ಉಷಾ ಕಟ್ಟೆಮನೆ ಕೇಳ್ತಾರೆ: ಸೆಕ್ಸ್ ವಿಡಿಯೋ ವೀಕ್ಷಣೆ ನಿಷ್ಪಕ್ಷಪಾತ ವರದಿ ಬರಬಹುದೇ?

ಉಷಾ ಕಟ್ಟೆಮನೆಯವರ ಈ ಲೇಖನ ‘ಜುಗಾರಿಕ್ರಾಸ್’ ನಲ್ಲಿ. ಜುಗಾರಿ ಕ್ರಾಸ್ ಚರ್ಚೆ, ಸಂವಾದಕ್ಕೆ ಇರುವ ಜಾಗ. ನಿಮ್ಮ ಅನಿಸಿಕೆ, ಅಭಿಪ್ರಾಯಗಳಿಗೆ ಸ್ವಾಗತ

ಉಷಾ ಕಟ್ಟೆಮನೆ

ಮೌನ ಕಣಿವೆ

” ಆಶ್ಲೀಲ ಚಿತ್ರ ವೀಕ್ಷಣೆ ಪ್ರಕರಣದಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ. ಹೀಗಾಗಿ ಈ ಕೃತ್ಯ ಎಸಗಿದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ… ವಿಧಾನ ಸಭೆಯಲ್ಲಿ ಬ್ಲೂಪಿಲಂ ವೀಕ್ಷಿಸಿದವರು ಸದನಕ್ಕೆ ಬಂದರೆ ನಾನು ಒಂದು ಕ್ಷಣವೂ ಸ್ಪೀಕರ್ ಕುರ್ಚಿಯ ಮೇಲೆ ಕೂರುವುದಿಲ್ಲ. ಯಾರನ್ನು ಬೇಕಾದರೂ ಕೂರಿಸಿಕೊಳ್ಳಿ ರಾಜಿನಾಮೆ ಕೊಟ್ಟು ಇಲ್ಲಿಂದಲೇ ಹೊರಟೆ” ಹೀಗೆಂದು ಸರ್ಕಾರದ ಪ್ರಮುಖರಿಗೆ ಪೆ.೯ರಂದು ಎಚ್ಚರಿಕೆಯನ್ನು ಕೊಟ್ಟಿದ್ದರು ಕೊಡಗಿನ ವೀರ ಪುತ್ರ ಸ್ಪೀಕರ್ ಕೆ. ಜಿ. ಬೋಪಯ್ಯನವರು. ಅವರಿಗೆ ಒತ್ತಡ ಹೇರಲು ಪ್ರಯತ್ನಿಸಿದವರು ಹಾಲಿ ಸಿಎಂ ಸದಾನಂದಗೌಡ, ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿಯ ರಾಜ್ಯಧ್ಯಕ್ಷ ಈಶ್ವರಪ್ಪ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಸುರೇಶ ಕುಮಾರ್. ಸ್ಪೀಕರ್ ಹೀಗೆ ಹೇಳಲು ಕಾರಣವಾಗಿದ್ದು ಪೆ. ೭ರಂದು ವಿಧಾನ ಸಭೆಯಲ್ಲಿ ಅಧಿವೇಶನ ನಡೆಯುತ್ತಿರುವಾಗಲೇ ಸಹಕಾರ ಸಚಿವರಾಗಿದ್ದ ಲಕ್ಷಣ ಸವದಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದ ಸಿ.ಸಿ. ಪಾಟೀಲ್ ತಮ್ಮ ಮೊಬೈಲ್ ಗಳಲ್ಲಿ ಸೆಕ್ಸ್ ವಿಡಿಯೋವನ್ನು ನೋಡಿ ಎಂಜಾಯ್ ಮಾಡುತ್ತಿದ್ದದ್ದು..ಮತ್ತು ಆ ವಿಡಿಯೋವನ್ನು ಅವರ ಮೊಬೈಲ್ ಗೆ ಎಂಎಂಎಸ್ ಮಾಡಿದ ಕೃಷ್ಣ ಪಾಲೆಮಾರ್ ಅವರ ನಡವಳಿಕೆಗಳು. ಅಂತಹ ಸಚಿವರ ಬಗ್ಗೆ ಮೃದು ಧೋರಣೆಯನ್ನು ತಳೆಯುವಂತೆ ಒತ್ತಾಯಿಸಲು ಸ್ಪೀಕರ್ ಬೋಪಯ್ಯನವರ ಬಳಿಗೆ ಈ ಮಹನೀಯರು ತೆರಳಿದ್ದರು. ಅದಕ್ಕವರು ಮೇಲಿನಂತೆ ಪ್ರತಿಕ್ರಿಯಿಸಿದ್ದರು. ಅವರ ರಾಜಿನಾಮೆ ಬೆದರಿಕೆಯ ಪ್ರತಿಕ್ರಿಯೆಗೆ ತೂಕವಿಲ್ಲವೆಂಬುದು ಎಲ್ಲರಿಗೂ ಗೊತ್ತಿದೆ. ಯಾಕೆಂದರೆ ಹಿಂದೆ ಐದು ಪಕ್ಷೇತರ ಶಾಸಕರ ಅನರ್ಹತೆ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯವು ಸ್ಪೀಕರಿಗೆ ಛೀಮಾರಿ ಹಾಕಿ ಆ ಶಾಸಕರನ್ನು ಅರ್ಹರೆಂದು-ಸ್ಪೀಕರ್ ತೀರ್ಪಿಗೆ ವಿರುದ್ಧವಾಗಿ- ತೀರ್ಪು ನೀಡಿತ್ತು. ಆ ಸಂದರ್ಭದಲ್ಲಿ ಆತ್ಮಸಾಕ್ಷಿ ಉಳ್ಳ ಯಾರೇ ಆಗಿದ್ದರೂ ರಾಜಿನಾಮೆ ಕೊಡುತ್ತಿದ್ದರು. ಆದರೆ ಅವರು ಹಾಗೆ ಮಾಡಿರಲಿಲ್ಲ. ನಿಜ.ವಿಧಾನ ಸಭೆಯೆಂಬುದು ಸ್ಪೀಕರ್ ಕಾರ್ಯಕ್ಷೇತ್ರ. ಅಲ್ಲಿ ಅವರೇ ಸರ್ವೋಚ್ಛ . ಅವರು ನ್ಯಾಯಾಧೀಶರಿದ್ದಂತೆ. ಅವರು ಕೈಗೊಳ್ಳುವ ತೀರ್ಮಾನಗಳು ನ್ಯಾಯಾಧೀಶರು ನೀಡುವ ತೀರ್ಪುಗಳಿದ್ದಂತೆ. ಅಲ್ಲಿ ಸದನದ ಘನತೆಗೆ ಕುಂದು ತರುವಂತಹ ’ಅನ್ ಪಾರ್ಲಿಮೆಂಟರಿ ಪದ’ಗಳನ್ನು ಬಳಸುವಂತಿಲ್ಲ. ಒಂದು ವೇಳೆ ಅಕಸ್ಮತ್ತಾಗಿ ಬಳಸಿದರೆ, ಬಳಸಿದವರು ಅದಕ್ಕಾಗಿ ಕ್ಷಮೆ ಯಾಚಿಸಿ ಅಂತಹ ಪದಗಳನ್ನು ಕಡತದಿಂದ ತೆಗಿದು ಹಾಕುವುದು ಅಲ್ಲಿಯ ನಿಯಮ. ಈಗ ’ಪದ’ದ ಜಾಗದಲ್ಲಿ ’ಘಟನೆ’ ನಡೆದಿದೆ.ಈಗ ಏನು ಮಾಡಬೇಕು.? ವಿಧಾನ ಸಭೆಯ ಆವರಣದುಳಗೆ ಪೋಲಿಸರಿಗೂ ಪ್ರವೇಶವಿಲ್ಲ. ಪೋಲಿಸರು ಮಾಡುವ ಕೆಲಸವನ್ನು ಅಲ್ಲಿ ಬಿಳಿ ಸಮವಸ್ತ್ರವನ್ನು ತೊಟ್ಟ ಮಾರ್ಶಲ್ ಮತ್ತು ಅವರ ಸಿಬ್ಬಂದಿಗಳು ಮಾಡುತ್ತಾರೆ. ಮೊನ್ನೆ ಪೆ.೩ರಂದು ಸ್ಪೀಕರ್ ವಿರುದ್ಧ ಪ್ರತಿಭಟನೆ ಮಾಡಿದ ಗೂಳಿ ಹಟ್ಟಿ ಶೇಖರ್ ಅವರನ್ನು ಸದನದಿಂದ ಮಾರ್ಷಲ್ ಗಳು ಹೊರಗೆ ಕರೆದುಕೊಂಡು ಹೋದ ದೃಶ್ಯವನ್ನು ಒಮ್ಮೆ ನೆನಪಿಸಿಕೊಳ್ಳಿ. ವಕೀಲ ಧರ್ಮಪಾಲ ಗೌಡರೆಂಬವರು ಈ ಮೂವರು ಕಳಂಕಿತ ಮಾಜಿ ಸಚಿವರ ವಿರುದ್ಧ ಖಾಸಗಿ ದೂರನ್ನು ಕೊಟ್ಟಾಗ ವಿಚಾರಣೆಗೆ ಮುಂದಾದ ೮ನೇ ಎಸಿಎಂಎಂ ನ್ಯಾಯಾಲಯದೆದುರು ಪೋಲಿಸರು ಹೇಳಿದ್ದು ಇದನ್ನೇ ’ ಸದನದ ಒಳಗೆ ಪೋಲಿಸರಿಗೆ ಪ್ರವೇಶ ನಿಷಿದ್ಧ. ಸ್ಪೀಕರ್ ಅನುಮತಿ ಇಲ್ಲದೆ ಸಚಿವರನ್ನು ನಾವು ಪ್ರಶ್ನಿಸುವಂತಿಲ್ಲ’ ಹಾಗಾಗಿ ಮಾಜಿ ಸಚಿವರ ಮೇಲೆ ಮೊಕದ್ದಮೆಯನ್ನು ದಾಖಲಿಸಿಕೊಳ್ಳಲು ಪೋಲಿಸರಿಗೆ ಸಾಧ್ಯವಾಗಿಲ್ಲ. ಸ್ಪೀಕರ್ ಮನಸ್ಸು ಮಾಡಿದ್ದರೆ ತಮ್ಮ ವಿವೇಚನೆಯನ್ನು ಬಳಸಿ ಸದನದ ಘನತೆ ಗೌರವಗಳನ್ನು ಮಣ್ಣು ಪಾಲು ಮಾಡಿದ, ಅಂತರಾಷ್ಟ್ರೀಯ ಮಟ್ಟದಲ್ಲಿ ಕರ್ನಾಟಕದ ಮಾನವನ್ನು ಹರಾಜು ಹಾಕಿದ, ಮೇಲ್ನೋಟಕ್ಕೆ ತಪ್ಪಿಸ್ತರೆಂದು ಕಂಡ ಆ ಮೂವರು ಕಳಂಕಿತ ಶಾಸಕರ ಶಾಸಕತ್ವವನ್ನು ರದ್ದುಗೊಳಿಸಬಹುದಿತ್ತು ಆದರೆ ಅವರು ಹಾಗೆ ಮಾಡಲಿಲ್ಲ. ಆ ಸಚಿವರೇನೂ ಶಾಸನ ಸಭೆಗೆ ಹೊಸತಾಗಿ ಚುನಾಯಿತರಾದವರಲ್ಲ. ಆ ಸ್ಥಾನದ ಪಾವಿತ್ರ್ಯತೆಯನ್ನು ಅರಿತವರೇ ಆಗಿದ್ದಾರೆ. ಹಾಗಿರುವಾಗ ಅವರ ಬಗ್ಗೆ ಮೃದು ಧೋರಣೆ ತಳೆದದ್ದು ಎಷ್ಟರ ಮಟ್ಟಿಗೆ ಸರಿ? ಇಂಥ ಜವಾಬ್ದಾರಿಯುತ, ಪವಿತ್ರ ಸ್ಥಾನದಲ್ಲಿ ಎಂತೆಂಥ ಮಹನೀಯರು, ಘನತೆವೆತ್ತವರು ಕುಳಿತಿದ್ದರು ಎಂಬುದನ್ನೊಮ್ಮೆ ಜ್ನಾಪಿಸಿಕೊಳ್ಳಿ; ವೈಕುಂಠ ಬಾಳಿಗಾ, ಕೆ.ಎಚ್. ರಂಗನಾಥ್, ರಮೇಶ್ ಕುಮಾರ್ ಅಂತವರ ಜೊತೆ ಯಡಿಯೂರಪ್ಪನವರ ಲೌಡ್ ಸ್ಪೀಕರ್ ಎಂಬ ಆರೋಪ ಹೊತ್ತಿರುವ ಬೋಪಯ್ಯನವರನ್ನು ಹೋಲಿಸಿ ನೋಡಿ. ಆಗ ಗೊತ್ತಾಗುತ್ತದೆ ಈ ಕೊಡಗಿನ ಕಲಿಯ ಮಾತಿನಲ್ಲಿ ತೂಕವಿದೆಯೇ ಎಂದು. ಅವರ ಗುಡುಗು ಟುಸ್ ಎಂಬುದು ಸದನ ಸಮಿತಿಯ ರಚನೆಯಲ್ಲಿ ಬಹಿರಂಗಗೊಂಡಿದೆ. ಸದನದಲ್ಲಿ ಸೆಕ್ಸ್ ಸಿಡಿ ವೀಕ್ಷಣೆ ಪ್ರಕರಣದ ಸತ್ಯಾಸತ್ಯತೆಯನ್ನು ಅರಿಯಲು ಅವರು ರಚಿಸಿದ ಸದನ ಸಮಿತಿಯನ್ನು ನೋಡಿ; ಅಧ್ಯಕ್ಷರು ಬಿಜೆಪಿಯ ಸ್ರೀಶೈಲಪ್ಪ ವಿರೂಪಾಕ್ಷಪ್ಪ ಬಿದನೂರು. ಸದಸ್ಯರು, ಬಿಜೆಪಿಯ ಎಸ್.ಅರ್.ವಿಸ್ವನಾಥ್, ಬಿ.ಸುರೇಶ್ ಗೌಡ, ನೆಹರೂ ಓಲೆಕಾರ್ ಮತ್ತು ಕಾಂಗ್ರೇಸ್ ನ ಅಮರೇ ಗೌಡ ಬಯ್ಯಾಪುರ, ಡಾ.ಎಚ್.ಸಿ ಮಹಾದೇವಪ್ಪ.ಮತ್ತು ಜೆಡಿಎಸ್ ನ ದಿನಕರ್ ಶೆಟ್ಟಿ. ಅಧ್ಯಕ್ಷರಾದ ಶ್ರೀ ಶೈಲಪ್ಪ ಬಿದನೂರು ಅವರು ಎಂದೂ ಸದನದಲ್ಲಿ ಮಾತಾಡಿದವರೇ ಅಲ್ಲ. ಈ ಪ್ರಕರಣದಲ್ಲಿ ಅವರ ಸ್ಟ್ಯಾಂಡ್ ಏನಿದ್ದರೂ ಅದು ಬಸ್ ಸ್ಟ್ಯಾಂಡೇ ಇದ್ದೀತು. ಸುರೇಶ ಗೌಡರಂತೂ ಬಿಜೆಪಿ ಅಸ್ಥಾನದ ಹೊಗಳುಭಟ. ನೆಹರು ಓಲೆಕಾರ ಮತ್ತು ಎಸ್.ಅರ್.ವಿಶ್ವನಾಥರ ಬಗ್ಗೆ ಲೋಕಕ್ಕೇ ತಿಳಿದಿದೆ. ಇನ್ನು ಜೆಡಿಎಸ್ ನ ದಿವಾಕರ ಶೆಟ್ಟಿ ಪಾಪದವರು. ಕಾಂಗ್ರೇಸ್ ನ ಎಚ್.ಸಿ ಮಹಾದೇವಪ್ಪ ಇದೇ ಕೆಟಗೆರಿಗೆ ಸೇರಿದವರು. ಒಳ್ಳೆತನ ನಿಷ್ಟೂರ ತನಿಖೆಗೆ ಸಹಾಯಕವಾಗಲಾರದು. ಹಾಗಾಗಿ ಸದನ ಸಮಿತಿ ತನಿಖೆ ಹಳ್ಳ ಹಿಡಿಯುವುದರಲ್ಲಿ ಯಾವ ಸಂಶಯವೂ ಇಲ್ಲ. ಈ ನಡುವೆ ಕಾಂಗ್ರೇಸಿನ ಎಚ್.ಸಿ ಮಹಾದೇವಪ್ಪ ಮತ್ತು ಅಮರೇ ಗೌಡ ಬೈಯ್ಯಾಪುರ ಅವರು ತಾವು ಸದನ ಸಮಿತಿಯಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಬಹುಶಃ ವಿರೋಧ ಪಕ್ಷಗಳಿಂದ ಇಂಥ ಅಸಹಕಾರವನ್ನು ಸ್ಪೀಕರ್ ಮೊದಲೇ ನಿರೀಕ್ಷಿಸಿರಬೇಕು. ಇಲ್ಲವಾದರೆ ಏಳು ಮಂದಿ ಇರುವ ಸದನ ಸಮಿತಿಯಲ್ಲಿ ಆಡಳಿತ ಪಕ್ಷದ ನಾಲ್ಕು ಮಂದಿ ಸದಸ್ಯರಿರುವಾಗ ವಿರೋಧ ಪಕ್ಷದ ಸಮರ್ಥ ವ್ಯಕ್ತಿಯೊಬ್ಬರನ್ನು ಅಧ್ಯಕ್ಷರನ್ನು ಮಾಡಬೇಕಾಗಿತ್ತು. ಅವರು ಹಾಗೆ ಮಾಡಲಿಲ್ಲ. ಘಟನೆ ನಡೆದ ಪೆ.೭ರಿಂದ ಸಮಿತಿ ನೇಮಿಸಿದ ಪೆ.೧೬ ರ ನಡುವೆ ಬೋಪಯ್ಯನವರ ಹುಟ್ಟಿದೂರಿನ ಕಾವೇರಿನದಿಯಿಂದ ತಮಿಳುನಾಡಿಗೆ ಸಾಕಷ್ಟು ನೀರು ಹರಿದು ಹೋಗಿದೆ. ಇಂಥ ಸಮಿತಿ ಎಂಥ ವರಧಿ ನೀಡಬಹುದು? ರಾಜಕಾರಣಿಗಳಿಗೀಗ ಮಾಧ್ಯಮ ತಮ್ಮ ಪರಮ ವೈರಿಯಂತೆ ಕಾಣಿಸುತ್ತಿದೆ. ಹಾಗಾಗಿ ಎಲ್ಲರೂ ಸೇರಿ ಮಾಧ್ಯಮದ ವರಧಿಗಾರಿಕೆಯ ಮೇಲೆ ನಿಯಂತ್ರಣ ಹೇರುವ ಬಗ್ಗೆ ಷಡ್ಯಂತರ ರೂಪಿಸಿ ನೀತಿ ನಿಯಾಮಾವಳಿಗಳ ಪಟ್ಟಿಯನ್ನು ನೀಡಬಹುದೇ ಹೊರತು ಮಾಜಿ ಸಚಿವರ ಬಗ್ಗೆ ಕ್ರಮ ಕೈಗೊಳ್ಳುವ ಸೂಚನೆಯಂತೂ ಸಧ್ಯದ ಪರಿಸ್ಥಿಯಲ್ಲಿ ಕಾಣುತ್ತಿಲ್ಲ. ಇದಕ್ಕೆ ಬಲವಾದ ಸಾಕ್ಷಿ ಎಂದರೆ ಮೊನ್ನೆ ಚಿಕ್ಕ ಮಗಳೂರಿನಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್ ಸುರೇಶ್ ಕುಮಾರ್ ಹೇಳಿದ ಮಾತುಗಳು; ಅಲ್ಲಿ ಅವರು; ”ವಿಧಾನ ಮಂಡಲ ಕಲಾಪಗಳನ್ನು ಖಾಸಗಿ ವಾಹಿನಿಗಳು ನೇರವಾಗಿ ಸೆರೆ ಹಿಡಿದು ಪ್ರಸಾರ ಮಾಡುವುದನ್ನು ನಿರ್ಭಂದಿಸುವ ಬಗ್ಗೆ ಸರ್ಕಾರ ಗಂಭೀರವಾಗಿ ಚಿಂತಿಸುತ್ತಿದೆ” ಎಂದು ಹೇಳಿದ್ದು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಂತೂ ಕಳಂಕಿತರನ್ನು ಸಮರ್ಥಿಸಿಕೊಂಡ ಪರಿ ನೋಡಿ; ”ಲಕ್ಷಣ ಸವದಿ ಮತ್ತು ಸಿ.ಸಿ ಪಾಟೀಲ್ ಅತ್ಯುತ್ತಮ ಸಚಿವರಾಗಿದ್ದರು. ಕೃಷ್ಣ ಪಾಲೇಮಾರ್ ಸಹ ಒಳ್ಳೆಯ ಕೆಲಸ ಮಾಡಿದ್ದರು. ತಿಂಗಳಲ್ಲಿ ಸತ್ಯ ಹೊರ ಬೀಳಲಿದೆ.ಈ ಘಟನೆ ಮಾಧ್ಯಮಗಳ ಸೃಷ್ಟಿ. ನಿಜವಾದ ಅಪರಾಧಿ ಯಾರು ಎಂಬುದು ಕೆಲವೇ ದಿನಗಳಲ್ಲಿ ಗೊತ್ತಾಗುತ್ತದೆ. ಮೂವರು ಮಾಜಿ ಸಚಿವರಿಗೂ ಅವರ ಕ್ಷೇತ್ರದಲ್ಲಿ ಯಾವ ತೊಂದರೆಯೂ ಆಗುವುದಿಲ್ಲ. ಅವರ ಗ್ರಹಚಾರ ಸರಿ ಇರಲಿಲ್ಲ. ಕೆಟ್ಟ ಕಾಲ ಅಷ್ಟೇ” ಎಂದು ಮಂಗಳೂರಿನಲ್ಲಿ ಹೇಳಿದ್ದಾರೆ. ಇನ್ನು ಪಕ್ಷದ ಅಧ್ಯಕ್ಷ ಈಶ್ವರಪ್ಪನವರ ಆತ್ಮ ವಿಶ್ವಾಸವನ್ನು ನೋಡಿ; ” ಸದನದಲ್ಲಿ ನೀಲಿಚಿತ್ರ ವೀಕ್ಷಣೆ ಆರೋಪಕ್ಕೆ ಗುರಿಯಾಗಿರುವ ಮೂವರು ಮಾಜಿ ಸಚಿವರ ವಿರುದ್ಧ ಪಕ್ಷ ತಕ್ಶಣ ಕ್ರಮ ಕೈಗೊಳ್ಳುವುದಿಲ್ಲ. ಸದನ ಸಮಿತಿ ವರಧಿಯೇ ಅಂತಿಮ. ಹೀಗಾಗಿ ಈ ಮೂವರೂ ಶಾಸಕರೂ ಕಳಂಕತ್ವದಿಂದ ಹೊರ ಬರುತ್ತಾರೆ ಎಂಬ ವಿಶ್ವಾಸ ನಮ್ಮಲ್ಲಿದೆ” ಈ ಮೂವರ ಹೇಳಿಕೆಗಳು ಅಧಿಕೃತ, ಯಾಕೆಂದರೆ ಇವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇದಕ್ಕೆಲ್ಲಾ ಸಂವಿಧಾನವನ್ನು ನಂಬಿರುವ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಂಬಿಕೆಯನ್ನಿಟ್ಟಿರುವ ನಮ್ಮಂಥ ಪಾಮರರು ಏನು ಹೇಳಲು ಸಾಧ್ಯ? ಬಹುಶಃ ಇದನ್ನೆಲ್ಲಾ ನೋಡಿ ಪ್ರತಿಭಟಿಸಲಾಗದೆ, ತಮ್ಮ ಪಕ್ಷ ನೈತಿಕವಾಗಿ ಕುಸಿಯುತ್ತಿರುವುದನ್ನು ಕಂಡು ಒಳಗೊಳಗೆ ಸಂಕಟಪಟ್ಟ ಮೃದು ಮಾತಿನ, ಸುಸಂಸ್ಕೃತ, ಸಜ್ಜನ ರಾಜಕಾರಣಿ ವಿ.ಎಸ್. ಆಚಾರ್ಯ ಅವರು ಎದೆಯೊಡೆದು ಇಹಲೋಕ ತ್ಯಜಿಸಿದರೇನೋ…! ಶೌರ್ಯಕ್ಕೆ, ಕೆಚ್ಚಿಗೆ, ಹೋರಾಟಕ್ಕೆ ನಮಗೆ ನೆನಪಾಗುವುದು ಕೊಡಗರು, ನಮ್ಮ ಸೇನೆಯ ಮೊದಲ ಜನರಲ್ ಮೇಜರ್ ಪೀಲ್ಡ್ ಮಾರ್ಷಲ್ ಕರಿಯಪ್ಪ ಅವರು. ಸೇನೆಯಲ್ಲಿ ಗೂರ್ಖಾ ರೆಜಿಮೆಂಟ್ ಇದ್ದ ಹಾಗೆ ಕೂರ್ಗ್ ರೆಜಿಮೆಂಟ್ ಇದೆ. ಇಂಥ ಮಣ್ಣಿನಲ್ಲಿ ಹುಟ್ಟಿದ ಬೋಪಯ್ಯನವರು….ಹಾಗೆ ವರ್ತಿಸುತ್ತಿದ್ದಾರಲ್ಲಾ..! ಹುಟ್ಟಿದ ಮಗು ಶೌರ್ಯವಂತನಾಗಿ ಬೆಳೆಯಲಿ ಎಂದು ಹುಲಿ ಹಾಲನ್ನು ತಂದು ಕುಡಿಸುವ ಪರಂಪರೆ ಆ ಮಣ್ಣಿನದು. ಈಗ ಆ ಪರಂಪರೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಅ ಜಿಲ್ಲೆಯ ಪಕ್ಕದ ಜಿಲ್ಲೆ ನಮ್ಮದು. ನಮ್ಮಲ್ಲಿ ಈಗಲೂ ಗಂಡು ಮಗುವಿಗೆ ಹುಲಿ ತುಪ್ಪವನ್ನು ನೆಕ್ಕಿಸುವ ಪದ್ಧತಿಯಿದೆ. ನನ್ನ ಮಗನಿಗೆ ನೆಕ್ಕಿಸಿದ್ದಾರೆ.. ನಾನು ಕಾಲೇಜಿನಲ್ಲಿದ್ದಾಗ ಪ್ರವಾಸ ಬಂದಾಗ ವಿಧಾನ ಸಭೆಯ ಕಲಾಪವನ್ನು ವೀಕ್ಷಿಸಲು ಕರೆದುಕೊಂಡು ಹೋಗಿದ್ದರು. ಆಗ ನಾವು ಒಂದು ಪೂಜಾಸ್ಥಾನದ ಒಳಗೆ ಪ್ರವೇಶಿಸುವಷ್ಟೇ ಭಯ ಭಕ್ತಿಯಿಂದ ಅದರೊಳಗೆ ಪ್ರವೇಶಿಸಿದ್ದೆವು. ಮಾತ್ರವಲ್ಲ ಆ ಸನ್ನಿದಾನಕ್ಕೆ ಅಗೌರವ ತೋರಬಾರದೆಂದು ನಮ್ಮನ್ನು ಕಾಲು ಮೇಲೆ ಕಾಲು ಹಾಕಿ ಕುಳಿತುಕೊಳ್ಳಬಾರದೆಂದು ನಮ್ಮ ಲೆಕ್ಚರರ್ ತಾಕೀತು ಮಾಡಿದ್ದರು. ಆ ಗೌರವದ ಭಾವನೆ ಇಂದಿಗೂ ನನ್ನ ಮನದಲ್ಲಿದೆ. ಆದರೆ ಮೊನ್ನೆ ಸದನದಲ್ಲಿ ನಡೆದ ಘಟನೆ ಈ ಸ್ಥಳದ ಪಾವಿತ್ರ್ಯತೆಯನ್ನು ಮಲೀನಗೊಳಿಸಿದೆ. ನಮ್ಮ ಎಳೆಯ ಮಕ್ಕಳ ಮೇಲೆ ಈ ಪ್ರಕರಣ ಯಾವ ರೀತಿಯ ಪರಿಣಾಮ ಬೀರಬಹುದು ಎಂಬುದರ ಬಗ್ಗೆ ಯಾರೂ ಚಿಂತಿಸಿದಂತಿಲ್ಲ. ಸೆಕ್ಸ್ ಸೀಡಿ ವೀಕ್ಷಣೆ ಪ್ರಕರಣದಲ್ಲಿ ಆಡಳಿತ ಪಕ್ಷ, ವಿರೋಧ ಪಕ್ಷ ಸೇರಿದಂತೆ ಒಟ್ಟು ರಾಜಕಾರಣವೇ ’ನಾ ಹೊಡೆದ ಹಾಗೆ ಮಾಡುತ್ತೇನೆ, ನೀ ಅತ್ತ ಹಾಗೆ ಮಾಡು’ ಎಂಬ ರೀತಿಯಲ್ಲಿದೆ. ನಮ್ಮಲ್ಲಿ ಒಂದು ಮಹಿಳಾ ಆಯೋಗವಿದೆ. ಅದಕ್ಕೊಬ್ಬ ಅಧ್ಯಕ್ಷೆಯಿದ್ದಾರೆ. ಅವರು ಕನಿಷ್ಟ ಪಕ್ಷ ಒಂದು ಹೇಳಿಕೆಯನ್ನಾದರೂ ನೀಡಬಹುದಿತ್ತು.ಅದನ್ನೂ ಮಾಡಲಿಲ್ಲ. ಮಹಿಳಾ ಸಂಘಟನೆಗಳೂ ತುಟಿ ಬಿಚ್ಚಲಿಲ್ಲ. ಒಬ್ಬ ಮಹಿಳೆಯಾಗಿ ಪುರುಷ ಮನಸ್ಥಿತಿಯ ಈ ಕಳಂಕಿತ ಲಾಲಸೆಯನ್ನ ನಾನು ತೀವ್ರವಾಗಿ ಪ್ರತಿಭಟಿಸುತ್ತೇನೆ]]>

‍ಲೇಖಕರು G

February 19, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಸಾಹಿತ್ಯ ಸಮ್ಮೇಳನ ಈಗ ಯಾಕೆ ಬೇಕು??

ಡಿ ಎಸ್ ರಾಮಸ್ವಾಮಿ ಕನ್ನಡ ಸಾಹಿತ್ಯ ಪರಿಷತ್ತನ್ನು ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆ ಎಂದೂ ಕರೆಯುವುದು ವಾಡಿಕೆ. ಕನ್ನಡ ಭಾಷೆಯು ಕೊಡ ಮಾಡಿದ...

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ನಿಜವಾದ ಜಾತ್ಯಾತೀತರಿಗೊಂದು ನಿಗಮ ಸ್ಥಾಪನೆ ಯಾಕಿಲ್ಲ?

ವಿ ಎಲ್‌ ನರಸಿಂಹಮೂರ್ತಿ ನಮ್ಮ ಘನತೆವೆತ್ತ ರಾಜ್ಯ ಸರ್ಕಾರ ಒಂದಾದ ಮೇಲೊಂದರಂತೆ ಜಾತಿಗೊಂದು, ಸಮುದಾಯಕ್ಕೊಂದು ಅಭಿವೃದ್ಧಿ ನಿಗಮ ಸ್ಥಾಪನೆ...

7 ಪ್ರತಿಕ್ರಿಯೆಗಳು

 1. ಸುಧಾ ಚಿದಾನಂದಗೌಡ.

  ಪ್ರತಿಭಟಿಸುವುದೆಂದರೆನೆಂದೇ ತಿಳಿಯದ ಈ ಮಹಿಳೆಯರಿದ್ದಾರಲ್ಲ
  ಇವರದು ಪುರುಷ ಮನಸ್ಥಿತಿ ಕೂಡ ಅಲ್ಲ-ವಿಕೃತ, ಅಸಹ್ಯಕರ ಮನಸ್ಥಿತಿ.
  ನಿಮ್ಮ ಪ್ರತಿಭಟನೆಗೆ ನನ್ನ ಸಂಪೂರ್ಣ ಬೆಂಬಲವಿದೆ.
  ಸುಧಾ ಚಿದಾನಂದಗೌಡ

  ಪ್ರತಿಕ್ರಿಯೆ
 2. prakash hegde

  ನೀಲಿ ಚಿತ್ರಾವಳಿ ನೋಡಿದ ಘಟನೆ ಬಗೆಗೆ ಸದನ ಸಮೀತಿಯಿಂದ ನಿಷ್ಪಕ್ಷಪಾತ ವರದಿ ಬರಬಹುದೆ…?
  ಅಂಥಹ ಭ್ರಮೆಯಲ್ಲಿ ಯಾರೂ ಇಲ್ಲ…
  ನಾವೂ ಸಹ…
  ನನಗೆ ಗೊತ್ತು ನೀವೂ ಸಹ ಇಲ್ಲ ಅಂತ…
  ಎಲ್ಲವೂ ಕಣ್ಣೆರೊಸುವ ತಂತ್ರ…
  ಯಾಕೆಂದರೆ ಜನರ ನೆನಪಿನ ಶಕ್ತಿ ಅಲ್ಪ..
  ಇದು ನಮಗಿಂತ ರಾಜಕೀಯದವರಿಗೆ ಬಲು ಚೆನ್ನಾಗಿ ಗೊತ್ತು…

  ಪ್ರತಿಕ್ರಿಯೆ
 3. jagadishkoppa

  ಉಷಾ, ಈ ಸರ್ಕಾರದ ಬಗ್ಗೆ, ಈ ಜನಪ್ರತಿನಿಧಿಗಳ ಬಗ್ಗೆ ನೀವು ಇನ್ನೂ ನಂಬಿಕೆ ಇಟ್ಟುಕೊಂಡಿದ್ದಾರಾ? ಶೋಭಾ ಕೆರಂದ್ಲಾಜೆ ಯಾವ ನಾಚಿಕೆ ಮಾನ ಮರ್ಯಾದೆ ಇಲ್ಲದೆ ದೇಗುಲಗಳಲ್ಲಿ ಯಡ್ಡಿ ಹೆಸರಿನಲ್ಲಿ ಅರ್ಚನೆ ಮಾಡುತ್ತಾಳೆ, ಯಜ್ನ, ಯಾಗಗಳಲ್ಲಿ ಜೊತೆಯಾಗಿ ಕೂರುತ್ತಾಳೆ, ರಾಧಿಕ ಎಂಬ ನಟಿ ಕುಮಾರಸ್ವಾಮಿ ಹೆಸರನ್ನು ತನ್ನ ಹೆಸರಿನ ಜೊತೆ ಸೇರಿಸಿಕೊಂಡು ಲಕ್ಕಿ ಎಂಬ ಸಿನೆಮಾಕ್ಕೆ ಜಾಹಿರಾತು ನೀಡುತ್ತಾಳೆ. ಇದನ್ನು ಹೇಗೆ ಅರ್ಥೈಸುವುದು? ಕನ್ನಡದ ಯಾವುದಾದರು ಮಾಧ್ಯಮ ಈ ಬಗ್ಗೆ ಪ್ರಶ್ನೆ ಎತ್ತಿದೆಯಾ?
  ಕಿತ್ತೊದವರಿಂದ ಕಿತ್ತೊದವರಿಗಾಗಿ ಈ ಸುದ್ಧಿಗಳು ಎಂದು ಒಪ್ಪಿಕೊಂಡು ನಾವು ಸುಮ್ಮನಿರೋಣವೆ?
  ಜಗದೀಶ್ ಕೊಪ್ಪ

  ಪ್ರತಿಕ್ರಿಯೆ
 4. ಎಚ್. ಸುಂದರ ರಾವ್

  ಪ್ರತಿಭಟನೆ ಸರಿಯೇ. ಆದರೆ ವಿಧಾನಸಭೆ ಪ್ರಾರಂಭವಾದಾಗಿನಿಂದಲೂ, ಸಭೆಯ ಕಾರ್ಯಕಲಾಪಗಳನ್ನು ಗಂಭೀರವಾಗಿ ನಡೆಸಿಕೊಂಡು ಬಂದಿದ್ದರೆ, ವಿಷಯ ಇಲ್ಲಿಗೆ ಮುಟ್ಟುತ್ತಿರಲಿಲ್ಲವೋ ಏನೋ. ಸದನದಲ್ಲಿ ನಿದ್ರೆ ಮಾಡುವುದು, ಕ್ರಿಕೆಟ್ ನೋಡುವುದು-ಕೇಳುವುದು, ಚರ್ಚೆಗೆ ಸಂಬಂಧವೇ ಇಲ್ಲದವರಂತೆ ತಮ್ಮೊಳಗೆ ಬೇರೆಯೇ ಮಾತಾಡುತ್ತ ಕೂರುವುದು, ಎಲ್ಲಕ್ಕಿಂತ ಹೆಚ್ಚಾಗಿ ಸದನಕ್ಕೆ ಹಾಜರಾಗದೇ ಇರುವುದು ಇಂಥ ಎಲ್ಲವನ್ನೂ ಸಭಾಧ್ಯಕ್ಷರೆನಿಸಿಕೊಂಡವರು ಸಹಿಸಿಕೊಂಡೇ ಬಂದರು; “ಎಜಸ್ಟ್” ಆದರು. ಮೊದಲು ಅಧ್ಯಕ್ಷರಾದವರು ನಿದ್ದೆ ಮಾಡಿದವರನ್ನೋ, ಹರಟೆ ಹೊಡೆದವರನ್ನೋ ಶಾಸಕತ್ವದಿಂದ ಅನರ್ಹಗೊಳಿಸಿದ್ದರೆ, ಮಂತ್ರಿಗಳು, ಶಾಸಕರು ಎಲ್ಲ ಎಚ್ಚರದಿಂದಿರುತ್ತಿದ್ದರು. ಜನತೆಯೂ ಆ ಕಡೆ ಗಮನ ಕೊಡಲಿಲ್ಲ. ಈಗ ಎಲ್ಲ ಕೈಮೀರಿದೆ. ಆಗಲಿ ಈಗಲಾದರೂ ಪ್ರತಿಭಟನೆ ಬಂದಿದೆ. ಸಂತೋಷ. ಪ್ರತಿಭಟಿಸುವವರೊಂದಿಗೆ ನಾನೂ ಇದ್ದೇನೆ.
  ನನಗೆ ಎರಡು ಕುತೂಹಲಗಳಿವೆ:
  ೧, ಯಡಿಯೂರಪ್ಪ ಕೇಳಿದರಂತೆ ಪತ್ರಕರ್ತರಿಗೆ/ಮಾಧ್ಯಮದವರಿಗೆ: “ನೀವು ಮನೇಲಿ ನೋಡಲ್ವ?” ಅಂತ. ಪತ್ರಕರ್ತರ/ಮಾಧ್ಯಮದವರ ಉತ್ತರ ಏನು?
  ೨, ಒಂದು ವೇಳೆ ನೀಲಿಚಿತ್ರಗಳ ಪ್ರಸಾರವನ್ನು ಸರಕಾರ ಅನುಮತಿಸಿದರೆ, ನಮ್ಮ ದೃಶ್ಯ ಮಾಧ್ಯಮಗಳು ಅವುಗಳನ್ನು ಪ್ರಸಾರ ಮಾಡುತ್ತವೆಯೆ ಅಥವಾ “ಅದು ಅನೈತಿಕ” ಎಂಬ ನಿಲುವಿಗೆ ಬದ್ಧರಾಗಿ ಪ್ರಸಾರ ಮಾಡದೆ ಉಳಿಯುತ್ತವೆಯೆ?

  ಪ್ರತಿಕ್ರಿಯೆ
 5. Rajakumara

  avadhiayallina ee lekhanakke blufilmina video agli athava hot photovannagli kottilvalla annode samadhana kanree
  -rajakumara

  ಪ್ರತಿಕ್ರಿಯೆ
 6. ಸಂದೀಪ್ ಕಾಮತ್

  ವೀಡಿಯೋ ಮಾಡಿದವರೇ ಮಂತ್ರಿಯಾಗಿ ಆರಾಮಾಗಿದ್ದಾರೆ. ಇನ್ನು ವೀಡಿಯೋ ನೋಡಿದವರಿಗೆ ಶಿಕ್ಷೆಯಾಗುತ್ತಾ?

  ಪ್ರತಿಕ್ರಿಯೆ
 7. D.RAVI VARMA

  ಅದಂ ನಿಮ್ಮ ಕಾಳಜಿಗೆ ನಮಸ್ಕಾರಾ ,ನಿಮಗೆ ಗೊತ್ತು ಇದೆಲ್ಲ ಕಣ್ಣೊರೆಸುವ ತಂತ್ರ ಎಂದು, ನಾವು ನೀವು ಇದರ ಬಗ್ಗೆ ತಲೆ ಕೆಡಿಸಿಕೊಂಡಿದ್ದೇವೆ ತಪ್ಪಿತಸ್ತಿರಿಗೆ ಗೊತ್ತು ಏನು ಆಗುವುದಿಲ್ಲವೆಂದು ದಾಸರು ಹೇಳಿದ ಹಾಗೆ ಉತ್ತಮ ಪ್ರಭುತ್ವ ಎನ್ನುವುದು ಲೊಳಲೊಟ್ಟೆ ಎಂದು.ನನ್ನ ಗೆಳೆಯ ಒಬ್ಬ ಮ್.ಎಲ್ ಎ ಇದಾನೆ. ಅವನು ಕುಡಿದಾಗ ಅಲ್ಲಿ ವಿದಾನ ಸಭಾ ಸದಸ್ಯರ ರೂಂ ಗಳಲ್ಲಿ ನಡೆಯುವ ವಿಷಯಗಳು ಕೇಳಿದ್ರೆಆಶ್ಚರ್ಯ ಆಗುತ್ತೆ ಇಲ್ಲಿ ಎಲ್ಲವು ನಡೆಯುತ್ತೆ,ಆದರೆ ವರದಿ ಆಗೋಲ್ಲ,ಏಕೆಂದರೆ ಪತ್ರಕರ್ತರು ಕೂಡ ಹರಜಾಗಿದ್ದರೆ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: