ಎಚ್ಹೆಸ್ವಿ ಅನಾತ್ಮ ಕಥನ: ಪಿಳ್ಳೆ ಪಂಡಿತರ ಪಿತ್ತಪ್ರಕೋಪ…

ಅಳಿಯಲಾರದ ನೆನಹು-೧೩ ಎಚ್ ಎಸ್ ವೆಂಕಟೇಶ ಮೂರ್ತಿ ಹುಡುಗನಾಗಿದ್ದಾಗ ನನಗೆ ಅಲರ್ಜಿಯ ತೊಂದರೆ ತುಂಬಾ ಇತ್ತು. ಆಗ ಅಲರ್ಜಿ ಎಂಬ ಪದವೇ ಚಾಲ್ತಿಯಲ್ಲಿರಲಿಲ್ಲ ಬಿಡಿ. ನಮ್ಮಜ್ಜಿ ನನಗೆ ಮೈತುಂಬ ದದ್ದು ಕಾಣಿಸಿಕೊಂಡರೆ ಅದು ಪಿತ್ತಪ್ರಕೋಪದ ಫಲ ಎನ್ನುತ್ತಿದ್ದರು. ಸಣ್ಣಗೆ ಮೊದಲು ಎಲ್ಲಾದರೂ ನವೆ ಕಾಣಿಸಿಕೊಳ್ಳೋದು. ನವೆ ತಡೆಯಲಾರದೆ ಸ್ವಲ್ಪ ನವೆ ಬಂದ ಜಾಗ ಕೆರೆದುಕೊಂಡೆನೋ ಬುರು ಬುರು ಅಂತ ಆ ಜಾಗ ಬೋಂಡದಂತೆ ಉಬ್ಬಿಕೊಳ್ಳೋದು. ಹಾಗೇ ಅದು ಭೂಪಟದ ಹಾಗೆ ಹರಡೋದು. ಇದು ಆಫ್ರಿಕಾ, ಇದು ಆಸ್ಟ್ರೇಲಿಯಾ, ಇದು ಅಮೆರಿಕಾ, ಇದು ಇಂಡಿಯಾ ಅನ್ನುವಂತೆ ಮೈತುಂಬಾ ನಾನಾ ಮ್ಯಾಪುಗಳು ಮೂಡಿ ಉಬ್ಬುಚಿತ್ರದ ಹಾಗೆ ಕಂಗೊಳಿಸುತ್ತಾ ಇದ್ದವು. ಮೈಯೆಲ್ಲಾ ಪರಪರ ಕೆರೆದುಕೊಳ್ಳುವಂತಾಗುತ್ತಿತ್ತು. ಕೆರೆದಷ್ಟೂ ನಸುಕೆಂಪಗಿನ ಉಬ್ಬುಶಿಲ್ಪಗಳು ಮೈತುಂಬಾ ಹರಡಿಕೊಳ್ಳುತ್ತಾ ಇದ್ದವು. ಆಗ ನಾನೇ ಒಂದು ಭೂಗೋಳವಾಗಿಬಿಡುತ್ತಾ ಇದ್ದೆ. ಆ ಗೋಳು ಹೇಳುವುದು ಬೇಡ. ಆಗ ನಮ್ಮೂರಲ್ಲಿ ಆಸ್ಪತ್ರೆಯ ಕಟ್ಟಡ ಮಾತ್ರ ಇತ್ತು. ಆಸ್ಪತ್ರೆ ಕಟ್ಟಡ ಸಿದ್ಧವಾಗಿದ್ದರೂ ಅಲ್ಲಿ ಡಾಕ್ಟ್ರಾಗಲೀ, ಉಲಿದ ಸಿಬ್ಬಂದಿಯಾಗಲೀ ಇರಲಿಲ್ಲ. ನಮ್ಮ ಊರ ಸಾವುಕಾರರು ಸಾವಿರಾರು ರೂಪಾಯಿ ಖರ್ಚು ಮಾಡಿ ಕಟ್ಟಡ ಕಟ್ಟಿಸಿ ಧರ್ಮಾರ್ಥವಾಗಿ ಅದನ್ನು ಹಳ್ಳಿಗೆ ಬಿಟ್ಟುಕೊಟ್ಟಿದ್ದರು. ಆದರೆ ಕಟ್ಟಡದಲ್ಲಿ ಆಸ್ಪತ್ರೆ ಯಾಕೆ ಪ್ರಾರಂಭವಾಗಲಿಲ್ಲ ಎಂಬುದು ಹಳ್ಳಿಯಲ್ಲಿ ಯಾರಿಗೂ ಗೊತ್ತಿರಲಿಲ್ಲ. ಧರ್ಮರತ್ನಾಕರ ದಾನಚಿಂತಾಮಣಿ ಸಾವುಕಾರ ಅಡವೆಪ್ಪನವರ ದಾನ  ಹೀಗೆ ನಿರರ್ಥಕವಾಗಿಹೋಗಿತ್ತು. ಆಸ್ಪತ್ರೆಯ ಗೇಟನ್ನು ಒಂದು ಸುಮುಹೂರ್ತದಲ್ಲಿ ಯಾರೋ ಪುಣ್ಯಾತ್ಮರು ಕದ್ದುಕೊಂಡು ಹೋಗಿದ್ದರಿಂದ ಬೀಡಾಡಿ ದನಗಳು ಆಸ್ಪತ್ರೆ ಕಾಂಪೌಂಡಿನ ಒಳಗೆ ಮೇಯುತ್ತಾ, ಗಂಜಲ ಮಾಡುತ್ತಾ, ಸೆಗಣಿ ತೊಪ್ಪೆ ಹಾಕುತ್ತಾ , ತಮ್ಮ ಅರಿವಿಲ್ಲದೆಯೇ ಆಸ್ಪತ್ರೆಯನ್ನು ದನದ ದೊಡ್ಡಿಯಾಗಿ ಪರಿವರ್ತಿಸಿದ್ದವು. ಡಾಕ್ಟರು ಈವತ್ತು ಬಂದಾರು, ನಾಳೆ ಬಂದಾರು ಎಂದು ಕಾಯ್ದ ಜನ ಕೊನೆಗೆ ಆಸ್ಪತ್ರೆಗೆ ಯಾವ ಡಾಕ್ಟ್ರೂ ಬರುವುದಿಲ್ಲವೆಂದು ತೀರ್ಮಾನಿಸಿ ಆಸ್ಪತ್ರೆ ಕಟ್ಟಡದ ಕಡೆ ತಿರುಗಿ ನೋಡುವುದನ್ನು ಕೂಡ ಬಿಟ್ಟುಬಿಟ್ಟರು. ಆಸ್ಪತ್ರೆ ಮುಂದಿನ ಛಾವಣಿಯ ಕೆಳಗೆ ಕೆಲವರು ಕೆಲಸ ಬೊಗಸೆ ಇಲ್ಲದ ಉಢಾಳ ಹುಡುಗರು ಹುಲಿಮನೆ ಆಡುತ್ತಾ ಕುಳಿತುಕೊಳ್ಳುತ್ತಿದ್ದರು. ಸಂಜೆ ಸ್ಕೂಲು ಬಿಟ್ಟ ಮೇಲೆ ಮಿಡ್ಲ್ ಸ್ಕೂಲ್ ಮಕ್ಕಳು ಆಸ್ಪತ್ರೆ ಕಾಂಪೌಂಡ್ ಮೇಲೆ ಚುಕ್ ಬುಕ್ ಚುಕ್ ಬುಕ್ ಎನ್ನುತ್ತಾ ಬ್ಯಾಲೆನ್ಸ್ ಮಾಡಿಕೊಂಡು ರೈಲು ಓಡಿಸುತ್ತಾ ಇದ್ದರು. ರಾತ್ರಿ ಅಲೆಮಾರಿ ದೊಂಬರು ಅಲ್ಲಿ ಮಲಗುತ್ತಾ ಇದ್ದರು. ಒಟ್ಟಲ್ಲಿ ಆಸ್ಪತ್ರೆಯು ಒಂದು ಬಗೆಯ ಸರ್ವೋಪಯೋಗಿ ಕಟ್ಟಡವಾಗಿ ನಮ್ಮೂರಲ್ಲಿ ಬಳಕೆಯಾಗತೊಡಗಿತು ಎನ್ನಬಹುದು. ನನಗೆ ಪಿತ್ತಪ್ರಕೋಪವಾಗಿ, ಮೈತುಂಬ ದಂದೆಯಾಗಿ, ಮೈ ನವೆ ಶುರುವಾಗಿ, ಅದನ್ನು ಹಿಂಬಾಲಿಸಿ ಜ್ವರ ಭೇದಿ ಶುರುವಾಗಿ ಹೈರಾಣವಾದರೆ ನಮ್ಮ ಅಜ್ಜಿ ನನ್ನನ್ನು ಎತ್ತಿಕೊಂಡು ಎಸ್.ಪಿ.ಪಂಡಿತರ ಮನೆಗೆ ಕರೆದೊಯ್ಯುತ್ತಿದ್ದಳು. ಎಸ್.ಪಿ.ಪಂಡಿತರು ಈಶ್ವರ ಗುಡಿಯ ಪೌಳಿಯ ಹಿಂದೆ ಇದ್ದ ಒಂದು ಕಟಾಂಜನದ ಮನೆಯಲ್ಲಿ ತಮ್ಮ ಪತ್ನಿಯೊಂದಿಗೆ ವಾಸವಾಗಿದ್ದರು. ಅವರ ಮನೆಯ ಮುಂದೆ ಸೆಲ್ವ ಪಿಳ್ಳೆ ಪಂಡಿತ್, ಆಯುರ್ವೇದ ವೈದ್ಯರು ಎಂಬ ಸೀಮೇಸುಣ್ಣದಲ್ಲಿ ಬರೆದ ಹಲಗೆ ನೇತಾಡುತ್ತಾ ಇರುತ್ತಿತ್ತು. ಎಸ್.ಪಿ.ಪಂಡಿತರು ಹಣ್ಣು ಹಣ್ಣು ಮುದುಕರಾಗಿದ್ದರು. ಒಂದು ಮೇಲುಕೋಟೆ ಅಡ್ಡಪಂಚೆ. ಒಂದು ಕಾಲದಲ್ಲಿ ಬಿಳಿಯದಾಗಿದ್ದಿರಬಹುದಾದ ಒಂದು ಗಾಂಧೀ ಬನಿಯನ್ನು. ಇಷ್ಟೇ ಅವರ ಉಡುಪು. ಅವರು ಮೇಲಂಗಿ ಹಾಕಿಕೊಂಡಿದ್ದನ್ನು ನಾನು ನೋಡಿಯೇ ಇರಲಿಲ್ಲ.ಅವರ ಹಣೆಯ ಮೇಲಿದ್ದ ಮೂರು ನಾಮಗಳು ಕಣಿವೆಯ ರಸ್ತೆಯಂತೆ ಮೇಲೇರಿ ಏರಿ ಕೊನೆಗೆ ಅವರ ಮಿರಿಮಿರಿ ಮಿಂಚುವ ಬೊಕ್ಕ ನೆತ್ತಿಯಲ್ಲಿ ಅಂತರ್ಧಾನವಾಗುತ್ತಾ ಇದ್ದವು. ಎಸ್.ಪಿ.ಪಂಡಿತರು ಆ ನಾಮ ಹಾಕಿಕೊಳ್ಳುವುದಕ್ಕೇ ಬೆಳಗಿನ ಅರ್ಧಗಂಟೆ ತೆಗೆದುಕೊಳ್ಳುತ್ತಾರೆ ಎಂದು ನಮ್ಮ ಹಳ್ಳಿಯವರು ಮಾತಾಡಿಕೊಳ್ಳುತ್ತಿದ್ದರು. ನಮ್ಮ ಊರಲ್ಲಿ ಉಳಿದೆಲ್ಲ ಗಂಡಸರ ಹಣೆಮೇಲೆ ವಿಭೂತಿ ಪಟ್ಟೆ. ಗಂಧದ ಉಗುರುಗೀಚು, ಅಥವಾ ಸಾದಿನ ಬಟ್ಟು ಮಾತ್ರ ಕಾಣುವಾಗ ಇವರೊಬ್ಬರೇ ನಾಮಧಾರಿಗಳಾಗಿ ಕಂಗೊಳಿಸುತ್ತಾ ನಾನೇ ಬೇರೆ ನನ್ನ ಸ್ಟೈಲೇ ಬೇರೆ ಎಂಬಂತಿದ್ದರು. ನಮ್ಮ ಭೀಮಜ್ಜಿಯ ಪ್ರಕಾರ ನಡುಗುವ ಕೈಯ ಪಂಡಿತರು ಅಷ್ಟು ನೀಟಾಗಿ ನಾಮ ಹಾಕಿಕೊಳ್ಳೋದು ಸಾಧ್ಯಾನೇ? ಅವರ ಹೆಂಡತಿ ಅಂಡಾಳಮ್ಮನೇ ಅದನ್ನು ಹಾಕುತ್ತಾರೆ. ಈ ಅಂಡಾಳಮ್ಮನ ವಾಸ್ತವ ಹೆಸರು ಆಂಡಾಳಮ್ಮ ಅಂತ. ಆದರೆ ಅವರು ತುಂಬಾ ಸ್ಥೂಲಕಾಯದವರಾದ ಕಾರಣ ಹಳ್ಳಿಯ ಕಿಲಾಡಿ ಹೆಣ್ಣುಮಕ್ಕಳು ಅವರನ್ನು ಅಂಡಾಳಮ್ಮ ಎಂದು ಕರೆಯುತ್ತಾ ಇದ್ದರು. ಹತ್ತುವರ್ಷದ ಹುಡುಗನಾಗಿದ್ದ ನನ್ನನ್ನು ನಮ್ಮ ಅಜ್ಜಿ ಸೊಂಟದಲ್ಲಿ ಏರಿಸಿಕೊಂಡು ಹೋಗುವಾಗ ನನಗೆ ಸಿಕ್ಕಾಬಟ್ಟೆ ನಾಚಿಕೆಯಾಗುತ್ತಿತ್ತು. ಆದರೆ ಅಜ್ಜಿ ನನ್ನನ್ನು ಸೋಂಟದಿಂದ ಕೆಳಗಿಳಿಸಲು ಸುತಾರಾಂ ಒಪ್ಪುತ್ತಿರಲಿಲ್ಲ.. ಜ್ವರ ಬಂದ ಮಗು ನಡೆಯೋದುಂಟೇ? ನಾನು ಅಜ್ಜಿಯ ನಡೆಗೆ ತೊಡರಾಗಬಾರದೆಂದು ಎರಡೂ ಕಾಲು ಎರಡು ದಿಕ್ಕಿಗೆ ಕಿಸಿದು ಕುಳಿತುಕೊಳ್ಳಬೇಕಾಗುತ್ತಿತ್ತು. ನನ್ನ ಭಾರಕ್ಕೆ ಬ್ಯಾಲೆನ್ಸ್ ಮಾಡಲು ನಾನು ಕೂತಿದ್ದ ಸೊಂಟವನ್ನು ಪಕ್ಕಕ್ಕೆ ತಳ್ಳಿ ಎಡಕ್ಕೆ ಬಾಗಿದ ಮರದ ಹಾಗೆ ನಡೆಯುತ್ತಿದ್ದಳು ನಮ್ಮ ಅಜ್ಜಿ.  ಏನ್ರೀ…ಮಗಂಗೆ ಪಿತ್ತದಂಧೇವಾ..? ಎಂದು ಉದ್ದಕ್ಕೂ ಹಳ್ಳಿಯ ಹೆಣ್ಣುಮಕ್ಕಳು ವಿಚಾರಿಸುತ್ತಾ ಇದ್ದರು. ಅಂದರೆ ನನ್ನ ಪಿತ್ತಪ್ರಕೋಪದ ರೋಗ ಆ ದಿನಗಳಲ್ಲಿ ಎಷ್ಟು ಫೇಮಸ್ಸಾಗಿತ್ತು ಎಂಬುದನ್ನು ನೀವೇ ಊಹಿಸಿ! ಕಟಾಂಜನ ದಾಟಿದರೆ ಪಡಸಾಲೆ. ಅಲ್ಲೇ ಎಸ್.ಪಿ.ಪಂಡಿತರು ತಮ್ಮ ಪುರಾತನಕಾಲದ ಆಯಾಸಕುರ್ಚಿಯ ಮೇಲೆ ಕೂತಿರುತ್ತಿದ್ದರು. ಬಟ್ಟೆಯ ಈ ಮಡಿಸುವ ಚೇರನ್ನು ಆಯಾಸ ಕುರ್ಚಿ ಎಂದು ಏಕೆ ಕರೆಯುತ್ತಿದ್ದರೋ ಗೊತ್ತಿಲ್ಲ. ಪಂಡಿತರ ಆಯಾಸ ಕುರ್ಚಿಯದು ಒಂದು ವಿಶೇಷವಿತ್ತು. ಅದಕ್ಕೆ ಕೈ ಊರಲು ಎರಡೂಪಕ್ಕ ಚಾಚು ಹಲಗೆಗಳಿದ್ದವು. ತಮಾಷೆಯೆಂದರೆ ಆ ಚಾಚು ಹಲಗೆಗಳಿಗೆ ತೆಗೆದು ಮುಚ್ಚಲು ಎರಡು ಕವಾಟಗಳಿದ್ದು, ಕವಾಟ ತೆಗೆದರೆ ಪುಟ್ಟ ಪುಟ್ಟ ಖಾನೆಗಳಿದ್ದಿವು. ಆ ಖಾನೆಗಳಲ್ಲಿ ಪಂಡಿತರು ಹುರಿಗಾಳು, ಉಪ್ಪುಗಡಲೆ, ಉತ್ತುತ್ತಿ, ಕಲ್ಲುಸಕ್ಕರೆ ಚೂರು, ಹುರಿದ ಬಟಾಣಿ ಮೊದಲಾದುವನ್ನು ಇಟ್ಟುಕೊಂಡಿರುತ್ತಿದ್ದರು. ಊಟವಾದ ಮೇಲೆ ಈ ಆಯಾಸಕುರ್ಚಿಯ ಮೇಲೆ ಒರಗಿಕೊಂಡು-ಓ  ಇವಳೇ… ಉಂಡ ಬಾಯಿಗೆ ಒಗ್ಗರಣೆ ಕೊಡೇ ಎಂದು ಪಂಡಿತರು ಕೂಗಿದರೆ, ಅಂಡಾಳಮ್ಮ ಮೆಲ್ಲಗೆ ಪಡಸಾಲೆಗೆ ಚಿತ್ತೈಸಿ ಬೋಂಡವೋ, ಆಂಬೊಡೆಯೋ ಕೊಡೋರಂತೆ. ಪಂಡಿತರು ಅವನ್ನು ಮೆದ್ದಾದ ಮೇಲೆ, ತಮ್ಮ ಆಯಾಸುಕುರ್ಚಿಯ ಖಾನೆಯಲ್ಲಿ ಇರುತ್ತಿದ್ದ ಹುರಿಗಾಳು ಮೊದಲಾದವನ್ನು ಅರೆಗಣ್ಣು ಮಾಡಿಕೊಂಡು ಮೆಲುಕಾಡಿಸುತ್ತಾ, ಮುದಿ ಎತ್ತಿನ ಹಾಗೆ ಮೈ ಕೊಡವುತ್ತಾ ಕೂಡೋದು. ಈ ಎಲ್ಲ ವರ್ಣನೆಗಳನ್ನು ನಮ್ಮ ಭೀಮಜ್ಜಿಯ ಬಾಯಲ್ಲಿ ನೀವು ಕೇಳಬೇಕು. ನಾನು ಮತ್ತು ಅಜ್ಜಿ ಪಂಡಿತರ ಮನೆಗೆ ಹೋದಾಗ ಪಂಡಿತರು..”ಏನೇ… ನಿನ್ನ ಮೊಮ್ಮಗನಿಗೆ ಪಿತ್ತಪ್ರಕೋಪವೋ..?” ಎಂದು ಮೂತಿ ಸೊಟ್ಟ ಮಾಡಿ ಕಿಸಕ್ಕನೆ ನಕ್ಕರು. ಅವರು ತಮಿಳನ್ನು ಬಾಯಲ್ಲೂ, ಕನ್ನಡವನ್ನು ಮೂಗಿನಲ್ಲೂ, ಉಳಿದ ಭಾಷೆಗಳನ್ನು ಹಿಂಬಾಗಿಲಲ್ಲೂ ಆಡುತ್ತಾರೆಂದು ಹಳ್ಳಿಯಲ್ಲಿ ಒಂದು ಜೋಕು ಪ್ರಚಲಿತವಾಗಿತ್ತು. ಮತ್ತು ಊರಿನ ಎಲ್ಲ ಹೆಂಗಸರನ್ನೂ ಅವರೂ ಏಕ ವಚನದಲ್ಲೇ ಕರೆಯುತ್ತಿದ್ದುದು. ಅವರು ತುಂಬಾ ವಯಸ್ಸಾಗಿ ಈಗಲೋ ಆಗಲೋ ಅನ್ನುವಂತಿದ್ದುದರಿಂದ ಯಾರೂ ಅದನ್ನು ತಪ್ಪಾಗಿ ಕೂಡ ಭಾವಿಸುತ್ತಿರಲಿಲ್ಲ. ಕರಕೊಂಬಾ ಇಲ್ಲಿ ನಿನ್ನ ಮೊಮ್ಮಗನನ್ನ…ಎಣ್ಣೇಲಿ ಕರಿದದ್ದು ಏನಾರೂ ತಿಂದೆಯೇನೋ ಸುಡುಗಾಡು ಮುಂಡೇದೆ..? ಎಂದು ಪಂಡಿತರು ನನ್ನನ್ನು ಕೇಳುವಾಗ ನನಗೆ ಅಳುವೇ ಬಂದುಬಿಟ್ಟಿತು. ಯಾಕೆಂದರೆ ಇನ್ನು ಕೆಲವೇ ಕ್ಷಣಗಳಲ್ಲಿ ಪಂಡಿತರ ಕಾರ್ಕೋಟಕ ವಿಷದ ಕಷಾಯ ನಾನು ಕುಡಿಯಲೇ ಬೇಕಾಗುತ್ತದೆ ಎಂಬುದು ಈ ವೇಳೆಗಾಗಲೇ ನನ್ನ ಅರಿವಿಗೆ ಬಂದಿರುತ್ತಾ ಇತ್ತು. ಪಂಡಿತರು ಒಂದು ಕಷಾಯದ ಬಟ್ಟಲು ನನ್ನ ಅಜ್ಜಿಯ ಕೈಗೆ ಕೊಟ್ಟು. ಈ ಪುಂಡನಿಗೆ ಮೂಗು ಹಿಡಿದು ಈ ಕಷಾಯ ಕುಡಿಸೇ..ಎನ್ನುತ್ತಿದ್ದರು. ಅಜ್ಜಿ ಮೂಗು ಹಿಡಿದು ನನ್ನ ಬಾಯಲ್ಲಿ ಕಷಾಯ ಹುಯ್ಯುತ್ತಿದ್ದಳು. ನುಂಗು ಹಾಳು ರಂಡೇಗಂಡ..ಉಗುಳಿದೆಯೋ ಗೊಟ್ಟ ಹಾಕುತೀನಿ ನೋಡು..ಎಂದು ಕನ್ನಡದ ಸಮಸ್ತ ಅಕ್ಷರಗಳನ್ನು ಅನುನಾಸಿಕಗೊಳಿಸಿ ಪಂಡಿತರು ಹೇಳುತಾ ಇದ್ದರು. ಆಮೇಲೆ ನಮ್ಮ ಅಜ್ಜಿಯ ಕಡೆ ನೋಡುತ್ತಾ -ಅಡಿಗೆ ಸೋಡ ಇದೆ ಅಲ್ವೇನೇ ಮನೆಯಲ್ಲಿ..? ಎರಡು ವಳ್ಳೆ ಕೊಬ್ಬರಿಎಣ್ಣೆಗೆ ಎರಡು ಸ್ಪೂನು ಸೋಡ ಹಾಕಿ ಚೆನ್ನಾಗಿ ರಂಗಳಿಸಿ ಇಟ್ಟುಕೋ… ಇವನ ಚಡ್ದಿ ಕಳಚಿ ಮೈ ಪೂರ ರಂಗಳಿಸಿದ್ದ ಲೇಪನ ಗಸ ಗಸ ಗಸ ಮೈಗೆ ತಿಕ್ಕು…ದೊಡ್ಡಪತ್ರೆಸೊಪ್ಪಿನ ಪಳದ್ಯ ಮಾಡಿ ತಿನ್ನಿಸು…ಹೋಗೀಗ… ಸಂಜೆ ವೇಳೆಗೆ ಒಂದು ಚೂರೂ ದಂಧೆ ಇರೋಣಿಲ್ಲ… ಆಂಡಾಳೇ ಇವಳಿಗೆ ಒಂದು ಒಳಲೆ ಕಾಫೀಕಷಾಯ ಕೊಡೆ ಎಂದು ಪಂಡಿತರು ಹೇಳಿದಾಗ, ಬನ್ರೀ ಸೀತಕ್ಕ ಒಳಗೇ ಎಂಬುದಾಗಿ ಅಂಡಾಳಮ್ಮನ ಅಶರೀರವಾಣಿ ಒಳಮನೆಯಿಂದ ಕೇಳುತಾ ಇತ್ತು. ಆವತ್ತು ರಾತ್ರಿ ಭದ್ರಕ್ಕ ನಮ್ಮ ಮನೆಗೆ ಬಂದೋಳು ನನ್ನ ಬಟ್ಟೆಬಿಚ್ಚಿಸಿ ನೋಡಿ….ಅಯ್ಯಾ…ಆ ಅಳಿಲೆಕಾಯಿ ಪಂಡಿತ ಏನಮಾಡ್ತಾನೆ ಬಿಡ್ರಿ ನಿಮ್ಮ…ಒಂದು ಹೇಳ್ತೀನಿ ಕೇಳ್ರಿ…ರಾತ್ರಿನಾಗ ಮುಸುರೆ ಕಲಗಚ್ಚು ಒಂದು ಚಟ್ಟೀನಲ್ಲಿ ತಕ್ಕಂಡು, ಮಗೀನ  ಬಚ್ಚಲದಾಗ ನಿಲ್ಲಿಸಿ ಚಲೋತ್ನಾಗಿ ಮೈ ಮೇಲೆ ಸುರೀರಿ…ಆಮ್ಯಾಲೆ ಉಗುರುಬಿಸಿನೀರಲ್ಲಿ ಮೈತೊಳೀರಿ…ನಾಳೆ ಇದ್ರೆ ಕೇಳ್ರಿ ಅದರವ್ವನ ದಂಧೆ ಅಂಬೋದು..ಎಂದಳು. ಅನ್ನದ ಅಗುಳು, ಮುದ್ದೆಚಕ್ಕಳ, ಸಾರಿನ ಬೇಳೆ ಇವೆಲ್ಲಾ ಇದ್ದ ಮುಸುರೆ ನೀರನ್ನು ಮೈಮೇಲೆ ಸುರಿಸಿಕೊಳ್ಳುವಾಗ ನನ್ನ ಎದೆ ನನ್ನ ಬಾಯಿಗೆ ಬಂದ ಹಾಗೆ ಆಯಿತು. ಏನು ಮಾಡೋದು… ಈ ಮೈ ನವೆ ಹೋಗೋದಾದರೆ ಏನದರಲ್ಲಿ ಸ್ನಾನ ಮಾಡಲೂ ನಾನು ಸಿದ್ಧನಾಗಿದ್ದೆ! ಈ ಸಾರಿಯಂತೂ ಏನು ಮಾಡಿದರೂ ನನ್ನ ಪಿತ್ತದಂಧೆ ಕಡಿಮೆಯಾಗಲೇ ಇಲ್ಲ. ಹಗಲೂ ರಾತ್ರಿ ತಡಪು ಹತ್ತಿದ್ದ ಕೋತಿಯ ಹಾಗೆ ಮೈಪರಚಿಕೊಳ್ಳೋದೆ ಆಯಿತು. ಇದನ್ನು ನೋಡಿ ನಮ್ಮ ಪಕ್ಕದ ಮನೆಯಲ್ಲಿ ಬಾಡಿಗೆಗಿದ್ದ ಗೋಪಾಲಪ್ಪ ಮೇಷ್ಟ್ರಿಗೆ ರೇಗಿಹೋಯಿತು. ಏನು ಜನ ನೀವು..ಮಗು ಎಷ್ಟು ತ್ರಾಸು ಪಡುತಾ ಇದೆ ಏನಕಥೆ…ಸುಮ್ಮನೆ ನಾಳೆ ಗಾಡಿಮಾಡಿಕೊಂಡು ಚೆನ್ನಗಿರಿಗೆ ಹೋಗಿ ಬನ್ನಿ… ಅಲ್ಲಿ ಬಸಣ್ಣಯ್ಯ ಅಂತ ಒಳ್ಳೇ ಡಾಕ್ಟ್ರು ಇದ್ದಾರೆ… ಕೈಗುಣ ಭಾಳ ಚೆನ್ನಾಗಿದೆ ಅವರದ್ದು…ಹೊಸ ಕಾಲದ ಕಾಹಿಲೆಗಳಿಗೆ ಹಳೇ ಮದ್ದು ಹಿಡಿಸೋದಿಲ್ಲ ಸೀತಕ್ಕ… ಹೊಸ ಕಾಹಿಲೆಗೆ ಹೊಸ ಔಷಧಾನೇ ಬೇಕು…ಇಂಗ್ಲಿಷ್ ಔಷಧ ಬೀಳದೆ ಇದು ಆರಾಮಾಗೋದಿಲ್ಲ…ಸುಮ್ಮನೆ ನಾಳೆ ಚೆನ್ನಗಿರಿಗೆ ಹೋಗ್ಬನ್ನಿ… ಇಂಗ್ಲಿಷ್ ಔಷಧಿ ತೆಗೆದುಕೊಂಡಮೇಲೆ ನನ್ನ ಪಿತ್ತದಂಧೆ ವಾಸಿಯಾಗಿ ನಾನು ಮತ್ತೆ ಸ್ಕೂಲಿಗೆ ಹೋಗಲು ಶುರು ಮಾಡಿದೆ. ಕಾಹಿಲೆ ವಾಸಿಯಾದದ್ದು ಪಂಡಿತರ ಕಷಾಯದಿಂದಲೋ, ಭದ್ರಕ್ಕನ ಮುಸುರೆ ಔಷಧದಿಂದಲೋ, ಬಸಣ್ಣಯ್ಯನವರ ಇಂಗ್ಲಿಷ್ ಔಷಧದಿಂದಲೋ ಅನ್ನೋದು ಕೊನೇಗೂ ಒಂದು ಕೌತುಕದ ಪ್ರಶ್ನೆಯಾಗೇ ಉಳಿಯಿತು.  ಇದಕ್ಕಿಂತ ಮುಂದಿನ ಕಥೆ ಬಹಳ ಸ್ವಾರಸ್ಯವಾಗಿದೆ. ಎರಡು ದಿನ ಆದಮೇಲೆ ಅಂಡಾಳಮ್ಮನವರು ನಮ್ಮ ಮನೆಗೆ ಬಂದರು. ಬಂದವರು ಧಸ ಧಸ ತೇಗುತಾ ಇದ್ದರು. ಕೂತ್ಕಳ್ರೀ..ಅಂಡಾಳಮ್ಮ…ನಡಕೊಂಡು ಬಂದದ್ದು ಆಯಾಸಾತೇನೋ ಪಾಪ..ಅಂದರು ಸೀತಜ್ಜಿ. ಬಾಗಿಲು ಮುಂದೆ ಮಾಡ್ರಿ ನಿಮ್ಮತ್ರ ಸೊಲ್ಪ ಗುಟ್ಟಾಗಿ ಮಾತಾಡೋದದೆ..ಅಂದ್ರು ಅಂಡಾಳಮ್ಮ. ಅಜ್ಜಿ ಮುಂಬಾಗಿಲೆಗೆ ಅಗುಳಿಹಾಕಿ ಬಂದು -ಹೇಳ್ರಿ..ಏನು ವಿಷಯ ..ಅಂದಾಗ ಅಂಡಾಳಮ್ಮ ಹೇಳಿದ್ದಿಷ್ಟು. ಎರಡು ದಿನದಿಂದ ಪಂಡಿತರಿಗೆ ಮೈತುಂಬ ಪಿತ್ತದಂಧೆಯಾಗಿ ಚಿಂಪಾಂಜಿ ಥರ ಹಾರಡುತ್ತಾ ಇದ್ದಾರೆ. ಬಸಣ್ಣಯ್ಯ ಕೊಟ್ಟ ಔಷಧ ಇದ್ದರೆ ಇಸ್ಕೊಂಡು ಬಾ ಅಂತ ಅವರು ಅಂಡಾಳಮ್ಮನ್ನ ನಮ್ಮ ಮನೆಗೆ ಕಳಿಸಿದ್ದಾರೆ. ಮತ್ತೂ ಈ ವಿಷಯ ಊರಿನ ಒಂದು ನರಪಿಳ್ಳೆಗೂ ಗೊತ್ತಾಗಬಾರದು ಅಂತ ಹೆಂಡತಿಯ ಮೂಲಕ ತಾಖೀತು ಮಾಡಿ ಕಳಿಸಿದಿದ್ದಾರೆ. ಸೀತಜ್ಜಿ ನನಗೆ ಬಸಣ್ಣಯ್ಯ ಕೊಟ್ಟಿದ್ದ ಮಾತ್ರೆಗಳನ್ನು ಇನ್ನೂ ಇಟ್ಟುಕೊಂಡಿದ್ದರು. ಇನ್ನೂ ಎರಡುದಿನದ ಮಾತ್ರೆ ಇದ್ದವು. ಒಂದೇ ದಿನಕ್ಕೆ ವಾಸಿಯಾಗಿದ್ದುದರಿಂದ ಔಷಧಿ ಉಳಿದಿತ್ತು. ಮಾತ್ರೆಗಳನ್ನು ಅಂಡಾಳಮ್ಮನವರ ಕೈಗೆ ಹಾಕಿ, ಈಗೊಂದು, ನಾಳೆ ಬೆಳಿಗ್ಗೆ ಒಂದು, ನಾಳೆ ರಾತ್ರಿ ಒಂದು ಕೊಡಿ…ಕಮ್ಮಿಯಾಗ್ಬಹುದು..ಎಂದರು. ಅಂಡಾಳಮ್ಮ ಮಾತ್ರೆ ಪೊಟ್ಟಣ ತಮ್ಮ ಉಡಿಯಲ್ಲಿ ಮುಚ್ಚಿಟ್ಟುಕೊಂಡು, ಉಪಕಾರವಾಯ್ತ್ರಿ…ನಾನಿನ್ನು ಬರ್ಲಾ… ವಿಷಯ ಮಾತ್ರ ಯಾರಿಗೂ ತಿಳೀಬಾರ್ದು ಮತ್ತೆ..ಎನ್ನುತ್ತಾ ಮೆಲ್ಲ ಮೆಲ್ಲಗೆ ತಮ್ಮ ಮನೆಯ ಕಡೆ ತಮ್ಮ ಶರೀರವನ್ನು ಸಾಗಿಸಿದರು. ಮುಸ್ಸಂಜೆಯಲ್ಲಿ ಸಾವಧಾನ ಅಂಡಾಳಮ್ಮನವರ ಶರೀರ ರಸ್ತೆಯಲ್ಲಿ ಕಾಲಿನ ಚಲನೆ ತೋರಿಸದೆ ಸರಿಯುತ್ತಾ ಹೋದದ್ದು ಈವತ್ತೂ ನನ್ನ ಕಣ್ಣಿಗೆ ಕಟ್ಟಿದ ಹಾಗಿದೆ.]]>

‍ಲೇಖಕರು avadhi

June 10, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಚ್ ಎಸ್ ವಿ ಕಾಲಂ: ಮತ್ತೆ, ಮರೆತ ಇತಿಹಾಸದ ಮರುಗಳಿಕೆ..

ತಾವರೆಯ ಬಾಗಿಲು-೧೮ ಎರಡು ಸಾವಿರ ವರ್ಷಗಳ ಹಿಂದೆ ತೆಂಕಣಭಾರತದ ದೇಶ-ಕಾಲ-ಪರಿಸ್ಥಿತಿ ಹೇಗಿತ್ತೆಂದು ನಾವು ಊಹಿಸುವುದೂ ಸಾಧ್ಯವಿಲ್ಲ. ಮರೆತು ಹೋದ...

ಎಚ್ ಎಸ್ ವಿ ಕಾಲಂ: ಕಾವ್ಯದಲ್ಲಿ ಭಾಷೆಯಲ್ಲದ ಭಾಷೆಯ ಮಿಡುಕಾಟ..

ತಾವರೆಯ ಬಾಗಿಲು-೧೬ ಕಾವ್ಯಕ್ಕೆ ಭಾಷೆಯೇ ಮೂಲ ಸಾಮಗ್ರಿ. ಭಾಷೆಯ ಮೂಲಕ ಕವಿಗಳು ತಮ್ಮ ಲೌಕಿಕಾಲೌಕಿಕ ಅನುಭವಗಳನ್ನು ಅಭಿವ್ಯಕ್ತಿಸುತ್ತಾರೆ. ಹಾಗೆ...

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: