‘ಊರೆಂಬ ಉದರ’ದ ಕರ್ತೃವಿಗೆ ನುಡಿನಮನ

ನಮ್ಮ ಸಂತೇಕಡೂರು ಶಿವಮೊಗ್ಗ ಸಮೀಪ ತುಂಗಾ ತೀರದ ಬಲಗಡೆಯಲ್ಲಿರುವ ಸಂಸ್ಕೃತ ಗ್ರಾಮಕ್ಕೆ ಕೇವಲ ನಾಲ್ಕು ಕಿಲೋಮೀಟರುಗಳ ಅಂತರದಲ್ಲಿರುವ ಹಳ್ಳಿ. ಆ ಕಾರಣದಿಂದ ನಾನು ನನ್ನ ಬಾಲ್ಯದಲ್ಲಿ ಮತ್ತು ಇತ್ತೀಚಿನ ದಿನಗಳಲ್ಲಿಯೂ ಮತ್ತೂರಿಗೆ ಬಹಳ ಸಲ ಹೋಗಿ ಬಂದಿದ್ದೇನೆ. ಆ ಊರಿನ ಬ್ರಾಹ್ಮಣರ ಆಚಾರ ವಿಚಾರ ನಾನು ನೋಡಿರುವ ಇತರೆ ಬ್ರಾಹ್ಮಣರ ಆಚಾರ ವಿಚಾರಗಳ ಹಾಗೆ ಇರದೇ ಬೇರೆಯ ರೀತಿಯೇ ಇರುವುದನ್ನು ನೋಡಿ ಅಚ್ಚರಿ ಪಟ್ಟಿದ್ದೇನೆ.

ನಮ್ಮ ಊರಿಗೆ ಕ್ರಿಕೆಟ್ ಆಡಲು ಬರುತ್ತಿದ್ದ ಅಲ್ಲಿನ ಬ್ರಾಹ್ಮಣ ಯುವಕರುಗಳು ಪಂಚೆಯುಟ್ಟು ಆಧುನಿಕ ಶೂಗಳ ಜೊತೆಗೆ ಕಾಲು ಚೀಲಗಳನ್ನು ಹಾಕಿಕೊಂಡು ಫೀಲ್ಡಿಂಗ್ ಮಾಡುತ್ತಿದ್ದದ್ದು ಇಂದಿಗೂ ನನ್ನ ಕಣ್ಣ ಮುಂದೆಯೇ ಇದೆ. ಆ ಕಾಲಕ್ಕೆ ಆ ಶೂಗಳು ಅತೀ ಹೆಚ್ಚು ಓದಿರುವ ಅತೀ ಶ್ರೀಮಂತರ ಮನೆಯ ಹುಡುಗರು ಮಾತ್ರ ಹಾಕುತ್ತಿದ್ದವಾಗಿದ್ದವು ಎಂದು ಹೇಳಬಹುದು.

ಇದರ ಜೊತೆಗೆ ಕೆಲವರು ಐವತ್ತೋ ನೂರೋ ಕೂದಲಿನ ಎಳೆಗಳ ಪುರೋಹಿತರ ಚಿಕ್ಕ ಜುಟ್ಟನ್ನು ಬಿಟ್ಟಿರುತ್ತಿದ್ದರು. ಶೂಗಳು ಅವರ ಆಧುನಿಕತೆಯನ್ನು ತೋರಿಸುತ್ತಿದ್ದರೆ ಜುಟ್ಟು ಅವರ ಪ್ರಾಚೀನ ಪರಂಪರೆಯನ್ನು ತೋರಿಸುತಿತ್ತು. ಇಂದಿಗೂ ಮತ್ತೂರು, ಅಲ್ಲಿನ ಅಡಿಕೆ ತೋಟಗಳು, ಅವರ ಸಂಕೇತಿ ಮತ್ತು ಸಂಸ್ಕೃತ ಭಾಷೆಗಳು ನನ್ನನ್ನು ಆಕರ್ಷಿಸಿವೆ.

ಮತ್ತೂರು ಕೂಡ ಸಂಕೇತಿಗಳ ಗ್ರಾಮ ಎಂದು ಇತ್ತೀಚಿನವರೆಗೂ ನನಗೆ ತಿಳಿದಿರಲಿಲ್ಲ. ನನ್ನ “ವಂಶವಾಹಿನಿ” ಕತೆಯ ಕೇಂದ್ರ ಬಿಂದು ಕೂಡ ಈ ಮತ್ತೂರು ಮತ್ತು ಅಲ್ಲಿನ ತುಂಗಾ ನದಿ. ಇಂದು ಮತ್ತೂರು ಸಂಸ್ಕೃತದಿಂದ ಮತ್ತು ಮತ್ತೂರು ಕೃಷ್ಣಮೂರ್ತಿಗಳಿಂದ ಲೋಕವಿಖ್ಯಾತವಾಗಿದೆ.

ನಮ್ಮ ಊರಿನ ಮಾರಿಹಬ್ಬಕ್ಕೂ ಮತ್ತೂರಿನ ಮಾರಿಹಬ್ಬಕ್ಕೂ ನೂರಾರು ವರ್ಷಗಳ ಸಂಬಂಧವಿದೆ. ಮೂರು ವರ್ಷಕೊಮ್ಮೆ ಜರಗುವ ನಮ್ಮ ಊರಿನ ಮಾರಿಹಬ್ಬ ಮತ್ತೂರಿನ ಮಾರಿಹಬ್ಬ ಆಗಿ ಏಳು ದಿನಕ್ಕೆ ನಡೆಯುತ್ತದೆ. ಅಲ್ಲಿ ಯಾವುದೋ ಕಾರಣದಿಂದ ಮಾರಿಹಬ್ಬ ಮಾಡದಿದ್ದರೆ ನಮ್ಮೂರಿನಲ್ಲೂ ಮಾರಿಹಬ್ಬ ಮಾಡುವುದಿಲ್ಲ.

ಇನ್ನು ನಮ್ಮೂರಿನ ನನ್ನ ಕೆಲವು ಹಿರಿಯ ಗೆಳೆಯರು ತಮ್ಮ ಪ್ರೌಢಶಾಲೆ ಓದಲು ಹೇಮಗಿರಿ ಎಂಬ ಒಂದು ಊರಿಗೆ ಹೋಗಿದ್ದರು. ಆ ಹೇಮಗಿರಿ ಎಲ್ಲಿದೆ ಎಂದು ಬಹಳ ವರ್ಷಗಳ ಕಾಲ ನಾನು ಹುಡುಕುತ್ತಿದ್ದೆ. ಆ ಹೇಮಗಿರಿ ಹೇಗಿದೆ ಎಂದು ನೋಡಲು ಇಂದಿಗೂ ನಾನು ಉತ್ಸುಕನಾಗಿದ್ದೇನೆ.

ಮತ್ತೂರಿನ ಬಗ್ಗೆ ಇಷ್ಟೆಲ್ಲ ಇಲ್ಲಿ ಹೇಳಲು ಮುಖ್ಯ ಕಾರಣ ಅದೇ ಮತ್ತೂರಿನ ತರಹವೇ ಇರುವ ಹೇಮಾವತಿ ನದಿ ತೀರದ ಒಂದು ಹಳ್ಳಿ, ಕುಪ್ಪಹಳ್ಳಿ. ಇದು ಕುವೆಂಪುರವರ ಕುಪ್ಪಳಿ ಅಲ್ಲ. ಈ ಗ್ರಾಮವಿರುವುದು ಮಂಡ್ಯ ಜಿಲ್ಲೆಯ ಕೃಷ್ಣರಾಜ ಪೇಟೆ ತಾಲೂಕಿನಲ್ಲಿ, ಇದು ಹಾಸನ ಜಿಲ್ಲೆಯ ಗಡಿಭಾಗವೂ ಆಗಿದೆ ಎಂದು ಹೇಳಬಹುದು.

ನಾನು ಇಲ್ಲಿ ತಿಳಿಸುತ್ತಿರುವ ಪುಸ್ತಕ ಈ ಕುಪ್ಪಹಳ್ಳಿ ಎಂಬ ಸಂಕೇತಿ ಜನಾಂಗದ ಊರಿನ ಬಗ್ಗೆ ಇದೆ. ಈ ಪುಸ್ತಕ ಅಲ್ಲಿನ ಸಂಸ್ಕೃತಿ, ಆಚಾರ, ವಿಚಾರ, ಅದರಲ್ಲೂ ಮುಖ್ಯವಾಗಿ ಆ ಜನರ ಅಡುಗೆ ಮತ್ತು ಅಲ್ಲಿನ ಜನ ಜೀವನ ಎಲ್ಲವನ್ನೂ ಚೆನ್ನಾಗಿ ತೆರೆದಿಡುತ್ತದೆ. ಅಂದ ಹಾಗೆ ಬಹುಕಾಲದಿಂದಲೂ ನಾನು ಹುಡುಕುತ್ತಿದ್ದ ಹೇಮಗಿರಿಯೇ ಈ ಕುಪ್ಪಹಳ್ಳಿ. ಹಿಂದೆ ಕುಪ್ಪಹಳ್ಳಿ ಎಂದು ಕರೆಯುತ್ತಿದ್ದರು. ಈಗ ಅದು ಹೇಮಗಿರಿಯಾಗಿದೆ.

ಈ ಪುಸ್ತಕದ  ಪ್ರಕಾಶಕರು ಅಕ್ಷರ ಪ್ರಕಾಶನ, ಹೆಗ್ಗೋಡು ಮತ್ತು ಇದರ ಲೇಖಕಿ ಪ್ರಮೀಳಾ ಸ್ವಾಮಿಯವರು. ಈ ಪುಸ್ತಕವನ್ನು ಪುಸ್ತಕದ ಅಂಗಡಿಗಳಲ್ಲಿ ನೋಡಿದಾಗಲೆಲ್ಲಾ ಏನೋ ಒಂದು ರೀತಿ ಆಕರ್ಷಿಸುತ್ತಿತ್ತು. ಆದರೂ ಓದಲಾಗಿರಲಿಲ್ಲ. ಇತ್ತೀಚೆಗೆ ಅಂದರೆ ಡಿಸೆಂಬರ್ ಕೊನೆಯವಾರ ನನ್ನ ವೈಯಕ್ತಿಕ ಕೆಲಸಕ್ಕೆಂದು ಹೆಸರಾಂತ ಪತ್ರಕರ್ತೆ ದೀಪಾ ಗಣೇಶ್ ಅವರಿಗೆ ಕರೆ ಮಾಡಿದ್ದೆ. ಅವರ ಜೊತೆ ಸಾಹಿತ್ಯ ಮತ್ತು ಇತರೆ ವಿಷಯಗಳ ಬಗ್ಗೆ ಚರ್ಚೆ ಮಾಡಿದ ಮೇಲೆ ಅವರು ಮೈಸೂರಿನವರೆಂದು ತಿಳಿಯಿತು. ನಿಮ್ಮ ತಂದೆ-ತಾಯಿ ಮೈಸೂರಿನಲ್ಲಿ ಇದ್ದರೆ ಅವರನ್ನು ನೋಡಲು ಬಂದಾಗ ತಿಳಿಸಿ ಭೇಟಿಯಾಗೋಣ ಎಂದು ಹೇಳಿದೆ. ಅದಕ್ಕೆ ಅವರು ಮೈಸೂರಿಗೆ ಆಗಾಗ ಬರುತ್ತಿರುತ್ತೇನೆ, ತಿಳಿಸುತ್ತೇನೆ ಎಂದು ಹೇಳಿದರು.

ದೀಪಾ ಗಣೇಶ್ ಅವರು ಇಂಗ್ಲಿಷ್ ದಿನ ಪತ್ರಿಕೆ ‘ದಿ ಹಿಂದೂ’ ಮತ್ತು ‘ಫ್ರಂಟ್ ಲೈನ್’ ಎರಡರಲ್ಲೂ ತುಂಬಾ ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ದೀಪಾ ಅವರ ಬಗ್ಗೆ ನನಗೆ ಮೊದಲು ತಿಳಿಸಿದವರು ಡಾ. ಕೃಷ್ಣಮೂರ್ತಿ ಹನೂರರು. ಆಮೇಲೆ ವೈದೇಹಿಯವರು ಸರಸ್ವತಿ ರಾಜವಾಡೆಯವರ ಬಗ್ಗೆ ಬರೆದಿರುವ ಪುಸ್ತಕವೊಂದನ್ನು ದೀಪಾ ಅವರು Just A Few Pages: Some Memories Of Saraswatibai Rajwade ಇಂಗ್ಲಿಷಿಗೆ ಅನುವಾದ ಮಾಡಿರುವ ಪುಸ್ತಕ ನಾನು ಓದಿದ್ದೆ.

ಕಳೆದ ವರ್ಷ ಡಿಸೆಂಬರ್ ೩೧ನೇ ತಾರೀಖು ಗೆಳೆಯ ಸಂತೋಷ ಕನ್ನಡ ಜೊತೆ ಮೈಸೂರಿನ ಸಪ್ನಾ ಪುಸ್ತಕದ ಅಂಗಡಿಯಲ್ಲಿ ‘ಊರೆಂಬ ಉದರ’ ಪುಸ್ತಕವನ್ನು ಹುಡುಕಿದೆ ಸಿಗಲಿಲ್ಲ. ಲೇಖಕಿ ಪ್ರಮೀಳಾ ಸ್ವಾಮಿಯವರು ಯಾರಿರಬಹುದು? ಇದುವರೆಗೂ ಅವರ ಬಗ್ಗೆ ಕೇಳಿಯೇ ಇಲ್ಲವಲ್ಲ ಅಂದುಕೊಂಡೆ. ಅದು ಕಾಕತಾಳಿಯವೋ ಅಥವಾ ಆರನೇ ಇಂದ್ರಿಯದ ಸುಳಿವೋ ತಿಳಿಯದು. ಈ ವರ್ಷದ ಜನವರಿ ಎರಡನೇ ತಾರೀಖು ಪತ್ರಕರ್ತರೂ. ಅಂಕಣಕಾರರು ಜೊತೆಗೆ ಲೇಖಕರೂ ಆಗಿರುವ ನಾಗೇಶ್ ಹೆಗಡೆಯವರು ತಮ್ಮ ಫೇಸ್ಬುಕ್ ಗೋಡೆಯ ಮೇಲೆ ಪ್ರಮೀಳಾ ಸ್ವಾಮಿಯವರು ಎರಡು ದಿನದ ಹಿಂದೆ ನಿಧನರಾಗಿರುವ ಸುದ್ದಿಯನ್ನು ತಿಳಿಸಿ, ಈ ಪುಸ್ತಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಈ ಪುಸ್ತಕದ ಬಗ್ಗೆ ಲೇಖಕರಾದ ವಿವೇಕ್ ಶಾನಭಾಗರು ಮತ್ತು ಜಯಂತ್ ಕಾಯ್ಕಿಣಿಯವರು ಕೂಡ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇಂದಿಗೆ ಪ್ರಮೀಳಾ ಸ್ವಾಮಿಯವರು ತೀರಿ ಹೋಗಿ ಕೇವಲ ಹನ್ನೊಂದು ದಿನವಷ್ಟೇ ಆಗಿದೆ. ಬದುಕಿನುದ್ದಕ್ಕೂ ಅಜ್ಞಾತವಾಗಿದ್ದ ಮಹಿಳೆಯೊಬ್ಬರು ತನ್ನ ಸಾವಿನ ಕೊನೆಯ ದಿನಗಳಲ್ಲಿ ಒಬ್ಬ ಲೇಖಕಿಯಾಗಿ ತನ್ನ ನೆನಪುಗಳನ್ನು ಮುಂದಿನ ತಲೆಮಾರಿಗೆ ಬಿಟ್ಟು ಹೋಗಿರುವುದು ಒಂದು ಸಾಧನೆಯಾದರೆ ಮುಂದಿನ ತಲೆಮಾರಿಗೆ ಇದೊಂದು ಕೊಡುಗೆ ಕೂಡ ಆಗಿದೆ.

ಈ ಪ್ರಮೀಳಾ ಸ್ವಾಮಿಯವರು ಬೇರೆ ಯಾರು ಅಲ್ಲ. ಇವರು ನಾನು ಮೇಲೆ ಹೇಳಿದ ಪತ್ರಕರ್ತೆ ದೀಪಾ ಗಣೇಶ್ ಅವರ ಸ್ವಂತ ತಾಯಿ. ಈ ಪುಸ್ತಕಕ್ಕೆ ದೀಪಾ ಅವರೆ ‘ಸೂಪ ಶಾಸ್ತ್ರದ ಸುತ್ತಾ’ ಎಂಬ ಮುನ್ನುಡಿ ಬರೆದಿದ್ದಾರೆ. ಮೇಲ್ನೋಟಕ್ಕೆ ಇದೊಂದು ಪಾಕಶಾಸ್ತ್ರದ ಪುಸ್ತಕದ ರೀತಿ ಕಂಡರೂ ಇದು ಕಳೆದು ಹೋದ ಗ್ರಾಮ ಬದುಕಿನ ಸುಂದರ ನೆನಪುಗಳನ್ನು ಮತ್ತು ಜನಾಂಗವೊಂದರ ಇತಿಹಾಸವನ್ನು ನಮ್ಮ ಮುಂದೆ ತೆರೆದಿಡುತ್ತದೆ. ರೈತಾಪಿ ಜನರ ಬದುಕು ಮನೋರಂಜನೆಯ ಕಲ್ಪನೆಯೇ ಇಲ್ಲದ ಕಾಲದಲ್ಲಿ ಮನುಷ್ಯ ಹೇಗೆ ಸಂತೋಷದಿಂದ ಬದುಕುತ್ತಿದ್ದ ಎಂದು ಇಲ್ಲಿ ಕಾಣಬಹುದು.    

ಹಾಗಾದರೆ ಈ ಸಂಕೇತಿಗಳು ಯಾರು? ಆ ಜನಾಂಗದ ಮುಖ್ಯ ಕಸುಬೇನಾಗಿತ್ತು? ಇಂದು ಆ ಜನರೆಲ್ಲಾ ಎಲ್ಲಿದ್ದಾರೆ?

ಸಂಕೇತಿಗಳು ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿರುವ ಈ ಜನಾಂಗ, ಸಂಕೇತಿ ಎಂಬ ತಮಿಳು ಮತ್ತು ಮಲಯಾಳಂ ಭಾಷೆಗಳ ಉಪಭಾಷೆಯೊಂದನ್ನು ನುಡಿಯುವ ಸಮುದಾಯ. ಇವರು ದಕ್ಷಿಣ ಕರ್ನಾಟಕದಲ್ಲಿ ಅದರಲ್ಲೂ ಹಳೇ ಮೈಸೂರು ಪ್ರಾಂತ್ಯದಲ್ಲಿ ಸುಪರಿಚಿತರೇ ಆಗಿದ್ದಾರೆ. ಹೆಚ್ಚಾಗಿ ಕಾವೇರಿ, ಹೇಮಾವತಿ, ತುಂಗಾ ಮತ್ತು ಭದ್ರಾ ನದಿಗಳ ದಡದಲ್ಲಿ ತಮ್ಮ ಊರುಗಳನ್ನು ನಿರ್ಮಿಸಿಕೊಂಡು ಕೃಷಿ ಮತ್ತು ಅಡಿಕೆ ತೋಟಗಳನ್ನು ಮಾಡಿಕೊಂಡು ಬದುಕುತ್ತಿದ್ದರು ಈಗಲೂ ಬದುಕುತ್ತಿದ್ದಾರೆ.

ಈ ಸಮುದಾಯವು ಸುಮಾರು ಒಂದು ಸಾವಿರ ವರ್ಷಗಳ ಹಿಂದೆಯೇ ದಕ್ಷಿಣ ತಮಿಳುನಾಡು ಮತ್ತು ಕೇರಳ ಗಡಿ ಭಾಗವಾದ ಸೆಂಗೋಟ್ಟೈ ನಿಂದ  ಬಂದು ಕರ್ನಾಟಕದಲ್ಲಿ ನೆಲೆಸಿದ್ದರೂ, ತಮ್ಮ ಹೊರಗಿನ ಎಲ್ಲ ವ್ಯವಹಾರಗಳಿಗೆ ಮೊದಲಿನಿಂದಲೂ ಕನ್ನಡವನ್ನೇ ಆಶ್ರಯಿಸಿದ್ದರೂ, ಎಲ್ಲ ಓದು ಬರವಣಿಗೆಗೂ ಕನ್ನಡವನ್ನೇ ಬಳಸುತ್ತಾ ಬಂದಿದ್ದರೂ ಮನೆಮಾತಾಗಿ ಸಂಕೇತಿಯನ್ನು ಉಳಿಸಿಕೊಂಡು ಬಂದಿದ್ದಾರೆ. ಕರ್ನಾಟಕಕ್ಕೆ ವಲಸೆ ಬಂದ ಮೊದಲ ತಮಿಳು ಭಾಷಿಕ ಸಮುದಾಯವಾಗಿ ಈ ಸಂಕೇತಿಗಳನ್ನು ಭಾಷಾ ತಜ್ಞರು ಇತಿಹಾಸಕಾರರು ಗುರುತಿಸುತ್ತಾರೆ.

ಇಂದು ಜಗತ್ತಿನ ವಿವಿಧ ದೇಶಗಳಲ್ಲಿ ಉನ್ನತ ಹುದ್ದೆಗಳಲ್ಲಿರುವ ಸಂಕೇತಿಗಳು ಕರ್ನಾಟಕಕ್ಕೆ ಮೊದಲು ಬಂದಿದ್ದು ಹನ್ನೊಂದನೇ ಶತಮಾನ ಇರಬಹುದು ಎಂದು ಕಲ್ಯಾಣ ಚಾಲುಕ್ಯ ಚಕ್ರವರ್ತಿ ಆರನೇ ವಿಕ್ರಮಾದಿತ್ಯನ (೧೦೮೭ರ) ನೀಲಗುಂದ ಶಾಸನವು ತಿಳಿಸುತ್ತದೆ. ಅವನು ತಮಿಳು ದೇಶದಿಂದ ಬಂದ ಒಂದು ಗುಂಪಿಗೆ ಆಶ್ರಯ ನೀಡಿದ ಎಂದು ಆ ಶಾಸನ ತಿಳಿಸುತ್ತದೆಂದೂ, ಇವರೇ ಕರ್ನಾಟಕಕ್ಕೆ ಬಂದ ಮೊದಲ ಸಂಕೇತಿ ವಲಸಿಗರೆಂದೂ ಸಂಶೋಧಕ ಶ್ರೀ ಪ್ರಣತಾರ್ತಿಹರನ್ ತಮ್ಮ ಸಂಶೋಧನೆಗಳಿಂದ ತೋರಿಸಿಕೊಟ್ಟಿದ್ದಾರೆ ಎಂದು ತಿಳಿದು ಬರುತ್ತದೆ.

ಇವರಲ್ಲೇ ಕೆಲವರು ಶ್ರೀ ರಾಮಾನುಜಾಚಾರ್ಯರ ಅನುಯಾಯಿಗಳಾಗಿ ನಂತರ ಹೆಬ್ಬಾರ ಅಯ್ಯಂಗಾರರಾದರೆಂದು ಅವರ ಅಭಿಪ್ರಾಯವಾಗಿದೆ. ಆ ಕಾರಣದಿಂದ ಸಂಕೇತಿಗಳು ಸುಮಾರು ಕಲ್ಯಾಣ ಚಾಲುಕ್ಯರು ಮತ್ತು ಹೊಯ್ಸಳರ ಕಾಲದಲ್ಲೇ ಕರ್ನಾಟಕಕ್ಕೆ ಬಂದಿದ್ದಾರೆ ಎಂದು ತಿಳಿದುಬರುತ್ತದೆ.

ಆ ನಂತರ, ೧೪೨೩ರ ವಿಜಯನಗರದ ಬುಕ್ಕರಾಯನ ಶಾಸನದಲ್ಲಿ ಬರುವ ಕೆಲವು ಹೆಸರುಗಳ ಆಧಾರದಿಂದ ಸಂಕೇತಿಗಳು ಶಿವಮೊಗ್ಗ ಸೀಮೆಯ ಮತ್ತೂರು, ಹೊಸಹಳ್ಳಿ, ಕೂಡ್ಲಿ, ಹಸೂಡಿ, ಸೋಗಾನೆ, ಹರಿಹರಪುರ, ಕೊಪ್ಪ, ನರಸಿಂಹರಾಜಪುರ ಮುಂತಾದ ಕಡೆ ಆ ವೇಳೆಗೆ ನೆಲೆಗೊಂಡಿದ್ದಿರಬೇಕೆಂದು ಇತಿಹಾಸಕಾರರು ಊಹಿಸುತ್ತಾರೆ. ಈ ಸಮುದಾಯದ ಮೊದಲು ಹಾಸನ ಜಿಲ್ಲೆಯ ಕೌಶಿಕವೆಂಬ ಹಳ್ಳಿಯಲ್ಲಿ ನೆಲೆಗೊಂಡು ಇನ್ನೊಂದು ಗುಂಪು ಮೈಸೂರು ಜಿಲ್ಲೆಯ  ಅಂದರೆ ಹಾಸನ ಮತ್ತು ಮೈಸೂರು ಜಿಲ್ಲೆಯ ಗಡಿಭಾಗವಾದ ಬೆಟ್ಟದಪುರದಲ್ಲಿ ಬಂದು ನೆಲೆನಿಂತರೆಂದೂ ತಿಳಿಯುತ್ತದೆ.

ಈ ಪುಸ್ತಕದಲ್ಲಿ ಲೇಖಕಿ ಪ್ರಮೀಳಾ ಸ್ವಾಮಿಯವರು ತಾವು ಹುಟ್ಟಿದ ಆ ಊರಿನ ಬಗ್ಗೆ ಹೆಚ್ಚು ಭಾವನಾತ್ಮಕವಾಗಿ ಹೇಳುತ್ತಾ ಅವರ ಅವಿಭಕ್ತ ಕುಟುಂಬ, ಅಲ್ಲಿನ ಪರಿಸರ, ಹೇಮಾವತಿ ನದಿ, ನೂರಾರು ತರಹದ ಮಾವಿನ ಮರಗಳು. ಅವರ ವಿಧವಿಧವಾದ ಅಡುಗೆ ಮತ್ತು ತಿಂಡಿಗಳು. ಆ  ಊರಿನಲ್ಲಿ ಬದುಕಿದ್ದ ಬೇರೆ ಬೇರೆ ಜನರ ನಡುವೆ ಇದ್ದ ಸಹಬಾಳ್ವೆ. ಅಲ್ಲಿನ ಬೇರೆ ಬೇರೆ ವ್ಯಕ್ತಿಗಳು ಅವರ ಬದುಕಿನ ಕತೆ. ಬೇರೆ ಬೇರೆ ಘಟನೆಗಳು ಎಲ್ಲವೂ ಬರುತ್ತವೆ.

ಶಾಲೆಯಲ್ಲಿ ಓದಿನ ಜೊತೆ ಎಲ್ಲದರಲ್ಲೂ ಮುಂದಿದ್ದ ಲೇಖಕಿ ತಾನೇ ಬರೆದ ನಾಟಕವನ್ನು ಶಾಲೆಯಲ್ಲಿ ಆಡಿ ತೋರಿಸಿದ್ದು ಎಲ್ಲವೂ ನಮ್ಮ ಕಣ್ಣ ಮುಂದೆ ಬರುತ್ತದೆ. ಅಲ್ಲಿನ ವಿಧವೆಯರ ದಿಟ್ಟ ಬದುಕು, ನೋವಿನಲ್ಲೂ ಬದುಕನ್ನು ಎದುರುಸುತ್ತಿದ್ದ ರೀತಿಯನ್ನು ಕಾಣಬಹುದು.

ಇಲ್ಲಿ ಲೇಖಕಿಯ ಬಾಲ್ಯ, ಆ ಊರಿನ ಪಕ್ಕದಲ್ಲಿಯೇ ಇದ್ದ ಹೇಮಗಿರಿಯ ರಂಗನಾಥ ಸ್ವಾಮಿಯ ಬೆಟ್ಟ, ಅಲ್ಲಿನ ಅರ್ಚಕರು, ಅವರ ಶಾಲೆ ಮತ್ತು ಸಹಪಾಠಿಗಳು, ಬೇಸಿಗೆ ಕಾಲದ ಚಟುವಟಿಕೆಗಳು, ಮಾವಿನ ಮೀಡಿ, ಹಿಪ್ಪೆ ಮತ್ತು ಹರಳಿನ ಎಣ್ಣೆ ತೆಗೆಯುವ ಕೆಲಸ, ಹೊಳೆ ಮತ್ತು ಹರಿಗೋಲು, ಹಸುಗಳು, ಸಂಕೇತಿಗಳ ಹಬ್ಬಗಳು, ತಿಂಡಿಗಳು, ರಾಮನವಮಿ, ನಾಗರ ಪಂಚಮಿ, ನವರಾತ್ರಿ. ದೀಪಾವಳಿ, ಹೇಮಗಿರಿಯ ಜಾತ್ರೆ, ಆ ಊರಿನಲ್ಲಿ ಹುಡುಗಿಯೊಬ್ಬಳು ಋತುಮತಿಯಾದರೆ ನಡೆಸುತ್ತಿದ್ದ ಸಮಾರಂಭ, ತಿಥಿ ಅಡುಗೆ, ಲೇಖಕಿಯ ತಂದೆ, ತಾಯಿ, ಲೇಖಕಿಯ ಸೋದರತ್ತೆ, ಸೋದರ ಮಾವ, ಸತ್ಯ ಮೇಷ್ಟ್ರು, ಕೆ.ಆರ್. ಪೇಟೆಗೆ ಬರುತ್ತಿದ್ದ ಟೂರಿಂಗ್ ಟಾಕೀಸ್, ತೋಟದ ಊಟ, ಲೇಖಕಿ ಮತ್ತು ಅವರ ತಾಯಿ ಹೇಮಾವತಿ ನದಿಗೆ ಪಾತ್ರೆ ತೊಳೆಯಲು ಹೋದಾಗ ಜೋರು ಮಳೆಗೆ ಸಿಲುಕಿ ಬೆಳ್ಳಿ ಪಾತ್ರೆಗಳು ನದಿಯಲ್ಲಿ ಮುಳುಗಿದಾಗ ಸಹಾಯ ಮಾಡಿದ ಮುಸ್ಲಿಂ ಬಾಲಕ ಎಲ್ಲರ ಬಗ್ಗೆಯೂ ವಿವರಣೆಗಳಿವೆ.

ಮನದಾಳದಲ್ಲಿ ಉಳಿದಿರುವ ವ್ಯಕ್ತಿಗಳು ಎಂಬ ಅಧ್ಯಾಯದಲ್ಲಿ ಲೇಖಕಿ ತಮ್ಮ ನೆನಪಿನಲ್ಲಿ ಉಳಿದಿರುವ ವ್ಯಕ್ತಿಗಳ ಬಗ್ಗೆ ಒಂದು ಅಧ್ಯಾಯ ಬರೆದಿದ್ದಾರೆ ಅದರಲ್ಲಿ ಒಕ್ಕಲಿಗರ ನಂಜೇಗೌಡ, ದೊಡ್ಡೇಗೌಡ, ಲಿಂಗಾಯತರ ಶಿವಯ್ಯ, ವಡೇರಯ್ಯ ಮತ್ತು ಕ್ಷೌರಿಕ  ಗೆಡ್ಡೆ ಎಂಬ ವ್ಯಕ್ತಿಗಳು ಬರುತ್ತಾರೆ. ಆ ಜನ ಯಾವುದೇ ಮತ್ಸರವಿಲ್ಲದೆ ಹೇಗೆ ಸಹಭಾಳ್ವೆ ನಡೆಸುತ್ತಿದ್ದರೆಂದು ಕೇಳಿದರೆ ಸಂತೋಷವಾಗುತ್ತದೆ. ಈ ಪಾತ್ರಗಳು ಗೊರೂರರ ‘ನಮ್ಮ ಊರಿನ ರಸಿಕರು’ಗಳನ್ನು ಜ್ಞಾಪಕಕ್ಕೆ ತರುತ್ತವೆ. ಜೊತೆಗೆ ಪ್ರತಿಯೊಬ್ಬರೂ ಸುಲಭವಾಗಿ ಮಾಡಬಹುದಾದ ಹಲವಾರು ಸಂಕೇತಿ ಅಡುಗೆಗಳ ವಿವರಣೆಗಳಿವೆ.

ಅನುಬಂಧದಲ್ಲಿ ಲೇಖಕಿ ಈ ಕೃತಿಯನ್ನು ಏಕೆ ಬರೆದರು ಎಂದು ಹೇಳುವಾಗ “ನಾನು ಆಗಾಗ ನೆನೆಸಿಕೊಳ್ಳುತ್ತಿದ್ದ ನನ್ನ ಊರು, ಮನೆ, ಪರಿವಾರ, ಪರಿಸರ, ಸ್ನೇಹಿತರು, ಭಾಷೆ, ಅಡುಗೆ ಎಲ್ಲವೂ ಬರಿಯ ನೆನಪಲ್ಲದೇ ನನ್ನ ಒಂದು ಭಾಗವೇ ಆಗಿದೆ ಎನ್ನುವುದು. ಅದು ನನ್ನೊಂದಿಗೆ ಸಹಚಾರಿಯಾಗಿ ನನ್ನ ಇಡೀ ಬದುಕಿಗೆ ಒಂದು ಅರ್ಥ ಕೊಡುವುದಲ್ಲದೇ, ನನ್ನ ಅಸ್ತಿತ್ವವನ್ನೂ ರೂಪಿಸಿದೆ. ನಾನು ನನ್ನ ಬದುಕಿನಲ್ಲಿ ಏನಾದೆನೋ, ಏನನ್ನು ಅರಸಿದೆನೋ, ಅವೆಲ್ಲಾ ನನಗೆ ಊರು ಕೊಟ್ಟ ಕೊಡುಗೆ” ಎಂದು ಹೇಳುತ್ತಾರೆ.

ವೈಯಕ್ತಿಕವಾಗಿ ಹೇಳುವುದಾದರೆ ನಮ್ಮ ಸಂತೇಕಡೂರಿನ ಬಗ್ಗೆ ನನಗೂ ಇದೆ ಭಾವನೆ ಇದೆ. ಅದಕ್ಕೆ “ಸು” ಕಿರುಕಾದಂಬರಿಯನ್ನು ನನ್ನೂರಿನ ಮಹಾಜನತೆಗೆ ಅರ್ಪಿಸಿದ್ದೇನೆ. ಚಿತ್ತಾಲರಿಗೆ ಹನೇಹಳ್ಳಿಯ ಬಗ್ಗೆ, ಕಾಯ್ಕಿಣಿಯರಿಗೆ ಗೋಕರ್ಣದ ಬಗ್ಗೆ, ಕುವೆಂಪು ಅವರಿಗೆ ಮಲೆನಾಡಿನ ಬಗ್ಗೆ, ಅನಂತಮೂರ್ತಿಯವರಿಗೆ ಮೇಳಗಿಯ ಬಗ್ಗೆ, ಕಂಬಾರರ ಶಿವಾಪುರ, ಆಲನಹಳ್ಳಿ ಶ್ರೀಕೃಷ್ಣರಿಗೆ ಆಲನಹಳ್ಳಿಯ ಬಗ್ಗೆ ಇನ್ನು ಹಲವು ಲೇಖಕರಿಗೆ ತಮ್ಮ ತಮ್ಮ ಊರಿನ ಬಗ್ಗೆ ಇದೆ ಭಾವನೆ ಇರುತ್ತದೆ. ಲೇಖಕರಿಗಲ್ಲದೆ ಸಾಮಾನ್ಯ ಜನರಿಗೂ ತಮ್ಮ ತಮ್ಮ ಊರಿನ ಬಗ್ಗೆ ಏನೋ ಒಂದು ಭಾವುಕತನವಿರುತ್ತದೆ.  

ಈ ಪುಸ್ತಕಕ್ಕೆ ಬೆನ್ನುಡಿಯ ರೂಪದಲ್ಲಿ ಖ್ಯಾತ ಲೇಖಕರುಗಳಾದ ವೈದೇಹಿ, ಸಿ ಎನ್ ರಾಮಚಂದ್ರನ್, ಮಾಲತಿ ಶರ್ಮ ಚೆನ್ನಾಗಿ ಬರೆದಿದ್ದಾರೆ. ಕೊನೆಗೆ ಎಂ ಶ್ರೀಧರ ಮೂರ್ತಿಯವರು ರುಚಿ ಮೀಮಾಂಸೆ ಎಂಬ ಕೆಲವು ಸಾಲುಗಳಲ್ಲಿ ಈ ಪುಸ್ತಕದಲ್ಲಿ ಗತಿಸಿದ ಒಂದು ಕಾಲಮಾನದ ಸಂಸ್ಕೃತಿ ಕಥನವಿದೆ ಎಂದು ಹೇಳುತ್ತಾರೆ. ಇಲ್ಲಿನ ವ್ಯಕ್ತಿಚಿತ್ರಗಳು ನನಗೂ ಗೊರೂರರ ಜ್ಞಾಪಕ ತಂದದ್ದು ನಿಜ.  ಜೊತೆಗೆ ಇಂತಹ ಅಪರೂಪದ ಕೃತಿ ಪ್ರಕಟಿಸಿದ್ದಕ್ಕೆ ಅಕ್ಷರ ಪ್ರಕಾಶನಕ್ಕೆ ಅಭಿನಂದನೆಗಳು ಎಂದು ಹೇಳಿದ್ದಾರೆ.

ಇಲ್ಲಿ ದೀಪಾ ಅವರ ಶ್ರಮವೂ ಇದೆ. ತಮ್ಮ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿದ ತನ್ನ ತಾಯಿ ತನ್ನ ಬದುಕಿನ ನೆನಪಿನ ಬುತ್ತಿಯನ್ನು ಲೋಕಕ್ಕೆ ತಿಳಿಸದೇ ಹಾಗೆ ಹೋಗಬಾರದೆಂಬುದನ್ನು ಅರಿತು ಆ ನೆನಪಿನ ಬುತ್ತಿಯನ್ನು ಲೋಕಕೆಲ್ಲ ಮಹಾದಾಸೋಹದ ರೀತಿ ಉಣಬಡಿಸಿ ಹೋಗಲಿ ಎಂಬ ಭಾವದಿಂದ ಜೊತೆಗೆ ಮಾತೃ ಪ್ರೇಮದಿಂದ ಈ ಪುಸ್ತಕ ಮೂಡಿಬರಲು ಪರೋಕ್ಷವಾಗಿ ಕಾರಣರಾಗಿದ್ದಾರೆ. ಅವರ ಈ ಕಾರ್ಯ ಮಹತ್ತರವಾದದ್ದು. ವೈಯಕ್ತಿಕವಾಗಿ ಅವರ ಬದುಕಿನುದ್ದಕ್ಕೂ ಹೆಮ್ಮೆ ಪಡುವಂತದ್ದು. ಇಂತಹ ಮಹತ್ಕಾರ್ಯಕ್ಕಾಗಿ ದೀಪಾ ಅವರಿಗೂ ಅಭಿನಂದನೆಗಳು.

ಕೊನೆಯದಾಗಿ ಈ ಕೃತಿಯನ್ನು ಬರೆದು ಮುಗಿಸಿದರೆ ತನ್ನ ಬದುಕಿನ ಉದ್ದೇಶ ಮುಗಿಯಿತು ಎಂದು ಭಾವಿಸಿದಂತೆ ಬದುಕಿದ್ದ ಪ್ರಮೀಳಾ ಸ್ವಾಮಿಯವರು ಈ ಕೃತಿ ಜನಪ್ರಿಯವಾಗುವುದನ್ನು ನೋಡುವ ಮೊದಲೇ ತಮ್ಮ ಇಹಲೋಕ ಯಾತ್ರೆಯನ್ನು ಮುಗಿಸಿದ್ದಾರೆ. ಅವರಿಗೆ ಭಾವಪೂರ್ಣ ಶ್ರದಾಂಜಲಿ. ಈ ಕೃತಿ ಅವರ ಹೆಸರನ್ನು ಕನ್ನಡ ಸಾಹಿತ್ಯದಲ್ಲಿ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಇದನ್ನು ಓದದವರು ಇನ್ನಾದರೂ ಓದಿ ಎಂದು ಹೇಳುತ್ತ ಈ ನನ್ನ ಲೇಖನವನ್ನು ಮುಗಿಸುತ್ತಿದ್ದೇನೆ.

January 12, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಮಾಲತೇಶ ಅಂಗೂರರ ‘ಹಾವೇರಿಯಾಂವ್’

ಸತೀಶ ಕುಲಕರ್ಣಿ ಹಾವೇರಿ ನೆಲದ ಮಾತುಗಳಿಗೊಂದು ವಿಚಿತ್ರ ರುಚಿ ಇದೆ. ಸಿಟ್ಟು ಸೆಡವು, ಗಡಸು ಗಿಚ್ಚಿ ಹೊಡೆಯುವ ಮೊನಚು ಇವುಗಳದ್ದು. ವ್ಯಂಗ್ಯ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This