ಎಚ್ಹೆಸ್ವಿ ಅನಾತ್ಮ ಕಥನ: ಕಿಟ್ಟ, ಯಂಟ, ಮಲ್ಲಿ, ನಾಗಪ್ಪ, ರುದ್ರ, ಕೆಂಚಲಿಂಗ, ನಿಂಗ, ದಳವಾಯಿ, ಫಿಲಿಪ್ಪು, ಈಶ

ಅಳಿಯಲಾರದ ನೆನಹು-೪
ನಾವು ಎಳೆಯರು; ನಾವು ಗೆಳೆಯರು ಹೃದಯ ಹೂವಿನ ಹಂದರ!
ಎಚ್ ಎಸ್ ವೆಂಕಟೇಶಮೂರ್ತಿ
ಕಿಟ್ಟ, ಯಂಟ, ಮಲ್ಲಿ, ನಾಗಪ್ಪ, ರುದ್ರ, ಕೆಂಚಲಿಂಗ, ನಿಂಗ, ದಳವಾಯಿ, ಫಿಲಿಪ್ಪು, ಈಶ-ಇವರೆಲ್ಲಾ ನನ್ನ ಬಾಲ್ಯದ ಗೆಳೆಯರು. ಕೆಲವೇ ಬೀದಿಗಳು, ಸಣ್ಣ ಕೆರೆಯಂಗಳ, ಹತ್ತಿ ಇಳಿಯುವುದಕ್ಕೆ ಒಂದು ಸಣ್ಣ ಮಟ್ಟಿ, ಶಾಲೆಯ ಪಕ್ಕದಲ್ಲಿ ಇದ್ದ ಈಚಲ ಕಾಡು, ಸವ್ಕಾರರ ತೋಟದ ಕಪಿಲೆಬಾವಿ, ಅಲ್ಲೇ ಸಮೀಪದಲ್ಲಿ ಇದ್ದ ಜಂಬು ನೇರಿಲೆ ಮರ, ಸ್ಕೂಲಿನ ಪಕ್ಕ ಇದ್ದ ಜೋಡಿ ಮಾವಿನ ಮರಗಳು, ನಮ್ಮ ಹಿತ್ತಲು, ಈಶನ ಮನೆಯ ಅಟ್ಟ-ಇಷ್ಟೇ ಸಣ್ಣ ಜಗತ್ತಲ್ಲಿ ನಾವೆಲ್ಲಾ ಆಡುತ್ತಾ, ಓದುತ್ತಾ, ಜಗಳಾಡುತ್ತಾ, ಬೆಳೆಯುತ್ತಾ ಇದ್ದೆವು. ಜೊತೆಗೆ ನಮ್ಮ ನಮ್ಮ ಸಣ್ಣ ಪ್ರಪಂಚಗಳನ್ನೂ ಬೆಳೆಸಿಕೊಳ್ಳುತ್ತಾ ಇದ್ದೆವು. ಒಬ್ಬ ಹುಡುಗ ಬೆಳೆಯಲಿಕ್ಕೆ ಇಷ್ಟು ಜಾಗ ಬೇಕಾದಷ್ಟಾಯಿತು.
ನನ್ನ ಆ ಕಾಲದ ಆಪ್ತ ಗೆಳೆಯರಲ್ಲಿ ಈಶನನ್ನು ನಾನಿವತ್ತು ನಿಮಗೆ ಪರಿಚಯ ಮಾಡಿಸಲಿಕ್ಕೆ ಹೊರಟಿದ್ದೇನೆ. ನಮ್ಮ ಗುಂಪಲ್ಲೇ ಅತ್ಯಂತ ಚಿಕ್ಕವನು ಈ ಈಶ. ಆದುದರಿಂದ ನಮ್ಮೊಂದಿಗೆ ಜಗಳವಾಡಲಿಕ್ಕೆ ಅವನು ತನ್ನದೇ ಆದ ರಕ್ಷಣಾವ್ಯವಸ್ಥೆ ಮಾಡಿಕೊಂಡಿದ್ದನು. ಆ ವ್ಯವಸ್ಥೆಯೆಂದರೆ, ಅವನ ಎಡಗೈನಲ್ಲಿ ಬೆರಳುಗಳ ತುದಿಗೆ ಬೆಳೆಸಿದ್ದ ಹರಿತವಾದ ಉಗುರುಗಳು. ಯಾರಾದರೂ ಅವನ ತಂಟೆಗೆ ಹೋದರೆ ತನ್ನ ಶೂರ್ಪನಖಗಳಿಂದ ಪರಚಿ ಘಾಸಿಗೊಳಿಸುತ್ತಿದ್ದನು! ಅವನ ಉಗುರುಗಳಿಗೆ ಹೆದರಿ ಯಾರೂ ಅವನ ತಂಟೆಗೆ ಹೋಗುತ್ತಿರಲಿಲ್ಲ. ನನ್ನ ಗೆಳೆಯರಲ್ಲೆಲ್ಲಾ ಅವನಷ್ಟು ಚುರುಕಾದವರನ್ನು ನಾನು ಕಾಣೆ. ಹೆಚ್ಚು ಹೊತ್ತು ಒಬ್ಬನೇ ಕಟ್ಟೆಯ ಮೇಲೆ ಕೂತು ಏನಾದರೂ ತನ್ಮಯನಾಗಿ ಓದೋದು ಅವನಿಗೆ ಬಹಳ ಪ್ರಿಯವಾದ ಹವ್ಯಾಸವಾಗಿತ್ತು.
ಕಲೆ: ಶಿವರಾಂ ಪೈಲೂರು
ಅವನನ್ನು ಬಿಟ್ಟರೆ ಓದಿನ ಹುಚ್ಚಿದ್ದ ಇನ್ನೊಬ್ಬ ನಾನೇ. ಚಂದಮಾಮ, ಬಾಲಮಿತ್ರ ಯಾವುದು ಸಿಕ್ಕರೂ ನಾವು ತನ್ಮಯರಾಗಿ ಹೋಗುತ್ತಿದ್ದೆವು. ಅವರ ಮನೆಯಲ್ಲಿ ಎಲ್ಲರೂ ಅವನನ್ನು ಈಶಬುಡ್ಡಿ ಎಂದು ಪ್ರೀತಿಯಿಂದ ಕರೆಯುತ್ತಿದ್ದರು. ಅವನು ತನ್ನ ತಂದೆಯನ್ನು ಮಾವ ಎಂದು ಕರೆಯುತ್ತಿದ್ದನು. ಕಾರಣ ಅವನ ತಂದೆಯನ್ನು ಅವರ ಅಳಿಯಂದಿರು ಮಾವ ಎನ್ನುತ್ತಿದ್ದರು. ಹೀಗಾಗಿ ಈಶನಿಗೂ ಅವರ ತಂದೆ ಮಾವ ಆಗಿದ್ದರು. ನಮ್ಮ ಮನೆಯಲ್ಲಿದ್ದ ಭೀಮಜ್ಜಿ, ಅವರ ಮನೆಯಲ್ಲಿದ್ದ ನೂರು ತುಂಬಿದೆ ಎನ್ನುತ್ತಿದ್ದ ಪಾತಜ್ಜಿ ನಮಗೆ ಕಥೆಗಳ ಭಂಡಾರವಾಗಿದ್ದರು. ದಿನಾ ರಾತ್ರಿ ಭಾರತ ರಾಮಾಯಣಗಳಲ್ಲದೆ, ಮಾಯ ಮಂತ್ರದ ಕತೆಗಳನ್ನೂ ಇವರು ನಮಗೆ ಹೇಳುತ್ತಿದ್ದರು!. ನಮ್ಮೂರಲ್ಲಿ ಆಗ ವಿದ್ಯುತ್ ದೀಪ ಇರಲಿಲ್ಲ. ಆದುದರಿಂದ ಇಂಥ ಭಯಾನಕ ದೆವ್ವದ ಕಥೆಗಳನ್ನು ಹೇಳಲಿಕ್ಕೆ ಅದು ಹೇಳಿಮಾಡಿಸಿದ ಸ್ಥಳವಾಗಿತ್ತು!
ನಮ್ಮೂರಲ್ಲಿ ಇದ್ದ ಬುರುಜು ಬತೇರಿಗಳು, ಆಳವಾದ ಅಗಳ್ತಿಗಳು, ಹರುಮುರುಕು ಕೋಟೆಗೋಡೆಗಳು, ಕೆರೆಯ ಪಕ್ಕದಲ್ಲಿ ಇದ್ದ ತನ್ನೊಳಗೆ ವಿಶಾಲವಾದ ಪೊಟರೆಗಳನ್ನು ಇರಿಸಿಕೊಂಡಿದ್ದ ವಯೋವೃದ್ಧವೃಕ್ಷಗಳು, ಅಗಳ್ತಿಯ ಮೇಲೆ ಇದ್ದ ಬೃಹತ್ತಾದ ಹುಣಿಸೇ ಮರ, ಕೊನೆಯಿಲ್ಲದಂತೆ ಹರಡಿಕೊಂಡಿದ್ದ ಈಚಲುವನ -ಇವೆಲ್ಲಾ ನಮ್ಮ ಕಥೆಗಳು ನಡೆದಾಡುವ ಜಾಗಗಳಾಗಿದ್ದವು. ಕಥೆಯ ಹುಚ್ಚು ನನ್ನನ್ನೂ ಮತ್ತು ಈಶನನ್ನೂ ಹತ್ತಿರ ಹತ್ತಿರ ತಂದಿತು. ನಾವು ಹೆಚ್ಚುಹೊತ್ತು ಒಟ್ಟಿಗೇ ಇರುವುದು, ನಮ್ಮದೇ ಕಥೆಕಟ್ಟಿ ಒಬ್ಬರನ್ನೊಬ್ಬರು ಬೆರಗುಗೊಳಿಸುವುದು ಪ್ರಾರಂಭವಾದ ದಿನಗಳವು. ಈಶ ನನಗಿಂತ ಎರಡು ವರ್ಷ ಚಿಕ್ಕವನು. ಆದರೆ ಅವನು ತುಂಬಾ ಜಾಣನಾದುದರಿಂದ ಅವನನ್ನು ಶಾಲೆಯಲ್ಲಿ ಎರಡು ಕ್ಲಾಸು ಮುಂದೆ ಹಾಕಿ, ಮಾಧ್ಯಮಕ ಶಾಲೆಯಲ್ಲಿ ಅವನು ನನ್ನ ಪಕ್ಕದಲ್ಲೇ ಕುಳಿತುಕೊಳ್ಳುವುದಕ್ಕೆ ಪ್ರಾರಂಭಿಸಿದನು. ಈಶ ಮಹಾ ಧೈರ್ಯಶಾಲಿಯೂ ಹೌದು. ಮೇಷ್ಟ್ರು ಅವನಿಗೆ ಈಶಣ್ಣಾ ಕಥೆ ಹೇಳುಬಾರೋ ಎಂದು ಕರೆಯುತ್ತಿದ್ದರು. ಈಶಣ್ಣ ಇಡಿ ತರಗತಿಗೆ ಆಗಿಂದಾಗಲೇ ಕಟ್ಟಿ ಏನೇನೋ ಕಥೆ ಹೇಳುತಾ ಇದ್ದನು. ನನಗೋ ಹಾಗೆಲ್ಲಾ ಒಬ್ಬನೇ ಹತ್ತು ಮಂದಿಯ ಮುಂದೆ ನಿಂತು ಮಾತಾಡುವ ಧೈರ್ಯವೇ ಇರಲಿಲ್ಲ. ಆದರೆ ನಮ್ಮ ಈಶಣ್ಣನಿಗೆ ಭಯವೆಂಬುದೇ ಇರಲಿಲ್ಲ. ಕೊರಳವರೆಗೆ ಇಳಿಬಿದ್ದಿದ್ದ ಉದ್ದನೆಯ ಕೂದಲಲ್ಲಿ ಈಶಣ್ಣ ಒಬ್ಬ ಪುಟ್ಟ ಮಂತ್ರವಾದಿಯ ಹಾಗೇ ಕಾಣುತ್ತಿದ್ದನು.
ಈಶನ ಮನೆಯಲ್ಲಿ ಮನೆಯ ಹಿಂದೆಯೇ ಇದ್ದ ಪುಟ್ಟ ಹಿತ್ತಲಲ್ಲಿ ಒಂದು ಅಂಜೂರದ ಮರವಿತ್ತು. ಅದರಲ್ಲಿ ಅತ್ಯಂತ ಸಿಹಿಯಾದ ಹಣ್ಣುಗಳಿರುತ್ತಿದ್ದವು. ಈಶ ನನಗಾಗಿ ಅವನ್ನು ಚಡ್ಡಿ ಜೇಬಲ್ಲಿ ಮುಚ್ಚಿಟ್ಟುಕೊಂಡು ಬಂದು ತಿನ್ನಲಿಕ್ಕೆ ಕೊಡುತ್ತಾ ಇದ್ದನು. ಹಳೂದಿ ಬಣ್ಣದ ಅಂಜೂರ ಬಿಡಿಸಿದರೆ ಕಂದುಬಣ್ಣದ ಎಳೆಗಳನ್ನು ಅರಳಿಸುತ್ತಾ, ನಾಲಗೆಯ ಮೇಲೆ ಇಟ್ಟರೆ ಕಲ್ಲು ಸಕ್ಕರೆಯ ರುಚಿಕೊಡುತ್ತಾ ಇತ್ತು. ಆರಂಭದ ಕಾಲದಲ್ಲಿ ನನ್ನ ನಾಲಗೆಯ ಮೇಲೆ ರುಚಿಯ ಸಂಸ್ಕಾರ ನೀಡಿದ ಬೇರೆ ಬೇರೆ ವಸ್ತುಗಳಲ್ಲಿ ಈಶ ಕೊಡುತ್ತಿದ್ದ ಈ ಅಂಜೂರಕ್ಕೆ ಮೊದಲ ಸ್ಥಾನವಿದೆ. ನಾನು ಅವರ ಮನೆಗೆ ಹೋಗಬೇಕು. ಇಲ್ಲಾ ಅವನು ನಮ್ಮ ಮನೆಗೆ ಬರಬೇಕು. ಗಂಟೆಗಟ್ಟಲೆ ನಾವು ಚದುರಂಗ ಆಡುತ್ತಾ ಕುಳಿತುಕೊಳ್ಳುತ್ತಿದ್ದೆವು. ಬೇರೆ ಹುಡುಗರಿಗೆ ಚದುರಂಗದಲ್ಲಿ ಆಸಕ್ತಿಯಿರಲಿಲ್ಲ. ಚದುರಂಗದಲ್ಲಿ ನಾವು ಎಷ್ಟು ಪ್ರವೀಣರಾದೆವೆಂದರೆ ಕೆಲವು ಬಾರಿ ಆಟ ಕೊನೆಯಾಗುತ್ತಲೇ ಇರಲಿಲ್ಲ. ಆಗೆಲ್ಲ ಮುಂದಿನ ದಿನಕ್ಕೆ ಆಟ ಮುಂದುವರೆಸುತ್ತಾ ಇದ್ದೆವು. ಸಾಮಾನ್ಯವಾಗಿ ನಾವು ಚದುರಂಗ ಆಡುತ್ತಿದ್ದುದು ಈಶನ ಮನೆಯ ಅಟ್ಟದ ಮೇಲೆ. ಆ ಅಟ್ಟಕ್ಕೆ ಹೋಗುವುದು ಅಷ್ಟು ಸುಲಭವಾಗಿರಲಿಲ್ಲ. ಒಂದು ಕತ್ತಲ ಕೋಣೆಯನ್ನು ದಾಟಿ, ಕಡಿದಾದ ಅಟ್ಟದ ಮೆಟ್ಟಿಲು ಹತ್ತ ಬೇಕಾಗುತ್ತಿತ್ತು. ಅಟ್ಟದ ಮೇಲೆ ಹೋದರೆ ತಲೆ ಎತ್ತಿ ನಿಲ್ಲುವಂತಿರಲಿಲ್ಲ. ಚಾವಣಿ ಅಷ್ಟು ಕುಳ್ಳು. ಸೊಂಟ ಬಗ್ಗಿಸಿಕೊಂಡೇ ನಡೆದು ಕೆಲವು ಪೆಟ್ಟಿಗೆಗಳ ನಡುವೆ ಹಾಸಿದ್ದ ಕಡ್ಡಿ ಚಾಪೆಯ ಮೇಲೆ ಕೂತು ನಾವು ಚದುರಂಗ ಆಡಲು ಶುರು ಮಾಡುತ್ತಿದ್ದೆವು. ನಮ್ಮ ನೆತ್ತಿಯ ಮೇಲೇ ಕೈ ಚಾಚಿದರೆ ನಿಲುಕುವಷ್ಟು ಎತ್ತರದಲ್ಲಿ ಮೇಲ್ಛಾವಣಿ ಇತ್ತು. ಮೇಲ್ಚಾವಣಿಯಲ್ಲಿದ್ದ ಗಾಜಿನ ಹೆಂಚಿನ ಮೂಲಕ ಇಷ್ಟು ದಪ್ಪನೆ ಬಿಸಿಲು ಕೋಲು ಅಟ್ಟದ ಮೇಲೆ ಬಿದ್ದಿರುತ್ತಿತ್ತು. ಅದರಲ್ಲಿ ಕೆಂಪು, ಹಸಿರು, ನೀಲಿ, ಹಳದಿ ಬಣ್ಣದ ಧೂಳಿನ ಕಣಗಳು ಗಿಮಿ ಗಿಮಿ ತಿರುಇಗುತ್ತಾ ಇದ್ದವು. ನಾವು ಕೂತ ಎಷ್ಟೋ ಹೊತ್ತಾದ ಮೇಲೆ ಬಿಸಿಲ ಕೋಲು ನಿಧಾನವಾಗಿ ನಿರ್ಮಲವಾಗುತ್ತಾ, ಕೊನೆಗೆ ಬೆಳ್ಳಿಯ ಮಾಯಾದಂಡದಂತೆ ಕಾಣುತಾ ಇತ್ತು. ನಾವಿಲ್ಲದ ವೇಳೆ ಈ ಅಟ್ಟದಲ್ಲಿ ಇರುವ ಯಾವನೋ ಮಂತ್ರವಾದಿಯ ಮಂತ್ರದಂಡದಂತೆ ಆ ಬಿಸಿಲುಕೋಲು ನಮಗೆ ಭಾಸವಾಗುತ್ತಿತ್ತು. ಆ ಅಟ್ಟದ ಮೇಲೆ ಇದ್ದಾಗ ಭೂಮಿಯ ಮೇಲಿನ ಸದ್ದಿಗಿಂತ ಆಕಾಶದ ಸದ್ದುಗಳೇ ನಮಗೆ ಹೆಚ್ಚಾಗಿ ಕೇಳುತ್ತಾ ಇದ್ದವು. ಕಾಗೆಗಳ ಕ್ರಾ ಕ್ರಾ. ಗುಬ್ಬಿಗಳ ಚಿಲಿಪಿಲಿ. ಹದ್ದುಗಳ ಕೇಕೆ ಆಗಾಗ ಕೇಳುತಾ ಇತ್ತು. ಅದೆಲ್ಲಾ ಮುಗಿದು ಈಗ ನಿಶ್ಶಬ್ದ ಕವಿಯಿತು ಎನ್ನುವಾಗ ಅದನ್ನು ಅಲ್ಲಗಳೆಯುವಂತೆ ಯಾವುದೋ ಮೂಲೆಯಿಂದ ಹಲ್ಲಿಗಳ ಲೊಚ ಲೊಚ. ಹೆಂಚಿನ ಮೇಲೆ ಹಾವೋ, ಹೆಗ್ಗಣವೋ ಚಲಿಸುವ ಸದ್ದು.ಒಳ್ಳೇ ನಡು ಬಿಸಿಲಲ್ಲಿ ನೋಡ ಬೇಕು. ಇಡೀ ಅಟ್ಟ ಹಿಗ್ಗುತ್ತಾ ಹಿಗ್ಗುತ್ತಾ ದೊಡ್ಡದಾಗುತ್ತಿತ್ತು. ಸಂಜೆಯಾಗುತ್ತಾ ಅಟ್ಟ ಕಿರಿದಾಗುತ್ತಾ ಕಿರಿದಾಗುತ್ತಾ ಅಂಗೈ ಅಗಲ ಆಗಿಬಿಡುತ್ತಿತ್ತು. ಆಗ ಘಲ್ ಘಲ್ ಎಂದು ಯಾವುದೋ ಗೆಜ್ಜೆಕಟ್ಟಿದ ಹೆಜ್ಜೆಯ ಸದ್ದು. ನಮ್ಮ ಅಟ್ಟ ಸ್ವರ್ಗಕ್ಕೆ ಹತ್ತಿರ ಇರುವುದರಿಂದ ಇದು ರಂಭೆ ಅಥವಾ ಊರ್ವಶಿ ನಡೆದಾಡುತ್ತಿರುವ ಸದ್ದು ಅನ್ನಿಸುತ್ತೆ…ಎಂದು ಈಶ ಭಯ ಬೀಳಿಸುವ ಉಸುರಲ್ಲಿ ಪಿಸುಗುಡುತ್ತಿದ್ದ.
ಆ ಕಾಲದಲ್ಲೇ ನಾವು ನಮಗೆ ಸಿಕ್ಕಿದ ಪುಸ್ತಕಗಳನ್ನೆಲ್ಲಾ ಓದಲಿಕ್ಕೆ ಶುರು ಮಾಡಿದ್ದು. ಅನಕೃ, ತರಾಸು, ಕಾರಂತ , ಗಳಗನಾಥ, ಬಿ ವೆಂಕಟಾಚಾರ್ಯ ಇವರೆಲ್ಲರ ಅನೇಕ ಕಾದಂಬರಿಗಳನ್ನು ನಾವು ಆ ಕತ್ತಲ ಅಟ್ಟದಲ್ಲಿ ಓದಿ ಮುಗಿಸಿದೆವು. ಹಸಿವೂ ಅಂದರೆ ಅಂತಿಂಥ ಹಸಿವಲ್ಲ. ರಾಗಿಮಸಿಯಲ್ಲಿ ಬರೆದಿದ್ದ ಕೆಲವು ಕೈಬರೆಹದ ಪುಸ್ತಕಗಳನ್ನೂ ನಾವು ಓದಿದೆವು. ಆಮೇಲೆ ತಾಳೆಗರಿಯ ಕಟ್ಟುಗಳು. ನಾನು ಮೊದಲು ತೊರವೆ ರಾಮಾಯಣದ ಕೆಲವು ಪದ್ಯಗಳನ್ನು ಓದಿದ್ದು ನಾನಿನ್ನೂ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಯಾಗಿದ್ದಾಗ. ಓದೀ ಓದೀ ನಾವೂ ಯಾಕೆ ಬರೆಯಬಾರದು ಅನ್ನಿಸಿತು ನಮಗೆ. ನಾನಾಗ ಸೈಂಧವ ಎಂಬ ನಾಟಕ ಬರೆದೆ. ಅದನ್ನು ನಾನು ಮತ್ತು ಈಶಣ್ಣ ನಮ್ಮ ಹಿತ್ತಲಲ್ಲಿ ಅಭಿನಯಿಸಿದೆವು. ಆಡಿದ್ದೂ ನಾವೇ; ನೋಡಿದ್ದೂ ನಾವೆ. ನಾನು ಕೆಲವು ಪದ್ಯಗಳನ್ನು ಬರೆದು ದಾಸವಾಳ ಎಂಬ ಕವಿತಾಸಂಗ್ರಹ ಸಿದ್ಧಪಡಿಸಿದೆ. ನಮಗೆ ಆಗೊಂದು ವಿಚಿತ್ರವಾದ ಹುಚ್ಚು ಹತ್ತಿಕೊಂಡಿತು. ನಾವಿಬ್ಬರೂ ಕೂಡಿ ಒಂದು ಕಾದಂಬರಿ ಏಕೆ ಬರೆಯಬಾರದು? ಹೇಗೋ ಒಂದು ಹಳೆಯ ನೋಟ್ ಬುಕ್ ಸಂಪಾದಿಸಿದೆವು. ಶುರುಮಾಡೇ ಬಿಟ್ಟೆವು ನಮ್ಮ ಪತ್ತೇದಾರಿ ಕಾದಂಬರಿ! ಮಾಯವಾದ ಮದುಮಗಳು! ಇಬ್ಬರೂ ಸಂಜೆ ಕೆರೆಯ ಬಯಲಿಗೆ ಹೋಗಿ ಉಪ್ಪೇಮರದ ಕೆಳಗೆ ಕೂತು ಕಥೆ ಹೇಗೆ ಹೇಗೆ ಮುಂದುವರೆಯಬೇಕು ಎಂದು ಯೋಚಿಸುತ್ತಿದ್ದೆವು. ಶಹಜೀ ಗೋರಿಯ ಪಕ್ಕದಲ್ಲಿ ಒಂದು ದೊಡ್ಡ ಮುದಿಮರವಿತ್ತು. ಅದರ ಹೊಟ್ಟೆಯಲ್ಲಿ ಹತ್ತು ಜನ ಒಟ್ಟಿಗೇ ಕೂತುಕೊಳ್ಳಬಹುದು-ಅಷ್ಟು ವಿಶಾಲವಾದ ಪೊಟರೆಯಿತ್ತು. ಅದೇ ನಮ್ಮ ಕಾದಂಬರಿಯ ಚೋರ ಕದೀಮರ ಕಾರ್ಯಸ್ಥಾನ; ಆಧುನಿಕ ಪರಿಭಾಷೆಯಲ್ಲಿ ಡೆನ್. ಒಂದು ಅಧ್ಯಾಯ ನಾನು ಹೇಳುವುದು; ಅವನು ಬರೆಯುವುದು. ಇನ್ನೊಂದು ಅಧ್ಯಾಯ ಅವನು ಹೇಳುವುದು; ನಾನು ಬರೆಯುವುದು!
ನಮ್ಮೂರ ಗೌಡರ ಮನೆಯಲ್ಲಿ ಅವರ ಮಗಳ ಮದುವೆಯಾಗುತ್ತಾ ಇದೆ. ಗೌಡರ ಮಗಳಾದರೋ (ನಮ್ಮ ಕಥೆಯಲ್ಲಿ) ಜಗದೇಕ ಸುಂದರಿ. ಮದುಮಗಳನ್ನು ಮಂಟಪಕ್ಕೆ ಕರೆತಂದಿದ್ದಾರೆ. ಪುರೋಹಿತರು(ಅಲ್ಲಿ ಪುರೋಹಿತರು ಹೇಗೆ ಬಂದರೋ!) ಹೋಮ ಹವನದ ಕೆಲಸ ಪ್ರಾರಂಬಿಸುತ್ತಾರೆ. ಹ್ರಾಂ ಹ್ರೀಂ ಎಂದು ಮಂತ್ರ ಹೇಳುತ್ತಿರುವ ಆ ಪುರೋಹಿತನ ಕಣ್ಣುಗಳನ್ನು ನೋಡಿ! ಅವು ಹೇಗೆ ಕೆಂಡದುಂಡೆಗಳಂತೆ ಹೊಳೆಯುತ್ತಾ ಇವೆ! ಅವನು ಮದುಮಗಳನ್ನೇ ಕಣ್ಣು ಮೆಡ್ಡೆರೆಸಿ ನೋಡುವ ರೀತಿಯನ್ನು ಗಮನಿಸಿ. ಅವನು ಮಹಾ ಧೂರ್ತನಂತೆ ಕಾಣುವುದಿಲ್ಲವೇ ನಿಮಗೆ? ಅವನೀಗ ಎಂಥದೋ ಸಮಿತ್ತು ತೆಗೆದು ಅಗ್ನಿಕುಂಡಕ್ಕೆ ಹಾಕಿದ ನೊಡಿ! ಭುಸು ಭುಸು ಹೊಗೆ ಹುತ್ತದಿಂದೇಳುವ ಕರಿನಾಗರದಂತೆ ಏಳುತ್ತಾ ಒಂದೇ ನಿಮಿಷದಲ್ಲಿ ಮದುವೆ ಮಂಟಪವೇ ಹೊಗೆಯಿಂದಾ ತುಂಬಿಹೋಯಿತು. ಮಕ್ಕಳು ಅಳುತ್ತಾ ಇದ್ದಾರೆ. ಹೆಂಗಸರು ಆರ್ತನಾದ ಮಾಡುತ್ತಿದ್ದಾರೆ. ಗೌಡರು ಆರ್ಭಟಿಸುತ್ತಿದ್ದಾರೆ. ಬೇಗ ನೀರು ತಂದು ಸುರುವಿ, ಯಾರೋ ಬೆಂಕಿಯನ್ನು ಆರಿಸುತ್ತಾರೆ. ನಿಧಾನವಾಗಿ ಹೊಗೆ ಕರಗುತ್ತದೆ. ಅಹಹಾ! ಎಂಥಾ ಅಶ್ಚರ್ಯ! ಮದುಮಗ ಒಬ್ಬನೇ ಹಸೆಯ ಮೇಲೆ ಕೂತಿದ್ದಾನೆ! ಪರಮ ಸುಂದರಿಯಾಗಿದ್ದ ಮದುಮಗಳು ಎಲ್ಲಿ ಮಾಯವಾದಳು? ಹೀಗೆ ನಮ್ಮ ಮಾಯವಾದ ಮದುಮಗಳು ಕಾದಂಬರಿ ಪ್ರಾರಂಭವಾಗಿತ್ತು. ನೀವು ನಂಬಬೇಕು. ಒಂದೇ ತಿಂಗಳು. ನಮ್ಮ ಕಾದಂಬರಿ ಮುಗಿದೇ ಹೋಯಿತು! ನಮ್ಮ ಕಾದಂಬರಿ ಓದಿ ದೊಡ್ಡವರು ಆಶ್ಚರ್ಯ ಪಟ್ಟಿದ್ದೇ ಪಟ್ಟಿದ್ದು. ನನಗೆ ಆಗ ಹದಿನಾಲಕ್ಕು. ಈಶಣ್ಣನಿಗೆ ಹನ್ನೆರಡು. ನಾವು ಕಾದಂಬರಿ ಬರೆದ ವಿಚಾರ ಜಗಜ್ಜಾಹೀರಾಗಿ ಹೋಯಿತು! ಎಲ್ಲರೂ ನಮ್ಮನ್ನು ನಿಬ್ಬೆರಗಿಂದ ನೊಡುವವರೇ. ಅಲ್ಲಿಗೆ ನಮ್ಮ ಮಾಧ್ಯಮಿಕ ಶಾಲೆಯ ಅಭ್ಯಾಸವೂ ಮುಗಿದು ಹೈಸ್ಕೂಲು ಓದುವುದಕ್ಕಾಗಿ ನಾನು ಹೊಳಲಕೆರೆಗೆ ಹೋದೆ. ಈಶ ಚನ್ನಗಿರಿಗೆ ಹೋದ( ಆ ವೇಳೆಗೆ ನಾನು ಈಶನನ್ನು ಸಾಗರ್ ಎಂದು ಕರೆಯುತ್ತಿದ್ದೆ!). ಜೀವ ಕೊರಳ ಗೆಳೆಯರಾಗಿದ್ದ ನಾವು ಹೀಗೆ ಹಾಳು ದುರ್ವಿಧಿಯಿಂದ(!) ಅಗಲಬೇಕಾಯಿತು! ಚನ್ನಗಿರಿಯಲ್ಲಿ ಹೊಸದಾಗಿ ಪರಿಚಯವಾದ ಹುಡುಗಿ ನಮ್ಮ ಕಾದಂಬರಿ ಓದಲಿಕ್ಕೆ ಇಸಿದುಕೊಂಡಳಂತೆ! ಅವಳು ಕಾದಂಬರಿ ಅರ್ಧ ಓದಿದ್ದಾಳೆ. ಓದುತ್ತಾ ಓದುತ್ತಾ ಹಾಗೇ ನಿದ್ದೆ ಆವರಿಸಿ, ಕಾದಂಬರಿಯನ್ನು ಆಗಷ್ಟೆ ಮೂಡುತ್ತಿದ್ದ ತನ್ನ ಪುಟ್ಟ ಎದೆಯ ಮೇಲೆ ಇಟ್ಟುಕೊಂಡು ಮಲಗಿಬಿಟ್ಟಿದ್ದಾಳೆ. ಬೆಳಗಾಗೆದ್ದು ನೋಡಿದರೆ ಕಾದಂಬರಿಯ ಏಕೈಕ ಹಸ್ತಪ್ರತಿಯೇ ಮಂಗಮಾಯ! ಗೊಳೋ ಅಂತ ಅತ್ತಳಂತೆ ಪಾಪ ಆ ಮುದ್ದು ಹುಡುಗಿ. ಕಾದಂಬರಿ ಕಳೆದದ್ದಕ್ಕಾಗಿ ಎರಡು ರೂಪಾಯಿಗಳ ಪ್ರೀತಿದಂಡವನ್ನೂ ಕೊಟ್ಟಳಂತೆ. ನನಗೆ ಒಂದು ರೂಪಾಯಿ! ನನ್ನ ಗೆಳೆಯನಿಗೆ ಒಂದು ರೂಪಾಯಿ! ಸಾಹಿತ್ಯದಿಂದ ನಾವು ಸಂಪಾದಿಸಿದ ಮೊಟ್ಟ ಮೊದಲ ಸಂಪಾದನೆ ಅದು!
ಆ ಈಶಣ್ಣ ಯಾರು ಎಂದು ವಾಚಕಮಹಾಶಯರಿಗೆ ಕುತೂಹಲ ವುಂಟಾಗುತ್ತಿದೆಯೇ? ಆತ ಮತ್ತಿನ್ನಾರೂ ಅಲ್ಲ. ಈವತ್ತು ಕನ್ನಡದ ಪ್ರಸಿದ್ಧ ಕತೆಗಾರನಾಗಿರುವ ಈಶ್ವರಚಂದ್ರ! ಮುನಿತಾಯಿ ಕಥೆಯಿಂದ ಖ್ಯಾತನಾದವನು! ಆವತ್ತಿನಂತೇ ಈವತ್ತೂ ನನ್ನ ಅಚ್ಚುಮೆಚ್ಚಿನ ಹಳೆಯ ಗೆಳೆಯ!
*****

‍ಲೇಖಕರು avadhi

April 1, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಚ್ ಎಸ್ ವಿ ಕಾಲಂ: ಮತ್ತೆ, ಮರೆತ ಇತಿಹಾಸದ ಮರುಗಳಿಕೆ..

ತಾವರೆಯ ಬಾಗಿಲು-೧೮ ಎರಡು ಸಾವಿರ ವರ್ಷಗಳ ಹಿಂದೆ ತೆಂಕಣಭಾರತದ ದೇಶ-ಕಾಲ-ಪರಿಸ್ಥಿತಿ ಹೇಗಿತ್ತೆಂದು ನಾವು ಊಹಿಸುವುದೂ ಸಾಧ್ಯವಿಲ್ಲ. ಮರೆತು ಹೋದ...

೧ ಪ್ರತಿಕ್ರಿಯೆ

 1. rgbellal

  ಏನ್ಸಾರ್ ಪುನಃ ನೆನಪು ಮಾಡಿ ಬರೆಯಿರಿ
  ಆ ಕಥೆಯನ್ನ,
  ಈಗಂತೂ ಇನ್ನೂ ರಸವತ್ತಾಗೀತು.
  ಧನ್ಯವಾದಗಳು
  ಬೆಳ್ಳಾಲ ಗೋಪಿನಾಥ ರಾವ್

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: