ಎಂದೆಂದೂ ಮುಗಿಯದ ಕಥೆ…

chetana2.jpg 

“ಭಾಮಿನಿ ಷಟ್ಪದಿ”

ಚೇತನಾ ತೀರ್ಥಹಳ್ಳಿ 

ಸುತ್ತ ಕಾಡಿನ ಒಂಟಿಮನೆಯ ಅಂಗಳದಲ್ಲಿ ಸಂಭ್ರಮವೋ ಸಂಭ್ರಮ. ದೂರದ- ಹತ್ತಿರದ ಬಳಗ ಪೂರಾ ಅಲ್ಲಿ ಜಾತ್ರೆ ಸೇರಿತ್ತು.

ಆ ಮನೆಯ ಹಿರಿ ಮಗಳ ಮದುವೆ! ಅಷ್ಟಾದರೂ ಗೌಜಿ ಗದ್ದಲ ಬೇಡವೇ? ಹಾಗೆ ಬಂದವರ ಚಕ್ಕಡಿಗಾಡಿಗಳನ್ನ ನಿಲ್ಲಿಸೋದಕ್ಕಂತಲೇ ಎದುರಿನ ಮರಗಳನ್ನ ಕಡಿದು ಅಂಗಳವನ್ನ ಮತ್ತೂ ಅಗಾಲ ಮಾಡಿದ್ದರು.
ನಾಗರ ಪಿಲ್ಲೆ, ಡಾಬು, ಒಡ್ಯಾಣ, ಕೆಂಪು ಕಲ್ಲಿನ ಸೆಟ್ಟು, ಹಸಿರು ಕಲ್ಲಿನ ಸೆಟ್ಟು, ಓಹೋ! ಮದೋಳ್ಗಿಯ ಅಲಂಕಾರವೋ ಅಲಂಕಾರ!

ಮಾಸ್ತರಿಕೆ ಬಿಟ್ಟು ತಾನೇ ಗಿಡ ಗಿಡವನ್ನೂ ನೆಟ್ಟು ಎಕರೆಗಟ್ಟಲೆ ತೋಟ ಮಾಡಿ ಫಲ ಉಣ್ಣುತ್ತಿದ್ದ ಯಜಮಾನ ಮಗಳ ಮದುವೆಗೆ ಧಾರಾಳ ಖರ್ಚು ಮಾಡಿದ್ದ. “ಪಾಪ! ಇಲ್ಲಿದ್ದಷ್ಟೂ ದಿನ ನೀರು ನಿಡಿ ಅನ್ನುತ್ತಲೇ ತೇದಿದೆ ಜೀವ!!” ಮಗಳ ಮೇಲೆ ಮಮತೆ ಉಕ್ಕಿ ಹನಿಗಣ್ಣಾಗಿದ್ದ.

ಬರೋಬ್ಬರಿ ಒಂದು ವಾರದ ಮದುವೆ. ಬೆಳ್ಳಗೆ ಮೈಕೈ ತುಂಬಿಕೊಂಡಿದ್ದ ಗಂಡು ರೇಶಿಮೆ ಮುಗುಟದ ಕಚ್ಚೆಯುಟ್ಟು ತಾಳಿ ಕಟ್ಟಿದ್ದ. ಅವನ ಚಪ್ಪರಿಕೆಯ ನೋಟ ಕಂಡೇ, “ಭಾವ ಭಾರೀ ರಸಿಕ” ಅಂತ ಮನೆ ಮಾಣಿಗಳು ಲೆಕ್ಕಹಾಕಿದ್ದರು. ಎರಡು ಗಂಡು, ಆರು ಹೆಣ್ಣು ಮಕ್ಕಳ ತುಂಬುಕುಟುಂಬದ ಮನೆಗೆ ಇವಳು ಎರಡನೆ ಸೊಸೆ. ನಾಳೆ ಆಸ್ತಿ ಪಾಲಾದರೂ ನಷ್ಟವಿಲ್ಲ ಅನ್ನುವಷ್ಟು ಅನುಕೂಲಸ್ಥರು… ಅಂತೆಲ್ಲ ಗುಣಾಕಾರ ಮಾಡಿಯೇ ಅವಳಪ್ಪ ಸಂಬಂಧ ಗೊತ್ತು ಮಾಡಿದ್ದ. ಆ ಹೊತ್ತಿಗೆ ಕೇಳಿಯೂ ಕೇಳದ ಹಾಗೆರಡು ಮಾತುಗಳು ಅವರ ಮನೆಯತ್ತ ಸುಳಿದುಹೋಗಿದ್ದವು.

ಅದನ್ನ ಹಾಗೇ ಒರೆಸಿಹಾಕಿದ್ದ ಅಪ್ಪ, ‘ಹೊಟ್ಟೆಕಿಚ್ಚಿನ್ ಮುಂಡೇವು, ಹೊಯ್ಕಳ್ತವೆ!’ ಅಂತ ರೇಗಿದ್ದ. ಅಮ್ಮ ಮಾತ್ರ ತನ್ನ ವಾರಿಗೆಯವರ ಹತ್ತಿರವೆಲ್ಲ ‘ಹೌದಂತಾ?’ ವಿಚಾರಿಸಲು ಹೋಗಿ ಗಂಡನ ಕೈಲಿ ಬೈಸಿಕೊಂಡದ್ದಳು.

ಆ ಹುಡುಗಿಯ ಗಂಡನ ಮನೆಗೂ, ತವರಿಗೂ ಚಕ್ಕಡಿ ದಾರಿ ದೂರ. ಸಂಜೆ ಹೊರಟವರು ಮುಸ್ಸಂಜೆಗೂ ಮುನ್ನ ತಲುಪಿಕೊಂಡಿದ್ದರು. ಮುಟ್ಟಾಗಿ ಮದುವೆಗೆ ಬಾರದೆ ಉಳಿದಿದ್ದ ಹಿರಿ ಸೊಸೆ ವೈಯಾರ ಮಾಡುತ್ತ ಮನೆ ಹುಡುಗಿಯರ ಕೈಲಿ ಆರತಿ ಎತ್ತಿಸಿದಳು. ಮಹಡಿ ಮೆಲಿನ ಮೂಲೆಕೋಣೆಯಲ್ಲಿ ಸಂಸಾರ ಶುರುವಾಯ್ತು.
 
* * *

ಮದುವೆಯಾಗಿ ವಾರವಿಲ್ಲ, ಆಗ, ಮನೆಯತ್ತ ಸುಳಿದಿದ್ದ ಸುದ್ದಿ ಈಗ ಕಣ್ಣೆದುರು ಸುಳಿಯತೊಡಗಿತ್ತು. ಹೆಣ್ಣುಹೆಣ್ಣಿಗ ಗಂಡನ ಮೇಲೆ ಮುನಿಸು ಅಂತ ವಾರಗಿತ್ತಿ ಚೌಕಿಯಲ್ಲಿ ಮಲಗ್ತಿದ್ದಳು. ಅರೆ! ಪಕ್ಕದಲ್ಲೇ ಮುಸುಗರೆಯುತ್ತ ಬಿದ್ದುಕೊಂಡಿದ್ದ ಗಂಡ ಎಲ್ಲಿ ಹೋದ?

ಬಿಟ್ಟಕಣ್ಣಲ್ಲಿ ಹೊರಳಿದಳು ಹುಡುಗಿ. ಎದ್ದು ಹೋಗಿ ನೋಡಿದರೆ…? ನೋಡಿದ್ದು ನಿಜವಾಗಿಬಿಟ್ಟರೆ!?
ಛೀ…! ಎಂಜಲು ಗಂಡಸಿನೊಟ್ಟಿಗೆ ಬಾಳೋದು ಹೇಗೆ? ದಿನಾ ನನ್ನ ಸೆರಗು ಹಾಸಿ… ಬಿಕ್ಕುತ್ತ ಉಳಿದಳು,
ಒಂದೆರಡು ದಿನ ಮಾತ್ರ.

ಅದೊಂದು ರಾತ್ರಿ ಅವಡುಗಚ್ಚಿ ಎದ್ದವಳೇ ಸೀದಾ ಚೌಕಿಮನೆಗೆ ನಡೆದಳು. ಕೇಳಿದ್ದನ್ನ ಕಂಡಳು. ಅವಳ ಕೂಗಿಗೆ ಅತ್ತೆ ಮಾವ ಎದ್ದು ಬಂದರು.  ಮನೆ ಮರ್ಯಾದೆ ಅಂತ ಕೈ ಮುಗಿದರು.
ವಾರಗಿತ್ತಿಯ ಗಂಡ ಅನಿಸ್ಕೊಂಡವ ಪೆಚ್ಚಾಗಿ ನಿಂತಿದ್ದ.

ನೆಲದ ಮೇಲೆ ಹೊರಳಿದ್ದವರು ಮಾತ್ರ ಏನೂ ಆಗೇ ಇಲ್ಲವೆನ್ನುವಂತೆ ಎದ್ದು ಕುಳಿತು ತಲೆ ಸವರಿಕೊಂಡರು.
ಮಾರನೆ ಬೆಳಗಿನ ಚಕ್ಕಡಿ ತವರಿನ ಹಾದಿ ಹಿಡಿದಿತ್ತು. ಹಿಂದೆ ಕುಳಿತ ಹುಡುಗಿ ದಾರಿಯಲ್ಲಿ ಎದುರಾದ ಶೀನಪ್ಪನ್ನ ಕಂಡು, ‘ಶೀನಪ್ಪಯ್ಯಾ, ನಾ ಬಂದ್ಬಿಟ್ಟೇ!!” ಅಂತ ಕುಣಿದಾಡಿದಳು.

ಸಂಜೆಯಾಗುವುದರೊಳಗೆ ಸುದ್ದಿ ಸದ್ದಾಗಿ ಅವರ ಮನೆ ಬಾಗಿಲಲ್ಲಿ ನಿಂತಿತ್ತು. ಊರ ‘ಹಿರಿಯರು’ ಪಂಚಾಯ್ತಿ ಮಾಡಿ, ಮೂವರು ‘ಮಾಡಿದ್ದು ಸರಿಯಾಗಿದೆ’ ಅಂದರು, ಇಬ್ಬರು ‘ಶುದ್ಧ ತಪ್ಪು’ ಅಂದರು! ಆಸುಪಾಸಿನ ಜನ, ಅಷ್ಟೆಲ್ಲ ಖರ್ಚು ಮಾಡೀ… ಅಂತ ರಾಗ ತೆಗೆಯುತ್ತ ಎಂಥದೋ ವಿಚಿತ್ರ ಲೆಕ್ಕಾಚಾರದಲ್ಲಿ ಅವಳನ್ನ ದೂಷಿಸಿದರು. ಹೆಣ್ಣುಗಳು ‘ಗಂಡುಬೀರಿ’ ಅಂತ ಬಿರುದು ಕೊಟ್ಟರು.

ಮನೆ ಯಜಮಾನ ಬಾವಿ ಹಿಂದಿನ ಕೊಟ್ಟಿಗೆ ಕೋಣೆ ಬಿಟ್ಟುಕೊಟ್ಟು ಇದ್ದುಬಿಡು ಮಗಳೇ ಅಂದು ಸುಮ್ಮನಾದ. ಮಗಳು ತಮ್ಮಂದಿರಿಗೆ  ಅಮ್ಮನೇ ಆಗಿ ಬೆಳೆಸಿದಳು. ಅವರ ಮಕ್ಕಳಿಗೆ ಅತ್ತೆಯಾಗಿ ಬೆಳಗಾಗೆದ್ದು ಬೆಲ್ಲದ ಕಷಾಯ ಮಾಡಿಕೊಟ್ಟಳು. ಮದುವೆ, ಬಸಿರು, ಬಾಣಂತನಗಳು, ಉಪನಯನ ಅಂತೆಲ್ಲ ಸಡಗರಿಸುತ್ತ ಆ ಮನೆಯಲ್ಲಿ ತಾನೊಂದು ‘ಜನ’ವಾಗಿ ಕೊನೆಗೊಮ್ಮೆ ಸತ್ತಳು.

ಅವಳ ಸಾವಿನ ಸಮಯಕ್ಕೆ “ಅಬ್ಬಾ ಗಟ್ಟಿಗಿತ್ತಿ” ಅಂತ ಹೊಗಳಿದರು ಎಲ್ಲರೂ.

* * *

ಹೌದು, ಇದು ನಡೆಯಿತು. ನೆನ್ನೆ ಮೊನ್ನೆಯಲ್ಲ, ಎಪ್ಪತ್ತು ವರ್ಷಗಳ ಹಿಂದೆ ನಡೆಯಿತು. ನಾನು ‘ಅತ್ತೆ’ ಅಂತ ಕರೆಯುವ ಕಾಲಕ್ಕೆ ಆಕೆಗೆ ಎಪ್ಪತ್ತೈದು ದಾಟಿತ್ತು. ಆದರೂ ನನ್ನ ತಲೆ ನೇವರಿಸಿ ನೆಟಿಕೆ ತೆಗೆಯುತ್ತಾ, “ಈ ಕೂಸಿನದೊಂದು ಮದುವೆ ನೋಡಿ…” ಅಂತ ಹಂಬಲಿಸುತ್ತಿದ್ದರು ಅವರು. ಆದರೇನು? ನಾನು ನೆರೆಯುವ ಮುಂಚೆಯೇ ಗೇದಿದ್ದು ಸಾಕಾಗಿ ಹೊರಟುಬಿಟ್ಟರು.

ನನಗೆ ಮದುವೆಯಾಯಿತು. ಅತ್ತೆಯಿಲ್ಲದೆ ಆಗಿಹೋಯಿತು. ಹೆಣ್ಣು ಮಕ್ಕಳು ಸೋದರತ್ತೆಯರನ್ನೇ ಹೋಲ್ತಾರೆ! ಯಾರೋ ಸುಳ್ಳು ಹೇಳಿದಾರೆ…

ಹಾ! ನನ್ನ ಜೀವನ ಹೆಚ್ಚುಕಡಿಮೆ ಹಾಗೇ ಇದೆ. ಅವನ ಸುತ್ತ ಸಾಕಷ್ಟು ಕಥೆಗಳಿವೆ.
ಅಪ್ಪನ ಹತ್ತಿರ ಹೇಳಿಕೊಂಡೆ. ಅವರು, “ಈಗ ಅದೆಲ್ಲ ಕಾಮನ್ನು ಮಗಳೇ, ಹೇಗೂ ದುಡೀತಿ, ನಿನ್ನ ಪಾಡಿಗೆ ಸಂಬಂಧವಿಲ್ಲಾ ಅಂತ ಇದ್ದುಬಿಡು” ಅಂದರು.
ಅಮ್ಮ, “ವಾಪಸು ಮಾತ್ರ ಬರಬೇಡವೇ ತಾಯಿ” ಅಂದು ಕೈಮುಗಿದಳು.

ಇಷ್ಟಕ್ಕೂ, ‘ಬಾ’ ಅಂದಿದ್ದರೆ ನಾನೇ ಹೋಗುತ್ತಿರಲಿಲ್ಲ! ನನ್ನ ಮರ್ಯಾದೆಗೆ ಸಂಚಕಾರವಲ್ಲವೆ? ಜೊತೆಗೆ ಒಂಟಿ ಜೀವನ ಸಂಭಾಳಿಸೋದು ಕಷ್ಟ!!

ಹೌದು… ಅಪ್ಪ-ಅಜ್ಜನಂತಿಲ್ಲ, ನಾನು ಅತ್ತೆಯಂತೆ…

ಏನು ಮಾಡೋದು ಹೇಳಿ?  ಜನ ಮಾತ್ರ ಇಂದಿಗೂ ಹಾಗೇ ಇದ್ದಾರಲ್ಲ!

‍ಲೇಖಕರು avadhi

March 11, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಚೇತನಾ ಎಂಬ ‘ಗಾನಾ ಜೋಯ್ಸ್

ಚೇತನಾ ಎಂಬ ‘ಗಾನಾ ಜೋಯ್ಸ್

' ಕನಸುಗಾರ ವೆಂಕಟ್ರಮಣ ಗೌಡರು 'ಹಂಗಾಮ' ಆರಂಭಿಸಿದಾಗ ಮೂಡಿ ಬಂದ ವಿಶಿಷ್ಟ ಲೇಖಕಿ ಗಾನಾ ಜೋಯ್ಸ್. ಈಗ ಈಕೆ ಚೇತನಾ ತೀರ್ಥಹಳ್ಳಿ. ಈಗಾಗಲೇ...

ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ಪ್ರೀತಿಯಿಂದ, ಚೇತನಾ ತೀರ್ಥಹಳ್ಳಿ

ಹಳೆಯ ನೆನಪು ಮತ್ತು ಒಂದು ಹೊಸ ಪುಸ್ತಕ ಈಗ ಅದೆಲ್ಲ ಮಜಾ ಅನಿಸತ್ತೆ. ನಾನು ಒಂದನೇ ಕ್ಲಾಸಿಂದ ಫಸ್ಟ್ ಬಿಎಸ್ಸಿ ವರೆಗೂ ಒಂದೇ ಒಂದು ನೋಟ್ಸೂ...

ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”

ಭಾಮಿನಿ ಷಟ್ಪದಿ ಎಂಬ “ಅಂಕಣ ಕಾದಂಬರಿ”

-ನಟರಾಜ್ ಹುಳಿಯಾರ್ 'ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡಿ'ನ ಸ್ಥಿತಿಯನ್ನು ನಿಷ್ಠುರ ಸ್ತ್ರೀವಾದಿ ದೃಷ್ಟಿಕೋನದಿಂದ ಗ್ರಹಿಸಿ ಚೇತನಾ...

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: