ಎಚ್ಹೆಸ್ವಿ ಬರೆವ ಅನಾತ್ಮ ಕಥನ: ಸುರಿಮಳೆಯ ಇರುಳಲ್ಲಿ ಪಡುವಲಕಾಯಿ ತವ್ವೆ

ಅಳಿಯಲಾರದ ನೆನಹು-೬

ಎಚ್.ಎಸ್.ವೆಂಕಟೇಶಮೂರ್ತಿ

ನಮ್ಮ ಪುಟ್ಟಪ್ಪಜ್ಜನ ರಸಿಕತೆಯ ಬಗ್ಗೆ ನಿಮಗೆ ನಾನು ಹೇಳಬೇಕು.ನಮ್ಮ ಅಜ್ಜಿಯ ತಂದೆ ಪುಟ್ಟಪ್ಪಜ್ಜ. ನಾನು ಪುಟ್ಟ ಹುಡುಗನಾಗಿದ್ದಾಗ ಮುಪ್ಪಿನ ಅಂಚಿನಲ್ಲಿ ಇದ್ದ ವ್ಯಕ್ತಿ. ತನ್ನ ಕೋಪ ತಾಪ ಆಟಾಟೋಪಗಳಿಗೆ ಸುತ್ತಲ ಹತ್ತುಹಳ್ಳಿಗೆ ಪ್ರಸಿದ್ಧನಾಗಿದ್ದವನು. ನಾಕೂವರೆ ಅಡಿ ಎತ್ತರದ ಕುಳ್ಳ ಆಸಾಮಿ. ಯೌವನದಲ್ಲಿ ಬಯಲಾಟದಲ್ಲಿ ಹೆಣ್ಣು ಪಾತ್ರ ಮಾಡುತ್ತಿದ್ದನಂತೆ. ಗೆಜ್ಜೆಕಟ್ಟಿಕೊಂಡು ಗಿಲಿ ಗಿಲಿ ಗಿಲಿ ಸದ್ದು ಮಾಡುತ್ತಾ ಪಟ್ಟಪ್ಪ ಅಟ್ಟದ ಮೇಲೆ ಬಂದನೆಂದರೆ ಗಂಡಸರಿರಲಿ ಹೆಂಗಸರೂ ಅವನಿಗೆ ಮೋಹಿತರಾಗುತ್ತಿದ್ದರಂತೆ. ಸ್ತ್ರೀಪಾತ್ರಧಾರಿ ಅಪ್ಪನ ಚೆಲುವನ್ನು ನಮ್ಮ ಭೀಮಜ್ಜಿ ನಮಗೆ ತನ್ಮಯರಾಗಿ ವರ್ಣಿಸುತ್ತಾ ಇದ್ದರು.

ಕೆಲ್ಲೋಡಿನಲ್ಲಿ ಶಾನುಭೋಗರಾಗಿದ್ದಾಗ ಪುಟ್ಟಪ್ಪಜ್ಜ ನಮಗೆ ಅತ್ಯಂತ ಪ್ರಿಯರಾದ ವ್ಯಕ್ತಿಯಾಗಿದ್ದರು. ಕಾರಣ ಅವರು ರಸವತ್ತಾಗಿ ಮಹಾಭಾರತದ ಕಥೆಗಳನ್ನು ನಮಗೆ ಹೇಳುತ್ತಾ ಇದ್ದರು. ಕುಮಾರವ್ಯಾಸ ಭಾರತ ಅವರಿಗೆ ಹೆಚ್ಚು ಕಮ್ಮಿ ಬಾಯಿಗೆ ಬರುತ್ತಾ ಇತ್ತು. ಅದರಲ್ಲೂ ವಿರಾಟಪರ್ವ ಅವರಿಗೆ ಬಹು ಪ್ರಿಯವಾದ ಪರ್ವವಾಗಿತ್ತು. ಸಾಮಾನ್ಯವಾಗಿ ಮಕ್ಕಳ ಮೇಲೆ ಅವರು ರೇಗಿ ಕೂಗಾಡಿದ್ದು ಅಪರೂಪ. ಅವರ ಕೋಪಕ್ಕೆ ಯಾವಾಗಲೂ ಈಡಾಗುತ್ತಿದ್ದ ವ್ಯಕ್ತಿ ಅವರ ಮೂರನೇ ಹೆಂಡತಿಯಾಗಿ ಮನೆಗೆ ಬಂದಿದ್ದ ನರಸಮ್ಮಜ್ಜಿ. ನರಸಮ್ಮಜ್ಜಿಗೆ ಇಪ್ಪೆಮೆಳೆಯಂತೆ ನರಸಲು ಮೈಕಟ್ಟು. ಎಷ್ಟು ಮಾತ್ರಕ್ಕೂ ಚೆಲುವೆಯೇನಲ್ಲ. ಆದರೆ ಕೆಲಸದಲ್ಲಿ ಮಹಾ ಗಟ್ಟಿಗಿತ್ತಿ.

ನಮ್ಮ ಪುಟ್ಟಪ್ಪಜ್ಜ ಈ ಕಿರುವಯಸ್ಸಿನ ಹೆಂಡತಿಯ ಮೇಲೆ ಯಾಕೆ ಯಾವಾಗಲೂ ಉರಿದು ಬೀಳುತ್ತಿದ್ದರು ಎಂಬುದನ್ನು ನಾನು ಊಹಿಸಲಾರೆ. ಹಳೆಯ ಕಾಲದವರಿಗೆ ಅದು ಹೆಂಡತಿಯನ್ನು ಆಳುವ ಕ್ರಮವೇ ಆಗಿತ್ತೋ ಏನು ಸುಡುಗಾಡೋ. ಭರ್ತ್ಸನೆ ಬೈಗುಳದ ಜೊತೆಗೆ ಹೊಡೆತ ಬಡಿತಗಳು ಆಗ ಸಾಮಾನ್ಯವಾಗಿದ್ದವು. ಏನೇ ಆಗಲಿ ನಮ್ಮ ನರಸಮ್ಮಜ್ಜಿ ಮಾತ್ರ ಅಳುತ್ತ ಅಳುತ್ತಲೂ ತಮ್ಮ ಕೆಲಸ ತಾವು ತೂಗಿಸಿಕೊಂಡು ಹೋಗುವವರೇ! ಒಂದು ದಿನ ಅವರು ಮೂತಿ ದಪ್ಪ ಮಾಡಿಕೊಂಡು ಮೂಲೆ ಹಿಡಿದು ಮಲಗಿದ್ದು ನಾನು ನೋಡಿಲ್ಲ.

ಕಲೆ: ಸೃಜನ್

ನರಸಮ್ಮಜ್ಜಿ ಸೆಜ್ಜೆ ರೊಟ್ಟಿ ಬಡಿಯುವುದರಲ್ಲಿ ನಿಷ್ಣಾತರಾಗಿದ್ದರು. ರಜಾ ಬಂತೆಂದರೆ ನಾವು ಕೆಲ್ಲೋಡಿಗೆ ಹೋಗುತ್ತಿದ್ದೆವಲ್ಲ! ಅಡುಗೆ ಮನೆ ಮೂಲೆಯಲ್ಲಿ ಒಂದು ಗೂಟಕ್ಕೆ ನೇತುಹಾಕಿದ್ದ ದೊಡ್ಡ ಬಟ್ಟೆಯ ಗಂಟಲ್ಲಿ ಪೇರಿಸಿಟ್ಟ ಸೆಜ್ಜೆ ರೊಟ್ಟಿಗಳು! ಈವತ್ತಿನ ದುಬಾರಿ ಬಿಸ್ಕತ್ತುಗಳನ್ನು ನಮ್ಮ ಅಜ್ಜಿಯ ಸೆಜ್ಜೆ ರೊಟ್ಟಿ ಮುಂದೆ ನಿವಾಳಿಸಿ ಒಗೆಯಬೇಕು. ಗರಿ ಗರಿ ಗರಿಯಾಗಿ ನಾಲಗೆ ಮೇಲಿಟ್ಟರೆ ಕರಗುವಂತಿರುತ್ತಾ ಇದ್ದವು. ಕೆಲ್ಲೋಡಿಗೆ ಹೋದಾಗ ಮೊದಲು ನಾನು ಓಡುತ್ತಿದ್ದುದೇ ಅಡುಗೆ ಮನೆಗೆ. ಅಜ್ಜಿ ನನ್ನನ್ನು ಅದ್ಯಾಕೋ “ಕುಬೇರಾ…” ಅಂತ ಕರೆಯುತ್ತಾ ಇದ್ದರು. ಏನೋ ಕುಬೇರಾ…ಸೆಜ್ಜೆ ರೊಟ್ಟಿ ತಿನ್ನುತೀ? ಈಗಲೇ ಕೊಡಬೇಡ ಚಿಕ್ಕಮ್ಮಾ …ರಾತ್ರಿ ಊಟದ ಜತೆ ತಿನ್ನಲಿ ಬೇಕಾದರೇ..ಅಂತ ನಮ್ಮ ಅಮ್ಮ ಹೊರಗಿನಿಂದಲೇ ಬೊಬ್ಬೆ ಹಾಕುತ್ತಿದ್ದಳು. ರೊಟ್ಟಿ ಪಟ್ಟಿ ಆಗೋದಿಲ್ಲ ಅವನಿಗೆ..ಸುಮ್ಮಗೆ ಆಸೆ ಪಡ್ತಾನೆ ಅಷ್ಟೆ…

ಸಂಜೆ ನಾವೆಲ್ಲಾ ಹುಡುಗರು ಅಜ್ಜನ ಕೈ ಹಿಡಿದುಕೊಂಡು ಗುಡಿಗೆ ಹೋಗುತ್ತಾ ಇದ್ದೆವು. ಗುಡಿಯ ಪೌಳಿಯಲ್ಲೇ ಅಜ್ಜನ ಮನೆ ಇದ್ದುದರಿಂದ ಎರಡೇ ನಿಮಿಷದ ಕಾಲ್ನಡಿಗೆ. ಬಹಳ ಜನ ಭಕ್ತಾದಿಗಳು ನಡೆದುಕೊಳ್ಳೋ ಪ್ರಸಿದ್ಧವಾದ ಹನುಮಪ್ಪನ ಗುಡಿ ಅದು. ಅಲ್ಲಿ ಇಟ್ಟಿದ್ದ ಡೊಳ್ಳು ಢಮ ಢಮ ಬಾರಿಸುತ್ತಿದ್ದೆವು ನಾವು. ಅಜ್ಜ..ಉಷ್..ಇಲ್ಲಿ ಗಲಾಟೆ ಮಾಡ ಬಾರದು… ಹನುಮಪ್ಪ ರಾಮಧ್ಯಾನ ಮಾಡ್ತಾ ಇರತಾನೆ…! ಅವನಿಗೆ ಸಿಟ್ಟು ಬರತ್ತೆ ಅಷ್ಟೆ..ಅಂತ ನಮ್ಮನ್ನ ಬೆದರಿಸೋರು. ಗರ್ಭಗುಡಿಯಲ್ಲಿ ಆಳೆತ್ತರದ ಹನುಮಪ್ಪ ಆಗ ನಮ್ಮನ್ನು ಕೆಕ್ಕರಿಸಿ ನೋಡಿದ ಹಾಗೆ ನಮಗೆ ಭ್ರಮೆಯಾಗುತಾ ಇತ್ತು. ಹನುಮಪ್ಪನಿಗೆ ತೆಳ್ಳಗೆ ಕಡ್ಡಿಯ ಹಾಗೆ ಇದ್ದ ಒಬ್ಬ ಪೂಜಾರಿ ಇದ್ದ. ಅವನು ಆರತಿ ಎತ್ತಿ ನಮ್ಮ ಅಜ್ಜನಿಗೆ ಮೊದಲು, ಆಮೇಲೆ ನಮಗೆಲ್ಲ ಮಂಗಳಾರತಿ ಕೊಡೋನು. ಅಜ್ಜ ಅಲ್ಲೇ ಮೂಲೆಯಲ್ಲಿ ಇರುತ್ತಿದ್ದ ಮಣೆಯ ಮೇಲೆ ಕೂತು , ಹಚ್ಚಿಟ್ಟ ಕಾಲು ದೀಪದ ಬೆಳಕಲ್ಲಿ ಸ್ವಲ್ಪ ಹೊತ್ತು ಭಾರತ ಓದೋರು. ಆಗ ಮಾತ್ರ ನಾವು ಗಪ್ ಚುಪ್ ಗುಡಾಣ ಚುಪ್! ಅರ್ಥವಾಗುತ್ತೋ ಬಿಡುತ್ತೋ ಕೈ ಕಟ್ಟಿಕೊಂಡು ಎಲ್ಲಾ ಅಜ್ಜನ ಮುಂದೆ ಕೂತುಕೊಳ್ಳಬೇಕು. ಭಾರತ ಓದಿದ್ದಾದ ಮೇಲೆ ಅಜ್ಜ ಪುಸ್ತಕಕ್ಕೆ ಊದುಬತ್ತಿ ಬೆಳಗಿ ನಮಗೆಲ್ಲ ಪ್ರಸಾದ ಅಂತ ಕೆಂಪು ಕಲ್ಲು ಸಕ್ಕರೆ ಕೊಡೋರು. ನಾವು..ಕಲ್ಲುಸಕ್ಕರೆ ಚೀಪುತ್ತಾ ಮನೆಗೆ ಬರುತ್ತಾ ಇದ್ದೆವು. ನಾವು ಬರೋವಷ್ಟರಲ್ಲಿ ಅಜ್ಜಿ ಬಿಸಿ ಬಿಸಿಯಾಗಿ ನವಣಕ್ಕಿ ಅನ್ನ , ಸೊಪ್ಪಿನ ಸಾರು ಮಾಡಿರೋರು. ಕುಬೇರಾ…ನಿನಗೆ ರೊಟ್ಟಿ ಬೇಕೋ ಅನ್ನಾನೋ..? ಅನ್ನೋರು. ನಾನು ರೊಟ್ಟಿ ಎಂದು ಕೂಗಿ ಮೂರು ಬಾರಿ ಕುಪ್ಪಳಿಸುತ್ತಾ ಇದ್ದೆ.

ನಾನು ಅಜ್ಜನ ಮರಿಮಗನಾಗಿದ್ದರೂ, ಅವರ ಮೂರನೇ ಹೆಂಡತಿಗೆ ಹುಟ್ಟಿದ್ದ ಮಕ್ಕಳು ನನ್ನ ವಯಸ್ಸಿನವರೇ ಆಗಿದ್ದು ನನಗೆ ಅಚ್ಚುಮೆಚ್ಚಿನ ಗೆಳೆಯರಾಗಿದ್ದರು. ಪ್ರಾಣಿ, ಸತ್ತಿ, ರಾಮ, ಚಂದ್ರ ಹೀಗೆ ಮನೆಯ ತುಂಬ ಮಕ್ಕಳು ತುಂಬಿಕೊಳ್ಳುತ್ತಾ ಇದ್ದೆವು. ರಜಾಕಾಲವಾದುದರಿಂದ ಅಜ್ಜನ ಮೊದಲ ಹೆಂಡತಿಯ ನಾಕು ಮಂದಿ ಹೆಣ್ಣು ಮಕ್ಕಳ ಮೊಮ್ಮಕ್ಕಳೆಲ್ಲಾ ಬಂದಿರುತ್ತಿದ್ದವು. ನಮಗೆ ಏನೇನು ಸಂಬಂಧ ಹೇಳುವುದು ಕಷ್ಟವಾಗ್ತಿತ್ತು. ನನ್ನ ವಯಸ್ಸಿನವನೇ ಆದ ಅಜ್ಜನ ಮೂರನೇ ಹೆಂಡತಿಯ ಮೊದಲ ಮಗ ನನಗಿಂತ ಎರಡು ವರ್ಷಕ್ಕೆ ಮಾತ್ರ ದೊಡ್ಡವನು. ನನ್ನ ಅಜ್ಜಿಯ ತಂಗಿಯರ ಮಕ್ಕಳು ವಾವೆಯಿಂದ ನನಗೆ ಚಿಕ್ಕಮ್ಮಂದಿರೋ, ಮಾವಂದಿರೋ ಆಗಬೇಕು. ಆದರೆ ಅವರೆಲ್ಲಾ ನನ್ನ ವಯಸ್ಸಿನವರು. ಕೆಲವರು ನನಗಿಂತ ಚಿಕ್ಕವರು. ತುಂಟನಾಗಿದ್ದ ನಾನು ನನಗಿಂತ ಒಂದಂಗುಲವಷ್ಟೇ ಎತ್ತರವಿದ್ದ ಪ್ರಾಣಿಯನ್ನು ಹೊಡೆದನೆಂದರೆ, ತೆಳ್ಳಗೆ ನರಪೇತಲನಾಗಿದ್ದ ಅವನು, ನೀನು ನನಗೆ ಮೊಮ್ಮಗ ಆಗಬೇಕು…ನೀನು ನನಗೆ ನಮಸ್ಕಾರ ಮಾಡಬೇಕೇ ವಿನಾ ಹೊಡೆಯೋದು ಬಡಿಯೋದು ಮಾಡಕೂಡದು ಎಂದು ಗಟ್ಟಿಯಾಗಿ ಅಳಲಿಕ್ಕೆ ಶುರು ಹಚ್ಚೋನು. ನಮ್ಮ ಪುಟ್ಟಪ್ಪಜ್ಜ ಮೂರು ದಶಕದಲ್ಲಿ ಮೂರು ಮದುವೆ ಮಾಡಿಕೊಂಡಿದ್ದರಿಂದ ಮಕ್ಕಳು ಮೊಮ್ಮಕ್ಕಳ ಸಂಬಂಧಗಳು ಹೀಗೆ ಏರುಪೇರಾಗಿ ಹೋಗಿದ್ದವು!ನನ್ನ ಚಿಕ್ಕಮ್ಮ ನನಗಿಂತ ಎರಡು ವರ್ಷ ಚಿಕ್ಕವಳಿದ್ದಳು. ನನ್ನ ಸೋದರ ಮಾವ ನನ್ನ ವಾರಿಗೆಯವ. ನನ್ನ ಅಜ್ಜಂದಿರು ಇಬ್ಬರು ಇನ್ನೂ ಆರನೇ ಕ್ಲಾಸಲ್ಲಿ ಇದ್ದಾಗ ನಾನು ಏಳನೇ ಕ್ಲಾಸಲ್ಲಿ ಇದ್ದೆ! ಒಂದು ತಮಾಷೆಯ ಪ್ರಸಂಗ ನನಗೆ ಮರೆಯಲಿಕ್ಕೇ ಸಾಧ್ಯವಿಲ್ಲ. ನನ್ನ ಅಜ್ಜಿಯ ತಂಗಿಯ ಮಗಳು, ನಮ್ಮ ಪುಟ್ಟಜ್ಜನ ಕೊನೆಯ ಮಗನಿಗೆ ಯಾವಾಗಲೂ ಕಾಡುತಾ ಇದ್ದಳು. ನಮ್ಮ ಚಿಕ್ಕಮ್ಮ ಹದಿನಾರು ವಯಸ್ಸಿನ ತರುಣಿ. ನಮ್ಮ ಪುಟ್ಟಪ್ಪಜ್ಜನ ಕಿರಿಮಗ ಎಂಟು ವರ್ಷದವನು. ನಮ್ಮ ಚಿಕ್ಕಮ್ಮ ಅವನ ಬೆನ್ನು ಬಿದ್ದು ನೀನು ನನಗೆ ಸೋದರ ಮಾವ . ನಾನು ನಿನ್ನೇ ಮದುವೆಯಾಗೋದು! ಅಂದರೆ ಈ ಹುಡುಗ ಕೇಳೋನು. ನೀನು ಎಷ್ಟು ಎತ್ತರ ಇದ್ದೀ… ನೀನು ನನ್ನ ಎತ್ತಿಕೊಂಡು ತಾಳಿಕಟ್ಟಿಸಿಕೋತೀಯಾ..?ಎಲ್ಲರೂ ಕೇಕೆ ಹಾಕಿ ನಗೋರು. ನಮ್ಮ ಪುಟ್ಟಪ್ಪಜ್ಜನಿಗೆ ಮೈಕಡಿತದ ಕಾಯಿಲೆ ಇತ್ತು . ಅವರು ಪಂಚೆ ಎತ್ತಿ ಪರ ಪರ ಕಾಲು ಕೆರೆದುಕೊಳ್ಳುತ್ತಾ …ಅದೇನೆ ಅದು ತಮಾಷೆ… ನಂಗೂ ಹೇಳ್ರೇ…ಎನ್ನುತ್ತಾ ಅಡುಗೆ ಮನೆಗೆ ಬರೋರು…ಅವರು ಕೆರೆದೂ ಕೆರೆದೂ ಕಾಲು ತುಂಬ ಬಿಳೀ ಪಟ್ಟೆ ಕಾಣುತಾ ಇದ್ದವು. ಕೆರೆಯುವಾಗ ಆಗುವ ಪರಪರ ಸದ್ದು ನನ್ನ ಮೈ ಜುಮ್ಮುಗುಟ್ಟಿಸುತ್ತಾ ಇತ್ತು.

ನಮ್ಮ ಪುಟ್ಟಪ್ಪಜ್ಜ ಊಟದಲ್ಲಿ ಮಹಾ ರಸಿಕರು. ರೊಟ್ಟಿ, ಗಡುಸೊಪ್ಪು, ಬದನೇಕಾಯಿ ಪಲ್ಯ, ಮೊಸರನ್ನ ಹೊತ್ತುಕೊಂಡು ಬೆಳ್ದಿಂಗಳಲ್ಲಿ ಎಲ್ಲಾ ನದೀತೀರಕ್ಕೆ ಹೋಗುತಾ ಇದ್ದೆವು.ಮನೆಯಿಂದ ಒಂದೇ ಫರ್ಲಾಂಗು ದೂರದಲ್ಲಿ ವೇದಾವತಿ ತೆಳ್ಳಗೆ ಹರಿಯುತಾ ಇದ್ದಳು. ಆ ನದಿಯ ಮೇಲೆ ಏಳು ಕಣ್ಣಿನ ಸೇತುವೆ ಇತ್ತು. ಮಧ್ಯದ ಮೂರು ಕಣ್ಣಲ್ಲಿ ನೀರು ಬತ್ತಿದ್ದೇ ನಾನು ನೋಡಿರಲಿಲ್ಲ. ಅಲ್ಲಿ ನಾವೆಲ್ಲಾ ಮರಳ ದಂಡೆ ಮೇಲೆ ಕೂತು ಬುತ್ತಿ ಉಣ್ಣುತ್ತಿದ್ದೆವು. ನೀರು ಮನೆಯಿಂದ ಒಯ್ಯುತ್ತಾ ಇರಲಿಲ್ಲ. ನದಿಯ ನೀರು ಸ್ವಚ್ಛವಾಗಿತ್ತು. ನೀರಲ್ಲಿ ಕಾಲಿಟ್ಟರೆ ಬುಳು ಬುಳು ಮೀನುಗಳು ಪಾದಕ್ಕೆ ಅಮರಿಕೊಳ್ಳುತ್ತಾ ಇದ್ದವು. ರೊಟ್ಟಿ ಚೂರು ನೀರಿಗೆ ಬಿಸಾಕಿದರೆ ಅದೆಷ್ಟು ಮೀನುಗಳಪ್ಪ ಅವನ್ನು ಎತ್ತಿಹಾಕಲು ಬರುತ್ತಾ ಇದ್ದುದು! ನಾವು ಹುಡುಗರು ಅಲ್ಲೇ ಮರಳಲ್ಲಿ ಬೆರಳುಗಳಲ್ಲೇ ಸಣ್ಣ ಸಣ್ಣ ಬಾವಿ ತೋಡಿ ಜುಳು ಜುಳು ಮೇಲೆ ಬರುತ್ತಾ ಇದ್ದ ನೀರು ಹೊಟ್ಟೆತುಂಬಾ ಕುಡಿಯುತ್ತಿದ್ದೆವು. ಹಳ್ಳಿಯಲ್ಲಿ ಬಾವಿಗಳಿದ್ದರೂ ಕುಡಿಯುವ ನೀರಿಗಾಗಿ ಜನ ನದಿಗೇ ಬರುತ್ತಾ ಇದ್ದರು. ತೊರೆ ನೀರಿಗೆ ಬೇಯದೇ ಇರೋ ಬೇಳೆಯೇ ಇಲ್ಲ..ಎಂದು ಹೆಂಗಸರು ಮಾತಾಡಿಕೊಳ್ಳೋರು. ಪೂಜೆಗೆ ವೇದಾವತಿ. ದನಕರುಗಳಿಗೆ ವೇದಾವತಿ. ಕೈದೋಟಗಳಿಗೆ ವೇದಾವತಿ. ಸ್ನಾನಕ್ಕೆ ವೇದಾವತಿ. ಕಜ್ಜಿ ಕುರು ಆದ ಮಕ್ಕಳ ಆರೈಕೆಗೂ ವೇದಾವತಿಯೇ. ನಮ್ಮ ರಾಮನಿಗೆ ಕಜ್ಜಿಯಾಗಿ ಏನೇನು ಔಷಧಪತ್ಯಕ್ಕೂ ಜಗ್ಗಲಿಲ್ಲವಂತೆ. ಆಗ ನಮ್ಮ ದೊಡ್ಡಜ್ಜಿ ರಾಮನನ್ನು(ಅವರ ತಂಗಿಯ ಮಗ) ಕೆಲ್ಲೋಡಿಗೆ ಕರೆಸಿಕೊಂಡು ಒಳ್ಳೆ ನಡೂ ಮಧ್ಯಾಹ್ನ ತೊರೆಗೆ ಕರೆದುಕೊಂಡು ಹೋದರಂತೆ. ಅಲ್ಲಿ ಈ ಹುಡುಗನ ಅಂಗಿ ಚಡ್ಡಿ ಎಲ್ಲ ಕಳಚಿ ಕಂಠ ಮಟ್ಟ ನೀರಲ್ಲಿ ನಿಲ್ಲಿಸಿದರಂತೆ ನೊಡಿ ಐದು ನಿಮಿಷ. ನೂರಾರು ಮೀನುಗಳು ಮುತ್ತಿಕೊಂಡಿದ್ದೇ ಮುತ್ತಿಕೊಂಡಿದ್ದು. ಕಜ್ಜಿಗುಳ್ಳೆಗಳೆಲ್ಲಾ ಒಡೆದು ಕೊಳೆಯನ್ನೆಲ್ಲಾ ಅಂಗುಲಂಗುಲದ ಆ ಮೀನು ಗುಳುಂ ಮಾಡಿಬಿಟ್ಟಿದ್ದವಂತೆ. ಆಮೇಲೆ ದೊಡ್ಡಜ್ಜಿ ರಾಮನ ಮೈ ಹತ್ತಿ ಬಟ್ಟೆಯಲ್ಲಿ ಮೆಲ್ಲಗೆ ಒರೆಸಿ ಹಸಿರು ಮುಲಾಮು ಹಚ್ಚಿ ಮನೆಗೆ ಕರೆದುಕೊಂಡು ಬಂದರಂತೆ. ಹೀಗೆ ಒಂದು ವಾರ ಮಾಡೋವಷ್ಟರಲ್ಲಿ ಹುಡುಗ ಕಜ್ಜಿಯೆಲ್ಲಾ ಹೋಗಿ ಚೊಕ್ಕಚಿನ್ನವಾಗಿಬಿಟ್ಟನಂತೆ!

ನಾವು ಕಡೇ ಬಾರಿ ಕೆಲ್ಲೋಡಿಗೆ ಹೋದಾಗ ಒಳ್ಳೆ ಮಳೆಗಾಲ. ನಡು ಮಧ್ಯಾಹ್ನವೇ ಆಕಾಶಕ್ಕೆ ಮುಚ್ಚಿಗೆ ಹಾಕಿದಂತೆ ಕರೀಮೋಡಗಳು ಗೇರಾಯಿಸಿಬಿಟ್ಟಿವೆ. ಅಜ್ಜ ಜಮಾಬಂದಿಗೆ ಅಂತ ಹೊಸದುರ್ಗಕ್ಕೆ ಹೊಗಿದ್ದಾರೆ. ಇನ್ನು ಕಡೇ ಬಸ್ಸಿಗೇ ಅವರು ಬರೋದು. ಅಷ್ಟರಲ್ಲಿ ಆಕಾಶದಲ್ಲಿ ಮಿಂಚು ಗುಡುಗಿನ ಆರ್ಭಟವೇ ಆರ್ಭಟ. ಸೂರ್ಯ ಇನ್ನೂ ಪಶ್ಚಿಮದಲ್ಲಿ ಇದ್ದಾನೋ ಮುಳುಗಿಯೇ ಹೋದನೋ ಏನೂ ಗೊತ್ತಾಗುವಂತಿಲ್ಲ. ಧೋ ಧೋ ಅಂತ ಮಳೆ ಶುರುವಾಗಿಯೇ ಬಿಟ್ಟಿದೆ. ಅವರು ಬರೋ ವೇಳೆಗೆ ಬಿಸಿ ಬಿಸಿ ಅಡುಗೆ ಆಗಬೇಕು ಅಂತ ನಮ್ಮ ನರಸಮ್ಮಜ್ಜಿ ಪಡುವಲ ಕಾಯಿ ತವ್ವೆ(ನಾರ್ಸೇಗೌಡ ತನ್ನ ತೋಟದಿಂದ ತಂದು ಕೊಟ್ಟಿದ್ದು), ಅನ್ನ ಮಾಡಿದ್ದಾರೆ. ಅಜ್ಜ ಬಂದ ಕೂಡಲೇ ಹಿಟ್ಟು ಕುದಿಯಲಿಕ್ಕೆ ಹಾಕಿದರೆ ಸಾಕು ಅಂತ ಅವರ ಮನಸ್ಸು. ಮುದ್ದೆ ಆರಬಾರದಲ್ಲ. ಮೆಣಸಿನ ಕಾಯಿ, ಜವಳಿ ಕಾಯಿ, ಬೆಂಡೇಕಾಯಿ ಬಾಳಕ ತಟ್ಟೆಯ ತುಂಬ ಕರಿದಿಟ್ಟಿದ್ದಾರೆ. ಜೊತೆಗೆ ಅಜ್ಜನಿಗೆ ಬಹಳ ಪ್ರಿಯವಾದ ಅರಳು ಸಂಡಿಗೆ. ಅದಕ್ಕೆ ಬೂದುಗುಂಬಳ ಹಾಕಿರೋದರಿಂದ ಒಂದೊಂದು ಸಂಡಿಗೆ ಮುಷ್ಟಿ ಗಾತ್ರ ಇದೆ. ಜೊತೆಗೆ ಹುರುಳೀ ಹಪ್ಪಳ ಸುಟ್ಟಿದ್ದಾರೆ. ಆ ಹಪ್ಪಳದಲ್ಲಿ ಅಲ್ಲಲ್ಲಿ ಕಾಣುವ ಎಳ್ಳಿನ ತುಣುಕು ಸೊಗಸಾದ ಡಿಜೈನ್ ಥರ ಕಾಣುತಾ ಇದೆ. ಅಗೋ ಬಸ್ ಹಾರನ್ ಕೇಳಿಸಿತು. ರಾಮ ಕೊಡೆ ತಗೊಂಡು ಬಸ್ ಸ್ಟಾಂಡ್ ಬಳಿಗೆ ಓಡಿದ. ಅವನೇ ನಮ್ಮಲ್ಲಿ ಸ್ವಲ್ಪ ದೊಡ್ಡವನು. ಆ ಜೋರು ಮಳೆಗೆ ಕೊಡೆ ಯಾವ ಲೆಕ್ಖ. ಇಬ್ಬರೂ ತೊಯ್ದು ತೊಪ್ಪಡಿಯಾಗಿಯೇ ಮನೆಗೆ ಬಂದರು. ಅವರು ಬಂದರೆ ಬಾಗಿಲು ತೆರೆದದ್ದೇ ರಪ ರಪ ಇರಚಲು. ರಮ್ಮಂತ ಗಾಳಿ ನೂಕು. ಹೇಗೋ ಬಾಗಿಲು ದಬ್ಬಿ ಅಗುಳಿ ಜಡಿದಿದ್ದಾಯ್ತು. ಅಜ್ಜ ಮೊಮ್ಮಗ ತಾವು ಕಾಲಿಟ್ಟಲ್ಲಿ ಉದ್ದಕ್ಕೂ ನೀರು ಸೋರುತ್ತಾ ಬಚ್ಚಲು ಮನೆಗೆ ಹೋಗಿ ಬಟ್ಟೆ ಬದಲಿಸಿಕೊಂಡು ಬಂದರು. ಅಜ್ಜ ಹಸಿವಾದಾಗ ಹುಲಿಯೇ. ಬಡ ಬಡ ಸಂಧ್ಯಾವಂದನೆ ಮುಗಿಸಿ, ಬಿಡಿಸಿದ್ದ ಚಾಪೆಯ ಮೆಲೆ ಕೂತು, ಮುತ್ತುಗದೆಲೆ ಮೇಲೆ ಮತ್ತೆ ನೀರು ಹೊಯ್ದು ಇನ್ನೊಮ್ಮೆ ತೊಳೆದುಕೊಂದು ಬಿಸಿಬಿಸಿ ಹಬೆಯನ್ನಕ್ಕೆ ಕಾದಿದ್ದಾರೆ. ನರಸಮ್ಮಜ್ಜಿ ಅನ್ನ ಬಡಿಸಿದರು. ಮುದ್ದೆ ಬಡಿಸಿದರು. ತೊವ್ವೆ ಬಡಿಸಿದರು. ಅಜ್ಜ ಆಪೋಷನ ತೆಗೆದುಕೊಂಡು ಕುಳಿತುಕೊಳ್ಳಬೇಕು. ನಿಂಬೇ ಹಣ್ಣು ಇದೆಯೇನೇ ಅಂತ ಕೂಗಿದರು. ಒಳಗಿಂದ ಪಿಸುಪಿಸು. ನಿಂಬೇ ಹಣ್ಣು ಇರಲಿಲ್ಲ. ನಿಂಬೇ ಹಣ್ಣಿಲ್ಲದೆ ತವ್ವೆ ಊಟ ಏನು ನನ್ನ ತಿಥಿಗಾ..? ಎಂದು ಕೂಗಿದ ಅಜ್ಜ, ಊಟಬಿಟ್ಟು ಎದ್ದು ರುಮುರುಮು ಅಂತ ಮಳೆಯಲ್ಲಿ ಹೊರಟೇಬಿಡೋದೇ. ಇಪ್ಪತ್ತು ನಿಮಿಷದಲ್ಲಿ ಅಜ್ಜ ಹಿಂದಿರುಗಿದರೆ ಅವರ ಜೇಬಿನ ತುಂಬ ಚಿಕ್ಕ ಟೊಮಾಟೋ ಗಾತ್ರದ ಗಜನಿಂಬೆ ಹಣ್ಣುಗಳು. ಈ ಪುಣ್ಯಾತ್ಮ ಆ ಮಳೆಯಲ್ಲಿ, ಕತ್ತಲಲ್ಲಿ, ನಾರ್ಸೇಗೌಡನ ತೋಟಕ್ಕೆ ಹೋಗಿ, ಪ್ರಾಯಶಃ ತೋಟದ ಬೇಲಿ ಹಾರಿ ನಿಂಬೆ ಹಣ್ಣು ಕೊಯ್ದುಕೊಂಡು ಬಂದಿದಾರೆ! ರಸಿಕತೆ ಅಂದರೆ ಇದಪ್ಪಾ!

ನಾವೆಲ್ಲಾ ಸಾಲಿಗೆ ಕೂತಿದ್ದೇವೆ. ನಮ್ಮ ಪುಟ್ಟಪ್ಪಜ್ಜ ತಾವೇ ನಿಂಬೆ ಹಣ್ಣು ಹೋಳುಮಾಡಿ ಎಲ್ಲರ ಎಲೆಯ ಮುಂದೂ ಕಾಲು ಕಾಲು ಹೋಳಿಟ್ಟು ಆಮೇಲೆ ತಾವೂ ಎಲೆಯ ಮುಂದೆ ಕೂತು, ಅಜ್ಜಿ ಮತ್ತೆ ಬಿಸಿಯಾಗಿ ಮಾಡಿದ್ದ ಮುದ್ದೆಗೆ ತವ್ವೆ ಬಡಿಸಿಕೊಂಡು , ಎಡಗೈಯಲ್ಲಿ ನಿಂಬೆ ಹೋಳು ತವ್ವೆಗೆ ಕಿವಿಚುತ್ತಾ , ನೋಡಿ ಹಿಂಗೆ ಹಣ್ಣು ಹಿಡಿಕೊಳ್ಳಿ ಎಲ್ಲಾ…ಈಗ ಮುದ್ದೆ ನಡುವೆ ಒಂದು ಹೆಬ್ಬೆಟ್ಟಿನ ಗುಂಡಿ ಮಾಡಿಕೊಳ್ಳಿ… ಏ ಇವಳೆ ಹಾಕೇ ಈ ಗುಂಡಿ ತುಂಬಾ ತುಪ್ಪಾ… ಈಗ ನೋಡಿ ಮಕ್ಕಳಾ…ಮುದ್ದೆ ಹೀಗೆ ಮೆಲ್ಲಗೆ ಬೆರಳು ನೀರಲ್ಲದ್ದಿ ಮುರುಕೋಬೇಕು.. ಅದನ್ನ ತವ್ವೆಯಲ್ಲಿ ಹಿಂಗೆ ಹಿಂಗೆ ಹೊರಳಾಡಿಸಿ…ಈಗ ನಿಂಬೆ ಹುಳಿ ತವ್ವೆ ಎಲ್ಲ ಸಮರಸವಾಗಿ ಬೆರತಿರತ್ತೆ…ಈಗ ಮೆಲ್ಲಗೆ ಮುದ್ದೆ ಮುರುಕು ನಾಲಗೆ ಮೇಲೆ ಇಟ್ಟುಕೊಳ್ಳಿ… ಸುಮ್ಮಗೆ ಗುಳುಕ್ಕನೆ ನುಂಗೋದಲ್ಲ…ನಾಲಗೆ ಮೇಲೆ ತವ್ವೆ ಮೆತ್ತಿದ ಮುದ್ದೆಯ ತುಣುಕು ಬಿಸಿಬಿಸಿಯಾಗಿ ಹೊರಳಾಡಲಿ…ನಾಲಗೆಯಿಂದ ಬಳ ಬಳ ನೀರು ಬರುತಾ ಇದೆ..ಹೌದಾ? ಈಗ ತಲೆ ಮೇಲಕ್ಕೆತ್ತಿ ನಿಧಾನಕ್ಕೆ ಮುದ್ದೆ ನುಂಗಿ… ಗಂಟಲಲ್ಲಿ ಅದು ಇಳಿಯೋ ಬಿಸಿಬಿಸಿ ಸುಖ ಅನುಭವಿಸಿ ಮಕ್ಕಳೆ… ಒಂದು ಕ್ಷಣ ಕಣ್ಣು ಮುಚ್ಚಿ ತೆಪ್ಪಗೆ ಕೂತುಕೊಳ್ಳಿ ಈಗ… ಇಲ್ಲಿಗೆ ಒಂದು ಆವರ್ತ ಮುಗೀತು…ಮತ್ತೆ ಈಗ ಇನ್ನೊಂದು ಗುಕ್ಕು ಮುದ್ದೆ ಮುರಿದಿಕೊಳ್ಳಿ….ಎರಡನೇ ಆವರ್ತ ಪ್ರಾರಂಭಿಸಿ…

ಈಗಲೂ ನನ್ನ ಸೊಸೆ ಪಡುವಲಕಾಯಿ ತವ್ವೆ, ರಾಗಿಮುದ್ದೆ ಮಾಡಿದಾಗ ನನಗೆ ಥಟ್ಟನೆ ನೆನಪಾಗೋದು ಪುಟ್ಟಪ್ಪಜ್ಜ ಮತ್ತು ಹುಳಿಹುಳಿ ವಾಸನೆಯ ಜಾರುಜಿಡ್ಡಿನ ತಿಳಿಹಳದಿ ಗಜನಿಂಬೆ.

‍ಲೇಖಕರು avadhi

April 29, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಚ್ ಎಸ್ ವಿ ಕಾಲಂ: ಮತ್ತೆ, ಮರೆತ ಇತಿಹಾಸದ ಮರುಗಳಿಕೆ..

ತಾವರೆಯ ಬಾಗಿಲು-೧೮ ಎರಡು ಸಾವಿರ ವರ್ಷಗಳ ಹಿಂದೆ ತೆಂಕಣಭಾರತದ ದೇಶ-ಕಾಲ-ಪರಿಸ್ಥಿತಿ ಹೇಗಿತ್ತೆಂದು ನಾವು ಊಹಿಸುವುದೂ ಸಾಧ್ಯವಿಲ್ಲ. ಮರೆತು ಹೋದ...

ಎಚ್ ಎಸ್ ವಿ ಕಾಲಂ: ಕಾವ್ಯದಲ್ಲಿ ಭಾಷೆಯಲ್ಲದ ಭಾಷೆಯ ಮಿಡುಕಾಟ..

ತಾವರೆಯ ಬಾಗಿಲು-೧೬ ಕಾವ್ಯಕ್ಕೆ ಭಾಷೆಯೇ ಮೂಲ ಸಾಮಗ್ರಿ. ಭಾಷೆಯ ಮೂಲಕ ಕವಿಗಳು ತಮ್ಮ ಲೌಕಿಕಾಲೌಕಿಕ ಅನುಭವಗಳನ್ನು ಅಭಿವ್ಯಕ್ತಿಸುತ್ತಾರೆ. ಹಾಗೆ...

3 ಪ್ರತಿಕ್ರಿಯೆಗಳು

  1. ಜಿ.ಎನ್.ಅಶೋಕವರ್ಧನ

    ಹಳಗಾಲದ ಸಂಬಂಧಗಳ ತಮಾಷೆ ನಮ್ಮ ಕುಟುಂಬದ್ದೇ ಕಣ್ಣಿಗೆ ಕಟ್ಟಿಬಂತು. (ನನ್ನ ತಾಯಿಯ ಕೊನೆಯ ತಂಗಿ ಅನೂರಾಧ ನನಗಿಂತ ಎರಡು ತಿಂಗಳಿಗೆ ಸಣ್ಣವಳು. ನನ್ನ ಚಿಕ್ಕಜ್ಜನ ಮಗ ಸದಾಶಿವ ಆರು ತಿಂಗಳಿಗೆ ಸಣ್ಣವನು. ಅಲ್ಲೆಲ್ಲಾ ಅವರು ಅಧಿಕಾರದ ಹಿರಿತನ ನಾನು ಪ್ರಾಯದ ಹಿರಿತನ ಸಾಧಿಸುವುದು ಈಗಲೂ ನಡೆದೇ ಇರುತ್ತದೆ) ಪುಟ್ಟಪ್ಪಜ್ಜನ ಸಹಪಂಕ್ತಿ ಭೋಜನದಲ್ಲಿ ನನಗೂ ಪಾಲು ಕೊಟ್ಟದ್ದಕ್ಕೆ ಎಚ್ಚೆಸ್ವೀಯವರಿಗೆ ಅನಂತ ವಂಡನೆಗಳು.
    ಅಶೋಕವರ್ಧನ

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ shalinisudheerCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: