ಎಚ್ಹೆಸ್ವಿ ಬರೆವ ಅನಾತ್ಮ ಕಥನ: ದಪ್ಪ ಕನ್ನಡಕ, ದೊಗಲೆ ಪ್ಯಾಂಟು, ಮಾಸಿದ ಷರ್ಟು

ಅಳಿಯಲಾರದ ನೆನಹು-೧೯ ಎಚ್ ಎಸ್ ವೆಂಕಟೇಶ ಮೂರ್ತಿ ಎಪ್ಪತ್ತು ಎಂಭತ್ತನೇ ದಶಕದಲ್ಲಿ ಪುಂಖಾನುಪುಂಖವಾಗಿ ಸಣ್ಣಕತೆಗಳನ್ನು ರಚಿಸಿ ಕನ್ನಡದ ಅತ್ಯಂತ ಜನಪ್ರಿಯ ಲೇಖಕರಾಗಿದ್ದ ಎನ್.ಎಸ್.ಚಿದಂಬರರಾವ್ ಎನ್ನುವ ಲೇಖಕ ಸಾರ್ವಜನಿಕ ಸ್ಮೃತಿಯಿಂದ ಇನ್ನೂ ಅಳಿಸಿ ಹೋಗಿಲ್ಲ ಎಂದು ಭಾವಿಸುತ್ತೇನೆ. ಯಾಕೋ ಈಚಿನ ದಿನಗಳಲ್ಲಿ ಅವರ ನೆನಪು ನನ್ನನ್ನು ತುಂಬಾ ಕಾಡುತ್ತಿದೆ. ಅವರನ್ನು ಕುರಿತಂತೆ ಕೆಲವು ಅತ್ಯಂತ ಖಾಸಗಿ ನೆನಪುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಎನ್ನಿಸುತ್ತಿದೆ. ನಾನು ಮಲ್ಲಾಡಿಹಳ್ಳಿಯ ವಿವಿಧೋದ್ದೇಶ ಪ್ರೌಢಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ದಿನಗಳು ಅವು. ೧೯೬೮, ೬೯ ಇರಬಹುದು. ಇಂಗ್ಲಿಷ್ ಕಲಿಸಲು ಒಬ್ಬ ಹೊಸ ಉಪಾಧ್ಯಾಯರು ನೇಮಕವಾಗಿದ್ದಾರೆ ಎಂದು ಸ್ಟಾಫ್ ರೂಮಿನಲ್ಲಿ ಕಲೀಗೊಬ್ಬರು ಹೇಳಿದರು. ಮತ್ತೂ ಕಿಟಕಿಯ ಬಳಿಗೆ ನನ್ನನ್ನು ಕರೆದು ದೂರದಲ್ಲಿ ಗಾಳಿಯಲ್ಲಿ ತೂರಿಕೊಂಡು ಬರುತ್ತಿರುವ ತೆಳ್ಳನೆಯ ಎತ್ತರದ ವ್ಯಕ್ತಿಯೊಬ್ಬರನ್ನು ತೋರಿಸಿ, ನೋಡಿ…ಅವರೇ ಆ ಮನುಷ್ಯ..ಎಂದೂ ನನ್ನ ಕಲೀಗ್ ಹೇಳಿದರು. ಮೇಲ್ನೋಟಕ್ಕೆ ಆಕರ್ಷಿಸುವ ವ್ಯಕ್ತಿಯೇನಲ್ಲ. ಸ್ಟಾಫ್ ರೂಮಿಗೆ ಅವರು ಬಂದಾಗ ಬನ್ನಿ..! ನೀವು ಹೊಸ ಇಂಗ್ಲಿಷ್ ಟೀಚರ್..? ಎಂದು ಅವರನ್ನು ಸ್ವಾಗತಿಸಿದೆ. ಬಿಳಿ ಹಳದಿ ಮಿಶ್ರಿತ ಬಣ್ಣ ಆತನದು. ಕಣ್ಣಿಗೆ ಇಷ್ಟು ದಪ್ಪ ಸೋಡ ಕನ್ನಡಕ. ದೊಗಲೆ ಪ್ಯಾಂಟು. ಮಾಸಿದ ಮತ್ತು ಇಸ್ತ್ರಿಯಿಲ್ಲದ ಷರ್ಟು. ತಲೆಯಲ್ಲಿ ತೆಳ್ಳಗಾಗುತ್ತಿರುವ ಡೈ ಮಾಡಿದ ಕೂದಲನ್ನು ಹಿಂದಕ್ಕೆ ಬಾಚಿಕೊಂಡಿದ್ದರು. ಎಲೆಅಡಕೆ ಜಗಿಯುವ ಚಟದವರಿರಬೇಕು. ಹಲ್ಲುಗಳೆಲ್ಲಾ ಕೆಂಪಾಗಿದ್ದವು. ಅವರ ಪಕ್ಕ ಕುಳಿತಾಗ ಹೊಗೆಸೊಪ್ಪಿನ ಘಾಟು ಹೊಡೆಯುತ್ತಿತ್ತು. ಒಟ್ಟಿನಲ್ಲಿ ತುಂಬ ವಿಲಕ್ಷಣವಾದ ವ್ಯಕ್ತಿಯಾಗಿ ಅವರು ನನಗೆ ಕಾಣಿಸಿದರು. ಆದರೆ ಮೇಲ್ನೋಟಕ್ಕೆ ತೋರುವಷ್ಟು ಚಿದಂಬರರಾವ್ ಭೋಳೇ ಮನುಷ್ಯರಾಗಿರಲಿಲ್ಲ. ಒಂದೇ ವಾರದಲ್ಲಿ ಗಂಟೆಗಟ್ಟಲೆ ಹರಟುವಷ್ಟು ಅವರು ನನಗೆ ಹತ್ತಿರವಾದರು. ಅದಕ್ಕೆ ಮುಖ್ಯಕಾರಣ ನಮ್ಮ ನಡುವೆ ಕೆಲವು ಸಮಾನ ಆಸಕ್ತಿಗಳಿದ್ದವು. ನನ್ನಂತೆ ಅವರೂ ಸಾಹಿತ್ಯ ಸಂಗೀತದ ಹುಚ್ಚರಾಗಿದ್ದರು. ಕುಮಾರವ್ಯಾಸನಿಂದ ಹಿಡಿದು ಶಿವರಾಮ ಕಾರಂತರವರೆಗೆ ಯಾವ ಲೇಖಕನ ಬಗ್ಗೆಯಾದರೂ ಅವರೊಂದಿಗೆ ಚರ್ಚಿಸುವುದು ಸಾಧ್ಯವಿತ್ತು. ಕುಮಾರವ್ಯಾಸ ಅವರ ಅತ್ಯಂತ ಪ್ರಿಯ ಕವಿಯಾಗಿದ್ದ. ಗಮಕರೂಪದಲ್ಲಿ ಭಾರತವನ್ನು ಅವರು ವಾಚಿಸುತ್ತಿದ್ದರು. ಪುಸ್ತಕ ನೋಡದೆಯೇ ಹತ್ತಾರು ಪದ್ಯಗಳನ್ನು ಹೇಳಬಲ್ಲವರಾಗಿದ್ದರು. ಅವರ ಕಂಠ ತುಂಬ ಮಧುರವಾಗಿತ್ತು. ಅವರು ಹಾಡುತ್ತಿದ್ದರೆ ಒರಟಾದ ಬಿದಿರು ಕೊಳವೆಯಿಂದ ಇಂಪಾದ ಮುರುಳಿನಾದ ಕೇಳುವ ವೈದೃಶ್ಯ ಸದಾ ನನಗೆ ನೆನಪಾಗುತ್ತಿತ್ತು.ಅವರ ಮೂಳೆಹಾದ ಮುಖ, ಬಾಗಿದ ತೆಳ್ಳನೆಯ ಮೈಕಟ್ಟು, ಸ್ವಲ್ಪ ಉಬ್ಬಿದ್ದ ಬಣ್ಣಗೆಟ್ಟ ಹಲ್ಲು, ನೂರಾರು ಸ್ಪೇರ್ ಪಾರ್ಟುಗಳನ್ನು ಜೋಡಿಸಿ ನುಟ್ಟು ಬೋಲ್ಟು ಹಾಕಿದಂತಿರುವ ಹಿಮ್ಮಡಿ, ಮತ್ತೂ ಹೊಗೆಪುಡಿಯ ಮೂಗಡರುವ ಘಾಟು ಎಲ್ಲವೂ ಅವರು ಹಾಡುವಾಗ ಮರೆತುಹೋಗುತ್ತಿದ್ದವು. ಮಧುರವಾದ ಅವರ ಧ್ವನಿಯನ್ನೇ ಆಲಿಸುತ್ತಾ ನಾನು ಕಣ್ಣುಮುಚ್ಚಿ ಕುಳಿತುಕೊಳ್ಳುತ್ತಿದ್ದೆ.ಇವನ್ಯಾವನೋ ಶಾಪಗ್ರಸ್ತ ಗಂಧರ್ವ ಅನ್ನಿಸುತ್ತಿತ್ತು ನನಗೆ. ನಿಮ್ಮ ದೃಷ್ಟಿ ಇಷ್ಟು ಸುಮಾರಾಗಲು ಏನು ಕಾರಣ ಎಂದು ಒಮ್ಮೆ ಕೇಳಿದಾಗ , ಅವರು ಮುಗುಳ್ ನಕ್ಕು ಎಲ್ಲಾ ನನ್ನ ಓದಿನ ಹುಚ್ಚಿನ ಪರಿಣಾಮ ಎಂದರು. ಎಸ್ ಎಸ್ ಎಲ್ ಸಿ ಯಲ್ಲಿ ಅವರು ಯಾಂಕ್ ಪಡೆದಿದ್ದರು. ಇಂಟರ್ ಓದುವಾಗ ಯಾಂಕ್ ಪಡೆಯಲೇ ಬೇಕು ಎಂದು ಹಗಲೂ ರಾತ್ರಿ ಓದಿದ ಪರಿಣಾಮವಾಗಿ ಒಂದು ಬೆಳಿಗ್ಗೆ ಎದ್ದಾಗ ಅವರಿಗೆ ಕಣ್ಣೇ ಕಾಣಲಿಲ್ಲವಂತೆ. ಆಮೇಲೆ ಐ ಡಾಕ್ಟರ್ ಇಷ್ಟರ ಮಟ್ಟಿಗೆ ಮತ್ತೆ ಅವರ ದೃಷ್ಟಿ ಲಾಭವನ್ನು ಕುದುರಿಸಿದ್ದರು. ಅವರು ಪುಸ್ತಕವನ್ನು ಓದುವಾಗ , ನ್ಯೂಸ್ ಪೇಪರ್ ಓದುವಾಗ ಅರ್ಧ ಅಡಿ ಅಂತರದಲ್ಲಿ ಮುಖಕ್ಕೆ ಅಡ್ಡವಾಗಿ ಹಿಡಿದುಕೊಂಡು ಓದುತ್ತಾ ಇದ್ದರು. ತೆಳ್ಳನೆಯ ಕಾಲ ಮೇಲೆ ಕಾಲು ಹಾಕಿ , ಎಡ ಪಾದದ ತುದಿಯನ್ನು ಹವಾಯಿ ಚಪ್ಪಲಿ ಸಮೇತ ಅಲ್ಲಾಡಿಸುತ್ತಾ ಅವರು ನಾನು ಕೊಟ್ಟ ಪದ್ಯವನ್ನು ಓದಿ ಗಟ್ಟಿಯಾಗಿ ಮುಸುಕರೆಯುತ್ತಿದ್ದ ದೃಶ್ಯ ನನ್ನ ಕಣ್ಣಿಗೆ ಕಟ್ಟಿದ ಹಾಗಿದೆ. ಕಾವ್ಯದ ಅತ್ಯಂತ ಸೂಕ್ಷ್ಮ ಓದುಗರಾಗಿದ್ದ ಚಿದಂಬರರಾಯರ ಸಾಫ್ ಸೀದಾ ಸಣ್ಣಕತೆಗಳಿಗೂ ಅವರ ಕಾವ್ಯ ಸಂವೇದನೆಗೂ ಅಜಗಜಾಂತರ ವ್ಯತ್ಯಾಸವುಂಟು ಅನ್ನಿಸುತ್ತಿತ್ತು. ನನ್ನ ಆ ಕಾಲದ ಕವಿತೆಗಳ ಮೊದಲ ಓದುಗರಾಗಿದ್ದ ಚಿದಂಬರರಾವ್ ಗುಣ ದೋಷಗಳನ್ನು ಬೊಟ್ಟಿಟ್ಟು ಖಚಿತವಾಗಿ ತೋರಿಸಬಲ್ಲ ಸಾಮರ್ಥ್ಯವನ್ನು ಹೊಂದಿದ್ದರು. ಇಷ್ಟವಾದರೆ ಮುಕ್ತಕಂಠದಿಂದ ಪ್ರಶಂಸಿಸುತ್ತಿದ್ದರು. ಇಷ್ಟವಾಗದಿದ್ದರೆ ಯಾಕೋ ಇದು ನನಗೆ ಹಿಡಿಸಲಿಲ್ಲ ಮೂರ್ತಿ ಅಂತ ಮುಖಕ್ಕೆ ಹೊಡೆದ ಹಾಗೆ ಹೇಳುತ್ತಿದ್ದರು. ನನ್ನ ಮತ್ತು ಅವರ ಪರಿಚಯ ಗಾಢವಾದ ಮೇಲೆ ಅವರು ನಮ್ಮ ಮನೆಗೆ ಬರುವುದು, ನಾನು ಅವರ ಮನೆಗೆ ಹೋಗುವುದು ಪ್ರಾರಂಭವಾಯಿತು. ಅವರ ಮೊದಲ ಮಗಳು ಕನಕಮಂಜುಳ ಆಗಿನ್ನೂ ಕೈಗೂಸು. ಅಸ್ತವ್ಯಸ್ತವಾಗಿ ಅವರ ಮನೆಯಲ್ಲಿ ಸಾಮಾನು ಸರಂಜಾಮು ಚೆಲ್ಲಿಬಿದ್ದಿರುವುದು ಸಾಮಾನ್ಯ ದೃಶ್ಯವಾಗಿತ್ತು. ಅವರ ಪತ್ನಿಗೆ ಮನೆಗೆಲಸ ನೋಡಿಕೊಳ್ಳುತ್ತಾ, ಮಗುವನ್ನೂ ನೋಡಿಕೊಳ್ಳುತ್ತಾ ಮನೆಯನ್ನೂ ಸ್ವಚ್ಛವಾಗಿ ಇಟ್ಟುಕೊಳ್ಳುವುದು ಕಷ್ಟವಾಗುತ್ತಿತ್ತು. ಚಿದಂಬರರಾವ್ ಒಳ್ಳೆ ಪತಿ ಮತ್ತು ಒಳ್ಳೆ ತಂದೆ ಎನ್ನಬಹುದು-ನನಗೆ ಹೋಲಿಸಿದರೆ! ಯಾವ ಕೆಲಸ ಮಾಡಲಿಕ್ಕೂ ಹಿಂಜರಿಯುತ್ತಿರಲಿಲ್ಲ. ಒಂದು ದಿನ ಉಗಾದಿ ಹಬ್ಬದ ಶುಭಾಶಯ ಹೇಳಲಿಕ್ಕೆ ಅವರ ಮನೆಗೆ ಹೋದರೆ ಸ್ವತಃ ಚಿದಂಬರರಾವ್ ಒಂದು ಟವಲ್ಲು ಸುತ್ತಿಕೊಂಡು ಹೂರಣ ರುಬ್ಬುತ್ತಾ ಕೂತಿದ್ದಾರೆ! ನಾನು ಅವರ ಮುಂದೆ ಒಂದು ಕಡ್ಡಿಚಾಪೆಯ ಮೇಲೆ ಕೂತಿದ್ದೇನೆ. ಒಳಗೆ ಅವರ ಪತ್ನಿ ರಮಾ ನನಗಾಗಿ ಕಾಫಿ ಮಾಡುತ್ತಿದ್ದಾರೆ. ಹೀಗೇ ನಮ್ಮ ಕಾವ್ಯ ಚರ್ಚೆ ಮುಂದುವರೆಯುತ್ತದೆ. ಚರ್ಚೆಯ ವಿಷಯ ಹಿಂದಿನ ದಿನ ಪ್ರಜಾವಾಣಿಯಲ್ಲಿ ಬಂದಿರುವ ಅಡಿಗರ ನವ್ಯ ಕವಿತೆ. ನೋಡಿ ಅಲ್ಲೇ ಎಲ್ಲೋ ಮೂಲೆಯಲ್ಲಿ ಬಿದ್ದಿರಬೇಕು ಪ್ರಜಾವಾಣಿ…ಓದಿ…ನನಗಂತೂ ತಲೆಬುಡ ಅರ್ಥವಾಗಿಲ್ಲ ಎನ್ನುತ್ತಾರೆ ಚಿದಂಬರರಾವ್. ಆಮೇಲೆ ನಮ್ಮ ಓದು, ವಿಶ್ಲೇಷಣೆ ಪಾರಂಭವಾಗುತ್ತದೆ. ಅವರು ಹೂರಣ ರುಬ್ಬುತ್ತಲೇ ಕಾವ್ಯಚರ್ಚೆಯನ್ನು ಮುಂದುವರೆಸುತ್ತಾರೆ. ನೀವು ರುಬ್ಬೋ ಕೆಲಸ ಮುಗಿಸಿ ಆಮೇಲೆ ಮಾತಾಡಬಾರದೆ ಅನ್ನುತ್ತಾರೆ ಅವರ ಪತ್ನಿ. ಎರಡೂ ಆಗಬೇಕಾದ ಕೆಲಸಗಳೇ ಅನ್ನುತ್ತಾರೆ ಚಿದಂಬರರಾವ್. ಚಿದಂಬರರಾವ್ ನನಗೆ ಅನೇಕ ಇಂಗ್ಲಿಷ್ ಕವಿತೆಗಳನ್ನು ಓದಿ ವಿವರಿಸುತ್ತಾ ಇದ್ದರು. ಎಲಿಯಟ್ ಕವಿಯ ವೇಸ್ಟ್ ಲ್ಯಾಂಡ್ ಕವಿತೆಯನ್ನು ನಾವು ಆಳವಾಗಿ ಅಭ್ಯಾಸ ಮಾಡಿದ್ದು ಆವಾಗ. ಕೆಲವುಬಾರಿ ಪ್ರಿನ್ಸಿಪಾಲ್ ರಾಮಚಂದ್ರಮೂರ್ತಿಗಳು, ಕನ್ನಡ ಉಪನ್ಯಾಸಕ ಜಿ.ಎಲ್.ರಾಮಪ್ಪ ನಮ್ಮ ಜೊತೆಯಲ್ಲಿ ಸೇರಿಕೊಳ್ಳುತ್ತಿದ್ದರು. ಇಎಲ್ಲು, ಸೀಎಲ್ಲು, ಪ್ರೊಮೋಷನ್ನು ಇತ್ಯಾದಿ ಮಾತಾಡದೆ ಸ್ಟಾಫ್ ರೂಮಲ್ಲಿ ಕೂತು ನಾವು ಕುಮಾರವ್ಯಾಸ ಬೇಂದ್ರೆ ಪುಟ್ಟಪ್ಪ ಅಡಿಗ ಕಾರಂತ ಅಂತ ಮಾತಾಡೋದು, ಕೆಲವು ಬಾರಿ ತಾರಕ ಧ್ವನಿಯಲ್ಲಿ ಜಗಳ ಮಾಡೋದು ನಮ್ಮ ಉಳಿದ ಅಧ್ಯಾಪಕರಿಗೆ ತಮಾಷೆಯ ವಿಷಯವಾಗಿತ್ತು. ವಿಠೋಬಣ್ಣ ಒಂದು ಸಾರಿ ಕೇಳಿದರು. ನೀವು ಚರ್ಚೆಮಾಡುತ್ತಿರೋ ಪದ್ಯ ಟೆಕ್ಸ್ಟ್ ಬುಕ್ಕಲ್ಲಿ ಇದೆಯಾ? ಇಲ್ಲಾ ಅಂದಮೇಲೆ ಯಾಕಿಷ್ಟು ತಲೆ ಕೆಡಿಸಿಕೊಳ್ತೀರಿ? ಅಡಿಗ ಬೇಂದ್ರೆ ಪುಟ್ಟಪ್ಪ ಮೊದಲಾದವರು ನಮ್ಮ ಜೀವನದಲ್ಲಿ ನಾವು ಕಲಿಯಲೇ ಬೇಕಾದ ಪಠ್ಯವಾಗಿದ್ದರು ಎಂಬುದನ್ನು ನನ್ನ ಗೆಳೆಯರಿಗೆ ಮನವರಿಕೆ ಮಾಡಿಕೊಡುವುದು ನನಗೆ ಕಷ್ಟವಾಗುತ್ತಿತ್ತು. **** ಕ್ರಮೇಣ ನನಗೆ ಗೊತ್ತಾದದ್ದು ಚಿದಂಬರರಾವ್ ನನಗೆ ಅಪರಚಿತವಾಗಿದ್ದ ಅನೇಕ ವಿಷಯಗಳಲ್ಲಿ ತೀವ್ರ ಆಸಕ್ತಿ ಹೊಂದಿದವರಾಗಿದ್ದರು. ಅವುಗಳಲ್ಲಿ ಒಂದು ಅವರ ವಶೀಕರಣ ವಿದ್ಯೆ. ಒಮ್ಮೆ ಇದ್ದಕ್ಕಿದ್ದಂತೆ ಅವರು ತಮಗೆ ವಶೀಕರಣ ಗೊತ್ತು ಎಂದರು. ನಿಮ್ಮನ್ನು ಕ್ಷಣಾರ್ಧದಲ್ಲಿ ವಶೀಕರಣ ಮಾಡಿ ನಿಮ್ಮ ಮನಸ್ಸಿನೊಳಗಿನದೆಲ್ಲಾ ಹೊರಗೆಳೆಯಬಲ್ಲೆ..! ಎಂದರು. ಹಾಗಾದರೆ ಈವತ್ತು ರಾತ್ರೀನೇ ನಿಮ್ಮ ಪ್ರಯೋಗ ನನ್ನ ಮೇಲೆ ಮಾಡಿಯೇ ಬಿಡಿ ಎಂದೆ. ರಾತ್ರಿ ಎಂಟುಗಂಟೆ ಸುಮಾರಿಗೆ ಚಿದಂಬರರಾವ್ ನಮ್ಮ ಮನೆಗೆ ಬಂದರು. ಇಬ್ಬರೂ ಹೊರಕೋಣೆಯಲ್ಲಿ ಕೂತು ಬಾಗಿಲು ಭದ್ರಪಡಿಸಿದೆವು. ಮಂಚದ ಮೇಲೆ ಒಂದು ತುದಿಯಲ್ಲಿ ಅವರು. ಇನ್ನೊಂದು ತುದಿಯಲ್ಲಿ ನಾನು. ಚಿದಂಬರರಾವ್ ತಮ್ಮ ಕನ್ನಡಕ ತೆಗೆದು ಒಮ್ಮೆ ಗಟ್ಟಿಯಾಗಿ ಉಸಿರುಬಿಟ್ಟು ಗಂಭೀರ ಧ್ವನಿಯಲ್ಲಿ…ಮೂರ್ತಿ…ಈಗ ನೀವು ನನ್ನ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕು ಎಂದರು. ನಾನು ಅವರ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಾ ಕುಳಿತೆ. ಕೆಲವು ನಿಮಿಷಗಳ ನಂತರ, ಮೂರ್ತೀ ಈಗ ನಿಮಗೆ ನಿಧಾನವಾಗಿ ನಿದ್ದೆ ಬರುತ್ತಾ ಇದೆ ಎಂದರು. ನಾನು ತಣ್ಣಗೆ… ಇಲ್ಲ ನನಗೆ ನಿದ್ದೆ ಬರುತ್ತಿಲ್ಲ ಎಂದೆ. ಚಿದಂಬರರಾವ್ ವಿಚಲಿತರಾಗದೆ ತಮ್ಮ ಅಕ್ಷಿಯುದ್ಧವನ್ನು ಇನ್ನೂ ಕೆಲವು ನಿಮಿಷ ಮುಂದುವರೆಸಿದರು. ಇಬ್ಬರ ಕಣ್ಣಿಂದಲೂ ಕಣ್ಣೀರು ಸುರಿಯುತ್ತಾ ಇತ್ತು. ಚಿದಂಬರರಾವ್ ಗುಹಾಗಂಭೀರ ಧ್ವನಿಯಲ್ಲಿ…ಮೂರ್ತೀ …ನಿಮಗೆ ಈಗ ಕಣ್ಣು ಹತ್ತುತಾ ಇದೆ…! ನಾನು ಯಥಾಪ್ರಕಾರ ತಣ್ಣಗೆ, ಇಲ್ಲಾ…ಚಿದಂಬರಾರಾವ್…ನನಗೆ ಸುತ್ರಾಂ ನಿದ್ದೆ ಹತ್ತುತ್ತಿಲ್ಲ…. ಅರ್ಧ ಗಂಟೆಯ ನಂತರ ರಾವ್ ತಮ್ಮ ಪ್ರಯತ್ನವನ್ನು ಬಿಟ್ಟುಕೊಟ್ಟರು. ನೀವು ವಶೀಕರಣಕ್ಕೆ ಒಳ್ಳೆ ಸಬ್ಜೆಕ್ಟ್ ಅಲ್ಲ ಎಂದರು. ನನಗೆ ಪರಿಚಿತನಾದ ಒಬ್ಬ ಹುಡುಗ ಇದ್ದಾನೆ. ಬೇಕಾದರೆ ನಾಳೆ ಅವನ ಮೇಲೆ ವಶೀಕರಣ ಪ್ರಯೋಗ ಮಾಡಿ ತೋರಿಸುತ್ತೇನೆ ಎಂದರು. ನಾನು ಒಲ್ಲೆ ರಾವ್ ನನ್ನ ಮೇಲೆ ಆಗದ ಯಾವ ಪ್ರಯೋಗದಿಂದಲು ನನಗೆ ಕಿಂಚಿತ್ ಉಪಯೋಗವಿಲ್ಲ ಎಂದು ಹೇಳಿ ನನ್ನ ಪತ್ನಿ ಕೊಟ್ಟ ಕಾಫಿ ರಾವ್ ಅವರಿಗೆ ಕೊಟ್ಟು ಅವರಿಗೆ ವಿದಾಯ ಹೇಳಿದೆ. **** ಚಿದಂಬರರಾವ್ ನಿಧಾನವಾಗಿ ಮಲ್ಲಾಡಿಹಳ್ಳಿಯಲ್ಲಿ ಬೇರುಬಿಡತೊಡಗಿದರು. ಆಡಳಿತ ವಿಷಯದಲ್ಲಿ ಅವರು ಪ್ರಿನ್ಸಿಪಾಲರಿಗೆ ಅತ್ಯಗತ್ಯ ವ್ಯಕ್ತಿಯಾದರು. ಅವರ ಇಂಗ್ಲಿಷ್ ಚೆನ್ನಾಗಿತ್ತು ಎಲ್ಲ ಬಗೆಯ ಆಫೀಸ್ ಕರೆಸ್ಪಾಂಡೆನ್ಸ್ ಅವರಿಗೆ ಲೀಲಾ ಜಾಲವಾಗಿತ್ತು. ನಿಧಾನಕ್ಕೆ ಚಿದಂಬರರಾವ್ ಒಬ್ಬ ಮುಖ್ಯವ್ಯಕ್ತಿಯಾದರು. ಅವರ ದೊಗಲೆ ಪ್ಯಾಂಟಿನ ಬದಲು ಗರಿಗರಿ ಮಲ್ಲು ಪಂಚೆ ಬಂತು. ಮೇಲೆ ಬಿಳೀ ಜುಬ್ಬ ಹಾಕತೊಡಗಿದರು. ಹವಾಯಿ ಬದಲು ಸೇಲಂ ಚಪ್ಪಳಿಗಳು ಬಂದವು. ತುಂಬ ಒಳ್ಳೇ ಅಧ್ಯಾಪಕರಾಗಿದ್ದುದರಿಂದ ವಿದ್ಯಾರ್ಥಿಪ್ರಿಯ ಅಧ್ಯಾಪಕರೂ ಆದರು. ಹುಡುಗರು ಅವರನ್ನು ಮುತ್ತಿಕೊಳ್ಳುವುದಕ್ಕೆ ಶುರು ಮಾಡಿದರು. ನಮ್ಮ ಶಾಲಾ ಮೀಟಿಂಗುಗಳ ಪ್ರಾರ್ಥನೆ ಚಿದಂಬರ ರಾವ್ ಅವರದ್ದು. ಸ್ವಾಗತ ಅವರದ್ದು. ಮುಖ್ಯ ಭಾಷಣವೂ ಅವರದ್ದೇ. ಸಾವಿರಾರುಜನ ನೆರೆದಿರುವ ಸಭೆಯಲ್ಲಿ ಲೀಲಾ ಜಾಲವಾಗಿ ಮಾತಾಡುವ ಅವರನ್ನು ನೋಡುವಾಗ ನನಗೆ ಬೆರಗು ಉಂಟಾಗುತ್ತಿತ್ತು. ಅಸ್ಖಲಿತ ವಾಣಿ ಅವರದ್ದು. ಮಾತಾಡಿದರೂ ಹಾಡಿದ ಹಾಗೇ ಇರುತ್ತಾ ಇತ್ತು. ಇಷ್ಟೆಲ್ಲಾ ಏರು ಪೇರುಗಳಾದರೂ ನನ್ನ ಮತ್ತು ಅವರ ಸ್ನೇಹಕ್ಕೆ ಕುತ್ತು ಬರಲಿಲ್ಲ. ನಮ್ಮ ಸಾಹಿತ್ಯಕ ಚರ್ಚೆಗಳು ನಿರಂತರವಾಗಿ ನಡೆಯುತ್ತ ಇದ್ದವು. ರಾವ್ ಅವರಿಗೆ ನಾಟಕದಲ್ಲಿ ಅಭಿನಯಿಸುವ ಹುಚ್ಚು ಇತ್ತು. ರಾಮಪ್ಪ ಕೂಡ ನಾಟಕದ ಹುಚ್ಚಿನವರು! ಕೈಲಾಸಂ ಅವರ ಬಂಡವಾಳವಿಲ್ಲದ ಬಡಾಯಿ ನಾಟಕ ಅಭಿನಯಕ್ಕೆ ಎತ್ತಿಕೊಂಡದ್ದಾಯಿತು. ಚಿದಂಬರಾವೇ ಅಹೋಬಲು. ನಾನೂ ಒಂದು ಚಿಲ್ಲರೆ ಪಾತ್ರ ಆ ನಾಟಕದಲ್ಲಿ ಮಾಡಿದ್ದೆ.ಮೂಡಲಗಿರಿಯಪ್ಪ ಎಂಬ ಇನ್ನೊಬ್ಬ ತರುಣ ಅಧ್ಯಾಪಕ ಅಹೋಬಲುವಿನ ಹೆಂದತಿ. ಈ ಮಹರಾಯ ನಾಟಕದ ದಿನ ನಿರ್ದೇಶಕರ ಎಲ್ಲ ಸೂಚನೆಗಳಿಗೂ ತಿಲಾಂಜಲಿಯಿತ್ತು ತನ್ನ ಹೆಂಡತಿಯ ಆಭರಣಗಳನ್ನೆಲ್ಲಾ ಮೈಮೇಲೆ ಹೇರಿಕೊಂಡು ಬಂದಿದ್ದರು. ಅಹೋಬಲು ಬಡ ಲಾಯರಿ; ಅವನ ಹೆಂಡತಿ ಈ ಪಾಟಿ ಆಭರಣ ಧರಿಸುವಂತಿಲ್ಲ ಅಂತ ನಮ್ಮ ಡೈರೆಕ್ಟರ್ ಇನ್ನಿಲ್ಲದ ಹಾಗೆ ಹೇಳಿದರೂ ಮೂಡಲಗಿರಿಯಪ್ಪನದು ಒಂದೇ ಮಾತು…ಈವತ್ತಿಗಿರಲಿ ಸಾ…ನಾಳೆ ಬೇಕಾರೆ ತೆಗೆಯಣಂತೆ..! ವ್ಯಾಸಪೀಠದಲ್ಲಿ ನಾಟಕ ಪ್ರಯೋಗ. ಒಂದು ಕಾಲದ ನಟಸಾರ್ವಭೌಮ ಸ್ವಾಮೀಜಿಯವರೂ ನಾಟಕ ನೋಡಲಿಕ್ಕೆ ಬಂದಿದ್ದರು. ವ್ಯಾಸ ಪೀಠದ ಬಯಲಲ್ಲೆಲ್ಲಾ ಜನ ಕಿಕ್ಕಿರಿದು ತುಂಬಿದ್ದಾರೆ. ಇಡೀ ನಾಟಕ ಚಿದಂಬರರಾವ್ ಒಬ್ಬರೇ ತೂಗಿಸಿಬಿಟ್ಟರು ಎಂದರೆ ನೀವು ನಂಬಬೇಕು. ಈ ರಂಗಪ್ರಯೋಗ ಚಿದಂಬರರಾವ್ ಅವರ ಹೆಸರನ್ನು ಮತ್ತಷ್ಟು ಜನಪ್ರಿಯಗೊಳಿಸಿತು. ರಾವ್ ಆಶ್ರಮದಲ್ಲಿ ಹೀಗೆ ಒಬ್ಬ ಮುಖ್ಯ ವ್ಯಕ್ತಿಯಾಗಿ ಪರಿಣಮಿಸಿದ್ದು, ಪ್ರಿನ್ಸಿಪಾಲರಿಗೆ, ಸ್ವಾಮೀಜಿ ಅವರಿಗೆ ಎಲ್ಲರಿಗೂ ಅವರು ಆಪ್ತರಾದುದು ನಮ್ಮಲ್ಲಿ ಕೆಲವರಿಗೆ ಸಹಜವಾಗಿಯೇ ಕಸವಿಸಿ ಉಂಟುಮಾಡಿತು. ಅದರ ಪರಿಣಾಮ ಪಕ್ಷ ಪ್ರತಿಪಕ್ಷ. ಮುಸುಕಿನ ತಿಕ್ಕಾಟ ಇತ್ಯಾದಿ. ಇಷ್ಟೆಲ್ಲದರ ಮಧ್ಯೆ ಕೂಡ ರಾವ್ ಆಗಾಗ ಬಿಡುವು ಮಾಡಿಕೊಂಡು ನಮ್ಮ ಮನೆಗೆ ಬರುತ್ತಾ ಇದ್ದರು. ಅವರ ಪತ್ನಿ ರಮಾ ಮತ್ತು ನಮ್ಮ ಅಜ್ಜಿ ಪಗಡೆ ಆಡುತ್ತಾ ಕೂಡುತ್ತಿದ್ದರು. ರಾವ್ ಕೆಲವು ಬಾರಿ ಬಂದು ತಮ್ಮ ಪತ್ನಿಯನ್ನೇ ಕೇಳುತ್ತಿದ್ದರು…ನಮ್ಮ ರಮಾ ಬಂದಿದಾಳಾ ಇಲ್ಲಿ…? ಎಲಾ ನಿಮ್ಮಾ… ನಾನೇ ರಮಾ ಅನ್ನುತ್ತಿದ್ದರು ಅವರ ಪತ್ನಿ ಗಟ್ಟಿಯಾಗಿ ನಗುತ್ತಾ. ರಾವ್ ದೃಷ್ಟಿ ದಿನ ದಿನಕ್ಕೆ ಕುಂಠಿತವಾಗುತ್ತಲೇ ಹೋಯಿತು. ರಾವ್ ತಮ್ಮ ಬಾಲ್ಯದ,  ಯೌವನದ ಪ್ರಣಯ ಸಾಹಸಗಳನ್ನು ಕೆಲವು ಸಲ ಅದ್ಭುತವಾಗಿ ನನ್ನ ಕಣ್ಣ ಮುಂದೇ ಸಂಭಿವಿಸಿದ್ದೋ ಎನ್ನುವಂತೆ ನಿರೂಪಿಸುತ್ತಾ ಇದ್ದರು. ನಾನು ಒಮ್ಮೆ ಅವರಿಗೆ ಹೇಳಿದೆ….ನಡೆದ ಘಟನೆಗಳನ್ನ ಎಷ್ಟು ಚೆನ್ನಾಗಿ ನಿರೂಪಿಸುತ್ತೀರಿ ನೀವು…ಚಿದಂಬರರಾವ್ ನಿಮ್ಮೊಳಗೆ ಒಬ್ಬ ಕತೆಗಾರ ಇದ್ದಾನೆ… ಒಂದು ಕತೆ ಬರೆಯೋದಕ್ಕೆ ಯಾಕೆ ಯತ್ನಿಸ ಬಾರದು ನೀವು…? ರಾವ್ ನಕ್ಕು ನಾನು ಎಷ್ಟೇ ಆದರೂ ಬರೀ ಮಾತಿನೋನು…ಬರೆಯೋದು ಗಿರಿಯೋದು ಸಾಧ್ಯ ಇಲ್ಲ. ಹೀಗೆ ಅವರು ಹೇಳಿ ಒಂದು ವಾರವಾಗಿದೆ. ಒಂದು ದಿನ ಬೆಳಗಾಬೆಳಿಗ್ಗೆ ರಾವ್ ನಮ್ಮ ಮನೆಯ ಕದ ತಟ್ಟುತ್ತಿದ್ದಾರೆ. ಏನು ಸಾರ್..ಈ ಹೊತ್ತಿನಲ್ಲಿ ಎಂದೆ. ರಾತ್ರಿ ಯಾಕೋ ನಿದ್ದೆ ಬರಲಿಲ್ಲ. ಏನೋ ಬರೆದಿದ್ದೇನೆ…ಈಗ ತಾನೇ ಮುಗಿಸಿದೆ..ಸ್ವಲ್ಪ ನೋಡಿ..ಎಂದು ಕೆಲವು ಹಾಳೆ ನನಗೆ ಕೊಟ್ಟರು. ಮುತ್ತಿನಂಥ ಅಕ್ಷರ. ಬನ್ನಿ ನೋಡೋಣ..ಅಂತ ಅವರನ್ನು ಒಳಗೆ ಕರೆದು ಕೂಡಿಸಿ ಕುಡಿಯಲಿಕ್ಕೆ ಕಾಫಿಕೊಟ್ಟು ನಾನು ಅವರು ಬರೆದದ್ದ ಓದಲಿಕ್ಕೆ ಶುರು ಮಾಡಿದೆ. ಹೀಗೆ ರಾವ್ ಅವರ ಮೊದಲ ಕಥೆ ಹುಟ್ಟಿದ್ದು. ಅದನ್ನು ಅವರು ನಾನು ಹೇಳಿದಂತೆ ಸುಧಾಕ್ಕೆ ಕಳಿಸಿದರು. ಎರಡೇ ವಾರ. ಆ ಕಥೆ ಪ್ರಕಟವಾಗಿಬಿಡೋದೇ..! ಅದೇನು ಹುರುಪು ಬಂತೋ ರಾಯರಿಗೆ. ಶುರುವಾಯಿತು ನೋಡಿ ಪುಂಖಾನುಪುಂಖ ಬರವಣಿಗೆ. ಎಲ್ಲೆಲ್ಲೂ ಚಿದಂಬರರಾವ್ ಹೆಸರೇ. ಸುಧಾದಲ್ಲಿ, ಪ್ರಜಾವಾಣಿಯಲ್ಲಿ, ಗೋಕುಲದಲ್ಲಿ..ಎಲ್ಲಾ ಕಡೆಯೂ ಅವರೇ. ಒಂದೆರಡು ವರ್ಷದಲ್ಲಿ ಸಂಪಾದಕರೇ ಅವರಿಗೆ ಪತ್ರಬರೆದು ಕಥೆ ತರಿಸಿಕೊಳ್ಳೋಕೆ ಪ್ರಾರಂಭಿಸಿದರು. ಏನು ಬರೆದರೂ ರಾವ್ ನನಗೆ ತೋರಿಸುತ್ತ ಇದ್ದರು. ನಾನು ಏನಾದರೂ ಬದಲಾವಣೆ ಸೂಚಿಸಿದರೆ…ಅಯ್ಯೋ..ಮತ್ತೆ ಯಾರು ತಿರುಗಿ ಬರೀತಾರೆ ಮೂರ್ತಿ..ಈ ಕತೆ ಹಣೇಬರಾ ಇಷ್ಟೇ..ಅನ್ನುತ್ತಿದ್ದರು. ಅವರಿಗೆ ಬರವಣಿಗೆ ಒಂದು ಜೋಷಿನ ಕೆಲಸವಾಗಿತ್ತು. ಮೊದಲೇ ಹತ್ತು ಪುಟ ಬಿಳಿ ಹಾಳೆ ಜೋಡಿಸಿಕೊಂಡು, ಪಿನ್ನೂ ಮಾಡಿ, ಒಂದು ಕಥೆ ಬರೆಯುತ್ತಿದ್ದರು..! ಒಂದು ಹಾಳೆ ಹೆಚ್ಚಲ್ಲ; ಒಂದು ಹಾಳೆ ಕಮ್ಮಿಯಲ್ಲ. ಅದನ್ನು ಮತ್ತೆ ಪ್ರತಿ ಮಾಡುವ ತಿದ್ದುವ ಗೊಜಿಗೇ ಹೋಗುತ್ತಿರಲಿಲ್ಲ. ಇನ್ನೊಬ್ಬರ ಬರವಣಿಗೆ ಬಗ್ಗೆ ನಿಷ್ಠುರ ವಿಮರ್ಶಕರಾಗಿದ್ದ ರಾವ್ ತಮ್ಮ ಬರವಣಿಗೆಯ ಬಗ್ಗೆ ಮಾತ್ರ ವಿಪರೀತ ಉದಾಸಿನವಾಗಿದ್ದರು. ಏನೋ ಕೈಕಾಸು ಗಿಟ್ಟತ್ರೀ… ಅದಕ್ಕೇ ಬರೆಯೋದು… ಅನ್ನುತ್ತಿದ್ದರು. ಚಿದಂಬರರಾವ್ ನೂರಾರು ಕಥೆ ಬರೆದು ಬಿಸಾಕಿದರು. ಅವನ್ನು ಜೋಡಿಸಿಕೂಡ ಇಟ್ಟುಕೊಳ್ಳಲಿಲ್ಲ. ನಾನು ಎಂಎ ಮಾಡಿ ಬೆಂಗಳೂರಿಗೆ ಬಂದ ಮೇಲೆ ಅವರ ಕೆಲವು ಕಥೆಗಳನ್ನು ಸಂಗ್ರಹಿಸಿ ಒಂದು ಪುಸ್ತಕ ಮಾಡಿಸಿ ಅವರಿಗೆ ಸ್ನೇಹದ ಕಾಣಿಕೆಯಾಗಿ ಕಳಿಸಿಕೊಟ್ಟೆ. ಅದರಿಂದ ಅವರಿಗೆ ತುಂಬ ಸಂತೋಷವಾಗಿತ್ತು. ಮತ್ತೆ ಯಾವಾಗಲೋ ಮಲ್ಲಾಡಿಹಳ್ಳಿಗೆ ಹೋದಾಗ ಅವರು ಪ್ರೀತಿಯಿಂದ ನನ್ನನ್ನು ಬಾಚಿತಬ್ಬಿಕೊಂಡರು. ಸರಿಯುವ ತೆರೆಗಳು ಎನ್ನುವ ಪುಸ್ತಕದ ಮುಖಚಿತ್ರ ನನ್ನದು. ಮುದ್ರಣ ನೋಡಿಕೊಂಡವ ನಾನು. ಕಾಸು ಹಾಕಿದವ ನಾನು. ಸೌತ್ ಎಂಡ್ ಬಳಿ ಇದ್ದ ಶೇಷನಾರಾಯಣರ ವಿಕಾಸ ಮುದ್ರಣದಲ್ಲಿ ಆ ಪುಸ್ತಕ ಅಚ್ಚಾದದ್ದು. ಚಿದಂಬರರಾಯರ ನಿಷ್ಕಲ್ಮಶ ಸ್ನೇಹದ ಗುರುತಾಗಿ ಒಂದು ಮಾಸಿದ ಪ್ರತಿ ಈಗಲೂ ನನ್ನ ಬಳಿ ಇದೆ. ]]>

‍ಲೇಖಕರು avadhi

July 8, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಚ್ ಎಸ್ ವಿ ಕಾಲಂ: ಮತ್ತೆ, ಮರೆತ ಇತಿಹಾಸದ ಮರುಗಳಿಕೆ..

ತಾವರೆಯ ಬಾಗಿಲು-೧೮ ಎರಡು ಸಾವಿರ ವರ್ಷಗಳ ಹಿಂದೆ ತೆಂಕಣಭಾರತದ ದೇಶ-ಕಾಲ-ಪರಿಸ್ಥಿತಿ ಹೇಗಿತ್ತೆಂದು ನಾವು ಊಹಿಸುವುದೂ ಸಾಧ್ಯವಿಲ್ಲ. ಮರೆತು ಹೋದ...

ಎಚ್ ಎಸ್ ವಿ ಕಾಲಂ: ಕಾವ್ಯದಲ್ಲಿ ಭಾಷೆಯಲ್ಲದ ಭಾಷೆಯ ಮಿಡುಕಾಟ..

ತಾವರೆಯ ಬಾಗಿಲು-೧೬ ಕಾವ್ಯಕ್ಕೆ ಭಾಷೆಯೇ ಮೂಲ ಸಾಮಗ್ರಿ. ಭಾಷೆಯ ಮೂಲಕ ಕವಿಗಳು ತಮ್ಮ ಲೌಕಿಕಾಲೌಕಿಕ ಅನುಭವಗಳನ್ನು ಅಭಿವ್ಯಕ್ತಿಸುತ್ತಾರೆ. ಹಾಗೆ...

8 ಪ್ರತಿಕ್ರಿಯೆಗಳು

 1. Rajashekhar Malur

  Instead of discussing, PL, CL, Promotion, your discussions are on Adiga, Kuvempu, Bendre… this is the greatest lesson we can learn. Ending is the icing on the cake. It tells us a lot not only about him but also about you. We need role models like you and chidambara rao for our and future generations.

  ಪ್ರತಿಕ್ರಿಯೆ
 2. anand rugvedi

  Sir, nimma baraha bahu aaptavaagide. Nammammana guru, nanna aapta bandhu aagidda chidambara rao rannu matte bere kannininda noduvante madide baraha. dhanyavadagalu.

  ಪ್ರತಿಕ್ರಿಯೆ
 3. ರಾಮಚಂದ್ರ ನಾಡಿಗ್, ಕದರನಹಳ್ಳಿ

  ಒಬ್ಬ ಮನುಷ್ಯ ಒಳ್ಳೆಯ, ಕ್ರಿಯಾಶೀಲ ಮನುಷ್ಯನ ಜೊತೆ ಬೆರೆತರೆ ಸಾಕು, ಆತನಷ್ಟಲ್ಲದಿದ್ದರೂ ಸ್ವಲ್ಪವಾದರೂ ಉತ್ತಮ ಹಾದಿಯಲ್ಲಿ ಸಾಗುತ್ತಾನೆ, ಉತ್ತಮ ವಿಚಾರಗಳನ್ನು ಮಾಡುತ್ತಾನೆ ಅನ್ನೋದಿಕ್ಕೆ ಶ್ರೀ ಚಿದಂಬರ ರಾವ್ ಸಾಕ್ಷಿ. ಅವರಿಗೆ ನಿಮ್ಮ ಜೋಡಿ ಸಿಗದಿದ್ದರೆ, ನೀವು ಬರೆಯಲು ಸ್ಪೂರ್ತಿ ನೀಡದಿದ್ದರೆ ಕಥೆಗಳನ್ನು ಬರೆಯುತ್ತಿರಲಿಲ್ಲವೇನೋ…? ಒಟ್ಟಿನಲ್ಲಿ ನಿಮ್ಮ ಜೀವನದ ಪ್ರತಿಯೊಂದು ಹಂತದಲ್ಲೂ ಇಂತಹ ಒಳ್ಳೆಯ ಜೊತೆಗಾರರು ಸಿಗುತ್ತಲೇ ಬಂದಿರುವುದು ನಿಮ್ಮ ಅದೃಷ್ಟವೂ ಹೌದು… ಎಲ್ಲರಿಗೂ.. ಎಲ್ಲಾ ಸಮಯದಲ್ಲೂ ಹೀಗೆ ಉತ್ತಮ ಸ್ನೇಹಿತರು ಸಿಗೋದು ಕಷ್ಟ

  ಪ್ರತಿಕ್ರಿಯೆ
 4. sudhir

  ಚಿದಂಬರಮಾಮನ ಬಗ್ಗೆ ಅಣ್ಣ ಬರೆದ ಲೇಖನ ಓದಿದಾಗ ಒಂದು ವಿಷಯ ನೆನಪಿಗೆ ಬಂತು. ಒಮ್ಮೆ ಮಾಮ ಬೆಂಗಳೂರಿಗೆ ಬಂದಿದ್ದಾಗ ನಮ್ಮ ಮನೆಯಲ್ಲಿ ಉಳಿದಿದ್ದರು. ರಾತ್ರಿ ಮಲಗುವಾಗ ಅವರು, ನಾನು ನಿದ್ದೆ ಮಾಡುವಾಗ ಕೆಲವೊಮ್ಮೆ ನಾನಾ ರೀತಿಯ ಭಯಂಕರ ಸದ್ದು ಮಾಡುತ್ತೇನೆ. ಯಾರೂ ಗಾಭರಿಯಾಗಬೇಡಿ-ಎಂದು ಹೇಳಿದರು. ಅವರು ಹೇಳಿದಂತೆ ರಾತ್ರಿ ಅವರು ಗಂಟಲಿಂದ ಮಾಡುತ್ತಿದ್ದ ದಿಗಿಲು ಹುಟ್ಟಿಸುವ ಧ್ವನಿ ನನ್ನನ್ನು ಎಚ್ಚರಿಸಿತು. ನಾನಿನ್ನೂ ಆಗ ಚಿಕ್ಕವನು. ಭಯದಿಂದ ಅಣ್ಣನನ್ನು ತಬ್ಬಿ ಮಲಗಿಕೊಂಡೆ. ಆ ವಿಷಯ ನಾನು ಯಾವತ್ತೂ ಮರೆಯಲಾರೆ.

  ಪ್ರತಿಕ್ರಿಯೆ
 5. ಪೂರ್ಣಪ್ರಜ್ಞ

  ನನಗೆ ಈ ಬರಹದಲ್ಲಿ ಇಷ್ಟವಾಗಿದ್ದು ಅದರಲ್ಲಿರುವ ಆತ್ಮೀಯತೆ. ಲೇಖನ ಒದುತ್ತಿದ್ದ ಹಾಗೆ ನಾವು ಮಲ್ಲಾಡಿಹಳ್ಳಿಯ ಶಾಲೆಯ ಚಿತ್ರಣ, ಅಲ್ಲಿನ ಪರಿಸರ ಕಣ್ಣಮುಂದೆ ಬರುತ್ತೆ. ಚಿದಂಬರ ರಾಯರ ವ್ಯಕ್ತಿತ್ವವನ್ನು ಬಹಳ ಚೆನ್ನಾಗಿ ಸಂಕ್ಶಿಪ್ತವಾಗಿ ಮೇಷ್ಟ್ರು ಕಟ್ಟಿಕೊಟ್ಟಿದ್ದಾರೆ. ಮುಂದಿನ ಕಂತಿಗಾಗಿ ಕಾಯುತ್ತಿದ್ದೇನೆ!!

  ಪ್ರತಿಕ್ರಿಯೆ
 6. HSV

  ಶ್ರೀ ರಂಗಣ್ಣ ಅವರೇ,
  ಚಿದಂಬರರಾಯರ ಪ್ರಥಮ ಸಂಕಲನ ಸರಿಯುವ ತೆರೆಗಳು ಒಂದೇ ಪ್ರತಿ ನನ್ನ ಬಳಿ ಇದೆ. ನಿಮಗೆ ಆಸಕ್ತಿಯಿದ್ದರೆ ಅದರ ಜೆರಾಕ್ಸ್ ಪ್ರತಿ ನಿಮಗೆ ದೊರಕಿಸಬಹುದು. ವಂದನೆಗಳು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: