ಎಚ್ಹೆಸ್ವಿ ಬರೆವ ಅನಾತ್ಮ ಕಥನ: ರಾಜಕುಮಾರ್ ಎಂದರೆ….

ಅಳಿಯಲಾರದ ನೆನಹು-5

ಎಚ್.ಎಸ್.ವೆಂಕಟೇಶ ಮೂರ್ತಿ

ರಾಜಕುಮಾರ್ ಎಂದರೆ ನನ್ನ ಹದಿ ಹರಯದ ದಿನಗಳ ಒಂದು ಸಂಯುಕ್ತ ನೆನಪು. ನಾನು ಆಗಷ್ಟೇ ಹದಿನಾರರ ತೆಕ್ಕೆಗೆ ಬೀಳುತ್ತಾ ಇದ್ದೆ.(೧೯೬೦ನೇ ಇಸವಿ). ಪಿ.ಯು.ಸಿ ಓದಲಿಕ್ಕಾಗಿ ಚಿತ್ರದುರ್ಗಕ್ಕೆ ಬಂದಿದ್ದೆ. ಹಳ್ಳಿಯಿಂದ ನಗರಕ್ಕೆ ಬಂದ ಹುಡುಗನ ಮನಸ್ಸಲ್ಲಿ ನಾನಾ ಬಗೆಯ ಸುಳಿಗಾಳಿಗಳ ಬೀಸುವಿಕೆ ಪ್ರಾರಂಭವಾದ ದಿನಗಳು ಅವು. ಒಂದು ಕಡೆ ಅರ್ಥವಾಗದಿದ್ದರೂ ಆಕ್ರಮಿಸಿ ಭಯ ಬೀಳಿಸುತ್ತಿದ್ದ ಇಂಗ್ಲಿಷ್. ಇನ್ನೊಂದು ಕಡೆ ನಿಧಾನಕ್ಕೆ ಮೂಡುತ್ತಿದ್ದ ನಾನು ಗಂಡು ಎಂಬ ಮೈಅರಿವು. ಮತ್ತೊಂದು ಕಡೆ ನನ್ನ ಮನಸ್ಸನ್ನು ಮಾಯಾವಿಯಂತೆ ಆಕ್ರಮಿಸ ತೊಡಗಿದ ಸಿನಿಮಾ ಮೋಹಿನಿ. ಚಿತ್ರದುರ್ಗದಲ್ಲಿ ಕಾಲೇಜು, ಕೋಟೆಕೊತ್ತಲಗಳು ಹೇಗೋ ಹಾಗೇ ಸಿನಿಮಾ ಮಂದಿರಗಳೂ ನನ್ನನ್ನು ನಿರಂತರವಾಗಿ ಸೆಳೆಯುತ್ತಿದ್ದ ಆಕರ್ಷಣೆಯ ಕೇಂದ್ರಗಳಾಗಿದ್ದವು. ಆಗ ದುರ್ಗದಲ್ಲಿ ಇದ್ದದ್ದು ಮೂರೇ ಚಿತ್ರಮಂದಿರಗಳು. ರೂಪವಾಣಿ. ಶಂಕರ್ ಮತ್ತು ಯೂನಿಯನ್. ಬೆಳಿಗ್ಗೆ ಕಾಲೇಜಿಗೆ ಹೋಗುವುದು. ಅಲ್ಲಿ ಪರಶಿವಮೂರ್ತಿಯಂಥ ಅಧ್ಯಾಪಕರ ಮಾತಿನ ಮೋಡಿಗೆ ಮರುಳಾಗುವುದು. ಅದೇ ಕಾಲೇಜಲ್ಲಿ ಭೂಗರ್ಭಶಾಸ್ತರದ ಅಧ್ಯಾಪಕರಾಗಿದ್ದ ಕವಿ ನಿಸಾರ್ ಅಹಮದ್ ಅವರನ್ನು ಆರಾಧಕ ಕಣ್ಣುಗಳಿಂದ ನೋಡುವುದು. ಪಾಠ ಮರೆತು ನಮ್ಮ ರಸಾಯನಶಾಸ್ತ್ರದ ಕಿರುಪ್ರಾಯದ ಅಧ್ಯಾಪಕಿಯ ಚೆಲುವನ್ನು ಕಳ್ಳಗಣ್ಣಿಂದ ಆಸ್ವಾದಿಸುವುದು. ಸಂಜೆಯಾಯಿತೆಂದರೆ ಮೇಲುದುರ್ಗಕ್ಕೆ ಹೋಗಿ ಒಂಟಿಯಾಗಿ ಬುರುಜು ಬತೇರಿಗಳನ್ನು ಹತ್ತಿ ಇಳಿಯುತ್ತಾ ಹೊಸ ಹೊಸ ಕನಸುಗಳನ್ನು ಹೆಣೆಯುವುದು. ಹಿಡಿಂಬೇಶ್ವರ ದೇವಾಲಯದ ಕಟ್ಟೆಯ ಮೇಲೆ ಕೂತು ಸೂರ್ಯಾಸ್ತಮವನ್ನು ತದೇಕಾಗ್ರವಾಗಿ ನೋಡುತ್ತಾ , ಪಶ್ಚಿಮದಿಂದ ಬೀಸುತ್ತಿದ್ದ ಕುಳಿರ್ಗಾಳಿಗೆ ಹಾ ಎಂದು ಮೈಯೊಡ್ಡುವುದು. ಸೂರ್ಯಾಸ್ತಮವಾದ ಕೂಡಲೇ ದುರ್ಗದಿಂದ ಇಳಿದು, ರೂಪವಾಣಿ ಟಾಕೀಸಿನ ಬಳಿ ಬಂದು ಸಿನಿಮಾ ಪೋಸ್ಟರ್ಗಳ ಪರಿಶೀಲನೆ ನಡೆಸುವುದು, ಅಲ್ಲಿಂದ ಯೂನಿಯನ್ ಥಿಯೇಟರ್ಗೆ ಭೆಟ್ಟಿ. ಮತ್ತೆ ಅದೇ ಬಗೆಯ ಪೋಸ್ಟರ್ಗಳ ವೀಕ್ಷಣೆ. ಆಮೇಲೆ ಶಂಕರ್ ಥಿಯೇಟರಿನ ಬಳಿಗೆ ಬಂದು ಅದರ ಪ್ರದಕ್ಷಿಣೆ ಮುಗಿಸಿ, ಬಾಡಿಗೆ ಮನೆಗೆ ಬಂದು ಓದಿನಲ್ಲಿ ತೊಡಗುವುದು-ಇದು ನನ್ನ ದಿನಚರಿಯಾಗಿತ್ತು.

ನಮ್ಮ ಸೋದರ ಮಾವ ನನ್ನನ್ನು ಹಾಸ್ಯ ಮಾಡುತ್ತಿದ್ದರು. “ತಮ್ಮ ಮೂರು ದೇವಸ್ಥಾನಗಳ ಪ್ರದಕ್ಷಿಣೆ ಮುಗಿಯಿತೋ?”. ರೂಪವಾಣಿ, ಶಂಕರ್, ಮತ್ತು ಯೂನಿಯನ್ ಸಿನಿಮಾ ಥಿಯೇಟರುಗಳೇ ಆಗ ನನ್ನ ಪಾಲಿನ ಮೂರು ದೇವಾಲಯಗಳು! ದೇವಾಲಯಗಳು ಎಂದ ಮೇಲೆ ಅಲ್ಲಿ ದೇವಾನುದೇವತೆಗಳೂ ಇರಲೇ ಬೇಕಲ್ಲ! ನನ್ನ ಪಾಲಿಗೆ ಆಗ ಇದ್ದ ಏಕಮಾತ್ರ ದೇವಮೂರ್ತಿ ಎಂದರೆ ರಾಜಕುಮಾರ್! ನಮ್ಮಂಥ ಲಕ್ಷಾಂತರ ಯುವಕರಿಗೆ ಆಗ ರಾಜಕುಮಾರ್ ಕನ್ನಡದ ಪರೋಕ್ಷ ಅಧ್ಯಾಪಕರೇ ಆಗಿದ್ದರು. ಅವರು ನಮಗೆ ಪುರಾಣ, ಇತಿಹಾಸ ಮತ್ತು ಸಮಕಾಲೀನ ಸಮಾಜದ ಅನೇಕ ಸೀಳು ನೋಟಗಳನ್ನು ಕರುಣಿಸುವ ಗುರುಗಳಾಗಿದ್ದರು. ಅಷ್ಟೇ ಅಲ್ಲ, ಕನ್ನಡ ಮಾತಿನ ಚೆಲುವು, ಗತ್ತು, ಕ್ಷಾತ್ರ, ಲಯಗಳು ರಾಜಕುಮಾರ್ ಮೂಲಕ ನಮ್ಮ ಮನೋ ಜಗತ್ತಿಗೆ ಇಳಿಯುತ್ತಿದ್ದವು. ರಾಜಕುಮಾರ್ ಮಹಿಷಾಸುರ ಆಗಿದ್ದರು. ಬಿಜ್ಜಳ ಆಗಿದ್ದರು. ಚೆನ್ನಮ್ಮನ ವೀರ ಪತಿ ಮಲ್ಲಸರ್ಜ ಆಗಿದ್ದರು. ಭೂಕೈಲಾಸದ ರಾವಣ ಆಗಿದ್ದರು. ರಣಧೀರ ಕಂಠೀರವ ಆಗಿದ್ದರು. ಕನಕದಾಸ ಆಗಿದ್ದರು.

ಅವರು ನಮಗೆ ಪ್ರೇಮಿಸುವುದು ಹೇಗೆ, ಹುಡುಗಿಯ ಎದುರು ಯಾವ ಆಪ್ತತೆಯಲ್ಲಿ ಮಾತಾಡಬೇಕು, ಯಾವ ಭಾವ ಭಂಗಿಯಲ್ಲಿ ನಿಲ್ಲಬೇಕು ಕಲಿಸುತ್ತಾ ಇದ್ದರು. ಸಂಕೋಲೆಯಲ್ಲಿಯೇ ಸಿಂಹದಂತೆ ಗರ್ಜಿಸುವ ಸ್ವಾಭಿಮಾನವನ್ನು ಉದ್ರೇಕಗೊಳಿಸುತ್ತಾ ಇದ್ದರು. ನಡೆ ನುಡಿ ನಿಲುವು ನಗು ಅಳು ಮುನಿಸು ಎಲ್ಲಾ ಪರಿಷ್ಕಾರ ರೂಪದಲ್ಲಿ ರಾಜಕುಮಾರ್ ಮೂಲಕ ನಮ್ಮೊಳಗೆ ಸೋಸಿಕೊಳ್ಳುತ್ತಾ ಇದ್ದವು. ಜೊತೆಗೆ ರಾಜಕುಮಾರ್ ನಮ್ಮ ಪೌರುಷದ ಆದರ್ಶವಾಗಿದ್ದರು. ಹತ್ತು ಮಂದಿ ಖಳರ ಮೇಲೆ ಒಮ್ಮೆಗೇ ಬಿದ್ದು ಏಕಾಂಗಿಯಾಗಿ ಅವರನ್ನು ನಿರ್ನಾಮಗೊಳಿಸುವ ಕೆಚ್ಚು ನಮ್ಮೊಳಗೆ ಮೂಡಿಸುತ್ತಾ ಇದ್ದರು.

ನಾವು ಗೆಳೆಯರು ಕೂಡಿ ಹುಸಿಕಾಳಗದಲ್ಲಿ ತೊಡಗುತ್ತಾ ಇದ್ದೆವು. ಒಬ್ಬ ರಾಜಕುಮಾರ್ ಆಗುವುದು. ಉಳಿದವರು ಆ ದಿನದ ಖಳರು. ಗಾಳಿಗುದ್ದಿಗೆ ಉರುಳುರುಳಿ ಬೀಳುತ್ತಾ ರಾಜಕುಮಾರರನ್ನು ಮೆರೆಸುವ ಸಾದಾ ಸೀದಾ ಪೆದ್ದುಗಳು. ರಾಜಕುಮಾರರಂತೆ ನಾವೂ ನಿಜ ಜೀವನದಲ್ಲಿ ನಾಯಕಿಯರನ್ನು ಹುಡುಕಿಕೊಂಡು ಅಲೆದಾಡುತ್ತಿದ್ದ ದಿನಗಳವು. ಆಗ ನಮ್ಮ ಪಕ್ಕದ ಮನೆಯ ಗೃಹಿಣಿ(ಇನ್ನೂ ಚಿಕ್ಕ ವಯಸ್ಸಿನ ತರುಣಿ) ನನ್ನ ಪಾಲಿಗೆ ಲೀಲಾವತಿ, ಸರೋಜಾದೇವಿ, ಕೃಷ್ಣಕುಮಾರಿ ಎಲ್ಲಾ ಆಗಿದ್ದರು. ಅವರು ಒಪ್ಪುವುದಾಗಿದ್ದರೆ ಗಂಟೆಗಟ್ಟಲೆ ನಾನು ಸುಮ್ಮನೆ ಅವರನ್ನು ಆರಾಧಕ ದೃಷ್ಟಿಯಿಂದ ನೋಡುತ್ತಾ ಕೂಡುವುದಕ್ಕೆ ಸಿದ್ಧನಾಗಿದ್ದೆ. ಅದು ಪವಿತ್ರವಾದ ಪ್ರೇಮವಾಗಿತ್ತು! ಆ ಗೃಹಿಣಿಯ ಮುದ್ದಾದ ಪುಟ್ಟ ಮಗು ನಮ್ಮ ಮುತ್ತುಗಳನ್ನು ಆಕೆಯತ್ತ ರವಾನಿಸುವ ಅಂಟಿಸಿದ ಪೋಸ್ಟ್ ಕವರಾಗಿತ್ತು.

ಕನ್ನಡ ಭಾಷೆಯ ಕಸುವು ಏನು ಎಂಬುದು ರಾಜಕುಮಾರ್ ಮೂಲಕ ನಮ್ಮ ಸಂವೇದನೆಗೆ ದಕ್ಕುತ್ತಿತ್ತು. ಅವರು ಮಾತಾಡುವಾಗ ಅಮ್ಮನ ಬಗ್ಗೆ ನಮ್ಮ ಮನಸ್ಸು ಆರ್ದ್ರವಾಗುತ್ತಿದ್ದವು. ಅವರು ಆರ್ಭಟಿಸಿದಾಗ ಖಳರು ರಕ್ಷಣಾಪಡೆಯ ನಡುವೆಯೂ ತತ್ತರಗುಟ್ಟುತ್ತಿದ್ದರು. ಕಿತ್ತೂರು ಚೆನ್ನಮ್ಮ ಚಿತ್ರದಲ್ಲಿ ಮಲ್ಲಸರ್ಜ ಟಿಪ್ಪುವನ್ನು ಎದುರಿಸುವ ದೃಶ್ಯವನ್ನು ನೆನಪಿಸಿಕೊಳ್ಳಿ. ಒಂದು ಮೇಣೆಯಲ್ಲಿ ಕೂತು ರೋಗಗ್ರಸ್ಥ ಮಲ್ಲಸರ್ಜ ಕಿತ್ತೂರಿಗೆ ಹಿಂದಿರುಗುತ್ತಾ ಇರುವ ದೃಶ್ಯ. ಅಹೋರಾತ್ರಿ ನಿಲದೋಡಿ ತಾ ಬಂದಿಗೆ| ಕರುನಾಡ ವೀರಮಣಿಯಾ ತಂದಿದೆ| ಎಂದು ಹಿನ್ನೆಲೆಯಲ್ಲಿ ಪಿ.ಬಿ.ಶ್ರೀನಿವಾಸ್ ಹಾಡುತ್ತಾ ಇದ್ದಾರೆ. ನಾನು ಆ ದೃಶ್ಯವನ್ನು ನೋಡಿ ಥಿಯೇಟರಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದು ಈವತ್ತೂ ನೆನಪಿದೆ.

ರಾಜಕುಮಾರ ಅವರ ಆರ್ತ ಮೊರೆ ಮತ್ತು ಹೃದಯಂಗಮ ಹಾಡಿನ ಶಕ್ತಿ ಕೂಡ ಸಾಮಾನ್ಯವಾದುದಲ್ಲ. ಕನಕದಾಸ ಸಿನಿಮಾದಲ್ಲಿ ಅವರನ್ನು ಉಡುಪಿಯ ಕಲ್ಲುಮಂಟಪವೊಂದಕ್ಕೆ ಕಟ್ಟಿಹಾಕಿದ್ದಾರೆ. ಬಾಗಿಲನು ತೆರೆದು ಎಂದು ಕನಕದಾಸ ಹಾಡುವುದಕ್ಕೆ ತೊಡಗುತ್ತಾರೆ.( ವೆಂಕಟರಾಜು ಅವರ ಸಂಗೀತ, ಪಿ ಬಿ ಶ್ರೀನಿವಾಸ್ ಅವರ ಗಾಯನ). ಹಾಡು ಮುಗಿಯಿತು ಎನ್ನುವಾಗ ದೇವಾಲಯದ ಗೋಡೆ ಚಕಣಾಚೂರಾಗಿ ಉಡುಪಿ ಕೃಷ್ಣ ಗಿರ್ರನೆ ತಿರುಗಿ ಕನಕದಾಸರಿಗೆ ದರ್ಶನ ಕೊಡುತ್ತಾನೆ. ಅಬ್ಬಾ ಕನ್ನಡ ಹಾಡಿನ ಶಕ್ತಿಯೇ ಎಂದು ನಾನು ನಿಬ್ಬೆರಗಾಗಿ ಹೋದೆ. ಕಿಟ್ಟುರುಚೆನ್ನಮ್ಮ ಆಗ ರೂಪವಾಣಿಯಲ್ಲಿ ನೂರು ದಿನ ಓಡಿತು ಎಂದು ನನ್ನ ನೆನಪು. ರೂಪವಾಣಿ ಥಿಯೇಟರಿನ ಹತ್ತಿರವೇ ನಾನಿದ್ದ ಬಾಡಿಗೆ ಮನೆ. ರಾತ್ರಿ ಸೆಕೆಂಡ್ ಶೋ ನಡೆಯುವಾಗ ಥಿಯೇಟರಿನ ಬಾಗಿಲುಗಳನ್ನೆಲ್ಲಾ ಸೆಖೆ ಯೆಂಬ ಕಾರಣಕ್ಕೆ ಹಾರುಹೊಡೆದು ಬಿಡುತ್ತಿದ್ದರು. ಅದು ನಮ್ಮ ಪರೀಕ್ಷೆ ಸಮೀಪಿಸುತ್ತಿದ್ದ ದಿನಗಳು. ನಾನಿನ್ನೂ ಓದುತ್ತಾ ಕೂತಿರುತ್ತಿದ್ದೆ. ಅಹೋರಾತ್ರಿ ಕೇಳುತ್ತಲೇ ನನಗೆ ಮುಂದೆ ಓದುವುದು ಸಾಧ್ಯವೇ ಆಗುತ್ತಿದ್ದಿಲ್ಲ. ಎದ್ದು ಬಾಗಿಲು ಮುಂದೆ ಮಾಡಿಕೊಂಡು ರೂಪವಾಣಿಯ ಬಳಿಗೆ ಹೋಗುತ್ತಿದ್ದೆ. ಸರಿರಾತ್ರಿಯಲ್ಲೂ ನಿರ್ಭಯವಾಗಿ ಓಡಾಡಬಹುದಾದ ಕಾಲವಾಗಿತ್ತು ಅದು. ಅದು ರಾಜಕುಮಾರ್ ಜೀವಂತವಾಗಿದ್ದ ಕಾಲ. ಈಗ ನಾಯಕರೂ ಬದಲಾಗಿದ್ದಾರೆ; ಕಾಲವೂ ಬದಲಾಗಿದೆ.

ಸಾಹಿತ್ಯ, ಸಂಗೀತ, ಶಿಕ್ಷಣ, ಕುಸ್ತಿ, ಕ್ರೀಡೆ-ಪ್ರತಿಯೊಂದು ರಂಗದಲ್ಲೂ ನನಗೆ ಬೇರೆ ಬೇರೆ ಐಕಾನುಗಳಿದ್ದರು. ಸಾಹಿತ್ಯದಲ್ಲಿ ಅನಕೃ ನನ್ನ ಐಕಾನ್. ಅವರನ್ನು ನೋಡಲಿಕ್ಕಾಗಿ ಹೈಸ್ಕೂಲ್ ಓದುತ್ತಿದ್ದ ಹುಡುಗ ಆರು ಮೈಲು ನಡೆದುಕೊಂಡು ಹೋಗಿದ್ದೆ! ಸಂಗೀತದಲ್ಲಿ ಮೈಸೂರು ಅನಂತಸ್ವಾಮಿ ನನ್ನ ಹೀರೋ! ಅವರ ಹಾಡುಗಾರಿಕೆಯನ್ನು ನಾನು ವಿದ್ಯಾರ್ಥಿಯಾಗಿದ್ದಾಗ ತರೀಕೆರೆಯ ಗಣೇಶೋತ್ಸವದಲ್ಲಿ ಕೇಳಿದ್ದು. ಕ್ರೀಡೆಯಲ್ಲಿ ಕ್ರಿಕೆಟ್ ಕಲಿ ಪಾಲಿ ಉಮ್ರೀಗರ್ ನನ್ನ ಹೀರೋ ಆಗಿದ್ದರು. ಪೈಲ್ವಾನರಲ್ಲಿ ದುರ್ಗದ ನಂಜಪ್ಪ, ದಾವಣಗೆರೆ ಚಾರ್ಲಿ. ದೇಹದಾರ್ಢ್ಯದಲ್ಲಿ ಮಲ್ಲಾಡಿಹಳ್ಳಿ ವ್ಯಾಯಾಮಮೇಷ್ಟ್ರು. (ಆಗ ಅವರನ್ನು ಸ್ವಾಮೀಜಿ ಅಂತ ಯಾರೂ ಕರೆಯುತ್ತಿರಲಿಲ್ಲ!). ಸಿನಿಮಾದಲ್ಲಿ ರಾಜಕುಮಾರ್!

ರಾಜಕುಮಾರ್ ಆದರ್ಶ ಮಗ, ಆದರ್ಶ ಅಣ್ಣ, ಆದರ್ಶ ಮನುಷ್ಯ, ಆದರ್ಶ ಭಕ್ತ, ಆದರ್ಶ ವೀರ. ಅವರ ಪಾತ್ರಗಳೆಲ್ಲಾ ನಾವು ಹೇಗೆ ಇರಬೇಕು ಎಂದು ತೋರಿಸತಕ್ಕವು; ಹೇಗೆ ಇರಬಾರದು ಎಂದು ತೋರಿಸುವಂಥವು ಎಲ್ಲೋ ಕೆಲವೇ ಕೆಲವು ಪಾತ್ರಗಳು. ಚಿತ್ರದುರ್ಗದಲ್ಲಿ ನಾನು ಇದ್ದಾಗ ತೆಲುಗು, ತಮಿಳು ಸಿನಿಮಾಗಳ ಮೂಲಕ ಶಿವಾಜಿ ಗಣೇಶನ್, ಎನ್.ಟಿ.ರಾಮರಾವ್, ನಾಗೇಶ್ವರರಾವ್ ಮೊದಲಾದ ಕಲಾವಿದರು ನನಗೆ ಪ್ರಿಯರಾದರಾದರೂ ಕನ್ನಡ ಸ್ವಾಭಿಮಾನದ ಸಂಕೇತವಾಗಿದ್ದ ರಾಜಕುಮಾರ್ ಸ್ಥಾನವನ್ನು ಯಾರೂ ಪಡೆಯಲಿಲ್ಲ. ಉಳಿದವರು ಒಂದು ಕ್ಷಣ ಇದ್ದು ಗುಡ್ ಬೈ ಹೇಳಿ ಹೋಗುವವರು ಅಷ್ಟೇ. ಶಾಶ್ವತವಾಗಿ ನಿಲ್ಲುವ ನನ್ನ ಐಕಾನುಗಳಲ್ಲಿ ರಾಜಕುಮಾರ್ ಒಬ್ಬರಾಗಿದ್ದರು. ಅವರು ನನ್ನ ಹಳ್ಳಿಯ ಪ್ರತಿನಿಧಿಯಾಗಿದ್ದರು; ನನ್ನ ಭಾಷೆಯ ಪ್ರತಿನಿಧಿಯಾಗಿದ್ದರು. ಕನ್ನಡ ನಡಾವಳಿಯ ಪ್ರತಿನಿಧಿಯಾಗಿದ್ದರು. ಕನ್ನಡ ಸಂಸ್ಕೃತಿಗೆ ಹೊರಗಿನವರು ಎಂದು ಅವರು ಯಾವಾಗಲೂ ಅನ್ನಿಸಲೇ ಇಲ್ಲ. ಅವರು ಯಾವಾಗಲೂ ಕನ್ನಡದ ಪರವಾಗಿ ಇದ್ದರು. ಬಡವರ ಪರವಾಗಿ ಇದ್ದರು. ಸಾತ್ವಿಕತೆಯ ಪರವಾಗಿ ಇದ್ದರು.

ಪ್ರಿಯ ಮಿತ್ರರಾದ ಸಿ.ಅಶ್ವಥ್ ನಿರ್ದೇಶನದಲ್ಲಿ ರಾಜಕುಮಾರ್ ಅವರು ರತ್ನಮಾಲಪ್ರಕಾಶರೊಂದಿಗೆ ನನ್ನ ಕವಿತೆಯೊಂದನ್ನು ಹಾಡಿದಾಗ ಅವರ ನೇರ ಪರಿಚಯ ನನಗಾಯಿತು. ಅವರ ಹಸನ್ಮುಖ, ವಿನಯ, ಪರಿಶುದ್ಧವಾದ ಕನ್ನಡ ನನ್ನನ್ನು ಆಕರ್ಷಿಸಿದವು. ಅವರ ಕೊರಳಲ್ಲಿ ಕನ್ನಡ ತುಂಬಿಕೊಂಡು ಬರುತ್ತಾ ಇತ್ತು. ಮಾಹಾನ್ ಕಲಾವಿದರಾಗಿದ್ದ ರಾಜಕುಮಾರ್ ನಾನು ಬಲ್ಲಂತೆ ಮಹಾವಿನಯಶಾಲಿಯಾಗಿದ್ದರು. ರವೀಂದ್ರಕಲಾಕ್ಷೇತ್ರದಲ್ಲಿ ಒಂದು ಕಾರ್ಯಕ್ರಮ. ರಾಜಕುಮಾರ್ ವೇದಿಕೆಗೆ ಬಂದವರೇ ವೇದಿಕೆಯಲ್ಲಿದ್ದ ಕನ್ನಡದ ಒಲವಿನ ಕವಿ ಕೆ ಎಸ್ ನ ಅವರಿಗೆ ದೀರ್ಘದಂಡ ಪ್ರಣಾಮ ಮಾಡಿದರು! ಒಬ್ಬ ಮಾಹಾನ್ ಕಲಾವಿದ ಇನ್ನೊಬ್ಬ ಮಹಾನ್ ಕಲಾವಿದನನ್ನು ಹೇಗೆ ಗೌರವಿಸ ಬೇಕು ಎಂಬುದನ್ನು ಜನತೆಗೆ ತೋರಿಸಿಕೊಡುವ ಹುನ್ನಾರವಾಗಿತ್ತು ಈ ಭಾವ ಪ್ರದರ್ಶನ. ಆ ತುಂಬಿದ ಸಭೆಯಲ್ಲಿ ರಾಜಕುಮಾರರನ್ನು ಎಲ್ಲರೂ ಬಲ್ಲವರಾಗಿದ್ದರು. ಸಹಜವಾಗಿಯೇ ಕೆ ಎಸ್ ನ ಅಭಿಮಾನಿಗಳು ಅಲ್ಲಿ ಕಡಿಮೆ ಸಂಖ್ಯೆಯಲ್ಲಿ ಇದ್ದರು. ಕೆ ಎಸ್ ನ ಒಬ್ಬ ಮಾಹಾನ್ ಕಲಾವಿದರು ಎಂಬುದನ್ನು ಜನತೆಗೆ ತೋರಿಸುವುದಕ್ಕೆ ರಾಜಕುಮಾರ್ ಒಂದು ಭಾವಕ್ರಿಯೆಯನ್ನು ಬಳಸಿದರು ಎಂದು ನಾನು ಭಾವಿಸುತ್ತೇನೆ. ಮಾತಿನ ಹಂಗೇ ಇಲ್ಲದೆ ಕರ್ನಾಟಕದ ಇಬ್ಬರು ಕಲಾವಿದರು ಎಷ್ಟು ದೊಡ್ಡವರು ಎಂಬುದನ್ನು ಈ ಘಟನೆ ಸಭಿಕರ ಸಂವೇದನೆಗೆ ತಂದಿತು!

‍ಲೇಖಕರು avadhi

April 22, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಎಚ್ ಎಸ್ ವಿ ಕಾಲಂ: ಮತ್ತೆ, ಮರೆತ ಇತಿಹಾಸದ ಮರುಗಳಿಕೆ..

ತಾವರೆಯ ಬಾಗಿಲು-೧೮ ಎರಡು ಸಾವಿರ ವರ್ಷಗಳ ಹಿಂದೆ ತೆಂಕಣಭಾರತದ ದೇಶ-ಕಾಲ-ಪರಿಸ್ಥಿತಿ ಹೇಗಿತ್ತೆಂದು ನಾವು ಊಹಿಸುವುದೂ ಸಾಧ್ಯವಿಲ್ಲ. ಮರೆತು ಹೋದ...

ಎಚ್ ಎಸ್ ವಿ ಕಾಲಂ: ಕಾವ್ಯದಲ್ಲಿ ಭಾಷೆಯಲ್ಲದ ಭಾಷೆಯ ಮಿಡುಕಾಟ..

ತಾವರೆಯ ಬಾಗಿಲು-೧೬ ಕಾವ್ಯಕ್ಕೆ ಭಾಷೆಯೇ ಮೂಲ ಸಾಮಗ್ರಿ. ಭಾಷೆಯ ಮೂಲಕ ಕವಿಗಳು ತಮ್ಮ ಲೌಕಿಕಾಲೌಕಿಕ ಅನುಭವಗಳನ್ನು ಅಭಿವ್ಯಕ್ತಿಸುತ್ತಾರೆ. ಹಾಗೆ...

6 ಪ್ರತಿಕ್ರಿಯೆಗಳು

 1. r t sharan, Gulbarga

  HSV sir, super article. 50-60 ra dashakadalli
  huttida bahuteka kannadigara anubhava idu. Raaj
  andare shuddha kannada, appata preeti, saraLa
  jeevana. prati kutumbada avibhaajya anga aagidru.
  avaru kanmareyaadaga maneli yarno kalakonda bhaava.

  ಪ್ರತಿಕ್ರಿಯೆ
 2. ವಸುಧೇಂದ್ರ

  ಪ್ರಿಯ ಸಾರ್,

  ಲೇಖನ ಓದಿ ತುಂಬಾ ಖುಷಿ ಪಟ್ಟೆ. ನನಗಿಂತಲೂ ಸುಮಾರು ಇಪ್ಪತ್ತು ವರ್ಷವಾದರೂ ನೀವು ಹಿರಿಯರು. ಆದರೆ ನನ್ನ ಬಾಲ್ಯದಲ್ಲೂ ರಾಜ್‌ಕುಮಾರ್ ನನಗೆ ಐಕಾನ್ ಆಗಿದ್ದರು ಎಂದು ನೆನದಾಗ ನನಗೆ ಅಚ್ಚರಿಯಾಗುತ್ತದೆ. ಅದೆಷ್ಟು ದಶಕಗಳ ಕಾಲ ಈ ನಮ್ಮ ಅಣ್ಣಾವ್ರು ಕನ್ನಡದ ಯುವಪೀಳಿಗೆಯನ್ನು ಮೋಡಿ ಮಾಡಿ, ಸರಿದಾರಿಯಲ್ಲಿ ನಡೆಸಿದರಲ್ಲಾ ಎಂದು ವಿಸ್ಮಯವಾಗುತ್ತದೆ.

  ಒಳ್ಳೆಯ ಲೇಖನಕ್ಕೆ ಧನ್ಯವಾದಗಳು.

  ವಸುಧೇಂದ್ರ

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: