ಎಚ್ ಎಸ್ ವಿ ಕಾಲಂ: ಕಟ್ಟಬಲ್ಲವನಿಗಷ್ಟೇ ಮುರಿಯುವ ಹಕ್ಕು!

ತಾವರೆಯ ಬಾಗಿಲು-೪
ಎಚ್.ಎಸ್.ವೆಂಕಟೇಶ ಮೂರ್ತಿ

ಕವಿತೆ ಎಂಬುದು ಶಬ್ದಗಳ ಸಂಯೋಜನೆ ಹೇಗೋ ಹಾಗೆಯೇ ಅದು ನಿಶ್ಶಬ್ದಗಳ ಸಂಯೋಜನೆಯೂ ಹೌದು. ಏನು ಹಾಗೆಂದರೆ? ಸ್ವಲ್ಪ ಸರಳಗೊಳಿಸಿ ಹೇಳಲಿಕ್ಕೆ ಯತ್ನಿಸುತ್ತೇನೆ.

ಕವಿತೆ  ಕಟ್ಟುವಾಗ ಕವಿಯು ಮಾತುಗಳನ್ನು ಬಳಸುತ್ತಾನೆ ಎನ್ನುವುದನ್ನು ನಾವು ಬಲ್ಲೆವು. ಆದರೆ ಮಾತಿನೊಂದಿಗೆ ಆಯಕಟ್ಟಿನ ಜಾಗಗಳಲ್ಲಿ ಅವನು ಮೌನವನ್ನೂ ಬಳಸುತ್ತಾನೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು.

she-readingಹಾಗೆ ಮೌನವನ್ನು ನಿರ್ಮಿಸುವುದಕ್ಕೆ ನಿಯತ ಲಯದ ಹಾಸೊಂದು ಕವಿತೆಯಲ್ಲಿ ಇರುವುದು ಅಗತ್ಯ. ಛಂದಸ್ಸಿನ ಪರಿಣತಿ ಇಲ್ಲದ ಕವಿ ಮಾತನ್ನು ಮಾತ್ರ ಬಳಸುತ್ತಾನೆ; ಮೌನವನ್ನು ಬಳಸುವುದು ಅವನಿಂದ ಸಾಧ್ಯವಿಲ್ಲ. ಅದಕ್ಕಾಗಿಯೆ ಛಂದದ ಹಂಗಿಲ್ಲದೆ ಗದ್ಯಾತ್ಮಕವಾಗಿ ಬರೆಯುತ್ತಿರುವ ಅನೇಕ ಕವಿಗಳು ಮೌನದ ಅನುಸಂಧಾನವನ್ನು ಮಾಡಲಾಗದವರಾಗಿದ್ದಾರೆ. ಅದು ಕವಿತೆಗೆ ಬಹುದೊಡ್ಡ ನಷ್ಟ.

ನಿಯತವಾದ ಲಯವನ್ನು ಅಗತ್ಯ ಸ್ಥಳಗಳಲ್ಲಿ ಭಂಗಪಡಿಸುವುದರಿಂದ ಇಂಥ ಮೌನದ ಅನುಸಂಧಾನ ಸಾಧ್ಯವಾಗುತ್ತದೆ. ಒಂದು ಕವಿತೆಯನ್ನು ಆಧಾರವಾಗಿ ಇಟ್ಟುಕೊಂಡು ನಾನು ಈವರೆಗೆ ಹೇಳಿದ ಸಂಗತಿಯನ್ನು ವಿವರಿಸಲು ಪ್ರಯತ್ನಿಸುತ್ತೇನೆ.

ಕುವೆಂಪು ಅವರ “ಸುಗ್ಗಿ ಬರುತಿದೆ” ಎಂಬ ಮನೋಹರ ಕವಿತೆಯನ್ನು ಕನ್ನಡ ಕಾವ್ಯ ರಸಿಕರೆಲ್ಲಾ ಬಲ್ಲರು. ಇದು ಸುಗ್ಗಿಯ ಕುಣಿತವನ್ನು ಅಭಿನಯಿಸಿ ತೋರಿಸುವ ಪದ್ಯ.

ಏನು? ಪದ್ಯವೇ ಕುಣಿತವನ್ನು ಅಭಿನಯಿಸುತ್ತದೆಯೇ? ಪದ್ಯವನ್ನು ಹೇಳಿಕೊಂಡು ಕುಣಿಯುವವರು ನರ್ತಕರಲ್ಲವೇ? ನರ್ತಕರು ಸಹಜವಾಗಿ ಪದ್ಯದೊಂದಿಗೆ ಒಡಬೆರೆತು ಕುಣಿಯಲು ಸಾಧ್ಯವಾಗುವುದು ಪದ್ಯವೇ ತನ್ನ ಮೂಲ ಸ್ವಭಾವದಲ್ಲಿ ಕುಣಿಯುತ್ತಾ ಇರುವಾಗ. ಇಂಥ ಕುಣಿಯುವ ಪದ್ಯಗಳ ದೊಡ್ಡ ಪರಂಪರೆಯೇ ನಮ್ಮಲ್ಲಿ ಇದೆ. ಹರಿ ಕುಣಿದ ನಮ್ಮ ಹರಿ ಕುಣಿದ ಎಂಬ ಪುರಂದರದಾಸರ ಪದ್ಯ, ಪಂಜೆ ಮಂಗೇಶರಾಯರ ತೆಂಕಣ ಗಾಳಿಯಾಟ, ಬೇಂದ್ರೆಯವರ ಶ್ರಾವಣಾ ಬಂತು ಎಂಬ ಪದ್ಯ ನನಗೆ ತಕ್ಷಣ ನೆನಪಾಗುತ್ತಿದೆ.

ಕುವೆಂಪು ಅವರ ಸುಗ್ಗಿಯ ಕುಣಿತವಂತೂ ಓದುಗರಲ್ಲಿ ಪದಗುಣಿತವನ್ನು ಓದುತ್ತಿರುವಾಗಲೇ ಚೋದಿಸುವ ಪದ್ಯ. ಈ ಪದ್ಯವು ಸುಗ್ಗಿಯ ಸಂಭ್ರಮಾಚರಣೆಯನ್ನು ಚಿತ್ರಿಸುತ್ತಾ ಇದೆ. “ಸೊಬಗೆ ನನ್ನಿಯೆಂದು ಸಾರಿ , ನನ್ನಿಯೆ ಸೊಬಗೆಂದು ತೋರಿ”-ಎಂಬಂಥ ಆಂಗ್ಲ ಪದ್ಯದ, ಸಂಸ್ಕೃತ ನುಡಿಯ ಹೇಳಿಕೆಗಳನ್ನು ಕನ್ನಡಕ್ಕೆ ಆವಾಹಿಸುತ್ತಾ ಇದೆ. ಜೊತೆಗೆ ಸುಗ್ಗಿಯ ಸಮೃದ್ಧಿ, ವೈಭವ, ಉತ್ಸಾಹ ಎಲ್ಲವನ್ನು ಈ ಪದ್ಯದ ಸೌಭಾಗ್ಯವು ತೂರಿ ತೂರಿ ಕೇರುತ್ತಾ ಇದೆ! ಪದ್ಯದ ಆರಂಭವೇ ಒಂದು ಮಹಾದ್ಭುತ:

ಅಡಿಯ ಗೆಜ್ಜೆ ನಡುಗೆ, ಹೆಜ್ಜೆಯಿಡುತ ಸುಗ್ಗಿ ಬರುತಿದೆ!
ಸುಗ್ಗಿ ಬರೆ ಹಿಗ್ಗಿ ತಿರೆ ಸಗ್ಗ ಸೊಗವ ತರುತಿದೆ!
ಕಣಿವೆಯಿಳಿದು ತೆಮರನೇರಿ,
ತರುಗಳಲ್ಲಿ ತಳಿರ ಹೇರಿ,
ಹೊಸತು ಜೀವಕಳೆಯ ಬೀರಿ
ಸುಗ್ಗಿ ಮೂಡುತಿರುವುದು!
ಬನದ ಬಿನದದಿನಿದು ನಿನದ ಮನದೊಳಾಡುತಿರುವುದು!
-ಸುಗ್ಗಿ ಬರುತಿದೆ (ಕೊಳಲು-೧೯೩೦)

ಇದು ಮೂರು ಮೂರು ಮಾತ್ರೆಗಳ ಘಟಕಗಳಿಂದ ಕಟ್ಟಲಾದ ಒಂದು ರಚನೆ.

ಅಡಿಯ-ಗೆಜ್ಜೆ-ನಡುಗೆ-ಹೆಜ್ಜೆ -ಇವೆಲ್ಲವೂ ಮೂರು ಮಾತ್ರೆಯ ಕಾಲದಲ್ಲಿ ಉಚ್ಚರಿಸ ಬಹುದಾದ ಶಬ್ದಗಳು. (ಮಾತ್ರೆ ಎಂಬುದು ಒಂದು ಪಾರಿಭಾಷಿಕ ಪದ. ಪ್ರತಿಯೊಂದು ಶಬ್ದದ ಉಚ್ಚಾರಕ್ಕೂ ನಾವು ನಿಶ್ಚಿತವಾದ ಸಮಯವನ್ನು ತೆಗೆದುಕೊಳ್ಳುತ್ತೇವೆ ಅಲ್ಲವೇ? ಮೂರು ಮಾತ್ರೆಯ ಗಣ ಎಂಬುದು ಒಂದು ಉಚ್ಚಾರಣೆಯ ಕಾಲದ ಅಳತೆ. ಮನೆ ಎಂದು ಉಚ್ಚರಿಸಲು ಬಹು ಸ್ವಲ್ಪ ಸಮಯ ಸಾಕು.

painting-strokeತರುಣ ಎಂಬ ಮೂರಕ್ಷರದ ಪದವನ್ನು ಉಚ್ಚರಿಸಲು ಸ್ವಲ್ಪ ಹೆಚ್ಚು ಸಮಯ ಬೇಕು. ನಾಗರ ಎಂಬ ಶಬ್ದದ ಉಚ್ಚಾರಕ್ಕೆ ಇನ್ನೂ ಹೆಚ್ಚು ಸಮಯ ಬೇಕು. ಮನೆಯೊಳಗೆ ಎಂಬ ಶಬ್ದದ ಉಚ್ಚಾರಕ್ಕೆ ಇನ್ನೂ ಹೆಚ್ಚು ಸಮಯ ಬೇಕು. ಎರಡು (ಮನೆ), ಮೂರು (ತರುಣ), ನಾಲಕ್ಕು (ನಾಗರ), ಐದು (ಮನೆಯೊಳಗೆ) ಇವು ಬೇರೆ ಬೇರೆ ಕಾಲಾವಧಿಯ ಗಣಗಳು).

ಕುವೆಂಪು ಅವರ ಸುಗ್ಗಿಯ ಕುಣಿತ ಪ್ರಧಾನವಾಗಿ ಮೂರು ಮೂರು ಮಾತ್ರಾಕಾಲದ ಲಯವನ್ನು ಬಳಸಿ ಕಟ್ಟಲಾಗಿರುವ ಪದ್ಯ.ಮೊದಲ ಸಾಲಿನಲ್ಲಿ ನಿಯತವಾಗಿ ಮೂರು ಮೂರು ಮಾತ್ರೆಯ ಗಣಗಳು ಬರುತ್ತವೆ. ಕೊನೆಗೆ ಮುಕ್ತಾಯದ ಭಾವ ತರಲಿಕ್ಕಾಗಿ ಒಂದು ಹೆಚ್ಚಾದ ಅಕ್ಷರ (ಅದನ್ನು ಮೇಲೊಂದು ಗುರು ಎನ್ನುತ್ತೇವೆ) ಬಳಕೆಯಾಗಿದೆ. ಆದರೆ ಎರಡನೇ ಸಾಲಿನಲ್ಲಿ?

ಸುಗ್ಗಿ ಬರೆ, ಹಿಗ್ಗಿ ತಿರೆ -ಎಂದು ಬರೆಯುವಾಗ ಮೂರು ಮಾತ್ರೆಯ ಗಣಗಳೇ ಬರಬೇಕೆಂದಿದಿದ್ದರೆ, ಸುಗ್ಗಿ ಬರಲು, ಹಿಗ್ಗಿ ತಿರೆಯು ಎಂದು ಕವಿಯು ಬರೆಯಬೇಕಾಗಿತ್ತು. ಅವರು ಹಾಗೆ ಬರೆಯದೆ “ಬರಲು” ಎಂಬ ಜಾಗದಲ್ಲಿ “ಬರೆ” ಎಂದು ಒಂದು ಅಕ್ಷರದಷ್ಟು ಕಾಲಾವಕಾಶವನ್ನು ಮೊಟಕುಗೊಳಿಸಿದ್ದಾರೆ.

ಆಗ ನಾವು ಪದ್ಯವನ್ನು ಓದುವಾಗ ಹಿಂದಿನ ಸಾಲನ್ನು ಓದಿದ ಪ್ರಭಾವದಿಂದ ಸುಗ್ಗಿ ಬರೆ ಎಂದು ಹೇಳಿದ ಮೇಲೆ ಒಂದು ಅಕ್ಷರಕಾಲದಷ್ಟು ಮೌನವನ್ನು ಲಯದ ಭರ್ತಿಗಾಗಿ ಕೊಡುವುದು ಅನಿವಾರ್ಯವಾಗುತ್ತದೆ. ಇದು ಕವಿಯು ನಿಯತ ಲಯವನ್ನು ಭಂಗಪಡಿಸಿದ್ದರಿಂದ ಉಂಟಾದ ಮೌನದ ನಿರ್ಮಾಣ.

ಈ ಮೌನದ ನಿರ್ಮಾಣದಿಂದ ಕುಣಿತದ ಒಂದು ಜೀಕು ನಿರ್ಮಾಣವಾಗುತ್ತದೆ. ಈ ಜೀಕು ನೀಡುವ ಸುಖ ಮತ್ತೆ ಮತ್ತೆ ಉಚ್ಚರಿಸಿ ಸುಖಿಸಬೇಕಾದದ್ದು! ನಿಯತ ಲಯವನ್ನು ಮುರಿಯುವ ಮೂಲಕವೇ ಈ ಮೌನದ ನಿರ್ಮಾಣ ಮತ್ತು ಅದರಿಂದ ಪದ್ಯದ ನಡೆಗೆ ವಿಲಕ್ಷಣವಾದ ಜೀಕು ಒಂದನ್ನು ಕುವೆಂಪು ಪ್ರಾಪ್ತಗೊಳಿಸಿದ್ದಾರೆ. ಕಟ್ಟುವ ಸುಖ ಒಂದು. ಕಟ್ಟಿದ್ದನ್ನು ಮುರಿಯುವ ಸುಖ ಇನ್ನೊಂದು. ಯಾರಿಗೆ ಕಟ್ಟಲಿಕ್ಕೆ ಬರುವುದಿಲ್ಲವೋ ಅವರು ಮುರಿಯಲಿಕ್ಕೂ ಬರುವುದಿಲ್ಲ.

ಕವಿತೆಯನ್ನು ಬರೆಯುವುದಕ್ಕೆ ಕವಿಗೆ ಈ ಲಯಜ್ಞಾನ ಅಗತ್ಯ. ಆದರೆ ಕವಿತೆಯನ್ನು ಸುಖಿಸುವುದಕ್ಕೆ ಓದುಗನಿಗೆ ಈ ಲಯಜ್ಞಾನದ ಅಗತ್ಯವುಂಟೇ? ಇದು ಮೂಲಭೂತ ಪ್ರಶ್ನೆ.

ಸಂಗೀತವನ್ನು ಸುಖಿಸುವುದಕ್ಕೆ ಸಂಗೀತದ ಶಾಸ್ತ್ರದ ಅರಿವು ಅನಿವಾರ್ಯವಲ್ಲ ನಿಜ. ಆದರೆ ಶಾಸ್ತ್ರದ ಅರಿವೂ ತಕ್ಕಮಟ್ಟಿಗೆ ರಸಿಕರಿಗೆ ಇದ್ದರೆ ಸಂಗೀತವನ್ನು ಕೇಳುವಾಗ ತಮಗಾಗುವ ಅನಿರೀಕ್ಷಿತ ಆನಂದದ ಕಾರಣವನ್ನೂ ಅವರಿಗೆ ಗ್ರಹಿಸುವುದು ಸಾಧ್ಯವಾಗುವುದರಿಂದ ಕೇಳುವ ಸುಖದಲ್ಲಿ ಒಂದು ಪರಿಷ್ಕಾರ ಉಂಟಾಗುವುದು.

ಕವಿಯು ಬೆಳೆದಂತೆ ಕಾವ್ಯದ ಓದುಗನೂ ಬೆಳೆಯುತ್ತಾ ಹೋಗುವುದರಿಂದಲೇ ಕಾವ್ಯಾನುಭವವೂ ಪ್ರೌಢವಾಗುತ್ತಾ ಹೋಗುವುದು. ನಮ್ಮ ಹಿರಿಯ ಕವಿಗಳಿಗೆ ಮತ್ತು ವಿದಗ್ಧ ಓದುಗರಿಗೆ ಇವೆಲ್ಲಾ ಸಣ್ಣ ಸಂಗತಿಗಳು. ಹೌದು! ಸಣ್ಣ ಸಂಗತಿಗಳೇ! ಆದರೆ ಇಂಥ ಸಣ್ಣ ಸಂಗತಿಗಳಿಂದಲೇ ಬಹು ದೊಡ್ಡ ಸಂಗತಿಗಳೂ ಸಾಧಿತವಾಗುತ್ತವೆ. ಸಣ್ಣ ಸಂಗತಿಯ ಪರಿಜ್ಞಾನವಿಲ್ಲದೆ ದೊಡ್ಡ ಸಂಗತಿಯನ್ನು ದಕ್ಕಿಸಲಾಗದು. ಅದನ್ನು ನಾವು ಮರೆಯುವಂತಿಲ್ಲ.

ಕವಿತೆಯ ಪೂರ್ಣ ಪಾಠ:

kuvempu sigature

ಸುಗ್ಗಿ ಬರುತಿದೆ


ಅಡಿಯ ಗೆಜ್ಜೆ ನಡುಗೆ, ಹೆಜ್ಜೆಯಿಡುತ ಸುಗ್ಗಿ ಬರುತಿದೆ!
ಸುಗ್ಗಿ ಬರೆ ಹಿಗ್ಗಿ ತಿರೆ ಸಗ್ಗ ಸೊಗವ ತರುತಿದೆ!
ಕಣಿವೆಯಿಳಿದು ತೆಮರನೇರಿ,
ತರುಗಳಲ್ಲಿ ತಳಿರ ಹೇರಿ,
ಹೊಸತು ಜೀವಕಳೆಯ ಬೀರಿ
ಸುಗ್ಗಿ ಮೂಡುತಿರುವುದು!
ಬನದ ಬಿನಿದದಿನಿದು ನಿನದ ಮನದೊಳಾಡುತಿರುವುದು!


ಬಂಡನುಂಡು ದುಂಬಿವಿಂಡು ಹಾಡುತಿಹವು ಹಾರುತ,
ಮತ್ತ ಮಧು ಮಾಸವಿದುಬನ್ನಿರೆಂದು ಸಾರುತ,
ಜಾರುತಿಹುದು ಮಾಗಿ ಚಳಿ,
ಕುಸುಮಿಸಿರುವ ಲತೆಗಳಲಿ
ಮೊರೆಯುತಿಹವು ಸೊಕ್ಕಿದಳಿ
ಮುಕ್ತಜೀವರಂದದಿ!
ಉಲಿಯೆ ಪಿಕ, ಗಳಪೆ ಶುಕ, ಸುಗ್ಗಿ ಬಂದಿತಂದದಿ!


ಮಾಮರಂಗಳಲಿ ವಿಹಂಗತತಿಯ ನಿಸ್ವನಂಗಳಿಂ,
ತಳಿರ ಸೊಂಪನಲರ ಜೊಂಪನಾಂತ ಬನಬನಂಗಳಿಂ,
ನಲಿವ ಪಚ್ಚೆಯುಡೆಯನುಟ್ಟು,
ಅರಳಿದರಳುಗಳನು ತೊಟ್ಟು,
ಹಿಮದ ಮಣಿಯ ಮಾಲೆಯಿಟ್ಟು
ತಣಿದು ಸೋಲೆ ಕಣ್ಮನಂ
ಕರೆವಳೋವಿ ಬನದ ದೇವಿ ತನ್ನ ಸುಗ್ಗಿಯಾಣ್ಮನಂ!


ಹಾರಿ ಮೊರೆವ ಜಾರಿ ಹರಿವ ತೊರೆಯ ತಂಪು ದಡದೊಳು,
ಮೇಲೆ ಭಾನು ತೇಲೆ, ನಾನು ಕುಳಿತ ಮರದ ಬುಡದೊಳು
ತಿರೆಯ ಸಿರಿಯ ನೋಡುತಿರುವೆ;
ಕುರಿತು ಹಾಡ ಹಾಡುತಿರುವೆ;
ಸೊಬಗಿನೊಡನೆ ಕೂಡುತಿರುವೆ
ಕರಗಿ ಮುಳುಗಿ ತೇಲುತ!
ತೊರೆದ ಗಂಡನೆದುರುಗೊಂಡ ಕೋಮಲೆಯನು ಹೋಲುತ!


ತರುಗಳೆಲ್ಲ ಮೇಯೆ, ಗೊಲ್ಲ ಬಸಿರಿಮರದ ನೆರಳಲಿ
ಮಲಗಿಸಿಹನು ಮಧುವನವನು ಮುದವನುಲಿವ ಕೊಳಲಲಿ!
ನಿಂತು ಮೇವ ಮರೆತುಬಿಟ್ಟು,
ಕಿವಿಯನೆರಡ ನೆಟ್ಟಗಿಟ್ಟು,
ಗೊಲ್ಲನೆಡೆಗೆ ದಿಟ್ಟಿಯಿಟ್ಟು
ಬರೆದ ಚಿತ್ರದಂದದಿ
ಗವಿಗಳೆಲ್ಲ ಸವಿಯ ಸೊಲ್ಲನಾಲಿಸಿಹವು ಚಂದದಿ!


ಗಿರಿಗಳಿರಾ, ತೊರೆಗಳಿರಾ, ಎಲೆ ವಿಹಂಗಮಗಳಿರಾ,
ತರುಗಳಿರಾ, ಬನಗಳಿರಾ, ಮಗಮಗಿಪ ಸುಮಗಳಿರಾ,
ಸೊಬಗೆ ನನ್ನಿಯೆಂದು ಸಾರಿ;
ನನ್ನಿಯೆ ಸೊಬಗೆಂದು ತೋರಿ;
ಸೊಗದ ಸೊದೆಯ ತಿರೆಗೆ ಬೀರಿ,
ಒಲ್ಮೆ ಸೊಬಗ ಸೊಗದಲಿ
ಪರಮಪುರುಷನಮಲ ಹರುಷವಿಹುದ ಸಾರಿ ಜಗದಲಿ!


ಮಧುವೆ ಬಾರ!ಮುದವ ತಾರ!ನೀನೆ ದೇವ ದೂತನು!
ಪರದ ಚಿಂತೆ ಮರೆಯದಂತೆ ಕಳುಹುವನು ವಿಧಾತನು!
ಬುವಿಯ ಸಿಂಗರಿಸುತ ಬಾರ!
ಪರದ ಬೆಳಕನಿಳಿಗೆ ತಾರ!
ಸೊಬಗೆ ಶಿವನು ಎಂದು ಸಾರ!
ಬಾರ ಶಕ್ತಿ ದಾಯಕ!
ಹಳೆತ ಕೂಡಿ ಹೊಸತು ಮಾಡಿ ಬಾರೆಲೆ ಋತುನಾಯಕ!

‍ಲೇಖಕರು Admin

October 14, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಅಂಗಡಿಗಳು ಊರಿನಲ್ಲಿ ಅರಳಿ ಹೊರಳಿದ್ದು

ಅಂಗಡಿಗಳು ಊರಿನಲ್ಲಿ ಅರಳಿ ಹೊರಳಿದ್ದು

ಕೃಷಿ ಕುಟುಂಬದಲ್ಲಿ ಬೆಳೆದ ಗೀತಾ ಮಣ್ಣಿನ ಅಂತಃಸತ್ವವನ್ನು ಹೀರಿಕೊಂಡು ಬೆಳೆದವರು. ಹಾಗಾಗಿಯೇ ಅವರಿಗೆ ಕೃಷಿ, ಮಣ್ಣ ಒಡನಾಟ, ರಂಗಭೂಮಿ,...

ಇಪ್ಪತ್ನಾಲ್ಕು ಗಂಟೆಗಳ ಪ್ರೇಮ ಪ್ರಸಂಗ…

ಇಪ್ಪತ್ನಾಲ್ಕು ಗಂಟೆಗಳ ಪ್ರೇಮ ಪ್ರಸಂಗ…

‘ಪ್ರೀತಿ ಮಾಡಲು ಹೇಳಬೇಕಾದ ಸುಳ್ಳುಗಳು ಒಂದೆಡೆಯಾದರೆ, ಪ್ರೀತಿಯಿಂದ ತಪ್ಪಿಸಿಕೊಳ್ಳಲು ಹೇಳಬೇಕಾದ ಸುಳ್ಳುಗಳು ನಿರುಪದ್ರವಿಗಳು’ ಇದು ಶಿವಕುಮಾರ...

೧ ಪ್ರತಿಕ್ರಿಯೆ

  1. CanTHeeRava

    ಮೃದಂಗ ನುಡಿಸಾಣಿಕೆಯಲ್ಲಿ ಅಪರೂಪವಾಗಿ ತಾಳವನ್ನು ಮೀರುವ ಮುಕ್ತಾಯಗಳನ್ನು, ಸೊಲ್ಲುಕಟ್ಟುಗಳನ್ನು ಬಳಸುವುದುಂಟು. ಅದಕ್ಕೆ ಅದರದ್ದೇ ಆದ ಸೌಂದರ್ಯ ಪ್ರಜ್ಞೆ ಇರುತ್ತದೆ ಎಂದು ಅನೇಕ ಹಿರಿಯ ವಿದ್ವಾಂಸರ ಅಭಿಪ್ರಾಯ. ತಾಳಕ್ಕೆ ನುಡಿಸುವವನಿಗೆ ಮಾತ್ರವೇ ಯಾವಾಗ ತಾಳವನ್ನು ಮೀರಬಹುದು ಎಂದು ತಿಳಿಯಲು ಸಾಧ್ಯತೆ ಇದೆ. ನೀವು ಆ ಸಾಧ್ಯತೆಯನ್ನು “ಅರ್ಹತೆ” ಎಂದು ಹೆಚ್ಚಿಸಿದ್ದೀರಿ. “ಯಾರಿಗೆ ಕಟ್ಟಲಿಕ್ಕೆ ಬರುವುದಿಲ್ಲವೋ ಅವರು ಮುರಿಯಲಿಕ್ಕೂ ಬರುವುದಿಲ್ಲ”. ನಾನು ಖಂಡಿತ ಒಪ್ಪುತ್ತೇನೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: