ಊರು ತಾತ

ಹೈವೇ 7
——

ಕಾಲಾನುಕ್ರಮೇಣ ಊರುತಾತ ಬಾಡತೊಡಗಿದ್ದ. ಸೂಕ್ತ ಆರೈಕೆಯಿಲ್ಲದೆ ಗೂರಲು ಅವನ ಬುಡವನ್ನೇ ಮೀಟಿಹಾಕಿತ್ತು. ಎತ್ತುಗಳನ್ನು ಕಟ್ಟಿಹಾಕುವ ಕೊಟ್ಟಿಗೆಯಲ್ಲಿ ಬಟ್ಟೆಯನ್ನೆಲ್ಲ ಬಿಚ್ಚಿಕೊಂಡು, ಕುಳಿತಲ್ಲೇ ಕುಳಿತುಕೊಂಡು ಕೂರೆಹೇನುಗಳನ್ನು ಹಾಯುತ್ತಿದ್ದ. ಬಹಳ ಪ್ರಾಯಸದಿಂದ ಕತ್ತೆತ್ತಿ ನಮ್ಮನ್ನು ನೋಡಿ ನಗಲೆತ್ನಿಸುತ್ತಿದ್ದ. ಮರದೊಳಗೆ ಸುಟ್ಟ ಬಳ್ಲಿಯಂತೆ ಕಾಣುತ್ತಿದ್ದ ಊರುತಾತನ ಮೈಯೆಲ್ಲ ಅಸಂಖ್ಯಾತ ತಿಗಣೆ, ಕೂರೆಹೇನುಗಳು ಬೀಡುಬಿಟ್ಟಿದ್ದವು. ನಮ್ಮ ಚಿಕ್ಕಮ್ಮ ಆಂಜಿನಮ್ಮ ಊರುತಾತನಿಗೆ ಕುಳಿತಲ್ಲೇ, ಮಲಗಿದಲ್ಲೇ ಸ್ನಾನ ಮಾಡಿಸಿ, ಬಟ್ಟೆಬರೆಗಳಲ್ಲಿ ಕೂರೆಹೇನುಗಳನ್ನು ಹೆಕ್ಕಿ ತೆಗೆದು, ಒಗೆದು ತೊಡಿಸುತ್ತಿದ್ದಳು.

hoovu4.jpg

ಭಾಗ: ಒಂಭತ್ತು

ವಿ ಎಂ ಮಂಜುನಾಥ್

ರಸಿ ವಂಶದ ಹಿರೀ ಹೆಣ್ಣುಮಗಳ ಕುರಿತು ನನ್ನ ತಾಯಿ ಹೇಳಿದ ಒಂದು ಕಥೆಯನ್ನು ಹೇಳುತ್ತೇನೆ: ಅಷ್ಟಾಗಿ ಆ ಹೆಣ್ಣಿನ ಹೆಸರು ನೆನಪಿಲ್ಲದಿದ್ದರೂ ಅರಸಿ ವಂಶದ ಹಿರೀ ಹೆಣ್ಣುಮಗಳೆಂದು ನಂಬಲಾಗಿರುವ ಆಕೆ, ದಾರಿಯಲ್ಲಿ ನಡೆದು ಹೋದರೆ ಅವಳ ತಲೆಗೂದಲು ನೆಲವನ್ನು ಸಾರಿಸಿಕೊಂಡು ಹೋಗುತ್ತಿದ್ದು ಅಷ್ಟು ಸಮೃದ್ಧಿಯಾಗಿತ್ತಂತೆ. ಒಮ್ಮೆ ಅವಳ ಮನೆಯ ಕ್ರುವೊಂದು ತಪ್ಪಿಸಿಕೊಂಡು ಚಾವಡಿಅ ಕಡೆ ಓಡಿಹೋಗುತ್ತಿದ್ದುದನ್ನು ನೋಡಿ, ಹಿಂಬಾಲಿಸಿದವಳೇ ತನ್ನ ತಲೆಗೂದಲಿನಿಂದ ಆ ಕ್ರುವನ್ನು ಕಟ್ಟಿ ತಂದು ಕೊಟ್ಟಿಗೆಯಲ್ಲಿ ಬಿಗಿದಾಗ, ಎಲ್ಲರೂ ಅವಳ ವಿಕಾರತೆಗೆ ಬೆಚ್ಚಿ ದೂಷಿಸಿದರಂತೆ, ರಾತ್ರಿಅ ಹಗಲು ನಿಂದಿಸಿದರಂತೆ. ಇದೊಂದು ವಂಶದಲ್ಲಿ ಹುಟ್ಟಿದ ಪಿಶಾಚಿಯೆಂದು, ಊರಲ್ಲಿದ್ದ ಹಾಳುಬಾವಿಗೆ ಅವಳನ್ನು ನೂಕಿ, ಮಣ್ಣು ಕಲ್ಲು ಚಪ್ಪಡಿಗಳಿಂದ ಮುಚ್ಚಿಹಾಕುವ ಮುನ್ನ ಆ ಹೆಣ್ಣು, “ನನ್ನಂಥ ಹೆಣ್ಣು ನಿಮ್ಮ ವಂಶದಲ್ಲಿ ಒಂದಕ್ಕೆ ಮ್ಯಾಲೆ ಹೆಚ್ಚದಿರಲಿ” ಎಂದು ಶಾಪ ಹಾಕಿದಳಂತೆ.

ಆ ಶಾಪ ನಮ್ಮ ಊರು ತಾತನಿಗೆ ಮಾತ್ರ ತಗುಲಿತು ಎಂದು ನನ್ನ ತಾಯಿ ಹೇಳುತ್ತಾಳೆ. ಊರುತಾತನಿಗೆ ಒಬ್ಬಳೇ ಮಗಳಾದರೆ, ಇವರಿಗೆ ಇಬ್ಬರು ಹೆಣ್ಣುಮಕ್ಕಳಾಗಿದ್ದರೂ ಬದುಕಿದ್ದು ಒಂದೇ. ನನ್ನ ತಾಯಿಯ ಅಪ್ಪನ ಹೆಸರು ಮುನಿವೆಂಕಟಪ್ಪ. ಆತನ ಹೆಂಡತಿ ಎಂದರೆ ನನ್ನ ಅಜ್ಜಿ ಮುನಿಗಿಡ್ಡಮ್ಮ. ನನ್ನ ಅಪ್ಪನ ಅಪ್ಪ, ಮುನಿಪೂಜಪ್ಪನಿಗಿಂತ ಹೆಚ್ಚಾಗಿ ಮುನಿವೆಂಕಟಪ್ಪ ನಮ್ಮನ್ನು ಪ್ರೀತಿ ಮಾಡುತ್ತಿದ್ದ. ಈತನನ್ನು ನಾವೆಲ್ಲರೂ ಊರುತಾತ ಎಂದೇ ಕರೆಯುತ್ತಿದ್ದೆವು. ದೇವನಹಳ್ಳಿಯ ಸಾಹುಕಾರರ ತೋಟಗಳಲ್ಲಿ ನೀರು ಕಟ್ಟುವುದು, ಆಲೂಗಡ್ಡೆ ಬೆಳೆಯುವುದು, ಜೋಳ ಕೊಯ್ಯುವುದು, ಹೊಲಗಳಲ್ಲಿ ಬಿತ್ತನೆ ಹಾಕುವುದರಿಂದ ಹಿಡಿದು ಕೃಷಿ ಕೆಲಸಗಳೆಲ್ಲವನ್ನೂ ತಣ್ಣಗೆ ಮಾಡಿಕೊಂಡು ಹೋಗುತ್ತಿದ್ದ. ನಾನು ಕಂಡಂತೆ ಯಾರ್ ಜೊತೆಯಲ್ಲಾಗಲೀ ಜಗಳವನ್ನೇ ಆಡದ ಈತ, ಹೆಂಡತಿಯ ಜೊತೆ ಜಗಳವಾಡಿಕೊಂಡಾಗಲೆಲ್ಲ ನೇರವಾಗಿ ಚರ್ಮದ ವ್ಯಾಪಾರಿ ಬೆಳ್ಳಹಳ್ಳಿ ಹುಸೇನ್ ಸಾಬಿಯ ಎತ್ತಿನಗಾಡಿ ಹತ್ತಿಕೊಂಡು ನಮ್ಮ ಮನೆಗೆ ಬಂದುಬಿಡುತ್ತಿದ್ದ. ಯಲಹಂಕದ ಸುತ್ತಮುತ್ತ ಗ್ರಾಮಗಳಲ್ಲಿ ಚರ್ಮದ ವ್ಯಾಪಾರ ಮಾಡಿಕೊಂಡಿದ್ದ ಹುಸೇನ್ ಸಾಬಿ ದೇವನಹಳ್ಳಿಯಲ್ಲಿ ತನ್ನ ಬಹುದೊಡ್ಡ ಸಂಸಾರವನ್ನು ನಿಭಾಯಿಸುತ್ತಿದ್ದ. ಈತನ ಎತ್ತಿನಬಂಡಿ ಹೈವೇಯಲ್ಲಿ ಕುಲುಕುತ್ತಾಬರುತ್ತಿದ್ದರೆ ನಾವೆಲ್ಲರೂ ಹುಣ್ಸೇಮರದ ಮಗ್ಗುಲಿನಿಂದ ನುಗ್ಗಿಕೊಂಡು, ಹುಸೇನ್ ಸಾಬಿಗೆ ಎದುರಾಗಿ ಎತ್ತುಗಳಿಗೆ ಗಾಬರಿಗೊಳಿಸಿ ಹಿಂದೆ ಬೀಳುತ್ತಿದ್ದೆವು. ಏಕೆಂದರೆ ಊರುತಾತ, ಹುಸೆನ್ ಸಾಬಿಯ ಕೈಯಲ್ಲಿ ಚಕ್ಕೋತ ಹಣ್ಣು, ಕಲ್ಲಂಗಡಿ ಹಣ್ಣು, ಆಲೂಗಡ್ಡೆ, ಕಡಲೆಕಾಯಿ ಗುತ್ತಿಗಳು, ದ್ರಾಕ್ಷಿ ಗೊಂಚಲುಗಳನ್ನು ಕಳುಹಿಸಿಕೊಡುತ್ತಿದ್ದ.

ತರಹುಣ್ಸೆಯ ಸಂಬಂಧದಲ್ಲಿ ಮುನಿಗಿಡ್ಡಮ್ಮನನ್ನು ಮದುವೆಯಾಗಿದ್ದ ಊರುತಾತನಿಗೆ ಮೂವರು ಮಕ್ಕಳು. ಊರುತಾತ ಮದುವೆಯಾದ ಹೊಸತರಲ್ಲಿ ಜಂಪಾಲಮ್ಮ ಎಂಬ ಹೆಣ್ಣನ್ನು ಇಟ್ಟುಕೊಂಡಿದ್ದನಂತೆ. ಅವಳನ್ನು ಕೋಣ ಕೊಯ್ಯುವ ಕದಿರ ಎಂಬವನೊಬ್ಬ ಪ್ರೀತಿ ಮಾಡುತ್ತಿದ್ದು, ಯಾರೋ ಆಗದವರು ಕದಿರನನ್ನು ಕೊಲೆ ಮಾಡಿ, ಊರುತಾತನ ಮನೆ ಪಕ್ಕದಲ್ಲಿದ್ದ ಬೆಳ್ಳಹಳ್ಳಿ ಹುಸೆನ್ ಸಾಬಿಯ ಮನೆ ಮುಂದೆ ಎಸೆದುಹೋಗಿದ್ದರಂತೆ. ಆಗ ಊರುತಾತ ಹೊಲದಲ್ಲಿ ಆಲೂಗಡ್ಡೆಗೆ ನೀರು ಕಟ್ಟುತ್ತಿದ್ದಾಗ ಪೊಲೀಸರು ಅರೆಸ್ಟ್ ಮಾಡಿ, ವಿಚಾರಣೆ ನಡೆದು ಊರುತಾತನಿಗೆ ಹದಿನಾಲ್ಕು ವರ್ಷ ಶಿಕ್ಷೆಯಾಯಿತಂತೆ.

ದೊಡ್ಡಮಗ ಮರಿಯಪ್ಪ ಹಟ್ಟಿ ತಳವಾರನಾಗಿದ್ದುಕೊಂಡು ಎಲ್ಲರನ್ನೂ ತನ್ನ ಹದ್ದುಬಸ್ತಿನಲ್ಲಿಟ್ಟುಕೊಂಡಿದ್ದ. ನಾವು ರಾಕ್ಷಸನನ್ನು ನೋಡಿದ್ದು ಇವನಲ್ಲೇ. ನಾವು ಊರಿಗೆ ಹೋದಾಗ ನಮ್ಮನ್ನು ದೆವ್ವದಂತೆ ನೋಡಿ ಗದರುತ್ತಿದ್ದ. ಈತನ ಹೆಂಡತಿ ಎಳೆಚಿಕ್ಕಮ್ಮ ಬಾಯಿಬಡಕಿ. ಕುಂತಲ್ಲಿ ನಿಂತಲ್ಲಿ ನಮ್ಮನ್ನು ಬಾಯಿಗೆ ಬಂದಂತೆ ಶಾಪ ಹಾಕುತ್ತಿದ್ದಳು. ಇವರಿಗೆ ಐದು ಜನ ಹೆಣ್ಣುಮಕ್ಕಳಿದ್ದರು. ಅವರಲ್ಲಿ ಯಾರನ್ನಾದರೂ ಮದುವೆ ಮಾಡಿಕೊಳ್ಳಬೇಕೆನ್ನುವುದು ಮರಿಯಪ್ಪನಿಗೆ ಮತ್ತು ಆತನ ಹೆಂಡತಿಗೆ ಆಸೆಯಿತ್ತಾದರೂ ನನ್ನ ಅಮ್ಮ ನಿರಾಕರಿಸಿದ್ದಳು. ನಾವು ಊರಿಗೆ ಹೋದಾಗಲೆಲ್ಲ ಆ ಹೆಣ್ಣುಮಕ್ಕಳ ಜೊತೆ ಅಷ್ಟಾಗಿ ಬೆರೆಯುತ್ತಿರಲಿಲ್ಲ. ಎರಡನೆಯವಳು ನನ್ನ ಅಮ್ಮ. ಇನ್ನು ಕೊನೆಯವನು ಮಾರಪ್ಪ. ಈತ ಹುಟ್ಟಿದಾಗ ಊರುತಾತ ಹೊಲದಲ್ಲಿ ಮೂವತ್ತು ಮೂಟೆ ಗುತ್ತಿ ಕಡಲೆಕಾಯಿ ಬೆಳೆದಿದ್ದನಂತೆ. ಅವನಿಗೆ ಹುಟ್ಟುತ್ತಲೇ ಮೂಗಿನ ಹತ್ತಿರ ತುಟಿ ಸೀಳಿಕೊಂಡು ಬಾಯಿ ವಿಕಾರಗೊಂಡಿದ್ದರಿಂದ ಅವನು ಮಾತಾಡುವುದು ಸ್ಪಷ್ಟವಾಗಿ ಕೇಳುತ್ತಿರಲಿಲ್ಲ. ನನ್ನ ಅಮ್ಮನ ಜೊತೆಯಲ್ಲೇ ಬೆಳೆದ ಕಾರಣ ಅವಳಿಗೆ ತಕ್ಕ ಮಟ್ಟಿಗೆ ಅರ್ಥವಾಗುತ್ತಿತ್ತಾದರೂ ಕೆಲವೊಮ್ಮೆ ಅವಳೂ ತಬ್ಬಿಬ್ಬಾಗುತ್ತಿದ್ದಳು.

ನಾವು ಊರಿಗೆ ಹೋದಾಗಲೆಲ್ಲ ಊರುತಾತನ ಹಾಸಿಗೆ, ಕಂಬಳಿಗಳಲ್ಲಿ ನುಸುಳಿಕೊಂಡು ಆಟವಾಡುತ್ತಿದ್ದೆವು. ಆತನಿಗೆ ಗೂರಲು ರೋಗವಿದ್ದದ್ದರಿಂದ ಮೂಲೆಯಲ್ಲಿ ಬೆನ್ನು ಬಗ್ಗಿಸಿಕೊಂಡು ಸದಾ ಕೆಮ್ಮುತ್ತಿದ್ದ. ಆಗ ನಮಗೇನೂ ಗೊತ್ತಾಗುತ್ತಿರಲಿಲ್ಲ. ಆತ ಪ್ರಯಾಸದಿಂದ ಎದೆಯುಬ್ಬಿಸಿ, ಇಡೀ ದೇಹವನ್ನು ಕುಗ್ಗಿಸುವಾಗಲೆಲ್ಲ ನಮಗೆ ಸುಂದರನಾಗಿ ಕಾಣುತ್ತಿದ್ದ. ಆತನ ಮಗ್ಗುಲಿಗೆ ಎರಡು ಎತ್ತುಗಳಿರುತ್ತಿದ್ದವು. ಅವುಗಳಿಗೆ ಜೋಳದ ಕಡ್ಡಿಗಳನ್ನು ಕತ್ತರಿಸಿ, ಬಾಯಿಗೆ ತುರುಕುತ್ತ ನಮ್ಮನ್ನು ಆಕಾಶದ ಅಂಚಿಗೆ ಕರೆದೊಯ್ಯುತ್ತಿದ್ದ.

ಹೀಗೆ ನಾವು ಕಾಲಾಂತರದಲ್ಲಿ ಊರಿಗೆ ಹೋಗುವುದನ್ನು ನಿಲ್ಲಿಸಿದಾಗ ಊರುತಾತನೇ ಬೆಳ್ಳಹಳ್ಳಿ ಹುಸೆನ್ ಸಾಬಿಯ ಎತ್ತಿನಬಂಡಿ ಹತ್ತಿಕೊಂಡು ಬರುತ್ತಿದ್ದ. ಒಮ್ಮೊಮ್ಮೆ ಊರುತಾತ ಇಪ್ಪತ್ತು ಮೈಲು ದೂರದ ದೇವನಹಳ್ಳಿಯಿಂದ ನಡೆದುಕೊಂಡೇ ಬರುತ್ತಿದ್ದ. ಮಧ್ಯಾಹ್ನ ನಾವೆಲ್ಲರೂ ಚರ್ಚಿನಲ್ಲಿ ದಾನಕ್ಕಾಗಿ ನಿಂತಿದ್ದೆವು. ಅಜ್ಜಿ ಅಲ್ಲಿಗೇ ಬಂದು ತನ್ನ ದುಃಖದ ಮುಖವನ್ನು ತೋರಿಸಿ ಹೋಗಿದ್ದಳು. ಅಷ್ಟೊತ್ತಿಗಾಗಲೇ ಅಮ್ಮನಿಗೆ ವಿಷಯ ಗೊತ್ತಾಗಿತ್ತು. ಊರುತಾತ ತನ್ನ ಮಗ ಮಾರನ ಜೊತೆ ಸೇರಿಕೊಂಡು ಅಜ್ಜಿಗೆ ಹಿಟ್ಟುಗೋಲಿನಿಂದ ಕೈಗೆ ಹೊಡೆದು ಮೂಳೆ ಮುರಿದು ಕಳುಹಿಸಿದ್ದ. ಹೀಗೆ ಅದೆಷ್ಟೋ ಸಲ ಹೊಡೆಸಿಕೊಂಡು ನಮ್ಮ ಮನೆಗೆ ಬರುತ್ತಿದ್ದಳು. ಆ ಮೂಲಕ ಅಜ್ಜಿ ಊರುತಾತನನ್ನು ಸರಿಯಾಗಿ ನೋಡಿಕೊಳ್ಳದೆ ನಿರ್ಲಕ್ಷಿಸಿ, ಅವನನ್ನು ತೊರೆದು ಬಂದಿದ್ದಳು. ಅಜ್ಜಿ ನಮ್ಮ ಮನೆಯಿಂದ ಹೋಗುವಾಗ ಚರ್ಚಿನಲ್ಲಿ ದಾನವಾಗಿ ಕೊಡುತ್ತಿದ್ದ ಬಟ್ಟೆಗಳನ್ನು ಮೂಟೆ ಕಟ್ಟಿಕೊಂಡು ಲಾರಿ ಹತ್ತಿಕೊಂಡು ಹಿಂತಿರುಗುತ್ತಿದ್ದಳು. ಇದು ಹೀಗೆ ಬಹುಕಾಲ ನಡೆದೇ ಇತ್ತು.

ಕಾಲಾನುಕ್ರಮೇಣ ಊರುತಾತ ಬಾಡತೊಡಗಿದ್ದ. ಸೂಕ್ತ ಆರೈಕೆಯಿಲ್ಲದೆ ಗೂರಲು ಅವನ ಬುಡವನ್ನೇ ಮೀಟಿಹಾಕಿತ್ತು. ಎತ್ತುಗಳನ್ನು ಕಟ್ಟಿಹಾಕುವ ಕೊಟ್ಟಿಗೆಯಲ್ಲಿ ಬಟ್ಟೆಯನ್ನೆಲ್ಲ ಬಿಚ್ಚಿಕೊಂಡು, ಕುಳಿತಲ್ಲೇ ಕುಳಿತುಕೊಂಡು ಕೂರೆಹೇನುಗಳನ್ನು ಹಾಯುತ್ತಿದ್ದ. ಬಹಳ ಪ್ರಾಯಸದಿಂದ ಕತ್ತೆತ್ತಿ ನಮ್ಮನ್ನು ನೋಡಿ ನಗಲೆತ್ನಿಸುತ್ತಿದ್ದ. ಮರದೊಳಗೆ ಸುಟ್ಟ ಬಳ್ಲಿಯಂತೆ ಕಾಣುತ್ತಿದ್ದ ಊರುತಾತನ ಮೈಯೆಲ್ಲ ಅಸಂಖ್ಯಾತ ತಿಗಣೆ, ಕೂರೆಹೇನುಗಳು ಬೀಡುಬಿಟ್ಟಿದ್ದವು. ನಮ್ಮ ಚಿಕ್ಕಮ್ಮ ಆಂಜಿನಮ್ಮ ಊರುತಾತನಿಗೆ ಕುಳಿತಲ್ಲೇ, ಮಲಗಿದಲ್ಲೇ ಸ್ನಾನ ಮಾಡಿಸಿ, ಬಟ್ಟೆಬರೆಗಳಲ್ಲಿ ಕೂರೆಹೇನುಗಳನ್ನು ಹೆಕ್ಕಿ ತೆಗೆದು, ಒಗೆದು ತೊಡಿಸುತ್ತಿದ್ದಳು.

ಅದೇ ಎತ್ತಿನಬಂಡಿ ಚಕ್ರದ ಹತ್ತಿರ, ಎತ್ತುಗಳು ಜೋಳದ ಕಡ್ಡಿ ಮೇಯುವಲ್ಲಿ, ತಿಗಣೆ, ಕೂರೆಹೇನುಗಳ ಹಾಸಿಗೆ, ಹೊದಿಕೆಗಳಲ್ಲಿ ಊರುತಾತ ಹೆಣವಾಗಿ ಮಲಗಿದಾಗ, ನಾವೆಲ್ಲರೂ ಒಮ್ಮೆ ನೋಡಿದೆವೊ ಇಲ್ಲವೊ, ಆತ ನೆರಳಿಗಾಗಿ ಮಲಗಿದ ಮರಗಳಲ್ಲಿ ಆಟವಾಡಲು ಓಡಿಹೋಗಿದ್ದೆವು.   

‍ಲೇಖಕರು avadhi

February 28, 2008

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ...

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

- ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This