ಎಚ್ಹೆಸ್ವಿ ಅನಾತ್ಮ ಕಥನ: ನಾನು ವೆಂಕಟೇಶ ಅಲ್ಲ..ಶ್ರೀನಿವಾಸ

ಇನ್ನು ಮುಂದೆ ಇದು ಅನಾತ್ಮ ಕಥನ. ಎಚ್ ಎಸ್ ವೆಂಕಟೇಶಮೂರ್ತಿ ಅವರ ಬದುಕಿನ ಕಥೆ ಆದರೂ ಸಹಾ ಇದು ಹತ್ತು ಹಲವರ ಕಥೆ. ಇದರ ಕೇಂದ್ರ ಬಿಂದು ಮಾತ್ರ ಎಚ್ ಎಸ್ ವಿ ಅವರು. ಹಾಗಾಗಿ ಇದು ಒಬ್ಬರ ಹೆಸರಿನ ಅನೇಕರ ಕಥೆ.

ಹೀಗೊಬ್ಬ ಲೋಕವಿಹಾರಿ...
ಎಚ್ ಎಸ್ ವೆಂಕಟೇಶಮೂರ್ತಿ
ದೊಡ್ಡಮ್ಮ ಬರ್ತಾಳೆ. ಬೇಗ ರೆಡಿಯಾಗು..ಅಂತ ನನ್ನ ಅಮ್ಮ ಕೂಗಿದಾಗ ಸಂಜೆ ನಾಲಕ್ಕು ಗಂಟೆ ಸಮಯ. ಪಶ್ಚಿಮದ ಕಂತರಂಗನ ಮಟ್ಟಿಯ ಮೇಲೆ ಸಾವಿರಾರು ಬಣ್ಣ ಬಣ್ಣದ ಗರಿಗಳು ಹಾರುತ್ತಾ ನೋಟ ವರ್ಣೋಜ್ವಲವಾಗಿತ್ತು. ಮಹಾ ಚೆಲುವೆಯಾದ ನಮ್ಮ ದೊಡ್ಡಮ್ಮ ಬರುವಾಗ ಆಕಾಶ ಇಷ್ಟಾದರೂ ಚಂದವಾಗಿರದಿದ್ದರೆ ಹೇಗೆ? ನನ್ನ ಅಮ್ಮ ನನಗೆ ಬೇಗ ಬೇಗ ಮುಖ ತೊಳಿಸಿ, ಕ್ರಾಪು ತಿದ್ದಿ, ಒಗೆದ ಅಂಗಿ ತೊಡಿಸಿ ರೆಡಿ ಮಾಡಿದಳು. ಹಿಮ್ಮಡಿ ಮೇಲೆ ಎಷ್ಟು ಮಣ್ಣು ಕೂತಿದೆ ನೋಡು! ದೊಡ್ಡಮ್ಮ ನೋಡಿದರೆ ನನ್ನ -ನನ್ನ-ಬೈಯುತ್ತಾಳೆ. ಅಷ್ಟೆ! ಎಂಬುದಾಗಿ ಅಮ್ಮ ಗೊಣಗುತ್ತಾ, ನನ್ನ ಮೂತಿಗೆ ಪೌಡರು ಬಳಿದು, ಹಣೆಯ ನಡುವೆ ದುಂಡಗೆ ಸಾದು ತಿದ್ದಿದಳು. ನೀನು ಯಾವ ಸೀರೆ ಉಡ್ತೀ? ಎಂದು ಅಜ್ಜಿ ಅಮ್ಮನನ್ನು ಕೇಳಿದಳು. ಗುಲಾಬಿ ಹೂವಿನ ವಾಯಲ್ಲು ಎಂದು ಅಮ್ಮ ಉತ್ತರಿಸಿದಳು. ಏನು ವಾಯಲ್ಲೋ! ಹಳದೀ ಅಂಚಿನ ನೀಲಿ ಸೀರೆ ಉಡಬಾರದೆ? ಅದು ಚೆನ್ನಾಗಿ ಒಪ್ಪತ್ತೆ. ಇಲ್ಲಾ ನಿಮ್ಮ ದೊಡ್ಡಮ್ಮ ಇದೇನೇ ಹೀಗಿದೆ ಸೀರೆ ಅಂತ ಮೂತಿ ತಿರುವುತ್ತಾಳೆ ಅಷ್ಟೆ! ಅವಳು ಎಣ್ಣೇ ರಂಗು ಇಷ್ಟಪಡ್ತಾಳೆ…ನಾನು ಅದೇ ಉಟ್ಕಳ್ತೀನಿ ಎಂದು ಸಾದುಗಪ್ಪು ಬಣ್ಣದ ಅಜ್ಜಿ ಗಡಿಬಿಡಿಯಿಂದ ಪೆಟಾರಿ ಕೋಣೆಗೆ ನುಗ್ಗಿದಳು.
ಒಟ್ಟಿನಲ್ಲಿ ದೊಡ್ಡಮ್ಮ ಬರ್ತಾಳೆ ಎಂಬ ಕಾರಣಕ್ಕೆ ನಮ್ಮ ಮನೆ ಮಂದಿಯ ಸೌಂದರ್ಯ ಪ್ರಜ್ಞೆ ಒಮ್ಮೆಗೇ ಸಿಕ್ಕಾಬಟ್ಟೆ ಜಾಗೃತವಾಗಿತ್ತು! ಅದಕ್ಕೆ ಕಾರಣ ನಮ್ಮ ದೊಡ್ಡಮ್ಮ ಸಹಜ ಸುಂದರಿ ಎಂಬುದೇ. ಅವಳು ಏನು ಬಟ್ಟೆ ಹಾಕಿಕೊಂಡರೂ ಚೆನ್ನಾಗಿ ಕಾಣುತಾ ಇದ್ದಳು. ಅವಳ ಜತೆ ಮಾತಾಡಲು, ಓಡಾಡಲು ನಾವು ತಕ್ಕ ಮಟ್ಟಿಗಾದರೂ ಚಂದ ಕಾಣಬೇಕು ಎಂಬುದು ನನ್ನ ಅಜ್ಜಿಯ ತರ್ಕವಾಗಿತ್ತು. ಅಜ್ಜ ಬಸಣ್ಣನ ಗಾಡಿ ಹೊಡೆಸಿಕೊಂಡು ಬಂದರು. ಬಸಣ್ಣ ಬೇಗ ಬೇಗ ಕೀಲು ಹೆರೆದು, ಚಕ್ರಕ್ಕೆ ಕೀಲೆಣ್ಣೆ ಬಿಟ್ಟು, ತೆಳ್ಳಗೆ ಗಾಡಿಯ ಮೇಲೆ ಬತ್ತದ ಹುಲ್ಲು ಹರಡಿ, ಅದರ ಮೇಲೊಂದು ಬಣ್ಣದ ಜಮಖಾನೆ ಹಾಸಿ, ಪಪ್! ಪಪ್! ಎಂದು ಎತ್ತಿನ ಬೆನ್ನು ಚಪ್ಪರಿಸುತ್ತಾ , ಅವನ್ನು ನೊಗಕ್ಕೆ ಹೂಡಿದ. ನಮ್ಮೂರಿಂದ ಬಸ್ ಸ್ಟಾಂಡಿಗೆ ಎರಡು ಮೈಲು ದೂರ. ಅಲ್ಲಿಗೆ ಹೋಗಿ, ಕೆಲ್ಲೋಡಿಂದ, ಹೊಸದುರ್ಗಕ್ಕೆ ಬಂದು, ಅಲ್ಲಿಂದ ಇನ್ನೊಂದು ಬಸ್ಸು ಹಿಡಿದು ಹೊಳಲಕೆರೆಗೆ ಬಂದು, ಅಲ್ಲಿ ಬಸ್ ಬದಲಾಯಿಸಿ ನಮ್ಮೂರಿಗೆ ಬರೋ ದೊಡ್ಡಮ್ಮನನ್ನ ಕರೆತರಲು ಅಜ್ಜ ಬಂಡಿಯೇರಿದ್ದೂ ಆಯಿತು. ಕಟ್ಟೆಯ ಮೇಲೆ ನಿಂತಿದ್ದ ಅಜ್ಜಿ ಹುಷಾರು ಅಂತ ಕೂಗಿದಳು. ಪಕ್ಕದ ಮನೆಯ ಮುದುಕಿ ಕಾಡಜ್ಜಿ, ಏನೇ ಸೀತೆ! ಭೀಮಕ್ಕ ಬರತಾಳೇನೇ? ಎಂದು ವಿಚಾರಿಸಿದ್ದೂ ಆಯಿತು.

ಈ ದೊಡ್ಡಮ್ಮನ ಬಗ್ಗೆ ಕೆಲವು ಪೂರ್ವ ವಿವರಗಳನ್ನು ಈಗಲೇ ಹೇಳಿಬಿಡುವುದು ಒಳ್ಳೇದು. ಅವಳು ಬಂದಮೇಲೆ ಅದಕ್ಕೆಲ್ಲಾ ನನಗೆ ಪುರಸೊತ್ತೇ ಇರುವುದಿಲ್ಲ. ನನ್ನ ಅಜ್ಜಿಯ ಹೆಸರು ಸೀತಜ್ಜಿ. ಅವಳ ಅಕ್ಕ ಭೀಮಜ್ಜಿ. ಭೀಮಜ್ಜಿ ವಾಸ್ತವವಾಗಿ ನನಗೆ ಅಜ್ಜಿ ಆಗಬೇಕು. ಆದರೆ ನಮ್ಮ ಅಮ್ಮ ಅವಳನ್ನು ದೊಡ್ಡಮ್ಮ ಎಂದು ಕರೆಯುತ್ತಿದ್ದುದರಿಂದ ನನ್ನ ಪಾಲಿಗೂ ಭೀಮಜ್ಜಿ ದೊಡ್ಡಮ್ಮ ಆದಳು. ಈ ಅಕ್ಕ ತಂಗಿಯರನ್ನು ಒಂದೇ ಮನೆಗೆ ಕೊಟ್ಟಿದ್ದರು. ಸೀನಪ್ಪ, ಭೀಮಣ್ಣ ಅಣ್ಣತಮ್ಮಂದಿರು. ಅಣ್ಣ ಭೀಮಣ್ಣನಿಗೆ ತಂಗಿ ಸೀತಮ್ಮನನ್ನು ಕೊಟ್ಟು ಮದುವೆಯಾಗಿತ್ತು. ತಮ್ಮ ಸೀನಪ್ಪನಾದರೋ , ಅಕ್ಕ ಭೀಮಕ್ಕನನ್ನು ಮದುವೆಯಾಗಿದ್ದ! ಈ ವೈಪರೀತ್ಯಕ್ಕೆ ಕಾರಣ ಭೀಮಕ್ಕನಂತೆ ಸೀನಪ್ಪನೂ ಚೆಲುವನಾಗಿದ್ದುದೇ. ಇತ್ತ ಭೀಮಣ್ಣನಾದರೋ ಭೀಮನಿಗಿಂತ ಹೆಚ್ಚಾಗಿ ಭೀಮನ ಅಣ್ಣ ಹನುಮಂತರಾಯನ ಹೋಲುವೆ ಇದ್ದವನು. ಅವನಿಗೆ ತಕ್ಕಂತೆ ಸೀತಮ್ಮನೂ ಮೊಂಡು ಮೂಗಿನ, ಸಾದುಗಪ್ಪು ಸುಂದರಿ(!). ಒಟ್ಟಿನಲ್ಲಿ ವರಸಾಮ್ಯಅದ್ಭುತ ಎಂದು ಗಾಡಿಯ ಮೇಲೆ ಮೆರವಣಿಗೆ ನಡೆದಾಗ ಊರಮಂದಿಯೆಲ್ಲಾ ಮಾತಾಡಿಕೊಂಡರಂತೆ!
ಭೀಮಕ್ಕನ ಗಂಡ ಸೀನಪ್ಪ ಒಂದು ರೀತಿಯ ಮನಸುಖರಾಯ! ಅವನಿಂದ ಹಣ ಕಸಿಯುವುದಕ್ಕೆ ಊರ ಮಂದಿ ಅನೇಕ ಉಪಾಯಗಳನ್ನ ಕಂಡುಕೊಂಡಿದ್ದರಂತೆ. ಪಕೋಡ ಎಂದರೆ ಜೀವ ಬಿಡುವ ಈ ಮನುಷ್ಯನನ್ನು ಕರೆದು ಬಿಸಿ ಬಿಸಿ ಪಕೋಡ ತಟ್ಟೆಗೆ ಸುರಿದು, ಸೀನಣ್ಣ ಒಂದು ಐವತ್ತು ರೂಪಾಯಿ ಬೇಕಾಗಿತ್ತಲ್ಲೋ ಎಂದರೆ ಈ ಸೀನಣ್ಣ ಜೋಬಿಂದ ಐವತ್ತು ತೆಗೆದು ಬಿಸಾಕಿದನೆಂದೇ ಲೆಕ್ಖ. ಒಂದು ವೇಳೆ ಜೋಬಲ್ಲಿ ಕಾಸಿಲ್ಲದಿದ್ದರೆ, ಅಣ್ಣ ಭೀಮಣ್ಣನ ಜೇಬಿನಿಂದಲಾದರೂ ಎರವಲುಗಾಣಿಕೆ ಪಡೆದು ನಮ್ಮ ಸೀನಣ್ಣ ಪಕೋಡಿಗರಿಗೆ ಕೊಟ್ಟೇಕೊಟ್ಟಾನು. ಇದು ಸೀನಣ್ಣನ ಸ್ವಭಾವ. ಕೊನೆಗೆ ಈ ಕೈಹರುಕನಿಂದ ಪಕೋಡ ಕೊಟ್ಟೇ ಹೊಲ ಜಮೀನನ್ನೂ ಶಾನುಭೋಗ ಮಧ್ವಪರಾಯ ಬರೆಸಿಕೊಂಡ ಎಂಬ ಗಾಳಿಮಾತೂ ಉಂಟು. ಜೊತೆಗೆ ಈ ಸೀನಣ್ಣ ಸ್ವಲ್ಪೇ ಸ್ವಲ್ಪು ಕಚ್ಚೆಹರುಕನೂ ಹೌದು. ಬೇರೆ ಬೇರೆ ಊರಲ್ಲಿ ಇವನಿಗೆ ಬೇರೆ ಬೇರೆ ಸಂಬಂಧಗಳಿದ್ದವು. ಈ ಮಧ್ಯೆ ಭೀಮಕ್ಕನಿಗೆ ಒಂದು ಗಂಡು ಮಗುವೂ ಆಯಿತು. ಆ ಮಗುವಿಗೆ ವೆಂಕಟರಮಣ ಎಂಬ ನಾಮಕರಣವೂ ಆಯಿತು. ಅಂದಾದುಂದಿಯ ಬದುಕಿನ ಶ್ರೀನಿವಾಸರಾಯ ಚಿಕ್ಕ ಪ್ರಾಯದಲ್ಲೇ ಯಾವುದೋ ಬರಬಾರದ ಕಾಯಿಲೆ ಬಂದು ಕಣ್ಣುಮುಚ್ಚಿಕೊಂಡ ಮೇಲೆ, ಭೀಮಕ್ಕ ತನ್ನ ತಂಗಿಯ ಮನೆಯಲ್ಲೇ ಉಳಿಯುವುದು ಅನಿವಾರ್ಯವಾಯಿತು. ಏಳೆಂಟು ವರುಷದ ಪ್ರಾಯದಲ್ಲಿ ಮಗ ವೆಂಕಟರಮಣನೂ ಹೋಗಿಬಿಟ್ಟ.
ಈ ವೇಳೆಗೆ ಸೀತಕ್ಕನಿಗೆ ಒಂದು ಹೆಣ್ಣು ಮಗುವಾಗಿ ಅದು ರತ್ನ ಎಂಬ ನಾಮಧೇಯದೊಂದಿಗೆ ಬೆಳೆಯ ತೊಡಗಿತ್ತು. ಅಕ್ಕ ತಂಗಿ ಇಬ್ಬರೂ ಕೂಡಿ ಇದೊಂದೇ ತಮ್ಮ ಮಗು ಎಂಬಂತೆ ಆ ಹುಡುಗಿಯನ್ನು ಅತಿ ಮುದ್ದಿನಲ್ಲಿ ಸಾಕಿದರು. ಆ ಹುಡುಗಿಗೆ ಚಿಕ್ಕ ವಯಸ್ಸಲ್ಲೇ ನಾಣಿಭಟ್ಟನೊಂದಿಗೆ ಮದುವೆ ಆಯಿತು. ನಾಣಿಭಟ್ಟ ಚಿಕ್ಕ ಪ್ರಾಯದಲ್ಲೇ ತೀರಿಕೊಂಡ ಸಂಗತಿಯನ್ನು ಈಗಾಗಲೇ ತಮ್ಮ ಗಮನಕ್ಕೆ ತರಲಾಗಿದೆ. ಸದರೀ ನಾಣಿಭಟ್ಟನ ಏಕಮಾತ್ರ ಪುತ್ರ ನಾನು. ನನ್ನ ನಿಜವಾದ ಹೆಸರು- ಶ್ರೀನಿವಾಸ. ತಿರುಪತಿ ತಿಮ್ಮಪ್ಪನ ಹರಕೆಯ ಕೂಸಾದುದರಿಂದ ಈ ಹೆಸರು. ಆದರೆ ನಮ್ಮ ದೊಡ್ಡಜ್ಜಿ ಭೀಮಕ್ಕ, ಶ್ರೀನಿವಾಸ ತನ್ನ ಗಂಡನ ಹೆಸರೂ ಆದುದರಿಂದ , ಆ ಹೆಸರನ್ನು ಹಿಡಿದು ಕೂಗಲು ಯಾಕೋ ಹಿಂಜರಿದು ನನಗೆ ವೆಂಕಟೇಶ ಅಂತ ಮರು ನಾಮಕರಣ ಮಾಡಿದಳಂತೆ. ವೆಂಕಟೇಶ ಎಂಬುದು ನನ್ನ ಹೆಸರಾಗಿದ್ದರೂ ನಮ್ಮ ದೊಡ್ಡಜ್ಜಿ ತಾನು ಸಾಯುವ ತನಕ ನನ್ನನ್ನು ಯಂಕು, ಯಂಕಣ್ಣ ಎಂದೇ ಕರೆಯುತ್ತಿದ್ದಳು.
ಬಂಡಿಯಿಂದ ಇನ್ನೂ ಇಳಿದೇ ಇಲ್ಲ. ದೊಡ್ಡಮ್ಮ ಯಂಕೂ..ಹೇಗಿದೀಯೋ..? ಎಂದು ಗಟ್ಟಿಯಾಗಿ ಕೂಗಿದಳು. ಕೆಂಪು ಹಳದಿ ಗೆರೆಯ ಚೌಕಳಿ ಸೀರೆ ದೊಡ್ಡಮ್ಮ ಉಟ್ಟುಕೊಂಡಿದ್ದಳು. ಬೆಳ್ಳಗೆ ಬೆಣ್ಣೆಮುದ್ದೆಯಂಥ ದುಂಡನೆಯ ಮುಖ ಅವಳದ್ದು. ಹಣೆಯ ನಡುವೆ ಕಪ್ಪು ಸಾದು. ಕಪ್ಪಗೆ ಮೆಟ್ಟಿಲು ಮೆಟ್ಟಿಲು ಕೂದಲು. ಹಿಂದೆ ನೆಟ್ ಹಾಕಿದ ತುರುಬು. ಕೊರಳಲ್ಲಿ ಬಂಗಾರದ್ದು ಎಂಬಂತೆ ಹೊಳೆಯುವ ಹಿತ್ತಾಳೆ ಸರ. ಗಾಜಿನವು ಎಂದು ಭ್ರಮೆ ಹುಟ್ಟಿಸುವ ಕಪ್ಪು ಪ್ಲಾಸ್ಟಿಕ್ ಬಳೆಗಳು ಕೈ ತುಂಬಾ. ಬಸಣ್ಣ ಕೊಳ್ಳು ಹರಿದು ಎತ್ತನ್ನು ಪಕ್ಕಕ್ಕೆ ಎಳೆದು ಕಟ್ಟಿದ ಮೇಲೆ ದೊಡ್ಡಮ್ಮ ಗಾಡಿಯಿಂದ ಇಳಿದು, ತಲೆಯ ಕೂದಲು ನೇವರಿಸಿಕೊಳ್ಳುತ್ತಾ, ಸೊಂಟ ಹಿಡಿದು ಜೋತುಬಿದ್ದ ನನ್ನನ್ನು ಅನಾಮತ್ತು ಎತ್ತಿ ಸೊಂಟದ ಮೇಲೆ ಇರುಕಿ ಕೊಂಡು, ಕೆನ್ನೆ ತುಂಬಾ ಲೊಚ ಲೊಚ ಎಂಜಲು ಮುದ್ದು ಕೊಡುತ್ತಾ, ಜಗತ್ತನ್ನೇ ಮರೆತಂತೆ ಅರೆಗಣ್ಣಲ್ಲಿ ಬಾಗಿಲಲ್ಲೇ ನಿಂತು ಬಿಟ್ಟಳು. ಅಕ್ಕಾ..ಒಳಗೆ ಬಾ..ನಿನ್ನ ಮೊಮ್ಮಗ ಎಲ್ಲೂ ಓಡಿ ಹೋಗಲ್ಲ..ಆಮೇಲೆ ಮುದ್ದು ಮಾಡೋದು ಇದ್ದೇ ಇದೆ ಎಂದು ನನ್ನ ಅಜ್ಜಿ ಹೇಳುತ್ತಿರಲು, ಅದೇಕೋ ಬುಳು ಬುಳು ಕಣ್ಣೀರು ಸುರಿಸುತ್ತಾ ದೊಡ್ಡಮ್ಮ ನನ್ನನ್ನು ಸೊಂಟದಿಂದ ಇಳಿಸಿ, ಕೈ ಹಿಡಿದುಕೊಂಡೇ ನಡುಮನೆಗೆ ಕರೆದುಕೊಂಡು ಬಂದಳು. ಥೂ ಕೆನ್ನೆಯೆಲ್ಲಾ ಎಂಜಲು ಮಾಡಿಬಿಟ್ಟಳು ಎಂದು ನಾನು ಮುಖ ಊದಿಸಿಕೊಂಡು, ಮುಖ ತೊಳೆಯುವುದಕ್ಕೆ ಬಚ್ಚಲು ಮನೆಗೆ ಓಡಿದೆ.
****
ತಾನು ಬಂದ ಮಾರನೇ ದಿನವೇ ದೊಡ್ಡಜ್ಜಿ ತನ್ನ ಕಾಮಗಾರಿ ಶುರು ಮಾಡಿಬಿಟ್ಟಳು. ದೊಡ್ಡಜ್ಜಿ ಲೋಕ ವಿಹಾರಿ ಎಂದು ಮೊದಲೇ ತಮಗೆ ಹೇಳಿದ್ದೇನೆ. ಇತ್ತ ಗಂಡ, ಅತ್ತ ಮಗ ಇಬ್ಬರೂ ಹೋದಮೇಲೆ, ಕೊಳ್ಳು ಹರಿದ ಹಸುವಿನಂತೆ ಒಂದು ಬಗೆಯ ಮುಕ್ತಸ್ಥಿತಿಯನ್ನು ಪಡೆದ ದೊಡ್ಡಜ್ಜಿ ಎಲ್ಲರ ಮನೆಯವಳೂ ಹೌದು, ಆದರೆ ಯಾರ ಮನೆಯವಳೂ ಅಲ್ಲ ಎಂಬಂತಾಗಿತ್ತು. ದೊಡ್ಡಮ್ಮ ವಿಧವೆಯಾದ ಮೇಲೆ ಅವಳ ತಂದೆ ವಂಶೋದ್ಧಾರಕನನ್ನು ಪಡೆಯಬೇಕೆಂಬ ಏಕೈಕ ಉದ್ದೇಶದಿಂದ ಮೂರನೇ ಮದುವೆ ಮಾಡಿಕೊಂಡಿದ್ದರು! ಹೊಸದಾಗಿ ಮನೆಗೆ ಬಂದ ಈ ಮಲತಾಯಿ ವಾಸ್ತವವಾಗಿ ದೊಡ್ಡಮ್ಮನಿಗಿಂತ ಚಿಕ್ಕವಳಾಗಿದ್ದಳು. ಹಾಗಾಗಿ ಆಕೆಯನ್ನು ಹೆಸರಿಟ್ಟೇ ದೊಡ್ಡಮ್ಮ ಕೂಗುತಾ ಇದ್ದಳು. ಆ ಪುಟ್ಟ ಹುಡುಗಿ ಕಾಲ ಕಾಲಕ್ಕೆ ಬಸುರಿಯಾಗಿ ಮಕ್ಕಳನ್ನು ಹೆತ್ತಾಗ ಮಲತಾಯಿಯ ಬಾಣಂತನ ಮಾಡಲಿಕ್ಕೆ ದೊಡ್ಡಮ್ಮನೇ ಹೋಗಬೇಕಾಗುತ್ತಿತ್ತು. ಜೊತೆಗೆ ದೊಡ್ಡಮ್ಮ ಮನೆಯ ಹಿರಿಯಕ್ಕನಾಗಿದ್ದಳು. ಅವಳಿಗೆ ನಾಲಕ್ಕು ಜನ ಒಡಹುಟ್ಟಿನ ತಂಗಿಯರೂ, ಮೂವರು ಮಲತಂಗಿಯರೂ ಇದ್ದರು. ಅವರುಗಳ ಮದುವೆ, ಬಸುರಿ ಬಾಣಂತನ ನಿರಂತರವಾಗಿ ನಡೆಯುತ್ತಾ ಇದ್ದುದರಿಂದ ದೊಡ್ಡಮ್ಮ ಮತ್ಸಮುದ್ರದಿಂದ ಕೂನಬೇವಿಗೆ, ಕೂನಬೇವಿನಿಂದ ಹೊಸದುರ್ಗಕ್ಕೆ, ಹೊಸದುರ್ಗದಿಂದ ಕೆಲ್ಲೋಡಿಗೆ, ಕೆಲ್ಲೋಡಿನಿಂದ ಹೋದಿಗೆರೆಗೆ ಸದಾ ಸಂಚರಿಸುತ್ತಾ ಇದ್ದಳು. ಹೋದ ಕಡೆಯಲ್ಲೆಲ್ಲಾ ಅವಳು ಏನೋ ಹೊಸ ಹೊಸ ಆವಿಷ್ಕಾರ ಮಾಡುತ್ತಲೇ ಇದ್ದಳು. ಕೂನಬೇವಲ್ಲಿ ಯಾರೋ ಕೂಡೊಲೆ ಹಾಕಿದ್ದರೆ ಅದನ್ನು ನೋಡಿಕೊಂಡು ಬಂದ ದೊಡ್ಡಮ್ಮ ಹೋದಿಗೆರೆಯಲ್ಲಿ ಕೂಡೊಲೆ ಸ್ಥಾಪಿಸಿ, ಈ ಊರಿನ ಜನರನ್ನು ಬೆಕ್ಕಸ ಬೆರಗುಗೊಳಿಸುತ್ತಾ ಇದ್ದಳು.
ಈ ಕೂಡೊಲೆ ಎಂದರೆ ಏನು ಎಂಬುದನ್ನು ಈವತ್ತಿನ ನವನಾಗರೀಕರಿಗೆ ಸ್ವಲ್ಪ ವಿವರಿಸಬೇಕಾದ ಅಗತ್ಯ ಉಂಟು. ಒಂಟಿ ಒಲೆಗೆ ಇನ್ನೊಂದು ಒಲೆ ಸೇರಿಸಿ ಅವರಡರ ಮಧ್ಯೆ ಸಂಪರ್ಕ ಕಲ್ಪಿಸಿದರೆ ಈ ಒಲೆಗೆ ಚಾಚಿದ ಉರಿ ಆ ಒಲೆಗೂ ಹಾಯುತ್ತದೆ. ಇದರಿಂದ ಅರ್ಧಕ್ಕರ್ಧ ಕಟಿಗೆಯ ಉಳಿತಾಯವಾಗುತ್ತದೆ. ಒಂದು ಮಧ್ಯಾಹ್ನ ದೊಡ್ಡಜ್ಜಿ ಹಿತ್ತಲ ಬುರುಜಿನಿಂದ ಜೇಡೀ ಮಣ್ಣು ಕೆತ್ತಿ ತಂದು ಅದನ್ನು ಹದವಾಗಿ ನಾದಿ, ಆ ಕಲಸಿದ ಮಣ್ಣಿಂದ ಎರಡಡಿ ಇಂಟು ಮುಕ್ಕಾಲಡಿ ಅಳತೆಯ ಒಂದು ಘನ ಚದುರ ಮಾಡಿಕೊಂಡಳು. ಆವತ್ತಿಗೆ ಆ ಕೆಲಸ ಮುಗಿಯಿತು. ಮಾರನೆ ದಿನ ಬೆಳಗಾಗುತಲೇ ಮುಗುಚೋಕೈ ಹಿಡಿದು, ಆ ಘನಾಕೃತಿಯಲ್ಲಿ ಬೇಡವಾಗಿದ್ದ ಮಣ್ಣಿನ ಭಾಗವನ್ನು ಕೊರೆದು ತೆಗೆಯುತ್ತಿದ್ದಳು. ನಾನು ಅವಳ ಮುಂದೆ ಕುಕ್ಕುರುಗಾಲಲ್ಲಿ ಕೂತು ಈ ಚಟುವಟಿಕೆಯನ್ನೆಲ್ಲಾ ಮೂಕ ವಿಸ್ಮಿತನಾಗಿ ನೋಡುತಾ ಇದ್ದೆ. ಇದೊಂದು ಬಗೆಯಲ್ಲಿ ಗುಹಾಂತರ್ದೇವಾಲಯದ ನಿರ್ಮಾಣದ ತಂತ್ರವೇ. ಆದರೆ ಶಾಲೆಯ ಮೆಟ್ಟಿಲೇ ಹತ್ತದ ನಮ್ಮ ದೊಡ್ಡಜ್ಜಿಗೆ ಇದೆಲ್ಲಾ ಹೇಗೆ ಹೊಳೆಯಿತು ಎಂಬುದು ಮಾತ್ರ ಈವತ್ತಿಗೂ ನನಗೆ ವಿಸ್ಮಯದ ಸಂಗತಿ. ಅತ್ಯಂತ ನಾಜೂಕಾಗಿ, ನಯವಾಗಿ ಹೀಗೆ ಕೂಡೊಲೆ ಕೊರೆಯುವ ಕೆಲಸ ಸಾಗುತ್ತಿತ್ತು. ಊಟದ ವೇಳೆಗೆ ಇದು ಮುಗಿತು. ಊಟವಾದ ಮೇಲೆ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ಯಂಕಾ ಬಾ…ಒಲೇ ಕೆಲಸ ಮುಗಿಸೋಣ ಅಂತ ದೊಡ್ಡಜ್ಜಿ ನನ್ನನ್ನ ಕೂಗುತಾ ಇದ್ದಳು. ನನ್ನ ನೋಡುವ ಮತ್ತೂ ಅವಳ ಮಾಡುವ ಕೆಲಸ ಮತ್ತೆ ಶುರುವಾಗುತಾ ಇತ್ತು. ಅಡುಗೆ ಮನೆಯಲ್ಲಿ ಯಾವುದೋ ಕೆಲಸಕ್ಕೆ ಅತ್ತಿತ್ತ ಹಾಯುತ್ತಿದ್ದ ಸಣ್ಣಜ್ಜಿಗೆ ಇದೆಲ್ಲಾ ಆಗದ ಹೋಗದ ಉಸಾಬರಿ ಎಂದೇ ಅಭಿಪ್ರಾಯವಿದ್ದಂತಿತ್ತು. ಆಗಾಗ ಕುತೂಹಲದಿಂದ ಬಂದು ನೋಡಿ ಮತ್ತೆ ಮೂತಿ ತಿರುವು ಅಂತರ್ಧಾನಳಾಗುತ್ತಿದ್ದಳು. ಪಕ್ಕದ ಮನೆಯ ಕಾಡಜ್ಜಿ, ಎದುರು ಬೀದಿಯ ಸುಬ್ಬಜ್ಜಿ ಎಲ್ಲಾ ಬಂದು ಈ ಹೊಸ ಆವಿಷ್ಕಾರವನ್ನು ಅನುಮಾನ ಬೆರೆತ ಕುತೂಹಲದಿಂದ ನೋಡಿ ನೋಡಿ ಹೋಗುತ್ತಾ ಇದ್ದರು. ಇದೆಲ್ಲಾ ಆಗೋ ಮಾತಲ್ಲ ಎಂಬುದೇ ಅವರೆಲ್ಲರ ಅಭಿಪ್ರಾಯವಾಗಿತ್ತು. ಭೀಮಜ್ಜಿ ಮಾತ್ರ ತನ್ನ ಕೆಲಸ ನಿಲ್ಲಿಸಿದ್ದರೆ ಕೇಳಿ!
ಒಲೆಯನ್ನು ಕೊರೆದದ್ದೆಲ್ಲಾ ಮುಗಿದ ಮೇಲೆ ಜೋಡಿ ಒಲೆಯ ಮೇಲೆ ಗುನ್ನ ಮಾಡಿ ಆರು ಒಲೆಗುಪ್ಪು ಕೂಡಿಸಿ ಮೆತ್ತಿಗೆ ಮಾಡಿದ್ದಾಯಿತು. ಆಮೇಲೆ ಹಿತ್ತಲ ಕಟ್ಟೆಗೆ ಮಣೆಯ ಸಮೇತ ಈ ಕೂಡೊಲೆ ಸಾಗಿಸಿ ಎಳೆ ಬಿಸಿಲಲ್ಲಿ ಒಣಗಿಸುವ ಕೆಲಸ. ಒಲೆ ನಿಧಾನವಾಗಿ ಒಣಗಿದ ಮೇಲೆ ಒಲೆಗೆ ಕೆಂಡ ಸುರಿದು ಅದನ್ನು ನಿಧಾನಕ್ಕೆ ಹದಗೊಳಿಸುವ ಕೆಲಸ. ಒಮ್ಮೆಗೇ ಕಟ್ಟಿಗೆ ಇಟ್ಟು ಉರಿ ಹಾಕಿದರೆ ಒಲೆ ಶಾಖ ತಡೆಯಲಾರದೆ ಸಿಡಿದು ಹೋಗದೆ ಇದ್ದೀತೇ? ಹೀಗೆ ಕೂಡೊಲೆಯನ್ನು ಮೂರುದಿನ ಇಜ್ಜಿಲು ಕೆಂಡ ಸುರುವಿ ಹದ ಮಾಡಿದ್ದಾದ ಮೇಲೆ ಅದನ್ನು ಗೋಮಯದಿಂದ ಸಾರಿಸಿ, ರಂಗೋಲಿ ಹಾಕಿ, ಅರಿಸಿನ ಕುಂಕುಮ, ಹೂ ಹಾಕಿ ಪೂಜೆ ಮಾಡಿ ಅನ್ನದ ತಪ್ಪಲೆ ಒಂದು ಒಲೆಯ ಮೇಲೆ, ಬೇಳೆಯ ತಪ್ಪಲೆ ಇನ್ನೊಂದು ಒಲೆಯ ಮೇಲೆ ಏರಿಸಿದ್ದೂ ಆಯಿತು. ಸೀತೇ..ಬಾ…ಈಗ ಒಲೆ ಹಚ್ಚುತ್ತೀನಿ…ಹೇಗೆ ಉರಿಯುತ್ತೆ ನೀನೇ ನೋಡುವಿಯಂತೆ…ಎಂದು ಹುಸಿನಗುತ್ತಾ ಕರೆದ ದೊಡ್ಡಜ್ಜಿ ನನಗೆ ಇನ್ನಷ್ಟು ಚೆಲುವೆಯಾಗಿ ಕಂಡಳು. ಬಲಗಡೆ ಒಲೆಗೆ ಇದ್ದದ್ದು ಒಂದೇ ಬಾಯಿ. ಅದರಲ್ಲಿ ಒಣಗಿದ ಸೌದೆ ಚಾಚಿ. ಒಂದು ಕುಳ್ಳು ಮಧ್ಯೆ ಇರಿಸಿ, ಕುಳ್ಳಿಗೆ ಸ್ವಲ್ಪ ಸೀಮೇ ಎಣ್ಣೆ ಸುರುವಿ ಬೆಂಕಿ ಹಚ್ಚಿದ್ದೇ, ಪಕ್ಕದ ಒಲೆಗೂ ಉರಿ ಭುಸ್ ಭುಸ್ ಎಂದು ಹಾಯುತ್ತಾ ಇದೆ! ಒಲೆಯುರಿಯ ಹಳದಿ ಬೆಳಕು ದೊಡ್ಡಜ್ಜಿಯ ಮೇಲೆ ನಾಟ್ಯವಾಡುತ್ತಾ , ಅವಳ ನೆರಳು ಹಿಂದಿನ ಗೋಡೆಯ ಮೇಲೆ ಕುಣಿಯುತ್ತಾ, ನಮ್ಮ ದೊಡ್ಡಜ್ಜಿ ಮಂತ್ರವಾದಿಯ ಹಾಗೇ ಕಂಡಳು ನನಗೆ! ಒಲೆಯ ಮೂತಿಗೆ ತಿವಿಯುತ್ತಾ ಅವಳು ಊದುಗೊಳಪೆಯಿಂದ ಊದುವಾಗ ಹೊರಡುವ ಭೂಂ ಭೂಂ ಸದ್ದು ನನಗಂತೂ ಆವತ್ತೇಕೋ ಅತ್ಯಂತ ಕರ್ಣ ಮಧುರ ಎನ್ನಿಸಿತು. ರಾಮ ರಾಮ ಅದೇನು ಪವಾಡಾನೇ ನಿಂದು ಅಂತ ನಮ್ಮ ಸಣ್ಣಜ್ಜಿ ಉರಿಯುವ ಕೂಡೊಲೆ ನೋಡುತ್ತಾ ಗೋಡೆಗೆ ಆತು ಧಸಕ್ಕಂತ ಕೂತುಬಿಟ್ಟಳು.
****
ಸ್ಕೂಲಿನ ಮೆಟ್ಟಿಲು ಹತ್ತದೇ ಇದ್ದರೂ ದೊಡ್ಡಜ್ಜಿ ಸ್ವಪ್ರಯತ್ನದಿಂದ ಓದುವುದು ಬರೆಯುವುದು ಕಲಿತಿದ್ದಳು. ಅವಳ ತಂದೆ ಒಳ್ಳೆಯ ಗಮಕಿಯಾಗಿದ್ದರು. ಅವರು ಭಾರತ ನಿತ್ಯ ಪಾರಾಯಣ ಮಾಡುತಾ ಇದ್ದರು. ಅದನ್ನು ಕೇಳಿ ಕೇಳಿ ದೊಡ್ಡಜ್ಜಿ ಕುಮಾರವ್ಯಾಸನ ಅನೇಕ ಷಟ್ಪದಿಗಳನ್ನು ಹೃದ್ಗತ ಮಾಡಿಕೊಂಡಿದ್ದಳು. ಬರೆಯುವುದನ್ನು ಕಲಿತು, ತನ್ನದೇ ಒಂದು ಹಾಡಿನ ಪುಸ್ತಕ ಮಾಡಿಕೊಂಡು, ಹತ್ತಾರು ಕಥಾಪ್ರಸಂಗಗಳನ್ನು(ಎಲ್ಲಾ ಹಾಡಿನ ರೂಪದವು) ಅದರಲ್ಲಿ ಬರೆದುಕೊಂಡಿದ್ದಳು. ಜೊತೆಗೆ ಇಂಗ್ಲಿಷ್ ಭಾಷೆಯಲ್ಲಿ ರುಜುಹಾಕುವುದನ್ನೂ ಕಲಿತಿದ್ದಳು. ಇದನ್ನೆಲ್ಲಾ ಒಮ್ಮೆ ಆಕೆ ತನ್ನ ತಂದೆಗೆ ಹೆಮ್ಮೆಯಿಂದ ತೋರಿಸಿದಾಗ ( ಆಗ ನಮ್ಮ ದೊಡ್ಡಜ್ಜಿಗೆ ಕೇವಲ ಹದಿನೆಂಟರ ಪ್ರಾಯ) ನಮ್ಮ ಅಜ್ಜನಿಗೆ ಏನನ್ನಿಸಿತೋ! ಅವರು ಚೌಕದಿಂದ ಯಾಕೋ ಕಣ್ಣು ಒರೆಸಿಕೊಂಡರಂತೆ. ನೋಡುವವರ ಕಣ್ಣುಕುಕ್ಕುವಷ್ಟು ಚೆಲುವೆಯಾಗಿದ್ದ ಮಗಳನ್ನು ಕೈ ಹಿಡಿದು ದೇವರ ಮನೆಗೆ ಕರೆದೊಯ್ದರಂತೆ. ಅಲ್ಲಿ ಕುಲದೇವರ ಮುಂದೆ ಅವಳನ್ನು ಕೂರಿಸಿ ನಮ್ಮ ಅಜ್ಜ ಹೇಳಿದರಂತೆ: “ತಾಯೀ ಈವತ್ತು ನೀನು ನನಗೊಂದು ಭಾಷೆ ಕೊಡಬೇಕು. ಇನ್ನು ಮುಂದೆ ಎಂದೆಂದೂ ನೀನು ಲೇಖನಿ ಪೆನ್ನು ಕೈಯಲ್ಲಿ ಹಿಡಿಯ ಕೂಡದು. ಹಾಳೆಯ ಮೇಲೆ ಒಂದು ಪದವನ್ನೂ ಕೂಡ ಬರೆಯ ಕೂಡದು. ಇಷ್ಟು ನೀನು ಮಾತುಕೊಟ್ಟರೆ ನಾನು ನೆಮ್ಮದಿಯಿಂದ ಸಾಯಬಹುದು!”
ಅದೇ ಕೊನೆ.ಮುಂದೆಂದೂ ನನ್ನ ದೊಡ್ಡಜ್ಜಿ ಲೇಖನಿಯನ್ನು ಕೈಯಲ್ಲಿ ಹಿಡಿಯಲಿಲ್ಲ.

‍ಲೇಖಕರು avadhi

March 25, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಚ್ ಎಸ್ ವಿ ಕಾಲಂ: ಮತ್ತೆ, ಮರೆತ ಇತಿಹಾಸದ ಮರುಗಳಿಕೆ..

ತಾವರೆಯ ಬಾಗಿಲು-೧೮ ಎರಡು ಸಾವಿರ ವರ್ಷಗಳ ಹಿಂದೆ ತೆಂಕಣಭಾರತದ ದೇಶ-ಕಾಲ-ಪರಿಸ್ಥಿತಿ ಹೇಗಿತ್ತೆಂದು ನಾವು ಊಹಿಸುವುದೂ ಸಾಧ್ಯವಿಲ್ಲ. ಮರೆತು ಹೋದ...

ಎಚ್ ಎಸ್ ವಿ ಕಾಲಂ: ಕಾವ್ಯದಲ್ಲಿ ಭಾಷೆಯಲ್ಲದ ಭಾಷೆಯ ಮಿಡುಕಾಟ..

ತಾವರೆಯ ಬಾಗಿಲು-೧೬ ಕಾವ್ಯಕ್ಕೆ ಭಾಷೆಯೇ ಮೂಲ ಸಾಮಗ್ರಿ. ಭಾಷೆಯ ಮೂಲಕ ಕವಿಗಳು ತಮ್ಮ ಲೌಕಿಕಾಲೌಕಿಕ ಅನುಭವಗಳನ್ನು ಅಭಿವ್ಯಕ್ತಿಸುತ್ತಾರೆ. ಹಾಗೆ...

೧ ಪ್ರತಿಕ್ರಿಯೆ

  1. Ganesh Shenoy

    So lovely, so hilarious, so funny, so lovable. Where did we lose all these “doddajjis” and “chikkajjis.” HSV has made us rediscover what we lost in a hurry due to globalization. Though I always keep the Kannada dictionary next to system while reading this masterpiece it has not made my reading tedious, in fact it is doubly profiting to me. Both my reading and Kannada language is getting enriched by this about to be one of the most enjoyable autobiographies written in Kannada.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: