ಎಚ್ಹೆಸ್ವಿ ಬರೆವ ಅನಾತ್ಮ ಕಥನ: ಲೋ..ರಂಗಧಾಮ

ಅಳಿಯಲಾರದ ನೆನಹು-೨೩ ಹೊಟ್ಟೆಪಾಡಿಗಾಗಿ ನನ್ನ ಪಡ್ಡೆ ಕಾಲದ ಗೆಳೆಯ ರಂಗಧಾಮ ಈ ಕಾಡುಗುಡ್ಡಗಳ ದಟ್ಟ ಹಸಿರಿನ ರಮ್ಯ ಪ್ರದೇಶಕ್ಕೆ ಬಂದು ನೆಲೆಸಿದ್ದು, ಪ್ರಕೃತಿಯ ಐಭೋಗವನ್ನು ಮೆಚ್ಚಿ ಆಕರ್ಷಿತನಾಗಿಯೇನೂ ಅಲ್ಲ. ಆದರೆ ಒಮ್ಮೆ ಬಂದು ಬೇಕಾಗಿಯೋ ಅನಿವಾರ್ಯವಾಗಿಯೋ ಇಲ್ಲಿ ನೆಲೆಸಿದ ಮೇಲೆ ಕಾನುಗುಡ್ಡದ ಆ ರಮ್ಯ ಸ್ಥಳವನ್ನು ಅವನು ಪ್ರೀತಿಸಲಿಕ್ಕೆ ಶುರುಮಾಡಿದ. ಎಷ್ಟು ಪ್ರೀತಿಸ ತೊಡಗಿದ ಅಂದರೆ ಅವನಿಗೆ ಮನೆ ಹೆಂಡತಿ ಮಗ ಯಾವುದೂ ಈಚೆಗೆ ಮುಖ್ಯ ಎನ್ನಿಸುತ್ತಿಲ್ಲ. ಬಿಡುವು ದೊರೆತಾಗಲೆಲ್ಲಾ ಒಂಟಿಯಾಗಿ ಈ ಎತ್ತರದ ಬೆಟ್ಟಮುಡಿಗಳಲ್ಲಿ, ಆಳವಾದ ಹಸಿರು ಕಣಿವೆಗಳಲ್ಲಿ ಅಲೆಯುತ್ತಾ ಕಾಲ ಕಳೆಯುತ್ತಾನೆ. ತಾನು ಈ ಪಾಟಿ ಹಚ್ಚಿಕೊಂಡ ಕಾಡುಗುಡ್ಡಕಣಿವೆಗಳನ್ನು ತನ್ನ ಬಾಲ್ಯದ ಗೆಳೆಯನಿಗೆ ತೋರಿಸ ಬೇಕೆಂದು ಅವನಿಗೆ ಯಾಕೆ ಅನ್ನಿಸಿತೋ. ಈ ವಸಂತಕ್ಕೆ ನೀನು ಯಾವ ಸಬೂಬೂ ಹೇಳದೆ ಇಲ್ಲಿಗೆ ಬರಬೇಕು ಎಂದು ಪತ್ರ ಬರೆದು ಬಲವಂತ ಪಡಿಸಿದ. ಇನ್ನೂ ವಸಂತ ದೂರದಲ್ಲಿ ಇತ್ತು. ಮುಂದಿನ ತಿಂಗಳು ಬಾ ಎಂದಿದ್ದರೆ ನಾನು ಖಂಡಿತ ಆಗುವುದಿಲ್ಲ ಎನ್ನುತ್ತಿದ್ದೆ. ದೂರದಲ್ಲಿ ಇದ್ದಾಗ ನಾವು ಸಾಮಾನ್ಯವಾಗಿ ದೂರದ ಪ್ರಯಾಣಕ್ಕೆ ಒಪ್ಪಿಕೊಂಡುಬಿಡುತ್ತೇವೆ! ಇನ್ನೂ ಆರು ತಿಂಗಳು ಇದೆ…ಆಗ ನೋಡಿಕೊಳ್ಳೋಣ ಎಂದು ನಾನು ಆಗಲಿ ಎಂದದ್ದೇ ತಪ್ಪಾಯಿತು. ರಂಗಧಾಮ ರಿಜಿಸ್ಟರ್ ಪೋಸ್ಟ್ ಮೂಲಕ ರೈಲ್ವೇ ಟಿಕೆಟ್ ಕಳಿಸಿ ನನ್ನ ಪ್ರಯಾಣವನ್ನು ಗಟ್ಟಿಮಾಡಿಬಿಟ್ಟ. ನನ್ನನ್ನು ತನ್ನ ಪುಟ್ಟ ವಿಸ್ತರಣಕ್ಕೆ ಕರೆದೊಯ್ಯಲು ರಂಗಧಾಮನೇ ರೈಲ್ವೇ ನಿಲ್ದಾಣಕ್ಕೆ ಬಂದಿದ್ದ. ಅವನನ್ನು ನಾನು ನೋಡಿ ಹನ್ನೆರಡು ವರ್ಷವಾಗಿದ್ದರೂ ನೋಡಿದ ಕೂಡಲೇ ಗುರುತು ಹಿಡಿದು ಲೋ..ರಂಗಧಾಮ ಎಂದು ಗಟ್ಟಿಯಾಗಿ ಕೂಗು ಹಾಕಿದೆ. ಹೀಗೆ ನಾನು ಗೆಳೆಯರನ್ನು ನೋಡಿದಾಗ ಕೂಗು ಹಾಕುತ್ತಿದ್ದುದು ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗ. ಆ ಹಳೆಯ ವಾಸನೆ ಈಗ ಭೂಮಿಯ ಗರ್ಭಕೋಶದಿಂದ ಥಟಕ್ಕನೆ ಅಗ್ನಿಮುಖಿಯ ಮುನ್ನಾ ಹೊಗೆಯಂತೆ ಹೊರಕ್ಕೆ ಚಿಮ್ಮಿದ್ದು ನೆನೆದಾಗ ಈವತ್ತೂ ನನಗೆ ಆಶ್ಚರ್ಯವಾಗುತ್ತದೆ. ನಮ್ಮ ಹಳೆಯ ದಿನಗಳಲ್ಲಿ ನನ್ನ ಆ ಬಗೆಯ ಕೂಗಿಗೆ ರಂಗಧಾಮನೂ ಹಾಗೇ ಪ್ರತಿಕೂಗು ಹಾಕುತ್ತಿದ್ದ. ಈಗ ಅವನ ಬಾಯಿಂದ ಯಾವುದೇ ಧ್ವನಿ ಹೊರಡಲಿಲ್ಲ. ಸಣ್ಣಗೆ ಕಿರುನಗೆಯೊಂದನ್ನು ಬೀರಿ, ಅದೇ ಅಳ್ಳಕಬಳಕ ಪ್ಯಾಂಟು ಸೊಂಟದ ಮೇಲೆ ಎಡಗೈಯಲ್ಲಿ ಏರಿಸುತ್ತಾ, ಬಲಗೈ ಮೆಲ್ಲಗೆ ಅರ್ಧದಷ್ಟು ಮಾತ್ರ ಮೇಲೆತ್ತಿ ಆಡಿಸಿದ್ದು ನೋಡಿದಾಗ ಏನಾಗಿದೆ ಈ ರಂಗಧಾಮನಿಗೆ ಎಂದು ಆ ಮಿಲನೋತ್ಸಾಹದ ಕ್ಷಣದಲ್ಲೂ ಒಂದು ಸಣ್ಣ ಸುಳಿ ನನ್ನ ಮನಸ್ಸಲ್ಲಿ ಎದ್ದು ಹಾಗೇ ಮುಳುಗಿಹೋಯಿತು. ನನ್ನ ಪ್ರತಿಕ್ರಿಯೆ ಸ್ವಲ್ಪ ಅತಿಯಾಯಿತೇನೋ ಎಂದು ನಾನೇ ಮುಜುಗರಪಡುವಂತಾಯಿತು. ಮೆಲ್ಲಗೆ ಕಾಲೆಳೆಯುತ್ತಾ ನನ್ನ ಬಳಿ ಬಂದ ರಂಗಧಾಮ, ನಿಮ್ಮ ಪ್ರಯಾಣ ಸುಖಕರವಾಗಿ ಆಯಿತಷ್ಟೇ? ಯಾವ ತೊಂದರೆಯೂ ಆಗಲಿಲ್ಲವಷ್ಟೆ? ಎಂದು ತುಂಬ ಗ್ರಾಂಥಿಕವಾಗಿ ತಗ್ಗಿದ ಧ್ವನಿಯಲ್ಲಿ ಪ್ರಶ್ನಿಸಿ, ಅತ್ತಿಗೆ ಬಂದಿದ್ದರೆ ಚೆನ್ನಾಗಿತ್ತು. ಇರಲಿ. ಆ ಬಗ್ಗೆ ನಿಮ್ಮನ್ನು ತದನಂತರ ಬೈಯುವುದಾಗುತ್ತದೆ. ಸದ್ಯ ಮನೆ ಸೇರೋಣ ಬನ್ನಿ…ಎಂದು ಬಲವಂತವಾಗಿ ನನ್ನ ಸೂಟ್ಕೇಸನ್ನ ತಾನೇ ಎತ್ತಿಕೊಂಡು ತನ್ನ ಜೀಪು ನಿಂತಿದ್ದ ಜಾಗಕ್ಕೆ ನನ್ನನ್ನು ಸಾಗಿಸಿದ. ಏನೋ ವ್ಯತ್ಯಾಸವಾಗಿದೆ ಇವನಲ್ಲಿ. ಸರಿಯಾಗಿ ಕ್ಲಾಸು ತಗೋಬೇಕು ಅಂದುಕೊಳ್ಳುತ್ತಾ, ಅಲ್ಲಯ್ಯಾ…ಇಷ್ಟು ದೊಡ್ಡ ಅಧಿಕಾರಿಯಾಗಿದ್ದೀ…ನಿನ್ನ ಕಾರು ತರೋದು ತಾನೆ? ಅಂದೆ. ಅವನು ಹೊಸಾ ಕಾರು ತೆಗೆದುಕೊಂಡ ವಿಷಯ ನನಗೆ ತಿಳಿದಿತ್ತು. ಕಾರು? ಎಂದು ಮತ್ತೆ ಅರೆನಗೆ ತುಟಿಗೆ ಅಂಟಿಸಿಕೊಂಡು, ಬಹಳ ಕಾಲ ಹಾಗೆ ಅಂಟಿಸಿಕೊಳ್ಳಲು ವಿಫಲನಾಗಿ ಮೆಲ್ಲಗೆ ತುಟಿ ಮುಚ್ಚಿ ನಗುವನ್ನು ಗುಳುಂ ಮಾಡಿದ ರಂಗಧಾಮ…ಕವಿಗಳು ಈ ವಸಂತ ರಥವನ್ನು ಏರೋಣವಾಗಲಿ! ಎಂದು ನಾಟಕೀಯವಾಗಿ ನುಡಿದ. ನಾನು ತಕ್ಷಣ ಅವನ ಮುಖ ನೋಡಿದೆ. ಇದರಲ್ಲಿ ವ್ಯಂಗ್ಯವೇನೂ ಇಲ್ಲವಷ್ಟೆ? ಇಲ್ಲ. ವ್ಯಂಗ್ಯದ ಸುಳಿವೂ ಎಣ್ಣೆ ಬಳಿದಂತಿದ್ದ ಆ ಸಾದುಗಪ್ಪು ಮುಖದಲ್ಲಿ ಇರಲಿಲ್ಲ. ನನ್ನ ಮನಸ್ಸಲ್ಲಿ ಅವನು ವ್ಯಂಗ್ಯ ಮಾಡಿರಬಹುದು ಎಂದು ಏಕೆ ಅನ್ನಿಸಿತು ಎಂಬ ಬಗ್ಗೆ ಈಗಲೇ ಹೇಳಿಬಿಡುತ್ತೇನೆ. ನಾನು ಮತ್ತು ರಂಗಧಾಮ ಭದ್ರಾವತಿಯಲ್ಲಿ ಪಾಲಿಟೆಕ್ನಿಕ್ಕಲ್ಲಿ ಓದುತ್ತಿರುವಾಗ ನನಗೆ ಪದ್ಯ ಬರೆಯುವ ಚಟ ಅಥವಾ ಹುಚ್ಚು ಅತಿರೇಕದ ಮಟ್ಟ ಮುಟ್ಟಿತ್ತು. ಈವತ್ತು ಯಾವ ಕಾವ್ಯವನ್ನು ರಚಿಸಲಾಯಿತು? ಎಂದು ಕಾಲೇಜಿನಲ್ಲಿ ಭೆಟ್ಟಿಯಾದ ಕೂಡಲೇ ರಂಗಧಾಮ ಪ್ರಶ್ನಿಸುತ್ತಿದ್ದ. ನನಗೆ ಕವಿತೆ ಬರೆಯೋದು ಬಿಟ್ಟು ಬೇರೆ ಕೆಲಸವೇ ಇಲ್ಲ ಅಂತ ತಿಳಿದೆಯಾ?ಎಂದು ನಾನು ರೇಗುತ್ತಿದ್ದೆ. ಯಾವತ್ತಾದರೂ ಬೇರೆ ಯಾರೂ ಸಿಗದೆ ರಂಗಧಾಮ ಒಬ್ಬನೇ ಸಿಕ್ಕರೆ, ಆಗಿನ್ನೂ ಹೊಸ ಒದ್ದೆಗವಿತೆಯೊಂದು ನನ್ನ ಜೇಬಲ್ಲೇ ಇದ್ದರೆ, ಆಗದನ್ನು ರಂಗಧಾಮನಿಗೆ ತೋರಿಸುತ್ತಿದ್ದೆ. ಕವಿತೆಯನ್ನು ಓದದೆಯೇ ಅವನು …ಅಣ್ಣಾ…ತುಂಬಾ ಚೆನ್ನಾಗಿದೆ…ಒಂದೊಂದು ಅಕ್ಷರವೂ ಆರಿಸಿದ ಆಣಿ ಮುತ್ತು. ಸುಮ್ಮನೆ ಈ ಅಕ್ಷರಗಳನ್ನು ಪೋಣಿಸಿದರೆ ಯಾವ ಕನ್ಯಾಮಣಿಯಾದರೂ ಮೋಹಗೊಳ್ಳುವಷ್ಟು ಮುದ್ದಾದ ಬರವಣಿಗೆ…ಎಂದು ತಲೆದೂಗುತ್ತಿದ್ದ. ಲೋ…ರಂಗಧಾಮ ಹೀಗೇ ನೀನು ವ್ಯಂಗ್ಯ ಮಾಡುತ್ತಿರು ಯಾವತ್ತೋ ಒಂದು ತಲೆಕೆಟ್ಟ ದಿನ ನಿನ್ನ ತಲೆ ಒಡೆದು ಹಾಕದಿದ್ದರೆ ನಾನು ಕವೀನೇ ಅಲ್ಲ..ಎಂದು ನಾನು ಅವನ ಬೆನ್ನಿಗೆ ಹುಸಿಗುದ್ದು ಹಾಕುತ್ತಿದ್ದೆ. ಅಯ್ಯಾ…ಗೆಳೆಯಾ…ಬಾಯಾರಿ ಬಂದವರಿಗೆ ಕಾವ್ಯಾಮೃತಕೊಟ್ಟರೆ ಏನು ಪ್ರಯೋಜನ? ಒಂದು ಲೋಟ ಕಾಫಿಯನ್ನಾದರೂ ನೀನು ಅಜ್ಜಿಯ ಮೂಲಕ ಕೊಡಿಸಿದರೆ ಈ ಬಡ ಬ್ರಾಹ್ಮಣ ಸಂತೃಪ್ತನಾದಾನು!ಎಂದು ನಾಟಕ ಮಾಡುತ್ತಿದ್ದ. ರಂಗಧಾಮನಲ್ಲಿ ಮಾತಿನ ಶೈಲಿ ಹಳೆಯದೇ ಉಳಿದಿದ್ದರೂ ಆ ಮಾತಿಗೆ ಇರುತ್ತಿದ್ದ ಅಲುಗು, ಮುರಿಮುರಿ, ಘಾಟು ವಾಸನೆ ಎಲ್ಲ ಮಾಯವಾಗಿ ಉಜ್ಜುಗೊರಡಾಡಿಸಿ ನೈಸ್ ಮಾಡಿದ ಕುರ್ಚಿಯ ಕೈಯಾನಿಕೆಗಳಂತೆ ಮಾತು ಸಮಕಲಾಗಿದ್ದು ಗಮನಕ್ಕೆ ಬಂದು ನನಗೆ ಒಂದು ಥರಾ ಕಸಿವಿಸಿಯುಂಟಾಯಿತು. ರೇಗಿಸುವ, ಕಾಲೆಳೆಯುವ ನನ್ನ ಹಳೇ ರಂಗಧಾಮ ಯಾವ ಸೀಮೆಯಲ್ಲಿ ಕಳೆದುಹೋದ ಎಂದು ನಾನು ಯೋಚಿಸುತ್ತಾ ಇದ್ದೆ. ಕಾಡು ರಸ್ತೆಯಲ್ಲಿ ಜೀಪು ಓಡುತಾ ಇತ್ತು. ಡ್ರೈವರ್ನೊಂದಿಗೆ ನನಗೆ ತೃಣವೂ ಅರ್ಥವಾಗದ ಒರಿಯಾ ಭಾಷೆಯಲ್ಲಿ ಮಾತಾಡುತ್ತಾ , ಆಗಾಗ ಅನುಕಂಪ ಸೂಚಿಸುವ ಲೊಚಗುಟ್ಟುವಿಕೆ ಮಾಡುತ್ತಾ ರಂಗಧಾಮ ತನ್ನ ಪ್ರಪಂಚದಲ್ಲೇ ಮುಳುಗಿ ಹೋದ ಎನ್ನಿಸಿದಾಗ ನಾನು ಜೀಪಿನ ಹೊರಗೆ ಕಣ್ಣು ಹಾಕಿ ಆ ಏರಿಳಿವನ ದಾರಿ, ಮೆಲ್ಲಗೆ ತಲೆ ತಿರುಗಿಸುತ್ತಾ ಹಿಂದೆ ಸರಿಯುತ್ತಾ ಇದ್ದ ಮರ ಗಿಡ ನೋಡುತ್ತಾ, ಫಕ್ಕನೆ ತಿರುವಲ್ಲಿ ಪ್ರತ್ಯಕ್ಷವಾಗುವ ತಲೆದಿಮ್ಮೆನಿಸುವ ಪ್ರಪಾತ, ಮೋಡವನ್ನು ಕೊಂಬಲ್ಲಿ ಸಿಕ್ಕಿಸಿಕೊಂಡ ಗೂಳಿಗಳಂತಿದ್ದ ಪರ್ವತ ಶಿಖರಗಳನ್ನು ನೋಡುತ್ತಾ , ಒಂದು ಕ್ಷಣ ಆ ದೃಶ್ಯ ವೈಭವದಲ್ಲಿ ಕಳೆದೇ ಹೋದೆ. ಸಣಕಲು ಕಡ್ಡಿಯಾಗಿದ್ದ ಡ್ರೈವರ್ರಾದರೋ ವಾಯು ವೇಗದಲ್ಲಿ ಜೀಪನ್ನು ಆ ಕಿರುದಾರಿಯಲ್ಲಿ ಚಲಾಯಿಸುತ್ತಾ ನನ್ನಲ್ಲಿ ಭಯವನ್ನೂ ದಿಗಿಲನ್ನೂ ಉತ್ಪಾದಿಸುತ್ತಾ, ತಾನು ಮಾತ್ರ ತನ್ನ ದಿನ ನಿತ್ಯದ ಬೋರಿನಲ್ಲಿ ತನ್ನ ಮಾತನ್ನು ತಾನೇ ಒಕ್ಕುತ್ತಾ , ತನ್ನ ಮಾತಿಗೂ ತನ್ನ ಜೀಪ್ ಚಾಲನೆಗೂ ಏನೇನೂ ಸಂಬಂಧವೇ ಇಲ್ಲ ಎಂಬ ರೀತಿಯಲ್ಲಿ ಕ್ರಿಯಾಪ್ರವೃತ್ತನಾಗಿದ್ದ. ವಿಮಾನ ಕಾರ್ಖಾನೆಯಲ್ಲಿ ರಂಗಧಾಮ ಉನ್ನತ ಅಧಿಕಾರಿಯಾಗಿದ್ದುದರಿಂದ ನಾನು ನಿರೀಕ್ಷಿಸಿದಂತೇ ಅವನ ಮನೆ ಮನೆಯಾಗಿರಲಿಲ್ಲ; ಬಂಗಲೆಯೇ ಆಗಿತ್ತು. ದೊಡ್ಡ ವೆರಾಂಡ. ಐವತ್ತು ಮಂದಿ ಒಟ್ಟಿಗೇ ಊಟಕ್ಕೆ ಕೂಡಬಹುದು ಎನ್ನುವಷ್ಟು ವಿಶಾಲವಾಗಿದ್ದ ಹಾಲು. ಗೋಡೆಯ ಮೇಲೆ ಕುಂಕುಮ ಅರಿಸಿನ ಹೂವಿಂದ ಪೂಜೆಗೊಂಡಿದ್ದ ತರಾವಾರಿ ದೇವರ ಪಠಗಳು. ತನ್ನ ಪತ್ನಿಗೆ ರಂಗಧಾಮ ಬಹುವಚನದಲ್ಲಿ..ನೋಡಿ ಇವರೇ…ನನ್ನ ಗೆಳೆಯ ಪಕ್ಕಾ ಇಪ್ಪತ್ತನೇ ಶತಮಾನದ ಆಧುನಿಕ ನಾಗರೀಕ… ನಮ್ಮಂತೆ ಹಾಲು ಹಣ್ಣು ಸೇವಿಸುವವನಲ್ಲ…ದಯಮಾಡಿ ಅವರಿಗೆ ಸಕ್ಕರೆಯನ್ನೂ ಹಾಕದ ಕಾರ್ಕೋಟಕ ವಿಷೋಪಮವಾದ ಕಾಫಿಯೊಂದನ್ನು ಕೊಡುವಿರಾದರೆ …ಎಂದವ ವಾಕ್ಯದ ಮುಂದುವರೆಕಿಗೆ ಅಗತ್ಯವಾಗಿದ್ದ ಅವನ ಅಭಿರುಚಿಯ ಸಂಸ್ಕೃತ ಪದಗಳು ಸಿಗದೆ ಅಬ್ರಪ್ಟಾಗಿ ವಾಕ್ಯವನ್ನು ಅರ್ಧಕ್ಕೇ ಮೊಟಕುಗೊಳಿಸಿ, ಉಳಿದದ್ದನ್ನು ಪೂರೈಸುವಂತೆ ಕಣ್ಣಲ್ಲೇ ಒಂದು ಗಳಿಗೆ ನನ್ನನ್ನು ನೋಡಿದ. ಹೇಗಿದೀರಾ ಎನ್ನುತ್ತಾ ಸೀತ ಹೊರಗೆ ಬಂದರು. ನಾನವರನ್ನು ರಂಗಧಾಮನ ಮದುವೆಯಲ್ಲಿ ನೋಡಿದ್ದು. ವಯಸ್ಸಿನ ಕಾರಣವೋ ಏನೋ ತಿಳಿಯದು ಈಗ ಕೊಂಚ ಸ್ಥೂಲಶರೀರಿಯಾಗಿದ್ದರು. ನಿಧಾನ ನಡಿಗೆ ನೋಡಿ ಇವರಿಗೂ ನನಗಿರುವಂತೇ ಮೊಣಕಾಲು ನೋವಿರಬಹುದು ಎಂದುಕೊಂಡೆ. ನಿಮಗಾಗಿ ಕಾಫಿ ಪುಡಿ ತರಿಸಿ ಇಟ್ಟಿದೀವಿ…ನೀವು ಕಾಫಿ ಪ್ರಿಯರು ಅಂತ ನಿಮ್ಮ ಗೆಳೆಯರು ನನಗೆ ಮೊದಲೇ ಹೇಳಿದಾರೆ…!ಎಂದರು. ಆಕೆಯನ್ನು ನೋಡಿದಾಗ ಏನೋ ವಾತ್ಸಲ್ಯ ಭಾವ ನನ್ನಲ್ಲಿ ಮಿಸುಕಾಡ ತೊಡಗಿ, ನಿಮ್ಮನ್ನ ತಂಗಿ ಅಂತ ನಾನು ಕರೆಯಲೇ ಎನ್ನಬೇಕೆನಿಸಿತು. ತುಂಬಾ ರೊಮಾಂಟಿಕ್ ಆಗಬಹುದು ಎನ್ನಿಸಿ ನಾನು ಏನೂ ಮಾತಾಡದೆ , ಆಕೆಯನ್ನು ನೋಡಿ ಸುಮ್ಮನೆ ಮುಗುಳ್ ನಕ್ಕೆ. ರಂಗಧಾಮ ತಕ್ಷಣ ಉದ್ವಿಗ್ನಗೊಂಡವನಂತೆ ಹೆಂಡತಿಯ ಕಡೆ ನೋಡುತ್ತಾ…ನೋಡಿ…ನಾನು ನಿಮಗೆ ಹೇಳಿರಲಿಲ್ಲವಾ…ಹೀಗೆ ನಗಬೇಡಿ ಕವಿವರ್ಯರೇ ಎಂದು ಎಷ್ಟು ಸಾರಿ ಇವರಲ್ಲಿ ವಿನಂತಿಮಾಡಿಕೊಂಡಿದ್ದೇನೆ. ಆದರೂ ಹೀಗೆ ತಣ್ಣಗೆ ನಗೋದು ಇವರು ಬಿಟ್ಟ ಹಾಗೆಯೇ ಇಲ್ಲ… “ಪ್ರಯಾಣದ ಆಯಾಸ ಪರಿಹಾರವಾಗಬೇಕಾದರೆ ಒಂದು ಒಳ್ಳೇ ಸ್ನಾನ ಮಾಡಬೇಕು ನೀವು…ಬಾತ್ ರೂಮಲ್ಲಿ ನೇರ ಪರ್ವತದಿಂದ ಬಂದು ಧುಮುಕುವ ದಭದಭೆಯಿದೆ…ಅದಕ್ಕೆ ಬೆನ್ನು ಕೊಟ್ಟರೆ ಪ್ರಯಾಣದ ಆಯಾಸವೆಲ್ಲಾ ಪರಿಹಾರವಾದೀತು ..!”ಎಂದ ರಂಗಧಾಮ ಅದಕ್ಕೆ ಏರ್ಪಾಡುಮಾಡತೊಡಗಿದ. ರಂಗಧಾಮ …ನೀನು ಹೀಗೆ ಹೋಗಿ ಬನ್ನಿ ಅಂತ ಮಾತಾಡ್ತಾ ಇದ್ದರೆ ನನಗೆ ನಿನ್ನನ್ನು ಏಕವಚನದಲ್ಲಿ ಹೋಗೋ ಬಾಓ ಅನ್ನೋದು ಕಷ್ಟ ಆಗತ್ತೆ…ನಮ್ಮ ಗೆಳೆತನ ಇರೋದೇ ಏಕವಚನದಲ್ಲಯ್ಯ…ನನಗೆ ಸಿಟ್ಟುಬರಿಸಬೇಡ… ಬಾಯ್ ಮುಚ್ಚಿಕೊಂಡು ಮೊದಲಿನ ಹಾಗೇ ಹೋಗೋ ಬಾರೋ ಅನ್ನು…ಎಂದು ಸಣ್ಣಗೆ ರೇಗಿದೆ. ಉಂಟೇ? ಎಂದು ರಂಗಧಾಮ ತನ್ನ ಎದೆಮುಟ್ಟಿಕೊಂಡ. ಆಗ ನೀವು ಕವಿತೆ ಬರೆಯುತ್ತಿದ್ದಿರಿ. ಈಗ ನೋಡಿದರೆ ಲೋಕವಿಖ್ಯಾತ ಕವಿಯಾಗಿಬಿಟ್ಟಿದ್ದೀರಿ…ಕವಿತೆ ಬರೆಯೋರನ್ನ ಹೇಗೆ ಬೇಕಾದರೂ ಮಾತಡಿಸಬಹುದು..ಕವಿಯಾದವರನ್ನ ಹಾಗೆಲ್ಲಾ ಮಾತಾಡಿಸಲಿಕ್ಕೆ ಆದೀತ..?ಬನ್ನಿ..ನೀವು ಸ್ನಾನ ಮುಗಿಸ ಬನ್ನಿ…” ನಮ್ಮ ಮಾತು ಕೇಳಿ ರಂಗಧಾಮನ ಪತ್ನಿ ಸ್ವಲ್ಪ ನಗಬಹುದು ಅಂದುಕೊಂಡಿದ್ದೆ. ಆದರೆ ಅವರು ತಮ್ಮ ಮುಖದಲ್ಲಿ ಯಾವ ಪ್ರತಿಕ್ರಿಯೆಯನ್ನೂ ತೋರಿಸದೆ ತೆಪ್ಪಗೆ ಅಡುಗೆ ಮನೆಗೆ ಹೋಗಿಬಿಟ್ಟರು.ಬಾತ್ ರೂಮಲ್ಲಿ ಎಣ್ಣೆ, ಸೀಗೇಪುಡಿ ಇದ್ದವು. ಇನ್ನೂ ಸಿಪ್ಪೆ ಸುಲಿಯದ ಹೊಸ ಸೋಪು, ಮತ್ತು ಮುಖ ಮುಸುರೆ ಮಾಡಿಕೊಳ್ಳದ ಸೋಪ್ ಬಾಕ್ಸ್ ಸ್ಟಾಂಡಿನಲ್ಲಿ ಕಂಡವು. ಶುಭ್ರವಾಗಿ ಒಣಗಿ ಗರಿಗರಿ ಬಿಳಿಯ ಟವೆಲ್ ಹ್ಯಾಂಗರ್ನಲ್ಲಿ. ನಾನು ಸ್ನಾನ ಮುಗಿಸಿ ಹೊರಗೆ ಬಂದಾಗ ರಂಗಧಾಮನ ಪತ್ನಿ ನಿಮಗೆ ಬಾಯಾಡಿಸಲಿಕ್ಕೆ ಏನಾದರೆ ನಡೆದೀತು? ಅವಲಕ್ಕಿ? ಕೋಡಬಳೆ? ನಿಮಗೆ ಇಷ್ಟ ಅಂತ ರಾತ್ರಿ ಹನ್ನೆರಡು ಗಂಟೆ ವರೆಗೆ ಒಲೇ ಮುಂದೆ ಕೂತು ಅವರೇ ಕರ್ದಿದ್ದಾರೆ…?ಕೋಡಬಳೆ ನಡೆದೀತು. ಕಾಫಿಗಂತೂ ಸಕ್ಕರೆ ಹಾಕೋದೇ ಬೇಡ..ಅಂದೆ. ಒಂದು ಕ್ಷಣ ಆ ಗೃಹಿಣಿ ನಿಂತು ನನ್ನ ಮುಖ ನೋಡಿದರು. ನನಗೆ ತೋರುವಂತೆ ಷುಗರ್ರಾ? ಎಂದು ಪ್ರಶ್ನಿಸಬೇಕು ಅನ್ನಿಸಿರಬೇಕು ಆಕೆಗೆ. ಆದರೆ ಯಾಕೋ ಕೊಕ್ಕೆಯಂಥ ಪ್ರಶ್ನೆಯನ್ನು ನುಂಗಿ, ಆ ಸಣ್ಣ ನೋವನ್ನು ಸ್ವಲ್ಪ ಮಾತ್ರ ಬಿಗಿದ ತುಟಿಗಳಲ್ಲಿ ತೋರಿಸಿ ಆಕೆ ಅಡುಗೆ ಮನೆಗೆ ಹೋದರು. ಮತ್ತೆ ಅವರು ಕೋಡುಬಳೆ ಕಾಫಿಯೊಂದಿಗೆ ಪ್ರತ್ಯಕ್ಷರಾದಾಗ, ಈ ರಂಗಧಾಮ ಎಲ್ಲಿ ಹೋದ? ಎಂದೆ. ಅವರಿಗೆ ಒಂದು ಫೋನ್ ಬಂದಿತ್ತು.ಅವರ ಬಾಸ್ ದು. ಅವರ ಗಿಳಿ ತಪ್ಪಿಸಿಕೊಂಡಿದೆಯಂತೆ…ತುಂಬ ಹಚ್ಚಿಕೊಂಡು ಸಾಕಿದ್ದರು…ಬೇಗ ಬಂದು ಬಿಡ್ತೀನಿ ಅಂತ ಹೇಳಿ ಇವರು ಹೋಗೇ ಬಿಟ್ಟರು…ಮಾತು ಮುಗಿಯಿತು ಅಂದುಕೊಂಡು ನಾನು ಅರೆಗಣ್ಣು ಮಾಡಿಕೊಂಡು ಗರಿಗರಿಯಾಗಿದ್ದ ಕೋಡುಬಳೆ ಮುರಿದು ಬಾಯಲ್ಲಿ ಹಾಕಿಕೊಳ್ಳುತ್ತಿದ್ದಾಗ, ನಿಮಗೆ ವಿಷಯ ಗೊತ್ತಿಲ್ಲ ಅಂತ ಕಾಣತ್ತೆ..ಎಂದರು ಆಕೆ ಕೊಂಚ ತಗ್ಗಿದ ಧ್ವನಿಯಲ್ಲಿ. ನಾನು ಕತ್ತೆತ್ತಿ ಆಕೆಯನ್ನು ನೋಡಿದೆ. ಮೆಲ್ಲಗೆ ಅವರ ಕನ್ನಡಕ ಮಸುಕುಮಸುಕಾಗುತ್ತಿತ್ತು. ನಮ್ಮ ಹುಡುಗ ಹೋದ ವರ್ಷ ಹೋಗಿಬಿಟ್ಟ. ಆಕ್ಸಿಡೆಂಟಲ್ಲಿ. ನಿಮಗೆ ಈ ವಿಷಯ ತಿಳಿಸುವುದೇ ಬೇಡ ಎಂದಿದಾರೆ ಇವರು…ನೀವೂ ಹಾಗೇ ಇದ್ದುಬಿಡಿ…ಎಂದು ಆಕೆ ಕನ್ನಡಕ ತೆಗೆದು, ಮೊದಲು ಕಣ್ಣುಗಳನ್ನೂ, ಆಮೇಲೆ ಕನ್ನಡಕವನ್ನೂ ಒರೆಸಿಕೊಂಡು, ನಿಧಾನಕ್ಕೆ ಕನ್ನಡಕ ಏರಿಸಿ ಒಳಮನೆಗೆ ಸರಿದರು. ನಾನು ಸ್ತಂಭೀಭೂತನಾಗಿ ಎಷ್ಟೊ ಹೊತ್ತು ತೆಪ್ಪಗೆ ಕೂತಿದ್ದೆ. ನಾನು ರಂಗಧಾಮನ ಮಗನನ್ನು ಪ್ರತ್ಯಕ್ಷ ನೋಡಿಯೇ ಇರಲಿಲ್ಲ. ಆದರೆ ಕಾಲ ಕಾಲಕ್ಕೆ ರಂಗಧಾಮ ಕಳಿಸಿದ ಅವನ ನಾನಾ ವಯಸ್ಸಿನ ಫೋಟೋಗಳು ನನ್ನ ಬಳಿ ಇದ್ದವು. ಅವನು ಅಂಬೆಗಾಲು ಇಡುತ್ತಿದ್ದ ಕಾಲದ್ದು ಒಂದು ಫೋಟೊ. ಸ್ಕೂಲ್ ಯೂನಿಫಾರಂಹಾಕಿಕೊಂಡು ನಗುತ್ತಾ ನಿಂತಿದ್ದ ಇನ್ನೊಂದು ಫೋಟೊ. ಅವನಿಗೆ ಹುಡುಗಿಯ ಹಾಗೆ ಅಲಂಕಾರ ಮಾಡಿ ತೆಗೆಸಿದ್ದ ಫೋಟೊ….ಅವನು ಬೀಯೀ ಓದುತ್ತಿರುವಾಗ ಉತ್ತರಭಾರತ ಪ್ರವಾಸ ಹೋಗಿದ್ದಾಗ ತಾಜಮಹಲ್ ಮುಂದೆ ನಿಂತು , ಬಲಗೈಎತ್ತಿ ಮುಷ್ಠಿ ಮುಚ್ಚಿ ಎರಡು ಬೆರಳು ಮಾತ್ರ ಎಷ್ಟು ಸಾಧ್ಯವೋ ಅಷ್ಟೂ ಅಗಲಿಸಿ ವಿ ಆಕಾರದಲ್ಲಿವಿಕ್ಟರಿ ಸಂಕೇತ ತೋರಿಸುತ್ತಿದ್ದ ಫೋಟೊ….ಹೇ ರಾಮ್ ಎಂದು ನಾನು ತುಟಿಕಚ್ಚಿಕೊಂಡೆ… ****** ರಂಗಧಾಮ ಅದ್ಯಾವಾಗ ಮನೆಗೆ ಬಂದನೋ ತಿಳಿಯದು. ಬೆಳಿಗ್ಗೆ ಪೇಪರ್ ಹಿಡಿದುಕೊಂಡು…ಕವಿಗಳಿಗೆ ಸುಪ್ರಭಾತ….ಚೆನ್ನಾಗಿ ನಿದ್ದೆ ಬಂತಷ್ಟೆ? ಎಂದು ಮಹಡಿಯಲ್ಲಿ ನಾನು ಮಲಗಿದ್ದ ಕೋಣೆಗೆ ಬಂದಾಗ…ಗಿಣಿ ಸಿಕ್ಕಿತಾ..? ಎಂದು ಕೇಳಿದೆ. ರಂಗಧಾಮ ನಿರ್ಭಾವದಿಂದ -“ಇನ್ನೂ ಹುಡುಕುತ್ತಾ ಇದ್ದೀವಿ..ಎಂದ. ಎಲ್ಲಿ ಎಂದೆ. ರಂಗಧಾಮ ಮೇಲಕ್ಕೆ ಕೈ ತೋರಿಸಿ ತುಕ್ರೆಬೆಟ್ಟದ ಶಿಖರದಲ್ಲಿ..ಎಂದ. ಈಗ ಜೀಪ್ ಬರತ್ತೆ ಮತ್ತೆ ಹೋಗಬೇಕು… ಪಾಪ…ಅವರ ಮನೆಯಲ್ಲಿ ಯಾರೂ ನೆನ್ನೆಯಿಂದ ಊಟ ಕೂಡ ಮಾಡಿಲ್ಲ…ನಾನು ಮತ್ತು ಬಾಸ್ ಇಬ್ಬರೂ ರಜಾ ಹಾಕುತ್ತಿದ್ದೇವೆ…ಈವತ್ತೂ ಕಾಡು ಗುಡ್ಡ ಎಲ್ಲಾ ಸೋಸಿ ಗಿಣಿಯನ್ನು ಹುಡುಕಲೇ ಬೇಕು”.ನಾನು ಬರಲೇ ಎಂದೆ. ಬೇಡ ಹತ್ತುವುದು ಇಳಿಯುವುದು ತುಂಬಾ ಇರುತ್ತದೆ. ಬಹಳ ದಟ್ಟವಾದ ಕಾಡು… ನಮ್ಮ ಸಹ್ಯಾದ್ರಿ ಪರ್ವತ ಶ್ರೇಣಿ ಇದೆಯಲ್ಲಾ ಹಾಗೆ…ನೀವು ಮನೆಯಲ್ಲೇ ಕವಿತೆ ಗಿವಿತೆ ಬರೆಯುತ್ತಾ ಇರಿ…ನಾನು ಬೇಗ ಬರುತ್ತೇನೆ… ಮಧ್ಯಾಹ್ನ ರಂಗಧಾಮ ಬಂದಾಗ ರಂಗಧಾಮನ ಮುಖದಲ್ಲಿ ಕೊಂಚ ಗೆಲುವು ಕಂಡುಬಂತು. ಏನಯ್ಯ…ಗಿಣಿ ಸಿಕ್ಕಿತೋ ಹ್ಯಾಗೆ?….” ಸಿಗದೆ ಎಲ್ಲಿ ಹೋಗತ್ತೆ ಅದು?” ಎಂದ ರಂಗಧಾಮ. ಮನೆಗೆ ತಂದಿರಾ ಎಂದೆ. ಅದು ಬೇರೆ ನೂರಾರು ಗಿಳಿಗಳ ಗುಂಪಲ್ಲಿ ಖುಷಿಯಾಗಿ ಹಾರ್ತಾ ಇತ್ತು…ಅದರ ಎಡ ರೆಕ್ಕೆಗೆ ಬಂಗಾರದ ಒಂದು ರಿಂಗ್ ಹಾಕಿಸಿದ್ದರು ನಮ್ಮ ಬಾಸ್…ಅದು ನಮಗೆ ಕಾಣಿಸಿತು ಸಹಾ…ನಾವು ಕೂಗಿದ್ದು ಅದಕ್ಕೆ ಕೇಳಲಿಲ್ಲ…ಅಷ್ಟು ಮೇಲಿತ್ತು…ಜೊತೆಗೆ ಬೇರೆ ಗಿಳಿಗಳೂ ಇದ್ದವಲ್ಲಾ ಜತೆಗೆ…ಬಾಸ್ ಅದನ್ನೆ ನೋಡುತ್ತಾ ಕಲ್ಲಿನ ಹಾಗೆ ನಿಂತೇ ಇದ್ದರು… ನಾನು ಅವರಿಗೆ ಹೇಳಿದೆ..ಯಾಕ್ಸಾರ್ ಬೇಜಾರ್ ಮಾಡ್ಕೋಳ್ತೀರಿ…ಪಂಜರ ದೊಡ್ಡದಾಯಿತು ಅಷ್ಟೆ…ಗಿಳಿ ಇದ್ದ ಹಾಗೇನೇ ಇದೆ….”. ಸರಿ ತಾನೇ? ಎಂದು ರಂಗಧಾಮ ಇಷ್ಟಗಲ ಕಣ್ಣರಳಿಸಿ, ನನ್ನನ್ನೇ ನೋಡುತ್ತಾ ಕೇಳಿದ. ಅವನ ಕಣ್ಣುಗಳನ್ನು ನೇರವಾಗಿ ನೋಡುವ ಧೈರ್ಯ ನನಗಿರಲಿಲ್ಲ.

]]>

‍ಲೇಖಕರು avadhi

August 5, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಚ್ ಎಸ್ ವಿ ಕಾಲಂ: ಮತ್ತೆ, ಮರೆತ ಇತಿಹಾಸದ ಮರುಗಳಿಕೆ..

ತಾವರೆಯ ಬಾಗಿಲು-೧೮ ಎರಡು ಸಾವಿರ ವರ್ಷಗಳ ಹಿಂದೆ ತೆಂಕಣಭಾರತದ ದೇಶ-ಕಾಲ-ಪರಿಸ್ಥಿತಿ ಹೇಗಿತ್ತೆಂದು ನಾವು ಊಹಿಸುವುದೂ ಸಾಧ್ಯವಿಲ್ಲ. ಮರೆತು ಹೋದ...

ಎಚ್ ಎಸ್ ವಿ ಕಾಲಂ: ಕಾವ್ಯದಲ್ಲಿ ಭಾಷೆಯಲ್ಲದ ಭಾಷೆಯ ಮಿಡುಕಾಟ..

ತಾವರೆಯ ಬಾಗಿಲು-೧೬ ಕಾವ್ಯಕ್ಕೆ ಭಾಷೆಯೇ ಮೂಲ ಸಾಮಗ್ರಿ. ಭಾಷೆಯ ಮೂಲಕ ಕವಿಗಳು ತಮ್ಮ ಲೌಕಿಕಾಲೌಕಿಕ ಅನುಭವಗಳನ್ನು ಅಭಿವ್ಯಕ್ತಿಸುತ್ತಾರೆ. ಹಾಗೆ...

9 ಪ್ರತಿಕ್ರಿಯೆಗಳು

 1. rajashekhar malur

  sir… “panjara doddadagide ashte… gili idda haagene ide”.. wow! hats off!! tumba channaagide… idu yako katheneno ansatte… nijavagiyu, nijavagi nadedidde…? yaaksar baree agalike baggene bareetiddeera…?

  ಪ್ರತಿಕ್ರಿಯೆ
 2. HSV

  ಪ್ರಿಯ ಮಿತ್ರರೆ
  ಖಂಡಿತ ಕಥೆಯಲ್ಲ. ದಾರುಣವಾದ ವಾಸ್ತವ.

  ಪ್ರತಿಕ್ರಿಯೆ
 3. ರಾಮಚಂದ್ರ ನಾಡಿಗ್

  ಓದುತ್ತಾ ಓದುತ್ತಾ ಮನಸ್ಸು ಭಾರವಾಯಿತು. ಈಗ ಹೇಗಿದ್ದಾರೆ ರಂಗಧಾಮ ?

  ಪ್ರತಿಕ್ರಿಯೆ
 4. Laxminarayana Bhat P

  ಜೀವನದ ಅನಿರೀಕ್ಷಿತ ತಿರುವುಗಳು ಎಷ್ಟೊಂದು ದಾರುಣವಾಗಿರಬಲ್ಲವು! ಅವೆಲ್ಲವನ್ನೂ ಜೀರ್ಣಿಸಿಕೊಂಡು ಮನುಷ್ಯ ದೈನಿಕದ ಬದುಕನ್ನು ಬಾಳುವ ರೀತಿಯೂ ಒಂದು ವಿಸ್ಮಯವೇ ಸರಿ!

  ಪ್ರತಿಕ್ರಿಯೆ
 5. ಬೆಳ್ಳಾಲ ಗೋಪಿನಾಥ ರಾವ್

  ಪುತ್ರ ಶೋಕಂ ….
  ನೆನಪಿಗೆ ಬಂತು ಸರ್
  ರಂಗಧಾಮರಿಗೆ ಮತ್ತು ಅವರ ಶ್ರೀಮತಿಯವರಿಗೆ ದುಃಖ ತಡೆಯುವ ಶಕ್ತಿ ನೀಡಲಿ

  ಪ್ರತಿಕ್ರಿಯೆ
 6. Shalu

  ಕಳೆದುಹೋದ ಗಿಳಿ ನನ್ನನ್ನು ಒಂದೇ ಸಮ ಕಾಡುತ್ತಿದೆ. ಅದು ತೀರಿಹೋದ ಮಗನೇ? ಕೇವಲ ಸಾಕಿದ ಹಕ್ಕಿಯೇ? ಪಂಜರ ದೊಡ್ಡದಾಯಿತು ಅಂದರೆ ಜಗತ್ತೇ ಒಂದು ದೊಡ್ಡ ಪಂಜರ ಎಂದು ಭಾವಿಸಬೇಕೆ? ನನಗೆ ತಲೆ ಕೆಟ್ಟುಹೋಗುತ್ತಿದೆ. ಅದ್ಭುತ ಬರವಣಿಗೆ.

  ಪ್ರತಿಕ್ರಿಯೆ
 7. Krishna Channagiri (Kashyap brothers)

  lekhana bhahala channagide, mana kalakithu….!
  Panjara doddadagide ashte… Gili idda haagene ide”…….! nijavaagiyU ee vakya arthapoornavagide…! hidisithu..!
  Krishna
  LOCHNA
  Dr. H.S.V Sahithyaabhimaani balaga,
  Channagiri-577213
  9448105018

  ಪ್ರತಿಕ್ರಿಯೆ
 8. srinivas deshpande

  dear sir,
  idu nijakkoo hridaya hinduva daruna vaasthava
  srinivas deshpande

  ಪ್ರತಿಕ್ರಿಯೆ
 9. ರವಿ ಶಂಕರ್

  “ಸಣಕಲು ಕಡ್ಡಿಯಾಗಿದ್ದ ಡ್ರೈವರ್ರಾದರೋ ವಾಯು ವೇಗದಲ್ಲಿ ಜೀಪನ್ನು ಆ ಕಿರುದಾರಿಯಲ್ಲಿ ಚಲಾಯಿಸುತ್ತಾ ನನ್ನಲ್ಲಿ ಭಯವನ್ನೂ ದಿಗಿಲನ್ನೂ ಉತ್ಪಾದಿಸುತ್ತಾ, ತಾನು ಮಾತ್ರ ತನ್ನ ದಿನ ನಿತ್ಯದ ಬೋರಿನಲ್ಲಿ ತನ್ನ ಮಾತನ್ನು ತಾನೇ ಒಕ್ಕುತ್ತಾ , ತನ್ನ ಮಾತಿಗೂ ತನ್ನ ಜೀಪ್ ಚಾಲನೆಗೂ ಏನೇನೂ ಸಂಬಂಧವೇ ಇಲ್ಲ ಎಂಬ ರೀತಿಯಲ್ಲಿ ಕ್ರಿಯಾಪ್ರವೃತ್ತನಾಗಿದ್ದ”.
  ಅದ್ಭುತ ಸಾಲುಗಳು, ಸಾರ್, ನನಗೆ ಕುವೆಂಪುರವರ “ಕಾನೂರು ಸುಬ್ಬಮ್ಮಹೆಗ್ಗಡತಿ”ಯ ಕೆಲವು ವರ್ಣನಾತೀತ ಅನುಭವ ಕೊಡುವ ಸಾಲುಗಳು ನೆನಪಾದವು.
  ಉದಾ: “ಧೂಳುಗೆಂಪಿನ ರಸ್ತೆ ಸಹ್ಯಾದ್ರಿಯ ಅರಣ್ಯದೇವಿಯ ಮಹಾಮಸ್ತಕದ ಸುದೀರ್ಘವಾದ ಬೈತಲೆಯ ಸರಳ ವಕ್ರ ನಿಮ್ನೋನ್ನತ ರೇಖಾವಿನ್ಯಾಸದಂತೆ ಮೆರೆದಿತ್ತು”.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: