ಎಚ್ ಎಸ್ ವಿ ಕಾಲಂ: ಕಾವ್ಯದಲ್ಲಿ ಶಬ್ದಭಂಜನ

ತಾವರೆಯ ಬಾಗಿಲು-೧೭

ಕಾವ್ಯದಲ್ಲಿ ಶಬ್ದಭಂಜನ ಮತ್ತು ಅದರ ಹಿಂದೆ ಮುಂದೆ!

ಕಾವ್ಯದಲ್ಲಿ “ಶಬ್ದಭಂಜನ” ಎಂಬುದು ಲಾಗಾಯ್ತಿನಿಂದಲೂ ನಡೆದುಕೊಂಡು ಬಂದಿರುವ ವಿದ್ಯಮಾನ. ಹಳಗನ್ನಡ, ನಡುಗನ್ನಡ ಕಾವ್ಯಗಳ ಯಾವುದೇ ಪುಟವನ್ನು ಸುಮ್ಮನೆ ತೆರೆದು ನೋಡಿದರೂ ಅಲ್ಲಿ ಹೆಚ್ಚುಕಮ್ಮಿ ಎಲ್ಲ ಪದ್ಯಗಳಲ್ಲೂ ಈ ಶಬ್ದಭಂಜನೆಯನ್ನು ಕಾಣಬಹುದು. ಏನು ಶಬ್ದ ಭಂಜನ ಎಂದರೆ?

ಮಂಗಳಾರತಿ ಎಂಬುದು ಒಂದು ಶಬ್ದ. ಅದನ್ನು ಮಂಗ-ಳಾರತಿ ಎಂದು ಒಡೆದು ಬರೆದರೆ ಅದು ಶಬ್ದಭಂಜನ. ಹಾಗೆ ಶಬ್ದವನ್ನು ಒಡೆಯಬಾರದು ಎಂಬುದು ನಾವು ಒಪ್ಪಿಕೊಂಡು ಬಂದಿರುವ ಭಾಷಾರೂಢಿ.

ಮಾತಾಡುವಾಗ ಶಬ್ದಗಳನ್ನು ಇಡಿಯಿಡಿಯಾಗಿ ಉಚ್ಚರಿಸುವೆವೇ ವಿನಾ ಅವನ್ನು ತುಂಡು ತುಂಡು ಮಾಡಿ ಉಚ್ಚರಿಸೆವು. ನರಹರಿ ಎಂಬ ಶಬ್ದವನ್ನು ನರ-ಹರಿ ಎಂದು ಒಡೆದು ಉಚ್ಚರಿಸಿ ತಮಗೆ ಬೇಕಾದ ಬೇರೆ ಅರ್ಥವನ್ನು ಉತ್ಪಾದಿಸಿ ಹಾಸ್ಯ ರಸವನ್ನು ಅ ರಾ ಮಿತ್ರ ಅವರು ಹೇಗೆ ಸೃಷ್ಟಿಸಿದರು ಎಂಬುದನ್ನು ಹಿಂದೆ ಒಮ್ಮೆ ಇದೇ ಮಾಲೆಯಲ್ಲಿ ವಿವರಿಸಿದ್ದೇನೆ.

ಇನ್ನೊಂದು ಗಮನಿಸಲೇಬೇಕಾದ ಅಂಶವಿದೆ. ಗದ್ಯದಲ್ಲಿ ನಾವು ಶಬ್ದಭಂಜನ ಮಾಡುವ ಉದಾಹರಣೆಗಳು ಅತಿ ಅಪರೂಪ, ಇಲ್ಲವೇ ಇಲ್ಲ ಎಂದರೂ ತಪ್ಪಾಗಲಿಕ್ಕಿಲ್ಲ. ಶಬ್ದಭಂಜನವನ್ನು ನಾವು ಹೆಚ್ಚಾಗಿ ನೋಡುವುದು ಪದ್ಯಗಳಲ್ಲಿಯೇ. ಉದಾಹರಣೆಯಿಂದ ಈ ಅಂಶವನ್ನು ಸ್ಪಷ್ಟಪಡಿಸುತ್ತೇನೆ.

೧ ಕುಲಮೆಂಬುದುಂಟೆ ಬೀರಮೆ
ಕುಲಮಲ್ಲದೆ? ಕುಲಮನಿಂತು ಪಿಕ್ಕದಿರಿಂ, ನೀ
ಮೊಲಿದೆಲ್ಲಿ ಪುಟ್ಟಿ ಬೆಳೆದಿರೊ?
ಕುಲಮಿರ್ದುದೆ ಕೊಡದೊಳಂ? ಶರಸ್ತಂಭದೊಳಂ?

ಎರಡನೇ ಸಾಲಿನಲ್ಲಿ “ನೀ” ಎಂಬ ಒಡೆದ ಶಬ್ದದ ತುಂಡು ಕಾಣುತ್ತದೆ. ಮೂರನೇ ಸಾಲಿಗೆ ಬಂದಾಗ “ಮೊಲಿದೆಲ್ಲಿ” ಎಂಬ ಕತ್ತರಿಸಿದ ಉಳಿದ ಅಂಶ ಕಾಣುತ್ತದೆ. ನೀಮೊಲಿದೆಲ್ಲಿ ಎಂಬ ಪೂರ್ಣಪದವನ್ನು ನೀ-ಮೊಲಿದೆಲ್ಲಿ ಎಂದು ಇಲ್ಲಿ ವಿಭಜಿಸಲಾಗಿದೆ.

ಕವಿ ಏಕೆ ಹೀಗೆ ಇಡೀ ಪದವನ್ನು ತುಂಡರಿಸಿ ಬರೆದಿದ್ದಾನೆ? ಇದು ತಪ್ಪಲ್ಲವೆ? ಎಂದರೆ ತಪ್ಪು ಹೌದು, ಆದರೆ ಅನಿವಾರ್ಯವಾದ ತಪ್ಪು, ಏನು ಮಾಡುವುದು ಎಂದು ತಪ್ಪನ್ನು ನಾವು ಮಾನ್ಯಮಾಡಿ ಸರಿಯೋದಿಗೆ ಒಳಪಡಿಸಿ, ತಕ್ಕುದಾದ ಅರ್ಥವನ್ನೇ ಗ್ರಹಿಸುತ್ತೇವೆ. ಓದಿನಲ್ಲಿ ಈ ಶಬ್ದಭಂಜನೆಯಿಂದ ಓದಿನ ಪರಿಶ್ರಮ ಇರುವ ಓದುಗರಿಗೆ ತೊಂದರೆ ಉಂಟಾಗುವುದಿಲ್ಲ. ಏಕೆಂದರೆ ಹೀಗೆ ಕವಿಯು ಒಡೆದು ಬರೆದ ಶಬ್ದಗಳನ್ನು ಜೋಡಿಸಿಕೊಂಡು ಅರ್ಥವನ್ನು ಗ್ರಹಿಸುವುದು ನಮಗೆ ರೂಢಿಯಾಗಿದೆ.

೨ ಇಂದಿಂಗಿಲ್ಲೆಂದನೆ ಮಾ
ಣೆಂದನೆ? ಪೆರತೊಂದನೀವೆನೆಂದನೆ? ನೊಂದಃ
ಎಂದನೆ? ಸೆರಗಿಲ್ಲದೆ ಪಿಡಿ
ಯೆಂದನಿದೇಂ ಕಲಿಯೋ ಚಾಗಿಯೋ ರವಿತನಯಂ?

ಈ ಪದ್ಯದಲ್ಲಿ
೧ ಮಾ
ಣೆಂದನೆ

೨ ಪಿಡಿ
ಯೆಂದನಿದೇಂ

ಹೀಗೆ ಎರಡು ಬಾರಿ ಶಬ್ದ ಭಂಜನವನ್ನು ಮಾಡಲಾಗಿದೆ.

ಮೇಲಿನ ಎರಡೂ ಪದ್ಯಗಳು ಪಂಪನ ‘ವಿಕ್ರಮಾರ್ಜುನ ವಿಜಯ’ದಿಂದ ಎತ್ತಿಕೊಂಡವು. ನಡುಗನ್ನಡ ಕಾವ್ಯಗಳಲ್ಲೂ ನಿರಂತರವಾಗಿ ಈ ಶಬ್ದಭಂಜನ ನಡೆದಿರುವುದನ್ನು ನಾವು ಗಮನಿಸಬಹುದು ಕುಮಾರವ್ಯಾಸನ ಷಟ್ಪದಿಯಲ್ಲಿ ಎಡವಿಬಿದ್ದರೆ ಇಂಥ ಶಬ್ದಭಂಜನವನ್ನು ಕಾಣಲಿಕ್ಕಾದೀತು. ಉದಾಹರಣೆ ಗಮನಿಸಿ:

೧ ನಾರಿ ನೀ ಪೂರ್ವದಲಿ ನಮ್ಮ ಪು
ರೂರವನ ಸತಿ. ನಿನಗೆ ಬಳಿಕ ಕು
ಮಾರ ಜನಿಸಿದನಾಯುವಾತನೊಳುದಿಸಿದನು ನಹುಷ
ವೀರ ರಾಜಪರಂಪರೆಯು ಬರ
ಲಾರಿಗಾವುದಿಸಿದೆವು ನಮ್ಮ ವಿ
ಚಾರಿಸುದುದಿಲ್ಲಾಯೆನುತ ವಿನಯದಲಿ ನರ ನುಡಿದ|

ಈ ಪದ್ಯದಲ್ಲಿಯಂತೂ ಪ್ರತಿ ಸಾಲಲ್ಲಿಯೂ ಶಬ್ದಭಂಜನವು ಅವ್ಯಾಹತವಾಗಿ ನಡೆದಿದೆ.

ಅ. ನಮ್ಮ ಪು
ರೂರವನ

ಇ. ಬಳಿಕ ಕು
ಮಾರ

ಉ. ಬರ
ಲಾರಿಗಾವುದಿಸಿದೆವು

ಎ. ನಮ್ಮ ವಿ
ಚಾರಿಸುದುದಿಲ್ಲಾಯೆನುತ

ಈ ಶಬ್ದಭಂಜನಗಳೆಲ್ಲವೂ ಅನಿವಾರ್ಯವಾಗಿ ಸಂಭವಿಸಿದವು ಎಂಬುದನ್ನು ನಾವು ಮೊದಲು ಗ್ರಹಿಸಬೇಕು. ಈ ಅನಿವಾರ್ಯತೆ ಯಾವುದರಿಂದ ಉಂಟಾಗಿದೆ? ಅನಿವಾರ್ಯತೆ-ಪದ್ಯದ ಛಂದಸ್ಸಿನ ನಿಯಮ. ಛಂದಸ್ಸಿನ ನಿಯಮವನ್ನು ಮುರಿಯಬಾರದೆಂಬ ಕಾರಣಕ್ಕೆ ಈ ಶಬ್ದಭಂಜನದ ಅನಿವಾರ್ಯತೆ ಉಂಟಾಗಿದೆ.

ಈ ತಾಂತ್ರಿಕ ಸಂಗತಿಯನ್ನು ಸರಳವಾಗಿ ವಿವರಿಸಲು ಯತ್ನಿಸುತ್ತೇನೆ. ಕುಮಾರವ್ಯಾಸ ಭಾಮಿನಿ ಷಟ್ಪದಿಯ ಲಯದಲ್ಲಿ ತನ್ನ ಬೃಹತ್ ಕಾವ್ಯವನ್ನು ರಚಿಸಿದ್ದಾನೆ. ಭಾಮಿನಿ ಷಟ್ಪದಿಯ ನಿಯಮ-

೩|೪|೩|೪|
ನಾರಿ|ನೀಪೂ|ರ್ವದಲಿ|ನಮ್ಮಪು|
೩|೪|೩|೪|
ರೂರ|ವನ ಸತಿ|ನಿನಗೆ| ಬಳಿಕ ಕು|
೩|೪|೩|೪|೩|೪|ಗುರು|
ಮಾರ|ಜನಿಸಿದ|ನಾಯು|ವಾತನೊ|ಳುದಿಸಿ|ದನು ನಹು|ಷ|

ಇದೇ ನಿಯಮವನ್ನು ಪದ್ಯದ ದ್ವಿತೀಯಾರ್ಧವೂ ಅನುಸರಿಸಬೇಕು. ಜೊತೆಗೆ ಪ್ರತಿ ಸಾಲಿನ ಎರಡನೇ ಅಕ್ಷರ ಒಂದೇ ಆಗಿರಬೇಕು. ಇದು ಕಡ್ಡಾಯ. ಒಂದು ಅಕ್ಷರ ಅತ್ತ ಇತ್ತ ಆಗುವಂತಿಲ್ಲ. ಕವಿಗಳಿಗೆ ಈ ಛಂದಸ್ಸಿನ ನಿಯಮವನ್ನು ಅನುಸರಿಸುವುದರಲ್ಲಿ ನಿತಾಂತ ಶ್ರದ್ಧೆ. ಒಂದು ವೇಳೆ ಪದ (ವರ್ಡ್) ಕೆಟ್ಟರೂ ಪರವಾಗಿಲ್ಲ. ಛಂದಸ್ಸು ಕೆಡುವುದನ್ನು ಅವರು ಸಹಿಸಲಾರರು. ತಮಾಷೆಗೆ ಈ ಕೆಳಗಿನ ಸಾಲನ್ನು ಗಮನಿಸಿ:

೩|೪|೩|೪|೩|೪|ಗುರು|
ಕಾವು|ದಾನತ| ಜನವ| ಗದುಗಿನ| ವೀರ| ನಾರಯ|ಣ|

ಪದ್ಯದ ಕೊನೆಯ ಪದದ (ವರ್ಡ್) ಅವಸ್ಥೆಯನ್ನು ಗಮನಿಸಿ. “ನಾರಯಣ” ಎಂದಿದೆ. ನಾರಾಯಣ ಇರಬೇಕಲ್ಲವೇ? ಇರಬೇಕು ಹೌದು. ಆದರೆ “ನಾರಾಯಣ” ಎಂದು ಬರೆದರೆ ನಾ=೨, ರಾ=೨, ಯ=೧…೫ ಮಾತ್ರೆಗಳಾಗುವುದಲ್ಲ! ಅದಕ್ಕಾಗಿ ನಾರಾಯ ಎಂಬುದನ್ನು ನಾರಯ ಎಂದು ವಿರೂಪಗೊಳಿಸಿ ಕುಮಾರವ್ಯಾಸ ತನ್ನ ಛಂದಸ್ಸಿನ ನಿಯಮವನ್ನು ರಕ್ಷಿಸಿಕೊಂಡಿದ್ದಾನೆ. ತನ್ನ ಆರಾಧ್ಯ ದೈವವಾದ ನಾರಾಯಣನ ಹೆಸರು ನಾರಯಣ ಎಂದು ವಿಕೃತವಾದರೂ ಪರವಾಗಿಲ್ಲ, ನಾಲಕ್ಕು ಮಾತ್ರೆಯ ಲಯ ಮಾತ್ರ ಕೆಡುವಂತಿಲ್ಲ!

ಇಷ್ಟು ವಿವರಣೆಗಳಿಂದ ನಾವು ಗ್ರಹಿಸಬೇಕಾದ ಸಂಗತಿ-ಕವಿಗಳು ಹಿಂದೆಲ್ಲಾ ತಮ್ಮ ಛಂದಸ್ಸಿನ ನಿಯಮಗಳನ್ನು ಅನುಸರಿಸುವ ಅಖಂಡಿತ ನಿಷ್ಠೆಯಿಂದಾಗಿ ಶಬ್ದ ಭಂಜನಮಾಡುತ್ತಿದ್ದರು. ನಿಯಮಾಚರಣೆಗಾಗಿ ಶಬ್ದಗಳನ್ನು ವಿರೂಪಗೊಳಿಸಲೂ ಅಂಜುತ್ತಿರಲಿಲ್ಲ. ಅವರಿಗೆ ತಮ್ಮ ಛಂದಸ್ಸು ಕೆಡದಿರುವುದು ಮುಖ್ಯವಾಗಿತ್ತು.

ಈಗ ಆಧುನಿಕ ಕಾಲಕ್ಕೆ ಬರೋಣ. ಹೊಸಗನ್ನಡ ಕಾವ್ಯದಲ್ಲಿ, ಅದರಲ್ಲೂ ನವ್ಯಕಾವ್ಯ ಯುಗ ಪ್ರಾರಂಭವಾದ ಮೇಲೆ ಛಂದಸ್ಸಿನ ನಿಯಮಗಳು ಸಡಿಲಗೊಂಡವು. ಸ್ವಚ್ಛಂದ ಎಂಬ ಮಾತು ರೂಢಿಗೆ ಬಂತು. ಪದ್ಯರಚನೆಯ ನೆಲೆಯಲ್ಲಿ ಸತತವಾಗಿ ಚೇತೋಹಾರಿ ಪ್ರಯೋಗಗಳನ್ನು ಮಾಡುತ್ತಾ ಬಂದ ಎ.ಕೆ.ರಾಮನುಜನ್ ಅವರ ಒಂದು ಪದ್ಯ ನೋಡಿ:

ಜಪಾನೀ ಶೈಲಿಯ ಋತುಸಂಹಾರದಿಂದ

ನೂರಾರು
ಶ್ಲೋಕ ಷಟ್ಪದಿ ವೃತ್ತ
ಗಳ ನಡುವೆ
ಕಡೆಗೂ
ಕಂಡಿತು

ಚಿಗುರು
ಮಾವಿನೆಲೆ
ಮೂರು

ರಾಮನುಜರಲ್ಲಿ ಪದ್ಯಕ್ಕೆ ಪದವೇ ಪ್ರಮಾಣ. ವಾಕ್ಯದ ಸಂಗತಿ ಆನಂತರ. ವೃತ್ತ-ಗಳ ಎಂದು ಅವರು ಪದವನ್ನು ಭಂಜಿಸಿದ್ದಾರಲ್ಲ ಇಲ್ಲಿ ಒಪ್ಪಿಕೊಂಡ ಛಂದಸ್ಸಿನ ನಿಯಮದಿಂದ ಪದಭಂಜನೆಯಾಗಿಲ್ಲ. ಶಬ್ದದ ಒಡೆಯುವಿಕೆಯನ್ನು ಅವರ ಅಕ್ಷಿಪ್ರಮಾಣವೇ ನಿರ್ಧರಿಸಿದೆ. ಕಾವ್ಯಂ ಕರ್ಣ ಪ್ರಮಾಣಂ ಎನ್ನುತ್ತಾರಲ್ಲ! ಎ.ಕೆ.ರಾಮಾನುಜರಲ್ಲಿ ಕಾವ್ಯಂ ಅಕ್ಷಿ ಪ್ರಮಾಣಂ! ಜೊತೆಗೆ ಭಾವಾನುಸಾರಿಯಾದ ಲಯವೂ ಪದಭಂಜನೆಗೆ ಒತ್ತಾಯ ತಂದಿರುವಂತಿದೆ! ಕಡೆಗೂ ಕಂಡದ್ದು

ಚಿಗುರು
ಮಾವಿನೆಲೆ
ಮೂರು

ಈ ಮೂರು ಪದಗಳ ಬಿಡುಜೋಡಣೆಯೇ ಮೂರು ಮಾವಿನೆಲೆಯ ಜೋಡಣೆಯ ಚಂದವನ್ನು ನಮ್ಮ ಕಣ್ಣ ಮುಂದೆ (ಕಿವಿಯ ಮುಂದೆ ಎಂಬುದು ತದನಂತರದ್ದು) ಅದ್ಭುತವೆನಿಸುವಂತೆ ತಂದಿದೆ! ಇದೇ ಮಾತನ್ನು ನಾವು ಸು.ರಂ.ಎಕ್ಕುಂಡಿಯವರ ಪದಭಂಜನೆಯ ಕ್ರಮಕ್ಕೆ ಅನ್ವಯಿಸುವಂತಿಲ್ಲ. ಅವರ ಪ್ರಸಿದ್ಧ ಕವಿತೆಯೊಂದರ ಒಂದು ಪದ್ಯಖಂಡವನ್ನು ಗಮನಿಸಿ:

ತೇಲಿ ನಡೆದವು ಮೋಡ, ನೀಲಿಮ ನಿಗೂಢ
ದಲಿ ತಾವರೆಯ ಬಳಿ ನಡೆದ ಹಂಸ
ವೊಂದು. ಹೊಂಗೂದಲಿನ ಚೆಲುವೆ ಬಾಚು
ತ್ತಿದ್ದಳು ಜಡೆಯ ಕೊಳದ ಮೆಟ್ಟಲಿನ
ಲ್ಲಿ ಕುಳಿತುಕೊಂಡು.
(ಕೊಳದ ಗೌರಿ)

ಈ ಪದ್ಯದಲ್ಲಿ ನಿರುದ್ದಿಶ್ಯವಾಗಿಯೇ ಕವಿ ಪದಭಂಜನೆಯನ್ನು ನಡೆಸಿದ ಹಾಗಿದೆ. ಲಯದ ಅನಿವಾರ್ಯತೆ ಕಾರಣವಲ್ಲ; ಅಕ್ಷಿ ಪ್ರಮಾಣವೂ ಕಾರಣವಲ್ಲ; ಅರ್ಥದ ಔಚಿತ್ಯವೂ ಕಾರಣವಲ್ಲ. ಹಾಗಾದರೆ ಏಕೆ ಪದ ಭಂಜನೆ?-ಎಂದು ಯಾರಾದರೂ ಪಟ್ಟು ಹಿಡಿದು ಹಠ ಮಾಡಿದರೆ ಕವಿ ಮುಗುಳ್ನಕ್ಕು, “ಏಕೋ ಸುಮ್ಮನೆ!” (ಜಯಂತ ಕಾಯ್ಕಿಣಿ ಚಾಲ್ತಿಗೆ ತಂದ ಪದಗಟ್ಟು) ಎಂದು ಉತ್ತರಿಸಬಹುದೆನ್ನಿಸುತ್ತದೆ.

ಪದಭಂಜನೆಯೂ ಕವಿಗೆ ಒಂದು ಲೀಲೆ ಇರಬಹುದೆ? ಲಯದಲ್ಲಿ ಪರಿಣತರಾದ ಕವಿ ಎಕ್ಕುಂಡಿ. ನಿಯತಿ ಅವರಿಗೆ ಬೇಸರ ತಂದು ಇಂಥ ತೊಡರುಗಾಲ ನಡೆ ಸಂಭವಿಸಿರಬಹುದೆ? ಈ ಪ್ರಶ್ನೆಗೆ ಉತ್ತರಿಸಲು ಎಕ್ಕುಂಡಿಯವರ ‘ಬಕುಲದ ಹೂಗಳು’ ಸಂಗ್ರಹದ ಪದಭಂಜನೆಯ ನಡೆಯನ್ನು ಆಳವಾದ ಅಭ್ಯಾಸಕ್ಕೆ ಒಳಪಡಿಸಬೇಕಾಗಿದೆ.

ನಮ್ಮ ಹೊಸ ಕವಿಗಳು ಪದಭಂಜನೆಯ ಅನಿವಾರ್ಯ, ನಿವಾರ್ಯ, ಲೀಲಾಚರಣೆ ಮೂರನ್ನೂ ಅಭ್ಯಾಸ ಮಾಡುವುದು ಅವರ ರಚನೆಯ ಸ್ವಾಸ್ಥ್ಯ ಮತ್ತು ಚೆಲುವಿನ ದೃಷ್ಟಿಯಿಂದ ಒಳ್ಳೆಯದು.

ನಮ್ಮ ಕಾವ್ಯಾಸಕ್ತ ಓದುಗರೂ ಈ ಅಂಶದ ಕಡೆ, ಕಣ್ಣು ಮತ್ತು ಕಿವಿಗಳನ್ನು ಹಾಯಿಸುವುದರಿಂದ ತಮ್ಮ ಕಾವ್ಯ ಸಂವೇದನೆಯನ್ನು ಮತ್ತಷ್ಟು ಪರಿಷ್ಕರಿಸಿಕೊಳ್ಳಬಹುದೇನೋ…!

‍ಲೇಖಕರು admin

January 21, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ |ಕಳೆದ ಸಂಚಿಕೆಯಿಂದ|...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This