ಉಣ್ಣದೆಯೂ ತೊಳೆದಿಟ್ಟ ಖಾಲಿತಾಟು

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ, ಭಾಷೆ ಅಂತನ್ನಬಹುದೇನೊ. ಅಲ್ಲಿನವರು ಮಾತನಾಡುವುದೂ ಹಾಗೆ ತೆರೆ ಅಲೆಅಲೆಯಾಗಿ

ರೇಣುಕಾ ರಮಾನಂದ ಅವರು ಕೂಡ ಇದಕ್ಕೆ ಹೊರತಲ್ಲ.ಇಂಥ ಸಮುದ್ರದಂಚಿನ ಊರಲ್ಲಿರುವ ರೇಣುಕಾ ರಮಾನಂದ ಇಷ್ಟು ದಿನ ನಮಗೆ ‘ಮೀನುಪೇಟೆಯ ತಿರುವಿನಲ್ಲಿ’ ಸಿಗುತ್ತಿದ್ದರು. ಇನ್ನು ಮುಂದೆ ಪ್ರತಿ ಶುಕ್ರವಾರ ‘ಅವಧಿ’ಯ ‘ನನ್ನ ಶಾಲ್ಮಲೆ’ ಅಂಕಣದಲ್ಲಿ ಸಿಗಲಿದ್ದಾರೆ.

ಎಡಮೂಗಿಗೂ ಕೆಳಗೆ.. ಮೇಲ್ದುಟಿಗೂ ಮೇಲೆ.. ಕರ್ರಗೆ ಶೇಂಗಾಕಾಳಿನಷ್ಟು ದೊಡ್ಡನೆಯ ಉಬ್ಬುಮಚ್ಚೆ ಹೊತ್ತ ಅಚ್ಚಬಿಳಿಯ ಬಣ್ಣದವಳಾದ ಇಟ್ಟಿಮನೆ ಗೋಪಿ “ಯಾರದೋ ಸಂತಿಗೆ ಓಡಿಹೋಯ್ತಂತೆ” ಎಂದು ಹದಿನೆಂಟು ವರ್ಷದ ಹಿಂದೆ ಆ ಊರತುಂಬ ಗುಲ್ಲಾಗಿ ತದನಂತರದಲ್ಲಿ ಯಾರ ಕಣ್ಣಿಗೂ ಬೀಳದೇ ಹೋದವಳು ಈಗ ಅಂಕೋಲೆಗೆ ಬಹುದೂರವಿರುವ ಈ ಕಲಘಟಗಿಯ ಮಿಶ್ರಿಕೋಟೆಯ ಒಂದು ಓಣಿಯ ಶೀಟು ಹೊದಿಸಿದ ಕೋಳಿಗೂಡಿನಂಥ ಮನೆಯ ಮುಂದೆ ಸಣ್ಣ ಮೊರದಷ್ಟಗಲದ ಬಟ್ಟೆ ಒಗೆಯುವ ಕಲ್ಲಿನ ಹಿಂದೆ ಕಾಲು ಅಗಲಿಸಿ ಕೂತು ತನ್ನ ಮಗ್ಗುಲಿಗೆ ರಾಶಿಹಾಕಿಕೊಂಡ ಒಂದಷ್ಟು ಬಟ್ಟೆಯನ್ನು ಕಲ್ಲಿಗೆ ತಂದು ಕುಸುಬುತ್ತ , ಹಿಶ್.. ಉಷ್.. ಸದ್ದುಮಾಡಿ ಒಗೆಯುತ್ತ ಕುಳಿತ ಸ್ಥಿತಿಯಲ್ಲಿ ನಾನು ಕುಳಿತ ಬಸ್ಸಿನ ಬಲಗಡೆಯ ಕಿಟಕಿಯಾಚೆ ನನ್ನ ಕಣ್ಣಿಗೆ ಬಿದ್ದಿದ್ದಳು.

ಕಾರವಾರ-ಅಥಣಿ ಬಸ್ಸು ಬೆಳಗ್ಗೆ ಆರೂವರೆಗೆ ಅಂಕೋಲೆಯಿಂದ ಹೊರಟದ್ದು ಹುಬ್ಬಳ್ಳಿ ತಲುಪಲು ಇನ್ನಿಷ್ಟೇ ಇಷ್ಟು ದೂರ ಇರುವಾಗ ಮಿಶ್ರಿಕೋಟೆಯಲ್ಲಿ ಹಾಳಾಗಿ ಬಂದ್ ಬಿದ್ದಿತ್ತು.. ಎಡಕ್ಕೆ ಟ್ರ್ಯಾಕ್ಟರಿನವನು ಬಂದು ಹೊಕ್ಕಿದ ಸಲುವಾಗಿ ಬಲಗಡೆಗೆ ತಿರುಗಿಸಲ್ಪಟ್ಟ ಬಸ್ಸು ಏನೋ ಹೆಚ್ಚುಕಮ್ಮಿಯಾಗಿ ಮತ್ತೆ ಮುಂದೆ ಹೋಗಲಾರೆ ಎಂಬಂತೆ ನಿಂತು ಸತಾಯಿಸತೊಡಗಿ ಅರ್ಧ ತಾಸಾಗಿತ್ತು.

ದೂರ ಹೋಗುವವರೆಲ್ಲ ಗೊಣಗೊಣ ಶಾಪಹಾಕುತ್ತ ಇಳಿದು ವ್ಯವಸ್ಥೆ ಮಾಡಿಕೊಟ್ಟ ಬಸ್ಸೇರಿ ಕಾಣೆಯಾದ ಮೇಲೆ ಹುಬ್ಬಳ್ಳಿಯ ತನಕ ಇರುವ ನಾಲ್ಕಾರು ಜನ ಮಾತ್ರ ಛೆ..! ಥೋ..! ‘ಮತ್ತೆ ಎಷ್ಟೊತ್ತೋ ಏನೋ..’ ‘ಇಳಿದು ಹೋಗಿಬಿಡೋದು ಸುಖ..’ ಎಂದೆಲ್ಲ ಗೊಣಗುತ್ತ. ಯಾರ್ಯಾರಿಗೋ ಫೋನು ಮಾಡಿ “ಹಿಂಗಾಗೇತಿ..ಹೆಂಗ್ ‌ಮಾಡೂಣಂತಿ” ಎಂದೆಲ್ಲ ಹೇಳುತ್ತ ಈಗ ಬಸ್ಸಿನಲ್ಲುಳಿದಿದ್ದರು. 

ಕುಳಿತ ಬಸ್ಸು ಬಲಕ್ಕೆ ಮಗುಚಿದರೆ ನಾನು ಕಿಟಕಿಯಿಂದ ಜಾರಿ ಬೀಳೋದು ಗೋಪಿಯ ಮನೆ ಒಗೆಯುವ ಕಲ್ಲಿಗೆ- ಎಂಬಷ್ಟು ಹತ್ತಿರದಲ್ಲಿ ಅವಳಿದ್ದ ಕಾರಣಕ್ಕೆ ನನಗೆ ಅವಳು ಗೋಪಿ ಹೌದೋ ಅಲ್ಲವೋ ಎಂಬ ಲವಲೇಶದ ಅವಭರವಸೆಯೂ ಇಲ್ಲದೇ ಕಣ್ಣಿಗೆ ಬಿದ್ದ ತಕ್ಷಣ ಅವಳನ್ನು ಅವಳೇ ಅಂತ ಗುರುತಿಸಲಿಕ್ಕಾಯ್ತು. ದಿಟ್ಟಿಸಿ ನೋಡುವುದು ಹೇಗೆ..? ಅವಳಲ್ಲದೆ ಬೇರೆ ಯಾರಾದರೂ ಆಗಿ ಕಾಲಗಲಿಸಿ ಕುಳಿತ ಸ್ಥಿತಿಯಲ್ಲಿ ನಾನು ಹೀಗೆ ಅವಳನ್ನು ಕಡಕಾಕಳಿಸಿ ನೋಡಿ.. ಮತ್ತೆ ನೀರು ಗೀರು ಉಗ್ಗಿಸಿಕೊಂಡರೆ ಹೇಗೆ..? ಎಂಬ ಯಾವ ಭಿಡೆಗೆ ಅವಕಾಶವಿಲ್ಲದಂತೆ ಗೋಪಿ ಒಂದೇ ಬಾರಿ ನನ್ನ ನೋಟದ ಕುರುಹಿಗೆ ದಕ್ಕಿಬಿಟ್ಟಿದ್ದಳು.

ಸಾವಿರ ವಾಹನಗಳು ಸದಾ ಆಚೀಚೆ ಹಾಯುವ ಮುಖ್ಯ ರಸ್ತೆಯ ಮೇಲ್ಗಡೆ ಈ ಮಿಶ್ರಿಕೋಟಿ ಬಾರೀಕು ಓಣಿ ಹೊಂಟಿತ್ತು. ಗೋಪಿಯ ನಂತರದಲ್ಲಿ ಓ ಅಲ್ಲಿ ದೂರದವರೆಗೆ ಕಾಣುವ ಓಣಿಯ ಕೊನೆಯವರೆಗೂ ನಲ್ಲಿಯಲ್ಲಿ ನೀರುಬಿಟ್ಟ ಕಾರಣಕ್ಕೆ ಓಣಿಯ ಎಡಬಲದ ಎಲ್ಲ ಝೋಪಡಪಟ್ಟಿಯಂತಹ ಮನೆಗಳ ಹೆಂಗಸರು ಪ್ರತಿ ಮನೆಯ ಮುಂದೂ ಬಟ್ಟೆ ಒಗೆಯುತ್ತ, ಪಾತ್ರೆ ಬೆಳಗುತ್ತ, ಪುಟ್ಟಕಲ್ಲಿನಲ್ಲಿ ಹಿಮ್ಮಡ ಉಜ್ಜುತ್ತ, ತಲೆ ಮೇಲೆ ಸೆರಗು ಹೊದೆದುಕೊಂಡು ಗಲಗಲ ಮಾತಾಡುತ್ತ ಬೀದಿಗೆ ಬಿದ್ದಿದ್ದರು.

ಮಕ್ಕಳು ಓಡಾಡುತ್ತಿದ್ದರು. ರಸ್ತೆಯ ಮೇಲೆ ನೊರೆಯ ಹರಿವು ಇಳಿದು ಬರುತ್ತಿತ್ತು. ಅದರ ಕೆಳಗೆ ಹಳೆಯ ಬುರುಗು ಹಮರಾಗಿ ಕರೆಗಟ್ಟು ಕುಳಿತು ಓಣಿಗೆ ಒಂದು ರೀತಿಯ ಅಸ್ವಚ್ಛತೆಯ ರೂಹು ತಂದು ಕೊಟ್ಟಿತ್ತು. ಈ ರೂಹಿಗೆ ಕೊಡುಗೆಯಾಗಿ ಹತ್ತು ಹಲವಾರು ಸಂಗತಿಗಳು ಆ ಓಣಿಯ ತುಂಬ ಒತ್ತೊತ್ತಾಗಿ ಇದ್ದರೂ ಅವೆಲ್ಲವನ್ನು ಲೆಕ್ಕ ಹಾಕುವುದಕ್ಕಿಂತ ಈಗ ನನಗೆ ತುರ್ತಿಗೆ ಗೋಪಿ ಮುಖ್ಯವಾಗಿದ್ದಳು. 

ವಾಹನಗಳು ಕುಯ್ಯೋಂ ಮರ್ರೋ ಅನ್ನುತ್ತಿದ್ದರೂ ಗೋಪಿ ಅಪ್ಪಿತಪ್ಪಿಯೂ ರಸ್ತೆ ಕಡೆ ನೋಡುತ್ತಿರಲಿಲ್ಲ. ಹೀಗೊಂದು ಬಸ್ಸು ಹಾಳಾಗಿ ಅರ್ಧತಾಸಿನಿಂದ ಮನೆ ಮಗ್ಗುಲಿಗೇ ನಿಂತಿದೆ.. ಅದ್ಯಾಕೆ.. ಅದೇನು.. ಎಂಬೊಂದು ಕುತೂಹಲವೂ ಅವಳಿಗೆ ಇದ್ದಂತೆ ಕಾಣಲಿಲ್ಲ. ಹಾಗಾಗಿ ಕಿಟಕಿಯಂಚಿಗೆ ಕುಳಿತು ಆಗಿನಿಂದ ಅವಳನ್ನು ನೋಡುತ್ತಿದ್ದರೂ ನಾನು ಅವಳ ಕಣ್ಣಿಗೆ ಬಿದ್ದಿರಲಿಲ್ಲ.

ಒಗೆದು ಮುಗಿಸಿದ ಬಟ್ಟೆಯನ್ನು ಕೈಯಲ್ಲಿ ತಿರಗಾ ಮುರುಗಾ ಹಿಂಡಿ ಹಾವಿನಂತೆ ಸುತ್ತಿದ ಅವನ್ನು ಹಾಗೇ ಅಖಂಡ ಬುಟ್ಟಿಯಲ್ಲಿ ಇಟ್ಟುಕೊಂಡು ಇನ್ನೇನು ಒಳಗೆ ಹೋಗಲಿರುವ ಗೋಪಿ ನನ್ನ ಕೈಯಿಂದ ಶಾಶ್ವತವಾಗಿ ಜಾರಿಹೋಗಿ ಬಿಡುತ್ತಾಳೆ. ಅಲ್ಲಿಂದ ಮತ್ತೆಲ್ಲಿಗೋ ಒಳಗಿಂದೊಳಗೇ ‘ಜುಗಳಿ’ ಮತ್ತೆಂದೂ ಹೊರಗೇ ಬರದೇ ಕಣ್ಣಿಗೆ ಕಾಣದೆ ಕಾಣೆಯಾಗಿಬಿ ಡುತ್ತಾಳೆ ಎಂದೆಲ್ಲ ಅನ್ನಿಸಿ ನಾನು ಹನ್ನೆರಡೂವರೆಗೆ ತಲುಪಬೇಕಾದ ಹುಬ್ಬಳ್ಳಿ ಪೇಟೆಯ ಕಲ್ಯಾಣಮಂಟಪವೊಂದರ ಮದುವೆಯೊಂದನ್ನು ಬದಿಗಿಟ್ಟು ಬೆಳಗ್ಗೆ ಒಂಭತ್ತಕ್ಕೆ ಈ ಗುರುತು ಪರಿಚಯವಿಲ್ಲದ ಮಿಶ್ರಿಕೋಟಿ ನೆಲದಲ್ಲಿ ಕೆಟ್ಟು ಕೂತ ಬಸ್ಸಿಂದ ಗೋಪಿಯನ್ನು ಭೆಟ್ಟಿಯಾಗುವ ಆಶೆಯಾಗಿ ಅಯಾಚಿತವಾಗಿ ಇಳಿದು ಬಿಟ್ಟಿದ್ದೆ.

* * *

ಗೋಪಿಯ ಅವ್ವಿಗೆ ಒಂದೂವರೆ ವರ್ಷದ ಅಂತರದಲ್ಲಿ ಐವರು ಮಕ್ಕಳು. ಮೊದಲ ನಾಲ್ವರೂ ಹೆಣ್ಣು. ಕೊನೆಯವನೊಬ್ಬ ಹುಡುಗ. ಮೂರನೆಯ ಹುಡುಗಿ ಈ ಗೋಪಿ: ನನ್ನ ಸಂಗಾತದವಳು. ಗದ್ದೆಭೂಮಿ ಇಲ್ಲದ ಕುಟುಂಬ ಅವರದ್ದು. ಗೋಪಿಯ ಅಪ್ಪನಿಗೆ ಸದಾ ನಿಶ್ಯಕ್ತಿಯ ರೋಗ. ಅವ್ವಿಯೂ ದುಬ್ಬಗಾಮಣಿ ಶೀಕಿನವಳು. ಐದು ಆರನೇ ವಯಸ್ಸಿನ ನಂತರದಲ್ಲಿ ಮಕ್ಕಳ ಹಸಿವು ಹೆಚ್ಚಾಗಿ, ತಿನ್ನುವ ಕೈ- ಬಾಯಿ ದೊಡ್ಡದಾಗಿ, ಊರಲ್ಲೇ ಅವರಿವರ ಮನೆಯ ಸಣ್ಣಪುಟ್ಟ ಕೆಲಸಕ್ಕಾಗ ತೊಡಗಿದ್ದರು ಅಕ್ಕತಂಗಿಯರು. ಒಂದು ಶಿದ್ದೆ ಅಕ್ಕಿ, ಒಂದು ತೆಂಗಿನ ಕಾಯಿ, ಒಂದಿಷ್ಟು ಅವಲಕ್ಕಿ, ಒಂದು ಲೋಟ ಬೆಲ್ಲ, ನಾಲ್ಕು ಮೆಣಸು, ಒಂದೆರಡು ಒಣಮೀನು ಮುಂತಾದವುಗಳಿಗಾಗಿ ಅವರು ಮಾಡದ ಕೆಲಸವಿಲ್ಲ. ಇಡೀ ಊರಿನಲ್ಲಿ ಇವರಿಂದ ಕೆಲಸಮಾಡಿಸಿಕೊಳ್ಳದ ಮನೆಯಿಲ್ಲ.

ನಾಲ್ವರೂ ಒಟ್ಟಿಗೆ ಹೋಗಿ ಒಡೆಸಿದ ಸೌದೆ ಸಾಕಿ ಅಟ್ಟಕ್ಕೆ ತುಂಬಿ ಕೊಡೋದು. ಕೊಟ್ಟಿಗೆಗೆ ಹುಲ್ಲು ತುಂಬೋದು, ಶೇಂಗಾ ನೆಡುವಾಗ ಚೀಲಗಟ್ಟಲೆ ಶೇಂಗಾ ಒಡೆದು ಕಾಳು ಮಾಡಿಕೊಡೋದು. ನೆಡುವ ದಿನ ಉಳುವವನ ಹಿಂದೆ ಅಷ್ಟಷ್ಟೇ ಅಂತರದಲ್ಲಿ ಕಾಳು ಬಿಡಲು ಹೋಗುವುದು. ಅಂಗಳದ ಹುಲ್ಲು ಕಿತ್ತುಕೊಡಲು, ಗದ್ದೆಯ ಹಕ್ಕಿ ಕಾಯಲು, ಅಂಗಡಿಗೆ ಹೋಗಿ ಬರಲು, ಒಳಕೋಣೆಗೆ ಮಣ್ಣು ಹಾಕಿದವರ ಮನೆಗೆ ಪುಟ್ಟ ಕೈಗಳಲ್ಲಿ ನೆಲ ಒರೆಯಲು ಹೋಗುವುದು..

ಹೀಗೆ ಎಲ್ಲವನ್ನೂ ಮಾಡುತ್ತಿದ್ದ ಅವರನ್ನು ಚಳಿಗಾಲದಲ್ಲಿ ದರಕು(ತರಗೆಲೆ) ತರಲು ಬೆಟ್ಟಕ್ಕೆ ಹೋಗುವ ಹತ್ತಿಪ್ಪತ್ತು ಚಕ್ಕಡಿಗಾಡಿಯವರು ತಮ್ಮ ಜೊತೆ ‘ಎತ್ತಿನ ಮೈ ಮೇಲೆ ಕುಳಿತು ರಕ್ತ ಹೀರುವ ಬೆಟ್ಟದ ದೊಡ್ಡ ನೊಣ ಓಡಿಸಲೂ’ ಗಂಡು ಮಕ್ಕಳ ತೆರದಲ್ಲಿ ಕರೆದುಕೊಂಡು ಹೋಗುತ್ತಿದ್ದರು. ಹಾಗೆ ಹೋದ ದಿನಗಳಲ್ಲಿ ಇವರ ಮನೆಗೆ ಒಂದಷ್ಟು ಒಣಕಟ್ಟಿಗೆ, ಒಂದೆರಡು ಕೊಳಗ ಕುಚ್ಚಲಕ್ಕಿ, ಹತ್ತಿಪ್ಪತ್ತು ರೂಪಾಯಿ ಎಲ್ಲ ಗಾಡಿಯವರು ಕೂಡಿಸಿಕೊಟ್ಟದ್ದು ಸಿಗುತ್ತಿತ್ತು.

ಊರಿಗೆಲ್ಲ ಬೇಕಾದ ಈ ಮಕ್ಕಳನ್ನು ಕೆಲವೊಮ್ಮೆ ಊರವರು- ತಮ್ಮ ಗದ್ದೆಯ ಭತ್ತದ ಕದಿರು ಹೆಕ್ಕಿದರೆಂದು, ಶೇಂಗಾ ಗದ್ದೆಯ ನಡುವಲ್ಲಿ ಅಲ್ಲಲ್ಲಿ ಬಿತ್ತಿದ ಮೂಲಂಗಿ ಗಿಡವನ್ನು ಕಿತ್ತಿ ಮನೆಗೊಯ್ದರೆಂದು, ಹಳ್ಳದ ಬದುವಿನಲ್ಲಿ ಉದುರಿದ ತೆಂಗಿನ ಕಾಯನ್ನು ಹೆಕ್ಕಿಕೊಂಡು ಹೋದರೆಂದು ಹಿಡಿದು ಬೆನ್ನಿಗೆ ಎರಡು ಬಾರಿಸಿ ಕಳುಹಿಸುತ್ತಿದ್ದುದೂ ಇತ್ತು.. ಕೆಲವೊಮ್ಮೆ ಸುಮ್ಮನೆ ಸಂಶಯಕ್ಕೂ ಹೊಡೆತ ತಿನ್ನಬೇಕಾಗಿ ಬರುತ್ತಿತ್ತು.

ಊರತುಂಬ, ಬೇಣದತುಂಬ ಇರುವ ಚಾಲ್ತಿ (ಗೋಟು) ಮಾವಿನ ಮರಗಳು, ನೇರಳೆ, ಹಲಸಿನ ಮರಗಳು ಕಾಲಕಾಲಕ್ಕೆ ತುಂಬಿ ತುಳುಕಿ.. ಗೋಪಿ ಅಕ್ಕತಂಗೇರನ್ನು ಒಂದೆರಡು ದಿನದ ಹೊರತು ಖಾಯಂ ಉಪವಾಸವಿಡಲು ಬಿಡುತ್ತಿರಲಿಲ್ಲ. ವಾರದಲ್ಲಿ ಮೂರು ದಿನ ರಾತ್ರಿ ಅಡುಗೆ ಮಾಡದಿದ್ದರೂ ಗೋಪಿಯ ಅವ್ವಿ ಮಂಕಾಳಿ- ತಾವೆಲ್ಲ ಉಣ್ಣದೇ ಇರೋದು ಆಚೀಚೆ ಮನೆಯವರಿಗೆ ಗೊತ್ತಾಗುತ್ತದೆ ಎಂದು ಉಣ್ಣದ ಖಾಲಿತಾಟುಗಳನ್ನು ಹೊರಗೆ ತಂದು ಅಚ್ಚುಕಟ್ಟಾಗಿ ಬೂದಿ ಹಾಕಿ ತಿಕ್ಕಿ, ನೀರಲ್ಲಿ ಎರಡೆರಡು ಬಾರಿ ತೊಳೆದು ಒಳಗೊಯ್ದು ಇಡುತ್ತಿದ್ದುದನ್ನು ಗೋಪಿ ಮರುದಿನ ಶಾಲೆಯಲ್ಲಿ ‘ಅದೇನೂ ಅಲ್ಲ’ ಎಂಬಂತೆ ನಿಸೂರಾಗಿ ನನ್ನಲ್ಲಿ ಹೇಳಿಕೊಳ್ಳುತ್ತಿದ್ದಳು..

ಜಗವೇ ಒಂದು ಅಚ್ಚುಕಟ್ಟಿನ ನಾಟಕರಂಗ ಹೌದೆಂದು ಒಪ್ಪಿತವಾದ ಈ ಕಾಲದಲ್ಲಿಯೂ ಊಟವನ್ನೇ ಮಾಡದೇ ಉಪವಾಸವಿದ್ದು ತಾಟು ತೊಳೆದ ಹಾಗೆ ಅಭಿನಯಿಸುವುದು ಹೇಗೆ ಎಂಬುದು ಇಂದಿಗೂ ನನ್ನ ತಲೆಯೊಳಗೆ ಹೊಂದಿಕೊಳ್ಳದೇ ಕುಳಿತುಬಿಟ್ಟ ವಿಷಯ.. ಸುಮ್ಮನೆ ಹಾಗೆ ಮಾಡಿ ನೋಡಿದರೆ ಹೇಗಿರುತ್ತದೆ ಎಂಬ ಸಣ್ಣ ವಿಚಾರ ತಲೆಗೆ ಬಂದರೂ ಸಾಕು ಕೈ ನಡುಗುತ್ತದೆ.. ಮೆದುಳು ಇದನ್ನು ಬಿಟ್ಟು ಬೇರೆ ಏನನ್ನಾದರು ಯೋಚಿಸು ಎಂಬ ನಿರ್ದೇಶನ ನೀಡುತ್ತದೆ.

ಮಂಕಾಳಕ್ಕನ ಮಕ್ಕಳು ಮದುವೆ ವಯಸ್ಸಿಗೆ ಬಂದಾಗ ಹೆಣ್ಣಿಗೆ ಬರಗಾಲ ಬಂದಿತ್ತು.. ಚೂರು ಪಾರು ಉಂಡುಡಲು ಇದ್ದವರೇ ಬಣ್ಣ ರೂಪು ಎಲ್ಲ ಚೆನ್ನಾಗೇ ಇದ್ದ ಅವರನ್ನು ತಾವೇ ಮದುವೆ ಮಾಡಿಕೊಂಡು ಹೋಗಿದ್ದರು. ಗೋಪಿಯೊಬ್ಬಳು ಬಾಕಿ ಉಳಿದು ಅವಳೂ ಒಂದು ದಿನ ಕಾಣೆಯಾಗಿ ಅಕ್ಕತಂಗಿಯರ ಲೆಕ್ಕಕ್ಕೂ ಸಿಗದೆ ಈಗ ಹೀಗೆ ನನ್ನ ಕಣ್ಣಿಗೆ ನಿಲುಕಿ, ಸ್ವೀಡನ್ ಹುಡುಗ ಜೊನಾಥನ್ ಫ್ರಾಸಮನ್ ಹೆತ್ತವರನ್ನು ಹುಡುಕಿ ಹುಬ್ಬಳ್ಳಿ ಗಲ್ಲಿಗಲ್ಲಿ ಅಲೆದ ಹಾಗೆ ನಾನು ಬ್ಯಾಗ್‌ಪ್ಯಾಕ್ ಹಾಕಿಕೊಂಡು ಮಿಶ್ರಿಕೋಟಿಯ ಈ ಓಣಿಯ ಮುಂದೆ ಧುಮುಕಿ ಬಿಟ್ಟಿದ್ದೆ.

ಗುರುತಾಗಿದ್ದರೂ ಹಾಗೇ ಸುಮ್ಮನೆ ಬಸ್ಸಿನ ಕಿಟಕಿಯಿಂದ ಕೈ ಮಾಡಿಯಷ್ಟೇ ಹೋಗಿ ಬಿಟ್ಟಿದ್ದರೆ ತಪ್ಪಾಗುತ್ತಿತ್ತು ಎಂಬಂತೆ ಗೋಪಿ ನನ್ನನ್ನು ನೋಡಿ ಅತಿಯಾಗಿ ಸಂಭ್ರಮಿಸಿದ್ದಳು. ಕಣ್ಣಲ್ಲಿ ನೀರುಕ್ಕಿಸಿಕೊಂಡು ಅಷ್ಟಷ್ಟು ನಗುತ್ತ ಇನ್ನಷ್ಟು ಅಳುತ್ತ ಹಳೆಯದು ಹೊಸದೆಲ್ಲ ಸೇರಿಸಿ ಮಾತಾಡಿದಳು.

ಅವರಿವರ ಹೊಲದ ಕೆಲಸಕ್ಕೆ ಹೋಗುವ ಗಟ್ಟಿಯಾಗೇ ಇರುವ ಅವಳ ಅತ್ತೆ ಮಾವ, ಗ್ಯಾರೇಜಲ್ಲಿ ಕೆಲಸ ಮಾಡುವ ಗಂಡ, ಪುಟ್ಟ ಮಕ್ಕಳಿಬ್ಬರು, ಆಶಾ ಅಕ್ಕನಾಗಿರುವ ಇವಳು, ಹೊರಗೆ ಅಸಡ್ಡಾಳವಾಗಿದ್ದರೂ ಒಳಗೆ ಲಕ್ಷಣವಾಗೇ ಇಟ್ಟುಕೊಂಡಿರುವ ಪುಟ್ಟಮನೆ.. ಎಲ್ಲವೂ ಒಂದೊಂದೇ ನನ್ನ ಕಣ್ಣಳತೆಗೆ ಸಿಗುತ್ತ ಕ್ರಮೇಣ ನನ್ನಲ್ಲೊಂದು ತಣ್ಣಗಿನ ಸಮಾಧಾನ ತುಂಬತೊಡಗಿದ್ದವು. 

ಎಲ್ಲಿಂದಲೋ ಹೆಕ್ಕಿಕೊಂಡು ಬಂದ ಮಡಿಲ ತುಂಬಿದ ಮಾವಿನ ಹಣ್ಣಿನಲ್ಲಿ ಒಳ್ಳೆಯ ನಾಲ್ಕಾರನ್ನು ಹೆಕ್ಕಿ ನನಗಾಗಿ ಕೊಟ್ಟು ಹೋಗುತ್ತಿದ್ದ, ಸಣ್ಣ ಹರಗಂಡಿ ಹೊಂಡದಲ್ಲಿ ಕೂಳಿ ಹಾಕಿ ಹಿಡಿದ ಮೀನಿನಲ್ಲಿ ದೊಡ್ಡವನ್ನು ಹೆಕ್ಕಿ ನನಗೆಂದು ಇಟ್ಟುಹೋಗುತ್ತಿದ್ದ, ಶಾಲೆಗೆ ಹೋಗುವ ಬರುವ ಹಾದಿಯಲ್ಲಿ ದನಕರ ಹಾಯದಂತೆ ನನ್ನ ಒಳಗುಮಾಡಿ ಜೋಪಾನ ಮಾಡುತ್ತಿದ್ದ ಗೋಪಿ ಇಲ್ಲಿ ಹೀಗೆ ಪುಟ್ಟದೊಂದು ಸಂಸಾರದೊಂದಿಗೆ ಚಂದಗೆ ಇರುತ್ತ.. ಎಲ್ಲಿದ್ದಾಳೋ.. ಏನಾದಳೋ.. ಎಂದೆಲ್ಲ ಇಲ್ಲದ್ದನ್ನೂ ಊಹೆ ಮಾಡಿಕೊಂಡು ಚಡಪಡಿಸುತ್ತಿದ್ದ ನನ್ನ ಮನಸ್ಸಿಗೆ ಶಾಶ್ವತ ಸಮಾಧಾನವಾಗಿ ಒದಗಿದ್ದಳು.

ನಾನು ಹೋದ ದಿನ ಶುಕ್ರವಾರ ಮಿಶ್ರಿಕೋಟಿಯಲ್ಲಿ ಮೊಹರಂ ಸಂಭ್ರಮ. ವಿವಿಧೆಡೆಯ ನಾಲ್ಕು ಡೋಲಿಗಳು ಒಂದೇ ಕಡೆ ಸಂಗಮ. ಮಧ್ಯಾಹ್ನವಾಗತೊಡಗಿದ ಹಾಗೆ ಎಲ್ಲ ಸಮುದಾಯದ ಜನಜಾತ್ರೆ, ಜಾತಿ, ಧರ್ಮ, ಭೇದವಿಲ್ಲದೆ ಕುಣಿವ ಹುಡುಗರು.. ಗೋಪಿ ನನ್ನನ್ನು ಹಬ್ಬದ ಊಟವಾಗದ ಹೊರತು ಅಲ್ಲಿಂದ ಹೋಗಲು ಬಿಟ್ಟರೆ ತಾನೇ..? ಪಂಜಾ ಹೊತ್ತ ಹುಡುಗರಿಂದ ನವಿಲುಗರಿಯಲ್ಲಿ ನನ್ನ ಬೆನ್ನಿಗೂ ಬಡಿಸಿ ಆಶೀರ್ವಾದ ಮಾಡಿಸಿದಳು.. ಅಕ್ಕತಂಗೇರು ಹಬ್ಬಕ್ಕೆ ಮನೆಗೆ ಬಂದಂತೆ ಸಂಭ್ರಮಿಸಿದಳು.

ಹಿತ್ತೊಲೆಯ ಅಕ್ಕಪಕ್ಕದ ಎಲ್ಲ ಬೋಗುಣಿಯಲ್ಲೂ ಒಂದಿಲ್ಲೊಂದು ಪದಾರ್ಥಗಳು.. ಬಡಿದು ಪೇರಿಸಿಟ್ಟ ಜೋಳದ ಮೆತ್ತನೆ ರೊಟ್ಟಿ, ಎರಡು ಮೂರು ತರಹದ ಸೊಪ್ಪು- ಕಾಳಿನ ಪಲ್ಲೆಗಳು, ಜುಣಕ, ಬದನೆ ಎಣೆಗಾಯಿ, ಮೊಸರು, ಚಟ್ನಿಪುಡಿಗಳು, ಹುಗ್ಗಿ, ಹೋಳಿಗೆ, ಮೊಹರಂ ವಿಶೇಷ ತಿನಿಸು- ‘ಚೊಂಗ್ಯಾ’ ಹೀಗೆ.. ಸಾಕು ಸಾಕೆಂಬಷ್ಟು ಉಪಚಾರ ಮಾಡಿ ಅಗಲ ಗಂಗಾಳದ ಸುತ್ತ ಮತ್ತೆಲ್ಲೂ ಜಾಗವಿಲ್ಲದಂತೆ ಬಡಿಸಿ ಹತ್ತಿರ ಬೀಸಣಿಕೆ ಹಿಡಿದು ಕುಳಿತಳು..

ಅಂದೆಂದೋ ಅವಳು ಉಣ್ಣದೇ ತೊಳೆದಿಡುತ್ತಿದ್ದ ತಾಟು ನನ್ನೊಳಗಿಂದ ಇಳಿದು ಬಂದು ಈ ತುಂಬಿಕೊಂಡ ತಾಟಿನ ಬಗಲಿಗೆ ಕುಳಿತು ಮಾತಾಡತೊಡಗಿ ಕಣ್ಣು ಮಂಜಾದಂತೆನಿಸಿತು. ಅವರು ಉಣ್ಣದ ದಿನ ರಾತ್ರಿ ಬೇಕೂಂತ ಅನ್ನ ಹೆಚ್ಚಿಗೆ ಮಾಡಿ. ಇಕಾ ಉಳಿದು ಹೋಗಿತ್ತು ಎಂದು ಮರುದಿನ ಚುಮುಚುಮು ನಸುಕಿಗೆ ಇಂತಹುದೇ ಒಂದು ಹಿತ್ತಾಳೆಯ ಗಂಗಾಳದಲ್ಲಿ ತಣ್ಣೆ ಅನ್ನವನ್ನು ಸುರಿದು ಗೋಪಿಯನ್ನು ಕರೆದು ಕೊಡುತ್ತಿದ್ದ ಆಚೀಚೆ ಮನೆ ಹೆಂಗಸರು, ಮುದುಕಿಯರು ಈ ಉಣ್ಣುವ ಬಟ್ಟಲ ಮುಂದೆ ಮತ್ತೆ ಮತ್ತೆ ಕಣ್ಣೆದುರಿಗೆ ಬರತೊಡಗಿದರು.

ಹೊರಗೆ ಓಣಿಯಲ್ಲಿ ಎಷ್ಟು ವಿತರಿಸಿದರೂ ಮುಗಿಯದ ಪಾನಕದ ತೋಪುಗಳಲ್ಲಿ ಮತ್ತೂ ಮತ್ತೂ ಪಾನಕ ಉಳಿದು ಬರ್ರೀ.. ಬರ್ರೀ.. ಪಾನಕ ಕುಡಿದು ಹೋಗ್ರೀ ಎಂಬ ಸದ್ದು ಮತ್ತೆ ಮತ್ತೆ ಕೇಳತೊಡಗಿ ಕಡಲತಡಿಯ ಮುರ್ಕುಂಡಿ ದೇವರ ಸಂಭಾರವಲಕ್ಕಿಯ ಪ್ರಸಾದವೂ ಕೂಡ ಇದೇ ವೇಳೆಯಲ್ಲಿ ನೆನಪಾಗಿ.. ಹೊರಗಿಂದ ಕಾರವಾರ ಅಥಣಿ ಬಸ್ಸು ಸಮಾ ಆಗಿ ಹೊರಟು ಹೋಯಿತೆಂಬ ಸುದ್ದಿ ಬಂತು..

December 4, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾಡಿದ ‘ನಾರಸಿಂಹ’

ಕಾಡಿದ ‘ನಾರಸಿಂಹ’

ಕಿರಣ್ ಭಟ್ ಅಭಿನಯ: ನೃತ್ಯನಿಕೇತನ ಕೊಡವೂರುರಚನೆ: ಸುಧಾ ಆಡುಕಳಸಂಗೀತ, ವಿನ್ಯಾಸ, ನಿರ್ದೇಶನ: ಡಾ.ಶ್ರೀಪಾದ ಭಟ್ನೃತ್ಯ: ಮಾನಸಿ ಸುಧೀರ್,...

ಕಾಲದಾ ಕನ್ನಡಿ

ಕಾಲದಾ ಕನ್ನಡಿ

ವಿಜಯಾ ಮೋಹನ್ ಇದ್ಯಾಕುಡುಗಿ ಇಂಗೆ ಕಂಬ ನಿಂತಂಗೆ ನಿಂತು ಬುಟ್ಟೆ, ಇದು ಕಳ್ಳು ಬಳ್ಳಿಯೆಂಬ ಅತ್ತಿಗೆಯ ದೊಡ್ಡಮ್ಮನ ಮಾತು. ಅವಳು ಅಂಗೆ...

ಕುವೆಂಪು ಮನೆ ‘ಉದಯರವಿ’ಸ್ಮಾರಕವಾಗಲಿ

ಕುವೆಂಪು ಮನೆ ‘ಉದಯರವಿ’ಸ್ಮಾರಕವಾಗಲಿ

ಜಿ ಟಿ ನರೇಂದ್ರ ಕುಮಾರ್ ರಾಷ್ಟ್ರಕವಿ ಕುವೆಂಪು ರವರು ಮೈಸೂರಿನಲ್ಲಿ ಸ್ವತಃ ಕಟ್ಟಿಸಿದ ಬಾಳಿ ಬದುಕಿದ ಮನೆ. ಈ ಮನೆಗೆ ಸರ್ವೋದಯ ಚಳುವಳಿಯ...

4 ಪ್ರತಿಕ್ರಿಯೆಗಳು

 1. Kiran Bhat

  ಊಟ ಮಾಡದೇ ತಟ್ಟೆ ತೊಳೆದಿಡೋದನ್ನ ನೆನೆಸಿಕೊಂಡರೇ ಒಂಥರಾ ತ್ರಾಸಾಗ್ತದೆ.

  ಪ್ರತಿಕ್ರಿಯೆ
 2. ವಾಸುದೇವ ಶರ್ಮಾ

  ಅಬ್ಬಾ ಕಣ್ಣಿಗೆ ಕಟ್ಟುವ ನಿರೂಪಣೆ.
  ನಾನು ಶಾಲೆಯಲ್ಲಿದ್ದಾಗ ಕೇಳಿದ್ದು, ನನಗೆ ನಿಜವಾಗಿಯೂ ಅನುಭವಕ್ಕೆ ಇಲ್ಲ. ಕೆಲವು ಹುಡುಗರು ತಮ್ಮ ಚೀಲದಲ್ಲಿ ಮಧ್ಯಾಹ್ನದ ಊಟದ ಡಬ್ಬಿಯಿಟ್ಟುಕೊಂಡು ಬರುತ್ತಿದ್ದರಂತೆ. ಆದರೆ ಎಲ್ಲರ ಜೊತೆ ಕೂತು ಉಣ್ಣುತ್ತಿರಲಿಲ್ಲ. ಕರೆದರೂ ಬರುತ್ತಿರಲಿಲ್ಲ. ಊಟದ ಸಮಯದಲ್ಲಿ ಎಲ್ಲೋ ಹೋಗುತ್ತಿದ್ದರು. ಬಹಳ ವರ್ಷಗಳ ನಂತರ ತಿಳಿದದ್ದು ಅವು ಖಾಲಿ ಡಬ್ಬಿ!
  ಅದು ತಿಳಿದಾಗ ನನ್ನ ಬಗ್ಗೆ ನನಗೇ ಮುಜುಗರವಾಗಿತ್ತು. ಹೀಗೂ ಉಂಟಾ ಎಂದು.
  ನಾನು ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ತೊಡಗಿಕೊಂಡ ನಂತರ ಇದರ ಅಂತರಾಳ ನಿಧಾನವಾಗಿ ಬಿಡಿಸಿಕೊಳ್ಳತೊಡಗಿತು.
  ಅದೆಷ್ಟು ಕತೆಗಳಿವೆ ನಿಮ್ಮ ಅನುಭವದ ಮೂಸೆಯಲ್ಲಿ. ಇನ್ನೂ ಇನ್ನೂ ಓದುವ ಹಂಬಲವಿದೆ.

  ಪ್ರತಿಕ್ರಿಯೆ
 3. ಕಲಾ ಭಾಗ್ವತ್

  ನಿಮ್ಮ ಬರವಣಿಗೆಗೆ ನಮೋ ಎಂದೆ.

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಕಲಾ ಭಾಗ್ವತ್Cancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: