ಎಚ್ಹೆಸ್ವಿ ಬರೆವ ಅನಾತ್ಮ ಕಥನ: ಸೀತಜ್ಜಿಗೆ ನೂರು ವರ್ಷ

ಅಳಿಯಲಾರದ ನೆನಹು-೨೪ ಎಚ್ ಎಸ್ ವೆಂಕಟೇಶಮೂರ್ತಿ ಸೀತಜ್ಜಿಗೆ ನೂರು ವರ್ಷ ತುಂಬಿತು ಎಂದು ನಾನೂ ಮಕ್ಕಳು ಸೊಸೆಯರು ಎಲ್ಲಾ ಸೇರಿ, ಕೂಡಿಕಳೆದು ಚರ್ಚಿಸಿ ಒಂದು ತೀರ್ಮಾನಕ್ಕೆ ಬಂದೆವು. ಕಾರಣ ಸೀತಜ್ಜಿಯ ಹುಟ್ಟಿದ ದಿನಾಂಕ ಯಾರಿಗೂ ಗೊತ್ತಿರಲಿಲ್ಲ. ಅವಳ ಜಾತಕ ಯಾರೂ ಬರೆಸಿ ಇಟ್ಟಿರಲಿಲ್ಲ. ಅಜ್ಜಿಗೆ ಹದಿನೆಂಟು ಇರಬೇಕಾದರೆ ನಮ್ಮ ಅಮ್ಮ ಅವಳಿಗೆ ಹುಟ್ಟಿರಬಹುದು. ನಮ್ಮ ಅಮ್ಮನಿಗೆ ಹದಿನೆಂಟು ಇರುವಾಗ ನಾನು ಹುಟ್ಟಿದ್ದು. ಈಗ ನನಗೆ ಅರವತ್ತೇಳು. ಅಂದಮೇಲೆ ನಮ್ಮ ಅಜ್ಜಿಗೆ ಎಷ್ಟು ವಯಸ್ಸಾಗಿರಬಹುದು ಎಂದು ಲೆಕ್ಕಾಚಾರ ಮಾಡಿ ಈ ವರ್ಷದ ಕೊನೆಗೆ ಅವಳಿಗೆ ನೂರು ತುಂಬುತ್ತದೆ ಎಂದು ನಾವೆಲ್ಲಾ ಒಮ್ಮತದಿಂದ ತೀರ್ಮಾನಿಸಿದೆವು! ಮತ್ತು ಅದನ್ನು ದೃಢವಾಗಿ ನಂಬಲಿಕ್ಕೆ ಶುರುಮಾಡಿದೆವು. ಅಜ್ಜಿಯ ಜನ್ಮಶತಮಾನೋತ್ಸವವನ್ನು ವಿಜೃಂಭಣೆಯಿಂದ ಮಾಡಬೇಕೆಂದು ನನ್ನ ಮಕ್ಕಳು ನಿರ್ಧರಿಸಿದರು. ನಾನು ಸೊಸೆಯಿಂದ ನಮ್ಮ ಅಮ್ಮನಿಗೆ ಫೋನ್ ಮಾಡಿಸಿದೆ.

ಅಜ್ಜಿಗೆ ಆಗ ಕಿವಿ ಸುತ್ರಾಂ ಕೇಳಿಸುತ್ತಿರಲಿಲ್ಲ. ಅವಳಿಗೆ ಏನಾದರೂ ತಿಳಿಸುವುದು ತುಂಬಾ ಕಷ್ಟವಾಗುತ್ತಿತ್ತು. ಎಡ ಕಿವಿಯ ಬಳಿ ಯಾವುದೋ ಅಂತರದಲ್ಲಿ ಯಾವುದೋ ಒಂದು ನಿಶ್ಚಿತ ಪ್ರಮಾಣದಲ್ಲಿ ಮತ್ತು ವೇಗದಲ್ಲಿ ಮಾತಾಡಿದಾಗ ಮಾತ್ರ ಆಕೆ ಅಲ್ಪ ಸ್ವಲ್ಪ ಗ್ರಹಿಸಬಲ್ಲವಳಾಗಿದ್ದಳು. ಹೀಗೆ ಮಾತಾಡುವುದು ನಮ್ಮ ಅಮ್ಮನಿಗೆ ಮಾತ್ರ ಸಿದ್ಧಿಸಿತ್ತು.ಅಮ್ಮನ ಮೂಲಕ ನಾವು ಅಜ್ಜಿಯೊಂದಿಗೆ ನಡೆಸಿದ ಸಂಭಾಷಣೆಯ ಸ್ಥೂಲ ರೂಪ ಕೆಳಕಂಡಂತಿದೆ

(ಚಿತ್ರ ಶಿವರಾಂ ಪೈಲೂರು)

ಈ ಕಡೆಯಿಂದ: ಅಜ್ಜೀ…ನಿನಗೆ ಮುಂದಿನ ತಿಂಗಳು ನೂರು ತುಂಬುತ್ತದೆ.. ನಿನಗೆ ಏನು ಬೇಕು ಹೇಳು..ತರುತ್ತೇವೆ…

ಆ ಕಡೆಯಿಂದ: ಈ ವಯಸ್ಸಿನಲ್ಲಿ ನನಗೆ ಏನು ಬೇಕಮ್ಮಾ? ನೀವೆಲ್ಲಾ ಹಳ್ಳಿಗೆ ಬಂದು ನನ್ನ ನೋಡಿಕೊಂಡು ಹೋಗಿ..ಅಷ್ಟೇ ಸಾಕು… ಈ ಕಡೆಯಿಂದ: ನಾವು ಬರೋದು ಇದ್ದೇ ಇದೆ…ನಾವು ಮಾತ್ರವಲ್ಲಾ…ನಂಟರಿಷ್ಟರನ್ನೆಲ್ಲಾ ಸೇರಿಸುತ್ತೇವೆ…ನಿಮಗೆ ನಾವೆಲ್ಲಾ ಸೇರಿ ಏನಾದರೂ ಪ್ರೆಸೆಂಟ್ ಮಾಡಬೇಕೆಂದಿದ್ದೇವೆ…ಸಂಕೋಚಪಡದೆ ಏನು ಬೇಕೋ ಕೇಳಿ… ಆ ಕಡೆಯಿಂದ(ತಾಯಿ ಮಗಳ ನಡುವೆ ಸ್ವಲ್ಪ ಚರ್ಚೆಯಾದ ಮೇಲೆ): ನನಗೊಂದು ಗೋಲ್ಡ್ ಕವರಿಂಗ್ ಸರ ತಗೊಂಡು ಬನ್ನಿ…ತಿಗಿಣೇ ಪ್ಯಾಟ್ರನ್ದು…ತೆಳ್ಳಗೆ ಚಿನ್ನದ ಸರದ ಹಾಗೇ ಇರಬೇಕು… ನೋಡಿದವರಿಗೆ ಚಿನ್ನದ್ದೇ ಅನ್ನಿಸ ಬೇಕು…ವೇದನ್ನ ಕರ್ಕೊಂಡು ಹೋಗಿ …ಅವಳು ಚೆನ್ನಾಗಿ ಆರಿಸ್ತಾಳೆ! ಅಜ್ಜಿಯ ಈ ಬಯಕೆಯನ್ನು ಕೇಳಿ ನಮಗೆ ನಗಬೇಕೋ ಅಳಬೇಕೋ ತಿಳಿಯಲಿಲ್ಲ. ಹುಣಿಸೇಕಟ್ಟೆ ಚೌಡಿ ಕೊಟ್ಟ ತಾಮ್ರದ ಯಂತ್ರ ಕಟ್ಟಿದ ಕರೀದಾರ ಬಿಟ್ಟರೆ ಕೊರಳಿಗೆ ಇನ್ನೇನೂ ಹಾಕಿಕೊಳ್ಳದಿದ್ದ ಅಜ್ಜಿಗೆ ಮನಸ್ಸಿನ ಆಳದಲ್ಲೇ ರೋಲ್ಡ್ ಗೋಲ್ಡ್ ಸರದ ಆಸೆ ಹುದುಗಿಕೊಂಡಿತ್ತು! ನನಗೆ ಅಯ್ಯೋ ಅನ್ನಿಸಿತು. ಅವತ್ತು ಮಧ್ಯಾಹ್ನವೇ ಶಾಲಿನಿಗೆ ಹೇಳಿದೆ. ನೋಡಮ್ಮ…ನಾನು ಇಷ್ಟು ದುಡಿಯುತ್ತೇನೆ…ನಮ್ಮ ಅಜ್ಜಿಗೆ ಒಂದು ಚಿನ್ನದ ಸರ ತೆಗೆದುಕೊಡುವುದು ನನಗೆ ಏನೂ ಕಷ್ಟವಾಗಿರಲಿಲ್ಲ…ನೋಡು ಈವತ್ತಿನವರೆಗೂ ನನಗೆ ಅದು ಹೊಳೆದೇ ಇರಲಿಲ್ಲ…ನಡಿ…ಈಗಲೇ ಗಾಂಧಿ ಬಜಾರಿಗೆ ಹೋಗಿ ಅಜ್ಜಿಗೆ ಚಿನ್ನದ ಸರ ತರೋಣ… ನಾನು ಮತ್ತು ಶಾಲು ಗಾಂಧಿಬಜಾರಿಗೆ ಹೋಗಿ ಪಾಮಡಿ ಜ್ಯೂಯಲ್ಸ್ ನಲ್ಲಿ ಅಜ್ಜಿಗೆ ತಿಗಿಣೆ ಪ್ಯಾಟ್ರನ್ನಿನ ಒಂದು ಬಂಗಾರದ ಸರವನ್ನೇ ಆರಿಸಿದೆವು. ಹಾಕಿಕೊಂಡರೆ ಎದೆಯ ಗುಂಡಿಗೆ ವರೆಗೆ ಬರಬೇಕು. ಅಷ್ಟು ಉದ್ದದ್ದು. ಚಿನ್ನದ ಸರ ನೋಡಿ ನನ್ನ ಮಕ್ಕಳೂ ತುಂಬ ಸಂತೋಷಪಟ್ಟರು. ಈ ಸರಕ್ಕೆ ನಾನು ದುಡ್ಡು ಕೊಡುತ್ತೇನೆ, ನಾನು ದುಡ್ಡು ಕೊಡುತ್ತೇನೆ ಎಂದು ಎಲ್ಲರೂ ಮುಕುರಿಕೊಂಡರು. ಅಪ್ಪಾ…ನಮ್ಮ ಅಜ್ಜಿ ಮೊದಲು ಸಾಕಿ ಸಲಹಿದ್ದು ನನ್ನನ್ನ…ನಾನು ಎಂಥ ಬಡತನದಲ್ಲಿ ಬೆಳೆದೆನೆಂಬುದು ನಿಮಗೆ ಗೊತ್ತಿಲ್ಲ…ರೇಷನ್ ಕಾಲದಲ್ಲಿ ನನಗೆ ಮಾತ್ರ ಅನ್ನ ಬಡಿಸಿ ನನ್ನ ಅಮ್ಮ ಅಜ್ಜಿ ದೊಡ್ಡಜ್ಜಿ ಬರೀ ಮುದ್ದೆ ತಿನ್ನುತ್ತಾ ಇದ್ದರು. ನಮ್ಮ ಮನೆ ಏನು? ನಮ್ಮ ಕೇರಿಯಲ್ಲಿ ನಮ್ಮವರ ಮನೆಗಳಲ್ಲೆಲ್ಲಾ ಹೊಟ್ಟೆತುಂಬ ಮುದ್ದೆ, ಬಾಯಿ ತುಂಬ ಅನ್ನ ಎನ್ನುವುದೇ ಊಟದ ಕ್ರಮವಾಗಿತ್ತು.ನಾನು ಓದಲಿಕ್ಕೆ ಎಲ್ಲಿಗೆ ಹೋದರೂ ನಮ್ಮ ಅಜ್ಜಿ ಮನೆ ಮಾಡಿಕೊಂಡು ನನ್ನ ಜೊತೆಯಲ್ಲೇ ಇರುತ್ತಾ ಇದ್ದಳು…ಹೈಸ್ಕೂಲ್ ಓದುವಾಗ ಹೊಳಲಕೆರೆಯಲ್ಲಿ. ಪಿ ಯು ಸಿ ಓದುವಾಗ ಚಿತ್ರದುರ್ಗದಲ್ಲಿ. ಡಿಪ್ಲೊಮ ಓದುವಾಗ ಭದ್ರಾವತಿಯಲ್ಲಿ. ಹೀಗೆ ನನ್ನನ್ನ ಕಣ್ಣ ಬೊಂಬೆಯಂತೆ ನಮ್ಮ ಅಜ್ಜಿ ಸಾಕಿದರು…ಆದರೆ ಅವರಿಗೆ ಒಂದು ಚಿನ್ನದ ಸರ ಕೊಡಿಸಬೇಕು ಅನ್ನೋದು ನನಗೆ ಈವರೆಗೂ ಹೊಳೆಯಲೇ ಇಲ್ಲ…ಈಗ ಅವರ ಬಾಯಿಂದಲೇ ಆ ಆಸೆ ಹೊರಬಿದ್ದಿದೆ…ಅವರು ಕೇಳಿದ್ದಾದರೂ ಏನು? ಚಿನ್ನದ ಸರವನ್ನಲ್ಲ…ರೋಲ್ಡ್ ಗೋಲ್ಡ್ ಸರವನ್ನ! ಅವರ ಹುಟ್ಟುಹಬ್ಬದ ದಿನ ಅವರ ಕೊರಳಿಗೆ ಚಿನ್ನದ ಸರ ನಾನೇ ಹಾಕಬೇಕು…ಈ ಅವಕಾಶ ನಿಮಗೆ ಯಾರಿಗೂ ನಾನು ಕೊಡುವುದಿಲ್ಲ… ಅಜ್ಜಿಗೆ ಚಿನ್ನದ ಸರವನ್ನ ಖರೀದಿಸಿದ್ದು ನಾವು ಊರಿಗೆ ತಿಳಿಸಲಿಲ್ಲ. ಅದೊಂದು ಸರ್ಪ್ರೈಜ್ ಆಗಬೇಕೆಂಬುದು ನನ್ನ ಆಸೆಯಾಗಿತ್ತು. ಅಜ್ಜಿಗೆ ಏನು ತೆಗೆದುಕೊಂಡಿರಿ ಎಂದು ನನ್ನ ದೊಡ್ಡ ಸೊಸೆ ಪ್ರತಿಮ ಮತ್ತು ಮಗ ಸುಮಂತ ಕೇಳಿದಾಗ ಅವರಿಗೂ ಕೂಡ ಗುಟ್ಟುಬಿಟ್ಟುಕೊಡಲಿಲ್ಲ. ಹಾ ಹೂ ಅನ್ನುವದರೊಳಗೆ ತಿಂಗಳು ಕಳೆದೇ ಹೋಗಿ ಅಜ್ಜಿಯ ಜನ್ಮಶತಮಾನೋತ್ಸವ ಬಂದೇಬಿಟ್ಟಿತು. ಒಂದು ಮಿನಿ ಬಸ್ ಮಾಡಿಕೊಂಡು ನಾವೆಲ್ಲಾ ಹೋದಿಗ್ಗೆರೆಗೆ ಹೊರಟೆವು. ಮೂವರು ಮಕ್ಕಳು, ಸೊಸೆಯಂದಿರಾದ ಶಾಲಿನಿ, ವೇದ, ಸುಮಾ, ಮೊಮ್ಮಕ್ಕಳು-ಎಲ್ಲಾ. ಜೊತೆಗೆ ನನ್ನ ಬಾಲ್ಯ ಗೆಳೆಯ ಶಂಕರ್ ಕೂಡ ನಮ್ಮೊಂದಿಗೆ ಸೇರಿಕೊಂಡ. ನನ್ನ ಭಾವ ಮೈದುನ ಮಲ್ಲಾರಿರಾವ್ ಕೂಡ ಬಂದರು. ಜೊತೆಗೆ ನನ್ನ ಮೂವರು ಸೊಸೆಯರ ತಾಯ್ತಂದೆಯರು.ಊರಲ್ಲಿ ಅಜ್ಜಿಯ ಶತಮಾನೋತ್ಸವ ಕಾರ್ಯಕ್ರಮಕ್ಕೆ ಪ್ರತಿಮ ಮತ್ತು ಸುಮಂತ್ ಸರ್ವಸಿದ್ಧತೆಗಳನ್ನೂ ಮಾಡಿದ್ದರು. ಮನೆತುಂಬ ಬಂಧುಬಳಗದವರೂ ಸೇರಿದರು. ಅಜ್ಜಿ ಎಲ್ಲರಿಗೂ ಬೇಕಾದವರು. ಮುಪ್ಪಿನ ಮುದುಕಿ. ನಮ್ಮ ವಂಶದಲ್ಲೇ ನೂರು ವರ್ಷ ಬದುಕಿದವರು ಯಾರೂ ಇರಲಿಲ್ಲ. ಈ ಎಲ್ಲ ಕಾರಣಗಳೂ ಕೂಡಿ ಅಜ್ಜಿಯ ತಮ್ಮಂದಿರು, ತಂಗಿಯ ಮಕ್ಕಳು, ಅಳಿಯಂದಿರು -ಎಲ್ಲರೂ ಆಗಮಿಸಿದ್ದರಿಂದ ಮನೆ ಗಿಲಿಗಿಲಿಗಿಲಿ ಎನ್ನುತ್ತಿತ್ತು. ಅಜ್ಜಿಗೆ ಎಲ್ಲರೂ ಸೀರೆ ತಂದಿದ್ದರು. ನಡುಮನೆಯಲ್ಲಿ ಕುರ್ಚಿಯ ಮೇಲೆ ಅಜ್ಜಿಯನ್ನ ಕೂಡಿಸಿದ್ದೆವು. ಕಾಲಿಗೆ ಬಿದ್ದು ನಮಸ್ಕಾರ ಮಾಡುವವರಿಗೆಲ್ಲಾ ಅಜ್ಜಿ ನಗುನಗುತ್ತಾ ಆಶಿರ್ವಾದ ಮಾಡಿದರು. ನೀನು ಚಂದ್ರಣ್ಣ ಅಲ್ಲವಾ…ನೀನು ಪ್ರಾಣೇಶ…ನೀವು ಸತ್ಯಣ್ಣ, ನೀನು ಕೃಷ್ಣ-ಎಂದು ಕೆಲವರನ್ನು ಗುರುತಿಸುತ್ತಿದ್ದರು. ಅಜ್ಜೀ ನಾನು ಯಾರು ಹೇಳು ಎಂದು ಕೆಲವರು ಅಜ್ಜಿಗೆ ಸವಾಲು ಒಡ್ಡುತ್ತಿದ್ದರು. ಏನೋ…? ನಂಗೆ ಅಷ್ಟೂ ಗೊತ್ತಾಗಲ್ಲ ಅಂದುಕಂಡಿದೀಯಾ…ನೀನು ಶಂಕ್ರಣ್ಣ….ಅಲ್ಲಲ್ಲ… ಬಾಲು… ರೈಟ್?- ಅನ್ನುತ್ತಿದ್ದರು ನಮ್ಮ ಅಜ್ಜಿ. ಅಜ್ಜೀ ಎರಡರಲ್ಲಿ ಒಂದು ಹೇಳಿ ಎಂದು ನಮಸ್ಕಾರ ಮಾಡಿದೋರು ಅಜ್ಜಿಯನ್ನು ಕೆಣಕುತ್ತಿದ್ದರು. ಅಜ್ಜಿ ತಲೆ ಕೆರೆದುಕೊಂಡು ನೀನು ರಾಧಾಕೃಷ್ಣ…ಅನ್ನೋದೇ?! ಅಜ್ಜೀ ಸರಿಯಾಗಿ ನೋಡಿ ಹೇಳಿ…ನೀವು ತ್ಯಾಗರಾಜನಗರದಲ್ಲಿದ್ದಾಗ ನಾನು ಬಂದಾಗಲೆಲ್ಲಾ ತಾಲೀಪೆಟ್ಟು ಮಾಡಿಕೊಡ್ತಾ ಇದ್ದಿರಿ…! ಹಂಗಾರೆ ನೀನು ಲಕ್ಷ್ಮಣರಾವು…?ಎಂದು ನಾಕನೇ ಹೆಸರು ಹೇಳುತ್ತಿದ್ದರು. ಹೆಣ್ಣುಮಕ್ಕಳು ನಮಸ್ಕಾರ ಮಾಡಿದಾಗ ಮುತ್ತೈದೆ ಸಾವಿತ್ರಿಯಾಗಿ ಹತ್ತು ಮಕ್ಕಳನ್ನು ಹಡಕೊಂಡು ಸುಖವಾಗಿರು ತಾಯಿ ಎಂದು ಹರಸುತ್ತಿದ್ದರು. ಎಪ್ಪತ್ತು ವರ್ಷದ ನಮ್ಮ ಚಿಕ್ಕಮ್ಮ ನಮಸ್ಕಾರ ಮಾಡಿದಾಗ ಕೂಡಾ ಅಜ್ಜಿ ಯಥಾಪ್ರಕಾರ ಅದೇ ಹಳೇ ಡೈಲಾಗು ಹೊಡೆದರು. ಮುತ್ತೈದೆ ಸಾವಿತ್ರಿಯಾಗಿ ಇನ್ನೂ ಹತ್ತು ಗಂಡುಮಕ್ಕಳು ಹಡಕೊಂಡು ಸುಖವಾಗಿರಮ್ಮಾ ತಾಯಿ…! ನಮ್ಮ ಚಿಕ್ಕಮ್ಮನ ಸಮೇತ ನೆರೆದವರೆಲ್ಲಾ ಗೊಳ್ಳಂತ ನಗತೊಡಗಿದರು. ಅಜ್ಜಿಗೆ ಹೆಣ್ಣುಮಕ್ಕಳು ನಗುನಗುತ್ತಾ ಆರತಿಯೆತ್ತಿದರು. ಬರ ಆರತಿ ಮಾಡಬೇಡ್ರೇ..ಯಾರಾದರು ಒಂದು ನುಡಿ ಅನ್ನಿ..ಎಂದು ಅಜ್ಜಿ ಹೇಳಿದರು. ಯಾರೂ ಹಾಡದಿದ್ದಾಗ..ಆರತೀಯ ಮಾಡೇ ಮಾರಸುಂದರಾಗೇ..ಎಂದು ತಾವೇ ಹಾಡತೊಡಗಿದರು. ಮೂರ್ತೀ ಆರತೀ ತಟ್ಟೆಗೆ ಹಾಕಕ್ಕೆ ದುಡ್ಡುಕೊಡೋ ಅಂತ ನನಗೆ ಕೂಗಿ ಹೇಳಿದರು! ಮೊಮ್ಮಕ್ಕಳೆಲ್ಲಾ ಉಡುಗರೆ ನೀಡಿದ್ದಾದ ಮೇಲೆ ಬೆಂಗಳೂರಿಂದ ತಂದಿದ್ದ ಚಿನ್ನದ ಸರವನ್ನ ಅಜ್ಜಿಯ ಕೊರಳಿಗೆ ನಾನೇ ಹಾಕಿದೆ. ನೆರೆದವರೆಲ್ಲಾ ಕರತಾಡನ ಮಾಡಿದಾಗ ಅಜ್ಜಿ ರಾಜಕಾರಣಿಗಳಂತೆ ಕೈಮುಗಿದು ನಗುತ್ತಾ ಇದ್ದರು. ಅದನ್ನೂ ಈ ಮಾರಾಯಗಿತ್ತಿ ಎಲ್ಲಿ ನೋಡಿಕೊಂಡಿದ್ದಳೋ! ಮೊಮ್ಮಗನಿಗೆ ಸಭೆಗಳಲ್ಲಿ ಹಾರ ಹಾಕಿದ್ದ ನೋಡಿದ್ದರಲ್ಲಾ..ಅದಕ್ಕೇ ಅವರಂತೇ ಇವರೂ ಕೈಮುಗಿದು ನಗುತಾ ಇದ್ದಾರೆ..ಎಂದು ಶಿವಮೊಗ್ಗದ ಶ್ಯಾಮಣ್ಣ ಹಾಸ್ಯಮಾಡಿದ. ಅಜ್ಜಿಯೊಂದಿಗೆ ಅವನ ಸಲುಗೆ ಜಾಸ್ತಿ. ಸದಾ ಅವರನ್ನು ಪೀಡಿಸುವುದು ಅವನ ಸ್ವಭಾವ. ಅಜ್ಜೀ ನಿನ್ನ ರಗ್ಗು ಚೆನ್ನಾಗಿದೆ ನನಗೆ ಕೊಡು ಅನ್ನೋನು. ಹೋಗೋ ಹೋಗೋ ನನ್ನ ಮೊಮ್ಮಗ ತಂದುಕೊಟ್ಟಿದ್ದು…. ನಿಂಗ್ಯಾಕೆ ಕೊಟ್ಟೇನು…ಆಮೇಲೆ ಸ್ವಲ್ಪ ಕಾಲ ಇಬ್ಬರ ನಡುವೆ ಟಗ್ಗಾಫ್ ವಾರ್ ನಡೆಯೋದು. ಮಲ್ಲಾಡಿಹಳ್ಳಿಯಿಂದ ಪಾಟೀಲ್ ಮೇಷ್ಟ್ರು ಬಂದರು ಪಾಟೀಲ್ ಮೇಷ್ಟ್ರು ಬಂದರು ಅಂತ ಯಾರೋ ಕೂಗಿದರು. ಪಾಟಿಲ್ ತಮ್ಮ ಪತ್ನಿಯೊಂದಿಗೆ ಬಂದು ಅಜ್ಜಿಗೆ ನಮಸ್ಕಾರ ಮಾಡಿ- ಅಜ್ಜೀ ನಾನು ಯಾರು ಹೇಳಿ ಅಂತ ಕೇಳಿದಾಗ ..ನನ್ನ ಮೊಮ್ಮಗನ ತಮ್ಮ! ಹೌದಲ್ಲೋ?- ಅಂತ ಅಜ್ಜಿ ಅವರ ಬೆನ್ನಿಗೆ ಗುದ್ದಿ, ಅವರ ಪತ್ನಿಗೆ, ನಮಸ್ಕಾರ ಮಾಡಮ್ಮಾ ನಿಂಗೂ ಆಶಿರ್ವಾದ ಮಾಡ್ತೀನಿ ಎಂದು ತಾವೇ ಹೇಳಿ, ಯಥಾ ಪ್ರಕಾರ ಮುತ್ತೈದೆ ಸಾವಿತ್ರಿಯಾಗಿ….ಶುರುಮಾಡಿದರು. ಮಧ್ಯಾಹ್ನ ಊಟ ಮುಗಿದಾಗ ಮೂರು ಗಂಟೆ. ಯಥಾಪ್ರಕಾರ ಅಜ್ಜಿಯ ಮಿಮಿಕ್ರಿ ಕಾರ್ಯಕ್ರಮ ಶುರುವಾಯಿತು. ಮೊದಲು ಊದಗಲ್ಲದ ಮಾದಕ್ಕನ ಮಾತಿನ ಶೈಲಿ ತೋರಿಸಿದರು. ಮಾದಕ್ಕ ಯಾವ ಕಾರಣಕ್ಕೋ ನರ ಸೇದಿಹೋಗಿದ್ದರಿಂದ ಬಾಯಿ ಸೊಟ್ಟ ಮಾಡಿಕೊಂಡು ಹಿಡಿದು ಹಿಡಿದು ಮಾತಾಡುತ್ತಿದ್ದಳು. ಮಾದಕ್ಕಾ ಎರಡು ನುಗ್ಗಿ ಕಾಯಿ ಕೊಡೆ..ಅಂತ ಅಮ್ಮ ಅಜ್ಜಿಯ ಮಾತಿಗೆ ಚಾಲನೆ ಕೊಟ್ಟಳು. ಅಜ್ಜಿ ಮಂಚದ ಮೇಲೆ ಕೂತಂತೆಯೇ ಮಾದಕ್ಕನ ಮಾತನ್ನು ಅಭಿನಯಿಸಿ ತೋರಿಸಿದರು. “ಅಯ್ಯಾ..ಎಲ್ಲಯ್ತವ್ವಾ ನುಗ್ಗೀಕಾಯಿ…ರಾತ್ರಿ ನಾನು ಮಕ್ಕಂಡಿದ್ನಾ…ಯಾವನೋ ನನ್ನ ಹಾಟ್ಕಳ್ಳ ಬಂದೂ ಗಿಡದಾಗಿನ ಓಟೂ ನುಗ್ಗಿಕಾಯಿ ಹರಕಂಡು ಹೋಗವ್ನೇ ಅವನ ಮನೇ ಮೂರು ಬಟ್ಟೆಯಾಗ…ಮತ್ತೆ ಗಿಡ ಹೂಕಟ್ಟಿ, ಕಾಯಿ ಹಿಡದು ಈಟುದ್ದಾ ಆಗಲಿ…ನಿಂಗೆ ಏಟು ಬೇಕು ನುಗ್ಗೀಕಾಯಿ? ನಾನೇ ಖುದ್ದು ಕೊಕ್ಕೆ ಹಾಕಿ ಹರ್ಕೊಡ್ದಿದ್ದರೆ ನಾನು ಮಾದಾಪುರದ ಮಾದಕ್ಕನೇ ಅಲ್ಲ…”. ಸಂಜೆ ಬಂದವರೆಲ್ಲಾ ತಮ್ಮ ತಮ್ಮ ಊರುಗಳಿಗೆ ಹಿಂದಿರುಗಿ ನಮ್ಮ ಮನೆಯವರು ಮಾತ್ರ ಉಳಿದೆವು. ಪ್ರತಿಮಾ ಮಂಡಕ್ಕಿ ಹುರಿದು ಖಾರ ಹಚ್ಚಿದಳು. ಎಲ್ಲಾ ಮಂಡಕ್ಕಿ ಚಪ್ಪರಿಸುತ್ತಾ ಕೂತಾಗ ನಾನು ಅಜ್ಜಿಯ ಹತ್ತಿರ ಹೋಗಿ ಅವರ ಕಿವಿಯಲ್ಲಿ ತುಟಿಯಿಟ್ಟು..ಅಜ್ಜೀ ಸರ ಹ್ಯಾಗಿದೆ? ಅಂತ ಕೂಗಿದೆ. ರೋಲ್ಡ್ ಗೋಲ್ಡ್ ಆದರೂ ಬಂಗಾರದ ಸರದ ತಲೆ ಮ್ಯಾಲೆ ಹೊಡೆಯಂಗದೆ ಅಂದರು ಅಜ್ಜಿ. “ಅಜ್ಜೀ …ಇದು ರೋಲ್ಡ್ ಗೋಲ್ಡ್ ಅಲ್ಲ, ಬಂಗಾರದ್ದು” ಅಂತ ಮತ್ತೆ ನಾನು ಕೂಗ ಬೇಕಾಯಿತು. ಅಜ್ಜಿ ಹುಳ್ಳಗೆ ನಕ್ಕು ನಂಗೆ ಅಷ್ಟು ಫರಕು ತಿಳಿಯಲ್ವಾ ಅಂದರು. ಅಜ್ಜಿಗೆ ಸರ ಬಂಗಾರದ್ದು ಎಂದು ಹೇಗೆ ನಂಬಿಸೋದು? ನನಗೆ ವಿಪರೀತ ಬೇಜಾರಾಯಿತು. “ನಿಂಗಷ್ಟೂ ತಿಳಿಯಲ್ವಾ..ನಿನ್ನ ಮೊಮ್ಮಗ ಬಂಗಾರದ ಸರ ತಂದಿದ್ರೆ ಅದನ್ನ ರೋಲ್ಡ್ ಗೋಲ್ಡ್ ಅಂತೀಯಲ್ಲ…?”- ಅಂತ ಕೆಲವರು ಅಜ್ಜಿಯ ಮೇಲೆ ಹರಿ ಹಾಯ್ದರು. ಅಜ್ಜಿ ಹೊಡೆಸಿಕೊಂಡ ಸಾಕು ನಾಯಿಯಂತೆ ಕುಂಯ್ಗುಟ್ಟಿ ನನ್ನ ಮೊಮ್ಮಗ ಏನು ತಂದುಕೊಟ್ಟರೂ ನಂಗೆ ಅದು ಬಂಗಾರದ್ದೇ …ಸುಂಗೆ ಹೋಗ್ರೇ…ಎಂದು ಕೂಗು ಹಾಕಿ, ಮುಸುಕು ಎಳೆದುಕೊಂಡು ತೆಪ್ಪಗೆ ಮಲಗಿಬಿಟ್ಟರು.]]>

‍ಲೇಖಕರು avadhi

August 12, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಚ್ ಎಸ್ ವಿ ಕಾಲಂ: ಮತ್ತೆ, ಮರೆತ ಇತಿಹಾಸದ ಮರುಗಳಿಕೆ..

ತಾವರೆಯ ಬಾಗಿಲು-೧೮ ಎರಡು ಸಾವಿರ ವರ್ಷಗಳ ಹಿಂದೆ ತೆಂಕಣಭಾರತದ ದೇಶ-ಕಾಲ-ಪರಿಸ್ಥಿತಿ ಹೇಗಿತ್ತೆಂದು ನಾವು ಊಹಿಸುವುದೂ ಸಾಧ್ಯವಿಲ್ಲ. ಮರೆತು ಹೋದ...

ಎಚ್ ಎಸ್ ವಿ ಕಾಲಂ: ಕಾವ್ಯದಲ್ಲಿ ಭಾಷೆಯಲ್ಲದ ಭಾಷೆಯ ಮಿಡುಕಾಟ..

ತಾವರೆಯ ಬಾಗಿಲು-೧೬ ಕಾವ್ಯಕ್ಕೆ ಭಾಷೆಯೇ ಮೂಲ ಸಾಮಗ್ರಿ. ಭಾಷೆಯ ಮೂಲಕ ಕವಿಗಳು ತಮ್ಮ ಲೌಕಿಕಾಲೌಕಿಕ ಅನುಭವಗಳನ್ನು ಅಭಿವ್ಯಕ್ತಿಸುತ್ತಾರೆ. ಹಾಗೆ...

16 ಪ್ರತಿಕ್ರಿಯೆಗಳು

 1. ರವೀಂದ್ರ ಮಾವಖಂಡ

  ಪ್ರೀತಿಯ ಸರ್,
  ಪ್ರತಿ ವಾರವೂ ನಿಮ್ಮ ‘ಅನಾತ್ಮ ಕಥನ’ವನ್ನು ಓದುತ್ತಿದ್ದರೂ ಪ್ರತಿಕ್ರಿಯಿಸಿರಲಿಲ್ಲ. ಆದರೆ ಸೀತಜ್ಜಿಯ ಕುರಿತ ಈ ಕಂತನ್ನು ಓದಿದಾಗ ಪ್ರತಿಕ್ರಿಸಲೇಬೇಕೆನಿಸಿತು. ಅದ್ಭುತವಾಗಿದೆ. ನಿಮ್ಮ ಪದ್ಯದ ಹಾಗೆಯೇ ಗದ್ಯವೂ ವಿಶಿಷ್ಟವಾಗಿದೆ. ಇಂಥ ನುಡಿಚಿತ್ರಗಳನ್ನು ಇನ್ನಷ್ಟು ಬರೆಯಬಹುದೇ? ನಮಸ್ಕಾರ.

  ಪ್ರತಿಕ್ರಿಯೆ
 2. ಪೂರ್ಣಪ್ರಜ್ಞ

  ಬಹಳ ಚೆನ್ನಾಗಿದೆ…….ಮೇಷ್ಟ್ರ ಈ ಕಂತನ್ನು ಓದಿ ನಮ್ಮ ಅಜ್ಜಿಯ ಜ್ನ್ಯಾಪಕ ಬಂತು. ಸೀತಜ್ಜಿಯ ತರಹವೇ ಇದ್ದರು. ಎಲ್ಲದರಲ್ಲೂ ಬಹಳ ಅಚ್ಚುಕಟ್ಟು. ಎಂಬತ್ತು ನಾಲ್ಕನೆ ವಯಸ್ಸಿನಲ್ಲೂ ಸ್ವೆಟರ್ ಹೆಣಿಯೋದು ನಿಲ್ಲಿಸಲಿಲ್ಲ! ಆದರೆ ನಾವು ಪೋಣಿಸಿ ಕೊಡಬೇಕಾಗಿತ್ತು. ಮತ್ತೆ ಹಳೇ ನೆನಪುಗಳನ್ನು ಮೆಲಕು ಹಾಕಲು ಅನುವು ಮಾಡಿಕೊಟ್ಟಿದ್ದಕ್ಕೆ ಮೇಷ್ಟ್ರಿಗೆ ಧನ್ಯವಾದಗಳು.

  ಪ್ರತಿಕ್ರಿಯೆ
 3. Shalu

  ಸರಕ್ಕೆ ದುಡ್ಡು ಮಾವನವರೇ ಕೊಟ್ಟಿರಬಹುದು. ಆದರೆ ಆಜ್ಜಿಯ ಸರ ಕೊಳ್ಳುವಾಗ ನಾನು ಜತೆಯಲ್ಲಿದ್ದೆ ಎನ್ನುವುದೇ ನನಗೆ ಹೆಮ್ಮೆಯ ವಿಷಯ

  ಪ್ರತಿಕ್ರಿಯೆ
 4. usha

  ನಮಸ್ಕಾರ ಸರ್,
  ಅನಾತ್ಮಕಥನ ಓದಿ ಬಹಳ ಖುಷಿಯಾಯಿತು. ಎಲ್ಲಾ ಮನೆಗಳಲ್ಲೂ ಇಂತಹ ಹಿರಿಜೀವಗಳಿದ್ದರೂ ಯಾರೂ ಅವರನ್ನು ನೆನಸಿಕೊಳ್ಳುವುದಿಲ್ಲ. ತುಂಬಾ ಆತ್ಮೀಯವಾಗುವಂತೆ ಬರೆದಿದ್ದೀರಿ. ಹಳೆಯ ನೆನಪುಗಳಷ್ಟು ಚಂದದ ನೆನಪುಗಳು ಬೇರಿಲ್ಲ. ನಾವೂ ಹಳೆಯ ಪುಟಗಳಿಗೆ ಸೇರಿಹೋಗುತ್ತಿರುವ ಕಾಲದಲ್ಲಿ (ಅರುವತ್ತರ ಮೇಲೆ) ಹಳೆಯ ನೆನಪುಗಳು ಕಾಡುವುದು ಜಾಸ್ತಿ ಅಲ್ಲವೇ?

  ಪ್ರತಿಕ್ರಿಯೆ
 5. usha

  ನಮಸ್ಕಾರ ಸರ್,
  ಹೇಗಿದ್ದೀರಿ?
  ಅಜ್ಜಿಯ ಅನಾತ್ಮಕಥನ ಓದಿ ಖುಷಿಯಾಯಿತು. ತುಂಬಾ ಆತ್ಮೀಯವಾಗಿ ಓದುಗರ ಹೃದಯ ತಟ್ಟುವಂತೆ ಬರೆದಿದ್ದೀರಿ. ಎಲ್ಲಾ ಮನೆಗಳಲ್ಲೂ ಇಂತಹ ಹಿರಿಯರು ಇರುತ್ತಾರೆ ಆದರೆ ಅವರನ್ನು ನೆನಸಿಕೊಳ್ಳುವವರು ಕಡಿಮೆ. ನಾವೂ ಹಳೆಯ ಪುಟಗಳಿಗೆ ಜಾರುತ್ತಿರುವಾಗ ನಮಗಿಂತ ಹಳೆಯ ಪುಟಗಳಲ್ಲಿರುವರ ನೆನಪುಗಳು ಕಾಡುವುದು ಜಾಸ್ತಿ. ಅವರ ಜೀವನದ ಸಿರಿತನ ನಮ್ಮ ಜೀವನದಲ್ಲಿಲ್ಲ ಎಂದು ಅನಿಸುತ್ತದೆ.
  ಉಷಾ ಪಿ. ರೈ

  ಪ್ರತಿಕ್ರಿಯೆ
 6. ರಾಮಚಂದ್ರ ನಾಡಿಗ್, ಕದರನಹಳ್ಳಿ

  ಸೀತಜ್ಜಿಗೆ ಕವಿ ಕೇಳ್ತಿರಲಿಲ್ಲ ನಿಜ.. ಆದ್ರೆ ಬೇರೆಯವರಿಗೆ ಕಿವಿ ಕೇಳ್ತಾ ಇರ್ಲಿಲ್ಲಾ ಅಂದುಕೊಂಡಿತ್ತೇನೋ…? ಯಾಕಂದ್ರೆ ನಮ್ಮ ಕಿವಿ ಹತ್ತಿರ ಬಂದು ಗಟ್ಟಿಯಾಗಿ ಮಾತಾಡ್ತಾ ಇತ್ತು. ಕಷ್ಟ-ಸುಖಗಳನ್ನ ಬೇರೆಯವರ ಹತ್ತಿರ ಹೇಳಿಕೊಳ್ಳದಿದ್ರೆ ಅಜ್ಜಿಗೆ ಸಮಾಧಾನ ಇರ್ತಾಇರ್ಲಿಲ್ಲ. ತನ್ನ ಮಾತು ಕೇಳೋಕೆ ಅಜ್ಜಿಗೆ ಸದಾ ಒಬ್ಬರು ಜೊತೆಗೆ ಇರಬೇಕಿತ್ತು…

  ಪ್ರತಿಕ್ರಿಯೆ
 7. Jithendra

  ಅಜ್ಜಿಯ ನೂರರಲ್ಲೂ ಬತ್ತದ ಜೀವನೋತ್ಸವ ಮೆಚ್ಚುವಂತದ್ದು…

  ಪ್ರತಿಕ್ರಿಯೆ
 8. Rajashekhar Malur

  ಮೇಷ್ಟ್ರೇ, ನನ್ನಮ್ಮ ತನ್ನ ೫ನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡಿದ್ದಳು. ಮತ್ತೆ ಅಮ್ಮ ಸೊಸೆಯಾಗಿ ಬಂದ ಎರಡು ವರ್ಷಗಳಲ್ಲೇ ಅಪ್ಪನ ತಾಯಿ ತೀರಿಕೊಂಡರು. ನನಗೆ ’ಅಜ್ಜಿ’ಯ ಪರಿಚಯವೇ ಇರಲಿಲ್ಲ. ಇನ್ನು ನನ್ನ ಮದುವೆಗೆ ಮುಂಚೆಯೇ ನನ್ನಮ್ಮ ದೈವಾಧೀನಳಾದಳು… ಹಾಗಾಗಿ, ನನ್ನ ಮಗರಾಯನೂ ಅವನ ಜೊತೆಯಲ್ಲಿಯೇ ಸದಾ ಕಾಲ ಇರುವ ಅಜ್ಜಿಯನ್ನು ನೋಡಲೇ ಇಲ್ಲ! ಈ ರೀತಿ, “ಅಜ್ಜಿ” ಎಂಬ ಪದದ ಅರ್ಥ ಈಗ ಕಳೆದ ಹದಿನಾಲ್ಕು ವರ್ಷಗಳಲ್ಲಿ ನನ್ನ ಮಗ ಮತ್ತು ನನ್ನ ಅತ್ತೆಯವರ ಪ್ರೀತಿ, ಕಿತ್ತಾಟಗಳನ್ನು ನೋಡಿದಾಗಲೇ ಸ್ವಲ್ಪ ಮಟ್ಟಿಗೆ ತಿಳಿದದ್ದು ಮಾತ್ರ! ಸೀತಜ್ಜಿಯ ಕಥೆ ಕೇಳಿ ನಾನೂ ಅಜ್ಜಿಯೊಡನೆ ಹುಟ್ಟಿದಹಬ್ಬ ಆಚರಿಸಿದ ಅನುಭವವಾಯಿತು!
  ಹೆಚ್ಚು ಸವಿ ಮೊಮ್ಮಗ ಏನು ಬರೆದ್ರೂ ಅದು ಬಂಗಾರದ್ದೇ… ಸುಂಗೆ ಹೋಗ್ರೇ…
  ಮಾಳೂರು ರಾಜಶೇಖರ

  ಪ್ರತಿಕ್ರಿಯೆ
 9. sritri

  ಶತಾಯುಷಿ ಸೀತಜ್ಜಿಗೆ ಅಭಿನಂದನೆಗಳು. ತುಂಬಾ ಆತ್ಮೀಯವೆನಿಸುವ ಬರವಣಿಗೆ ನಿಮ್ಮದು. ಸೀತಜ್ಜಿಯ ಮೊಮ್ಮಗನಾದ ನೀವು ಕೂಡ ನೂರಾರು ವರ್ಷಗಳು ನಮ್ಮೊಂದಿಗಿರಬೇಕೆಂದು ಹಾರೈಸುತ್ತೇನೆ.

  ಪ್ರತಿಕ್ರಿಯೆ
 10. Nalini Maiya

  Very nice!!! What a nice character sketch of Seethajji! I miissed reading the articles on Anantha Swamy and your wife Rajalakshmi. Today when I read them I was in tears. So often it is pain that gives depth to one’s life! Beautifully written.
  Nalini

  ಪ್ರತಿಕ್ರಿಯೆ
 11. my pen from shrishaila

  ಎಚ್ಚೆಸ್ವಿಯವರೆ,
  ನಿಮ್ಮ ಸೀತಜ್ಜಿಯ ವರ್ಣನೆ ಓದಿದ ಮೇಲೆ ಅವರನ್ನು ಕಾಣಬೇಕೆಂದನಿಸಿತು. ನಾವು ನಮ್ಮ ತಾಯಿ ಬೇರನ್ನು ಮರೆತರೆ ನಮ್ಮ ಜೀವನಕ್ಕೆ ಅರ್ಥವೇ ಇಲ್ಲದಂತಾಗುತ್ತದೆ. ನಿಮ್ಮ ಬರಹ ತೊಂಬಾ ಚೆನ್ನಾಗಿತ್ತು.
  ಶೈಲಜ

  ಪ್ರತಿಕ್ರಿಯೆ
 12. ಕೃಷ್ಣ, ಲೋಚನ ಬಳಗ, ಚನ್ನಗಿರಿ.

  ನಾನು, ಅಣ್ಣ ರಮೇಶ್ ಮತ್ತು ಸ್ನೇಹಿತರು ಹೊದಿಗೆರೆ ಮನೆಗೆ ಸುಮಂತಣ್ಣನನ್ನು ಮಾತನಾಡಿಸಲು ಹೋದಾಗಲೆಲ್ಲಾ ಸೀತಜ್ಜಿಯ ಕಾಲಿಗೆ ನಮಸ್ಕರಿಸಿದಾಗ : ರಾಮಕೃಷ್ಣರು ಮನೆಗೆ ಬಂದರು ಬಾಗಿಲ ತೆರೆಯಿರೇ….. ಮತ್ತು ಕೃಷ್ಣಾ ನೀ ಬೇಗನೆ ಬಾರೋ…… ಎಂದು ಪ್ರೀತಿಯಿಂದ ಸೀತಜ್ಜಿ ಜೊತೆ ರತ್ನಜ್ಜಿಯೂ ದ್ವನಿಗೂಡಿ ಹಾಡಿದ್ದು ಈಗಲೂ ನನ್ನ ಕಿವಿಯಲ್ಲಿ ಕೇಳಿಸುತ್ತಿರುವಂತಿದೆ. ಶತಾಯುಷಿ ಅಜ್ಜಿ ಪ್ರೀತಿಯ ಅಮಹಾಮಾತೆಯ ಆಶಿರ್ವಾದ ಪಡೆದ ನಾವೇ ಧನ್ಯರು….!

  ಪ್ರತಿಕ್ರಿಯೆ
 13. anupamaprasad

  ನಮಸ್ತೆ ಸರ್,
  ಅನಾತ್ಮ ಕಥನ ಯಾವಾಗಲೂ ಓದುತ್ತಿದ್ದೆ. ಪ್ರತಿಕ್ರಿಯೆ ಹಾಕಿರಲಿಲ್ಲ. ಸೀತಜ್ಜಿಯ ಬಗ್ಗೆ ಓದಿದಾಗ ಗತಿಸಿದ ನನ್ನಜ್ಜ, ಅಜ್ಜಿಯ ನೆನಪು ಕಾಡಿತು. ಸೀತಜ್ಜಿಯ ಮುಗ್ದತೆಗೆ ಹೃದಯ ತುಂಬಿದ ನಗು ಬಂತು. ಅಜ್ಜಿಯ ಒಡನಾಟ ಮನ ದಣಿಯೆ ಸವಿದಿದ್ದೀರಲ್ಲ ಸರ್! ನಿಮ್ಮ ಬರೆಹದಂತೆ ನಿಮ್ಮ ವ್ಯಕ್ತಿತ್ವದಲ್ಲಿರುವ ಹೃದಯವಂತಿಕೆಯ ಅನುಭವ ಕಳೆದ ಶನಿವಾರ ಬೆಂಗಳೂರಲ್ಲಿ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅನುಭವಿಸಿದೆ. ಸರಿಯಾಗಿ ಇಂದಿಗೆ ವಾರವುರುಳಿತು. ಆದರೆ, ಆ ನೆನಪು ನನ್ನಲ್ಲಿ ಮರಯಲಾಗದ ತಾಜಾ ಅನುಭವವಾಗಿ ಉಳಿಯುತ್ತದೆ.
  ಅನುಪಮಾಪ್ರಸಾದ್

  ಪ್ರತಿಕ್ರಿಯೆ
 14. ಪ್ರಸನ್ನ ಕುಲಕರ್ಣಿ

  ಮೇಷ್ಟ್ರೇ ನಮಸ್ಕಾರ,
  ನಿಮ್ಮ ಅನಾತ್ಮ ಕಥನ ತಪ್ಪದೇ ಓದುತ್ತಿದ್ದೇನೆ. ಕೆಲವೊ೦ದನ್ನ೦ತೂ ಮೂರ್ನಾಲ್ಕು ಬಾರಿ ಓದಿದ್ದೇನೆ. ಅದ್ಭುತವಾಗಿ ಸಾಗುತ್ತಿದೆ.
  ನಮ್ಮ ಮನೆಯಲ್ಲೂ ನನ್ನ ಅಜ್ಜಿ ಇದ್ದಾರೆ. ಅವರಿಗೆ ಈಗ ೮೧ ವರ್ಷ. ಕಣ್ಣು ಸ್ವಲ್ಪ ಮಬ್ಬು, ಆದರೆ ಕಿವಿ ತು೦ಬಾ ಚುರುಕು. ತಿ೦ಗಳು ಹಿ೦ದೆ ಹುಟ್ಟಿದ ನನ್ನ ಮಗುವಿನ ಲಾಲನೆ ಪಾಲನೆ ಅಜ್ಜಿಯ ಮು೦ದಾಳತ್ವದಲ್ಲಿ ನಡೆಯುತ್ತಿದೆ. ಒ೦ಬತ್ತು ಮಕ್ಕಳನ್ನು ಹೆತ್ತ ಆ ಮಹಾತಾಯಿ ಮನೆಯಲ್ಲಿರಿವುದರಿ೦ದ ನಮಗೂ ನೆಮ್ಮದಿ.

  ಪ್ರತಿಕ್ರಿಯೆ
 15. Prashanth Ignatius

  ಸಾರ್, ನಿಮ್ಮಜ್ಜಿ ಬಗ್ಗೆ ಓದಿ ನಮ್ಮ ತಾತ ಅಜ್ಜಿ ನೆನಪು ಬಂದು ಬಿಡ್ತು ಸಾರ್. ನಾವೆಲ್ಲಾ ಬೆಳೆದು ನಿಂತ ಮೇಲೂ ಸ್ನಾನ ಮಾಡುವಾಗ ನಮ್ಮಜ್ಜಿ ಬಿಡದೆ ಬೆನ್ನು ತಿಕ್ಕಿ ಬಿಸಿ ನೀರು ಸುರಿದು ಸಾಕಾ ಎಂದಾಗ ಆಗುತ್ತಿದ್ದ ಆ ಬೆಚ್ಚನೆಯ ಅನುಭವ ನಿಮ್ಮ ಈ ಲೇಖನ ಓದಿದಾಗ ಆಯ್ತು ನೋಡಿ.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: