ಎಚ್ ಎಸ್ ವಿ ಕಾಲಂ: ಕಾವ್ಯದಲ್ಲಿ ಭಾಷೆಯಲ್ಲದ ಭಾಷೆಯ ಮಿಡುಕಾಟ..

ತಾವರೆಯ ಬಾಗಿಲು-೧೬

ಕಾವ್ಯಕ್ಕೆ ಭಾಷೆಯೇ ಮೂಲ ಸಾಮಗ್ರಿ. ಭಾಷೆಯ ಮೂಲಕ ಕವಿಗಳು ತಮ್ಮ ಲೌಕಿಕಾಲೌಕಿಕ ಅನುಭವಗಳನ್ನು ಅಭಿವ್ಯಕ್ತಿಸುತ್ತಾರೆ. ಹಾಗೆ ಅಭಿವ್ಯಕ್ತಿಸುವಾಗ ತಮ್ಮ ಎಲ್ಲ ಅನುಭವವನ್ನೂ ಹೇಳಲು ಪರಂಪರೆಯು ರೂಢಿಸಿಕೊಟ್ಟಿರುವ ಭಾಷಾ ಸಂಪತ್ತು ಸಾಲದು ಎನ್ನಿಸಿ ತಮ್ಮದೇ ಆದ ನವೀನ ಭಾಷಾಸೂಚಕಗಳನ್ನು ಉಪಯೋಗಿಸುತ್ತಾರೆ! ಆಶ್ಚರ್ಯವೆಂದರೆ ಭಾಷೆಯಿಂದ ಆಗದು ಎಂಬುದನ್ನು ಸೂಚಿಸಲು ಸಹಾ ಭಾಷೆಯನ್ನೇ ಅವರು ಉಪಯೋಗಿಸುತ್ತಾರೆ!

ರನ್ನನ ಗದಾಯುದ್ಧ ಕಾವ್ಯದಲ್ಲಿ ಭೀಮ-ದುರ್ಯೋಧನರ ಭೀಕರವಾದ ಗದಾಯುದ್ಧವನ್ನು ಕವಿಗೆ ವರ್ಣಿಸಬೇಕಾಗಿದೆ. ಆ ರಂಪಾಟಕ್ಕೆ ಭಾಷೆಯನ್ನು ನಿಯೋಜಿಸುವುದು ಹೇಗೆ? ರನ್ನ ಒಂದು ಪದ್ಯವನ್ನು ಭಾಷೆಯಲ್ಲದ ಒಂದು ಭಾಷೆಯನ್ನು ಬಳಸಿ ಅದ್ಭುತವಾಗಿ ನಿಭಾಯಿಸಿಬಿಡುತ್ತಾನೆ. ಆವತ್ತಿನಿಂದ ಈ ಅಭಾಷೆಯೂ ಕನ್ನಡದ ಭಾಷೆಯ ಸಂಸಾರದಲ್ಲಿ ಸದಸ್ಯನಾಗಿಬಿಡುತ್ತದೆ! ರನ್ನನ ಆ ಪದ್ಯ ನೋಡಿ:

ಧಪ್ಪರಿ ದಟ್ಟುಂ ಪೊಟ್ಟೆನೆ
ಧೊಪ್ಪ ಧೊಗಪ್ಪೆನೆ ದಿಧಿಲ್ ಬುಧಿಲ್ಲೆನೆ
ಸೊಪ್ಪುಸವಡಪ್ಪಿನಂ ಮೈ
ತಪ್ಪದೆ ಬಡಿದರ್ಕಲಿಗಳೊರ್ವರನೊರ್ವರ್||

(ಧಪ್ಪರಿ-ದಟ್ಟುಂ-ಪೊಟ್ಟೆಂದು-ಧೊಪ್ಪ-ಧೊಗಪ್ಪೆಂದು-ದಿಢಿಲ್-ಬುಧಿಲ್ಲೆಂದು-ಮೈ ಸೊಪ್ಪುಸವಡಾಗುವಂತೆ-ಆ -ಪರಾಕ್ರಮಿಗಳು-ಒಬ್ಬರನ್ನೊಬ್ಬರು-ತಪ್ಪದೆ-ಬಡಿದರು)

ಪದ್ಯದ ಪ್ರಥಮಾರ್ಧ ಅನುಕರಣ ಪದಗಳಿಂದ ಇಡಿಕಿರಿದಿದೆ. ಹೀಗೆ ಸಾಲುಗಟ್ಟಲೆ ಅನುಕರಣಗಳಿಂದ ಅನುಭವದ ಅಭಿವ್ಯಕ್ತಿಯನ್ನು ಸಾಧಿಸಿದ ಮಹತ್ವದ ಉದಾಹರಣೆಯಿದು. ಧೋ ಎಂದು ಮಳೆ ಸುರಿಯಿತು. ಆ ಮಗು ಚಿಟಾರನೆ ಚೀರಿತು. ಆ ಹುಡುಗ ಧೊಪ್ಪನೆ ನೆಲಕ್ಕೆ ಬಿದ್ದನು. ಹೀಗೆ ಒಂದೊಂದು ಅನುಕರಣ ಶಬ್ದವನ್ನು ಬಳಸುವ ರೂಢಿ ಸಾಮಾನ್ಯ. ಆದರೆ ರನ್ನನಂತೆ ಪುಂಖಾನುಪುಂಖವಾಗಿ ಅನುಕರಣಗಳನ್ನು ಬಳಸಿ ಅರ್ಥವೇ ಇಲ್ಲದ(ಡಿಕ್ಷ್ ನರಿಯಲ್ಲಿ ಎಂಬುದಾಗಿ ಗ್ರಹಿಸಿ) ಕೇವಲ ಶಬ್ದಗಳಿಂದ ಅರ್ಥಾಭಿವ್ಯಕ್ತಿ ಸಾಧಿಸಿರುವುದು ಒಂದು ಅಪ್ರತಿಮ ಸಾಧನೆ!

ಇದು ಭಾಷೆಯ ಕೇಳಿಮೆಯ ಸಂಗತಿಯಾಯಿತು. ಇನ್ನು ಭಾಷೆಯ ಕಾಣುವ ಸಂಗತಿಯಾದ ಬರವಣಿಗೆಯನ್ನು ಬರವಣಿಗೆಯಲ್ಲದ ರೂಪದಲ್ಲಿ ಕವಿಗಳು ಹೇಗೆ ರೂಢಿಸಿದ್ದಾರೆ ನೋಡೋಣ. ಪಂಪನ ವಿಕ್ರಮಾರ್ಜುನ ವಿಜಯದಲ್ಲಿ ಅಸಾಮಾನ್ಯವಾದ ಪದ್ಯವೊಂದಿದೆ. ಶರಮಂಚದ ಮೇಲೆ ಛಿನ್ನಭಿನ್ನನಾಗಿ ಮಲಗಿರುವ ಭೀಷ್ಮನ ಚಿತ್ರವನ್ನು ಪಂಪ ಹೇಗೆ ಚಿತ್ರಿಸಿದ್ದಾನೆ ಗಮನಿಸಿ. ಸಾಮಾನ್ಯ ಕವಿಗಳಿಂದ ಇಂಥ ನಿರ್ವಹಣೆ ಅಸಾಧ್ಯವೇ ಸೈ.

ತಿಂಥಿಣಿಯಾಗೆ ನಟ್ಟ ಕಣೆಯೊಳ್ ನೆಲ ಮುಟ್ಟದೆ ಮೆಯ್ಯೊಳತ್ತಮಿ
ತ್ತಂ ತೆರೆದಿರ್ದ ಪುಣ್ಗಳ್ ಎಸೆವಕ್ಕರದಂತಿರೆ ನೋಡಿಂ ಕಲ್ಲಿಂ ಎಂ
ಬಂತೆ ವೊಲ್ ಇರ್ದನಟ್ಟವಣೆ ಕೋಲ್ಗಳ ಮೇಲೆಸದಿರ್ದ ವೀರ
ಸಿದ್ಧಾಂತದ ಶಾಸನಂ ಬರೆದ ಪೊತ್ತಗೆಯಂತಮರಾಪಗಾತ್ಮಜಂ||

(ಮೈತುಂಬ ಹುಣ್ಣಾಗಿ ಬಾಣಗಳ ಮೇಲಿದ್ದ ಭೀಷ್ಮ ಅಟ್ಟವಣೆಕೋಲುಗಳ ಮೇಲಿಟ್ಟಿದ್ದ ವೀರಸಿದ್ಧಾಂತ ಶಾಸನ ಗ್ರಂಥದಂತೆ ಕಂಡ-ಸಂಗ್ರಹ ಗದ್ಯಾನುವಾದ-ಡಾ|ಎಲ್.ಬಸವರಾಜು)

ಭೀಷ್ಮ ಒಂದು ತೆರೆದಿಟ್ಟ ಪುಸ್ತಕದ ಹಾಗೆ ಕವಿಗೆ ಕಾಣುತ್ತಿದ್ದಾನೆ. ಪುಸ್ತಕ ವೀರಸಿದ್ಧಾಂತದ ಶಾಸನವನ್ನು ಬರೆದ ಪುಸ್ತಕ! ಈ ವೀರಸಿದ್ಧಾಂತದ ಶಾಸನವನ್ನು ಭಾಷೆಯಲ್ಲದ ಒಂದು ಕಾಲ್ಪನಿಕ ಭಾಷೆಯಲ್ಲಿ ಬರೆಯಲಾಗಿದೆ. ಆ ಭಾಷೆಯ ಲಿಪಿಗಳು ಯಾವುವು ಗೊತ್ತೆ? ಭೀಷ್ಮನ ದೇಹದಲ್ಲಿ ಉಂಟಾಗಿರುವ ಗಾಯಗಳೇ ಅಕ್ಷರಗಳು. ಕೆಂಪು ಕಂದು ಆ ಅಕ್ಷರಗಳ ಬಣ್ಣ. ನನ್ನನ್ನು ನೋಡಿರಿ (ಓದಿರಿ ಅಲ್ಲ!) ಕಲಿಯಿರಿ ಎಂದು ಎನ್ನುವಂತೆ ಇದೆ ಈ ಶಾಸನ! ಹಾಗೆ ಬರೆದ ಮಸಿ ಆರದ ಶಾಸನದಂತೆ ಗಂಗೆಯ ಮಗನಾದ ಭೀಷ್ಮ ಮಲಗಿದ್ದಾನೆ! ಸಾಯುತ್ತಿರುವಾಗಲು ತನ್ನ ನೆಲ ಮುಟ್ಟದ ಪ್ರತಿಜ್ಞೆಯು ತನ್ನ ನೆನಪಲ್ಲಿದೆ ಎಂಬುದನ್ನು ಸೂಚಿಸುವಂತೆ ಭೀಷ್ಮ ಶರಮಂಚದ ಮೇಲೆ ನೆಲ ಮುಟ್ಟದೆ ಮಲಗಿದ್ದಾನೆ! ಇಂಥ ಕಲ್ಪನೆ ಕೇವಲ ಚಿತ್ರಕ ಶಕ್ತಿಯ ಫಲವೆನ್ನಿಸುವುದಿಲ್ಲ. ಅಸಾಮಾನ್ಯ ಧ್ವನಿರಮ್ಯತೆಯಿಂದ ಇದು ಮಹಾಪ್ರತಿಭೆಯೊಂದರ ವಿಸ್ಫುರಣದಂತೆ ನನಗೆ ತೋರುತ್ತದೆ.

ಭಾಷಾವಿಜ್ಞಾನ ಭಾಷೆಯು ಮನುಷ್ಯನ ಸೃಷ್ಟಿ ಎಂದು ಪ್ರತಿಪಾದಿಸುತ್ತದೆ. ಆಹಾರ ಸ್ವೀಕರಣಕ್ಕಾಗಿ ನಿಯೋಜಿತವಾದ ಮುಖೇಂದ್ರಿಯಗಳನ್ನು (ಕಂಠ, ನಾಲಗೆ, ತುಟಿ, ಹಲ್ಲು ಇತ್ಯಾದಿಗಳನ್ನು) ಭಾಷೆಯ ನಿರ್ಮಾಣಕ್ಕೆ ನಿಯೋಜಿಸಿದ್ದು ಮನುಷ್ಯ ಪ್ರಾಣಿಯ ಮಹಾ ಸಾಧನೆ. ತಮ್ಮ ಭಾವಾಭಿವ್ಯಕ್ತಿಗೆ ಪ್ರಾಣಿ ಪಕ್ಷಿಗಳೂ ಧ್ವನಿಯನ್ನು ಬಳಸುತ್ತವೆ ನಿಜ. ಆದರೆ ಅದನ್ನೊಂದು ಭಾಷೆಯೆಂದು ಗುರುತಿಸುವಷ್ಟು ವಿಸ್ತಾರ ಮತ್ತು ವೈವಿಧ್ಯ ಪಶುಪಕ್ಷಿಗಳ ಧ್ವನಿಗಳಲ್ಲಿ ಕಾಣದು. ಅವು ತಮಗಾದ ಭಯವನ್ನೋ, ಹಸಿವನ್ನೋ, ಕೂಟದ ಬಯಕೆಯನ್ನೋ ತಮ್ಮ ಧ್ವನಿ ವೈವಿಧ್ಯದಿಂದ ಸೂಚಿಸುತ್ತವೆ. ಆದರೆ ಅವುಗಳ ಧ್ವನಿಯನ್ನು ಭಾಷೆಯಾಗಿ ಅವಸ್ಥಾಂತರಗೊಳಿಸಿಕೊಂಡು ಕಾವ್ಯೋದ್ದೇಶಕ್ಕೆ ಉಪಯೋಗಿಸುವುದು ಕವಿಗಳ ಸಾಮರ್ಥ್ಯ. ದುರ್ಯೋಧನ ವೈಶಂಪಾಯನ ಸರೋವರವನ್ನು ಪ್ರವೇಶಿಸುತ್ತಿರುವಾಗ ಹಕ್ಕಿಪಕ್ಕಿಗಳೆಲ್ಲಾ ಚೀರಿಕೊಳ್ಳುತ್ತವೆ:

ಅದಟಿನ ವಿಕ್ರಮಾರ್ಜುನನ ಸಾಹಸ ಭೀಮನ ಕೋಪಪಾವಕಂ
ಪುದಿದಳುರ್ದಳ್ವೆ ಕೊಳ್ಳದಿರದಿಲ್ಲಿಯುಮೆಮ್ಮುಮನಿಲ್ಲಿ ಬಾಳ್ವರಂ
ಕದಡದಿರಿತ್ತ ಬಾರದಿರು ಸಾರದಿರೆಂಬವೋಲಾದುದೆತ್ತಮು
ನ್ಮದ ಕಳಹಂಸ ಕೋಕನಿಕರ ಧ್ವನಿ ರುಂದ್ರ ಫಣೀಂದ್ರಕೇತುವಂ||

ಸರಳ ಕನ್ನಡದಲ್ಲಿ ಹಕ್ಕಿಗಳ ಧ್ವನಿ ಸೂಚಿಸಿದ್ದನ್ನು ವಿವರಿಸುತ್ತೇನೆ: “ಪರಾಕ್ರಮಿಯಾದ ಅರ್ಜುನನ ಮತ್ತು ಸಾಹಸಿಯಾದ ಭೀಮನ ಕೋಪದ ಬೆಂಕಿ ನಮ್ಮನ್ನು ಜೀವಂತ ಬೇಯಿಸದೆ ಬಿಡದು. ಈ ಕೊಳದಲ್ಲಿ ನಮ್ಮ ಪಾಡಿಗೆ ನಾವು ತಣ್ಣಗೆ ಬದುಕುತ್ತಿದ್ದೇವೆ. ಇಲ್ಲಿ ಬಾಳುತ್ತಿರುವವರನ್ನು ಹಾಳುಮಾಡಬೇಡ! ಬಾರದಿರು! ಸಾರದಿರು!(ಸಮೀಪಿಸದಿರು)”-ಎಂದು ಸರ್ಪಧ್ವಜನಾದ ದುರ್ಯೋಧನನಿಗೆ ಹೇಳುತ್ತಿರುವಂತೆ ಕೂಗಿ ಕೂಗಿ ಹಂಸ ಕೋಕಪಕ್ಷಿಗಳು ಧ್ವನಿಗೈದವು! ಪಕ್ಷಿಗಳ ಸಹಜವಾದ ಚೀರಾಟವನ್ನು ಕವಿ ಹೇಗೆ ಭಾಷಾರೂಪಕ್ಕೆ ಪರಿವರ್ತಿಸಿದ್ದಾನೆ ನೋಡಿರಿ! ಇದಲ್ಲವಾ ಕವಿಯ ಪ್ರತಿಭಾವೈದೃಶ್ಯವೆಂದರೆ!

ಇಂಥ ಭಾಷೆಯಲ್ಲದ ಭಾಷಾ ನಿಯೋಗಗಳು ಹೊಸಗನ್ನಡ ಕವಿತೆಗಳಲ್ಲಿ ಇಲ್ಲವೋ? ಬೇಕಾದಷ್ಟಿವೆ. ಕೆಲವು ಉಲ್ಲೇಖಗಳನ್ನು ಗಮನಿಸಿ-

ದೇವರು ರುಜು ಮಾಡಿದನು;
ರಸವಶನಾಗುತ ಕವಿ ಅದ ನೋಡಿದನು

…..
…..

ದೃಶ್ಯ ದಿಗಂತದಿನೊಮ್ಮೆಯೆ ಹೊಮ್ಮಿ
ಗಿರಿವನ ಪಟದಾಕಾಶದಲಿ
ತೇಲುತ ಬರಲ್ಕೆ ಬಲಾಕ ಪಂಕ್ತಿ
ಲೇಖನ ರೇಖಾನ್ಯಾಸದಲಿ
ಅವಾಂಗ್ಮಯ ಛಂದಃಪ್ರಾಸದಲಿ
ಸೃಷ್ಟಿಯ ರಚನೆಯ ಕುಶಲಕೆ ಚಂದಕೆ
ಜಗದಚ್ಚರಿಯಂದದ ಒಪ್ಪಂದಕೆ
ಚಿರ ಚೇತನ ತಾನಿಹೆನೆಂಬಂದದಿ
ಬೆಳ್ಳಕ್ಕಿಯ ಹಂತಿಯ ಆ ನೆವದಿ
ದೇವರು ರುಜು ಮಾಡಿದನು
ರಸವಶನಾಗುತ ಕವಿ ಅದ ನೋಡಿದನು

ಕುವೆಂಪು ಅವರ “ದೇವರು ರುಜುಮಾಡಿದನು” ಕವಿತೆಯಲ್ಲಿ ಬರುವ ಸಾಲುಗಳು ಇವು. ದೇವರು ರುಜುಮಾಡಿದನು ಎಂಬ ಉಲ್ಲೇಖದಿಂದ ಆತ ಅಕ್ಷರಸ್ಥ ಎಂಬುದು ಸಾಬೀತಾಯಿತು. ಅಕ್ಷರ ಬಲ್ಲವ ಎಂದರೆ ಪರೋಕ್ಷವಾಗಿ ಭಾಷೆ ಬಲ್ಲವ ಎಂದಾಯಿತು! ಆ ಪುಣ್ಯಾತ್ಮ ಮಾಡಿರುವ ರುಜುವಿನಲ್ಲಿ ಕೆಲವು ಅಕ್ಷರಗಳನ್ನಾದರೂ ಗುರುತಿಸುವುದು ನಮಗೆ ಸಾಧ್ಯವಾದರೆ ದೇವರ ಭಾಷೆ ಯಾವುದು ಎಂಬುದು ನಮಗೆ ಪತ್ತೆಯಾದೀತು! ರುಜುವನ್ನು ಯಾರೂ ಓದಲಾಗುವುದಿಲ್ಲ; ಅದು ಕೇವಲ ನೋಡತಕ್ಕದ್ದು. ಇಲ್ಲಿ ಕವಿ ಸಹ ದೇವರರುಜು ನೋಡಿದ್ದಾನೆ! ಗಿರಿವನಪಟದಾಕಾಶದಲಿ ಬರೆಯಲಾದ ಒಂದು ಒಪ್ಪಂದದ ಒಕ್ಕಣೆಯ ಕೆಳಗೆ ದೇವರು ಸಮ್ಮತಿಸಿ ರುಜು ಮಾಡಿದ್ದಾನೆ. ಕವಿತೆ ಪ್ರತಿಮಿಸುವ ಈ ಬೃಹನ್ನೋಟ ದೇವರ ಮಹತೋಮಹೀಯ ಅಸ್ತಿತ್ವಕ್ಕೆ ತಕ್ಕುದಾಗಿದೆ. ದೇವರು ಯಾವ ಭಾಷೆಯಲ್ಲಿ ರುಜು ಮಾಡಿರುವನು ಎಂಬ ಬಗ್ಗೆ ಕವಿ ಒಂದು ಶಬ್ದದ ಮೂಲಕ ಸೂಚನೆ ನೀಡಿದ್ದಾರೆ! ಅವಾಂಗ್ಮಯ ಎಂಬುದು ಆ ಸೂಚನೆ. ಭಾಷೆಯಲ್ಲದ ಭಾಷೆಯಲ್ಲಿ ದೇವರು ತನ್ನ ರುಜು ಮಾಡಿರುವುದು. ಅದೊಂದು ಅಲೌಕಿಕವಾದ ಪ್ರೀತಿಯ ಭಾಷೆ…ಭರವಸೆಯ ಭಾಷೆ. ಯಾವುದೇ ದೇವ ಮೂರ್ತಿಯಲ್ಲೂ ನಾವು ನೋಡುವ ಅಭಯಮುದ್ರೆಯ ಆಂಗಿಕ.

ಭಾಷೆಯ ಗೈರುಹಾಜರಿಯಲ್ಲಿ ಒಂದು ಭಾಷೆಯಲ್ಲದ ಭಾಷೆ , ಭಾಷೆಯ ಜವಾಬುದಾರಿಯನ್ನು ನಿರ್ವಹಿಸುತ್ತಾ ಇರುತ್ತದೆ. ಭಾಷಾತೀತವಾದ ಆ ಭಾಷೆಯನ್ನು ಕುವೆಂಪು ಅವರ ಕವಿತೆ ನಮ್ಮಲಕ್ಷ್ಯಕ್ಕೆ ತರುತ್ತಾ ಇದೆ. ಈ ಕವಿತೆ ಓದಿದಾಗೆಲ್ಲಾ ನಾನು ಅನುಭವಿಸುವ ರೋಮಾಂಚಕ್ಕೆ ಅದೇ ಕಾರಣ. ಬೇಂದ್ರೆ ತಮ್ಮ ಒಂದು ರಚನೆಯಲ್ಲಿ ಬೆಳದಿಂಗಳು ಅಂಬಿಕಾತನಯನ ಹಾಡು ಎಂದು ನುಡಿದಿರುವುದು ನೆನಪಾಗುತ್ತದೆ. ಪುತಿನ ಅವರ ಹೊನಲ ಹಾಡು ನೀವು ನೋಡಿರಬೇಕು. ಅದರಲ್ಲಿ ಮೂಕವನದ ಗೀತದಾಸೆ ಎಂಬ ಒಂದು ಪಂಕ್ತಿಯಿದೆ. ಹೊನಲು(ತೊರೆ ಎಂದು ಗ್ರಹಿಸೋಣ) ಮಾತಾಡಲಾರದ ಮೂಕ ವನದ ಹಾಡಿನ ಅಭಿವ್ಯಕ್ತಿಯಾಗಿದೆ.

ಕುವೆಂಪು ನೀರ್ತೊದಲು ಎಂದು ಒಂದು ಕವಿತೆಯಲ್ಲಿ ಬರೆಯುತ್ತಾರೆ. ಪ್ರಕೃತಿಯ ಸಮಸ್ತವೂ ಒಂದು ಅಸ್ಪಷ್ಟವಾದ ಅವಾಂಗ್ಮಯದಲ್ಲಿ ವ್ಯವಹರಿಸುತ್ತಿದೆ ಎಂದಾಯಿತು! ಕೋಗಿಲೆಯ ಕುಹೂ ಕುಹೂ ಕೂಡ ಅಂಥ ದೇವ ವಾಣಿಯ ಮರೆಮಾತೇ!(ಮರೆಮಾತು ಕುಮಾರವ್ಯಾಸನ ಪ್ರಯೋಗ). ಅಕ್ಕಮಹಾದೇವಿ ಚನ್ನಮಲ್ಲಿಕಾರ್ಜುನನನ್ನು ಅರಸುವಾಗ ಗಿಳಿಕೋಗಿಲೆಗಳೊಂದಿಗೆ ಮಾತಾಡುತ್ತಾಳೆ! ಗೊರೂರು ರಾಮಸ್ವಾಮಿ ಅಯ್ಯಂಗಾರ್ ತಮ್ಮ ಎಮ್ಮೆಗೆ ಮಾತು ಬರುತ್ತದೆ ಎಂದು ದೊಡ್ಡ ವಾದವನ್ನೇ ತಮ್ಮ ಪ್ರಬಂಧದಲ್ಲಿ ಮಂಡಿಸುತ್ತಾರೆ. ಕುವೆಂಪು ಅಂತೂ ಹಕ್ಕಿಯ ಧ್ವನಿಯನ್ನು ತಮ್ಮ ಎದೆಯೊಳಗಿನ ನುಡಿಯೆಂದೇ ಸಮ್ಮಾನಿಸುತ್ತಾರೆ. ವಾಂಗ್ಮಯದಲ್ಲಿ ಹೀಗೆ ಒಂದು ಅವಾಂಗ್ಮಯವು ಮೊದಲಿನಿಂದಲೂ ಪ್ರವೃತ್ತವಾಗಿಯೇ ಇದೆ. ಪಂಪನ ಭೀಮ ಎನ್ನ ನುಡಿ ಟಾಠಡಾಢಣಂ ಎಂದು ಆರ್ಭಟಿಸುತ್ತಾನಲ್ಲ! ವಿವೇಕ ಶಾನಭಾಗರು ತಮ್ಮ ಕಥೆಯೊಂದರಲ್ಲಿ ಘಾಚರ್ ಘೋಚರ್ ಎಂದು ಉಗ್ಗಡಿಸುತ್ತಾರಲ್ಲ! ನನ್ನ ಪದ್ಯವೊಂದರಲ್ಲಿ ತಾಯಿಯೊಬ್ಬಳು ಮಗುವಿನ ಹಣೆಯ ಮೇಲಿನ ಮುಂಗುರುಳಿನ ಅಕ್ಷರಗಳನ್ನು ತಿದ್ದುತ್ತಾಳಲ್ಲ! ಇವೆಲ್ಲವೂ ವಾಂಗ್ಮಯದಲ್ಲಿ ನಡೆಯುವ ಅವಾಂಗ್ಮಯ ವೃತ್ತಿಗಳೇ! ಆದಿಪುರಾಣದಲ್ಲಿ ಭರತ ಚಕ್ರವರ್ತಿ ತನ್ನ ವಿಜಯ ಶಾಸನವನ್ನು ವೃಷಭಗಿರಿಯಲ್ಲಿ ಬರೆಸುವ ಪ್ರಸಂಗವನ್ನು ನೆನೆಯಿರಿ.

ಈಗಾಗಲೇ ಬರೆದಿದ್ದ ಶಾಸನವೊಂದನ್ನು ಒರೆಸಿ ಭರತ ತನ್ನ ಹೊಸ ಶಾಸನವನ್ನು ವೃಷಭಗಿರಿಯ ಶಿಲಾಭಿತ್ತಿಯಲ್ಲಿ ಬರೆಸುತ್ತಾನೆ. ಅದೇ ಪಂಪನ ವಿಕ್ರಮಾರ್ಜುನ ವಿಜಯದಲ್ಲಿ ಭೀಷ್ಮ ತನ್ನ ಮೈತುಂಬ ಉಂಟಾಗಿದ್ದ ಗಾಯಗಳೆಂಬ ಅಕ್ಷರಗಳಿಂದ ಸ್ವಯಂ ತಾನೇ ಒಂದು ವೀರ ಸಿದ್ಧಾಂತದ ಶಾಸನವಾಗಿ ಪ್ರಕಟಗೊಳ್ಳುತ್ತಾನೆ. ವಾಂಗ್ಮಯಕ್ಕೆ ಎದುರಾಗುವ ಎಂಥ ಅದ್ಭುತವಾದ ಅವಾಂಗ್ಮಯ! ಉಳ್ಳವರು(ಶ್ರೀಮಂತರು) ಶಿವಾಲಯವ ಮಾಡುವರು. ಅದಕ್ಕೆ ಪ್ರತಿಯಾಗಿ ಬಸವಣ್ಣನವರು ತಮ್ಮ ದೇಹವನ್ನೇ ದೇಗುಲವಾಗಿ ಭಾಷಾಂತರಿಸಿದರು. ಇದು ಸ್ಥಾವರಕ್ಕೆದುರಾದ ಜಂಗಮ ತತ್ತ್ವ. ಆದರೆ ಭಾಷೆ ಅಲ್ಲದ್ದೂ ತನ್ನ ಅಭಿವ್ಯಕ್ತಿಗೆ ಭಾಷೆಯ ಆಕರವನ್ನೇ ಬಯಸುತ್ತದಲ್ಲ! ಇದೊಂದು ಬೆಡಗಿನ ವಿರೋಧಾಭಾಸ. ಅಲ್ಲಮ ಪ್ರಭುವಿನ ಭಾಷೆ ಭಾಷೆಯನ್ನು ಬಳಸಿಯೇ ಭಾಷಾತೀತವಾಗುವ ಒಂದು ಅಪ್ರತಿಮ ನಿಗೂಢ ನಿಯೋಗ. ಅದೇ ಕುಮಾರವ್ಯಾಸನ ಮರೆಮಾತು; ಅಲ್ಲಮನ ಬೆಡಗು; ಕನಕನ ಮುಂಡಿಗೆ; ಅದು ಬೆಳಕೂ ಅಲ್ಲದ ಕತ್ತಲೂ ಅಲ್ಲದ ಸಂಧ್ಯಾಭಾಷೆ. (ನುಡಿದರೆ ನುಡಿಗೆಟ್ಟ ನುಡಿಯ ನುಡಿಯ ಬೇಕು-ಅಲ್ಲಮ). ಆ ಅಲ್ಲಮನೆಂಬ ಮಹಾನುಭಾವನ ಕೆಲವು ಸಾಲುಗಳನ್ನು ನೆನೆಯುತ್ತಾ ನಮ್ಮ ಈ ಲೇಖನಕ್ಕೆ ಮುಗಿವಿಲ್ಲದ ಮುಕ್ತಾಯ ಹಾಡೋಣ:

ಕಂಗಳ ಕರುಳ ಕೊಯ್ದವರ
ಮನದ ತಿರುಳ ಹುರಿದವರ
ಮಾತಿನ ಮೊದಲ ಬಲ್ಲವರ
ಎನಗೊಮ್ಮೆ ತೋರಾ, ಗುಹೇಶ್ವರ.

‍ಲೇಖಕರು admin

January 7, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

‘ದಿಲ್ಲಿ ಹೈ ದಿಲ್ ಹಿಂದೂಸ್ತಾನ್ ಕಾ – 2’

ಆಗ ಅಂಗೋಲಾದಲ್ಲಿದ್ದ ಪ್ರಸಾದ್ ನಾಯ್ಕ್ ಈಗ ದೆಹಲಿ ವಾಸಿ. ಆಗ ಅವಧಿಗೆ ‘ಹಾಯ್ ಅಂಗೋಲಾ’ ಬರೆದರು. ಈಗ ‘ಚಲೋ ದಿಲ್ಲಿ..’ |ಕಳೆದ ಸಂಚಿಕೆಯಿಂದ|...

೧ ಪ್ರತಿಕ್ರಿಯೆ

  1. c v sheshadri holavanahalli

    bhavaneya sarvakaalika dehavannu mattu bhasheya shashvata udupugalannu torisuva sundaravada baraha.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: