ಕಳೆದ ವಾರ ಎಚ್ ಎಸ್ ವಿ ಅವರ ಆನ್ ಲೈನ್ ಕಥಾನಕ ಪ್ರಕಟವಾಗಲಿಲ್ಲ. ಇದಕ್ಕೆ ಕಾರಣ ‘ತರಂಗ’ ಬಳಗದ ಪ್ರೀತಿ.
ಈ ಬಾರಿಯ ತರಂಗ ಯುಗಾದಿ ವಿಶೇಷಾಂಕವನ್ನು ರೂಪಿಸಿದ ಪೃಥ್ವಿರಾಜ್ ಕವತ್ತಾರ್ ಅವರು ಎಚ್ ಎಸ್ ವಿ ಅವರ ಬರಹಕ್ಕೆ ಮಾರು ಹೋಗಿದ್ದರು. ವಿಶೇಷಾಂಕದಲ್ಲಿ ಎಚ್ ಎಸ್ ವಿ ಇರಲೇಬೇಕು ಎಂಬುದು ಅವರ ಹಂಬಲ. ಹಾಗಾಗಿ ಈ ಬರಹ ತರಂಗದಲ್ಲಿ ಪ್ರಕಟವಾಗುವವರೆಗೆ ತಡೆ ಹಿಡಿಯಬೇಕಾಯಿತು.
ಈಗ ಓದಿ ಎಚ್ ಎಸ್ ವಿ ಅವರ ಮನ ಕಲಕುವ ಬರಹ – ನಾಣಿ ಭಟ್ಟನ ಭೂತ
ನಾಣಿಭಟ್ಟನ ಭೂತ!
-ಎಚ್.ಎಸ್.ವೆಂಕಟೇಶ ಮೂರ್ತಿ
ನಾನು ನಿಧಾನಕ್ಕೆ ಬೆಳೆಯುತ್ತಾ ಇದ್ದೆ. ಹೊರಗಿನ ಜಗತ್ತು ಚೂರು ಚೂರೇ ನನ್ನೊಳಗೆ ಬರುತ್ತಾ ಇತ್ತು. ಸ್ಕೂಲಿಗೆ ಹೋದಾಗ ಹುಡುಗರು ಕೇಳುತ್ತಾ ಇದ್ದರು: ನಿಮ್ಮಪ್ಪಾ ಎಲ್ಲಿದ್ದಾರೋ?. ನಾನು ಹೇಳುತ್ತಿದ್ದೆ: ಮದ್ರಾಸಿನಲ್ಲಿ. ಹುಡುಗರು ನಗುತ್ತಿದ್ದರು. ಏಕೆ ಎಂಬುದು ನನಗೆ ಗೊತ್ತಾಗುತ್ತಿರಲಿಲ್ಲ. ಮನೆಗೆ ಬಂದಾಗ ನನ್ನ ಅಜ್ಜಿಯನ್ನು ಕೇಳುತ್ತಾ ಇದ್ದೆ. ನನ್ನ ಅಪ್ಪ ಎಲ್ಲಿದ್ದಾರೆ? ಮದ್ರಾಸಿನಲ್ಲಿ ಎಂದು ಯಥಾಪ್ರಕಾರ ಅಜ್ಜಿ ಎಲ್ಲೋ ನೋಡುತ್ತಾ ಉತ್ತರಿಸುತ್ತಿದ್ದಳು. ನಮ್ಮಪ್ಪ ಮದ್ರಾಸಿನಲ್ಲಿ ಇಲ್ಲ. ನನಗೆ ಗೊತ್ತು. ನೀನು ಸುಳ್ಳು ಹೇಳುತ್ತಿದ್ದೀ ಎಂದು ನಾನು ಕಿರುಚಿದೆ.
ನನಗೆ ಗೊತ್ತಾಯಿತು. ನನ್ನ ಅಮ್ಮ ಹೇಳಿದಳು. ನಿನ್ನ ಅಪ್ಪ ನೀನು ಹುಟ್ಟುವ ಮೊದಲೇ ಸತ್ತು ಹೋಗಿದ್ದಾರೆ! ನನ್ನಿಂದ ಈ ವಿಷಯ ನನ್ನ ಮನೆಯವರು ಬಚ್ಚಿಟ್ಟಿದ್ದರು. ಬಚ್ಚಿಡಬೇಕಾದ ಕಾರಣವಿರಲಿಲ್ಲ. ಅಮ್ಮನಿಗೆ ಅವಳ ಹದಿನಾರನೇ ವಯಸ್ಸಲ್ಲಿ ಮದುವೆ ಆಯಿತಂತೆ. ಹದಿನೇಳಕ್ಕೆ ಒಂದು ಮಗು. ಅದು ಸತ್ತು ಹುಟ್ಟಿತಂತೆ. ಹದಿನೆಂಟಕ್ಕೆ ಮತ್ತೆ ಅಮ್ಮ ಬಸುರಿಯಾದಳು. ನಾನು ಇನ್ನೂ ಹೊಟ್ಟೆಯಲ್ಲಿದ್ದೆ. ಅಮ್ಮನಿಗೆ ಏಳು ತಿಂಗಳಾಗಿದ್ದಾಗ ನಮ್ಮ ಅಪ್ಪ ಅರಿಸಿನಮಂಡಿ ರೋಗದಿಂದ ತೀರಿಕೊಂಡರಂತೆ. ಜಾಂಡೀಸ್ಗೆಲ್ಲಾ ಸತ್ತೇ ಹೋಗಬೇಕಾ? ನಿಮ್ಮ ಅಪ್ಪ, ಹಾಳಾದೋನು, ಸರಿಯಾಗಿ ಪಥ್ಯ ಮಾಡಲಿಲ್ಲ ಎಂದಳು ನನ್ನ ಅಜ್ಜಿ. ಅಪ್ಪ ಚನ್ನಗಿರಿಯಲ್ಲಿ ತಾಲ್ಲೂಕು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲೇ ಒಂದು ಮನೆ ಮಾಡಿಕೊಂಡಿದ್ದರಂತೆ. ನಮ್ಮ ಅಮ್ಮ ಬಾಣಂತನಕ್ಕೆ ನಮ್ಮೂರಿಗೆ ಬಂದಿದ್ದಳು. ಆರೇ ಮೈಲಿ ದೂ
ರ. ಅಪ್ಪ ಶನಿವಾರ ಭಾನುವಾರ ಮನೆಗೆ ಬರುತ್ತಾ ಇದ್ದರು. ಅಪ್ಪ ಮಹಾ ವಾಚಾಳಿಯೂ ಹತ್ತು ಜನರೊಂದಿಗೆ ಬೆರೆಯುವ ಸ್ವಭಾವದವರೂ ಆಗಿದ್ದರಂತೆ. ಶೆಟ್ಟಿ ಬಿಟ್ಟಲ್ಲೇ ಪಟ್ಟಣ . ಹಾಗೆ ನಿಮ್ಮ ಅಪ್ಪ-ಎನ್ನುತ್ತಿದ್ದಳು ನನ್ನ ಅಜ್ಜಿ. ಜೊತೆಗೆ ಬಾಯಿ ಚಪಲ ಜಾಸ್ತಿ. ಕಣ್ಣೆಲ್ಲಾ ಹಳದಿ ತಿರುಗಿದಾಗಲೂ ಚನ್ನಗಿರಿಯ ರಾಘಣ್ಣನ ಹೋಟೆಲ್ಲಿನಲ್ಲಿ ಬೆಣ್ಣೆ ದೋಸೆ ತಿನ್ನುತ್ತಾ ಇದ್ದರಂತೆ. ಯಾರು ಕರೆದರೆ ಅವರ ಮನೆಯಲ್ಲೇ ತಿಂಡಿ; ಊಟ. ಯಾರೋ ಆಗದವರು ನಿಮ್ಮ ಅಪ್ಪನಿಗೆ ಕೈಮಸಕು ಮಾಡಿದರು ಅನ್ನುತ್ತಿದ್ದಳು ನನ್ನ ಅಜ್ಜಿ. ಕೈಮಸಕು ಅಂದರೆ , ನಮ್ಮ ಕಡೆ ಆಹಾರದಲ್ಲಿ ಮದ್ದು ಬೆರೆಸಿ ಹಾಕುವುದು. ಕೈಮಸಕೋ, ಜಾಂಡೀಸೋ, ಅಥವಾ ಇನ್ನು ಯಾವುದೋ ಯಾರಿಗೂ ತಿಳಿಯದ ಕಾಯಿಲೆಯೋ, ಒಟ್ಟಿನಲ್ಲಿ ಅಪ್ಪ ಇಪ್ಪತ್ತೆರಡು ವಯಸ್ಸಿಗೆಲ್ಲಾ ಹೋಗಿಬಿಟ್ಟಿದ್ದರು. ಸಾಯುವ ಮುಂಚೆ ಅಮ್ಮನಿಗೆ ಹೇಳಿದರಂತೆ. ನಿನಗೆ ಗಂಡು ಮಗುವೇ ಆಗುತ್ತೆ. ಅದು ನನ್ನನ್ನ ಮೀರಿಸೋ ಅಷ್ಟು ಜಾಣನಾಗತ್ತೆ…
ನಮ್ಮಪ್ಪ ತುಂಬಾ ಜಾಣ ಎನ್ನೋದು ಒಂದು ಪ್ರತೀತಿ. ಅವರು ಗಟ್ಟಿಯಾಗಿ ಇಂಗ್ಲಿಷ್ ಓದುತ್ತಿದ್ದರೆ ನಮ್ಮ ಅಜ್ಜ, ಊರ ಹಿರೀಕರನ್ನ ಕರೆದುಕೊಂಡು ಬಂದು ಪಡಸಾಲೆಯಲ್ಲಿ ಕೂಡಿಸಿ, ತಮ್ಮ ಅಳಿಯ ಇಂಗ್ಲಿಷ್ ಓದುವುದನ್ನು ಅವರಿಗೆ ಕೇಳಿಸಿ ಗರ್ವ ಪಡುತ್ತಿದ್ದರಂತೆ. ನಮ್ಮ ಅಪ್ಪ ಗಟ್ಟಿಯಾಗಿ ಯಾಕೆ ಇಂಗ್ಲಿಷ್ ಓದುತ್ತಿದ್ದರು? ಅವರಿಗೂ ತಾನು ಇಂಗ್ಲಿಷ್ ಬಲ್ಲವನು ಎಂದು ತೋರಿಸಿಕೊಳ್ಳುವ ಖಯಾಲಿ ಇತ್ತೋ? ಮದುವೆ ಗೊತ್ತಾದಾಗ ಅಪ್ಪ ಇನ್ನೂ ತುಮುಕೂರಲ್ಲಿ ಇಂಟರ್ ಓದುತ್ತಿದ್ದರಂತೆ. ಅವರು ಆ ಕಾಲದಲ್ಲಿ ಬರೆದ ಒಂದು ಪತ್ರ ನನಗೆ ಪೆಟಾರಿಯಲ್ಲಿ ಸಿಕ್ಕಿತು. ಆ ಮಹಾನುಭಾವ ತಾನು ಮದುವೆ ಆಗಲಿರುವ ಹುಡುಗಿಗೆ ಅಂದರೆ ನಮ್ಮ ಅಮ್ಮನಿಗೆ ಇಂಗ್ಲಿಷ್ ಭಾಷೆಯಲ್ಲಿ ಬರೆದ ಪತ್ರ ಅದು! ನಮ್ಮ ಅಮ್ಮನಿಗೆ ಆ ಕಾಲದಲ್ಲಿ ಎ ಬಿ ಸಿ ಡಿ ಗೊತ್ತಿರಬಹುದು ಅಷ್ಟೆ. ಅವಳಿಗೆ ಇಂಗ್ಲಿಷ್ ಓದಲಿಕ್ಕೆ ಎಲ್ಲಿ ಬರುತ್ತಾ ಇತ್ತು? ಪತ್ರದ ಮಜಕೂರು ಇಷ್ಟು: ನನ್ನ ಕೈಯಲ್ಲಿ ಈಗ ಕಾಸು ಇಲ್ಲ. ಕಾಲೇಜಿಗೆ ಫೀಜು ಕಟ್ಟುವುದಿದೆ. ಮಾವನವರಿಗೆ ಹೇಳಿ ತಕ್ಷಣ ಇನ್ನೂರು ರೂಪಾಯಿ ಕಳಿಸುವ ಏರ್ಪಾಡು ಮಾಡು.
ಈ ಪತ್ರವನ್ನು ಅಮ್ಮ ಓದಲಾರಳು. ಅಜ್ಜನಿಗೆ ಸೈನ್ ಮಡುವುದಕ್ಕೆ ಎಷ್ಟು ಬೇಕೋ ಅಷ್ಟು ಮಾತ್ರ ಇಂಗ್ಲಿಷ್ ಬರುತ್ತಾ ಇತ್ತು. ಅಂದ ಮೇಲೆ ಈ ಪತ್ರವನ್ನು ಯಾರು ಯಾರಿಗೆ ಓದಿರ ಬಹುದು? ಅಪ್ಪನಿಗೆ ಹಣ ತಲುಪುವುದಾದರೂ ಹೇಗೆ? ಆಮೇಲೆ ಅಪ್ಪ ಕನ್ನಡದಲ್ಲಿ ಒಂದು ಪತ್ರ ಅಮ್ಮನಿಗೆ ಬರೆದಿರಬಹುದೆ? ಕುವೆಂಪು ಅವರ ಒಂದು ಪದ್ಯದಲ್ಲಿ ಬರುತ್ತದೆ ನೋಡಿ: ಕನ್ನಡದಲೆ ಹರಿ ಬರೆಯುವನು! ಕನ್ನಡದಲೆ ಹರ ತಿರಿಯುವನು! ಇಂಥ ಸಂದರ್ಭಗಳನ್ನು ಅನುಲಕ್ಷಿಸಿಯೇ ಕುವೆಂಪು ಈ ಎರಡು ಸಾಲು ಬರೆದಿರಲಿಕ್ಕೂ ಸಾಕು! ಆ ವಿಷಯ ಹಾಗಿರಲಿ. ನಾನಂತೂ ಹದಿನೆಂಟು ಹತ್ತೊಂಬತ್ತರ ತರುಣನಾಗಿದ್ದಾಗಲೂ ಅಪ್ಪನ, ಅದು ಬಂದ ಕಾಲದಲ್ಲಿ ಯಾರೂ ಪ್ರಾಯಶಃ ಓದಿರಲಾರದ ಆ ಪತ್ರವನ್ನ ನನ್ನ ಬಳಿ ಇಟ್ಟುಕೊಂಡಿದ್ದೆ. ಆ ಪತ್ರದ ಕೊನೆಯ ವಾಕ್ಯ ಈಗಲೂ ನಾನು ಅದು ಇದ್ದಂತೇ ಹೇಳಬಲ್ಲೆ. ‘ಪ್ಲೀಜ್ ಕೀಪ್ ರೈಟಿಂಗ್!’
ನನಗೆ ಚೆನ್ನಾಗಿ ಬುದ್ಧಿಬಂದಮೇಲೆ ಅಪ್ಪನಿಗೆ ಸಂಬಂಧಿಸಿದ ವಿವರಗಳನ್ನು ಸಂಗ್ರಹಿಸುವ ಹುಚ್ಚು ನನಗೆ ಹಿಡಿಯಿತು. ಅಪ್ಪನ ಮಾರ್ಕ್ಸ್ ಕಾರ್ಡ್ ಹುಡುಕಿದೆ. ಅವರು ಎಸ್ ಎಸ್ ಎಲ್ ಸಿ ಯಲ್ಲಿ ಮೊದಲ ದರ್ಜೆಯಲ್ಲಿ ಉತ್ತೀರ್ಣರಾಗಿದ್ದರು! ಅದು ಸ್ವಲ್ಪ ಮಟ್ಟಿಗೆ ನನ್ನ ಅಹಂಕಾರ ಹೆಚ್ಚಿಸಿತ್ತು! ನಮ್ಮ ಅಮ್ಮ ಅಪ್ಪ ಮದುವೆಯಾದ ಹೊಸದರಲ್ಲಿ ಬೆಂಗಳೂರಿಗೆ ಹೋಗಿದ್ದರಂತೆ. ಆಗ ಅವರು ತೆಗೆಸಿದ ಒಂದು ಫೋಟೋ ಹೇಗೋ ಸಿಕ್ಕಿತು. ಅಪ್ಪನ ಮುಖ ನೋಡಲಿಕ್ಕೆ ಇರುವ ಒಂದೇ ಫೋಟೋ ಅದು. ಅಂಗೈ ಅಗಲದ್ದು. ೧೯೭೭ರಲ್ಲಿ ಬಿ ಆರ್ ಎಲ್ ನನ್ನ ಗೆಳೆಯನಾದ ಮೇಲೆ ಅವನು ಆ ಫೋಟೋ ಚಿಂತಾಮಣಿಗೆ ತೆಗೆದುಕೊಂಡು ಹೋಗಿ ದೊಡ್ಡದಾಗಿ ಎನ್ಲಾರ್ಜ್ ಮಾಡಿಸಿ ನನಗೆ ಪ್ರೆಸೆಂಟ್ ಮಾಡಿದ. ಆ ಫೋಟೋದಲ್ಲಿ ನನ್ನ ಅಪ್ಪ ನಾರಾಯಣಭಟ್ಟ ಬಿನ್ ಗಂಗಾಧರಭಟ್ಟ ಕಾಲಮೇಲೆ ಕಾಲು ಹಾಕಿ ಕುರ್ಚಿಯ ಮೇಲೆ ಕೂತಿದ್ದಾರೆ. ಅಮ್ಮ ಅವರ ಪಕ್ಕ ಮುದುಡಿಕೊಂಡು ನಿಂತಿದ್ದಾಳೆ. ಅಪ್ಪ ಶೂ ಹಾಕಿದ್ದಾರೆ. ಆದರೆ ಸ್ಯಾಕ್ಸ್ ಇಲ್ಲ. ಅಮ್ಮ ತುಂಬ ಚೆಲುವೆಯಾಗಿ ಕಾಣುತ್ತಾ ಇದ್ದಾಳೆ. ಅವಳು ಹಾರ್ಮೋನಿಯಂ ನುಡಿಸುವಾಗ ಬಲಗೈ ಹಸ್ತದ ಕಿರು ಬೆರಳು ಮನೆಗೆ ತಾಗದಂತೆ ಡೊಂಕಾಗಿ ಬಗ್ಗಿಕೊಂಡು ಸರ ಸರ ಕಪ್ಪು ಬಿಳಿ ಮನೆಯ ಮೇಲೆ ಚೇಳಿನ ಕೊಂಡಿಯ ಹಾಗೆ ಹರಿದಾಡುತ್ತದೆ. ಆ ಡೊಂಕು ಕಿರು ಬೆರಳು ಫೋಟೋದಲ್ಲೂ ಢಾಳಾಗಿ ಕಾಣುತ್ತಾ ಇದೆ. ಉಟ್ಟಿರುವುದು ಕಪ್ಪು ಬಣ್ಣದ ಸೀರೆ. ಅಥವಾ ಬ್ಲಾಕ್ ಅಂಡ್ ವೈಟ್ ಫೋಟೋದಲ್ಲಿ ಅದು ಕಪ್ಪಾಗಿ ಕಾಣುತ್ತಾ ಇದೆ. ಹದಿನೇಳು ವರ್ಷದ ಮುಗ್ಧ ಹುಡುಗಿಯ ಮುಖ.ಪಕ್ಕದಲ್ಲಿ ಢಿಕಾವಾಗಿ ಕೂತ ಗಂಡನ ಬಗ್ಗೆ , ಆತನ ರಕ್ಷಕ ಬಲದ ಬಗ್ಗೆ ಅವಳ ಕಣ್ಣಲ್ಲಿ ಇನ್ನಿಲ್ಲದ ವಿಶ್ವಾಸ ತುಂಬಿ ತುಳುಕುವಂತಿದೆ. ಅಥವಾ ಈ ಎಲ್ಲ ಅರ್ಥ ನಾನೇ ಆ ಫೋಟೋದಲ್ಲಿ ಓದುತ್ತಾ ಇದ್ದೇನೊ? ಜೆ ಕೆ ವೇಲ್ಸ್ ಸ್ಟುಡಿಯೋದಲ್ಲಿ ತೆಗೆಸಿದ ಫೋಟೋ ಅದು. ನಿಮ್ಮ ಅಮ್ಮ ಆವತ್ತು ಉಟ್ಟಿದ್ದ ಸೀರೆ ನನ್ನದು ಎಂದರು ಆ ಫೋಟೋ ತೆಗೆಸಿದ ನಮ್ಮ ಬೆಂಗಳೂರು ಅತ್ತೆ! ಹೊಸದಾಗಿ ಮದುವೆಯಾದ ಹುಡುಗಿಯರಿಗೆ ಅಲಂಕಾರ ಮಾಡಿ ಫೋಟೋ ತೆಗೆಸೋದು ನಮ್ಮ ಬೆಂಗಳೂರತ್ತೆಯ ಹುಚ್ಚು. ನಾನು ನನ್ನ ಪುಟ್ಟ ಹೆಂಡತಿಯೊಂದಿಗೆ ಬೆಂಗಳೂರಿಗೆ ಬಂದಾಗಲೂ ನಮ್ಮ ಈ ಬೆಂಗಳೂರು ಅತ್ತೆ ಅಂಥದೇ ಒಂದು ಫೋಟೋ ತೆಗೆಸಿದ್ದರು.
ನಮ್ಮ ಅಪ್ಪ ತುಮುಕೂರಿನಲ್ಲಿ ಇಂಟರ್ ಓದಿದ್ದು ಎಂಬುದು ತಿಳಿದ ಮೇಲೆ ನಾನು ತುಮುಕೂರಿಗೆ ಹೋಗಿ, ಗುಮಾಸ್ತನ ಮುಂದೆ ಗೋಗರೆದು ಹಳೆಯ ರೆಕಾರ್ಡ್ ತೆಗಿಸಿ ನೋಡಿದೆ. ನಮ್ಮ ಅಪ್ಪನ ಸಹಪಾಠಿಗಳ ಹೆಸರು ಬರೆದುಕೊಂಡೆ. ಅವರಲ್ಲಿ ಇಬ್ಬರನ್ನು ಪತ್ತೆ ಮಾಡುವುದೂ ನನಗೆ ಸಾಧ್ಯವಾಯಿತು. ಅವರನ್ನು ನಾನು ಕೇಳಿದ್ದು: ನಮ್ಮ ಅಪ್ಪ ಹೇಗಿದ್ದರು? ಅವರ ಬಗ್ಗೆ ನಿಮ್ಮ ನೆನಪುಗಳೇನಾದರೂ ಇವೆಯಾ? ನಮ್ಮ ಅಪ್ಪನನ್ನು ನೋಡಿದ್ದ ನಮ್ಮ ದೊಡ್ಡಪ್ಪ, ಚಿಕ್ಕಪ್ಪ, ದೊಡ್ಡಮ್ಮ ಇವರನ್ನು ಭೆಟ್ಟಿ ಮಾಡಿದೆ. ನಾನು ನಮ್ಮ ಅಮ್ಮನ ಊರಲ್ಲೇ ಬೆಳೆದದ್ದರಿಂದ ತಂದೆಯ ಕಡೆಯ ಸಂಬಂಧವೇ ಹರಿದು ಹೋಗಿತ್ತಲ್ಲ! ಹದಿನೆಂಟು ವರ್ಷದ ಹುಡುಗ ಮತ್ತೆ ಬಸವಾಪಟ್ಟಣಕ್ಕೆ, ಹೊನ್ನಾಳಿಗೆ ಹೋಗಿ ಅವರನ್ನೆಲ್ಲಾ ಭೆಟ್ಟಿ ಮಾಡಿದೆ. ನಮ್ಮ ಅಪ್ಪನ ಬಗ್ಗೆ ನಿಮ್ಮಲ್ಲಿ ಏನಾದರೂ ನೆನಪುಗಳುಂಟೆ? ನಮ್ಮ ಅಪ್ಪ ಅಮ್ಮನನ್ನು ಮದುವೆಯಾದ ಮೇಲೆ ಅವರು ಸಾಯುವವರೆಗಿನ ಕೆಲವು ನೆನಪುಗಳನ್ನು ನಾನು ನಮ್ಮ ಅಜ್ಜಿ, ಅಮ್ಮ, ದೊಡ್ಡಜ್ಜಿಯಿಂದ ಸಂಗ್ರಹಿಸಿದ್ದೆ. ಅವರು ಮದುವೆಗೆ ಮುನ್ನ ಹೇಗಿದ್ದರು ಎಂಬ ಚಿತ್ರ ನನಗೆ ಕಟ್ಟಿಕೊಳ್ಳುವುದಿತ್ತು. ಆ ಮಾಹಿತಿ ಕೊಡುವ ಮಂದಿ ಬಹಳ ಕಮ್ಮಿ ಇದ್ದರು.
ಕೆಲವೇ ಆಪ್ತಮೂಲಗಳಿಂದ ನಾನು ಸಂಗ್ರಹಿಸಿದಂತೆ ಹೇಳಬಹುದಾದರೆ ನನ್ನ ಅಪ್ಪ ಬಹಳ ದಿಲ್ದಾರ ಇದ್ದರು. ಮನಸುಖರಾಯ ಇದ್ದರು. ವಾಚಾಳಿಯೂ, ಜನಬೇಕು ಎಂದು ಹಂಬಲಿಸುವವರೂ ಆಗಿದ್ದರು. ಯಾರ ಮನೆಗೆ ಹೋದರೂ ಅವರನ್ನು ಅತ್ತೆ , ಮಾವ, ಅತ್ತಿಗೆ, ಅಳಿಯ ಎಂದು ಕರೆಯುತ್ತಾ ಅವರಿಗೆ ಹತ್ತಿರವಾಗುವ ಸ್ವಭಾವದವರಂತೆ! ಜೊತೆಗೆ ನನಗೆ ತೋರುವಂತೆ ಸ್ವಲ್ಪ ತೋರುಗಾಣಿಕೆಯ ಮನುಷ್ಯನೂ ಇರಬಹುದು. ನಾಲಗೆ ಚಪಲವಂತೂ ವಿಪರೀತ ಎಂದು ಅವರನ್ನು ಬಲ್ಲವರೆಲ್ಲಾ ನನಗೆ ಹೇಳಿದ್ದಾರೆ. ಅವರಿಗೆ ಕಥೆ, ಕಾದಂಬರಿ, ಕವಿತೆ, ಗಿವಿತೆ ಓದುವ ಹವ್ಯಾಸವಿತ್ತೆ? ನನ್ನ ಅಮ್ಮ ಹೇಳುವಂತೆ ಅವರು ಮೈಸೂರಮಲ್ಲಿಗೆಯ ಶಾನುಭೋಗರ ಮಗಳು ರತ್ನದಂಥ ಹುಡುಗಿ ಎನ್ನುವ ಹಾಡನ್ನು ಹಾಡುತ್ತಾ ಮದುವೆಯ ಮುಂಚೆ ಅವಳನ್ನು ರೇಗಿಸುತ್ತಾ ಇದ್ದರಂತೆ! ಮೈಸೂರ ಮಲ್ಲಿಗೆ ಅವರು ಓದಿರಲೇ ಬೇಕು! ನಮ್ಮ ಅಜ್ಜ ಶಾನುಭೋಗರಾಗಿದ್ದರು. ನಮ್ಮ ಅಮ್ಮನ ಹೆಸರು ರತ್ನ. ಹೀಗಾಗಿ ಅವರು ಆ ಪದ್ಯವನ್ನ ನಮ್ಮ ಅಮ್ಮನೆದುರು ಹಾಡುತ್ತಿದ್ದರು ಎಂದು ಸುಲಭವಾಗಿ ಊಹಿಸ ಬಹುದು.
ಈಚೆಗೆ ಅರವಿಂದ ಚೊಕ್ಕಾಡಿ ತಮ್ಮ ತಂದೆ ತೀರಿಕೊಂಡ ಸಂದರ್ಭದಲ್ಲಿ ಬೇರೆ ಬೇರೆ ಬರಹಗಾರರನ್ನ ತಮ್ಮ ತಮ್ಮ ತಂದೆಯ ಬಗ್ಗೆ ಬರೆದು ಕೊಡಲು ಕೇಳಿ, ಹಾಗೆ ಬರೆದಂಥ ಲೇಖನಗಳನ್ನೆಲ್ಲಾ ಎರಡು ತಲೆಮಾರು ಅಂತ ಒಂದು ಪುಸ್ತಕ ಮಾಡಿದ್ದಾರೆ. ಸದರೀ ಪುಸ್ತಕದಲ್ಲಿ ನಾನು ನನ್ನ ಅಪ್ಪನ ಬಗ್ಗೆ ಬರೆದ ಕೆಲವು ಸಾಲುಗಳೂ ಇವೆ.
ನಾನು ಕಣ್ಣು ತೆರೆಯುವ ಮೊದಲೇ, ಗೆರೆ ದಾಟಿ ಹೋದ
ಆಕೃತಿಯೇ, ನೆಲಕ್ಕೊತ್ತಿ ಊರಿದ ಬೇರ ಅನಾಮತ್ತು ಕಿತ್ತು
ಆಕಾಶಕ್ಕೆರಗಿದ ಹದ್ದು ಮೀರಿದ ಹದ್ದೇ, ನಿದ್ದೆ ಮಾಡು
ತ್ತಿದ್ದಿರುಳು ತುಂಬಿದ ಬಸುರಿಯನ್ನಿದ್ದಲ್ಲೇ ಬಿಟ್ಟು,
ಗಡಿಪಾರಾಗಿ ಹೋದ ಅಪರಾಧವನ್ನೇ ಮಾಡಿರದ ತಪ್ಪಿತಸ್ಥಾ,
ನೀನೆಂಥ ತಂದೆ!
ನನ್ನ ಅಮ್ಮನೆಂಬ ಪುಷ್ಕಳ ಕದಳಿಗೊಮ್ಮೆಗೇ ನುಗ್ಗಿ
ಬುಡದಿಂದ ತುದಿವರೆಗಿಟ್ಟಾಡಿ, ಆಷಾಢ ಗಾಳಿ
ಯಂತೊಮ್ಮೆ ನಟ್ಟಿರುಳಲ್ಲಿ ಮಂತಲ್ಲಾಡಿ ಮಂಡಿ ಬುಗುರಿ,
ಏನಾಯಿತೆಂಬುದು ತಿಳಿವ ಮೊದಲೇ ಆಗಿ ಧರಾಶಾಯಿ,
ತೆರೆದ ಬಾಯಿ ಬಿಟ್ಟ ಕಣ್ಣಲ್ಲಿ , ತಟಸ್ಥನಾದ ಮೃತ್ಪಿಂಡವೇ
ನೀನೆಂಥ ತಂದೆ!
ಮಲಗಿದವ ಮಲಗಿರುವ ಹಾಗೆಯೇ ನಡೆದದ್ದು ಬೋಧಿವೃಕ್ಷದ
ಬುಡಕ್ಕಲ್ಲ, ಬ್ರಹ್ಮಬಲವೇ ಬಲವೆಂಬರಿವಿನಲ್ಲಿ ಕಾಳ್ಗಿಚ್ಚಲ್ಲಿ
ಬೇಯಲಿಕ್ಕಲ್ಲ, ತೌರಾದರೂ ಸೇರಿ ಬದುಕಿರಲಿ ನೆಮ್ಮದಿಯಿಂದೆಂದು
ಉಟ್ಟ ಸೀರೆಯ ಅರೆಹರಿದು, ಕಳ್ಳ ಹೆಜ್ಜೆಯಲ್ಲಿ ಸರಿದದ್ದು ವೇಷಾಂತರದ
ದೇಶಾಂತರಕ್ಕಲ್ಲ. ತೌರಲ್ಲೇ ಇದ್ದವಳ ತೌರ ಸುಖಕ್ಕೇ ಕೈಬಿಟ್ಟೆ.
ನೀನೆಂಥ ತಂದೆ!
ಕಣ್ತೆರೆದಾಗ ನಾನು ಕಂಡದ್ದು ಎದೆಯಿರುಕಲ್ಲಿ ಚಂದ್ರಬಟ್ಟಿರದ
ಒಂಟಿ ಎಳೆ. ಸೂರ್ಯ ಬಿಂದುವಿಲ್ಲದ ಪೂರ್ವಾಕಾಶದ ಬೊಳು ಹಣೆ.
ಸೂರು ಹಾರಿಹೋಗಿ ಬಟಾಬಯಲಲ್ಲಿ ದಿವಂಗತಕ್ಕೆ ತೋಳುಚಾಚಿ ನಿಂತ
ನೆತ್ತಿ ನೆರಳಿಲ್ಲದ ಮನೆ. ಸದಾ ಎಣ್ಣೆ ನಡುವೆ ಮೂತಿ ಮಾತ್ರವೆ ತೇಲು
ತ್ತಿದ್ದ ಜೋಲು ಬತ್ತಿ. ಪಡ್ಡೆ ಕಡಸಿಗೆ ಕಾಲ್ತೊಡಕು ಗುದ್ದೆ ಕಟ್ಟಿ ಅರುಗಾದೆ.
ನೀನೆಂಥ ತಂದೆ!
ಉಸುರಿಲ್ಲದಾಸಾಮಿ ಹೆಸರ ಹೊತ್ತವ ನಾನು ಹೆಗಲ ಶಿಲುಬೆಯ ಹಾಗೆ.
ವ್ರಣವ ಕುಕ್ಕುವ ಘೂಕ ಕಾಕದ ನಡುವೆ ನಡೆಗೆಟ್ಟು ತತ್ತರಿಸುತ್ತ
ಆಗಿ ಒಪ್ಪಿಡಿ ಲಜ್ಜೆಮುದ್ದೆ, ಮಣ್ಣಲ್ಲಿ ಕಣ್ಣಿಟ್ಟು ನಡೆದವನು. ಕರಗಿದ
ಮೋಡದಿಂದುದುರುವ ಕಣ್ಣೀರಿಗೊಡ್ಡಿ ಬೊಗಸೆ, ಚಕ್ರವ್ಯೂಹದ ನಡುವೆ ದಿಕ್ಕೆಟ್ಟ
ಪರದೇಶಿ. ಚಂದ್ರ ತಾಳಿಯ ಕನವರಿಸಿ ಇರುಳಲ್ಲಿ ಎದ್ದವನು ತಡಬಡಿಸಿ.
ನೀನೆಂಥ ತಂದೆ!
ಕಾಣದೇ ಕಾಡಿದವ, ಬೇಡದೇ ಬೇಡಿದವ, ಹಾಡದೇ ಹಾಡಿದವ ಬೇಸೂರು ರಾಗ.
ಆಗಾಗ ಕನಸಲ್ಲಿ ಮುಸುಕ ಮರೆಯಲ್ಲಿ ಮುಖವಿಟ್ಟು ನರದ ಹುರಿಹೊಸೆದವನು.
ಮಾಡಬಾರದ ಪರಮ ಪಾತಕದ ಮನಸನ್ನು ಎದೆ ತುಂಬ ತುಂಬಿದವನು.
ನಡುಮನೆಯ ಗೋಡೆಯಲಿ ಕಾಲ್ಚೀಲ ರಹಿತ ಶೂ ತೊಟ್ಟು ಕಾಲ್ನೀಡಿ ಕೂತವನು.
ದಂಡು ದಾಳಿಗೆ ಕಂಗೆಟ್ಟು ಕುಸಿದೂರಲ್ಲಿ ನಿಷ್ಕಂಪ ನೇತಾಡುತ್ತಿರುವ ನತದೃಷ್ಟನೇ
ನೀನೆಂಥ ತಂದೆ?
****
ಪದ್ಯವನ್ನು ಅದರ ಗುಂಭತೆಗೇ ಬಿಟ್ಟು ಮತ್ತೆ ಗದ್ಯಕ್ಕೆ ಬರುತ್ತೇನೆ. ಬೆಂಗಳೂರಿಗೆ ನಾನು ಎಂ ಎ ಮಾಡಲಿಕ್ಕೆ ಬಂದ ಹೊಸದು(೧೯೭೧). ನಮ್ಮ ಬೆಂಗಳೂರತ್ತೆ ಹೇಳಿದರು. ಕೃಷ್ಣಮ್ಮ ಅಂತ ನನ್ನ ಸ್ನೇಹಿತೆ ಒಬ್ಬರಿದ್ದಾರೆ. ನಿಮ್ಮ ಅಪ್ಪ ಅಂದರೆ ಅವರಿಗೆ ಜೀವ. ಅವರ ಮನೆ ವಿಳಾಸ ಕೊಡುತ್ತೇನೆ. ಒಮ್ಮೆ ಹೋಗಿ ನೋಡಿಕೊಂಡು ಬಾ! ಆಯಿತು ಎಂದೆ ನಾನು. ಒಂದು ಭಾನುವಾರ ಮಟ ಮಟ ಮದ್ಯಾಹ್ನ ಟಾಟಾ ಸಿಲ್ಕ್ ಫಾರಮ್ ಬಳಿ ಇದ್ದ ಕೃಷ್ಣಮ್ಮನವರ ಸಣ್ಣ ಮನೆಗೆ ಹೋದೆ. ಪಾಪ. ಅವರು ಮಲಗಿದ್ದರೇನೋ! ನಾನು ಬಾಗಿಲು ಬಡಿದೆ. ಸ್ವಲ್ಪ ಹೊತ್ತಾದ ಮೇಲೆ, ಬಂದೇ ಎಂಬ ಸಣ್ಣ ದನಿ ಕೇಳಿತು. ಆಮೇಲೆ ಬೆಳ್ಳನೆಯ ಒಬ್ಬ ಮುತ್ತೈದೆ ಬಂದು ಬಾಗಿಲು ತೆರೆದು ನನ್ನನ್ನು ಬಿರಿಬಿರಿ ನೋಡಿದವರು ಕೀಟಾರನೆ ಕಿರುಚಿ ಓಡಿದರು ನೋಡಿ ಒಳಕ್ಕೆ!
“ರೀ ನೋಡ್ ಬನ್ರೀ. ನಾಣಿ ಭಟ್ಟನ ಭೂತ ಬಂದಿದೆ!”
ಇಲ್ಲಿ ಬರಿ ಅಪ್ಪನ ಕುರಿತ ಮಾತ್ರವಲ್ಲ ,
ಅಮ್ಮನನ್ನು ಸೇರಿಸಿಕೊಂದದ್ದೇ ..
ಅಮ್ಮನಿಲ್ಲದ ಅಪ್ಪ, ಅಪ್ಪನಿಲ್ಲದ ಅಮ್ಮ
ಯೋಚನೆಗಳಲ್ಲಿ ಇರುವುದು ಎಂದರೆ….
Too good! Thanks sir..
allige appa hegidru anno prashne ge uttara sikkitalla sir?
baraha too beautiful sir…
nimma naguvina haage!
Kanada appana bagge enella chandada kalpane, Nijakku kanuva appaniddiddare intha chandada kavana janma talutite? appanirada ammana chitra kanmunde katti kottiddakke tumba tumba Thanks
Sir, Your writing is fantastic. I could imagine your expressions and the glow in your eyes while reading the lines of the poem. Regards.
ಚೆನ್ನಾಗಿದೆ ಕಥೆ… ಈ ರೀತಿ ಬರೆಯಬೇಕು ಅಲ್ವಾ?! ಎಚ್.ಎಸ್.ವಿ.ಯವರು ಬೆನ್ನು ತಟ್ಟಿಯಾರು. ಪ್ರಯತ್ನಿಸೋಣ. ಈ ಕಥೆಯನ್ನು ಪ್ರತಿಕ್ರಿಯೆ ಕೊಡುವ ಮೊದಲು ಹತ್ತು ಬಾರಿ ಓದಿದ್ದೇನೆ. ಸಮಾಧಾನವಾಗಲಿಲ್ಲ. very nice….. ಮತ್ತೊಮ್ಮೆ ಓದುತ್ತೇನೆ………