ಎಚ್ ಎಸ್ ವಿ ಕಾಲಂ: ಹೊರಟಿದ್ದೀಗ ಎಲ್ಲಿಗೆ?

ತಾವರೆಯ ಬಾಗಿಲು-2
ಎಚ್.ಎಸ್.ವೆಂಕಟೇಶ ಮೂರ್ತಿ

“ಕಾವ್ಯಾರ್ಥ” ಎಂಬ ಗ್ರಹಿಕೆ ಮೊದಲಿಂದಲೂ ನಮ್ಮಲ್ಲಿ ಚಾಲ್ತಿಯಲ್ಲಿದೆ. ಕಾವ್ಯವು ಭಾಷೆಯಲ್ಲಾದ ಒಂದು ರಚನೆ. ಭಾಷೆಯಾದರೋ ಸ್ವಯಂ ತಾನೇ ಅರ್ಥವುಳ್ಳ ಪದಗಳ ಮತ್ತೊಂದು ರಚನೆ. ಆ ಪದಗಳಿಗೆ ರೂಢಿಯಲ್ಲಿ ಅರ್ಥವೆಂಬುದು (ಕೆಲವೊಮ್ಮೆ ಅನೇಕಾರ್ಥಗಳು) ಇದೆ.

ಹಳಗನ್ನಡಕಾವ್ಯ ನಮಗೆ ಅರ್ಥವಾಗುವುದಿಲ್ಲ ಎಂದರೆ ಅಲ್ಲಿ ಬಳಕೆಯಾಗಿರುವ ಸಂಸ್ಕೃತ ಮತ್ತು ಈಗ ಪ್ರಚಲಿತವಿಲ್ಲದ ಹಳಗನ್ನಡ ಪದಗಳು ನಮಗೆ ಅರ್ಥವಾಗುವುದಿಲ್ಲ ಎಂಬುದು ಸರಳ ಗ್ರಹಿಕೆ.

hsvಹಾಗಾಗಿ ಪಂಪನನ್ನೋ, ರನ್ನನನ್ನೋ ಪಾಠ ಮಾಡುವಾಗ ಪದಪದಕ್ಕೂ ಅರ್ಥ ಹೇಳುವ ಕ್ರಮ ಹಿಂದೆ ರೂಢಿಯಲ್ಲಿತ್ತು. ಪದವಿಂಗಡಣೆ, ಪದಗಳ ಅರ್ಥ, ಆಮೇಲೆ ಅನ್ವಯ ರೀತಿಯಲ್ಲಿ ಪದಗಳ ಮರು ಜೋಡಣೆ, ಕೊನೆಗೆ ತಾತ್ಪರ್ಯ… ಅಲ್ಲಿಗೆ ಕಾವ್ಯದ ಗ್ರಹಿಕೆ ಮುಗಿಯಿತು ಎಂಬ ತೃಪ್ತಿ.

ಆದರೆ ಕಾವ್ಯಾರ್ಥವನ್ನು ಹೀಗೆ ಗ್ರಹಿಸುವ ಕ್ರಮವೇ ಅವೈಜ್ಞಾನಿಕ ಎಂಬುದನ್ನು ನಾವು ತಿಳಿಯಬೇಕಾಗಿದೆ.

ಶಬ್ದಕೋಶದಲ್ಲಿ ದೊರೆಯುವ ಪದಗಳ ಅರ್ಥವನ್ನು ಹಾಗೆ ಹಾಗೇ ಅನ್ವಯಿಸುವುದು ಸರಿಯಾದ ಅರ್ಥಗ್ರಹಿಕೆಯ ಕ್ರಮವಲ್ಲ.

ಪದ್ಯದ ಸಂದರ್ಭದಲ್ಲಿ ಆ ಪದಕ್ಕೆ ಯಾವ ಅರ್ಥ ಸೂಕ್ತ ಎಂಬುದನ್ನು ಗ್ರಹಿಸಬೇಕಾದದ್ದು ನಮ್ಮ ಮೊದಲ ಜವಾಬುದಾರಿ. ಈ ಪದ್ಯದಲ್ಲಿ ಈ ಪದದ ಅರ್ಥವನ್ನು ಯಾವ ನೆಲೆಯಲ್ಲಿ ಗ್ರಹಿಸಿದಾಗ ಪದ್ಯವು ಹೆಚ್ಚು ಅರ್ಥಪೂರ್ಣವಾಗುವುದು ಎಂಬುದು ನಮ್ಮ ಅರ್ಥಾರೋಪದ ಕ್ರಮವಾಗಬೇಕಾಗುತ್ತದೆ.

ಒಂದೇ ಅರ್ಥವನ್ನು ಹೇಳುವ ಅನೇಕ ಪದಗಳಿರುವಾಗ ಈ ಪದವನ್ನೇ ಕವಿ ಬಳಸಿದ್ದೇಕೆ? ಅದರಿಂದ ಕಾವ್ಯಕ್ಕೆ ವಿಶೇಷ ಲಾಭವೇನಾದರೂ ಆಗಿದೆಯೇ?-ಎಂಬುದನ್ನು ನಾವು ಪರಿಭಾವಿಸಬೇಕು.

ಕಾವ್ಯಾರ್ಥವು ಕಾವ್ಯಚಿಂತನೆಯ ಪರಿಣಾಮವಾಗಿ ದಕ್ಕತಕ್ಕದ್ದು ಎಂಬುದನ್ನು ನಾವು ಮೊದಲು ಗ್ರಹಿಸಬೇಕಾಗಿದೆ. ಎರಡನೇದು ಪದ್ಯದ ಬಿಡಿ ಬಿಡಿ ಪದಗಳ ಅರ್ಥವನ್ನು ತಿಳಿದ ಮಾತ್ರಕ್ಕೆ ನಾವು ಪದ್ಯದ ಅಂತರಾರ್ಥವನ್ನು ಸಮೀಪಿಸಿದಂತೆ ಆಗುವುದಿಲ್ಲ. ಅರ್ಥವಾಗಿರುವುದು ಪದಗಳು ಮಾತ್ರ! ಪದ್ಯವಲ್ಲ!

ಕೆಲವು ನಿರ್ದುಷ್ಟ ಪದಗಳ ನಿರ್ದುಷ್ಟ ಸಂಯೋಜನೆಯಿಂದ ಒಂದು ಅರ್ಥವ್ಯವಸ್ಥೆಯನ್ನು ಕವಿ ಸೃಷ್ಟಿಸಿದ್ದಾನೆ. ಆ ವ್ಯವಸ್ಥೆಯನ್ನು ಪದ್ಯದ ಸಂಯೋಜನೆಯ ವಿಶಿಷ್ಟ ಗ್ರಹಿಕೆಯ ಮೂಲಕವೇ ನಾವು ಅರ್ಥಮಾಡಿಕೊಳ್ಳಬೇಕಾಗುತ್ತದೆ!

“ಕಂದ ನಿಜಾನುಜರೆಲ್ಲಿದರೆಂದು” ಎಂಬ ರನ್ನನ ಗದಾಯುದ್ಧ ಕಾವ್ಯದ ಪ್ರಸಿದ್ಧ ಕಂದ ಪದ್ಯವು ಪ್ರಾರಂಭವಾಗುವುದು ಕಂದ ಎಂಬ ಶಬ್ದದಿಂದ. ಕಂದ ಎಂಬುದು ಸಂಬೋಧನೆಯಾದುದರಿಂದ ಪದ್ಯದ ಮೊದಲ ಶಬ್ದ ಅದೇ ಆಗಬೇಕಾಗಿದೆ. ಜೊತೆಗೆ ಕಂದ ಎಂಬ ಪದಕ್ಕಿರುವ ಆತ್ಮೀಯತೆ, ಆರ್ದ್ರತೆ ರಾಜಪುತ್ರ, ಕುಮಾರ ಎಂಬ ಶಬ್ದಗಳಿಗೆ ಇಲ್ಲ. ಹಾಗಾಗಿ ಕಂದ ಎಂಬ ಪದದ ಬಳಕೆ ಕವಿಯ ಪ್ರತಿಭಾಶಕ್ತಿಯ ಅನಿವಾರ್ಯ ಆಯ್ಕೆಯ ಫಲ.

ಕಂದ ನಿಜಾನುಜರೆಲ್ಲಿದ
ರೆಂದೆನ್ನಂ  ಜನನಿ ಬಂದು ಬೆಸಗೊಂಡೊಡದೇ-|
ನೆಂದು ಮರುಮಾತುಗುಡುವೆಂ
ಕೊಂದರ್ ಕೌಂತೇಯರೆಂದು ಬಿನ್ನೈಸುವೆನೋ||

ಇಲ್ಲಿ ಒಂದೊಂದು ಪದವೂ ಹೊಂದಿರುವ ಧ್ವನಿಶಕ್ತಿ ಮತ್ತು ಅರ್ಥಭಾರವನ್ನು ತಮ್ಮ ಭಾರತೀಯ ಕಾವ್ಯಮೀಮಾಂಸೆಯಲ್ಲಿ ತೀನಂಶ್ರೀ ಅದ್ಭುತವಾಗಿ ವಿಶ್ಲೇಷಿಸಿದ್ದಾರೆ.

ಎಂದರೆ ಒಂದು ಪದ್ಯವು ಸೃಷ್ಟಿಸುವ ಅರ್ಥ ವ್ಯವಸ್ಥೆಯು ಕವಿಯ ಪ್ರತಿಭಾ ಶಕ್ತಿಯಿಂದ ಹೀಗಲ್ಲದೆ ಬೇರೆ ಅಲ್ಲ ಎಂಬಂತೆ ರಚನೆಗೊಂಡಿರುತ್ತದೆ. ಅದೇ ಪದ್ಯದ ಅರ್ಥವಲ್ಲ. ನಾವು ಗ್ರಹಿಸಬೇಕಾಗಿರುವುದು ಕೂಡ ಪದ್ಯದ ಅರ್ಥವನ್ನಲ್ಲ; ಪದ್ಯದ ಅಂತರಾರ್ಥವನ್ನು! ಪದ್ಯದ ಅಂತರಾರ್ಥ ನಮಗೆ ದಕ್ಕಿತೋ ಆಗ ಪದ್ಯದ ಅರ್ಥ ನಮಗೆ ದಕ್ಕಿದಂತೆ.

ಮಹಾಕವಿ ರನ್ನನ ಈ ಪದ್ಯವು ಬರೀ ಶಬ್ದಸಂಬಂಧೀ ಸಂಯೋಗವಲ್ಲ;ಸಂಬಂಧ ಸೂಚೀ ಶಬ್ದಗಳ ಸಂಯೋಗ. ಈ ಸಂಯೋಗವಾದರೂ ಒಂದು ಮಹಾ ವಿಯೋಗವನ್ನು ವ್ಯಂಜಿಸಲಿಕ್ಕಾಗಿ. ಎಷ್ಟೆಲ್ಲ ಸಂಬಂಧಗಳು ಸಂಬಂಧದ ವಿಘಟನೆಗಾಗಿ ಈ ಪದ್ಯದಲ್ಲಿ ಸಂಘಟಿಸಿವೆ!

ಖಾಸಾ ಅಣ್ಣತಮ್ಮಂದಿರ ಸಂಬಂಧ (ನಿಜಾನುಜರ್); ದಾಯಾದಿಗಳ ಸಂಬಂಧ (ಕೌಂತೇಯರ್); ಸವತಿಯರ ಸಂಬಂಧ (ಕುಂತಿ ಮತ್ತು ಗಾಂಧಾರಿ). ದುರ್ಯೋಧನನ 99 ಮಂದಿ ಸಹೋದರರೂ ಈಗ ತೀರಿಹೋಗಿದ್ದಾರೆ. ಸಹಜ ಸಾವಲ್ಲ. ಅದೊಂದು ಭಯಂಕರವಾದ ಹತ್ಯಾಕಾಂಡ. ಕೊಂದವನು ದಾಯಾದಿ ಭೀಮ. ಗಾಂಧಾರಿಯ ಪಾಲಿಗೆ ಆ ಭೀಮ ತನ್ನ ಸವತಿಯ ಮಗ! ಈ ದುರಂತ ಸಂಭವಿಸಿರುವುದಾದರೂ ದುರ್ಯೋಧನನ ಹಠದಿಂದ. ಯುದ್ಧ ಬೇಡ; ಸಂಧಿ ಮಾಡಿಕೋ ಎಂದು ಇದೇ ತಾಯಿ ಅವನಿಗೆ ಸಾರಿ ಸಾರಿ ಹೇಳಿದ್ದಳಲವೇ? ಆದರೂ ತಾಯಿ ಮತ್ತು ಉಳಿದ ಹಿರಿಯರ ಮಾತನ್ನು ಉಲ್ಲಂಘಿಸಿ ದುರ್ಯೋಧನ ಸಂಗ್ರಾಮಕ್ಕೆ ತೊಡಗಿದನು.

ಅದರ ಫಲ ತನ್ನ ತಮ್ಮಂದಿರ ಸಾವು. ಆ ಹೊಣೆಗಾರಿಕೆಯ ಭಾರ ಈಗ ಅವನ ಹೆಗಲ ಮೇಲಿದೆ. ದಾರುಣವಾದ ಪಾಪ ಪ್ರಜ್ಞೆ ಅವನನ್ನು ಕಾಡುತ್ತಿದೆ. ಈ ಸಂದರ್ಭದಲ್ಲಿ ಯುದ್ಧ ಭೂಮಿಯಲ್ಲಿ ಗಾಂಧಾರಿ ತನ್ನನ್ನು ಅರಸಿಕೊಂಡುಬಂದಾಗ ಆಕೆಯೊಂದಿಗೆ ಮಾತಾಡಲು ಅವನು ತಯಾರಿಲ್ಲ. ನಿನ್ನ ತಮ್ಮಂದಿರು ಎಲ್ಲಿದ್ದಾರೆಂದು ತಾಯಿ ಕೇಳಿದರೆ ಆಕೆಗೆ ಏನೆಂದು ಉತ್ತರಕೊಡುವುದು? ನಿನ್ನ ಸವತಿಯ ಮಕ್ಕಳಾದ ಪಾಂಡವರು ಅವರನ್ನೆಲ್ಲಾ ಕೊಂದರೆಂದು ಯಾವ ಬಾಯಲ್ಲಿ ಹೇಳಬಹುದು? ಗಾಂಧಾರಿ ಆ ಪ್ರಶ್ನೆಯನ್ನು ಕೇಳಿಲ್ಲ. ಆದರೆ ಕೇಳಿದರೆ! ಎಂದು ದುರ್ಯೋಧನ ತಲ್ಲಣಿಸುತ್ತಿದ್ದಾನೆ.

seaಪದ್ಯದ ಶಬ್ದಸಂಯಮ ಗುರಿಯಿಟ್ಟು ಹೂಡಿದ ಶಬ್ದಾಸ್ತ್ರಗಳ ಸಂಕುಲದಂತಿದೆ. ದುರ್ಯೋಧನನಾದರೂ ಅದನ್ನು ತಾನೇ ಕಟ್ಟಿ, ತಾನೇ ಘಾಸಿಗೊಳ್ಳುತ್ತಿದ್ದಾನೆ! ಹೀಗೆ ಭಾಷಿಕವಾಗಿಯೂ ನಮ್ಮ ಘಾಸಿಯನ್ನು ನಾವೇ ನಿರ್ಮಿಸಿಕೊಳ್ಳುತ್ತೇವೆ. ಹೊಣೆಗಾರಿಕೆ ವಿಧಿಯ ಮೇಲೆ ಇಲ್ಲ. ಎಲ್ಲವೂ ಸ್ವಯಂ ಆಯ್ಕೆಯ ಫಲ. ಹಾಗಾಗಿಯೇ ಇಲ್ಲಿ ಅಸ್ತಿತ್ವವಾದದ ಘಾಟು ಕಾಣುತ್ತಿದೆ.

ಅನುನಾಸಿಕಗಳಿಂದ ಸಂಯೋಜಿತವಾಗಿರುವ ಪದ್ಯದ ತುಂಬ ಸಂಬಂಧಸೂಚೀ ಪದಗಳು. ಸಂದರ್ಭ ಆ ಸಂಬಂಧಗಳು ಛಿದ್ರಗೊಂಡಿರುವ ಸಂದರ್ಭ.

ತಾಯಿ-ಮಗನ ಪರಮಾಪ್ತ ಸಂಬಂಧದ ನೆಲೆಯಲ್ಲಿ ದುರ್ಯೋಧನ ವಿಘಟಿತ ಸಂಬಂಧವನ್ನು ಕುರಿತು ಚಿಂತಿಸಬೇಕಾದ ದುಃಸ್ಥಿತಿಗೆ ಒಳಗಾಗಿದ್ದಾನೆ. ಇಡೀ ದೃಶ್ಯವನ್ನು ತನ್ನ ಸಂಸಾರದ ಹೊರಗಿನ ಒಂದು ವ್ಯಕ್ತಿತ್ವ (ಸಂಜಯ) ಸಾಕ್ಷೀಪ್ರಜ್ಞೆಯಂತೆ ವೀಕ್ಷಿಸುತ್ತಾ ಇದೆ. ಹೇಗಿರಬೇಡ ಆಗ ದುರ್ಯೋಧನನ ಮನಃಸ್ಥಿತಿ?

ಆಯ್ದು ಆಯ್ದು ಕಟ್ಟಿದ ಕಂಬನಿಯ ಹರಳಂಥ ಶಬ್ದಗಳು. ಆ ಶಬ್ದಗಳ ಚಲನೆಯಾದರೂ ಏಕಾರ್ಥದಿಂದ ಅನಂತಾರ್ಥದ ಕಡೆಗೆ. ಭಾರವಾದ ಪದಗಳನ್ನು ತೂಗಿ ತೂಗಿ ಊರುತ್ತಾ ಪದ್ಯ ಚಲಿಸುತ್ತಾ ಇದೆ. ರಣರಂಗದಲ್ಲಿ ದುರ್ಯೋಧನನ ಪದಗತಿಯನ್ನೇ ಈ ಪದ್ಯದ ಪದಲಯವೂ ಅಭಿನಯಿಸುವಂತಿದೆ! ಭಾವಿಸಿ ಓದಿದಲ್ಲದೆ ಈ ಪದ್ಯದ ಅರ್ಥಭಾರವು ತನ್ನ ಎಲ್ಲ ವರ್ಣಪಟ್ಟಿಕೆಯೊಂದಿಗೆ ನಮ್ಮ ಎದುರು ಮೂರ್ತಗೊಳ್ಳಲಾರದು.

ನಾವು ಒಂದು ಪದ್ಯವನ್ನು ಹೀಗೆ ಸಾವಧಾನವಾಗಿ, ಶಬ್ದ ಶಬ್ದಗಳಲ್ಲಿ ಕಣ್ಣೂರಿ, ಅದರ ಹೆಜ್ಜೆಸಪ್ಪುಳಕ್ಕೆ ಕಿವಿಗೊಟ್ಟು, ತಾದಾತ್ಮ್ಯ ಭಾವದಿಂದ ಅಂತರಂಗದ ಸ್ವತ್ತಾಗಿ ಮಾಡಿಕೊಳ್ಳದೆ ಪದ್ಯದ ಕಾವ್ಯತ್ವದ ಸಂವೇದನೆಯು ಯಾವತ್ತೂ ನಮ್ಮದಾಗದು.

ಕಾವ್ಯವು ಅವಸರದ ಓದಿಗೆ ಯಾವತ್ತೂ ವಿಮುಖಿಯಾದುದು.

‍ಲೇಖಕರು Admin

September 29, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಿನೆಮಾಗಳು ತಯಾರಾಗುವುದೇ ಹೀಗೆ…

ಸಿನೆಮಾಗಳು ತಯಾರಾಗುವುದೇ ಹೀಗೆ…

ಮಂಸೋರೆ ಈಗ ಕನ್ನಡ ಚಿತ್ರ ರಂಗದ ಮಹತ್ವದ ಹೆಸರು. ತಮ್ಮ ಚೊಚ್ಚಲ ಚಿತ್ರ ‘ಹರಿವು’ ಮೂಲಕ ರಾಷ್ಟ್ರದ ಗಮನ ಸೆಳೆದ ಇವರು ‘ನಾತಿಚರಾಮಿ’ ಮೂಲಕ...

7 ಪ್ರತಿಕ್ರಿಯೆಗಳು

 1. S.p.vijaya Lakshmi

  ಭಾಷೆ, ಪದ, ಕವಿ, ಕಾವ್ಯ, ರಸಾನುಭವ, ರಸಗ್ರಹಣ…
  ಅಬ್ಬಾ, ಇವುಗಳನ್ನು ಓದುವಾಗ ನನಗೆ ಕಾಲೇಜಿನಲ್ಲಿ ಕೂತು ಕಾವ್ಯಪಾಠ ಕೇಳುತ್ತಿರುವಂಥ ಅನುಭವವಾಗುತ್ತಿದೆ…ಇಲ್ಲಿ ಮುಳುಗಿದರೆ ಮುಗಿದುಹೋಯಿತೇ, ಇನ್ನೊಂದುವಾರ ಕಾಯಬೇಕೆ ಎಂದು ಚಡಪಡಿಸುವಷ್ಟು ಮನೋಜ್ನವಾಗಿದೆ…
  ಇವು ಮತ್ತೂಮತ್ತೂ ಮನನಯೋಗ್ಯವಾದ ಬರಹ
  ಒಂದು ಪದ….ನಿರ್ದುಷ್ಟ….ನಿರ್ದಿಷ್ಟ…..
  ಯಾವುದು ಸರಿ….?

  ಪ್ರತಿಕ್ರಿಯೆ
 2. ಸುಧಾ ಚಿದಾನಂದಗೌಡ

  “ಆಯ್ದು ಆಯ್ದು ಕಟ್ಟಿದ ಕಂಬನಿಯ ಹರಳಂಥ ಶಬ್ದಗಳು…”

  ನಾವೇ ವಿದ್ಯಾರ್ಥಿಗಳಾಗಿ ಕಲಿಯುತ್ತ ಹನ್ನೆರಡನೆಯ ತರಗತಿಯ ಮಕ್ಕಳಿಗೆ ಈ ಶಬ್ದಗಳನ್ನು ಕಲಿಸಬೇಕಾಗಿ ಬಂದಾಗ..
  ನಮ್ಮ ಸ್ಥಿತಿ ಹೇಗಾಗಬೇಡ..!
  ಒಂದು ಸಂದರ್ಭ ಹೇಳಿಕೊಳ್ಳಬೇಕೆನಿಸುತ್ತಿದೆ ಸರ್..
  ಬೋರ್ಹೇಸ್ ರ ಪುಸ್ತಕಗಳ ಕುರಿತು ಹೇಳಿಕೊಂಡಿರುವ ಸಂದರ್ಶನ ರೂಪದ ಲೇಖನ..
  ಶಬ್ದಗಳ ಕುರಿತು ಹೇಳುತ್ತಾ ಆತ ಎಮಿಲಿ ಡಿಕನ್ ಸನ್ ಳ ಒಂದು ಸಾಲನ್ನು ಬಳಸಿಕೊಂಡಿದ್ದಾರೆ-

  “this precious dust is ladies and gentleman..”

  ಇಲ್ಲಿ dust ಎಂಬುದನ್ನು ಹೇಗೆ ಅರ್ಥಮಾಡಿಸಲಿ ವಿದ್ಯಾರ್ಥಿಗಳಿಗೆ..?
  ಹರೆಯದ ಹೃದಯಗಳೆದುರು ಸಾವಿನ ಬಗ್ಗೆ ಹೇಳುವುದು ಹೇಗೆ..?
  ತಲೆ ಓಡಿಸಿ…
  ” ನನ್ನ ದೇಹದ ಬೂದಿ ಗಾಳಿಯಲಿ ತೇಲಿಬಿಡಿ..
  ಹೋಗಿ ಬೀಳಲಿ ಭತ್ತ ಬೆಳೆಯುವಲ್ಲಿ…”
  ಎಂಬ ಪದ್ಯದ ಉದಾಹರಣೆ ಕೊಟ್ಟು ದೇಹದ ಬೂದಿಯನ್ನೂ..dust ನ್ನೂ ಸಮೀಕರಿಸಿ ವಿವರಿಸುತ್ತಿರುವಾಗ,,
  ಲಾಸ್ಟ ಬೆಂಚಿನ ಹುಡುಗಿಯೊಬ್ಬಳು ಎದ್ದುನಿಂತು..
  “ಮ್ಯಾಮ್, ಮತ್ತೆ ಮೊನ್ನೆ farmer’s wife ಪದ್ಯ ಮಾಡೋವಾಗ ಭತ್ತ ಬೆಳೆಯೋ ರೈತರು ಸೂಯಿಸೈಡ್ ಮಾಡ್ಕೋತಿದಾರೆ ಅಂತ ಹೇಳಿದ್ರೆಲ್ಲಾ ನೀವೇ..ಮತ್ತ ಬೂದಿ ಅಲ್ಯಾಕೆ ಹೋಗಿ ಬೀಳಬೇಕು ಮ್ಯಾಮ್..?” ಎಂದಳು..
  ಮೇಡಮ್ಮಳ ಬೋಲ್ತೀ ಬಂದ್..
  ಏನೋ ಹೇಳಿ ಕ್ಲಾಸು ಮುಗಿಸಿದ್ದು ಬೇರೆ ವಿಷಯ..
  ಆದರೆ.. ಅಲ್ಲಿ ಕಾಡಿದ್ದು ಇಂತವೇ..
  ಆಯ್ದು ಆಯ್ದು ಕಟ್ಟಿದ ಕಂಬನಿಯ ಹರಳಂಥ ಶಬ್ದಗಳು…

  ಪ್ರತಿಕ್ರಿಯೆ
 3. Sarojini Padasalagi

  ಎಷ್ಟು ಸುಂದರ ಅನುಭೂತಿ ಉಂಟು ಮಾಡುವ ಪದ ವಿನ್ಯಾಸ !! ಈ ಲೇಖನ ಓದುವುದೇ ಒಂದು ಕಾವ್ಯದ ರಸ ಆಸ್ವಾದನೆ ಮಾಡಿದಂತಿದೆ . ಗದ್ಯದಂತೆ ಪದ್ಯದಲ್ಲಿ ಸರಳ ನಿರೂಪಣೆ ಇರೋದಿಲ್ಲವೇನೋ .ಅದರ ಒಳ ಹೊಕ್ಕು ಅದರಲ್ಲಿ ಒಂದಾಗಿ ಅದರ ಒಳಾರ್ಥ ಹುಡುಕಿದಾಗ ಅದರ ರುಚಿ ಗೊತ್ತಾದೀತು .ಒಂದು ಕವಿತೆಯನ್ನು ನೂರು ಥರ ,ಅದರ ಮೂಲಾರ್ಥಕ್ಕೆ ಧಕ್ಕೆ ಬರದಂತೆ ಅರ್ಥೈಸಬಹುದೇನೋ ಎಂಬನಿಸಿಕೆ .ಈ ತಾವರೆಯ ಬಾಗಿಲು ನೂರೆಂಟು ವಿಷಯಗಳನ್ನು ನವಿರಾಗಿ ಬಿಡಿಸಿಡುವ ಪರಿ ಮನ ಮುಟ್ಟಿ ಎದೆಯ ಕದ ತಟ್ಟಿ ದಾರಿ ಕಾಯ ಹಚ್ಚುತ್ತದೆ .

  ಪ್ರತಿಕ್ರಿಯೆ
 4. Anonymous

  ವಿದ್ವತ್ಪೂರ್ಣ ಚಂದದ ಬರಹ. ಎಚ್ಚೆಸ್ವಿ ಹಾಗೂ ಅವಧಿಗೆ ಧನ್ಯವಾದಗಳು.
  ಒಂದು ಸಂದೇಹ…. ಗಾಂಧಾರಿ ಹಾಗು ಕುಂತಿ ಹೇಗೆ ಸವತಿಯರಾಗುತ್ತಾರೆ? ಅವರು ಓರಗಿತ್ತಿಯರಷ್ಟೇ …

  ಪ್ರತಿಕ್ರಿಯೆ
 5. C P Nagaraja

  ಮಾನ್ಯಶ್ರೀ ವೆಂಕಟೇಶಮೂರ್ತಿಯವರಿಗೆ ನಮಸ್ಕಾರಗಳು.
  ನಿಮ್ಮ ವಿಶ್ಲೇಷಣೆ ತುಂಬಾ ಚೆನ್ನಾಗಿದೆ. ಸಹೃದಯರ ಮನದಲ್ಲಿ ಕಾವ್ಯವನ್ನು ಓದುವಾಗ ಉಂಟಾಗುವ ಒಳಮಿಡಿತಗಳಿಗೆ ಕಾವ್ಯದಲ್ಲಿನ ನುಡಿಸಾಮಗ್ರಿಗಳು ಹೇಗೆ ಪೂರಕವಾಗುತ್ತವೆ ಎಂಬುದನ್ನು ಚೆನ್ನಾಗಿ ತಿಳಿಸಿದ್ದೀರಿ. ಆದರೆ ಒಂದು ಕಡೆ ನೀವು ಕೊಟ್ಟಿರುವ ವಿವರಣೆಯನ್ನು ನಿಮ್ಮ ಗಮನಕ್ಕೆ ತರಲು ಇಚ್ಛಿಸುತ್ತೇನೆ .
  ಸವತಿಯರ ಸಂಬಂಧ (ಕುಂತಿ ಮತ್ತು ಗಾಂಧಾರಿ)…..ನಿನ್ನ ಸವತಿಯ ಮಕ್ಕಳಾದ ಪಾಂಡವರು ಅವರನ್ನೆಲ್ಲಾ ಕೊಂದರೆಂದು ಯಾವ ಬಾಯಲ್ಲಿ ಹೇಳಬಹುದು? – ಎಂದು ನಿಮ್ಮ ವ್ಯಾಖ್ಯಾನದಲ್ಲಿದೆ. ಅಣ್ಣ-ತಮ್ಮಂದಿರ ಹೆಂಡತಿಯರನ್ನು ಪರಸ್ಪರ ” ಓರಗಿತ್ತಿಯರು ” ಎಂಬ ಸಂಬಂಧಸೂಚಕ ಪದದಿಂದ ಕರೆಯುತ್ತಾರೆ. ಇದು ಕಣ್ತಪ್ಪಿನಿಂದ ಆಗಿರಬಹುದೆಂದು ಭಾವಿಸಿದ್ದೇನೆ. ಇದನ್ನು ಮತ್ತೊಮ್ಮೆ ಪರಿಶೀಲಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.
  ಸಿ ಪಿ ನಾಗರಾಜ , ಬೆಂಗಳೂರು

  ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ C P NagarajaCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: