‘ಉರಿ ಚಮ್ಮಾಳಿಗೆ…’ ಎಂಬ ಹೋರಾಟದ ದನಿ

ಪಿ ನಂದಕುಮಾರ್

ಕೇಂದ್ರ ಸರ್ಕಾರ ತಂದಿರುವ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟದ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಓದು, ಅದಕ್ಕೆ ಪೂರಕವಾದ ಚರ್ಚೆ; ಜೊತೆಗೆ ತಮ್ಮ ಕೃಷಿ ಚಟುವಟಿಕೆಯ ಮೂಲಕ ಆಳುವವರ ದಪ್ಪ ಚರ್ಮಕ್ಕೆ ರೈತರು ಛಾಟಿ ಏಟಿನ ಬರೆಗಳನ್ನು ಹಾಕುತ್ತಿದ್ದಾರೆ. ‘ಹೋರಾಟದ ಸಾಗರಕ್ಕೆ ಸಾವಿರಾರು ನದಿಗಳು’ ಎನ್ನುವ ಹಾಗೆ ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು, ಬರಹಗಾರರು, ಚಿಂತಕರು, ಅರ್ಥಶಾಸ್ತ್ರಜ್ಞರು ರೈತರ ಹೋರಾಟಕ್ಕೆ ಒಕ್ಕೊರಲಿನ ಧ್ವನಿಯಾಗಿದ್ದಾರೆ.

ಈ ಹೋರಾಟದ  ನೆಪದಲ್ಲಿ ನಾನು ಪ್ರಸ್ತಾಪಿಸಬೇಕಾಗಿರುವುದು, ಇದೇ ಸಂದರ್ಭದಲ್ಲಿ ದಲಿತ ಚಳವಳಿಯನ್ನು ಕಟ್ಟಿಕೊಳ್ಳಬೇಕಾಗಿರುವುದರ ಕುರಿತು. ಎಪ್ಪತ್ತರ ದಶಕದಲ್ಲಿ ನಮ್ಮ ರಾಜ್ಯದಲ್ಲಿ ಹುಟ್ಟಿಕೊಂಡ ದಲಿತ ಚಳವಳಿಯನ್ನು ಮರು ಕಟ್ಟಿಕೊಳ್ಳುವ ಅನಿವಾರ್ಯ ದಿನಗಳಲ್ಲಿ ಶೋಷಿತ ಸಮುದಾಯಗಳು ಚಿಂತನೆ ಮಾಡಬೇಕಾಗಿದೆ. ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಾಮಾಜಿಕ ನ್ಯಾಯ ಮತ್ತು ವೈಚಾರಿಕ ವಿಚಾರಧಾರೆಗಳೇ ಈ ದಲಿತ ಚಳವಳಿಯ ಮೂಲ ಸ್ವರೂಪವಾಗಿತ್ತು.

ಬಿ ಬಸವಲಿಂಗಪ್ಪ ಅವರ ಮಾತಿನ ಹಿನ್ನೆಲೆಯಲ್ಲಿ ಹುಟ್ಟಿಕೊಂಡ ‘ಬೂಸಾ ಚಳವಳಿ’ಯ ಕಾರಣದಿಂದ ದಲಿತ ವಿದ್ಯಾರ್ಥಿಗಳಲ್ಲಿ ವೈಚಾರಿಕ ಕಿಚ್ಚು ಹುಟ್ಟಿತು. ಅಂದಿನಿಂದ ದಲಿತರ ಚಿಂತನೆಗಳಿಗೆ ಹೊಸ ರೂಪ ಪಡೆದುಕೊಂಡವು. ಬೂಸಾ ಚಳವಳಿ ನೆಪ ಮಾತ್ರವೇ ಆದರೂ ಸಹ, ಶತಮಾನಗಳಿಂದ ಶೋಷಣೆಗೆ ಒಳಗಾದ ಶೋಷಿತ ಸಮುದಾಯಗಳ ಒಡಲಾಳದ ಬೆಂಕಿ ಹಲವು ಬಗೆಯಲ್ಲಿ ಹೊರಬರಲು ಕಾರಣವಾಯಿತು.

ದಲಿತ ಚಳವಳಿ ಕೇವಲ ಚಳವಳಿಯಾಗಿ ರೂಪಗೊಳ್ಳದೆ, ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ಸಾಹಿತ್ಯ ಘಟ್ಟವಾಗಿ ಕೂಡ ರೂಪಗೊಂಡಿತ್ತು. ವಿದ್ಯಾರ್ಥಿಗಳು, ಬರಹಗಾರರು, ಕಲಾವಿದರನ್ನೂ ಒಳಗೊಂಡಿತ್ತು. ಸಮಾಜದಲ್ಲಿ ಶೋಷಣೆಗೆ ಒಳಗಾದ ಎಲ್ಲ ಸಮುದಾಯದ ಧ್ವನಿಯಾಗಿ ಈ ಚಳವಳಿ ಕಾರ್ಯನಿರ್ವಹಿಸಿತ್ತು. ಸಮಷ್ಟಿ ಪ್ರಜ್ಞೆಯ ಹಿನ್ನೆಲೆಯಲ್ಲಿ ದಮನಿತ ವರ್ಗಗಳ ಗಟ್ಟಿ ಧ್ವನಿಯಾಗಿ ದೌರ್ಜನ್ಯಗಳ ವಿರುದ್ಧ ಹೋರಾಟ ರೂಪಿಸಿ ನ್ಯಾಯ ಕೊಡಿಸುವಲ್ಲಿ ಚಳವಳಿ ಸಫಲವಾಗಿದೆ.

ದಲಿತ ಚಳವಳಿಯು ಸಮಾಜದ ಎಲ್ಲ ಶೋಷಿತರ ಜೀವನಾಡಿಯಂತಿತ್ತು. ತನ್ನ ಕಾರ್ಯಗಳ ಮೂಲಕ ಶೋಷಿತರ ಬದುಕಿನಲ್ಲಿ ಬದಲಾವಣೆಗೆ ನಿರಂತರ ಹೋರಾಟ ಮಾಡಿ ಯಶಸ್ವಿಯಾದರು ಕೂಡ ಅದು ಒಂದು ಹಂತದವರೆಗೆ ಮಾತ್ರವಾಗಿತ್ತು. ಮುಂದೆ ಹಲವು ಕಾರಣಗಳಿಂದ ಕವಲೊಡೆಯಿತು. ಈ ಹಿನ್ನೆಲೆಯಲ್ಲಿ “ಉರಿ ಚಮ್ಮಾಳಿಗೆ” ಎಂಬ ಕೃತಿಯ ಮೂಲಕ ದಲಿತ ಚಳವಳಿಯ ಪುನರಾವಲೋಕನ ಮಾಡಿಕೊಳ್ಳಬೇಕಾದ ಅನಿವಾರ್ಯ ಮತ್ತು ಅವಶ್ಯವೂ ಆಗಿದೆ.

‘ಉರಿ ಚಮ್ಮಾಳಿಗೆ’ ಕೃತಿಯನ್ನು ಡಿ ಆರ್ ನಾಗರಾಜ್ ರಚಿಸಿದ್ದು; ಇದನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಎಂ ಎಸ್ ಆಶಾ ದೇವಿಯವರು ಅನುವಾದಿಸಿದ್ದಾರೆ. ‘ಗಾಂಧಿ ಮತ್ತು ಅಂಬೇಡ್ಕರ್ ಆಧುನಿಕ ಭಾರತದ ನಿರ್ಣಾಯಕ ವ್ಯಕ್ತಿತ್ವಗಳು. ಪರಸ್ವರ ವಿರೋಧದಲ್ಲಿಯೇ ತಮ್ಮ ನೆಲೆಗಳನ್ನು ಕಂಡುಕೊಳ್ಳಲು, ಆ ಮೂಲಕ ಭಾರತದ ಇತಿಹಾಸಕ್ಕೆ ಹೊಸ ತಿರುವನ್ನು ಕೊಡಲು ತೀವ್ರವಾಗಿ ಪ್ರಯತ್ನಿಸಿದರು’. ಎನ್ನುವ ಮಾತನ್ನು ಅನುವಾದಕರು ಆರಂಭದಲ್ಲಿ ನುಡಿಯುತ್ತಾರೆ. ‌

ಗಾಂಧೀಜಿಯರಿಗೆ ಸ್ವತಂತ್ರ ಪೂರ್ವ ಭಾರತದ ಬಗೆಗಿನ ಆತಂಕ ಒಂದು ಬಗೆಯಾಗಿದ್ದರೆ; ಅಂಬೇಡ್ಕರವರಿಗೆ ಸ್ವತಂತ್ರ ನಂತರದ ಭಾರತದ ಬಗೆಗಿನ ಆತಂಕ ಬೇರೆಯಾಗಿದೆ. ಗ್ರಾಮ ಭಾರತದ ಪರಿಕಲ್ಪನೆ ಮುಖ್ಯವಾಗಿ ಇಲ್ಲಿ ಪ್ರಸ್ತಾಪಕ್ಕೆ ಬರುವಂತಹದ್ದು. ಈ ಇಬ್ಬರಿಗೂ ಗ್ರಾಮವೇ ಕೇಂದ್ರವಾಗಿದ್ದರೂ ಚಿಂತನೆ ವಿಭಿನ್ನವಾಗಿವೆ. ಗಾಂಧೀಜಿಯವರು ಅಸ್ಪೃಶ್ಯತೆಯನ್ನು ಖಂಡಿಸಿದರೂ ಸಹ ಜಾತಿ ವ್ಯವಸ್ಥೆಯನ್ನು ಸಮರ್ಥನೆ ನೀಡುವ ಹಿಂದೂ ಧರ್ಮದ ಕರ್ಮ ಸಿದ್ಧಾಂತ ಜಾತಿ ವ್ಯವಸ್ಥೆಯನ್ನು ಒಪ್ಪಿದ ಹಿನ್ನೆಲೆಯಲ್ಲಿ ಗ್ರಾಮ ಭಾರತದ ಚರ್ಚೆ ಮಾಡುತ್ತಾರೆ.

ಆದರೆ ಅಂಬೇಡ್ಕರ್ ಅವರು ಇದನ್ನು ಒಪ್ಪುವ ಮನೋಭಾವ ತಾಳುವುದಿಲ್ಲ. ಅಸ್ಪೃಶ್ಯತೆಯ ಮೂಲ ಜಾತಿ ವ್ಯವಸ್ಥೆ ಎಂಬುದನ್ನು ಅಂಬೇಡ್ಕರ್ ಅರಿತಿದ್ದರು. ಹಾಗಾಗಿಯೇ  ಜಾತಿ ಎಂಬ ಬೇರು ನಾಶವಾದರೆ ಅಸ್ಪೃಶ್ಯತೆ ಎನ್ನುವ ಮರ ತಾನಾಗಿಯೇ ಅಳಿಯುತ್ತದೆ ಎಂಬ ವಿಚಾರವನ್ನು ಮಂಡಿಸುತ್ತಾರೆ.

ಗಾಂಧೀಜಿಯವರು ತಮ್ಮ ಹಿಂದೂ ಧಾರ್ಮಿಕತೆಯ ಹಿನ್ನೆಲೆಯ ಜೊತೆಗೆ ಅಂಬೇಡ್ಕರವರು ನೀಡಿರುವ ಆರ್ಥಿಕ ವಿಚಾರವನ್ನು ಮುಂದೆ ಇಟ್ಟುಕೊಂಡು ಗ್ರಾಮ ಭಾರತವನ್ನು ಸಮರ್ಥಿಸಲು ಪ್ರಯತ್ನಿಸುತ್ತಾರೆ. ಅಂಬೇಡ್ಕರದು ಗ್ರಾಮಗಳಲ್ಲಿ ಇರುವಂತ ಜಾತಿ ವ್ಯವಸ್ಥೆಯ ಹಿನ್ನೆಲೆಯಲ್ಲಿ ಅನುಭವಿಸಿದ ಜೊತೆಗೆ ಕಂಡತಹ ಗ್ರಾಮ ಭಾರತದ ನಿಜ ಚಿತ್ರಣವನ್ನು ನೀಡುತ್ತಾರೆ. ದಲಿತರು ಹಳ್ಳಿಗಳನ್ನು ನಿರಾಕರಿಸಬೇಕು ಎನ್ನುವುದನ್ನು ಹೇಳುತ್ತಾರೆ.

ಈ ಹಳ್ಳಿ ನಿರಾಕರಣೆ ಹಿಂದೆ ಕ್ರೂರ ಜಾತಿ ವ್ಯವಸ್ಥೆಯನ್ನು ಮೀರುವ ಪ್ರಯತ್ನವಿದೆ. ಈ ಹಿನ್ನೆಲೆಯಲ್ಲಿ ಸಮರ್ಥನೆಗೆ ಹಲವು ವ್ಯಾಖ್ಯಾನಗಳನ್ನು ನೋಡಬಹುದು. ಭಾರತದ ಬಹುತೇಕ ಹಳ್ಳಿಗಳು ಜಾತಿ, ಧರ್ಮ ಎಂಬ ಸಂಕುಚಿತ ಮನೋಭಾವದಲ್ಲಿ ಬಿದ್ದು ನರಳಾಡುತ್ತಿವೆ. ದಿನದಿಂದ ದಿನಕ್ಕೆ ಮರ್ಯಾದಾ ಹತ್ಯೆಗಳು ಹೆಚ್ಚುತ್ತಲೇ ಇವೆ. ಪ್ರೀತಿಯ ಕಾರಣಕ್ಕಾಗಿಯೇ ತಳಸಮುದಾಯದ ಯುವಕರ ಕೊಲೆಗಳು ನಡೆದಿವೆ. ದೇವನೂರು ಮಹಾದೇವರ ‘ಕುಸುಮಾ ಬಾಲೆ’ಯಲ್ಲಿ ಹತ್ಯೆಗೆ ಗುರಿಯಾಗುವ ಚನ್ನನನ್ನು ಕುರಿತು ಪ್ರಸ್ತಾಪಿಸುತ್ತಾರೆ. ಜಾತಿ ಪ್ರತಿಷ್ಠೆಯ ಹಿನ್ನೆಲೆಯ ಕೃತ್ಯಗಳು ಹಳ್ಳಿಗಳಲ್ಲಿ ಇಂದಿಗೂ ನಡೆತ್ತಿರುವುದರ ಬಗ್ಗೆ ಡಿ ಆರ್ ನಾಗರಾಜ್ ರವರು ತಮ್ಮ ಕೃತಿಯಲ್ಲಿ ಚರ್ಚೆಗೆ ತೆಗೆದುಕೊಳ್ಳುತ್ತಾರೆ.

ಈ ರೀತಿಯ  ಸಾಮಾಜಿಕ ಸಮಸ್ಯೆಗಳಿಗೆ ಹಿಂಸೆಯನ್ನು ಅವಲಂಬಿಸದೆ, ಮೇಲ್ವರ್ಗಗಳ ಮನಪರಿವರ್ತನೆಯ ಕಾರ್ಯ ಮಾಡಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ದಲಿತ ಸಮುದಾಯದ ಅಕ್ಷರಸ್ಥರಾದ ಜನ ನಗರ ಪ್ರದೇಶಗಳಲ್ಲಿ ಸೇರಿ ಹಲವು ಅಧಿಕಾರ ವರ್ಗದಲ್ಲಿ ಮಿಳಿತವಾಗಿ ತಮ್ಮ ಸ್ವಸ್ಥಾನದ ಅನಕ್ಷರಸ್ಥನ್ನ ಮರೆತಿರುವುದು ಶೋಚನೀಯ. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಚಿಂತನೆಗಳು ಮುಖ್ಯವಾಗಿವೆ. ‌

ಚಳವಳಿಗಾರರು ಹೋರಾಟದಿಂದ ಸಫಲತೆಯನ್ನು ಸಾಧಿಸಬಹುದು ಎಂಬ ಇತಿಹಾಸದ ಹಾದಿಯನ್ನು ಮರೆತು ಮೇಲ್ಮುಖ ಚಲನೆಯ ಸಂಸ್ಕೃತಿಯನ್ನು ಅನುಸರಿಸುತ್ತ ತಮ್ಮ ಸಂಸ್ಕೃತಿ ಪರಂಪರೆಯನ್ನು ಮರೆತು ವಿಸ್ಮೃತಿಗೆ ಒಳಗಾಗುತ್ತಿದ್ದರೆ.

ಭಾರತಿಯ ಸಂವಿಧಾನದ ಮೂಲ ಆಶಯಗಳಿಗೆ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ತಲೆಕೆಳಗಾಗಿ ಮಾಡುತ್ತಿರುವ ಹಾಗೂ ಮನುಧರ್ಮ ಶಾಸ್ತ್ರದ ಕಾನೂನನ್ನು ಪ್ರತಿಪಾದನೆ ಮಾಡುತ್ತಿರುವವರ ಕಪಿಮುಷ್ಟಿಯಿಂದ ಬಹುತ್ವದ ಭಾರತವನ್ನು ವಿಮೋಚನೆ ಮಾಡಲು ಈ ದಲಿತ ಚಳವಳಿ ವಿಸ್ತಾರವಾದ ನೆಲೆಯಲ್ಲಿ ಮತ್ತೆ ಸಂಘಟನೆಯಾಗಬೇಕಾದ ಅಗತ್ಯತೆ ಈ ಚಳವಳಿಗೆ ಇದೆ.

ಚಳವಳಿಯನ್ನು ಧೃವೀಕರಣ ಮಾಡಬೇಕಾದ ಮತ್ತು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾದ ಅನಿವಾರ್ಯ ಸಂದರ್ಭದಲ್ಲಿ ‘ಉರಿ ಚಮ್ಮಾಳಿಗೆ’ ಕೃತಿಯು ಮುಖ್ಯವಾಗುತ್ತದೆ. ಜಾತಿ, ಮತ, ಧರ್ಮಗಳನ್ನು ಮೀರಿ ಮಾನವೀಯ ನೆಲೆಯಲ್ಲಿ ಚಳವಳಿಯನ್ನು ಕಟ್ಟಿಕೊಳ್ಳಬೇಕಾದ ಅಗತ್ಯತೆಯನ್ನು ಈ ಕೃತಿ ಹೇಳುತ್ತದೆ.

‍ಲೇಖಕರು Avadhi

January 7, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಸತೀಶ ಕುಲಕರ್ಣಿ ಹಾವೇರಿ ನೆಲದ ಮಾತುಗಳಿಗೊಂದು ವಿಚಿತ್ರ ರುಚಿ ಇದೆ. ಸಿಟ್ಟು ಸೆಡವು, ಗಡಸು ಗಿಚ್ಚಿ ಹೊಡೆಯುವ ಮೊನಚು ಇವುಗಳದ್ದು. ವ್ಯಂಗ್ಯ...

೧ ಪ್ರತಿಕ್ರಿಯೆ

  1. ನೀತಾ. ರಾವ್.

    ಒಳ್ಳೆಯ ಪುಸ್ತಕ ಪರಿಚಯ. ಪ್ರಸ್ತುತ ಅವಧಿಯಲ್ಲಿ ಎರಡು ಪ್ರತ್ಯೇಕ ಧೃವಗಳಾಗುತ್ತಿರುವ ಮೇಲ್ವರ್ಗ,ಕೆಳವರ್ಗ, ದಲಿತ ಎಂಬೆಲ್ಲ ವರ್ಗೀಕರಣವನ್ನು ಧಿಕ್ಕರಿಸಿ ಕೇವಲ ಸಮಾನತೆ, ಅಭಿವೃದ್ಧಿ ಮತ್ತು ಜೀವನಮಟ್ಟದ ಸುಧಾರಣೆಯತ್ತ ನಾವೆಲ್ಲ ಗಮನ ಹರಿಸಬೇಕಿದೆ. ಹಳ್ಳಗಳಲ್ಲಿ ಇನ್ನೂ ಆಳವಾಗಿರುವ ಜಾತಿ-ಜಾತಿಗಳ ಅಂತರ ಶಹರಕ್ಕೆ ಬಂದಂತೆ ಜಾಳಾಗುತ್ತ ಸಾಗುತ್ತದೆ. ಇಲ್ಲಿರುವುದು ಕೇವಲ ಆದಾಯದ ಆಧಾರದ ಮೇಲೆ ಹೊರಿಸಲಾದ ತಾರತಮ್ಯ. ಒಟ್ಟು ತಾರತಮ್ಯ ಎನ್ನುವುದು ಕೊನೆಯ ತನಕ ಬಿಡಲಾರದೇನೋ! ನಮ್ಮ ನಮ್ಮ ಜೀವನ ಮಟ್ಟ, ಬುದ್ಧಿಮಟ್ಟಗಳನ್ನು ಎತ್ತರಿಸಿಕೊಂಡು ಮೇಲೆಂದು ತಿಳಿದುಕೊಂಡವರನ್ನು ಧಿಕ್ಕರಿಸಿ, ನಿರ್ಲಕ್ಷಿಸಿ ಬದುಕುವುದೇ ಶ್ರೇಷ್ಠ ಮಾರ್ಗ.
    ಇನ್ನು ಮರ್ಯಾದಾ ಹತ್ಯೆಗಳಂಥವು ನಡೆಯುವುದು ಜಾತಿ ತಾರತಮ್ಯಕ್ಕಿಂತಲೂ ಹೆಚ್ಚಾಗಿ ಸ್ವಜಾತಿಯಲ್ಲಿಯೇ ಎನ್ನುವುದು ದೊಡ್ಡ ದುರಂತ. ಶಿಕ್ಷಣ ಮತ್ತು ತಿಳುವಳಿಕೆಗಳೇ ಇವುಗಳನ್ನೋಡಿಸುವ ಉಪಾಯ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: