ಎಚ್ಹೆಸ್ವಿ ಬರೆವ ಅನಾತ್ಮ ಕಥನ: ಸ್ವಲ್ಪ ಹಣ ಮತ್ತು ಒಬ್ಬ ಮನುಷ್ಯ…

ಅಳಿಯಲಾರದ ನೆನಹು-೧೧

-ಎಚ್ ಎಸ್ ವೆಂಕಟೇಶಮೂರ್ತಿ
‘ಮನೆಯಿಂದ ಮನೆಗೆ’ ಕವಿತೆಯಲ್ಲಿ ಕೆ ಎಸ್ ನ ಅವರು ಔಟ್ ಹೌಸಿಗೆ ಹೊರಮನೆಯೆಂಬ ಪದವನ್ನು ಬಳಸಿದ್ದಾರೆ. ನಾನು ಬೆಂಗಳೂರಿಗೆ ಲೆಕ್ಚರರಾಗಿ ಅಪಾಯಿಂಟ್ ಆದ ಮೇಲೆ ಬಂದಾಗ ಇದ್ದದ್ದು ಹೊರಮನೆಯಲ್ಲಲ್ಲ; ಒಳಮನೆಯಲ್ಲಿ. ಚಾಮರಾಜಪೇಟೆಯಲ್ಲಿ ನಾವು ಒಂದು ಬಾಡಿಗೆ ಮನೆ ಹಿಡಿದೆವು. ಆ ಮನೆಗೆ ಮುಂಬಾಗಿಲು ಒಂದೆ. ಮುಂಬಾಗಿಲು ದಾಟಿದ  ಮೇಲೆ ಒಂದು ಅರ್ಧ ಚದುರದ ಸಣ್ಣ ವರಾಂಡ. ಆ ವರಾಂಡಕ್ಕೆ ಪಶ್ಚಿಮಾಭಿಮುಖಿಯಾಗಿ ಒಂದು ಬಾಗಿಲು. ಉತ್ತರಾಭಿಮುಖಿಯಾಗಿ ಒಂದು ಬಾಗಿಲು. ಉತ್ತರಾಭಿಮುಖಿ ಬಾಗಿಲಲ್ಲಿ ಒಳ ಹೊಕ್ಕರೆ ಇನ್ನೊಂದು ಸಣ್ಣ ಹಾಲು. ಅದನ್ನು ದಾಟಿದರೆ ಅಡುಗೆ ಮನೆ ಕಂ ಬಚ್ಚಲ ಮನೆ. ಹಿತ್ತಲಿಗೆ ಪ್ರವೇಶಿಸಲು ಒಂದು ಬಾಗಿಲು. ಹೀಗೆ ಮನೆಯ ಒಳಗೇ ಒಂದು ಸಣ್ಣ ಮನೆ ಗರ್ಭಸ್ಥ ಶಿಶುವಿನಂತೆ ಅವತರಿಸಿದ್ದರಿಂದ ನಾನು ಇಳಿದ ಬಾಡಿಗೆ ಮನೆಯನ್ನು ’ಒಳಮನೆ’ಯೆಂದು ಕರೆದದ್ದು. ಅದಕ್ಕೆ ಹೊಸದಾಗಿ ಸುಣ್ಣ ಬಳಿಸಿದ ಗೋಡೆಗಳು. ಇಟ್ಟರೆ ಕೈಗೆ ಮೆತ್ತುತಿತ್ತು. ಒರಗಿದರೆ ಬೆನ್ನಿಗೆ ಬಳಿದುಕೊಳ್ಳುತಿತ್ತು. ಬಂದವರಿಗೆ ನಾವು ಮೊದಲು ಹೇಳಬೇಕಾದ ಮಾತು ಗೋಡೆಗೆ ಒರಗಬೇಡಿರಿ ಎಂಬುದಾಗಿತ್ತು.
ಆ ಮೂರು ಚದುರದ ಒಳಮನೆಯಲ್ಲಿ ನನ್ನ ಇಬ್ಬರು ಅಜ್ಜಿಯರು, ನನ್ನ ಪತ್ನಿ ಮತ್ತು ಮೂವರು ಮಕ್ಕಳು. ಹಾಲಲ್ಲಿ ಅಜ್ಜಿಗಳು ಮತ್ತು ಮಕ್ಕಳು ಮಲಗುತ್ತಿದ್ದರು. ಅಡುಗೆ ಮನೆಯಲ್ಲಿ ನಾನು ಮತ್ತು ನನ್ನ ಹೆಂಡತಿ. ನಮ್ಮ ಸಂಸಾರವನ್ನು ನೋಡಿದ ಕೂಡಲೇ ನಮ್ಮ ಓನರ್ ದಂಪತಿ ಗಾಭರಿಯಾಗಿ ಹೋದರು. ನಿಮ್ಮದು ಇಷ್ಟು ದೊಡ್ಡ ಸಂಸಾರ ಎಂದು ಗೊತ್ತಾಗಿದ್ದರೆ ನಿಮಗೆ ಖಂಡಿತ ಬಾಡಿಗೆಗೆ ಮನೆ ಕೊಡುತ್ತಿರಲಿಲ್ಲ ಎಂದು ಮನೆ ಯಜಮಾನಿ ನಿಸ್ಸಂಕೋಚವಾಗಿ ನನ್ನ ಮುಖಕ್ಕೇ ಹೇಳಿದರು. ನಮ್ಮ ಸಂಸಾರದ ಜನಗಣತಿಯ ಬಗ್ಗೆ ಮೊಟ್ಟಮೊದಲು ನಾನು ವಿಚಿತ್ರ ಅವಮಾನದಿಂದ ತಲೆತಗ್ಗಿಸಬೇಕಾದ ಪ್ರಸಂಗ ಎದುರಾದ ಸಂದರ್ಭವಾಗಿತ್ತು ಅದು! ಓಹೋ! ಬೆಂಗಳೂರು ಕೂಡುಕುಟುಂಬವನ್ನು ಸಹಿಸುವುದಿಲ್ಲ ಎಂದು ನನ್ನಲ್ಲಿ ನಾನೇ ಉದ್ಗಾರ ತೆಗೆದೆ. ಆದಷ್ಟು ಬೇಗ ಬೇರೆ ಮನೆ ನೋಡುವುದಾಗಿ ಮನೆಗಾರನಿಗೆ ಭರವಸೆಕೊಟ್ಟು ನಮ್ಮದಲ್ಲದ ನಮ್ಮ ಮನೆಯಲ್ಲಿ ಅಂತೂ ನಾವು ಮನೆ ಹೂಡಿದ್ದಾಯಿತು.

ಆ ಮನೆಯಲ್ಲಿ ನಾವು ಮೂರು ತಿಂಗಳು ಇದ್ದೆವು. ಆ ದಿನಗಳಲ್ಲಿ ಆಗಷ್ಟೆ ಹೊಸದಾಗಿ ಮದುವೆಯಾಗಿದ್ದ ನನ್ನ ಇಬ್ಬರು ಗೆಳೆಯರನ್ನು ನನ್ನ ಪತ್ನಿ ಭೋಜನಕ್ಕೆ ಆಹ್ವಾನಿಸಿದ್ದಳು. ಬರಗೂರ್ ದಂಪತಿ ಮತ್ತು ನನ್ನ ಬಾಲ್ಯ ಗೆಳೆಯ ಶಂಕರ್ ದಂಪತಿ! ಆ ಒಳಮನೆಗೆ ಒಂದು ದಿನ ಇನ್ನೂ ಆನರ್ಸ್ ಓದುತ್ತಿದ್ದ ನನ್ನ ಇಬ್ಬರು ಗೆಳೆಯರು ಬಂದು ನಮ್ಮ ಆತಿಥ್ಯ ಸ್ವೀಕರಿಸಿ ಹೋದದ್ದು ನನಗೆ ನೆನಪಾಗುತ್ತಿದೆ. ಅವರು ನರಹಳ್ಳಿ ಬಾಲಸುಬ್ರಹ್ಮಣ್ಯ ಮತ್ತು ಲಕ್ಷ್ಮಣ ಕೊಡಸೆ.
ಮಲ್ಲಾಡಿಹಳ್ಳಿಯಿಂದ ಬರುವಾಗ ಕುರ್ಚಿ ಮೇಜು ಏನೂ ತರಲಿಲ್ಲವಾದುದರಿಂದ ವೃತ್ತಾಕಾರದ ಎರಡು ಬೆತ್ತದ ಕುರ್ಚಿಗಳನ್ನು ತಲಾ ಇಪ್ಪತ್ತೈದರಂತೆ ಖರೀದಿಸಿ ಶೇಷಾದ್ರಿಪುರಂ ಇಂದ ರಿಕ್ಷಾದಲ್ಲಿ ತಂದದ್ದು ನೆನಪಾಗುತ್ತಿದೆ. ಆಗಷ್ಟೇ ಒಲೆಹೂಡಿದವರಂತೆ ನಾವು ಬೆಂಗಳೂರಲ್ಲಿ ಸಂಸಾರಕ್ಕೆ ಅಣಿಮಾಡಿಕೊಳ್ಳತೊಡಗಿದ್ದೆವು. ತಕ್ಷಣ ಅಗತ್ಯವಾಗಿದ್ದುದು ಅಡುಗೆ ಗ್ಯಾಸ್ ಮತ್ತು ಒಲೆ. ಗ್ಯಾಸ್ ವ್ಯವಸ್ಥೆ ಅಷ್ಟು ಸುಲಭವಾಗಿರದಿದ್ದ ದಿನಗಳು ಅವು. ನಾನು ವಾಸವಾಗಿದ್ದ ಮನೆಯ ಹಿಂದಿನ ರಸ್ತೆಯಲ್ಲಿ ನಮ್ಮ ಕಾಲೇಜಲ್ಲಿ ಇಂಗ್ಲಿಷ್ ಅಧ್ಯಾಪಕರಾಗಿದ್ದ ಜಿ ಕೆ ಜಿ ಇದ್ದರು. ಹಾಗಾಗಿ ನಾವಿಬ್ಬರೂ ಒಮ್ಮೊಮ್ಮೆ ಒಟ್ಟಿಗೇ ರಿಕ್ಷಾದಲ್ಲಿ ಕಾಲೇಜಿಗೆ ಹೋಗುತ್ತಾ ಇದ್ದೆವು. ಹೆಚ್ಚಿನ ಬಾರಿ ಬಸ್ಸಲ್ಲಿ ಸಿಟಿಮಾರ್ಕೆಟ್ಟಿಗೆ ಹೋಗಿ ಅಲ್ಲಿಂದ ಮತ್ತೊಂದು ಬಸ್ ಹಿಡಿದು ಬ್ರಿಗೇಡ್ ರೋಡಿಗೆ ಹೋಗುತಾ ಇದ್ದೆವು.
ಒಂದು ದಿನ ಕಾಲೇಜು ಮುಗಿಸಿಕೊಂಡು ಇಬ್ಬರೂ ಚಾಮರಾಜಪೇಟೆಗೆ ಹಿಂದಿರುಗಲು ರಿಚ್ಮಂಡ್ ವೃತ್ತದ ಬಳಿ ಬಸ್ಗಾಗಿ ಕಾಯುತ್ತಾ ನಿಂತಿದ್ದೇವೆ. ನಾನು ನಮ್ಮ ಮನೆಗೆ ಅಗತ್ಯ ತುರ್ತಾಗಿ ಬೇಕಾಗಿರುವ ಗ್ಯಾಸ್ ಸಿಲೆಂಡರ್ ಬಗ್ಗೆ ಜಿ ಕೆ ಜಿ ಅವರ ಬಳಿ ಮಾತಾಡುತ್ತಾ ಇದ್ದೇನೆ. ನಮ್ಮ ಮಾತು ನಮ್ಮ ಹಿಂದಿದ್ದ ವೃದ್ಧರೊಬ್ಬರ ಕಿವಿಗೆ ಬಿದ್ದಿರ ಬೇಕು. ಅವರು ನಮ್ಮ ನಡುವೆ ಬಾಯಿ ಹಾಕಿ, ನೀವು ಸೇಂಟ್ ಜೋಸೆಫ್ಸ್ನಲ್ಲಿ ಲೆಕ್ಚರರಲ್ಲವಾ ಎಂದು ನಮ್ಮನ್ನು ಪ್ರಶ್ನಿಸಿದರು. ಹೌದು ನಿಮಗೆ ಹೇಗೆ ಗೊತ್ತಾಯಿತು ಎಂದೆ. ನಿಮ್ಮ ಸೂಟ್ ಬೂಟ್ ನೋಡಿ ಊಹಿಸಿದೆ ಎಂದು ಬಚ್ಚು ಬಾಯಲ್ಲಿ ಯಜಮಾನರು ಸಣ್ಣ ಒಳ ನಗು ನಕ್ಕು, “ಕ್ಷಮಿಸಿ..ನಿಮ್ಮ ಮಾತು ನನ್ನ ಕಿವಿಗೆ ಬಿತ್ತು. ಗ್ಯಾಸ ಸಿಲೆಂಡರ್ ಬೇಕು ಅಂತ ಮಾತಾಡುತ್ತಿದ್ದಿರಿ. ನನ್ನ ಮಗನ ಸ್ನೇಹಿತ ಒಬ್ಬ ಹೊರದೇಶಕ್ಕೆ ಹೋಗುತಾ ಇದ್ದಾನೆ…ಅದಕ್ಕಾಗಿ ಅವನು ತನ್ನ ಮನೆಯಲ್ಲಿರುವ ಒಲೆ ಮತ್ತು ಸಿಲೆಂಡರ್ ಯಾರಾದರೂ ಪರಿಚಯದವರಿಗೆ ಕೊಟ್ಟುಬಿಡೋಣ ಅಂದುಕೊಂಡಿದಾನೆ. ಯಾರಾದರೂ ಪರಿಚಯದವರಿದ್ದರೆ ಹೇಳಿ…ನಮ್ಮವರೇ ಆದರೆ ಇನ್ನೂ ಒಳ್ಳೆಯದು ಅಂದ…ನಿಮಗೆ ಬೇಕಿದ್ದರೆ ಅವನ ಪರಿಚಯ ಮಾಡಿಸ್ತೀನಿ. ಅವನ್ಗೇನು ಲಾಭದ ಅಪೇಕ್ಷೆ ಇಲ್ಲ…ಸಿಲೆಂಡರ್ ಮತ್ತು ಸ್ಟೌಗೆ ಎಷ್ಟು ಬೆಲೆಯಾಗತ್ತೋ ಅಷ್ಟು ಕೊಟ್ಟು ನೀವು ಸಿಸ್ಟಮ್ ಪಡೆಯ ಬಹುದು. ಪೇಪರ್ಗೆ ಸೈನ್ ಮಾಡಿಕೊಡುತ್ತಾನೆ..ನಿಧಾನವಾಗಿ ನೀವು ಸಿಲೆಂಡರ್ ನಿಮ್ಮ ಹೆಸರಿಗೆ ಟಾನ್ಸ್ಫರ್ ಮಾಡಿಸಿಕೊಂಡರಾಯಿತು…”ಎಂದರು.
ನೋಡಿದಿರಾ ಎಚ್ಚೆಸ್ವಿ..! ಅದೃಷ್ಟ ಅಂದರೆ ಇದು… ಹುಡುಕುತ್ತಿದ್ದ ಬಳ್ಳಿ ತಾನೇ ಕಾಲಿಗೆ ತೊಡರಿದಂತಾಯಿತಲ್ಲ…”ಎಂದರು ಜಿಕೆಜಿ. ವೃದ್ಧರು, ನನಗೆ ಅವನು ಈ ಮಾತು ಹೇಳಿ ಒಂದು ವಾರವಾಯಿತು…ಯಾರಿಗಾದರೂ ಕೊಟ್ಟುಬಿಟ್ಟನೋ ಹ್ಯಾಗೋ ಕಾಣೆ..ವಿಚಾರಿಸ ಬೇಕು ಎಂದರು. ಬೇಗ ವಿಚಾರಿಸಿ ಸ್ವಾಮಿ…ನಮ್ಮ ಸ್ನೇಹಿತರು ಹೊಸದಾಗಿ ಬೆಂಗಳೂರಿಗೆ ಬಂದಿದಾರೆ…ತುಂಬಾ ತೊಂದರೆಯಲ್ಲಿದ್ದಾರೆ ಎಂದರು ಜಿಕೆಜಿ. ವಿಚಾರಿಸೋಣೇನು ಎಂದರು ವೃದ್ಧರು ನನ್ನ ಕಡೆ ನೋಡಿ. ಖಂಡಿತ ಎಂದೆ ನಾನು. ಹಾಗಾದರೆ ಒಂದು ರಿಕ್ಷಾ ಹಿಡಿಯಿರಿ. ಕಾರ್ಪೊರೇಷನಲ್ಲೇ ಅವನು ಕೆಲಸ ಮಾಡ್ತಿರೋದು. ಹೋಗಿ ಅವನನ್ನು ವಿಚಾರಿಸೋಣ ಎಂದರು ನಮ್ಮ ಅಪರಚಿತ ಬಂಧು. ಗೋ ಅಹೆಡ್ ಗುಡ್ ಲಕ್ ಎಂದರು ಜಿಕೆಜಿ.
ನಾನು ಒಂದು ರಿಕ್ಷಾ ಕೂಗಿ ನಿಲ್ಲಿಸಿದೆ. ನೀವು ಹತ್ತಿ, ಎಂದರು ವೃದ್ಧರು. ಆಮೇಲೆ ಅವರು ಪಂಚೆ ಮುದುರಿಕೊಂಡು, ಮೊಣಕಾಲು ನೋವಿನಿಂದ ಇರಬೇಕು, ರಾಮ ರಾಮ ಎನ್ನುತ್ತಾ ನಿಧಾನವಾಗಿ ರಿಕ್ಷಾ ಹತ್ತಿ ಕೂತರು. ರಿಕ್ಷಾದವನಿಗೆ ಕಾರ್ಪೊರೇಷನ್ ಬಳಿಗೆ ಹೋಗಲು ಹೇಳಿದ್ದಾಯಿತು. ಆಗ ಬೆಂಗಳೂರಲ್ಲಿ ಇಷ್ಟು ಪ್ರಮಾಣದ ಟ್ರಾಫಿಕ್ ಇರಲಿಲ್ಲ. ನೀವು ಕೂತಿರಿ ಸ್ವಾಮಿ..ನಾನು ನಮ್ಮ ಹುಡುಗನನ್ನು ನೋಡಿಕೊಂಡು ಬರುತ್ತೇನೆ ಎಂದು ವೃದ್ಧರು ತಮ್ಮ ಬ್ಯಾಗನ್ನೂ ರಿಕ್ಷಾದಲ್ಲೇ ಬಿಟ್ಟು ಸಮುಚ್ಚಯದ ಒಳಗೆ ಹೋಗಿ ಹತ್ತು ನಿಮಿಷದಲ್ಲಿ ಹಿಂದಿರುಗಿದಾಗ ಅವರ ಮುಖದಲ್ಲಿ ಸಮಾಧಾನದ ಭಾವ ಕಾಣಿಸಿತು. ಸದ್ಯ ಯಾರಿಗೂ ಕೊಟ್ಟಿಲ್ಲ. ಮುನ್ನೂರು ರೂಪಾಯಿಗೆ ನಿಮಗೆ ಸಿಸ್ಟಮ್ ಕೊಡಲು ಒಪ್ಪಿದಾನೆ. ಲೆಕ್ಚರರ್ ಎಂದೆ. ನಮ್ಮವರೇ ಅಂತಲೂ ಹೇಳಿದೆ. ತುಂಬ ಸಂತೋಷಪಟ್ಟ. ನೋಡಿ ಮನೆ ಕೀ ಕೋಟ್ಟಿದ್ದಾನೆ. ಮನೆಗೆ ಹೋಗಿ ಸಿಲೆಂಡರ್ ಮತ್ತು ಸ್ಟೌ ಇದೇ ರಿಕ್ಷಾದಲ್ಲಿ ಹಾಕಿಕೊಂಡು ನೀವು ಮನೆಗೆ ಹೋಗಬಹುದು…ಅಂದರು.ನಾನು-ತುಂಬಾ ಥ್ಯಾಂಕ್ಸ್ ಯಜಮಾನರೇ…ಎಷ್ಟು ಆಕಸ್ಮಿಕ ನೋಡಿ…ನಮ್ಮ ಮಾತು ಅಚಾನಕ್ ನಿಮ್ಮ ಕಿವಿಗೆ ಬಿದ್ದದ್ದು…ನಿಮ್ಮ ಹುಡುಗ ಈಗಲೇ ಹೊರದೇಶಕ್ಕೆ ಹೊರಟಿರೋದು…ಅವರು ಗ್ಯಾಸ್ ಸಿಸ್ಟಮ್ ಕೊಡಬೇಕು ಅಂದುಕೊಂಡದ್ದು…ನನಗೆ ಆಶ್ಚರ್ಯವಾಗತ್ತೆ..ಎಂದು ಉದ್ಗಾರ ತೆಗೆದೆ.
ಎಲ್ಲಾ ದೈವೇಚ್ಛೆ ಸ್ವಾಮಿ ನಮ್ಮದೇನಿದೆ ಇದರಲ್ಲಿ..ಎಂದರು ಮುದುಕರು. ದುಡ್ಡು ಯಾವಾಗ ಕೊಡಬೇಕಂತೆ ಎಂದೆ…ದುಡ್ಡಿಗೇನು ಸ್ವಾಮಿ ನಾಳೆ ನೀವು ಬಂದು ಅವರಿಗೆ ತಲಪಿಸಿದರೂ ಆಯಿತು..ಇಲ್ಲಾ ಈಗ ಕೊಟ್ಟರೂ ಆಯಿತು…ಎಂದರು. ಆವತ್ತಷ್ಟೆ ಸಂಬಳ ಆದುದರಿಂದ ಹಣ ಜೇಬಲ್ಲೇ ಇತ್ತು. ದುಡ್ಡುಕೊಟ್ಟುಬಿಡಿ ಪಾಪ ಅವರಿಗೆ..ಎಂದು ಮುನ್ನೂರು ರೂಪಾಯಿ ಎಣಿಸಿ ವೃದ್ಧರಿಗೆ ಕೊಟ್ಟೆ. “ದುಡ್ಡು ನನ್ನ ಬಳಿ ಯಾಕೆ ಇಟ್ಟುಕೊಳ್ಳಲಿ..? ಕೊಟ್ಟುಬಂದ್ ಬಿಡ್ತೀನಿ ಅವರಿಗೆ..”ಎಂದು ವೃದ್ಧರು ಉದ್ಗಾರತೆಗೆದು, ನಮ್ಮ ರಿಕ್ಷಾದವನನ್ನು ನೋಡಿ..ಎರಡು ನಿಮಿಷ ಅಣ್ಣಾ ..ಅವರಿಗೆ ದುಡ್ಡುಕೊಟ್ಟು ಬಂದುಬಿಡ್ಲಾ ಎಂದು ವಿಚಾರಿಸಿದರು. ಬೇಗ ಬನ್ನೀ ಸಾರ್…ಪೋಲೀಸ್ನೋರು ಠಳಾಯಿಸ್ತಿದಾರೆ ಎಂದ ರಿಕ್ಷಾದವ. ಹತ್ತೇ ನಿಮಿಷ ಎನ್ನುತ್ತಾ ವೃದ್ಧರು ಪಂಚೆ ಅಡರುಕಟ್ಟಿಕೊಂಡು ಸಮುಚ್ಚಯದೊಳಗೆ ಓಡಿದರು. ನಾನು ಗ್ಯಾಸ್ ಸಿಸ್ಟಮ್ ರಿಕ್ಷಾದಿಂದ ಇಳಿಸುವಾಗ ಹೊರಗೆ ಬಂದು ನೋಡುವ ನನ್ನ ಹೆಂಡತಿಯ ಮುಖ ಹೇಗೆ ಅರಳಬಹುದು? ಹೇಗೆ ಅವಳ ಕಣ್ಣಲ್ಲಿ ಆಶ್ಚರ್ಯ ಮತ್ತು ಅಭಿಮಾನದ ಭಾವ ತುಳುಕಬಹುದು ಎಂದು ಕಲ್ಪಿಸುತ್ತಾ ಕೂತೆ.
ಐದು ನಿಮಿಷ ಆಯಿತು. ಹತ್ತು ನಿಮಿಷ ಆಯಿತು. ರಿಕ್ಷಾದವ..ಹೊತ್ತಾಯ್ತಲ್ಲ ಸಾರ್ ಎಂದು ರಿಪಿ ರಿಪಿ ಶುರು ಮಾಡಿದ. ಆಗೇನು ಮೊಬೈಲ್ ಸೌಕರ್ಯವಿತ್ತೆ ಕೂತಲ್ಲಿಂದಲೇ ನಮ್ಮ ಯಜಮಾನರನ್ನು ಮಾತಾಡಿಸಲಿಕ್ಕೆ. ಇಪ್ಪತ್ತು ನಿಮಿಷವಲ್ಲ, ಅರ್ಧಗಂಟೆಯೇ ಆಗಿ ಹೋಯಿತು..ಸಾರ್ ಇಳ್ಕೊಂಡುಬಿಡಿ ಸಾರ್…ಇನ್ನೊಂದು ರಿಕ್ಷಾದಲ್ಲಿ ಬನ್ನಿ ಎಂದು ರಿಕ್ಷಾದವ ವಾರಾತ ಹಚ್ಚಿದ. ಸರಿಯಪ್ಪಾ ಎಂದು ನಾನು ಯಜಮಾನರ ಬ್ಯಾಗಿನ ಸಮೇತ ರಿಕ್ಷಾದಿಂದ ಇಳಿದು, ಪುಟ್ಪಾತಿನಲ್ಲಿ ನಿಂತೆ. ಎಷ್ಟು ಹೊತ್ತಾದರೂ ಮುದುಕರು ಬರಲೇ ಇಲ್ಲ. ನಾನು ಅವರನ್ನು ಹೂಡುಕಿಕೊಂಡು ಒಳಗೆ ಹೋದರೆ, ಅವರು ಈ ಕಡೆ ಬಂದು ನನಗಾಗಿ ಅಲೆಯ ಬಾರದಲ್ಲ! ಪುಟ್ಪಾತಲ್ಲಿ ನಿಂತೇ ಒಂದು ಗಂಟೆ ಕಾದಿದ್ದೇನೆ ನಾನು. ಆಗ ನಿಧಾನವಾಗಿ ಒಂದು ಸಣ್ಣ ಅನುಮಾನದ ಎಳೆ ಪ್ರಾರಂಭಾವಾಯಿತು. ಈ ಮುದುಕಪ್ಪ ೪೨೦ ಪಾರ್ಟಿ ಆಗಿದ್ದರೆ!
ಒಂದು ಕ್ಷಣ ನನ್ನ ಕಲ್ಪನೆ ಬಗ್ಗೆ ನನಗೇ ಹೇಸಿಗೆ ಉಂಟಾಯಿತು. ಅವರ ರಾಮ ಜಪ, ಮಂಡಿ ನೋವು ನೆನಪಾಗಿ, ಚೇ ಎಂದುಕೊಂಡೆ. ಆದರೆ ಎಷ್ಟು ಹೊತ್ತಾದರೂ ಮುದುಕ ಬಾರದೆ ಹೋದಾಗ ನನ್ನ ಅನುಮಾನ ದೃಢವಾಯಿತು. ಬೆಂಗಳೂರಲ್ಲಿ ನಾನು ಬೇಸ್ತುಬಿದ್ದ ಮೊದಲ ಪ್ರಸಂಗವದು. ಯಜಮಾನರ ಬ್ಯಾಗ್ ತೆಗೆದು ನೋಡಿದೆ. ಅದರಲ್ಲಿ ಇದ್ದದ್ದು ಹಳೇ ನ್ಯೂಸ್ ಪೇಪರ್ ಷೀಟುಗಳು ಮಾತ್ರ! ಆಗ ನನಗೆ ಬರುತ್ತಿದ್ದ ತಿಂಗಳ ಸಂಬಳವೇ ಆರುನೂರು ರುಪಾಯಿ. ತಿಂಗಳ ಮೊದಲ ದಿನವೇ ಅದರಲ್ಲಿ ಮುನ್ನೂರು ರೂಪಾಯಿ ನಾನು ಸುಖಾಸುಮ್ಮನೆ ಕಳೆದುಕೊಂಡಿದ್ದೆ. ಪ್ಲಸ್ ರಿಕ್ಷಾ ಬಾಡಿಗೆ ಬೇರೆ. ಸರಿ. ನನ್ನ ಅದೃಷ್ಟವನ್ನು ಹಳಿದುಕೊಳ್ಳುತ್ತಾ ಬಸ್ಸಿನಲ್ಲಿ ತೂಗಾಡಿಕೊಂಡು ಹೇಗೋ ಮನೆಗೆ ಬಂದು ಬಿದ್ದದ್ದಾಯಿತು. ಏನ್ರೀ..ಯಾಕೆ ಇಷ್ಟು ಲೇಟು ಅಂದಳು ಹೆಂಡತಿ. ಕಾಲೇಜಲ್ಲಿ ಎಮರ್ಜನ್ಸಿ ಮೀಟಿಂಗ್ ಇತ್ತು ಎಂದು ಸುಳ್ಳು ಬೊಂಕಿ ಮರ್ಯಾದೆ ಉಳಿಸಿಕೊಂಡೆ. ಯಾರಿಗಾದರು ಕೊಟ್ಟರೆ ಪರವಾಗಿಲ್ಲ. ಕಳೆದುಕೊಂಡರೆ ಪರವಾಗಿಲ್ಲ. ಆದರೆ ಇನ್ನೊಬ್ಬರಿಂದ ಬೇಸ್ತುಬೀಳುವುದಿದೆಯಲ್ಲ ಅದಕ್ಕಿಂತ ಅವಮಾನಕರ ಪ್ರಸಂಗ ಇನ್ನೊಂದಿಲ್ಲ!
ಕೊಟ್ಟು ಕಳೆದುಕೊಳ್ಳುವ ಮಾತು ಅಚಾನಕ್ಕಾಗಿ ನನ್ನ ಬಾಯಿಂದ ಬಂತು. ಹಾಗೆ ಕೊಟ್ಟು ಕಳಕೊಂಡ ಒಂದು ಪ್ರಸಂಗವನ್ನೂ ಇಲ್ಲೇ ತಮಲ್ಲಿ ಅರಿಕೆ ಮಾಡಿಕೊಳ್ಳಬಹುದು. ಆವತ್ತು ನಾನು ನನ್ನ ಹೆಂಡತಿ ಮತ್ತು ಮೂವರು ಮಕ್ಕಳು ನಂದಾಕ್ಕೆ ಸಿನಿಮಾಕ್ಕೆ ಹೋಗಿದ್ದೆವು. ಮಕ್ಕಳು ಮೂವರೂ ಚಿಕ್ಕವರೇ. ಅರು, ಐದು, ಮೂರು ವಯಸ್ಸಿನವರು. ಎರಡನೆಯವ ಟಿಕೆಟ್ಗೆ ಕ್ಯೂ ನಿಂತಾಗ ಕಟಾಂಜನದ ಕಂಬಿಗಳಲ್ಲಿ ತಲೆ ತೂರಿಸಿ ತಲೆ ಸಿಕ್ಕಿಸಿಕೊಂಡು ಬಿಡೋದೇ! ನನ್ನ ಹೆಂಡತಿಗೆ ತುಂಬ ಗಾಭರಿಯಾಗಿ ಹೋಯಿತು. ಅಮ್ಮನ ಗಾಭರಿ ಕಂಡು ಹುಡುಗನೂ ಭಯಗೊಂಡು ಅಳಲಿಕ್ಕೆ ಶುರು ಹಚ್ಚಿದ. ಆಗ ನೋಡಿ ಆಪದ್ಬಾಂಧವನಂತೆ ಅಲ್ಲಿಗೆ ಬೆಳ್ಳಗೆ ಸ್ಫುರದ್ರೂಪಿಯಾದ ಒಬ್ಬ ಹುಡುಗ ಬಂದ. ಸಾರ್..ಯಾಕಷ್ಟು ಗಾಭರಿ ಆಗ್ತೀರಿ…? ಹುಡುಗ ಕಂಬಿಗಳ ನಡುವೆ ತಲೆ ತೂರಿಸಿದ್ದಾನೆ ಅಂದ ಮೇಲೆ ಕಂಬಿಗಳು ಎಲ್ಲೋ ಒಂದು ಕಡೇ ಸ್ವಲ್ಪ ವಿಶಾಲವಾಗಿದ್ದು ತಲೆ ತೂರಿಸುವಷ್ಟು ಜಾಗ ಇರಲೇ ಬೇಕು..ಎಂದು ಹೇಳಿ ಹುಡುಗನ ತಲೆ ಹಿಡಿದು ಕಂಬಿಯುದ್ದಕ್ಕೂ ಅವನನ್ನು ನಡೆಸಿ ಎಲ್ಲೋ ಒಂದು ಕಡೇ ಥಟ್ಟನೆ ಅವನ ತಲೆ ಹೊರಗೆ ತೆಗೆದಾಗ , ಆ ಯುವಕನ ಪ್ರಸಂಗಾವಧಾನತೆ ನನ್ನನ್ನು ಬೆರಗು ಪಡಿಸಿದ್ದು ಸುಳ್ಳಲ್ಲ.
ತುಂಬಾ ಥ್ಯಾಂಕ್ಸ್ ಇವರೇ ಎಂದು ನಾನು ಹಲುಬುತ್ತಿದ್ದಾಗ, ಆ ಹುಡುಗ ನನ್ನ ಮುಖವನ್ನೇ ಬಿರಿ ಬಿರಿ ನೋಡಿ…”ಸಾರ್ ನೀವು ಕವಿ ಎಚ್ಚೆಸ್ವಿ ಅಲ್ಲವಾ…ಬಾಗಿಲು ಬಡಿವ ಜನ ಬರೆದವರು..!”ಎನ್ನೋದೇ! ನನಗೆ ಆಶ್ಚರ್ಯವಾಗಿ ಹೋಯಿತು. ಒಳಗೇ ಒಂದು ಸಣ್ಣ ಅಹಂಕಾರವೂ ದಾಂಗುಡಿಯಿಟ್ಟಿತು. ನಿಮ್ಮ ಕವಿತೆ ಯಾರು ಓದ್ತಾರ್ರೀ ಅನ್ನುತಿದ್ದಳಲ್ಲ ಇವಳು..ನನ್ನ ಹೆಂಡತಿಕಡೆ ನೋಡಿ ಮುಗುಳ್ನಕ್ಕೆ!  ಹುಡುಗ ಮತ್ತು ನಾನು ಪರಸ್ಪರ ವಿಳಾಸ ವಿನಿಮಯ ಮಾಡಿಕೊಂಡೆವು. ಹುಡುಗ ಬ್ಯಾಂಕ್ ಒಂದರಲ್ಲಿ ಹೊಸದಾಗಿ ಕೆಲಸಕ್ಕೆ ಸೇರಿದ್ದ. ಮಲೆನಾಡಿನ ಕಡೆಯಿಂದ ಬಂದವನು. ಇದೆಲ್ಲಾ ಅವನ ಬಗ್ಗೆ ನನ್ನ ಅಭಿಮಾನ ಹೆಚ್ಚಾಗಲು ಕಾರಣವಾಯಿತು.
ನಮ್ಮ ಪರಿಚಯ ಅಲ್ಲಿಗೆ ಮುಗಿಯಲಿಲ್ಲ. ಅವನು ಮತ್ತೊಂದು ದಿನ ನಮ್ಮ ಮನೆಗೆ ಬಂದ. ನಾನು ಅವನ ಬ್ಯಾಂಕ ಬಳಿ ಹೋಗಿದ್ದಾಗ ಅವನನ್ನು ನೋಡಿಕೊಂಡು ಬಂದೆ. ಆಗ ನನ್ನ ಹೊಸ ಸಂಗ್ರಹ ಮೊಖ್ತಾ ಪ್ರಕಟವಾಗಿತ್ತು. ಹುಡುಗ ಕೇಳಿ ಅದನ್ನು ನನ್ನಿಂದ ಕೊಂಡುಕೊಂಡ. ಓದಿ ಮುತ್ತಿನಂಥ ಅಕ್ಷರದಲ್ಲಿ ಒಂದು ದೀರ್ಘಪತ್ರವನ್ನೂ ಬರೆದ. ಹೀಗೆ ನಮ್ಮ ಪರಿಚಯ ಸಾಕಷ್ಟು ನಿಕಟವಾಯಿತು. ನಮ್ಮ ಮಕ್ಕಳು ಅವನನ್ನು ಮಾಮ ಎಂದು ಕರೆಯ ತೊಡಗಿದವು. ಒಂದು ವರ್ಷ ನಮ್ಮ ಸಂಪರ್ಕದಲ್ಲಿದ್ದ ಹುಡುಗ ಆಮೇಲೆ ಇದ್ದಕ್ಕಿದ್ದಂತೆ ಎಲ್ಲೋ ಅಂತರ್ಧಾನನಾಗಿಬಿಟ್ಟ. ಒಮ್ಮೆ ಅವನ ಬ್ಯಾಂಕ ಬಳಿ ಹೋಗಿ ವಿಚಾರಿಸಿದೆ. ಅವನಿಗೆ ಬೇರೆಲ್ಲಿಗೋ ಟ್ರಾನ್ಸ್ಫರ್ ಆಗಿತ್ತು. ಹೋಗುವಾಗ ನನಗೆ ಒಂದು ಮಾತು ಹೇಳಿಹೋಗಲಿಲ್ಲವಲ್ಲಾ ಎಂದು ಬೇಜಾರಾಯಿತು. ಹೆಂಡತಿಗೆ ಆ ಬಗ್ಗೆ ಹೇಳಿದಾಗ ಪಾಪ..ಅವರಿಗೆ ಏನು ಅವಸರವಿತ್ತೋ ಎಂದಳು. ಅವಳು ಹೇಳಿದ್ದು ನಿಜ. ತೀರ್ಥಹಳ್ಳಿಗೆ ಹುಡುಗನಿಗೆ ವರ್ಗವಾಗಿತ್ತು. ಅಲ್ಲಿಂದ ಆಗಾಗ ಅವನು ಯಥಾಪ್ರಕಾರ ತನ್ನ ಮುದ್ದಾದ ಅಕ್ಷರದಲ್ಲಿ ಪತ್ರ ಬರೆಯುತ್ತಿದ್ದ.ಅಲ್ಲಲ್ಲಿ ಅವನ ವಿಮರ್ಶಾ ಲೇಖನಗಳೂ ಪ್ರಕಟವಾಗುತ್ತಿದ್ದವು.
ಹೀಗಿರುವಾಗ ಈ ಕಿರಿಗೆಳೆಯ ಒಂದು ದಿನ ಇದ್ದಕ್ಕಿದ್ದಂತೆ ನಮ್ಮ ಕಾಲೇಜಿನ ಸ್ಟಾಫ್ ರೂಮಲ್ಲಿ ಪ್ರತ್ರ್ಯಕ್ಷನಾದ! ಮನುಷ್ಯ ನೋಡುವ ಹಾಗಿಲ್ಲ. ಮುಖದ ಮೇಲೆ ಕುರುಚಲು ಗಡ್ಡ. ರೋಗದ ಕಳೆ. ಏನ್ರೀ ಏನಾಯಿತು ನಿಮಗೆ ಎಂದೆ ಗಾಭರಿಯಿಂದ.. ನಿಧಾನವಾಗಿ ಹೇಳ್ತೀನಿ ಬನ್ನಿ…ಕಾಫಿಗೆ ಹೋಗೋಷ್ಟು ಪುರಸೊತ್ತಿದೆಯಾ ಎಂದ. ನನಗೆ ಮುಂದಿನ ಎರಡು ಹವರ್ ಫ್ರೀ ಇತ್ತು. ಇಬ್ಬರೂ ಸಂಗಮ್ ಗೆ ಹೋದೆವು. ಏನಾದರೂ ತಿಂಡಿ ತಗೊಳ್ಳಿ ಎಂದು ಬಲವಂತ ಮಾಡಿದೆ. ಆರೋಗ್ಯ ಚೆನ್ನಾಗಿಲ್ಲ..ನನಗೆ ಒಂದು ಇಡ್ಲಿ ಸಾಕು ಅಂದ. ಇಬ್ಬರೂ ತಿಂಡಿ ತಿಂದು ಮುಗಿಸಿದ ಮೇಲೆ ಕಾಫಿಗೆ ಆರ್ಡರ್ ಮಾಡಿ, ಈಗ ಹೇಳಿ ಏನು ಸಮಾಚಾರ ಎಂದೆ. ನನಗೆ ಕಿಡ್ನಿ ಸಮಸ್ಯೆ. ಮುಂದಿನ ವಾರವೇ ಆಪರೇಷನ್ ಆಗಬೇಕು. ಲಕ್ಷಾಂತರ ರೂಪಾಯಿ ವಿಷಯ. ನನ್ನ ಹೆಂಡತಿ ಒಡವೆಗಳನ್ನೂ ಮಾರಿದ್ದಾಯಿತು. ವಿಷಯ ನಿಮಗೆ ತಿಳಿಸಿ ಹೋಗೋಣ ಅಂತ ಬಂದೆ ಅಷ್ಟೆ…. ಎಂದು ನಿಟ್ಟುಸಿರುಬಿಟ್ಟ. ಸ್ವಲ್ಪ ಹಣ ಏನಾದರೂ ಕೊಡಲೇ ಎಂದೆ. ಪಾಪ..ನಿಮಗ್ಯಾಕೆ ತೊಂದರೆ ಎಂದ. ನಾನು ಎಷ್ಟು ಕೊಡಬಲ್ಲೆ? ಅಕೌಂಟ್ನಲ್ಲಿ ಹತ್ತು ಸಾವಿರ ಇದೆ. ಅಷ್ಟನ್ನೂ ಕೊಡ್ತೀನಿ…ನೀವು ಬೇಗ ಹುಷಾರಾದರೆ ಸಾಕು ಎಂದೆ. ನಾನು ನಿಮಗೆ ಪೋಸ್ಟ್ ಡೇಟೆಡ್ ಚೆಕ್ ಕೊಡ್ತೀನಿ…ಮುಂದಿನ ತಿಂಗಳು ನೀವು ಚೆಕ್ ಕಟ್ಟಿ…ಎಂದ. ಅಯ್ಯೋ ಅದೆಲ್ಲ ಯಾಕೆ ಇವರೇ…ನಿಮ್ಮ ಬಗ್ಗೆ ನನಗೆ ನಂಬಿಕೆ ಇದೆ ಎಂದೆ. ಆದರೂ ಅವ ಚೆಕ್ ಬರೆದುಕೊಟ್ಟ.
ತಿಂಗಳು ಕಳೆದೇ ಹೋಯಿತು. ಅವನು ಕೊಟ್ಟ ಚೆಕ್ ಬೌನ್ಸ್ ಆಗಿತ್ತು. ಅವನ ಹೊಸ ವಿಳಾಸವೂ ನನಗೆ ಗೊತ್ತಿರಲಿಲ್ಲ. ಇದೆಲ್ಲಾ ಮೂವತ್ತು ವರ್ಷದ ಹಿಂದಿನ ಮಾತು. ಮುಂದಿನದು ಬಹಳ ಆಶ್ಚರ್ಯದ ಸಂಗತಿ. ಮೊನ್ನೆ ರವೀಂದ್ರಕಲಾಕ್ಷೇತ್ರದಲ್ಲಿ ಒಂದು ಸಾಹಿತ್ಯದ ಕಾರ್ಯಕ್ರಮ. ಕಾರ್ಯಕ್ರಮ ಮುಗಿಸಿಕೊಂಡು ನಾನು ಲಕ್ಷ್ಮಣ್ , ನರಹಳ್ಳಿ ಹೊರಗೆ ಬರುತ್ತಿರುವಾಗ ಸ್ಥೂಲಕಾಯದ ಒಬ್ಬ ವ್ಯಕ್ತಿ ನನ್ನ ಕೈ ಹಿಡಿದು ಪಕ್ಕಕ್ಕೆ ಕರೆದುಕೊಂಡು ಹೋಗಿ ನಾನು ಯಾರು ಗೊತ್ತಾಯಿತಾ? ಕೇಳಿದ. ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ಅರೇ ಈ ಮನುಷ್ಯ ನನ್ನ ಹುಡುಗನ ತಲೆಯನ್ನು ಕಟಾಂಜನದಿಂದ ಹೊರಗೆ ತೆಗೆದವನಲ್ಲವೇ?  “ಸಾರೀ..ಸಾರ್…ನಿಮಗೆ ನಾನು ಮೋಸ ಮಾಡಿಬಿಟ್ಟೆ… ಸುಳ್ಳು ಹೇಳಿ ಹಣ ಪಡೆದೆ..ಮೂವತ್ತು ವರ್ಷ ಅದನ್ನು ಹಿಂದಿರುಗಿಸಲಿಲ್ಲ…ಕ್ಷಮಿಸಿ…ನಿಮ್ಮ ಹಣ ತಗೊಳ್ಳಿ” ಎಂದು ಯಥಾಪ್ರಕಾರ ಒಂದು ಚೆಕ್ ನನ್ನ ಜೇಬಿಗೆ ತುರುಕಿದ!
ಚೆಕ್ ನನ್ನ ಅಕೌಂಟಿಗೆ ಕಟ್ಟಿದೆ. ಕಟ್ಟಿ ಒಂದು ತಿಂಗಳೇ ಆಗಿದೆ. ಇಲ್ಲಿ ಮಿಲಿಯನ್ ಡಾಲರ್ದು ಒಂದು ಪ್ರಶ್ನೆ ಇದೆ. ಆ ಚೆಕ್ ರಿಯಲೈಸ್ ಆಯಿತೋ ಬೌನ್ಸ್ ಆಯಿತೋ ಎಂಬುದನ್ನು ನೀವು ಹೇಳಬೇಕು. ಸರಿಯುತ್ತರಕ್ಕೆ ಬಹುಮಾನ ಕೊಡಲಾರೆ! ಕಾರಣ ನಾನು ಕಳೆದುಕೊಂಡಿದ್ದು ಒಬ್ಬ ಮನುಷ್ಯನನ್ನ ಮತ್ತು ಸ್ವಲ್ಪ ಹಣವನ್ನ. ಇವೆರಡರಲ್ಲಿ ಯಾವುದು ದೊಡ್ಡ ನಷ್ಟ ಎಂಬುದನ್ನು ವಿವರಿಸಬೇಕಾದ ಅಗತ್ಯವಿಲ್ಲ.  ಆದ ಕಾರಣ ಚೆಕ್ ಗತಿ ಏನಾಯಿತು ಎಂಬುದು ನನ್ನ ಅಂತರಂಗದ ನಿಗೂಢದಲ್ಲೇ ಉಳಿಯಲೆಂಬುದು ನನ್ನ ಆಸೆ.

‍ಲೇಖಕರು avadhi

May 27, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಚ್ ಎಸ್ ವಿ ಕಾಲಂ: ಮತ್ತೆ, ಮರೆತ ಇತಿಹಾಸದ ಮರುಗಳಿಕೆ..

ತಾವರೆಯ ಬಾಗಿಲು-೧೮ ಎರಡು ಸಾವಿರ ವರ್ಷಗಳ ಹಿಂದೆ ತೆಂಕಣಭಾರತದ ದೇಶ-ಕಾಲ-ಪರಿಸ್ಥಿತಿ ಹೇಗಿತ್ತೆಂದು ನಾವು ಊಹಿಸುವುದೂ ಸಾಧ್ಯವಿಲ್ಲ. ಮರೆತು ಹೋದ...

ಎಚ್ ಎಸ್ ವಿ ಕಾಲಂ: ಕಾವ್ಯದಲ್ಲಿ ಭಾಷೆಯಲ್ಲದ ಭಾಷೆಯ ಮಿಡುಕಾಟ..

ತಾವರೆಯ ಬಾಗಿಲು-೧೬ ಕಾವ್ಯಕ್ಕೆ ಭಾಷೆಯೇ ಮೂಲ ಸಾಮಗ್ರಿ. ಭಾಷೆಯ ಮೂಲಕ ಕವಿಗಳು ತಮ್ಮ ಲೌಕಿಕಾಲೌಕಿಕ ಅನುಭವಗಳನ್ನು ಅಭಿವ್ಯಕ್ತಿಸುತ್ತಾರೆ. ಹಾಗೆ...

2 ಪ್ರತಿಕ್ರಿಯೆಗಳು

  1. Laxminarayana Bhat P

    ನಮ್ಮದಲ್ಲದ ತಪ್ಪಿಗೆ ಅವಮಾನಿತರಾಗುವ ಸಂದರ್ಭಗಳಲ್ಲಿ ನಾವು ಅನುಭವಿಸುವ ನೋವನ್ನು ಎಳೆಎಳೆಯಾಗಿ ಚಿತ್ರಿಸಿದ್ದೀರಿ. ಹಾಗೆ ಮೋಸಹೋಗುವ ಮನುಷ್ಯನ ಬೋಳೆತನವನ್ನೂ ಕೂಡಾ! ಆದರೆ ಮೋಸಹೊಗಲೇಬಾರದೆನ್ನುವ ಹಠಕ್ಕೆ ಬಿದ್ದವರು ಯಾರೂ ಉದ್ಧಾರವಾಗಿಲ್ಲ ಎನ್ನುವುದೂ ಸತ್ಯ! ನಮಸ್ಕಾರ.

    ಪ್ರತಿಕ್ರಿಯೆ
  2. Nalini Maiya

    nimma lekhana tunba chennaagittu! adara muktaayadallantoo- jeevanadalli hanakkintaloo mukhyavaadaddanna kaledukondavara vedane tunba chennaagide! Odi santruptiya deergha nittusiru horabantu.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: