ಊಟವಲ್ಲ-ಉಪ್ಪಿನಕಾಯಿ !

ಡಾ ಎಚ್ ಕೆ ರಂಗನಾಥ್ ರಂಗ ಕಲೆಗೆ ಕೊಟ್ಟ ಆಯಾಮ ಹಿರಿದು. ಬೆಂಗಳೂರು ವಿಶ್ವವಿದ್ಯಾಲಯದ ಪ್ರದರ್ಶಕ ಕಲೆಗಳ ವಿಭಾಗದ ಮುಖ್ಯಸ್ಥರಾಗಿದ್ದ ಇವರು ವಿಧ್ಯಾರ್ಥಿಗಳ ಮನ ಗೆದ್ದಿದ್ದರು.

ತಮ್ಮ ವಿದೇಶ ಪ್ರವಾಸದ ಅನುಭವಗಳನ್ನು ಒಳಗೊಂಡ ‘ಪರದೇಸಿಯಾದಾಗ…’ಕೃತಿ ಈಗ ಮರುಮುದ್ರಣಗೊಂಡಿದೆ. ವಸಂತ ಪ್ರಕಾಶನ ಹೊರತಂದಿರುವ ಈ ಕೃತಿಯ ಒಂದು ಸ್ವಾರಸ್ಯಕರ ಭಾಗ ನಿಮಗಾಗಿ ಇಲ್ಲಿದೆ-

paradesiyadga-rangnath2ನಮ್ಮ ಸಾಂಪ್ರದಾಯಿಕ ಜಾನಪದ ಸಂಗೀತ, ನಾಟಕ,ನೃತ್ಯ ಪ್ರಕಾರಗಳಲ್ಲಿ ಎಚ್ಚರಿಕೆಯಿಂದ ಆರಿಸಿದ ಕೆಲವನ್ನು ಆಧುನಿಕ ಪ್ರಚಾರಮಾಧ್ಯಮವನ್ನಾಗಿ, ಬಹು ತೃಪ್ತಿಕರವಾಗಿ ಬಳಸಬಹುದು ಎಂಬ ವಿಷಯದ ಬಗೆಗೆ ದಿಲ್ಲಿಯ ವಿಜ್ಞಾನಭವನದಲ್ಲಿ ಘನಘೋರ ಭಾಷಣ ಬಿಗಿದಿದ್ದೆ. ಉದಾಹರಣೆಗಾಗಿ ಒಂದೆರಡು ಗೀತೆಗಳನ್ನು ಹಾಡಿದೆ. ಜಾನಪದ ನಾಟಕದ ವಿದೂಷಕನ ಪಾತ್ರದ ಮಾತುಗಳನ್ನು ಉದಾಹರಿಸಿ ಆಡಿದ್ದೆ. ದೃಷ್ಟಾಂತಗಳನ್ನು ಕೊಟ್ಟೆ.

ಅದೇ ತಪ್ಪಾಯಿತು ! ಆ ಸಂಜೆಗೇ ಮಂತ್ರಾಲಯದಿಂದ ಹಿರಿಯ ಅಧಿಕಾರಿ ಹರೀಶ್ ಖನ್ನ ಕರೆ ಕಳುಹಿಸಿದರು. ಹೀಗೆ ನಮ್ಮಲ್ಲಿ ನಡೆಯುತ್ತಿರುವ ಕೆಲಸದ ಬಗೆಗೆ ಖಚಿತವಾಗಿ ಹೇಳಿ, ಅಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಅಭ್ಯಾಸ ಮಾಡಿಕೊಂಡು, ಈಜಿಪ್ಟ್, ಇರಾನ್, ನೈಜಿರಿಯಾ, ಘಾನಾ, ರುಮೆನಿಯಾ, ಫಿಲಿಪೀನ್ಸ್, ಇಂಡೋನೇಷಿಯಾಗಳಲ್ಲಿ ಪ್ರವಾಸ ಮಾಡಿ, ಬಂದ ಮೇಲೆ ವರದಿ ಒಪ್ಪಿಸಿ ಎಂದು ಮಂತ್ರಾಲಯದ ಆರ್ಡರ್ ಕೊಟ್ಟರು. ಆ ಪ್ರವಾಸದದ ಎಲ್ಲ ಖರ್ಚು ವೆಚ್ಚ ಯುನೆಸ್ಕೋ ವಹಿಸುತ್ತದೆ ಎಂದರು! ಏಳೆಂಟು ರಾಷ್ಟ್ರಗಳಿಗೆ ಭೆಟ್ಟಿ! ಸಾಲದಕ್ಕೆ ಪ್ರವಾಸದ ಹಾದಿಯಲ್ಲಿ ರೋಂ, ಅಥೆನ್ಸ್, ಪ್ಯಾರಿಸ್ ಗಳಿಗೆ ಏರ್ ಲೈನ್ಸ್ ವತಿಯಿಂದ ಒಂದು ಎರಡು ದಿನಗಳ ವಾಸ್ತವ್ಯ! ಬೇಕೆನಿಸಿದರೆ ಲಂಡನ್ನಿಗೂ ಭೆಟ್ಟಿ ! ಅಲ್ಲಿಂದ ಒಂದು ವರದಿ ಒಪ್ಪಿಸಿದ ನಂತರ ಅಮೆರಿಕಾ!

ನನ್ನ ಕಣ್ಣ ಬೇಳೆ ಮೇಲಕ್ಕೆ ಸಿಕ್ಕಿಕೊಂಡಿತು.

ನಲವತ್ತು ವರುಷಗಳ ಕಾಲ, ಅತ್ತಿತ್ತ ಹೋಗದೆ, ಮೈಸೂರು, ಬೆಂಗಳೂರು, ಕೋಲಾರ, ಧಾರವಾಡಗಳಲ್ಲಿ ಉಳಿದು ಬೆಳೆದಿದ್ದವನು. ಆನಂತರದ ಐದು ವರುಷಗಳಲ್ಲಿ ದಿಲ್ಲಿಗೆ, ವರ್ಷಕ್ಕೆರಡು ಪ್ರವಾಸ ! ಈಗ ಇದ್ದಕ್ಕಿದ್ದಂತೆ ಹತ್ತೂ ದೇಶಗಳನ್ನು ಸುತ್ತಿ ಬಾ ಎಂದರೆ?

ಸಿಕ್ಕಿಕೊಂಡಿದ್ದ ಉಸಿರನ್ನು ಬಿಡಿಸಿಕೊಂಡು ಖನ್ನರಿಗೆ ವಂದನೆ ಸಲ್ಲಿಸಿ ಮಾರನೆಯ ದಿನ ಮೋದಿ ಕಾಲೋನಿಯ ಯುನೆಸ್ಕೊ ಕಛೇರಿಗೆ ತೆರಳಿ ಸುತ್ತು ಪ್ರವಾಸದ ವಿಮಾನಯಾನದ ಭಾರೀ ಟಿಕೆಟ್ಟನ್ನೂ, ಪಡೆದುಕೊಂಡು, ನನ್ನ ತಮ್ಮ ರಾಮು ಮನೆಗೆ ಬಂದೆ.

ಮೂರನೆಯ ದಿನ ನನ್ನ ಮೊದಲ ಪಾಶ್ಚಾತ್ಯ ಪ್ರಯಾಣ !

ಮಾರನೆಯ ದಿನ ನಮ್ಮ ಮಿನಿಸ್ಟ್ರಿಯಿಂದ, ನನ್ನ ಪ್ರವರವನ್ನೂ,ಪ್ರವಾಸದ ಉದ್ದೇಶವನ್ನೂ ವಿವರವಾಗಿ ತಿಳಿಸಿ ಆ ಎಲ್ಲ ರಾಷ್ಟ್ರಗಳ ನಮ್ಮ ದೂತಾವಾಸ(ಅಬ್ಬ !)ಗಳಿಗೂ ಯುನೆಸ್ಕೋ ಕಛೇರಿಗಳಿಗೂ ಕೇಬಲ್ ಗಳನ್ನೂ ಕಳುಹಿಸಲಾಯಿತು. ನನಗೆ ಅವಶ್ಯಕವಾದ ನೆರವು ನೀಡುವುದಲ್ಲದೆ ನನ್ನನ್ನೂ ಸ್ವಾಗತಿಸಿ ಊಟ ಉಳಿವುಗಳ ಏರ್ಪಾಟು ಮಾಡಿ ಮತ್ತೆ ವಿಮಾನಕ್ಕೆ ಹತ್ತಿಸಿ ಕಳುಹಿಸಿಕೊಡುವ ಹೊಣೆಗಾರಿಕೆಯನ್ನು ವಹಿಸಲಾಯಿತು. ಅಫಿಷಿಯಲ್ ಪಾಸ್ ಪೋರ್ಟ್, ಆ ಎಲ್ಲ ದೇಶಗಳ ವೀಸಾಗಳೊಂದಿಗೆ ಕೈಸೇರಿತು.

ಸರಿ,ಬಟ್ಟೆಗಳನ್ನು ಡ್ರೈಕ್ಲೀನ್ ಮಾಡಿಸಿ, ನೋಡಿದೊಡನೆ ಮುತ್ತಿಡಬೇಕೆನ್ನುವಷ್ಟು ಥಳಥಳಿಸುತ್ತಿದ್ದ ಶೂಗಳನ್ನೂ, ಕಂಡೊಡನೆ ಎತ್ತಿಕೊಳ್ಳಬೇಕೆನ್ನಿಸುವಷ್ಟು ಅಂದವಾದ ಸೂಟ್ ಕೇಸನ್ನೂ ನಮ್ಮ ರಾಷ್ಟ್ರದ ರಾಜಧಾನಿಯ ಹೆಸರಾಂತ ಚಾಂದನೀಚೌಕದಲ್ಲಿ ಕೊಂಡು ಪ್ಯಾಕ್ ಮಾಡಿದೆ. ಆರು ಷರಟು, ಒಳ್ಳೆಯ ಒಂದೇ ಸೂಟು, ಉಳಿದೆಲ್ಲ ಒಳಬಟ್ಟೆ, ಟವಲು, ಕರವಸ್ತ್ರಗಳು, ಹೊಸ ಬಾಚಣಿಗೆ, ಪುಟ್ಟ ಕನ್ನಡಿ, ಶೇವಿಂಗ್ ಸೆಟ್ಟು-ಸರಿ, ನಿಮಗೆ ಅದನೆಲ್ಲ ಹೇಳಬೇಕೆ? ಹತ್ತೂರು ಸುತ್ತಾಡಿ ಬಂದವರು ನೀವು !

ಹೋದಲ್ಲಿ ಏನು ಸಿಕ್ಕುತ್ತದೊ-ಏನಿಲ್ಲವೋ! ಮನೆಯಲ್ಲಿ ರಾಮು,ಸರೋಜ,ಚಿತ್ರಾ,ನಂದಿತಾ ಇವರ ರೌಂಡ್ ಟೇಬಲ್ ನಡೆಯಿತು. ಕಡೆಯ ಪಕ್ಷ, ನಮ್ಮ ಸಂಪ್ರದಯಸಿದ್ಧವಾದ ರವಯೂನ್ದೆ , ಚೆಕ್ಕುಲಿ, ಹುರಿಗಾಳು, ಕೋಡಬಳೆ, ತೇಂಗೊಳಲು, ಚಟ್ಣೀಪುಡಿ, ಉಪ್ಪಿನಕಾಯಿ ತೆಗೆದುಕೊಂಡೇ ಹೋಗಬೇಕೆಂದು ಒಮ್ಮತದ ನಿರ್ಣಯವಾಗಿ ಹೋಯಿತು. ರೈಲು ಚೊಂಬಿನಲ್ಲಿ ನೀರನ್ನೂ ತುಂಬಿ ಕೊಡಿ ಎಂದೆ.

ಏನೆಂದರೇನು ಮುಂದಿನ ಎರಡು ದಿನಗಳವರೆಗೆ ಸರೋಜ ಅಡಿಗೆ ಮನೆ ಬಿಟ್ಟು ಬರಲಿಲ್ಲ. ಹಚ್ಚಿದ್ದ ಒಲೆ ಆರಲಿಲ್ಲ. ಒರಳಿಗೆ ಬಿಡುವಾಗಲಿಲ್ಲ. ಸ್ವಲ್ಪ-ಸ್ವಲ್ಪ ಎಂದೇ, ನನ್ನ ಸೂಟ್ ಕೇಸು, ಬ್ರೀಫ್ ಕೇಸು, ಕೈಬುಟ್ಟಿ ಬಿರುಕು ಬಿಡುವಷ್ಟು ತುಂಬಿ ಹೊರಲಾರದಷ್ಟು ಭಾರವಾದವು. ಹೊರಡುವ ಮುಂಚೆ ದಮ್ಮು ಕಟ್ಟಿ, ಶೇವಿಂಗ್ ಕಿಟ್ಟನ್ನೂ ಬುಟ್ಟಿಗೆ ಸೇರಿಸಿ ಉಪ್ಪಿನಕಾಯಿ ಬಾಟಲಿ, ಹುಳಿಗೊಜ್ಜಿನ ಡಬ್ಬಿಗಳನ್ನು ಸೂಟ್ ಕೇಸಿನಲ್ಲಿ ತುರುಕಿ ಅದರ ಮುಚ್ಚಳದ ಮೇಲೆ ಪಕ್ಕದ ಮನೆಯ ಚಿತ್ರಮಸಿಂಗನನ್ನು ಕೂರಿಸಿ ಬೀಗ ಹಾಕಿದೆ.

ಅಬ್ಬಬ್ಬ! ಭಗವಂತನೇ ಬಚಾಯಿಸಿದ. ಅಷ್ಟ್ರರಲ್ಲಿ ನನ್ನ ಸಾವಿತ್ರಿಯಿಂದಲೂ ಪತ್ರ ಬಂದಿತ್ತು ಬೆಂಗಳೂರಿನಿಂದ. ‘ಏನೇ ಬಿಟ್ಟರೂ ಉಪ್ಪಿನಕಾಯಿ ತೆಗೆದುಕೊಂಡು ಹೋಗಿ, ಕೇಳಿದರೆ ಸರೋಜ ಒಂದೆರಡು ಬಗೆಯದನ್ನು ಕೊಡುತ್ತಾಳೆ. ಉಪ್ಪಿನಕಾಯಿ ಇಲ್ಲದೆ ನಿಮಗೆ ಅನ್ನ(ಅಲ್ಲಿ ?!) ಸೇರುವುದಿಲ್ಲ ಎಂದು ನನಗೆ ತಾಕೀತು ಮಾಡಿ ಬರೆದಿದ್ದಳು. ಉಪ್ಪಿನಕಾಯಿ ಇಲ್ಲದೆ ನನಗೆ ಊಟವಿಲ್ಲ ಎಂದು ನನಗಿಂತ ಅವಳಿಗೇ ಬಲವಾದ ನಂಬಿಕೆ ! ಮದುವೆಯಾದ ಮೇಲೆ ಹೆಂಡತಿಯ ನಂಬಿಕೆಗಳನ್ನು ಅವಲಂಬಿಸಿ ತಾನೆ ಗಂಡ ಬದುಕಬೇಕಾದದ್ದು ! ಆದರೂ ಸರೋಜಾ ಮುಂದೆ ದಮ್ಮಯ್ಯಗುಡ್ಡೆ ಹಾಕಿ, ಎರಡು ಬಗೆಯ ಉಪ್ಪಿನಕಾಯಿ ಬೇಡ, ಒಂದೇ ಬಗೆ ಸಾಕು-ಮಾವಿನಮಿಡಿ-ಎಂದು ಬಾಟಲಿಯಲ್ಲಿ ತುಂಬಿಸಿಕೊಂಡಿದ್ದು ನಾನು.

ಆ ಸಂಜೆ ಎಲ್ಲರನ್ನೂ ಬೀಳ್ಕೊಂಡು ಪಾಲಂನಲ್ಲಿ ಜಪಾನಿನ ಜಲ ವಿಮಾನವನ್ನು ಹತ್ತಿದೆ. ಅದರ ಒಳಗು ನನ್ನನ್ನು ಬೆರುಗುಗೊಳಿಸಿತು. ಅಷ್ಟು ಚೊಕ್ಕಟ್ಟ: ಅಷ್ಟೇ ಮನೋಹರ, ಮುದದಿಂದ ನಗು ನಗುತ ಸ್ವಾಗತಿಸಿ ಕರೆದೊಯ್ದು ಕೂಡಿಸಿ ಉಪಚರಿಸಿದ ಗಗನಸುಂದರಿಯರ ಆದರ ಮರೆಯದಂಥದು. ವಿಮಾನ ಹೊರಟ ಮೇಲೆ, ಸ್ವಾದುಷ್ಟವಾದ ಊಟ ಕೊಟ್ಟು, ಹಣ್ಣುಗಳು, ಐಸ್ ಕ್ರೀಂ, ಫ್ರೂಟ್ ಸಾಲಡ್, ಕಾಫಿ, ಜಪಾನಿನ ಚಾಕೊಲೇಟ್ ಹೀಗೆ ಒಂದರನಂತರ ಒಂದನ್ನು ತಂದು, ಹಿತವಾಗಿ ಬಲವಂತಮಾಡಿ ತಿನ್ನಿಸಿ ಕುಡಿಸಿದರು.

ಆ ಎಲ್ಲದರ ಮಧ್ಯದಲ್ಲಿಯೂ ನನಗೆ ಬೇಕೆನಿಸಿದ್ದು ಒಂದೇ ಒಂದು ಮಿಡಿ ಉಪ್ಪಿನಕಾಯಿ ! ಅದು ಸಿಕ್ಕಿಬಿಟ್ಟರೆ !ಅಹ!! ಆದರೆ ಉಪ್ಪಿನಕಾಯಿ ಬಾಟಲಿಯನ್ನು ಮುಂದಾಲೋಚನೆಯಿಲ್ಲದೆ ಸೂಟ್ ಕೇಸಿನಲ್ಲಿ ಸೇರಿಸಿ ಲಗೇಜ್ ಕೌಂಟರಿನಲ್ಲಿ ತೂರಿಸಿಬಿಟ್ಟಿದೇನೆ ! ಹೋಗಲಿ ಬಿಡಿ. ಒಟ್ಟಿಗೆ ಮಿಲಾಯಿಸಿ ನಾಳೆ ತಿಂದರಾಯಿತು !

ಎರಡೂವರೆ ತಾಸು ಬಹುಸುಖವಾದ ವಿಮಾನಯಾನದ ನಂತರ ಟೆಹರಾನ್ ನಗರದಲ್ಲಿ ಇಳಿಯತೊಡಗಿದಾಗ, ಮೇಲಿನಿಂದ ಕೆಳಗಿನ ನಗರ ನಕ್ಷತ್ರಲೋಕವಾಯಿತು: ಅಂತಹ ಅದ್ಭುತ ರಮ್ಯ ದೃಶ್ಯವನ್ನು ನಾನು ಆವರೆಗೆ ನೋಡಿದ್ದಿಲ್ಲ! ಇಳಿದ ಮೇಲೆ, ನಿಜವಾದ ಬೇರೊಂದು ದೇಶಕ್ಕೆ ಬಂದೆನೆ ಎಂದು ಮೈಚಿವುಟಿ ಖಚಿತಮಾಡಿಕೊಂಡು, ಇಮಿಗ್ರೇಷನ್, ತಟಾಯಿಸಿ, ಲಗೇಜ್ ಕೌಂಟರಿನಿಂದ ನನ್ನ ಸೂಟುಕೇಸನ್ನು ಬಚಾಯಿಸಿಕೊಂಡು, ಕಸ್ಟಂಸ್ ದಾಟಿ ಹೊರಬಂದರೆ, ಎದುರುಗೊಳ್ಳಲು ಯುನೆಸ್ಕೊವತಿಯಿಂದ ಷೇರ್ ಸಿಂಗ್ ಮತ್ತೆ ನಮ್ಮ ಎಂಬೆಸಿಯಿಂದ ಗುಪ್ತ ಬಂದಿದ್ದಾರೆ ! ಸ್ವೀಟ್ ನಥಿಂಗ್ ಮಾತುಗಳನ್ನಾಡುವಾಗಲೂ ಷೇರ್ ಸಿಂಗ್ ತುಂಬ ಆತ್ಮೀಯರಾದರು. ಏರ್ ಕಂಡೀಷನ್ ಕಾರಿನಲ್ಲಿ ಬೆಲ್ ಏರ್ ಹೋಟೆಲು ಮುಟ್ಟಿಸಿ ಸುಸಜ್ಜಿತವಾದ ಕೋಣೆಯಲ್ಲಿ ನನ್ನ ವಾಸ್ತವ್ಯಮಾಡಿಸಿದರು. ಮ್ಯಾನೇಜರ್ ರಶೀದ್ ಗೆ ನನ್ನ ಪರಿಚಯ ಬಹುದೊಡ್ಡದಾಗಿ ಮಾಡಿಕೊಟ್ಟರು. ಮತ್ತೆ ಅರ್ಧತಾಸು ಹರಟೆ ಹೊಡೆದು ಮುಂಜಾನೆ ಒಂಭತ್ತಕ್ಕೆ ಕಾರುಕಳಿಸಿ, ಎಂಬೆಸಿಗೆ ಕರೆಯಿಸಿಕೊಳ್ಳುವುದಾಗಿ ಹೇಳಿ, ಕೈಕುಲಕಿ ತೆರಳಿದರು.

ಕೈ ಗಡಿಯಾರ ನೋಡಿದರೆ ರಾತ್ರಿ ಹತ್ತೂವರೆ. ಭಾರತದ ಹೋಟೆಲಿನ ಗಡಿಯಾರ ನೋಡಿದರೆ ಹನ್ನೆರಡೂವರೆ! ಟೆಹರಾನಿನಲ್ಲಿ ಎರಡು ತಾಸು ಹೆಚ್ಚು ಪಡೆದಿದ್ದೇನೆ ! ಕೈಗಡಿಯಾರವನ್ನು ಎರಡು ತಾಸು ಮುಂದಿಟ್ಟೆ. ಬಳಲಿಕೆ ಎನಿಸಿತು. ಬಿಸಿ ಹಾಲು ತರಿಸಿ ಕುಡಿದು, ಬೆಲ್ಟುಕೂಡ ಬಿಚ್ಚದೆ ಹಾಗೆಯೇ ಹಾಸಿಗೆಯ ಮೇಲೆಬಿದ್ದೆ. ಅಷ್ಟರಲ್ಲಿಯೂ ಮ್ಯಾನೇಜರ್ ರಶೀದ್ ಬಂದು ಗುಡ್ ನೈಟ್ ಹೇಳಿ ಹೋದರು. ಒಂದೇ ನಿದ್ದೆ. ಕಣ್ಣು ಬಿಟ್ಟು ಕೈ ಗಡಿಯಾರ ನೋಡಿಕೊಂಡರೆ, ಮುಂಜಾನೆ ಎಂಟೂಕಾಲು! ಅರೆ! ಎಂಬೆಸಿಗೆ ಹೋಗಲು ಇನ್ನು ನಲವತೈದೇ ನಿಮಿಷ !

oorugaiಧಡಕ್ಕನೆ ಎದ್ದು, ಹಲುಜ್ಜಿ ಮೂತಿ ತೊಳೆದು, ಟೀ ತರಿಸಿ ಕುಡಿದು, ಷೇವಿಸಿ, ಹಿಂದಿನ ದಿನ ತೊಟ್ಟಾ ಕಚಡಾ ಆಗಿದ್ದ ಶರಟು ಪ್ಯಾಂಟ್ ಗಳನ್ನು ಕಿತ್ತೆಸೆದು ಸ್ನಾನವನ್ನು ಇಪ್ಪತೈದು ನಿಮಿಷಗಳೊಳಗಾಗಿ ಮುಗಿಸಿದೆ. ಇನ್ನು ಇಪ್ಪತ್ತು ನಿಮಿಷಗಳಲ್ಲಿ ಬಟ್ಟೆ ಹಾಕಿಕೊಂಡರೆ ಸಿದ್ಧ. ನಮ್ಮ ಎಂಬೆಸಿಗೆ ಮೊದಲ ಭೆಟ್ಟಿ. ಸೊಗಸಾಗಿ ಡ್ರೆಸ್ ಮಾಡಬೇಕು ! ಸೂಟನ್ನೇ ಏರಿಸೋಣ ! ಬ್ರೀಫ್ ಕೇಸಿನ ತಳದಲ್ಲಿನ ಬಾಟಾಷೂ ಕಿಟ್ಟಿನಲ್ಲಿ ಹುದುಗಿಸಿಟ್ಟಿದ್ದ ಬೀಗದಕೈ ಗೊಂಚಲನ್ನು ಹುಡುಕಿ ತೆಗೆದು ಸೂಟ್ ಕೇಸಿನ ಬೀಗ ತೆಗೆದು. ಮುಚ್ಚಳವನ್ನು ತೆಗೆದೆ.

ಕಿಠಾರನೆ ಕಿರಿಚಿಕೊಳ್ಳುವಂತಾಯಿತು. ಯಾವ ಧಡಿಯ ನನ್ನ ಸೂಟುಕೇಸಿನ ಮಾಲೆ ಕುಳಿತ್ತಿದ್ದನೋ, ಅದಾವ ಪರಮ ಪಾಪಿ ಅದನ್ನು ಎತ್ತಿ ಒಗೆದಿದ್ದನೋ, ಅದಾವ ರಾಕ್ಷಸ ನರಾಧಮ (!) ಅದನ್ನು ಎಳೆದಾಡಿದ್ದನೋ. ಅಂತೂ ಉಪ್ಪಿನಕಾಯಿ ಶೀಸೆ ಚೂರು ಚೂರಾಗಿ ಒಳಗೇ ಒಡೆದಿದೆ. ಸೂಟುಕೇಸಿನ ತುಂಬ ಮಾವಿನ ಮಿಡಿ ಎರಚಾಡಿದೆ. ಕಾರದಕೆಂಪು, ಯಥೇಚ್ಛವಾಗಿ ಬೆರತಿದ್ದ ಎಣ್ಣೆಯೊಂದಿಗೆ ಇಳಿದು ಇಂಗಿದೆ. ನೋಟ ಕಣ್ಣನ್ನು ಕುಕ್ಕುತ್ತಿದೆ. ವಾಸನೆ ಘಾಟು ಮೂಗಿಗೆ ಅಡರುತ್ತಿದೆ. ಮುಂದೇನು ಮಾಡಬೇಕೆಂದು ತಿಳಿಯದಾಗಿ ಕಣ್ಣು, ಮೂಗು, ಬಾಯಿ ಬಿಟ್ಟುಕೊಂಡು ಮಂಡಿಯೂರಿ ಸೂಟುಕೇಸಿನ ಮುಂದೆ ಸುಮ್ಮನೆ ಕುಳಿತೆ.

ಐದು ನಿಮಿಷಗಳ ನಂತರ ಸುಧಾರಿಸಿಕೊಂಡು, ಗಡಿಯಾರ ನೋಡಿದರೆ ಇನ್ನು, ಹತ್ತೇ ನಿಮಿಷ ಉಳಿದಿದೆ! ಹಲ್ಲುಕಚ್ಚಿ ಸಾವಕಾಶವಾಗಿ ಒಂದೊಂದೇ ಬಟ್ಟೆಯನ್ನು ತೆಗೆದು ಹರಡಿದೆ. ಊ ಹೂಂ ! ಆರೂ ಷರಟುಗಳನ್ನು ಹಾದುಹೋದ ಉಪ್ಪಿನಕಾಯಿ ರಸ, ನಾನು ತಂದಿದ್ದ ಒಂದೇ ಸೂಟನ್ನು ಅಲ್ಲಲ್ಲಿ, ನೋಡಿದವರು ತಪ್ಪರ್ಥ ಮಾಡಿಕೊಳ್ಳುವಂತೆ ಒದ್ದೆ ಮಾಡಿತ್ತು.

ಪಂಚೆ, ಟವಲು, ಕರವಸ್ತ್ರ, ಬನೀನು, ಚಡ್ಡಿಗಳು, ರಾತ್ರಿಯ ದೊಗಲೆಬಟ್ಟೆ ಎಲ್ಲ, ಏನೆಲ್ಲವೂ ಕೆಂಪು ಉಪ್ಪಿನಕಾಯಿ ಮಯ! ಗಾಢವಾದ ಖಾರದ ವಾಸನೆ ! ಎಂಬೆಸಿಗೆ ನನ್ನ ಮೊದಲ ವಿಸಿಟ್ಟು, ಕಾರುಬರಲು ಇನ್ನು ಏಳೇನಿಮಿಷ ! ‘ಭಗವಂತಾ! ನೀನೇ ಕಾಯಬೇಕು ಎನ್ನನ್ನು ! ತೊಡಬಹುದಾದ ಒಂದೇ ಒಂದು ಷರಟು. ಒಂದೇ ಒಂದು ಪ್ಯಾಂಟು ಸಿಕ್ಕ್ಕ್ಕಿದರೆ ಸಾಕು ! ಇನ್ನೆಂದಿಗೂ ಇನ್ನೆಂದಿಗೂ ಉಪ್ಪಿನಕಾಯಿ ತೊರೆಯುತ್ತೆನೆ’ ಎಂದು ಆಣೆ ಮಾಡಿ ತೊದಲಿಕೊಂಡೆ. ಅಂಥ ಬಟ್ಟೆ ಹುಡುಕುವ ಸಲುವಾಗಿ ಎಲ್ಲ ಬಟ್ಟೆಗಳನ್ನು ಹೊರಗೆಳೆದು ಹಾಸಿಗೆಯ ಮೇಲೆ ಹರಹಿದೆ. ಎಲ್ಲೆಲ್ಲಿಯೂ ಮಾವಿನ ಮಿಡಿ !! ಗಾಜಿನ ಚೂರು.

ಆಗಲೇ ಹೊರಗಿನ ಬಾಗಿಲ ಮೇಲೆ ಬಡಿತ ! ಗಕ್ಕನೆ ಎದ್ದು ಟವಲು ಸರಿಮಾಡಿಕೊಂಡು ಬಾಗಿಲು ತೆರೆದೆ. ಹೋಟೆಲಿನ ಮ್ಯಾನೇಜರ್ ರಶೀದ್- ಕುಲಕಲು ಕೈ ಮುಂದುಮಾಡಿ ಒಳ ಬಂದವರು, ಸುತ್ತಮುತ್ತ ನೋಡಿ, ಸಿಕ್ಕಾಪಟ್ಟೆ ಕನ್ ಫ್ಯೂಸ್ ಆಗಿ ಮೂಗಿಗೆ ಅಡರಿದ ಘಾಟಿಗೆ ಉಸಿರು ಕಟ್ಟುವಂತೆ ಕೆಮ್ಮುತ್ತ, ಕಣ್ಣಿಂದ ನೀರು ಸುರಿಸಿ ಒಂದು ನಿಮಿಷ ನಿಂತುಕೊಂಡವರು, ನೀಡಿದ್ದ ಕೈಯನ್ನು ಹಾಗೆಯೇ ವಿತ್ ಡ್ರಾ ಮಾಡಿ, ಮಹಡಿಯಿಂದ ಕೆಳಕಿಳಿದು ಓಡಿದರು.

ಎರಡು ನಿಮಿಷಗಳ ನಂತರ ಅವರ ರೂಮಿನಿಂದ ಅಸ್ಟಿಸ್ಟೆಂಟ್ ಮ್ಯಾನೇಜರ್ ನನ್ನ ಕೊಠಡಿಗೆ ಟೆಲಿಫೋನ್ ಮಾಡಿ ಎಂಬೆಸಿಯ ಕಾರು ಬಂದಿದೆ ಎಂದು ತಿಳಿಸಿದ. ಮುಂದಿನ ಐದು ನಿಮಿಷಗಳಲ್ಲಿ ಎಲ್ಲ ಬಟ್ಟೆಗಳನ್ನು ಕೊಡವಿ ಎರಚಾಡಿದ ಮೇಲೆ, ಅಂತೂ ಏರಿಸಬಹುದು ಎನ್ನುವಂತಹ ಒಂದು ಷರಟು ಸಿಕ್ಕಿತು. ಪ್ಯಾಂಟಿನೊಳಕ್ಕೆ ಹೋಗಬಹುದಾದ ಅದರ ಮುಂಭಾಗದ ಕೆಳಗನ್ನು ಮಾತ್ರ ಉಪ್ಪಿನಕಾಯಿ ರಸ ತೋಯಿಸಿತ್ತು. ಅದನ್ನೇ ತೊಟ್ಟು ಹಿಂದಿನ ದಿನವೆಲ್ಲ ಹಾಕಿಕೊಂಡು ಹೋಗಿದ್ದ ಪ್ಯಾಂಟನ್ನೇ ಸರಿಯಾಗಿ ಮಡಿಸಿ ತೀಡಿ ಏರಿಸಿದೆ. ಹಿಂದಿನ ದಿನದ ಕರವಸ್ತ್ರವನ್ನು ಮತ್ತೆ ಉಪಯೋಗಿಸಲಾಗದೆ, ಇದ್ದದ್ದರಲ್ಲಿ ಆದಷ್ಟು ಕಡಿಮೆ ಉಪ್ಪಿನಕಾಯಿ ರಂಜಿತವಾಗಿದ್ದುದನ್ನು ಹಿಂದುಮುಂದಾಗಿ ಮಡಿಸಿ ಜೇಬಿನಲ್ಲಿಟ್ಟುಕೊಂಡು ಬೂಟುಹಾಕಿ ಹೊರಟು, ಕೊಠಡಿಯ ಬಾಗಿಲನ್ನೆಳೆದುಕೊಳ್ಳುವಾಗ ಒಮ್ಮೆ ಹಿಂದಿರುಗಿ ನೋಡಿದೆ.

ಪಾಪ, ರಶೀದ್ ಗೆ ಅವರ ಹೋಟೆಲ್ ಜೀವಮಾನದಲ್ಲಿ ಅಂದು ಅಂತಹ ಭಾರೀ ಅಘಾತವಾದದ್ದರಲ್ಲಿ ಏನೇನೂ ಆಶ್ಚರ್ಯವಿಲ್ಲ! ಅಂಥ ಮಹಾಭಾರತ ನನ್ನ ರೂಮಿನಲ್ಲಿ ! ನನ್ನನ್ನು ಕಂಡೊಡನೆ ಸೆಟೆದು ಸಲಾಂ ಹೊಡೆದ ಚಾಲಕ. ಏರ್ ಕಂಡಿಶನ್ ಕಾರಿನ ಬಾಗಿಲು ತೆರೆದು, ನಾನು ಕುಳಿತಮೇಲೆ ಒಳಬಂದು, ಒಂದೆರಡುಬಾರಿ ಸಣ್ಣದಾಗಿ ಮೂಗೇರಿಸಿದರೂ ಕಣ್ಣೆತ್ತಿ ನನ್ನನ್ನು ನೋಡಲಿಲ್ಲ. ಇಪ್ಪತ್ತು ನಿಮಿಷಗಳ ದಾರಿಯನ್ನು ಧಾವಿಸುವಲ್ಲಿ ಸಾವರಿಸಿಕೊಂಡೆ.

ಎಂಬೆಸಿಯ ಹೆಬ್ಬಾಗಿಲಲ್ಲಿ ಗುಪ್ತ, ಆದರದಿಂದ ಸ್ವಾಗತಿಸಿ ತಮ್ಮ ಕೊಠಡಿಗೆ ಕರೆದೊಯ್ದು ಅಲ್ಲಿದ್ದ ಇಬ್ಬರು ಮೂವರು ಭಾರತೀಯ ಅಧಿಕಾರಿಗಳಿಗೆ ಪರಿಚಯ ಮಾಡಿಸಿದರು. ಕುಳಿತುಕೊಂಡೆ. ನಾಲ್ಕು ನಿಮಿಷಗಳೊಳಗಾಗಿ ಅವರೆಲ್ಲ ಒಬ್ಬರ ಮುಖ ಒಬ್ಬರು ನೋಡುತ್ತ ದೀರ್ಘವಾಗಿ ಉಸಿರೆಳೆದುಕೊಂಡು, ಬಾಯಿಚಪ್ಪರಿಸುತ್ತಿದ್ದಾರೆ !! ಓಹೋ ! ಅವರ ಮೂಗುಗಳಿಗೆ ಉಪ್ಪಿನಕಾಯಿ ಘಾಟು ಬಡಿಯುತ್ತಿದೆ ! ಪ್ಯಾಂಟಿನೊಳಗಣ ಷರಟಿನ ಉಪ್ಪಿನಕಾಯಿ ಭಾಗ ನನ್ನನ್ನು ಬಿಟ್ರೇ ಮಾಡುತ್ತಿದೆ. ಅಥವಾ ಕರವಸ್ತ್ರದ ಕಾರಬಾರೊ?

ಕಡೆಗೆ ಗುಪ್ತ,ನಮ್ಮ ರಾಯಭಾರಿಯ ಕೋಣೆಗೆ ನನ್ನನ್ನು ಕರೆದೊಯ್ಯುತ್ತ, ನನಗೆ ಗೊತ್ತು, ನೀವು ಬಲು ಒಳ್ಳೆಯ ಉಪ್ಪಿನಕಾಯಿ ತಂದೇ ಇದ್ದೀರಿ ! ಅದಷ್ಟೂ ರಾಯಭಾರಿಯವರಿಗೇ ಮೀಸಲೋ ? ಬಡವರಾದ ನಮಗೂ ಏನಾದರೂ ಉಂಟೊ? ಹೀಗೆನ್ನುತ್ತ ಅವರೂ ದೀರ್ಘವಾಗಿ ಮೂಗಿನ ಮೂಲಕ ಉಸಿರೆಳೆದು ಅತ್ತ,ಇತ್ತ ಮೂಸುತ್ತ-ಅಥವಾ ನನ್ನ ಸುತ್ತ ಮುತ್ತಣ ಆವರಣವನ್ನು ಆಘ್ರಾಣಿಸುತ್ತ-ಬಾಯಿತುಂಬ ನೀರನ್ನು ಒಡೆಯಿಸಿಕೊಂಡಾಗ ಏನು ಹೇಳೆಬೇಕೆಂದೇ ತಿಳಿಯದಾಯಿತು-ನನಗೆ!

ಪ್ರತಿಗಳಿಗಾಗಿ:

ವಸಂತ ಪ್ರಕಾಶನ
360 10 ನೆ ಬಿ ಮುಖ್ಯರಸ್ತೆ 3 ನೆ ಬ್ಲಾಕ್ ಜಯನಗರ ಬೆಂಗಳೂರು-560 011
ದೂರವಾಣಿ:  2244 3996, 2228 7876

‍ಲೇಖಕರು avadhi

November 9, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಾರ್ಪೊರೇಟ್‌ ಪ್ರಪಂಚದ ಗೆರಿಲ್ಲಾ ಕದನ ‘ಬೇಟೆಯಲ್ಲ ಆಟವೆಲ್ಲ’

ಕಥೆಗಾರ, ಆರ್ಥಿಕ ವಿಶ್ಲೇಷಣಾಕಾರ ಎಂ ಎಸ್ ಶ್ರೀರಾಮ್ ಅವರ ಹೊಸ ಪುಸ್ತಕ ಮಾರುಕಟ್ಟೆಯಲ್ಲಿದೆ ಅಕ್ಷರ ಪ್ರಕಾಶನ ಈ ಕೃತಿಯನ್ನು ಹೊರತಂದಿದ್ದು...

ಸಂಗೀತ ಲೋಕದ ಸಂತ

ಸಂಗೀತ ಲೋಕದ ಸಂತ

ಡಾ.ಎನ್. ಜಗದೀಶ್ ಕೊಪ್ಪ ಸಂಗೀತ ಲೋಕದ ಸಂತಬಿಸ್ಮಿಲ್ಲಾ ಖಾನ್(ಜೀವನ ಚರಿತ್ರೆ)ಲೇಖಕರು: ಡಾ. ಎನ್ ಜಗದೀಶ್ ಕೊಪ್ಪಪ್ರಕಾಶಕರು: ಮನೋಹರ ಗ್ರಂಥಾಲಯ,...

೧ ಪ್ರತಿಕ್ರಿಯೆ

  1. ಸುಬ್ಪಮಣಿ

    ಉಪ್ಪಿನ ಕಾಯಿ ಪ್ರಸಂಗ ಅದ್ಭುತ

    ಪ್ರತಿಕ್ರಿಯೆ

Trackbacks/Pingbacks

  1. ‘ಅವಧಿ’ಯಲ್ಲಿ ಉಪ್ಪಿನಕಾಯಿ ಖಾರ « ಓದು ಬಜಾರ್ - [...] ಸಂಪೂರ್ಣ ಓದಿಗೆ ಭೇಟಿ ಕೊಡಿ: ಅವಧಿ  [...]

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: