೇಖನ ಇದಾಗಿದೆ … ನಿಜವಾಗಿಯು ಅಮೂಲ್ಯ ಮಾಹಿತಿಗಳು ಇದರಲ್ಲಿವೆ… ದನ್ಯವಾದಗಳು ನೆಂಪೆದೇವರಾಜ್ ಸಾರ್ ಹಾಗೂ ಅವಧಿ ……

  ಪ್ರತಿಕ್ರಿಯೆ
  • nempe devaraj

   ಮೀನುಗಳ ಬರಗಾಲಕ್ಕೆ ಕಾರಣ ರಸಾಯನಿಕಗಳು ಹಾಗೂ ಕೀಟನಾಶಕಗಳು. ಈ ಮಹಾನವಮಿ ಮತ್ತು ನವರಾತ್ರಿಯ ಕಾಲದಲ್ಲಿ ನಾವುಗಳು ಕೂಣಿ ಹಾಕುತ್ತಿದ್ದೆವು.ಕೊಚ್ಚಲಿ,ತೊಳ್ಳೆ, ಹಲಗಣೆ ಚರ, ಕಂಬಾರಕಟ್ಟಿ,ಮುರುಗುಂಡು ಇನ್ನು ಎಷ್ಟೋ ತರಹದ ಮೀನುಗಳು ರಾಶಿ ರಾಶಿಯಾಗಿ ಕೂಣಿಗೆ ಬೀಳುತ್ತಿದ್ದವು.ಹತ್ತು ಮೀನು ಹತ್ತುವ ಸಂದರ್ಭದಲ್ಲಿ ಮರಿ ಹಾಕಿದ್ದ ಮೀನುಗಳು ಈ ಸಮಯದಲ್ಲಿ ಇಳಿಯುತ್ತವೆ. ಇಳಿಯುವ ಮೀನುಗಳಿಗಳಿಗೆ ಬಿದಿರಿನಿಂದ ಮಾಡಿದ ಎತ್ತರದ ಬುಟ್ಟಿಯನ್ನು ಇಡಲಾಗುತ್ತದೆ.ನೀರು ಇಳಿವ ಜಾಗದಲ್ಲಿ ಯಾಪೆ ಎಂಬ ತಟ್ಟಿಯನ್ನು ಇಟ್ಟು ಕೃತಕವಾಗಿ ಜರಿ ನಿರ್ಮಿಸಿ ಅದರ ಕೆಳಗಡೆ ಈ ಗೂಡೆ ಅಥವಾ ಕೂಣಿ ಇಡಲಾಗುತ್ತದೆ. ಇಳಿಯುವ ಮೀನೆಲ್ಲ ಈ ಗೂಡೆಯಲ್ಲಿ ಸಂಗ್ರಹವಾಗುತ್ತವೆ.ಒಮ್ಮೊಮ್ಮೆ ಗೂಡೆಯಲ್ಲಿ ಮುವತ್ತು ನಲವತ್ತು ಕೆ.ಜಿಯಷ್ಟು ಮೀನು ಬೀಳುತ್ತಿದ್ದವು.ಮಳೆ ಬಂದರಂತೂ ಹಬ್ಬವೇ ಹಬ್ಬ. ಪ್ರತಿ ಮನೆಯಲ್ಲೂ ಮೀನಿನ ವಾಸನೆ.ಗೂಡೆಯೊಳಗೆ ಕೆಲವೊಮ್ಮೆ ಹಾವುಗಳೂ ಸೇರಿಕೊಂಡು ಮೀನುಗಳನ್ನು ನಿರಾತಂವಾಗಿ ನುಂಗುತ್ತಿರುತ್ತವೆ.ಗೂಡೆಯಲ್ಲಿಯಲ್ಲಿ ಬಿದ್ದ ಮೀನುಗಳನ್ನು ಗದ್ದೆಯ ಬದದ ಮೇಲೆ ಸುರುಗಿ ಚೀಲದಲ್ಲಿ ತುಂಬಿಕೊಂಡು ಬರುವುದು ಸಾಮಾನ್ಯ ಸಂಗತಿ..ಆದರೆ ಕೆಲವೊಮ್ಮೆ ಬಾರೀ ಪ್ರಮಾಣದಲ್ಲಿ ಮೀನುಗಳು ಸಿಕ್ಕಾಗ ಕೂಣಿಯನ್ನೆ ಹೊತ್ತು ತರತ್ತಾರೆ. ಮನೆಗೆ ಬಂದು ಮೀನು ಸುರುವಿದಾಗ ಮೀನಿನಿಂದ ಹೊಟ್ಟೆ ತುಂಬಿಸಿಕೊಂಡ ಹಾವುಗಳು ತೆವಳಲಾರದೆ ಬಿದ್ದುಕೊಂಡು ಇಡೀ ಖುಷಿಯನ್ನು ಒಮ್ಮೆಲೇ ಹಳ್ಳ ಹಿಡಿಸುತ್ತವೆ.ಮಳೆಗಾಲ ಕಳೆದು ಸ್ವಚ್ಚ ಸುಂದರ ನೀರಲ್ಲಿ ತೇಲಿ ಗೂಡೆಯೊಳಗೆ ಬೀಳುವ ಮೀನುಗಳನ್ನು ಗದ್ದೆಯ ಬದದ ಮೇಲೆ ಸುರುವಿದಾಗ ಬಿಸಿಲ ಬೆಳಕಿಗೆ ಬೆಳ್ಳಿಯ ಗರಗಸಗಳಂತೆ ಹೊಳೆವ ಸಣ್ಣ ಪುಟ್ಟ ಮೀನುಗಳ ನೋಡುವ ಭಾಗ್ಯವಿಲ್ಲದೆ ಎಷ್ಟೋ ವರುಷಗಳಾದವು.ಹಸಿರು ಕ್ರಾಂತಿಯ ದೆಸೆಯಿಂದ ಗದ್ದೆಯ ತುಂಬಾ ಚಲ್ಲಾಡಿದ ರಸಾಯನಿಗಳು ನಾಶ ಮಾಡಿದ ಜಲಚರಗಳ ವೈವಿದ್ಯತೆ ಇಂದಿಗೂ ಅದ್ಯಯನ ಯೋಗ್ಯ ಗಂಭೀರ ವಿಚಾರ.೨೦೦ ಇಂಚು ಮಳೆಬೀಳುವ ಪ್ರದೇಶದ ಬಡವರ ಆಹಾರದಲ್ಲಿ ಈ ಜಬ್ಬು ಮೀನುಗಳ ಪಾತ್ರ ಇಂದು ಮರೆತು ಹೋಗುತ್ತಿದೆ. ಅಪೌಷ್ಟಿಕತೆಗೆ ಹಸಿರು ಕ್ರಾಂತಿಯ ಕೊಡುಗೆ ದಾಖಲಾಗಿದೆ. ಸಾವಿರಾರು ವರ್ಷಗಳಿಂದ ವರ್ಷದ ಬಹು ಬಾಗ ಪೌಷ್ಟಿಕತೆ ನೀಡುತ್ತಿದ್ದ ಈ ಮೀನುಗಳ ಬಗ್ಗೆ ಮರು ಯೋಚನೆ ಶುರುವಾಗಬೇಕಿದೆ

   ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ subhash kulalCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: