ಎಚ್ಹೆಸ್ವಿ ಬರೆವ ಅನಾತ್ಮ ಕಥನ: ಮರಣ ಯಾನ

ಅಳಿಯಲಾರದ ನೆನಹು-16 -ಎಚ್ ಎಸ್ ವೆಂಕಟೇಶ ಮೂರ್ತಿ ಆಷಾಢ ಮಾಸ. ಜಿಟಿ ಜಿಟಿ ಮಳೆ ಶುರುವಾಗಿತ್ತು. ತಲೆಯೆತ್ತಿನೋಡಿದರೆ ಕಂದುಗಪ್ಪಿನ ಆಕಾಶ ಸೂತಕದ ಮಂಕು ಕವಿಸಿತ್ತು. ಕಣಿವೆಯ ಹಾದಿಯಲ್ಲಿ ನಿಧಾನಕ್ಕೆ ಎರಡು ಬಂಡಿಗಳು ಚಲಿಸುತ್ತಿದ್ದವು. ಮುಂದಿನ ಬಂಡಿಯಲ್ಲಿ ಭೀಮಜ್ಜಿ. ಆಕೆಯ ಕೊರಳ ತನಕ ಮುಸುಕು. ಬಂಡಿಯ ಅದ್ಲಿಗೆ ತಕ್ಕಂತೆ ಅವಳ ಶರೀರ ಮೆಲ್ಲಗೆ ಅತ್ತಿತ್ತ ಕಂಪಿಸುತ್ತಾ ಇತ್ತು. ಆಕೆಯ ನೆತ್ತಿಯ ಹತ್ತಿರ ಕೂತಿದ್ದ ಭೀಮಜ್ಜ ಆಗಾಗ ಅವಳ ಮೂಗಿನ ಬಳಿ ಕೈಒಡ್ಡಿ ಇನ್ನೂ ವಸ್ತು ಇದೆಯೋ ಹೋಗಿಯೇ ಬಿಟ್ಟಿದೆಯೋ ನೋಡುತಾ ಇದ್ದರು. ಎತ್ತಿನ ಬಾಲ ಮುರಿಯುತ್ತಾ ಆಗಾಗ ಹುಸೇನಿ ಚಲ್ರೇ..ಚಲ್ರೇ ಗುಡಿಯಾ ಅನ್ನುವ ಧ್ವನಿ ಮಾತ್ರ ಕೇಳುತಾ ಇತ್ತು. “ಹುಸೇನೀ…ಊರು ಸೇರೋ ಅಷ್ಟರಲ್ಲಿ ವಸ್ತು ಹೋಗಿಯೇ ಬಿಡುತ್ತೋ ಏನೋ..?”-ಎಂದರು ಭೀಮಜ್ಜ. ಭೀಮಜ್ಜ ಭೀಮಕ್ಕನ ತಂಗಿ ಸೀತಮ್ಮನ ಗಂಡ. ಸುಮಾರು ಅರವತ್ತು ವರ್ಷದ ಮುದುಕ. ಭೀಮಕ್ಕನಿಗೆ ಐವತ್ತು ಮೀರಿರಲಿಕ್ಕಿಲ್ಲ. ಎರಡು ದಿನದಿಂದ ಆಕೆಗೆ ಮೈಮೇಲೆ ಪ್ರಜ್ಞೆಯೇ ಇರಲಿಲ್ಲ. ಉಭಾಶುಭಾ ಕೆಳಬೇಡಿ. ಹಾಸಿಗೆಯ ಮೇಲೆ ಕೊರಡಿನ ಹಾಗೆ ಬಿದ್ದುಕೊಂಡಿದ್ದಳು. ಅದೇನೋ ಮೆದುಳಿನ ರಕ್ತನಾಳ ಒಡೆದುಹೋಗಿದೆ ಅಂದಿದ್ದರು ಬಸಣ್ಣಯ್ಯ ಡಾಕ್ಟರು. ಬದುಕಿನುದ್ದಕ್ಕೂ ಚಟಪಟ ಓಡಾಡಿಕೊಂಡಿದ್ದ ಜೀವ. ಹೀಗಾಗ ಬಾರದಿತ್ತು ಎನ್ನಿಸಿ ಭೀಮಜ್ಜ ಹುಸೇನಿಗೆ ಕೇಳಿದರೂ ಕೇಳಲಿ ಎಂಬಂತೆ ಒಂದು ಗಟ್ಟಿಯಾದ ನಿಟ್ಟುಸಿರುಬಿಟ್ಟರು. ಮಳೆ ಸಣ್ಣಗೆ ಹನಿಯುತ್ತಲೇ ಇತ್ತು. ಭೀಮಜ್ಜ ಕೊಡೆ ಅರಳಿಸಿ ಭೀಮಕ್ಕನ ಮುಖದಮೇಲೆ ಹನಿ ಬೀಳದ ಹಾಗೆ ಹಿಡಿದರು. ತಾವು ಅರೆಬರೆ ನೆನೆಯುತ್ತಲೇ ಕೂತರು. ಚೆನ್ನಗಿರಿ ಹಳ್ಳದಲ್ಲಿ ಕಾಲು ಜಾರಿ ಬಿದ್ದದ್ದೇ ಒಂದು ನೆಪವಾಗಿತ್ತು. ಬಿದ್ದರೆ ತಲೆ ಒಡೆಯ ಬೇಕು. ತಲೆಗೆ ಒಂದು ಚೂರೂ ಪೆಟ್ಟಾಗಿಲ್ಲ. ಬುರುಡೆಯ ಒಳಗಿನ ರಕ್ತನಾಳ ಒಡೆಯುತ್ತದೆ ಎಂದರೆ ಏನು? ಭೀಮಜ್ಜನಿಗೆ ತಲೆಬುಡ ಅರ್ಥವಾಗಲಿಲ್ಲ. ಕಷ್ಟವಾನಿ. ಚಿಕ್ಕವಯಸ್ಸಲ್ಲೇ ಗಂಡನ್ನ ಕಳಕೊಂಡಳು. ಒಬ್ಬನೇ ಮಗ ಇದ್ದ. ಹದಿನಾರಾಗಿದ್ದಾಗ ಅವನೂ ಹೋಗಿಬಿಟ್ಟ. ಉಪನಯನ ಕೂಡ ಆಗಿತ್ತು ಮುಂಡೇದಕ್ಕೆ. ಆವಾಗಿಂದ ತಂಗಿಯರ , ಚಿಕ್ಕಮ್ಮನ ಬಾಣಂತಿತನ ಮಾಡಿಕೊಂಡು ಭೀಮಕ್ಕ ಆಯುಷ್ಯ ಸಮೆಸುತ್ತಾ ಇದ್ದಳು. ಇತ್ತೀಚೆಗೆ ತಂಗಿಯ ಮಗಳಿಗೆ ಅಡುಗೆ ಮಾಡಿಹಾಕಲಿಕ್ಕೆ ಇಲ್ಲಿಗೆ ಬಂದಿದ್ದಳು. ಅದೇನು ಗ್ರಹಚಾರವೋ? ಯಾಕಾದರೂ ಹಳ್ಳಕ್ಕೆ ಹೋದಳೋ? ಯಾಕಾದರೂ ಜಾರಿಬಿದ್ದಳೋ? ಎಂದು ಭೀಮಜ್ಜ ಗೊಣಗಿದರು. ಹುಸೇನಿ, ಭೀಮಜ್ಜ ತನಗೆ ಏನೋ ಹೇಳಿದರು ಅಂದುಕೊಂಡು, “ಸ್ವಾಮೀ?” ಎಂದು ಪ್ರಶ್ನಿಸಿದ. ತಲೆಗೆ ಪಟ್ಟಾಪಟ್ಟಿ ಮಫ್ಲರ್ ಸುತ್ತಿಕೊಂಡಿದ್ದ ಹೋತದ ಗಡ್ಡದ ಮುದುಕ ಹುಸೇನಿ…ಸುಮ್ಕೆ ಶನಿ ಹಿಡ್ಕಂಡಂಗೆ ಹಿಡ್ಕಂಡದೆ ನೋಡ್ರಿ… ಒಂದಫ ರಪರಪ ರಾಚಿ ನಿಂತರೆ ಎಷ್ಟೊ ಪಸಂದು..ಅಂದ ಜಿಟಿಜಿಟಿ ಮಳೆಯನ್ನು ಶಪಿಸುತ್ತ. ನಿಧಾನಕ್ಕೆ ಹನಿಗಳ ಗಾತ್ರ ಹೆಚ್ಚಾಗತೊಡಗಿತು. ಭೀಮಕ್ಕನಿಗೆ ಹಿಡಿದಿದ್ದ ಕೊಡೆಯನ್ನು ಮೆಲ್ಲಗೆ ಭೀಮಜ್ಜ ತಮ್ಮ ನೆತ್ತಿಯ ಮೇಲಕ್ಕೆ ವರ್ಗಾಯಿಸಿಕೊಂಡರು. ಹೋಗೋ ಜೀವ. ಅದಕ್ಕೆ ಕೊಡೆ ಹಿಡಿದರೂ ಒಂದೇ ಬಿಟ್ಟರೂ ಒಂದೆ ಅನ್ನಿಸಿತೇನೋ ಅವರಿಗೆ…ಮತ್ತೆ ಒದ್ದೆ ಕೈಯನ್ನು ಭೀಮಕ್ಕನ ಮೂಗಿನ ಬಳಿ ಹಿಡಿದು ನೋಡಿದರು. ಉಸಿರಾಟ ನಿಧಾನಕ್ಕೆ ಕಮ್ಮಿಯಾಗುತ್ತಾ ಇತ್ತು. ಚನ್ನಗಿರಿಯಿಂದ ಹೊರಟಾಗ ಏದುಸಿರು ಹಾಕುತಾ ಇದ್ದಳಲ್ಲ…ಸಾವಿನ ಗಳಿಗೆ ಸಮೀಪಿಸುತ್ತಿದೆಯೋ ಹ್ಯಾಗೆ? ಭೀಮಜ್ಜ ಗೀತೆಯ ಶ್ಲೋಕ ಪಠಿಸೋದಕ್ಕೆ ಶುರು ಹಚ್ಚಿದರು. ಭೀಮಕ್ಕ ಜೀವಚ್ಛವವಾಗಿ ಮಲಗಿದ್ದ ಗಾಡಿಯ ಹಿಂದೆ ಇನ್ನೊಂದು ಗಾಡಿ ಮೊದಲ ಗಾಡಿಯನ್ನು ಹಿಂಬಾಲಿಸುತ್ತಾ ಇತ್ತು. ಅದರಲ್ಲಿ ಒಂದು ಲೋಡು ಕಟ್ಟಿಗೆ ಇತ್ತು. ಮಳೆಗಾಲ. ಊರಲ್ಲಿ ಸೌದೆ ಸಿಕ್ಕುತ್ತದೋ ಇಲ್ಲವೋ? ಸಂಸ್ಕಾರಕ್ಕೆ ಯಾರನ್ನ ಕೇಳೋಕ್ಕೆ ಆಗತ್ತೆ? ಅದಕ್ಕೇ ಭೀಮಜ್ಜ ಭೀಮಕ್ಕನ ಹಿಂದೇ ಒಂದು ಸೌದೆ ಗಾಡಿಯನ್ನೂ ಖರೀದಿ ಮಾಡಿ ಹಳ್ಳಿಯ ಕಡೆ ಹೊಡೆಸಿದ್ದರು. ಭೀಮಕ್ಕನ ಮೂಗಿನಲ್ಲಿದ್ದ ಮೂಗುಬಟ್ಟು ತೆಗೆಯಲಿಕ್ಕೆ ಆಗದೆ ಸಣ್ಣಗೆ ರಕ್ತ ಹನಿದು ಮೂಗಿನ ಹೊಳ್ಳೆ ಕೆಂಪಾಗಿತ್ತು. ಅವಳ ಜತೆಗೆ ಅದೂ ಹೋಗಲಿ ಬಿಡು ಅಂದುಕೊಂಡರು ಭೀಮಜ್ಜ. ಸೀತಕ್ಕ ಕಿವಿಯ ಓಲೆ ಮಾತ್ರ ಬಿಡಿಸಿ ಇಟ್ಟುಕೊಂಡಳು.ಅಷ್ಟೆ. ಇನ್ನು ಕೈ ಬಳೆ ಹಿತ್ತಾಳೆಯವು. ಅವನ್ನು ದಿನವೂ ರಂಗೋಲಿ ಹಿಟ್ಟು ತಿಕ್ಕಿತಿಕ್ಕಿ ಬೆಳಗಿ ಭೀಮಕ್ಕ ಚಿನ್ನದ ಹೊಳಪು ತರುತ್ತಾ ಇದ್ದಳು. ದುರ್ಗಕ್ಕೆ ಹೊರಟಾಗ ನಿಂಗೆ ಏನು ತರ್ಲವ್ವಾ ಎಂದು ಕೇಳಿದರೆ ಭೀಮಕ್ಕನ ರೆಡಿಮೇಡ್ ಉತ್ತರ ಒಂದು ಜತೆ ವರ್ಕಿನ ಬಳೆ ತಗಂಬಾ ಮಾವ… ಭೀಮಜ್ಜ ನೆನೆಸಿಕೊಂಡರು. ಬಲೇ ಆಸೆಯ ಹೆಂಗಸು. ಐದು ಜನ ಅಕ್ಕತಂಗಿಯರಲ್ಲಿ ಇವಳಷ್ಟು ಚೆಲುವೆ ಯಾರೂ ಇರಲಿಲ್ಲ. ನ್ಯಾಯವಾಗಿ ಭೀಮಕ್ಕ ಭೀಮಜ್ಜನ ಹೆಂಡತಿಯೇ ಆಗಬೇಕಿತ್ತು. ಆದರೆ ತನಗಿಂತ ಚನ್ನಾಗಿದ್ದ ತನ್ನ ತಮ್ಮ ಶೀನಿಯನ್ನ ಅವಳು ಒಪ್ಪಿದಳು. ಭೀಮಕ್ಕನ ತಂಗಿ ಸೀತಮ್ಮ ತನ್ನ ವಧುವಾಗಿ ಬಂದಳು! ಸೀತಜ್ಜ ನೆನೆಸಿಕೊಂಡರು. ಭೀಮಕ್ಕ ತನ್ನ ಹೆಂಡತಿಯಾಗಿ ಬಂದಿದ್ದರೆ ಈ ಅವಸ್ಥೆಯೇ ಅವಳಿಗೆ ಬರುತ್ತಿರಲಿಲ್ಲವೇನೋ….ಯಾರ ಕೈಯಲ್ಲಿ ಉಂಟು ಇದೆಲ್ಲಾ? ಗಾಡಿ ಕಣಿವೆಯ ಏರಿಗೆ ಬಂದದ್ದರಿಂದ ಎತ್ತುಗಳು ಏದುಸಿರುಬಿಡಲಿಕ್ಕೆ ಹತ್ತಿದವು. ಅವುಗಳ ಗಟ್ಟಿಯಾದ ಮುಸು ಮುಸು ಭೀಮಜ್ಜನ ಕೆಪ್ಪ ಕಿವಿಗೂ ಕೇಳುವಷ್ಟು ಗಟ್ಟಿಯಾಗಿತ್ತು.ಮಳೆ ಈಗ ಸ್ವಲ್ಪ ಹರವಾಯಿತು. ಭೀಮಜ್ಜ ಕೊಡೆಯನ್ನು ಮತ್ತೆ ಭೀಮಕ್ಕನ ಮುಖಕ್ಕೆ ಸ್ಥಾಳಾಂತರಿಸಿದರು. ಹುಸೇನಿ ತಣ್ಣಗಾಗಿದ್ದ ಬೀಡಿ ಹಚ್ಚಲು ಪುಸ್ ಪುಸ್ ಎಂದು ಪ್ರಯಾಸ ಪಡುತ್ತಿದ್ದ. ನಿಧಾನಕ್ಕೆ ಕಣಿವೆಗೆ ಕತ್ತಲು ಇಳಿಯುತ್ತಾ ಗಾಡಿಗಳು ಊರನ್ನು ಸಮೀಪಿಸಿದವು. ಆಸ್ಪತ್ರೆಯ ಕಟ್ಟಡದ ಮುಂದೆ ಕಪ್ಪಗೆ ಎತ್ತರವಾಗಿ ನಿಂತಿರುವವರು ಮಲ್ಲಕಕ್ಕ ಅಲ್ಲವೇ? “ಭೀಮಣ್ಣ..ಹೆಂಗಿದಾಳಪ್ಪಾ?” ಎಂದರು ಮಲ್ಲಕಕ್ಕ. ಇನ್ನೂ ವಸ್ತು ಹೋಗಿಲ್ಲ ಎಂದರು ಭೀಮಜ್ಜ. ಮಲ್ಲಕಕ್ಕ ಅವರ ದಾಯಾದಿ ಸಂಬಂಧಿ. ಆತ ಗಾಡಿಯ ಹತ್ತಿರ ಬಂದು ಭೀಮಕ್ಕನನ್ನ ಪರೀಕ್ಷಿಸುವಂತೆ ಕಡ್ಡಿಗೀರಿ ನೋಡಿದರು. ಇವತ್ತು ರಾತ್ರೀನೂ ಕಳೀಲಾರ್ದು ಅಂದರು. ಪ್ರಾಣ ಹೋಗಿದ್ದರೆ ಹಿಂಗೇ ಕೆರೆ ಬಯಲಿಗೆ ಗಾಡಿಹೊಡಿಸೋಣ ಅಂತ ಇಲ್ಲಿಗೆ ಬಂದು ಕಾಯ್ತಾ ಇದ್ದೆ. ಹೆಣಾನ ಊರಲ್ಲಿ ತರಕ್ಕೆ ಹಳ್ಳಿಯೋರು ಒಪ್ಪಲ್ಲ… ಇಲ್ಲೇ ಇದ್ದು ಹೋಗಿದ್ರೆ ಸರಿ.. ಬೇರೆ ಕಡೆ ಹೋದರೆ ಹೆಣ ಊರಳೊಗೆ ತರಂಗಿಲ್ಲ..ಎಂದರು ಮಲ್ಲಕಕ್ಕ. ಇವರು ಇಷ್ಟು ಮಾತಾಡುವ ವೇಳೆಗೆ ಸೌದೆ ಗಾಡಿಯೂ ಬಂತು. ಮಲ್ಲಕಕ್ಕ ಅವನಿಗೆ ನೀನು ಗಾಡಿ ಕೆರೆಬಯಲಲ್ಲೇ ಇಳುವಿಬಿಡು… ಮತ್ತೆ ಸೌದೆ ಯಾಕೆ ಊರೊಳಗೆ ತಗಂಡು ಹೋಗದು…ನಮ್ಮ ಸೂರಪ್ಪನ್ನೂ ಅಲ್ಲೇ ಸುಟ್ಟಿದ್ದು…ನಾನು ಜಾಗ ತೋರಸ್ತೀನಿ ನಡಿ..ಎನ್ನುತ್ತಾ ಮಲ್ಲಕಕ್ಕ ಸೌದೆ ತುಂಬಿದ್ದ ಗಾಡಿ ಹತ್ತಿಕೊಂಡರು. ಭೀಮಜ್ಜಿ ಮಲಗಿದ್ದ ಗಾಡಿ ಊರೊಳಗೆ ಸಾಗಿತು. ಆ ಕತ್ತಲಲ್ಲು ಮನೆಯ ಬಾಗಿಲೆಗೆ ಬಂದ ಕೆಲವರು ಹೆಂಗವ್ರೆ ಸ್ವಾಮಿ ಅಂತ ಪ್ರಶ್ನಿಸಿದರು. ಇನ್ನೂ ಉಸಿರೈತಪ್ಪಾ..ಅಂದರು ಭೀಮಜ್ಜ. ಗಾಡಿ ಮನೆ ಮುಂದೆ ನಿಂತ ಮೇಲೆ ನಾಕು ಜನ ಕೈ ಹಾಕಿ ಭೀಮಕ್ಕನನ್ನು ಅನಾಮತ್ತು ಕೆಳಗಿಳಿಸಿ ಮನೆಯೊಳಗೆ ಒಯ್ಯಬೇಕು ಅನ್ನುವಾಗ , ಅವಳನ್ನು ಕಟ್ಟೆಯ ಮೇಲೆ ಮಲಗಿಸೋದೋ, ಒಳಗೆ ಪಡಸಾಲೆಗೆ ಒಯ್ಯೋದೋ ಅನುಮಾನ ಶುರುವಾಯಿತು. ಈಗ್ಲೋ ಆಗ್ಲೋ ಹೋಗಂಗೈತೆ…ಮನೆ ಒಳೀಕೆ ಯಾಕೆ ತಕ್ಕಂಡು ಹೋಗ್ತೀರಿ ಅಂದ ಮಾಲಿಂಗಣ್ಣ. ಬಾಗಿಲ ಬಳಿ ನಿಂತಿದ್ದ ಸೀತಕ್ಕನಿಗೆ ಯಾಕೋ ಮನಸ್ಸು ತಡೀಲಿಲ್ಲ. ಇಲ್ಲ…ಬುಗುಟಿನ ಮಂಚ ಅಂದ್ರೆ ಅವಳಿಗೆ ಪ್ರಾಣ..ಅಲ್ಲೇ ಅವಳ ಜೀವ ಹೋಗ್ಲಿ ಎಂದು ಭೀಮಕ್ಕನನ್ನು ಮನೆಯೊಳಗೆ ತರುವಂತೆ ಹಠಹಿಡಿದಳು. ಭೀಮಕ್ಕನನ್ನು ನಡುಮನೆಯ ಬುಗುಟಿನ ಮಂಚದ ಮೇಲೆ ಮಲಗಿಸಿದರು. ಮಂಚದ ಮೇಲೆ ಒಂದು ಈಚಲು ಚಾಪೆ ಹಾಸಿ ಸೀತಕ್ಕ ರೆಡಿ ಮಾಡಿದ್ದಳು. ಲೇಪು ಇನ್ನೂ ಹೊಸದು. ಅದರ ಮೇಲೆ ಪ್ರಾಣ ಹೋದರೆ ಅದನ್ನ ಅಗಸರಿಗೇ ಕೊಡಬೇಕಾಗುತಿತ್ತು. ಭೀಮಕ್ಕ ಗುಬ್ಬಿಯಂಥ ಹೆಂಗಸು. ಚಳಿ ಅಂದರೆ ಅವಳಿಗೆ ಆಗುತ್ತಾ ಇರಲಿಲ್ಲ. ರಾತ್ರಿ ಮಲಗುವಾಗ ತಲೆಗೆ ಒಂದು ಮಂಕಿ ಟೋಪಿ, ಕೊಳ್ಳಿನ ಸುತ್ತ ಮಫ್ಲರ್ರು. ತೋಳು ತುಂಬ ಅವಳೇ ಹಾಕಿದ್ದ ಎಣ್ಣೆರಂಗಿನ ಬಣ್ಣದ ಸ್ವೆಟ್ಟರ್ರು. ಮೇಲೆ ದುಪಟಿ. ಅದರ ಮೇಲೊಂದು ರಗ್ಗು. ಮಂಚದ ಮೇಲೆ ಸೊಳ್ಳೆ ಪರದೆ. ಅದರ ಮೇಲೆ ಚಳಿಯಾಗತ್ತೆ ಅಂತ ಬೆಡ್ಷೀಟ್ ಹಾಕಿಕೊಂಡು ಮಲಗೋಳು. ಈವತ್ತು ಅದ್ಯಾವುದರ ಪರಿವೆಯೂ ಅವಳಿಗಿಲ್ಲ. ಉಟ್ಟ ಸೀರೆ ಕೂಡ ಸಾಕಷ್ಟು ಒದ್ದೆಯಾಗಿತ್ತು. ಸೀತಕ್ಕ ನಡುಮನೆಯಲ್ಲಿ ಸೇರಿದವರನ್ನೆಲ್ಲಾ ಹೊರಗೆ ಕಳುಹಿಸಿ, ಭೀಮಜ್ಜಿಯ ಬಟ್ಟೆ ಕಳಚಿ, ಮಕ್ಕಳಿಗೆ ಮಾಡುವಂತೆ ಕಾಲುಗಳನ್ನೆತ್ತಿ ಒದ್ದೆಬಟ್ಟೆಯಿಂದ ಮೂತ್ರ, ಮಲಗಳನ್ನ ಒರೆಸಿ ಶುದ್ಧಿಮಾಡಿ, ಹೇಗೋ ಕಷ್ಟಪಟ್ಟು ಒಂದು ಲಂಗ ಅವಳ ಸೊಂಟಕ್ಕೆ ತೂರಿಸಿ, ಒಗೆದ ಬೆಚ್ಚನೆ ದುಪಟಿ ಹೊಡಿಸಿ ಒಪ್ಪಮಾಡಿದಳು. ಆಮೇಲೆ ಭೀಮಕ್ಕನ ಮುಖ ಸೋಪಿನ ಕೈಯಲ್ಲಿ ಒರೆಸಿ ಒರೆಸಿ, ಗಟ್ಟಿಯಾಗಿ ಇನ್ನೊಮ್ಮೆ ಅವಳನ್ನು ಭುಜ ಹಿಡಿದು ಅಲ್ಲಾಡಿಸಿ…ಅಕ್ಕಾ…ಕಣ್ಣು ಬಿಡು…ಎಲ್ಲಿಗೆ ಬಂದಿದೀ ನೋಡು…ನಿನ್ನ ಮನೆಗೆ ಬಂದಿದೀ…ಇನ್ನು ನಿಶ್ಚಿಂತೆಯಿಂದ ಕಣ್ಮುಚ್ಚಿಕೋ…ನಿನಗೆ ಏನೂ ಕಮ್ಮಿಯಾಗದ ಹಾಗೆ ಎಲ್ಲಾ ಕ್ರಿಯೆ ಮಾಡಿಸ್ತೀವಿ…ವೈಕುಂಠಕ್ಕೆ ಬೂಂದೀ ಉಂಡೇನೇ ಮಾಡಿಸ್ತೀವಿ… ಯಾವದೂ ಮನಸ್ಸಲ್ಲಿ ಇಟ್ಕಾ ಬ್ಯಾಡ..ಇತ್ಯಾದಿ ಹಲುಬಲಿಕ್ಕೆ ಶುರು ಹಚ್ಚಿದಳು. ದಾಯಾದಿ ಸುಬ್ಬಜ್ಜಿ ತೊಂಬತ್ತು ವರ್ಷದ ಹಣ್ಣು ಹಣ್ಣು ಮುದುಕಿ. ಜೀವ ಹೋಗೇ ಬಿಟ್ಟಿರತ್ತೆ ಅಂತ ನಾನು ಒಂದು ಹಂಡೆ ನೀರು ಕೂಡ ಕಾಯ್ಸಿದ್ದೆ ಕಣೇ…ಸಂಸ್ಕಾರ ಆಗ ತನಕ ಒಲೆ ಕೂಡಾ ಹಚ್ಚಂಗಿಲ್ಲ… ಮಕ್ಕಳೆಲ್ಲಾ ಹಸಕಂಡು ಕೂತ್ಕಂಡವೆ.. ಇವಳು ಒಬ್ಳು ಬೇಗ ಹೋಗಿಬಿಟ್ರೆ ರಾತ್ರೀನೆ ತಗೊಂದು ಹೋಗಿಬಿಡಬೌದು..ಎನ್ನುತ್ತಾ ಭೀಮಕ್ಕನ ಮುಖವನ್ನ ಹತ್ತಿರದಿಂದ ನೋಡಿ…ಹೆಚ್ಚೆಂದರೆ ಇನ್ನೊಂದು ಗಂಟೆ ಅಷ್ಟೆ… ಮೂಗಿನ ಹೊಳ್ಳೆ ನೋಡು ಹೆಂಗೆ ಹಾರಿಬೀಳ್ತಾ ಅವೆ… ಮಲ್ಲಕಕ್ಕನ್ನ ಕರೀರಿ…ಗೀತೇನಾರ ಓದ್ಲಿ ಅವ್ನು…ಅಂತ ಬೆನ್ನು ಬಗ್ಗಿಸಿಕೊಂಡೇ ಭೀಮಕ್ಕನ ಕೊನೆಯ ಯಾನಕ್ಕೆ ಮಾರ್ಗದರ್ಶನ ಮಾಡಿಸಲಿಕ್ಕೆ ಶುರುಹಚ್ಚಿತು. ಒಂದು ಗಂಟೆಯಾದರೂ ಭೀಮಕ್ಕನ ಉಸಿರಾಟ ನಿಲ್ಲಲಿಲ್ಲ. ದಾಯಾದಿಗಳ ಮನೆಯಲ್ಲಿ ಬೇಗ ಬೇಗ ಒಂದು ಅನ್ನ ಸಾರು ಮಾಡಿ ಧಾವಂತದಿಂದ ಊಟ ಮುಗಿಸಿದರು. ಮಕ್ಕಳೆಲ್ಲಾ ಹಾಸಿಗೆ ಸೇರಿಕೊಂಡವು. ಮೊಮ್ಮಗ ಆಗಿನ್ನೂ ಚಿಕ್ಕವನು. ಕತ್ತಲ ಕೋಣೆಯಲ್ಲಿ ಅವನು ಅಮ್ಮನ ಹೊದ್ದಿಕೆಯಲ್ಲಿ ಭಯದಿಂದ ಮುದುಡಿಕೊಂಡಿದ್ದನು. ಸೀತಜ್ಜಿ ಭೀಮಜ್ಜಿಯ ಉಸಿರಾಟನಿಲ್ಲುವುದನ್ನು ನಿರೀಕ್ಷಿಸುತ್ತಾ ಬುಗುಟಿನ ಮಂಚದ ಮೇಲೇ ಕೂತಿದ್ದಳು. ನಿದ್ದೆ ಬರದೆ ಇದ್ದ ಮೊಮ್ಮಗ ಮತ್ತೆ ಎದ್ದು ಬಂದು ಕೋಣೆಯ ಬಾಗಿಲಿಂದ ಇಣುಕಿ ನೋಡಿದ. ಮಲ್ಲಕಕ್ಕ ಗೀತೆ ಓದುತಾ ಇದ್ದರು. ಅದು ಗುಂಗಿ ಹುಳ ಮನೆಯ ಸೂರಿನ ಗಳ ಕೊರೆದ ಹಾಗೆ ಗುಂಯ್ ಗುಂಯ್ ಅಂತ ತಲೆ ಕೊರೆಯೋ ಸದ್ದು ಮಾಡುತಾ ಇತ್ತು. ಸಣ್ಣಗೆ ಒಂದೇ ಒಂದು ದೀಪ…ಯಾಕೋ ಮೊಮ್ಮಗನಿಗೆ ತುಂಬಾ ಭಯವಾಯಿತು….ರೂಮಿನೊಳಕ್ಕೆ ಓಡಿ ಗಟ್ಟಿಯಾಗಿ ಅವನು ಗುಬುರು ಹಾಕಿಕೊಂಡು ಮಲಗಿಬಿಟ್ಟ. *** ಭೀಮಜ್ಜಿ ಮೂರು ದಿನ ಮೂರು ರಾತ್ರಿ ಹಾಗೇ ಅಲ್ಲಾಡದೆ ಮಲಗಿದ್ದವರು ನಾಕನೇ ದಿನ ಬೆಳಿಗ್ಗೆ ಮೆಲ್ಲಗೆ ಕಣ್ಣುಬಿಟ್ಟು ಸೀತೇ ಅಂತ ಬಾವಿಯ ತಳದಿಂದಲೆಂಬಂತೆ ಕೂಗೋದೇ? ಆಮೇಲೆ ಒಂದು ವಾರಕ್ಕೆ ಭೀಮಜ್ಜಿ ಎದ್ದು ಕೂತೇ ಬಿಟ್ಟರು. ಭೀಮಜ್ಜ ಹೋಗಿ ಕೆರೆಬಯಲಲ್ಲಿ ಹಾಕಿಸಿ ಬಂದಿದ್ದ ಸೌದೆ ಮತ್ತೆ ಮನೆಗೆ ಹೊಡೆಸಿಕೊಂಡು ಬಂದರು. ಭೀಮಕ್ಕ..ನೀನು ಚೀಟಿ ತಿರುವಿ ಹಾಕಿಬಿಟ್ಟೆ ಅಂತ ಸುಬ್ಬಜ್ಜಿ ಬಗ್ಗಿಕೊಂಡೇ ಭೀಮಜ್ಜಿಯ ಬೆನ್ನಿಗೆ ಗುದ್ದಿ ಹಾಸ್ಯಮಾಡಿತು.ಈ ಅವಗಢ ಆದ ಮೇಲೆ ಇಪ್ಪತ್ತು ವರ್ಷ ಭೀಮಜ್ಜಿ ದಿಮ್ ರಂಗ ಅಂತ ಬದುಕಿದ್ದರು! ಏನಜ್ಜೀ ನೀನು ಒಂದುವಾರ ಎಚ್ಚರವಿಲ್ಲದೆ ಮಲಗಿದ್ದೆಯಲ್ಲಾ..ಅದರ ನೆನಪಿದೆಯಾ ನಿಂಗೆ?- ಎಂದು ಯಾರಾದ್ರೂ ಬಂದು ಕೇಳಿದರೆ ಭೀಮಜ್ಜಿ ತನ್ನ ಕಥೆ ಶುರುಹಚ್ಚೋಳು. ಮೊದಮೊದಲು ಅವಳು ಕಣ್ಣು ಮುಚ್ಚಿ ಮಲಗಿದ್ದರೂ ಬೇರೆಯವರು ಮಾತಾಡೋದು ಅವಳಿಗೆ ಆಗಾಗ ಕೇಳಿಸ್ತಾ ಇತ್ತಂತೆ. ಆಮೇಲೆ ಯಾರೋ ಅವಳನ್ನ ಎಲ್ಲಿಗೋ ಕರೆದುಕೊಂಡು ಹೋಗೋ ಹಾಗೆ ಆಯಿತಂತೆ. ದಾರಿಯ ಉದ್ದಕ್ಕೂ ಎಲೆಗಳೇ ಇಲ್ಲದ ಮರಗಳು ಅವಳಿಗೆ ಕಾಣೋವಂತೆ. ಮೈ ಹಗೂರಾಗಿ ಹಸಿವು ನೀರಡಿಕೆ ಏನೂ ಅವಳಿಗೆ ಆಗುತಾ ಇರಲಿಲ್ಲವಂತೆ. ಅವಳು ಮೆಲ್ಲಗೆ ನಡಿತಾ ಇದ್ದಳಂತೆ. ಆದರೆ ಪಾದ ಮಾತ್ರ ನೆಲಕ್ಕೆ ತಾಗುತಾ ಇರಲಿಲ್ಲವಂತೆ. ಎದುರಿಗೆ ಹಿಂಗೇ ತೇಲಿಕೊಂಡು ಯಾರ್ಯಾರೋ ಬರೋರಂತೆ. ಸುಮ್ಮನೆ ಮುಖ ನೋಡಿ ನಗೋರಂತೆ. ಒಂದು ಮಾತಿಲ್ಲ ಕಥೆಯಿಲ್ಲ. ಕೆಲವು ಸಾರಿ ಮಿನಿಮಿನಿ ನಕ್ಷತ್ರ ಅವಳ ಹತ್ತಿರಾನೇ ತೇಲಿ ಬರೋವಂತೆ. ಆ ನಕ್ಷತ್ರಗಳು ಇವಳು ಮುಟ್ಟಿದರೆ ತಣ್ಣಗೆ ಕೊರೆಯೋವಂತೆ. ಆಲಿಕಲ್ಲಿನ ಹಾಗೆ ಕೈಯಿಂದ ಜಾರಿಕೊಂಡು ಹೋಗೋವಂತೆ. ಇವಳೋ ಸಣ್ಣ ಹುಡುಗಿಯ ಹಾಗೆ ಅವನ್ನು ಅಟ್ಟಿಸಿಕೊಂಡು ಹೋಗೋಳಂತೆ. ಹಾಗೆ ಅಟ್ಟಿಸಿಕೊಂಡು ಹೋಗೋವಾಗ ಒಂದು ಸಾರಿ ಒಂದು ಕಣಿವೆಗೆ ಬಿದ್ದುಬಿಟ್ಟಳಂತೆ. ಥಟ್ಟನೆ ಕಣ್ಣುಬಿಟ್ಟು ಸೀತೇ ಅಂತ ಕೂಗಿದಳಂತೆ…. ತನ್ನ ಆಯುಷ್ಯದಲ್ಲಿ ಖಾಲಿಬಿದ್ದ ಒಂದು ವಾರವನ್ನು ಭೀಮಜ್ಜಿ ಹೀಗೆ ಏನೇನೋ ಹುಚ್ಚುಚ್ಚಾರ ಕಲ್ಪಿಸಿ ಭರ್ತಿ ಮಾಡುತಾ ಇದ್ದಳಾ? ಅಥವಾ ಅದೆಲ್ಲಾ ಅವಳ ನಿಜವಾಗಿಯೂ ಅನುಭವಿಸಿದ್ದೋ? ]]>

‍ಲೇಖಕರು avadhi

June 24, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಚ್ ಎಸ್ ವಿ ಕಾಲಂ: ಮತ್ತೆ, ಮರೆತ ಇತಿಹಾಸದ ಮರುಗಳಿಕೆ..

ತಾವರೆಯ ಬಾಗಿಲು-೧೮ ಎರಡು ಸಾವಿರ ವರ್ಷಗಳ ಹಿಂದೆ ತೆಂಕಣಭಾರತದ ದೇಶ-ಕಾಲ-ಪರಿಸ್ಥಿತಿ ಹೇಗಿತ್ತೆಂದು ನಾವು ಊಹಿಸುವುದೂ ಸಾಧ್ಯವಿಲ್ಲ. ಮರೆತು ಹೋದ...

ಎಚ್ ಎಸ್ ವಿ ಕಾಲಂ: ಕಾವ್ಯದಲ್ಲಿ ಭಾಷೆಯಲ್ಲದ ಭಾಷೆಯ ಮಿಡುಕಾಟ..

ತಾವರೆಯ ಬಾಗಿಲು-೧೬ ಕಾವ್ಯಕ್ಕೆ ಭಾಷೆಯೇ ಮೂಲ ಸಾಮಗ್ರಿ. ಭಾಷೆಯ ಮೂಲಕ ಕವಿಗಳು ತಮ್ಮ ಲೌಕಿಕಾಲೌಕಿಕ ಅನುಭವಗಳನ್ನು ಅಭಿವ್ಯಕ್ತಿಸುತ್ತಾರೆ. ಹಾಗೆ...

7 ಪ್ರತಿಕ್ರಿಯೆಗಳು

 1. Poornapragna

  ತುಂಬಾ ಮಾರ್ಮಿಕವಾಗಿದೆ. ಆಗಿನ ಕಾಲದ ಹಳ್ಳಿಯ ಸ್ತಿತಿ ಗತಿಯನ್ನು, ವೈದ್ಯಕೀಯ ತುರ್ತು ಪರಿಸ್ತಿತಿಗಳಲ್ಲಿ ಅಲ್ಲಿ ವಾಸಿಸುವರ ಬವಣೆಗಳನ್ನು – ಈಗಲೂ ಹಾಗೆ ಇದೆ ಅನ್ನೋ ನಂಬಿಕೆ ನನ್ನದು – ಚೆನ್ನಾಗಿ ಮೇಷ್ಟ್ರು ಚಿತ್ರಿಸಿದ್ದಾರೆ. ಈ ಲೇಖನ ಓದಿದ ಮೇಲೆ ನನ್ನ ತಾತ ಹೇಳುತ್ತಿದ್ದ “Great Influenza 1916 ” ಕತೆಗಳು ಜ್ಞಾಪಕ ಬರುತ್ತೆ! ಹೇಗೆ ಆಗ ಜನರು ಈ ರೀತಿಯ ಪರಿಸ್ತಿತಿಯನ್ನು ಧೈರ್ಯವಾಗಿ ಎದುರಿಸಿತ್ತಿದ್ದರು ಅಂತ ಆಶ್ಚರ್ಯ ಆಗುತ್ತೆ. ಮೇಷ್ಟ್ರಿಗೆ ಈ ನೆನಪುಗಳನ್ನು ಕೆದಕುವಂತೆ ಮಾಡಿದ್ದಕ್ಕೆ ಮತ್ತೊಮ್ಮೆ ಧನ್ಯವಾದಗಳು.

  ಪ್ರತಿಕ್ರಿಯೆ
 2. ಡಿ.ವಿ.ಶ್ರೀಧರ

  ನಮ್ಮ ಹಳ್ಳಿಯಲ್ಲು ವ್ಯೇಧ್ಯರು ಸಿಗದೆ ಹಲವು ಮುಗ್ಧ ಪ್ರಾಣಗಳು ಹೋಗಿದ್ದು ನೆನಪ್ಪಾಯ್ತು, ಆಗಿನ ದುಖ: ಬೀಮಜ್ಜಿ ಬದುಕಿದರು ಎಂದು ಓದುವತನಕ ಇತ್ತು. ಬೀಮಜ್ಜಿಯ ಹಾಗೆ ಅವರಿಗು ಆಯಸ್ಸು ಇದ್ದಿದ್ದರೆ..? ಅವಧಿಯ ಹೊಸ ವಿನ್ಯಾಸ ಚೆನ್ನಾಗಿದೆ.

  ಪ್ರತಿಕ್ರಿಯೆ
 3. Rajashekhar Malur

  ಆ ವರ್ಷ ತುಂಗೆ ಉಕ್ಕಿ ಹರಿಯುತ್ತಿದ್ದಳು. ತೀರ್ಥಹಳ್ಳಿಯ ಜನಗಳಿಗೆ ಪ್ರವಾಹ ಉಕ್ಕಿ ಮನೆಯೊಳಗೇ ಹರಿದು ಮನೆ ಮುಳುಗುವ ಮುನ್ನ ಆಚೆ ದಡ ಸೇರಿಕೊಳ್ಳುವ ತವಕ. ಊರಿಗೆ ಊರೇ ಮನೆ ಮಠ ಬಿಟ್ಟು ಹೋಗುವ ಅನಿವಾರ್ಯತೆ. ಮೇಲ್ಮಟ್ಟದ ಪ್ರದೇಶಕ್ಕೆ ಹೋಗುವ ಆದೇಶ. ಒಂದು ಮನೆಯಲ್ಲೊಂದು ಇಂದೋ ನಾಳೆಯೋ ಎಂಬತ್ತಿದ್ದ ಅಜ್ಜಿ. ಮನೆಯವರಿಗೆ ತಾವು ಹೋಗುವುದೇ ಒಂದು ಕಷ್ಟವಾಗಿದ್ದರೆ ಈ ಅಜ್ಜಿಯನ್ನೇನು ಮಾಡುವುದು ಎಂಬುದು ಇನ್ನೊಂದು ಪ್ರಶ್ನೆ! ದಿಕ್ಕು ತೋಚದೆ ಭಗವಂತನ ಮೇಲೆ ಭಾರ ಹಾಕಿ, ಆ ಅಜ್ಜಿಯನ್ನು ಒಂದು ತೊಟ್ಟಿಲಿಗೆ ಹಾಕಿ ಒಂದಷ್ಟು ಕಡಲೇಪುರಿ ಮತ್ತು ಕಡಲೇಕಾಯಿಬೀಜ ಪಕ್ಕದಲ್ಲಿಟ್ಟು, ಆ ತೊಟ್ಟಿಲನ್ನು ಅಟ್ಟದ ಮೇಲೆ ಇಟ್ಟು ಮನೆ ಬಿಟ್ಟರಂತೆ. ಮೂರು ಹಗಲೂ ಮೂರು ರಾತ್ರಿಯ ಬಳಿಕ ನದಿ ಹದ್ದುಬಸ್ತಿಗೆ ಬಂದ ಮೇಲೆ ಅಜ್ಜಿ ಹೋಗಿರತ್ತೆ ಎಂದೇ ಭಾವಿಸಿ ಮನೆಗೆ ಕಾಲಿಟ್ಟರೆ ಕ್ಷೀಣ ಸ್ವರವೊಂದು ಕೇಳಿಸಿತಂತೆ “ಎಲ್ಲಿ ಸಾಯಲ್ಲಿಕ್ಕೆ ಹೋಗಿದ್ದೀರೆ ಎಲ್ರೂ…?” ಎಂದು! ಆ ಅಜ್ಜಿ ಮೂರೂ ದಿನ ಆ ತೊಟ್ಟಿಲಲ್ಲೇ ಉಂಡು, ಮಲಗಿ, ಹೇತು, ಬದುಕಿತ್ತಂತೆ! ಈ ಕಥೆಯನ್ನು ನನ್ನ ದೂರದ ಸಂಬಂಧಿ ಇಂದಿರಜ್ಜಿ ನನ್ನ ಬಾಲ್ಯದಲ್ಲಿ ಹೇಳುತ್ತಿದ್ದರು… ಇದು ಅವರು ಕಂಡು ನೋಡಿದ ಸಂಗತಿ. ಈ ಕಥೆಯನ್ನೂ, ಹಾಗೂ ಇಂದಿರಜ್ಜಿಯನ್ನೂ (ಕಾದಂಬರಿಗಾರ್ತಿ ಎಂ. ಕೆ. ಇಂದಿರಾ) ನೆನಪಿಗೆ ತಂದ ನಿಮಗೆ ಧನ್ಯವಾದಗಳು ಮೇಷ್ಟ್ರೇ… ತುಂಬಾ ಮನಸ್ಸು ಮುಟ್ಟುವ ರೀತಿಯಲ್ಲಿದೆ ನಿಮ್ಮ ಅನಾತ್ಮ ಕಥನ…
  ಮಾಳೂರು ರಾಜಶೇಖರ

  ಪ್ರತಿಕ್ರಿಯೆ
 4. ರಾಮಚಂದ್ರ ನಾಡಿಗ್, ಕದರನಹಳ್ಳಿ

  ನನಗೂ ಬಾಲ್ಯದ ನೆನಪಾಗ್ತಿದೆ.. ನಮ್ಮೂರಲ್ಲೂ ಜನ ಹುಷಾರಿಲ್ದಾಗ ಬಂಡಿ ಕಟ್ಟಿಕೊಂಡು 5 ಕಿಲೋಮೀಟರ್ ದೂರದ ತ್ಯಾವಣಿಗೆ ಆಸ್ಪತ್ರೆಗೆ ಹೋಗ್ತಿದ್ರು… ಬಂಡಿಯ ಮೇಲೆ ಹಾಸಿಗೆ ಹಾಸಿ ಅದರಲ್ಲಿ ಹುಷಾರಿಲ್ಲದವರನ್ನು ಮಲಗಿಸಿ ಕರೆದೊಯ್ಯುತ್ತಿದ್ದರು. ಜೊತೆಗೆ ಒಬ್ರು ಕೊಡೆ ಹಿಡಿದುಕೊಳ್ತಿದ್ರು… ಇನ್ನು ಬಂಡಿ ಇಲ್ಲದಿದ್ರೆ ಪಾಪ 2 ಕಿಲೋಮೀಟರ್ ಕದರನಹಳ್ಳಿ ಕ್ರಾಸಿಗೆ ನಡೆದುಕೊಂಡು ಹೋಗಬೇಕು… ಅಲ್ಲಿಂದ ಬಸ್ ಗೆ ತ್ಯಾವಣಿಗೆಗೆ ಹೋಗಬೇಕು…
  ಒಟ್ಟಿನಲ್ಲಿ ನಿಮ್ಮ ಇಂತಹ ಲೇಖನಗಳು ನನಗೆ ನನ್ನ ಬಾಲ್ಯದ, ಹಳ್ಳಿಯ ಚಿತ್ರಣಗಳನ್ನು ಕಣ್ಣಮುಂದೆ ತರಿಸುತ್ತವೆ
  ರಾಮಚಂದ್ರ ನಾಡಿಗ್, ಕದರನಹಳ್ಳಿ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: