ಎಚ್ಹೆಸ್ವಿ ಬರೆವ ಅನಾತ್ಮ ಕಥನ: ಒಡೆಯದ ಒಡಪೇ…

ಅಳಿಯಲಾರದ ನೆನಹು-೧೨
ಎಚ್ ಎಸ್ ವೆಂಕಟೇಶ ಮೂರ್ತಿ
೧೯೫೫-೫೬ ನೇ ಇಸವಿ. ನನಗೆ ಚೆನ್ನಾಗಿ ನೆನಪಿದೆ. ಮಳೆ ಬರದೆ ನಮ್ಮೂರ ರೈತರೆಲ್ಲಾ ಕಂಗಾಲಾಗಿಹೋಗಿದ್ದರು. ಬರ್ದಂಡು ಬಿಸಿಲು ಹಗಲೆಲ್ಲಾ ಕಾಯುತಾ ಇತ್ತು. ಈವತ್ತು ಗಮ್ಮು ಮಸ್ತೈತ್ರಿ….ಹೊಡೀತತೆ ನೋಡ್ರಿ ರಾತ್ರಿನಾಗ ಮಳೆ..ಅಂತ ರೈತರು ಮುಗಿಲು ಕಣ್ಣಾಗಿ ಮಾತಾಡಿಕೊಳ್ಳುತ್ತಾ ಇದ್ದರು. ರಾತ್ರಿ ಮೋಡವೂ ಕಟ್ಟುತಾ ಇತ್ತು. ಆದರೆ ಯಾವುದೋ ಮಾಯದಲ್ಲಿ ಭರ್ರೋ ಅಂತ ಗಾಳಿ ಬೀಸಿ ಮೋಡಗಳೆಲ್ಲಾ ಚದುರಿಹೋಗುತಾ ಇದ್ದವು. ಕಾದು ಗಾರಾಗಿದ್ದ ನೆಲಕ್ಕೆ ಒಂದು ಹನಿ ಮಳೆಬಿದ್ದರೆ ಕೇಳಿ.
ರೈತರು ಮಾಗಿ ಮಾಡಿ, ಹೊಲ ಹಸನು ಮಾಡಿಕೊಂಡು ಬಿತ್ತನೆಗೆ ರೆಡಿಯಾಗಿದ್ದರು. ಆದರೆ ಮಳೆರಾಯನ ಕೃಪೆ ಮಾತ್ರ ಆಗಿರಲಿಲ್ಲ. ಮಲೆನಾಡಿನ ತುಟ್ಟ ತುದಿಯಲ್ಲಿರೋ ಹಳ್ಳಿ ನಮ್ಮದು. ಮಲೆನಾಡಿನ ಸೆರಗು ಅಂತಾರೆ ಅದಕ್ಕೆ. ನಮ್ಮೂರು ದಾಟಿದರೆ ಶಿವಮೊಗ್ಗ ಜಿಲ್ಲೆ ಮುಗಿದು, ಚಿತ್ರದುರ್ಗ ಜಿಲ್ಲೆಯ ಬಯಲು ಸೀಮೆ ಪ್ರಾರಂಭವಾಗುತಾ ಇತ್ತು. ನಮ್ಮಲ್ಲಿ ಯಾವತ್ತೂ ಮಳೆ ಸ್ವಲ್ಪ ಕಮ್ಮಿಯೇ. ಆದರೆ ಯಾವ ವರ್ಷವೂ ಇಷ್ಟು ಅಧ್ವಾನವಾಗಿರಲಿಲ್ಲ.

ಚಿತ್ರ: ಶಿವರಾಂ ಪೈಲೂರ್

ನಮ್ಮ ಊರ ಯಜಮಾನರೆಲ್ಲಾ ಸೇರಿ ಮಳೆಗಾಗಿ ಹಲವಾರು ಕಾರ್ಯಕ್ರಮ ಹಾಕಿಕೊಂಡರು. ಮೊದಲನೇದು ಬಯಲು ಬಸವನಿಗೆ ನೂರು ಕೊಡ ಕುಂಭಾಭಿಷೇಕ. ಅಭಿಷೇಕ ಆದ ಮೇಲೆ ಪರೇವು. ಬೆಳಿಗ್ಗೆ ಊರ ದೇವರುಗಳನ್ನೆಲ್ಲಾ ಹೊರಡಿಸಿಕೊಂಡು, ಊರ ಹೊರಗೆ ಇದ್ದ ಬಯಲು ಬಸವನ ಗುಡಿಗೆ ಹಳ್ಳಿಯ ಜನ ಹೊರಟರು. ಪಲ್ಲಕ್ಕಿಗಳಲ್ಲಿ ಭಾಳ ಬೃಹತ್ತಾದದ್ದು ಊರ ದೇವತೆ ಕೆಂಚಮ್ಮನದ್ದು. ಪಲ್ಲಕ್ಕಿಯ ಮುಂದಿನ ಕೊಂಬು ಗಿಣಿಯ ಕೊಕ್ಕಿನಂತೆ ಬಾಗಿಕೊಂಡು ನೋಡಲಿಕ್ಕೆ ಬಹಳ ಆಕರ್ಷಕವಾಗಿತ್ತು. ಪಲ್ಲಕ್ಕಿಗೆ ಕೆಳಗೆ ತೆಳ್ಳನೆ ಬೊಂಬು ಕಟ್ಟಿ ಮುಂದೆ ಇಬ್ಬರು , ಹಿಂದೆ ಇಬ್ಬರು ಪಲ್ಲಕ್ಕಿ ಹೊರುತ್ತಾ ಇದ್ದರು. ಪಲ್ಲಕ್ಕಿಯ ಮೇಲಿನ ಕೊಂಬು ಏನಿದೆಯೋ ಅದು ಬಿದಿರುಬೊಂಬಿನಿಂದ ಮಾಡಿದ್ದು.
ಈಚೆಗೆ ಗೊತ್ತಾದ ಪ್ರಕಾರ ಪಲ್ಲಕ್ಕಿಯ ಕೊಂಬನ್ನು ಬಿಸಿಮಾಡಿ ಬಗ್ಗಿಸುತ್ತಾರಂತೆ.ಈ ಕಮಾನು ಕೊಂಬಿನ ಕೆಳಗೆ ತೊಟ್ಟಿಲಾಕಾರದ ಮರದ ಮಂಚ. ಅದಕ್ಕೆ ಸುತ್ತಾ ಕೆತ್ತನೆಯ ಅಲಂಕಾರ. ಆ ತಗ್ಗು ಮಂಚದಲ್ಲಿ ದೇವಿಯನ್ನು ಕೂಡ್ರಿಸಿ, ಮಂಚಕ್ಕೆ ಚಳ್ಳೆ ಹುರಿಯಿಂದ ಗಟ್ಟಿಯಾಗಿ ಬಿಗಿಯುತ್ತಾ ಇದ್ದರು. ಕೆಂಚವ್ವ ಸುಮ್ಮನೆ ಪಲ್ಲಕ್ಕಿಯಲ್ಲಿ ಕೂಡುವ ಮೂದೇವಿಯಲ್ಲ. ಬಿಜಯಮಾಡುವಾಗ ಅವಳ ತೂಗಾಟ, ಜಕ್ಕನೆ ನಿಲ್ಲುವುದು, ಒಲ್ಲೆ ಎಂಬಂತೆ ಅತ್ತಿತ್ತ ಕೊಂಬಾಡಿಸುವುದು, ರೇಗಿದಾಗ ಗಿಮಿ ಗಿಮಿ ತಿರುಗುವುದು ಇವೆಲ್ಲಾ ಬಹಳ ಹೆಚ್ಚು. ಅದಕ್ಕೇ ಕೇವಲ ಅನುಭವಸ್ಥರು ಮಾತ್ರ ಕೆಂಚವ್ವನ ಪಲ್ಲಕ್ಕಿ ಹೊರುತಾ ಇದ್ದರು. ಕೊಂಬಿನ ಮೇಲೆ ಉದ್ದಕ್ಕೂ ಬಣ್ಣ ಬಣ್ಣದ ಗೊಂಡೆಗಳು. ಅವುಗಳ ಮೇಲೆ ಬೆಳ್ಳಿ ಮತ್ತು ಹಿತ್ತಾಳೆಯ ಕಳಸಾಕೃತಿಯ ಬುಗುಟುಗಳು. ಪಲ್ಲಕ್ಕಿಯ ಕಮಾನಿನಿಂದ ಇಳಿಬಿಟ್ಟ ಕುಚ್ಚುಗಳು. ಹೂವಿನ ಗೊಂಡೆಗಳು. ಉದ್ದಕ್ಕೂ ಬಟ್ಟೆಗಳ ಗೌಸು. ಕೊಂಬಿನ ತುದಿಗೆ ಸಿಂಹದ ಮುಖ ಆನೆಯ ಎತ್ತಿದ ಸೊಂಡಿಲಿನ ಬೆಳ್ಳಿಯ ಗೊಣಸು. ಒಳಗೆ ಕೆಂಚಮ್ಮನ ಹಿತ್ತಾಳೆಯ ಥಳ ಥಳ ಪ್ರಭಾವಳಿ. ಪಟ್ಟಾಪಟ್ಟಿ ಸೀರೆ ಉಡಿಸಿದ ಕೆಂಚಮ್ಮನ ಉತ್ಸವ ಮೂರ್ತಿ. ಅದಕ್ಕೆ ನಾನಾ ಬಗೆಯ ಬೆಳ್ಳಿ ಬಂಗಾರದ ಆಭರಣಗಳು. ಅಡಕೆ ಸಿಂಗಾರಗಳು.ಇದೆಲ್ಲಾ ಸೇರಿ ಕೆಂಚಮ್ಮನ ಪಲ್ಲಕ್ಕಿ ಅಂದರೆ ಮಣ ಭಾರ ಎನ್ನುತ್ತಿದ್ದರು ಪಲ್ಲಕ್ಕಿ ಹೊರೋ ಮಂದಿ.
ಪಲ್ಲಕ್ಕಿ ಹೊರೋರು ಹೆಗಲ ಮೇಲೆ ಟವೆಲ್ಲು, ಅಥವಾ ಕೆಂಪು ಚೌಕಳಿ ಹಾಕಿ ಕೊಳ್ಳುತ್ತಾ ಇದ್ದರು. ಜೊತೆಗೆ ಅವರ ಬಳಿ ಆನಿಕೆ ಗೂಟಗಳು ಇರುತ್ತಾ ಇದ್ದವು. ಅಲ್ಲಲ್ಲಿ ಆ ಗೂಟ ಕೊಟ್ಟು , ಬೊಂಬಿನಿಂದ ಹೆಗಲು ಬಿಡಿಸಿಕೊಂಡು ಸುಧಾರಿಸಿಕೊಂಡು ಮತ್ತೆ ಮುಂದೆ ನಡೆಯುತ್ತಾ ಇದ್ದರು. ಹಣೆಗೆ ಉದ್ದಕ್ಕೆ ಕುಂಕುಮದ ನಾಮ ಬಳಿದುಕೊಂಡ ಪಲ್ಲಕ್ಕಿ ಹೊರೋ ಮಂದಿ ಕಟ್ಟುಮಸ್ತಾದ ಆಳುಗಳೇ. ನರಪೇತಲರು ಕೆಂಚಮ್ಮನ ಪಲ್ಲಕ್ಕಿ ಹೊರೋದು ಸಾಧ್ಯವೇ? ಕೆಂಚಮ್ಮನ ಪಲ್ಲಕ್ಕಿಗೆ ಹೋಲಿಸಿದರೆ ಈಶ್ವರ ದೇವರ ಪಲ್ಲಕ್ಕಿ ತುಂಬಾ ಪೀಚು. ಅದಕ್ಕೆ ಅಲಂಕಾರದ ಭಾರವೂ ಇರಲಿಲ್ಲ. ರಂಗಾನಾಥನದು ಇವೆರಡರ ನಡುವೆ ಎನ್ನ ಬಹುದು. ಈ ಪಲ್ಲಕ್ಕಿಗಳ ಜಬರ್ದಸ್ತಿನಿಂದಲೇ ಈ ಮೂವರು ಗ್ರಾಮದೇವತೆಗಳಲ್ಲಿ ಯಾರು ಯಾರಿಗಿಂತ ದೊಡ್ಡವ್ರು ಎಂಬುದನ್ನು ನಾವು ನಿರ್ಣಯ ಮಾಡುತ್ತಿದ್ದೆವು. ಆದರೆ ನಮ್ಮ ಹಿರಿಯರು ಕೆಂಚಮ್ಮ , ರಂಗನಾಥದೇವರ ತಂಗಿಯೆಂದೂ, ಈಶ್ವರದೇವರ ಪತ್ನಿಯೆಂದೂ ಹೇಳುತ್ತಿದ್ದರು. ಹಾಗಾಗಿ ಮುಂದೆ ಈಶ್ವರನ ಪಲ್ಲಕ್ಕಿಯೂ, ಅದರ ಹಿಂದೆ ಕೆಂಚಮ್ಮನ ಪಲ್ಲಕ್ಕಿಯೂ, ಅದರ ಹಿಂದೆ ರಂಗನಾಥನ ಪಲ್ಲಕ್ಕಿಯೂ ಸವಾರಿ ಹೊರಡುತ್ತಾ ಇದ್ದವು. ಈ ಕ್ರಮ ವ್ಯತ್ಯಯವಾದದ್ದನ್ನು ನಾನಂತೂ ಕಾಣೆ!
ಬೆಳಿಗ್ಗೆ ಒಂಭತ್ತರ ಸಮಯ. ಝಕ್ಕಣಕು ಝಕ್ಕನಕು ಎಂದು ತಮಟೆಯವರು ತಮಟೆ ಬಾರಿಸ ತೊಡಗಿದ್ದು ನಮ್ಮ ಮನೆಗೆ ಕೇಳುತಾ ಇತ್ತು. ನಾನು ಮನೆಯವರು ಯಾರಿಗೂ ಹೇಳದೆ ಈಶ್ವರನ ಗುಡಿಯ ಬಳಿಗೆ ಹಾರಿಗ್ಗಾಲು ಹಾಕಿದೆ. ಅಲ್ಲಾಗಲೇ ಜನಜಾತ್ರೆ ಸೇರಿತ್ತು. ಊರ ಹಿರಿಯರೆಲ್ಲಾ ಮೆರವಣಿಗೆ ಮುಂದೆ ಇದ್ದರು. ಉರಿಮೆಯವರು ರವ ರವ ಉರುಮೆ ಬಾರಿಸ ತೊಡಗಿದಂತೇ ಕಹಳೆಯ ನಿಂಗಣ್ಣ ತುತ್ತುತ್ತೂ ಎಂದು ಆಕಾಶದ ಮೂತಿ ತಿವಿಯುವಂತೆ ಬೊಬ್ಬಿರಿದ. ಲಗುಬಗೆಯಿಂದ ರಂಗಪ್ಪ ಮತ್ತು ಈಶ್ವರಪ್ಪ ಹೋಗುತ್ತಾ ಇದ್ದರೆ ಕೆಂಚವ್ವ ಅದೇಕೋಏನೋ ಹಿಂದಕ್ಕೆ ಜಗ್ಗುತ್ತಾ, ಪಕ್ಕಕ್ಕೆ  ಒನೆಯುತ್ತಾ, ಮೊಂಡಾಟ ಮಾಡಿಕೊಂಡೇ ಬಸವಣ್ಣನ ಗುಡಿಯ ಕಡೆ ಹೊರಟಳು. ಕೆಂಚವ್ವನ ಸ್ವಭಾವ ಗೊತ್ತಿದ್ದುದರಿಂದ ಅದನ್ನು ಯಾರೂ ವಿಪರೀತವಾಗಿ ಭಾವಿಸಲಿಲ್ಲ. ಎಲ್ಲಕ್ಕೂ ಮುಂದೆ ಭೂತದ ಹಲಗೆಯವರು. ಉದ್ದಕ್ಕೂ ಭಕ್ತರು ಚೌಕ ಹಾಸಿ ಭೂತಗಳಿಗೆ ಮಣೇವು ನಡೆಸುತ್ತಾ ಇದ್ದರು. ಮಣೇವು ಅಂದರೆ ಪೂಜಾರಿ ಒಂದು ಟವಲ್ಲು ಬಿಡಿಸಿ ಅದರ ಮೇಲೆ ಎರಡು ತುದಿ ಮತ್ತು ನಡುವೆ ಬಾಳೇ ಹಣ್ಣು ಮತ್ತು ಬೆಲ್ಲದ ಉಂಡೆ ಇಡೋದು. ಭೂತದ ಹಲಗೆ ಹಿಡಿದವರು ಆ ಚೌಕದ ಸುತ್ತ ಮೂರು ಪ್ರದಕ್ಷಿಣೆ ಬರುತ್ತಾರೆ. ಆಮೇಲೆ ಥಟ್ಟಕ್ಕನೆ ತಮಟೆಯವ ತಮಟೆ ನಿಲ್ಲಿಸುತ್ತಾನೆ. ಕೂಡಲೆ ಭೂತದ ಹಲಗೆ ಹಿಡಿದವರು ಉಧೋ ಅಂತ ಉದ್ದಕ್ಕೂ ಮಲಗಿ ನೇರ ಬಾಳೆಹಣ್ಣು ಬೆಲ್ಲಕೆ ಬಾಯಿ ಹಾಕಿ ಅದನ್ನು ಗುಳಂ ಮಾಡುತ್ತಾರೆ. ನಾಕೈದು ಭೂತ ಸುತ್ತುತ್ತಿರುವಾಗ ಮಣೇವು ಸಿಕ್ಕೋದು ಮೂರಕ್ಕೆ ಮಾತ್ರ! ಉಳಿದ ಭೂತಗಳು ಪಾಪ ಪೆಚ್ಚಾಗಿ ನಿಲ್ಲ ಬೇಕಾಗುತ್ತದೆ!
ಈ ಎಲ್ಲ ಸಾಂಗತ್ಯಗಳು ನಡೆಯುತ್ತಾ ನಾವು ಬಸವಣ್ಣನ ಗುಡಿಯ ಬಳಿ ಬರೋ ಅಷ್ಟು ಹೊತ್ತಿಗೆ ಹನ್ನೆಅಡು ಗಂಟೆ ರಣ ರಣ ಬಿಸಿಲು. ಊರಿಂದ ಮುತ್ತೈದೇರು ನೂರು ಬಿಂದಿಗೆ ನೀರು ಮೆರವಣಿಗೆಯಲ್ಲಿ ಹೊತ್ತು ತಂದಿದ್ದಾರೆ. ಅವರ ಹಣೆಯ ಮೇಲೆ ಕಾಣುತ್ತಿರುವ ನೀರಗುಳ್ಳೆ ಕೊಡದಿಂದ ತುಳುಕಿದ್ದೋ, ಹಣೆಯಿಂದಲೇ ಹೊಮ್ಮಿದ ಬೆವರ ಹನಿಯೋ ನನಗೆ ತಿಳಿಯದು.ಬಯಲು ಬಸವನ ಮೇಲೆ ಆ ಮುತ್ತೈದರು ತಂದ ನೂರು ಕೊಡ ನೀರು ಸುರಿಯಲಾಗುತ್ತೆ. ಗುಡಿಯ ಮುಂದೆ ನೀರು ಕಾಲುವೆಯೋಪಾದಿ ಹರಿದು ಮೆರವಣಿಗೆಯಲ್ಲಿ ಬಂದವರ ಕಾಲು ತಣ್ಣಗಾಗುತ್ತೆ.
ಅಷ್ಟರಲ್ಲಿ ಗುಡಿಯ ಹಿಂದೆ ಅಕ್ಕಿಕಡಲೇಬೇಳೆ ಪಾಯಸ ಸಿದ್ಧವಾಗಿರುತ್ತದೆ. ಇನ್ನೊಂದು ಕೊಪ್ಪರಿಗೆಯಲ್ಲಿ ಹಬೆಹೊಡೆಯುವ ಅನ್ನ. ದೊಡ್ಡ ಕೊಳಗದಲ್ಲಿ ಈರುಳ್ಳಿ ಕಡ್ಳೇಕಾಳು ಬದನೇ ಕಾಯಿ ಸಾರು. ಅದರ ಬಣ್ಣ ಕೆಂಪೋ ಕೆಂಪಗೆ. ಈಗ ದೇವರುಗಳೆಲ್ಲಾ ತಣ್ಣಗೆ ಅರಳೀಮರದ ನೆರಳಲ್ಲಿ ಆಸನ ಸಮೇತ ಕೂತುಕೊಂಡಿವೆ. ಬಸವಣ್ಣನ ಗುಡಿಯ ಆಸುಪಾಸಲ್ಲಿ ಬೇಕಾದಷ್ಟು ಮುತ್ತುಗದ ಪೊದೆಗಳು. ಅವುಗಳನ್ನು ಜನ ಹರಕೊಂಡು ಬರುತ್ತಾರೆ. ಮರದ ಕೆಳಗೆ ಮಣ್ಣಲ್ಲಿ ಸಣ್ಣಗೆ ಒಂದಿಂಚಿನ ಗುಂಡಿ ಮಾಡಿ ಅದರ ಮೇಲೆ ಮುತ್ತುಗದ ಎಲೆ ಇಟ್ಟುಕೊಂಡು ಪಾಯಸ ಕಾಯುತ್ತಾ ಭಕ್ತರು ಕೂತಿದ್ದಾರೆ. ತೆಂಗಿನ ಚಿಪ್ಪಲ್ಲಿ ಕೆಲವರು ಪಾಯಸ ಮೊಗೆ ಮೊಗೆದು ಎಲೆಗಳಿಗೆ ಬಡಿಸುತ್ತಾರೆ. ಹರಹರಾ ಪಾರ್ವತೀ ಪತಯೇ ನಮಹಾ ಎಂದು ಪೂಜಾರ್ರ ಇರುಪಜ್ಜ ಕೂಗಿದ್ದೆ ಶುರುವಾಗುತ್ತೆ ನೋಡಿ ಕೈಗೆ ಮತ್ತು ಬಾಯಿಗೆ ಜಗಳ. ಎಲ್ಲ ಕಡೆಯಿಂದಲೂ ಸೊರ್ ಸೊರ್ ಎಂದು ಪಾಯಸ ಬಸಿಯುವ ಸದ್ದು. ಎಲ್ಲ ಮರೆಯ ಬಹುದು. ಆದರೆ ನೂರಾರು ಜನ ಸಾಲಾಗಿ ಕೂತು ಸೊರ್ ಸೊರ್ ಸದ್ದು ಮಾಡುತ್ತಾ ಪಾಯಸ ಹೀರುವಾಗ ಆಗುವ ಸದ್ದನ್ನು ಮಾತ್ರ ನಾನು ಯಾವತ್ತೂ ಮರೆಯಲಾರೆ. ಈ ಪಾಯಸ ಸುರಿತವನ್ನು ದಿಗ್ಭ್ರಮೆಯಿಂದ ನಾನು ನೋಡುತ್ತಾ ದಿಬ್ಬದ ಮೇಲೆ ಕೂತಿದ್ದೇನೆ. ಆಗ ನನ್ನನ್ನು ನೋಡಿದ ಕಬ್ಯಾರ್ರ ಶಂಕ್ರಣ್ಣ-“ಏ..ಶಾನುಭೋಗ್ರ ಮಗ ಬಂದೈತೆ ಕಣ್ರೋ…ಅದರ ಕೈಯಾಗೊಂದು ಕಾಯಿ ಚಿಪ್ಪು ಕೊಟ್ಟು ಕೂಡ್ರಿಸಿ..ಪಾಪ…”ಅನ್ನುತ್ತಾನೆ. ಯಾರೋ ಬಂದು ನನ್ನ ಕೈಗೆ ಒಂದು ಕಾಯಿ ಹೋಳು ಕೊಡುತ್ತಾರೆ. ನಾನು ಅದನ್ನು ಹಲ್ಲಲ್ಲಿ ಕಚ್ಚುತ್ತಾ ಕೂಡುತ್ತೇನೆ.
ಹೀಗೆ ನಾನು ಕಾಯು ತಿನ್ನುತ್ತಾ ಕೂತಿರುವಾಗ ಬಂದಳು ನೋಡಿ ನಮ್ಮ ಸೀತಜ್ಜಿ. ಬೆಳಿಗ್ಗೆಯಿಂದ ನಾನು ಮನೆಯಲ್ಲಿ ಕಾಣದೆ ಮನೆಯವರು ಕಂಗಾಲಾಗಿ ಹೋಗಿದ್ದಾರೆ.ಅವರು ಬೀದಿ ಬೀದಿ ಅಲೆದು ನನ್ನನ್ನು ಹುಡುಕುತ್ತಿರುವಾಗ ಸೊಟ್ಟಬಾಯಿ ಸಿದ್ದಕ್ಕ, ನಿಮ್ಮ ಮಗಾನಾ…? ದೇವ್ರ ಹಿಂದಾಗಡೇನೇ ಜಗ್ಗಣಕ್ಕ ಜಗಣ್ಣಕ್ಕ ಅಂತ ಕುಣ್ಕಂತ ಹೋತು ಕಣ್ರೀ ಅದು..!” ಎಂದು ಮಾಹಿತಿ ಕೊಟ್ಟಿದ್ದಾಳೆ. ನಮ್ಮ ಅಜ್ಜಿ ಆ ರಣ ಬಿಸಿಲಲ್ಲಿ ಮೂರು ಮೈಲು ನಡೆದು ಬಯಲು ಬಸವನ ಗುಡಿಗೆ ಬಂದು ನೋಡಿದರೆ, ಏರಿಯ ಮೇಲೆ ಕಾಯಿ ಚಿಪ್ಪಿನೊಂದಿಗೆ ಕೂತ ಮರಿಕಪಿಯ ಹಾಗೆ ನಾನು ಕಂಡೆನಂತೆ! ಆ ನಂತರದ ಗದಾಪರ್ವದ ಕಥೆ ನಿಮಗೆ ಈಗ ಹೇಳಿ ಏನು ಸುಖಾ?
*****
ಬಯಲು ಬಸವನಿಗೆ ನೂರು ಕೊಡ ನೀರು ಸುರಿದಿದ್ದೇ ಪ್ರಾಪ್ತಿ. ವಾರವಾದರೂ ಮಳೆಯ ಸುಳಿವಿಲ್ಲ. ಮಳೆಗಾಗಿ ಊರವರು ನಡೆಸಿದ ಎರಡನೇ ಪ್ರಯೋಗ ಕಂತೇ ಭಿಕ್ಷದ್ದು. ಇದರಲ್ಲಿ ಊರ ಲಿಂಗಾಯಿತರೆಲ್ಲಾ ಸೇರಿದ್ದರು. ದಿನಾ ಮಧ್ಯಾಹ್ನ ಅವರು ಭಜನೆ ಮಾಡಿಕೊಂಡು ಊರಲ್ಲಿ ತಮ್ಮವರ ಮನೆಗಳಿಂದ ಭಿಕ್ಷಾಟನೆ ಮಾಡುತಾ ಇದ್ದರು( ನಿಜಗುಣ ಶಿವಯೋಗಿಗಳ ಹಾಡುಗಳು ನನಗೆ ಪರಿಚಯವಾದದ್ದು ಈ ಭಜನಾ ಮಂಡಲಿಯಿಂದಲೇ). ಬುಟ್ಟಿಗಳ ತುಂಬ ಮುದ್ದೆ, ರೊಟ್ಟಿ, ಅನ್ನ ಸಂಗ್ರಹವಾಗುತ್ತಿತ್ತು. ಕೊಳಗಗಳ ತುಂಬ ಸಾರು, ಪದಾತ ಸಂಗ್ರಹವಾಗುತ್ತಿತ್ತು. ಮಜ್ಜಿಗೆಗೆ ಪ್ರತ್ಯೇಕ ಸೋರೆಗಳಿರುತ್ತಾ ಇದ್ದವು. ಈ ಭಿಕ್ಷಾನ್ನ ಸ್ವೀಕಾರ ಮಾಡಿದ ಮೇಲೆ ಬೀರೇದೇವರ ಗುಡಿಯ ಹಿಂದಿನ ಕಣದ ಬಯಲಲ್ಲಿ ಎಲ್ಲಾ ಸೇರುತ್ತಿದ್ದರು. ಕಣದಲ್ಲಿ ಬೇವು ಹುಣಿಸೆ ಮರ ಬೆಳೆದು ತಣ್ಣಗೆ ನೆರಳು ಹರಡಿಕೊಂಡಿರುತ್ತಿತ್ತು. ಅಲ್ಲಿ ಎಲ್ಲ ಪ್ರಸಾದ ಸ್ವೀಕಾರ ಮಾಡುತ್ತಿದ್ದರು. ಹೀಗೆ ಕಂತೇ ಭಿಕ್ಷ ಒಂದು ವಾರ ನಡೆಸಿದರೆ ಮಳೆಯಾಗುತ್ತದೆ ಎಂದು ಈಶ್ವರ ದೇವರು ಅಪ್ಪಣೆ ಕೊಡಿಸಿದ್ದರು.
*****
ಕಂತೇ ಭಿಕ್ಷವೂ ಮಳೆ ತರಲಿಲ್ಲ. ನಾವೂ ಏನಾದರೂ ಮಾಡದಿದ್ದರೆ ತಪ್ಪಾಗುತ್ತದೆ ಎಂದುಕೊಂಡು ನಮ್ಮವರು ರಂಗಾನಾಥನ ಗುಡಿಯಲ್ಲಿ ವಿರಾಟಪರ್ವ ಓದಿಸಿದರು. ಬೆಳಿಗ್ಗೆ ಮಡಿಯಲ್ಲಿ ತುಪ್ಪದ ದೀಪ ಹಚ್ಚಿಟ್ಟು ವ್ಯಾಸ ಪೀಠದಲ್ಲಿ ಮಹಾಭಾರತ ಇಟ್ಟು ಪೂಜೆ ಮಾಡಿ ಸಂಜೆಯ ವರೆಗೂ ವಿರಾಟಪರ್ವ ಓದಿ, ಆಮೇಲೆ ಮುತ್ತೈದೇರು ಬಂದವರಿಗೆಲ್ಲಾ ಪಾನಕ ಕೋಸುಂಬರಿ ಎಲೆ ಅಡಕೆ ಕೊಟ್ಟು ಮಳೆಗೆ ಹಾರೈಸಿದ್ದೂ ಕೂಡ ಫಲ ಕೊಡಲಿಲ್ಲ. ವಿರಾಟಪರ್ವ ಓದಲಿಕ್ಕೆ ಕೆಲ್ಲೋಡಿಂದ ಬಂದಿದ್ದ ನಮ್ಮ ಪುಟ್ಟಪ್ಪಜ್ಜ ಹೇಳಿದ್ದು, ಒಂದು ಸಾರಿ ಓದಿದರೆ ಫಲ ಸಿಕ್ಕೋದಿಲ್ಲ ಕಣ್ರಪ್ಪಾ….ಒಂದು ವಾರಾನಾದ್ರೂ ನಿತ್ಯ ಪಾರಾಯಣ ಮಾಡಬಕು..!
*****
ಮಳೆ ಇಲ್ಲದೆ ಊರು ಹತ್ತಿ ಬೇಯುತಾ ಇತ್ತು. ಗಣೇಶನ ಬಾವಿಯಲ್ಲಿ ಕುಡಿಯೋ ನೀರು ತಳ ಸಾರಿಸುತ್ತಾ ಇತ್ತು. ಆಗ ನೋಡಿ ಈ ವಿಚಿತ್ರ ಘಟನೆ ನಮ್ಮೂರಲ್ಲಿ ನಡೆದದ್ದು. ಬೆಳಗಾ ಬೆಳಗ್ಗೆ ಭದ್ರಕ್ಕ ಓಡಿಬಂದಳು ನಮ್ಮ ಮನೆಗೆ…ಭೀಮಕ್ಕಾ…ಹಾಳುಗುಡಿ ಹನುಮಪ್ಪಂಗೆ ಯಾರೋ ರಾತ್ರಿನಾಗ ಮೆಣಸಿನ ಖಾರ ಹಚ್ಚಿಬಿಟ್ಟವ್ರೆ ಕಣ್ರೀ…!
ಈ ಸಾಹಸ ಮಾಡಿದವರು ಯಾರೋ!? ಹನುಮಪ್ಪನಿಗೆ ಮೆಣಸಿನ ಖಾರ ಚೆನ್ನಾಗಿ ರುಬ್ಬಿ ಮುಖ ಮುಸುಡಿ ನೋಡದೆ ಯಾರೋ ರಬ್ಬಡಿಸಿ ಬಿಟ್ಟಿದ್ದರು. ಇಡೀ ಮೂರ್ತಿ ಕೆಂಪಗೆ ರಕ್ತವರ್ಣದಲ್ಲಿ ಶೋಭಿಸುತ್ತಾ ಇತ್ತು. ನಾವು ಕುಂಕುಮಾಲಂಕಾರ ನೋಡಿದ್ದೆವೇ ವಿನಾ ಮೆಣಸಿನ ಖಾರದ ಅಲಂಕಾರ ನೋಡಿರಲಿಲ್ಲ. ಅದೆಷ್ಟು ಉರಿಕಿತ್ತಿರಬೇಕು ನಮ್ಮ ಹನುಮಪ್ಪನಿಗೆ. ಊರೆಲ್ಲಾ ಅಲ್ಲೋಲಕಲ್ಲೋಲ ವಾಗಿಹೋಯಿತು. ಮಧ್ಯಾಹ್ನ ಗುಮ್ಮಗೆ ಆಕಾಶದಲ್ಲಿ ಕರೀ ಮೋಡ ಮುತ್ತಿಕೊಂಡವು ಸ್ವಾಮಿ! ಸೂರ್ಯನ ಮುಖದರ್ಶನವೇ ಇಲ್ಲ. ಕೆರೆಯ ಕೆಸರು ಬಳಿದ ಹಾಗೆ ಇಡೀ ಆಕಾಶ ಕಪ್ಪಗೆ ಕಾಣುತಾ ಇದೆ. ಬಿರಿ ಬಿರಿ ಮಿಂಚು. ಗುಡುಗು. ಚಟ್ಚಡಿಲ್ ಸಿಡಿಲು. ಶುರುವಾಗೇ ಬಿಟ್ಟಿತು ಮಳೆ. ಕೊಡೆ ಹಿಡಿದುಕೊಂಡು ನಾವೆಲ್ಲಾ ಓಡಿದೆವು ಹನುಮಪ್ಪನ ಗುಡಿಗೆ. ಧೋ ಅಂತ ಮಳೆ -ಕುಂಭದ್ರೋಣ ಮಳೆ ಅಂತಾರಲ್ಲಾ ಅಂಥದು. ಜಂತಿ ಹಾರಿದ ಗರ್ಭಗುಡಿಯಲ್ಲಿ ನೀರು ತಪೋ ಅಂತ ಸುರಿದು, ಹನುಮಪ್ಪನ ಮೇಲೆ ಅಭಿಷೇಕ ವಾಗುತ್ತಾ, ಹಚ್ಚಿದ ಮೆಣಸಿನ ಖಾರ ಮೆಲ್ಲಗೆ ಸೀಳು ಸೀಳು ನದಿಯಲ್ಲಿ ಕರಗುತ್ತಾ, ಹನುಮಪ್ಪನ ಮೈ ನಿಚ್ಚಳವಾಗುವ ವೇಳೆಗೆ ರಾತ್ರಿ ಹತ್ತು ಗಂಟೆಯೇ ಆಗಿ ಹೋಯಿತು. ಹೊರಗೆ ಮಳೆಯೂ ನಿಂತಿತು. ಆಮೇಲೆ ಹನುಮಪ್ಪನ ಪೂಜಾರಿ ಉಷ್ಟುಮರ ವಿಟ್ಠಲ ಸ್ವಾಮಿ ಹನುಮಪ್ಪನಿಗೆ ಮೈತುಂಬಾ ಜೇನುತುಪ್ಪ ಹಚ್ಚಿ, ಅಭಿಷೇಕ ಮಾಡಿ, ಕುಂಕುಮಾರ್ಚನೆ ಮಾಡಿ, ಮೂತಿಗೆ ಒಂದು ಸುಲಿದ ಬಾಳೇ ಹಣ್ಣ ತುರುಕಿ, ಮಹಾ ಮಂಗಳಾರತಿ ಮಾಡಿದಾಗ ರಾತ್ರಿ ಹತ್ತು ಗಂಟೆ! ದಾರಿಯಲ್ಲಿ ನಿಂತ ಮಳೆನೀರ ಗುಂಡಿ ಹಾರಿ ಹಾರಿ ನಾವು ಮನೆ ಸೇರಿದಾಗ ಹತ್ತೂವರೆ. ಮನೆ ಸೇರಿದ್ದೆ ಮತ್ತೆ ಒಂದು ಹುರುಪು ಮಳೆ!
****
ಹೀಗೆ ಆ ವರ್ಷ ಮಳೆಯೇನೋ ಬಂತು. ಆದರೆ ಮಳೆಗಾಗಿ ಹನುಮಪ್ಪನಿಗೆ ಈ ರಣವೈದ್ಯಮಾಡಿದವರು ಯಾರು ಎನ್ನುವುದು ಮಾತ್ರ ಈವತ್ತಿನ ವರೆಗೂ ನಮ್ಮೂರಲ್ಲಿ ಒಡೆಯದ ಒಡಪಾಗಿಯೇ ಉಳಿದಿದೆ!

‍ಲೇಖಕರು avadhi

June 3, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಚ್ ಎಸ್ ವಿ ಕಾಲಂ: ಮತ್ತೆ, ಮರೆತ ಇತಿಹಾಸದ ಮರುಗಳಿಕೆ..

ತಾವರೆಯ ಬಾಗಿಲು-೧೮ ಎರಡು ಸಾವಿರ ವರ್ಷಗಳ ಹಿಂದೆ ತೆಂಕಣಭಾರತದ ದೇಶ-ಕಾಲ-ಪರಿಸ್ಥಿತಿ ಹೇಗಿತ್ತೆಂದು ನಾವು ಊಹಿಸುವುದೂ ಸಾಧ್ಯವಿಲ್ಲ. ಮರೆತು ಹೋದ...

ಎಚ್ ಎಸ್ ವಿ ಕಾಲಂ: ಕಾವ್ಯದಲ್ಲಿ ಭಾಷೆಯಲ್ಲದ ಭಾಷೆಯ ಮಿಡುಕಾಟ..

ತಾವರೆಯ ಬಾಗಿಲು-೧೬ ಕಾವ್ಯಕ್ಕೆ ಭಾಷೆಯೇ ಮೂಲ ಸಾಮಗ್ರಿ. ಭಾಷೆಯ ಮೂಲಕ ಕವಿಗಳು ತಮ್ಮ ಲೌಕಿಕಾಲೌಕಿಕ ಅನುಭವಗಳನ್ನು ಅಭಿವ್ಯಕ್ತಿಸುತ್ತಾರೆ. ಹಾಗೆ...

2 ಪ್ರತಿಕ್ರಿಯೆಗಳು

 1. Poornapragna

  ಮಾನ್ಯರೇ,
  ಮೇಷ್ಟ್ರ ಅನಾತ್ಮ ಕಥನ ತುಂಬಾ ಚೆನ್ನಾಗಿ ಬರ್ತಾ ಇದೆ. ಪ್ರತಿ ಕಂತನ್ನು ಕಾತುರತೆಯಿಂದ ಎದುರು ನೋಡ್ತಾ ಇದ್ದೇನೆ.

  ಪ್ರತಿಕ್ರಿಯೆ
 2. Muralidhar bhat

  ಅಧ್ಬುತವಾಗ ಸ್ವಾಮಿ ಹನುಮಪ್ಪನ ರಣವೈದ್ಯದ ಕಥೆ ಮು೦ದುವರಿಸಿ …ಕಾಯ್ತಾ ಇರ್ತೆವೆ..

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: