ಎಚ್ ಎಸ್ ವಿ ಕಾಲಂ: ಮಳೆ ಬರುವ ಕಾಲಕ್ಕೆ ಒಳಗ್ಯಾಕೆ ಕೂತೆವು!

ತಾವರೆಯ ಬಾಗಿಲು-೧೨

ದಿನೇ ದಿನೇ ದಿನೇ ಬೆಂಗಳೂರು ಒಲೆಯ ಮೇಲೆ ಸೀಯುತ್ತಿರುವ ದೋಸೆಯ ಕಾವಲಿಯಾಗುತ್ತಿದೆ. ಅಂಗಳಕ್ಕೆ ಮುಂಜಾನೆ ಚುಮುಕಿಸುವ ನೀರಿನ ಹನಿಗಳು ನೆಲದಲ್ಲಿ ತತ್ ಕ್ಷಣವೇ ಚುಂಯ್ ಎಂದು ಇಂಗುತ್ತಾ ಇವೆ.

ಯಾರೋ ಬೀದಿಬೀದಿಯಲ್ಲಿ ಬಿದ್ದ ರಾಶಿರಾಶಿ ಕೊಳಚೆ-ಕಸ-ತರಗನ್ನು ರಾತ್ರಿ ಯಾವ ಮಾಯದಲ್ಲೋ ದಹನಕ್ರಿಯೆಗೆ ಒಡ್ಡಿರುವರಾಗಿ, ಗಾಳಿಯಲ್ಲಿ ಉಸಿರು ಕಟ್ಟಿಸುವ ದುರ್ನಾತ ಸಮೇತವಾದ ಉಬ್ಬಸದ ಹೊಗೆ ತುಂಬಿಕೊಳ್ಳುತ್ತಾ ಇದೆ. ಹೊಗೆ ತುಂಬದಿರಲೆಂದು ಕಿಟಕಿ ಬಾಗಿಲುಗಳನ್ನೆಲ್ಲಾ ಮುಚ್ಚುವುದರಿಂದ ಒಳಗೆ hsv1-2ಉಸುರಿಗಿಟ್ಟ ಮಂದಿ ಹೊಯ್ಗಡುವಿನಂತೆ ಕುತ್ತುಬ್ಬಸ ಪಡಲಿಕ್ಕೆ ಹತ್ತಿದ್ದಾರೆ. ಒಂದು ಹನಿ ಮಳೆ ಬರಬಾರದೆ ಎಂದು ಜನ-ದನ-ಹಸಿರೆಲ್ಲಾ ಮುಗಿಲಮುಖಿಯಾಗಿವೆ. ಗಿರಿಗಿರಿ ತಿರುಗುವ ಯಾವತ್ತೂ ಫ್ಯಾನುಗಳು ಬಿಸಿಗಾಳಿಯನ್ನು ತೂರಿ ತೂರಿ ಒಗೆಯುತ್ತಾ ಇವೆ. ಒಣಗಿದ ಆಕಾಶದಲ್ಲಿ ಎರಡು ಮುಗಿಲ ತುಕುಡ ಕಂಡರೆ ಎಲ್ಲಿ ಹೋಗುವಿರಿ ನಿಲ್ಲಿ ಮೋಡಗಳೆ ನಾಕು ಹನಿಯ ಚೆಲ್ಲಿ ಎಂದು ಮೊರೆಯಿಡುವಂತಾಗಿದೆ. ಕ್ರಿಕೆಟ್ ನಿಂತರೂ ಚಿಂತೆಯಿಲ್ಲ ಮಳೆ ಬಂದರೆ ಸಾಕಪ್ಪಾ ಎಂದು ಲೋಕ ಸಮಸ್ತವೂ ಏದುಸಿರುಬಿಡುತ್ತಾ ಕಾಯುತ್ತಿದೆ.

ನಾನು ಗಾಳಿಚಕ್ರದ ಅಡಿ ಕೂತು ಪುತಿನ ಯಾವತ್ತೋ ಬರೆದ ಶ್ರೀಹರಿಚರಿತೆ ಎಂಬ ಮಹಾಕಾವ್ಯದ ವರ್ಷಾವಗಾಹ ಎಂಬ ಉಲ್ಲಾಸವನ್ನು ಓದುತ್ತಾ ಇದ್ದೇನೆ. ಅದು ಬರೀ ಕಾವ್ಯವಲ್ಲ. ನನ್ನ ಪಾಲಿಗೆ ಒಂದು ಜನಪದ ಮೊರೆ. ಈ ಬಿರುಬೇಸಿಗೆಗಿಂತ ಲಾಯಕ್ಖಾದ ಮುಹೂರ್ತ ವರ್ಷಾವಗಾಹವನ್ನು ಓದಲಿಕ್ಕೆ ಬೇರೊಂದಿಲ್ಲ. ಮೈತುಂಬ ಬೆವರು ಹನಿಯುತ್ತಾ, ವರ್ಷಾವಗಾಹ ಓದುವಾಗ ಓದುಗ, ಓದು, ಓದಿನ ವಿಷಯ ಮೂರೂ ಒಂದಾದ ಮುಪ್ಪುರಿ ಹೊತ್ತು. ಆವತ್ತು ಬೇರೆಯಲ್ಲ; ಈವತ್ತು ಬೇರೆಯಲ್ಲ. ಇಂಥದೇ ಒಂದು ಒಳಗುದಿ ಹಗಲು ಬೃಂದಾವನದಲ್ಲಿ ಗೋಪಾಲರು, ಬಲರಾಮ ಕೃಷ್ಣ ಸಮೇತ ಮುಂಗಾರಿನ ಮೊದಲ ಮೋಡ ನೋಡುತ್ತಾರೆ. ಎಲ್ಲರೂ ಹನ್ನೆರಡು ಹದಿಮೂರು ವಯಸ್ಸಿನ ಮಕ್ಕಳು. ಆಹಾ! ನೋಡಿ ನೋಡಿ! ಮೆಲ್ಲಗೆ ಆಕಾಶದಲ್ಲಿ ಒಂದು ಕರೀ ಮೋಡ ತೆವಳಲಿಕ್ಕೆ ಹತ್ತಿದೆ!

ಮೂಡಿದುದು ಕಾರ್ಮುಗಿಲೊಂದು ಮೂಡು ಬಡಗಣ ಮೂಲೆಯೊಳು.

ಬಲರಾಮ ಕೃಷ್ಣರು ಆ ಕಪ್ಪು ಮೋಡವನ್ನು ವಿಸ್ಮಯದಿಂದ ನೋಡುತ್ತಾರೆ. ಓಹೋ ಅದು ಮುಂಗಾರಿನ ಮೊದಲ ಕರಿಮುಗಿಲು. ನೆಲದ ದಾಹ ತಣಿಸಲು ಕಡಲು ಕಳಿಸಿದ ಕಪ್ಪನೆಯ ಕಾಮಧೇನು! (ಕಾಮಧೇನು ಜನಿಸಿದ್ದು ಕ್ಷೀರಸಾಗರ ಮಥನದ ಸಂದರ್ಭದಲ್ಲಿ!).

ಮಳೆಯ ಮೋಡದ ಮೊದಲ ನೋಟದ ವಿಸ್ಮಯವೆ ವಿಸ್ಮಯಂ.
ಬೇಸಿಗೆಯ ಬಿರುಬಿಲ ಎದುರಿಲ್ಲದೆಸುಗೆಗೆ ತಲ್ಲಣಿಸಿ
ಲೋಕವಿರೆ ದಗೆ ಝಳಕೆ ಇದಿರೇಳುವೀ ಕಾಳಮೇಘವ
ಕಾಣುತಲೆ-

ಆ ನೀರ್ದಾಣವನ್ನು ಆಸೆಗಣ್ಣಿಂದ ಬಲರಾಮ ಕೃಷ್ಣರು ನೋಡುತ್ತಾರೆ. ಹೌದು ಮಳೆ ಯಾವತ್ತೂ ಒಂದು ವಿಸ್ಮಯವೇ. ಅದರಲ್ಲಿ ಅದೆಷ್ಟು ವಿರುದ್ಧಾಂಶಗಳು ಒಟ್ಟಿಗೇ ಮೇಳೈಸಿವೆ. ಆ ಮುಗಿಲು ಹುಟ್ಟಿದ್ದು ಕ್ಷಾರಜಲನಿಧಿಯಾದ ಉಪ್ಪು ಕಡಲಲ್ಲಿ. ಆದರೆ ಅದು ಸುರಿಸುವುದು ಸ್ವಾದೂದಕವಾದ ಸೀನೀರನ್ನು! ಆ ಮುಗಿಲ ಮೈಬಣ್ಣ ಕಪ್ಪು; ಆದರೆ ಆದರಿಂದ ಉದುರುವ ಹನಿಯೋ ಮುತ್ತಿನ ಮಣಿಯ ನಗೆಯಂದದಲ್ಲಿ ವಿಮಲ. ಕರಿಮೋಡದಿಂದ ಸುರಿಯುವ ಮಳೆ ಹನಿ ಬೆಳ್ಳನೆಯ ಮುತ್ತಿನಂತೆ ನಿರ್ಮಲ ಶುದ್ಧ ಸ್ಫಟಿಕ! ಅದರ ಮಿಂಚು ಗುಡುಗು ಭಯಾವಹ; ಆದರೆ ಅದು ಸುರಿಯುವುದು ತಣ್ಣನೆಯ ಮಂಗಳಕರವಾದ ಮಳೆಯನ್ನು!

ಬಿರುಬೇಸಿಗೆ ಕಳೆದ ಸೂಚನೆಯಾಗಿ ಮೊದಲ ಆ ಮಳೆಮೋಡ ಆಕಾಶದಲ್ಲಿ ತೇಲಿ ಬಂದಾಗ ಅದನ್ನು ಅವಗಾಹಿಸಿದ್ದು ಬಲರಾಮ! ಎಷ್ಟಾಗಲಿ ಅವನು ನೇಗಿಲಯೋಗಿಯಲ್ಲವೇ? ಅಂಗೈ ಹಚ್ಚಿ ಮುಗಿಲು ನೋಡುವುದು ಕಾಲಾನುಕಾಲದಿಂದ ನಮ್ಮ ರೈತರ ನಡೆಸುತ್ತಾ ಬಂದಿರುವ ಕ್ರಿಯೆಯಲ್ಲವೇ? ರೋಹಿಣಿಯ ಮಗನಾದ ಬಲರಾಮ ಕೃಷ್ಣನಿಗೆ ದನಿಯೆತ್ತರಿಸಿ ನುಡಿಯುತ್ತಾನೆ. ತಮ್ಮಾ! ನೋಡು…ನೋಡು… ನಿನ್ನನ್ನೇ ಹೋಲುವ ಮುಗಿಲೊಂದು ಬಾನಲ್ಲಿ ತೇಲುತ್ತಾ ಬರುತ್ತಿದೆ! ಅರೆ! ಮುಗಿಲನ್ನು ಬಲರಾಮ ಕೃಷ್ಣನಿಗೆ ಯಾವ ಸಾದೃಶ್ಯಕ್ಕಾಗಿ ಜೋಡಿಸಿ ಹೇಳುತ್ತಾನೆ?

ಕೃಷ್ಣನಂತೆ ಆ ಮುಗಿಲ ಬಣ್ಣವೂ ಕಪ್ಪು!
ಆ ಮುಗಿಲಲ್ಲಿ ಕಾಣುವ ಮಿರುಮಿಂಚುಗಳನ್ನು ಕೃಷ್ಣನ ಕಣ್ಮಿಂಚು ಅಣಕಿಸುತ್ತಾ ಇವೆ!
ಮೇಘದ ಸೆಳೆಮಿಂಚುಗಳು ಕೃಷ್ಣನ ಹಲ್ಲಿನ ಹೊಳಪನ್ನೇ ಹೋಲುತ್ತಿವೆ!
ಆಹಾ! ಗಾಳಿಯ ತೇರಿದು, ಬಾನ ನೀಲಿ ಹೀರುತ್ತಾ, ಕಣ್ಣೆದುರೇ ಹಿಗ್ಗಿ ಹಿಗ್ಗಿ ಬೆಳೆಯುತ್ತಾ, ತೊನೆಯುತ್ತಾ, ದಿಕ್ಕಿನ ಆನೆಯಂತೆ ನಿಧನಿಧಾನವಾಗಿ ಬೃಂದಾವನದ ಕಡೆಗೆ ಬರುತ್ತಾ ಇದೆ!
ಯಾವ ದೇವರ ಗಾಳಿತೇರೋ ಇದು?ಮಿಂಚಿನ ರೆಕ್ಕೆಯಾಡಿಸುತ ಸಗ್ಗದ ದಾರಿಯಲ್ಲಿ ಬರುತ್ತಾ ಇದೆ!
ಅಹಾ! ಅದರ ನೆತ್ತಿಯ ಮೇಲೆ ಕಾಮನಬಿಲ್ಲಿನ ನವಿಲುಗರಿ ಬೇರೆ!

ಬಯಲ ನೀರೊಣಗಿಹುದು.
ಬನ ನೀರಡಸಿ ಸೊರಗುತಿದೆ.
ಬೇಗೆಯೊಳು ನೊಂದಿಹುದು ಜಗ.

ನೆಲದ ಬವಣೆಯನ್ನು ಅರಿತು ಹಂಬಲಿಸುತ್ತಾ ಮಗುವಿನ ಕಡೆ ಬರುತ್ತಿರುವ ತಾಯಿಯಂತೆ ಭೂಮಿಯ ಕಡೆ ಈ ಕರಿಮೋಡ ಬರುತ್ತಾ ಇದೆ!
ನೆಲ ಮತ್ತು ಬನದ ಕೊರಗನ್ನು ಬಾನು ಅರಿಯುವುದೆಂದು ಕಾಣುತ್ತದೆ!ಇಲ್ಲವಾಗಿದ್ದರೆ ಆಕಾಶವು ಮೋಡಗಳನ್ನು ಭೂಮಿಗೆ ಅಟ್ಟುವ ಕರುಣೆಯನ್ನು ಏಕೆ ತೋರುವುದು ಹೇಳಿ!

ಹೀಗೆ ಯೋಚಿಸುತ್ತಾ ನುಡಿಯುತ್ತಾ ಬಲರಾಮ ಮೋಡವನ್ನು ಅವಗಾಹಿಸುತ್ತಿರುವಾಗಲೇ ಒಮ್ಮೆಲೇ ತಟ ತಟ ತಟ ಮಳೆಯು ಹನಿಯ ತೊಡಗುತ್ತದೆ!ಸುರಿಯುವ ಮಳೆ ಬಲರಾಮನಿಗೆ ಬೃಹತ್ತಾದ ಬಿಳಿಲುಬಿಟ್ಟ ಆಲದ ಮರದ ಹಾಗೆ ಕಾಣುತ್ತದೆ. ಸೌರಭಭರಿತವಾದ ಮಳೆಗಾಳಿ ಒಮ್ಮೆಗೇ ತಣ್ಣಗೆ ಸುಳಿಯತೊಡಗುತ್ತದೆ!

ಹಿರಿಯರೆಂಬುದು ದಿಟ! ನಮ್ಮೀ ನೆಲವೆ ಕಂಪಿನ ತವರು!
ಇಲ್ಲಿಲ್ಲದಿನ್ನೆಲ್ಲಿಹುದು, ಬಿಸಿಲೊಳೆ? ಬೆಳದಿಂಗಳೊಳೆ?
ಗಾಳಿಯೊಳೆ? ನೀರೊಳೆ? ನಮ್ಮೀ ಮಣ್ಣು ನೀಡಿದರುಂಟು!
ಇಲ್ಲದಿರೆ ಪರಿಮಳವಿಲ್ಲವೀ ಸೃಷ್ಟಿಯೊಳೆಂಬೆ ನಾ!

ಮಳೆ ಹನಿಯತೊಡಗಿದ್ದೇ ಗೋವಳರು ರಕ್ಷಣೆಗೆ ಮರಗಳಡಿಗೆ ಓಡುತ್ತಾರೆ. ಅಡವಿಯ ಹಕ್ಕಿ ಹಿಂಡು ಚಿಲಿಪಿಲಿಸುತ್ತಾ ಮರದ ಹಕ್ಕೆಯ ಕಡೆಗೆ ಧಾವಿಸುತ್ತವೆ! ಮರಗಿಡಗಳಾಸರೆಗೆ ಗೋಮಂದೆ ದೌಡೋಡುತಿದೆ ಬಾಲಗಳೆತ್ತಿ ತಂತಮ್ಮ ಗೋವಳರ ಹಿಂಬಾಲಿಸುತ. ಮರವೊಂದರಡಿ ಆಸರೆ ಪಡೆದಿರುವ ಗೆಳೆಯ ಸುದಾಮ ಬಲರಾಮ ಕೃಷ್ಣರನ್ನು ಮರದ ಆಸರೆಗೆ ಬನ್ನಿ ಎಂದು ಕೈ ಬೀಸಿ ಕರೆಯುತ್ತಾ ಇದ್ದಾನೆ!ಆದರೆ ಬಲರಾಮ ಹೇಳುತ್ತಾನೆ. ನನಗೆ ಇಂದು ಈ ಮೊದಲ ಮಳೆಯಲ್ಲಿ ನೆನೆಯುವ ಆಸೆ ಕೃಷ್ಣಾ! ನಿಂತೆಡೆ ನಿಂತು ಮೊದಲ ಬೇಸಿಗೆ ಮಳೆಗೆ ಮೈಯೊಡ್ಡುವುದು ಹಿತವೆನಗೆ!

huseni krishna6ಆ ಮೊದಲ ಮಳೆ ಬೃಂದಾವನಕೆ ಮಜ್ಜನ ಮಾಡಿಸುತ್ತಾ ಇದೆ! ಅದೊಂದು ದಿವ್ಯವಾದ ನಿಸರ್ಗ ಸಹಜವಾದ ಆಶಿರ್ವಚನ ಮಾಂಗಲ್ಯ! ಸುರಿಯುವ ಧಾರಾಕಾರ ಮಳೆ ಭೂಮಿ ಮತ್ತು ಆಕಾಶವನ್ನು ಬೆಸೆಯುತ್ತಾ ಇದೆ! (ಕಟ್ಟಿತು ಸೇತುವನು ಶರವರ್ಷದಿ ನಭಂ ವಸುಮತಿಗೆ!). ಮೋಡದಿಂದ ಸುರಿಯುತ್ತಿರುವ ಮಳೆಹನಿಗಳ ಧಾರೆ ಒಂದನ್ನೊಂದು ಸೋಂಕದಂತೆ ಸಮಾನಾಂತರವಾಗಿ ಭೂಮಿಗೆ ಸುರಿಯುತ್ತಿರುವ ಚಂದವೇ ಚಂದ! ಈಗ ಕಾಡಿನಲ್ಲಿ ಬೇರೆ ಯಾವ ಸದ್ದೂ ಕೇಳುತ್ತಿಲ್ಲ! ಕಿವಿ ತುಂಬುತ್ತಿರುವುದು ಒಂದೇ ಸದ್ದು! ಅದು ಹೊಯ್ಮಳೆಯ ನಿರ್ಘೋಷ!

ಎಲ್ಲ ದನಿಗಳನಡಗಿಸುತ ಕಾನನವ ತುಂಬಿತು ವರ್ಷ-
ಘೋಷಂ!

ಆಹಾ! ಮಹಾತ್ಮರ ಶಿವಾಗ್ರಹವು ಅದೆಷ್ಟು ಮೃದು ನಿಷ್ಠುರ!ಅದ್ಯಾವ ಮಾಯದಲ್ಲೋ ಮಳೆ ನಿಂತೇ ಹೋಯಿತು. ಮಳೆನಿಂತ ಮೇಲೂ ಮರಗಳಿಂದ ಹನಿಹನಿ ತೊಟ್ಟಿಕ್ಕುತ್ತಲೇ ಇದೆ. ಅದು ಹೇಗೆ ಕವಿಗೆ ಕಾಣುತ್ತಿದೆ?

ಅದೆ ತಾನೆ ಕಡಲಿಂದೆತ್ತಿ ನೀರಂ ತೊಟ್ಟಿಕ್ಕುವಿಳೆಯಂ
ಹಸನ್ಮುಖಿಯನ್ ಅಮಂದಾನಂದ ತುಂದಿಲೆಯ ಭೂದಾರ
ಹಸಿತೇಕ್ಷಣದೊಳು ಈಕ್ಷಿಪ ಪರಿಯ ಮರುಕಳಿಸಿತಾವೆಳಗು!

ಆಗಷ್ಟೆ ಸಮುದ್ರದಿಂದ ಭೂವನಿತೆ ಮೇಲೆದ್ದಿದ್ದಾಳೆ. ಅವಳ ಮೈಯಿಂದ ಇನ್ನೂ ನೀರು ತೊಟ್ಟಿಕ್ಕುತ್ತಾ ಇದೆ. ಭೂವರನಾದ ವಿಷ್ಣುವು ಭೂದೇವಿಯನ್ನು ನೋಡಿ ಮುಗುಳ್ ನಗುತ್ತಾ, ಆಕೆಯನ್ನು ಕೈಹಿಡಿದು ಸ್ವೀಕರಿಸುತ್ತಾನೆ! ಆ ಸಮುದ್ರಮಂಥನದ ಪುರಾಣವನ್ನು ಈವತ್ತಿನ ಮಳೆ ಮತ್ತೆ ಪುನರಭಿನಯಿಸಿ ತೋರಿಸುತ್ತಾ ಇದೆ! (ಇಳೆಗೆ ಮತ್ತು ಮಳೆಗೆ ಆಗ್ಯಾದ ಲಗ್ನ! ಭೂಮಿ ಅದರಾಗ ಮಗ್ನ!-ಅಂಬಿಕಾತನಯದತ್ತ).ಇದ್ದಕ್ಕಿದ್ದಂತೆ ಮಳೆನಿಂತ ಮೇಲಿನ ಆ ನೋಟ ಮದುವೆ ಮಂಟಪದಂತೆ ಕಾಣತೊಡಗುತ್ತದೆ. ಭೂದೇವಿಯೇ ವಧು. ವಿಷ್ಣುವೇ ವರ! ಸೂರ್ಯರಶ್ಮಿಯ ಪೀತಾಂಬರವುಟ್ಟು ವಧು ಹಸೆಗೆ ಬಂದಿದ್ದಾಳೆ! ಹನಿಗಳ ಸೇಸೆ ಉದುರುತ್ತಾ ಇದೆ. ಪೀತಾಂಬರದ ನಿರಿಯಂತೆ ಹರಿಯುವ ಝರಿಗಳು ಕಾಣುತ್ತಾ ಇವೆ. ಆಕಾಶದ ತುಂಬ ಯಾರೋ ಬೆಳ್ಗೊಡೆಗಳನ್ನು ಹಿಡಿದಿದ್ದಾರೆ! ಮತ್ತೆ ಕಾಡಿನ ಇಂಚರ ಪ್ರಾರಂಭವಾಗುತ್ತದೆ!ಆಗ ಬಲರಾಮ ಕೃಷ್ಣನಿಗೆ ಹೇಳುತ್ತಾನೆ:

ಕಂಡೆಯ ತಮ್ಮ? ಮೋಡಗಳ ಬರಹೋಗುಗಳ? ಆಗ ಧಗೆ
ಈಗಳೊ ತಂಪು. ಆಗೆಲ್ಲಿ ಬನಕೆ ಬಣ್ಣಂ? ಈಗಳಿದು
ಕಂಡವರ ಕಣ್ಣ ಪುಣ್ಯಂ!

ಬಲರಾಮನ ಪ್ರಕಾರ ಮಳೆಯಲ್ಲಿ ತೊಪ್ಪನೆ ತೊಯ್ಯುವ ಅನುಭವ ವಿಸ್ಮಯಕಾರಿಯಾದುದು! ನೀರೊಳಗೆ ಇದ್ದೂ ಉಸಿರು ಕಟ್ಟದ ಅನುಭವವನ್ನು ನಾವಿನ್ನೆಲ್ಲಿ ಪಡೆಯುವುದು ಸಾಧ್ಯ? ಮಳೆಯಲ್ಲದೆ ಇನ್ನೆಲ್ಲೂ ಈ ಅನುಭವವನ್ನು ನಾವು ಪಡೆಯಲಾರೆವು! ನಮ್ಮ ಅಮ್ಮಂದಿರ ನೀರೆರೆತಗಳಲ್ಲೂ ನಾವು ಈ ಅನುಭವ ಪಡೆಯಲಾರೆವು! ಅಲ್ಲೂ ಮಕ್ಕಳಿಗೆ ಉಸಿರುಕಟ್ಟಬಹುದು! ಓತಪ್ರೋತವಾಗಿ ಅಖಂಡವಾಗಿ ಅವ್ಯಾಹತವಾಗಿ ಒಂದೇ ಸಮನೆ ಹೊಯ್ ಮಳೆ ಹೊಯ್ದರೂ ಮಳೆಯಲ್ಲಿ ನಿಂತ ನಮಗೆ ಉಸಿರುಕಟ್ಟಲಿಲ್ಲವಲ್ಲ!

ಬಲರಾಮನ ಈ ನಿರೀಕ್ಷಣೆ ಹೌದಲ್ಲವಾ ಅನ್ನಿಸುತ್ತದೆ ನಮಗೂನು! ಅರೇ! ಈವರೆಗೂ ಈ ವಿಷಯ ನಮ್ಮ ಗಮನಕ್ಕೆ ಬಂದೇ ಇರಲಿಲ್ಲವಲ್ಲ! ಕಾವ್ಯ ಮಾಡುವುದೇ ಇದನ್ನು. ನಮ್ಮ ಗಮನಕ್ಕೆ ಬಾರದ ಅನುಭಗಳನ್ನು ನಮ್ಮ ಮೈಮನ ಕಾಣುವಂತೆ ಮಾಡುವುದು! ಇದು ನಿಜವಾದ ಅರ್ಥದಲ್ಲಿ ವರ್ಷಾವಗಾಹಂ! ಮಳೆಯಲ್ಲಿ ಮನೋವಾಕ್ಕಾಯ ಒಂದಾಗಿ ನಾವೇ ಮಳೆಯನ್ನು ಒಳಗೊಳ್ಳುವುದು. ಅದನ್ನು ಬಣ್ಣವಾಗಿ ನೋಡುವುದು(ಮುತ್ತಿನ ಮಣಿಯ ನಗೆಯಂದದೊಳು ವಿಮಲ); ಅದನ್ನು ಶಬ್ದವಾಗಿ ಕೇಳುವುದು(ಎಲ್ಲ ದನಿಗಳನಡಗಿಸುತ ಕಾನನವ ತುಂಬಿತು ವರ್ಷ ಘೋಷಂ); ಮಳೆಯ ಕಲ್ಯಾಣಕಾರಿ ಗುಣವನ್ನು ಮದುವೆಯ ನಾಟಕವಾಗಿ ರೂಪಕಾತ್ಮಕವಾಗಿ ಪರಿಗ್ರಹಿಸುವುದು( ವಿಷ್ಣು ಲಕ್ಷ್ಮಿಯರ ಕಲ್ಯಾಣ).

ಆದರೆ ಈ ಅನುಭವವನ್ನು ಒಳಗೊಳ್ಳಲು ಬೇಕಾದದ್ದು ಒಂದುಬಗೆಯ ಉನ್ಮಾದ. ಒದ್ದೆ ಮುದ್ದೆಯಾದ ಬಾಲಕೃಷ್ಣನ ವಸ್ತ್ರಗಳನ್ನು ಕಳಚಿ ಅವನ್ನೇ ಮತ್ತೆ ಹಿಂಡಿ, ಆ ಬಟ್ಟೆಗಳಿಂದ ಅವನ ಮೈ ವರೆಸಿ, ಮತ್ತೆ ಅವನ್ನು ತಮ್ಮನಿಗೆ ಕಕ್ಕುಲಾತಿಯಿಂದ ಉಡಿಸುತ್ತಾನೆ ಅಣ್ಣ ಬಲರಾಮ. (ಆದರೆ ಕೃಷ್ಣನಿಗಿಂತ ದೊಡ್ಡವನೆಂಬ ಬಿಗುಮಾನದಿಂದ ತಾನು ಅವನಿಂದ ಅಂಥ ಸೇವೆಯನ್ನು ಸ್ವೀಕರಿಸುವುದಿಲ್ಲ!). ಸುದಾಮ ಮಳೆಯಲ್ಲಿ ನೆಂದದ್ದಕ್ಕೆ ಕೃಷ್ಣ ಬಲರಾಮರನ್ನು ಗದರಿಸುತ್ತಾನೆ! ಆಗ ಬಲರಾಮ ಕೊಡುವ ಉತ್ತರವೇನು?

cloudsಹುಚ್ಚು ದಿಟ! ಪಟ್ಟವರೆ ಬಲ್ಲರಾ ಮಳೆ ಸವಿಯ! ನೀನೇಂ
ಬಲ್ಲೆ? ನೆಲ ಮಲೆ ಕಾಡು ಬಾನ್ ಬಯಲೊಂದಿಗೊಂದಾದೆವಲಾ!
ಮಳೆಯೊಳು ಕೋದು ತೊಯ್ದ ನಾವ್! ಇದರ ಸೊಗವ ಅಂಜುಗುಳಿಗಳ್
ನೀವೆಂತರಿವಿರೈ ಕೃಷ್ಣನ ಹೊರತು?

ಮಳೆಯಲ್ಲಿ ತೋಯುವುದೆಂದರೆ ಚರಾಚರಗಳೊಂದಿಗೆ ಒಂದಾಗುವ ಪರಿಕ್ರಮ! “ಟು ಬಿಕಂ ಒನ್ ವಿತ್ ನೇಚರ್” ಎನ್ನುತ್ತದಲ್ಲಾ ಜೆನ್ ತತ್ವ, ಅದು! ಮಳೆ ಬರುವ ಕಾಲಕ್ಕೆ ಒಳಗ್ಯಾಕೆ ಕೂತೆವು? ಇಳೆಯೊಡನೆ ಜಳಕ ಮಾಡೋಣು! ಮೋಡಗಳ ಆಟ ಆಡೋಣು -ಎನ್ನುತ್ತಾರಲ್ಲಾ ಕವಿವರ್ಯ ಬೇಂದ್ರೆ! ಈ ಗೀತಾತ್ಮ ಉಕ್ತಿಯನ್ನೇ ಪುತಿನ ಅವರ ವರ್ಷಾವಗಾಹಂ ಕಥನವಾಗಿ ಅಭಿನಯಿಸುತ್ತಾ ಇದೆ!

ಬೃಂದಾವನದಲ್ಲಿ ಅಂದು ಬಲರಾಮ ಕೃಷ್ಣ ಪಡೆದ ಸುರಿ ಮಳೆಯ ಈ ಐಕ್ಯಾನುಭವವನ್ನು ಈವತ್ತು ಬೆಂಗಳೂರಿನ ಬಿರುಬೇಸಿಗೆಯಲ್ಲಿ ಮಳೆ ಹೊಯ್ಯುವ ಅಮೃತ ಕ್ಷಣ ನಾವು ಪಡೆಯುವುದು ಶಕ್ಯವಿಲ್ಲವೇ? ಖಂಡಿತ ಶಕ್ಯವಿದೆ. ಪುರಾಣವು ಪಾರಾಯಣವಾಗುವ ಪರಿಕ್ರಮವೇ ಹೀಗೆ. ನಮ್ಮೂರಲ್ಲಿ ನಾವು ಮೊದಲ ಮಳೆಯಲ್ಲಿ ಅವಭೃತರಾಗುವ ಕಲ್ಯಾಣ ಕ್ಷಣವನ್ನು ಕಾತರದಿಂದ ನಿರೀಕ್ಷಿಸೋಣ. ಮಳೆ ಬಂದ ಕ್ಷಣ ಒಳಗೆ ಕೂಡುವುದು ಬೇಡ! ಮಳೆಯನ್ನು ಅವಗಾಹಿಸುವುದು ಹೇಗೆ, ನಾವೇ ಮಳೆಯಾಗುವುದು ಹೇಗೆ ಎಂಬುದನ್ನು ಮಹಾಕವಿಗಳಾದ ಬೇಂದ್ರೆ ಮತ್ತು ಪುತಿನ ನಮಗೆ ಕಲಿಸಿಕೊಟ್ಟಿದ್ದಾರೆ!

‍ಲೇಖಕರು Admin

December 10, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ತೇರೀನ ಮೈಮೇನಿನ ಗಿಣಿಯಲ್ಲ ಗರ‌್ ತೇರೆ|ಇದು ನಾ ಬರ್ದ ಒಂದು ಕೈಕುಸುಲು

ತೇರೀನ ಮೈಮೇನಿನ ಗಿಣಿಯಲ್ಲ ಗರ‌್ ತೇರೆ|ಇದು ನಾ ಬರ್ದ ಒಂದು ಕೈಕುಸುಲು

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

‘ಗಿಫ್ಟ್’ ಕೊಡ್ತಾರೆ ಹುಷಾರ್..!!

‘ಗಿಫ್ಟ್’ ಕೊಡ್ತಾರೆ ಹುಷಾರ್..!!

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ...

2 ಪ್ರತಿಕ್ರಿಯೆಗಳು

  1. ರುದ್ರಮೂರ್ತಿ

    ನಮಸ್ತೆ ಸರ್, ನಿಮ್ಮ ಪಾಠ ಪ್ರವಚನಗಳನ್ನು ಕಿವಿಯಾರೆ ಕೇಳುವ ಯೋಗವಿಲ್ಲದಿದ್ದರೂ, ಈ ಅಂಕಣದ ಮೂಲಕ ಓದುವ ಭಾಗ್ಯ ದೊರಕಿದೆ, ತುಂಬಾ ಖುಶಿ ಅನ್ನಿಸುತ್ತೆ ಸರ್, ಈವರೆಗಿನ ಪ್ರತಿಯೊಂದು ಲೇಖನಗಳಲ್ಲೂ ಓದುಗರಿಗಾಗಿ ಕನ್ನಡದ ಕಾವ್ಯ-ಕವನಗಳನ್ನು ಬಹು ಚಂದವಾಗಿ ಆಯ್ಕೆಮಾಡಿ, ಅಮೂಲ್ಯ ರಸದೌತಣವನ್ನೇ ಉಣಬಡಿಸುತ್ತಿದ್ದೀರಿ. ಈ ಲೇಖನದಲ್ಲಿನ ‘ಟು ಬಿಕಂ ಒನ್ ವಿತ್ ನೇಚರ್’ ಹೇಳಿಕೆಯಂತೆ, ನಾವೆಲ್ಲಾ ಓದುಗರೂ ಕೂಡ ನಿಮ್ಮ ಮಾತುಗಳ, ನಿಮ್ಮ ಭಾವಗಳ, ನಿಮ್ಮ ವಿಚಾರ-ವಿಮರ್ಶೆಗಳ ಮಳೆ ಹನಿಗಳಿಗೆ ಮನಸ್ಸೊಡ್ಡಿ ಸುಖಿಸುತ್ತಿದ್ದೇವೆ. ಧನ್ಯವಾದಗಳು ಸರ್. ಪ್ರಸಾರಿಸುತ್ತಿರುವ ಅವಧಿಗೂ ಧನ್ಯವಾದಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: