ಎಡೆಯೂರು ಪಲ್ಲವಿ ಅವರು ಮಕ್ಕಳಿಗಾಗಿ ಬರೆದ ಕಥಾ ಸಂಕಲನ ಇಂದು ಬಿಡುಗಡೆಯಾಗುತ್ತಿದೆ.
‘ಭೂಮ್ತಾಯಿ ಅಜ್ಜಿ ಆದ್ಲಾ’ ಕೃತಿಗೆ ಅವರು ಬರೆದ ನುಡಿ ಇಲ್ಲಿದೆ

ಎಡೆಯೂರು ಪಲ್ಲವಿ
ನನ್ನ ತಲೆಯಲ್ಲಿ ಈಗಲೂ ಕುಳಿತಿರುವ, ಪ್ರಬಾವ ಬೀರಿದ ಪಠ್ಯಗಳೆಂದರೆ ಐದನೇ ತರಗತಿಯ `ನಾವು ಎಳೆಯರು ನಾವು ಗೆಳೆಯರು’, `ತಿರುಕನ ಕನಸು’. ಹಾಗೇ ಏಳನೇ ತರಗತಿಯಲ್ಲಿ `ತಿಳಿಮುಗಿಲ ತೊಟ್ಟಿಲಲಿ ಮಲಗಿದ್ದ ಚಂದಿರನ’ ಕವಿತೆ. ನನ್ನ ಮನದಾಳದಲ್ಲಿ ಈ ಪದ್ಯ ಇಂದಿಗೂ ಶಾಶ್ವತವಾಗಿ ನೆಲೆಸಲು ಕಾರಣ ಅದನ್ನು ರಾಗವಾಗಿ ಮಕ್ಕಳ ಹೃದಯಕ್ಕೆ ಮುಟ್ಟುವಂತೆ ಲವಲವಿಕೆಯಿಂದ ವಿವರಿಸಿದ್ದ ವೈ. ಎಸ್. ಹನುಮಂತಯ್ಯ ಸರ್. ಅವರ ಕ್ಲಾಸ್ ಎಂದರೆ ನಾನಂತೂ ಕಾದು ಕುಳಿತುಕೊಳ್ಳುತ್ತಿದ್ದೆ. ಎಂತಹುದೇ ನೀರಸ ಪಾಠವನ್ನಾದರೂ ಮಕ್ಕಳಿಗೆ ಮನಮುಟ್ಟುವಂತೆ ಹೇಳುತ್ತಿದ್ದ ಅವರ ಜ್ಞಾನ ಭಂಡಾರ ನನಗೊಂದು ಕೌತುಕ.
ನಮ್ಮ ಸೀನಿಯರ್ಗಳ ಬಾಯಲ್ಲಿ ಹೊಗಳಿಸಿಕೊಂಡ ‘ಹುಗ್ಗಿ ತುಪ್ಪ’ದ ಪಾಠವನ್ನು ಸುಮಾರು ಒಂದು ವಾರಗಳ ಕಾಲ ವಿಸ್ತರಿಸುತ್ತಾ, ಮನರಂಜಿಸಿ ನಕ್ಕು ನಗಿಸಿದ್ದರು ಅವರು. ಅವರನ್ನೀಗಲೂ ನೆನೆಯುತ್ತೇನೆ. ವಿಪರ್ಯಾಸ ಎಂದರೆ ಮುಂದೆ ಪ್ರೌಢ ಶಿಕ್ಷಣವನ್ನು ಇಂಗ್ಲೀಷ್ ಮೀಡಿಯಂನಲ್ಲಿ ಪಡೆಯುವಾಗ ಇಂತಹ ಒಬ್ಬ ಮೇಷ್ಟ್ರನ್ನು ನಾನು ಕಾಣಲೇ ಇಲ್ಲ. ನನ್ನ ನಗು ಮಾಯವಾಗಿ ಇಂಗ್ಲಿಷ್ ಎಂಬ ಅನ್ಯಭಾಷೆ ನಿರ್ದಯಿಯಾಗಿ ನಮ್ಮೆದುರು ನಿಂತು ವಿಕಸನವು ಮೊಟಕುಗೊಂಡಿತ್ತು. ಈ ಕಾರಣವಾಗಿಯೇ ಬಹುಶಃ ನಮ್ಮೊಳಗೊಬ್ಬ ಕತೆಗಾರ್ತಿ, ಬರಹಗಾರ್ತಿ ಅಥವಾ ಮತ್ತಿತರ ಕಲಾ ಪ್ರತಿಭೆಯ ವಿಕಾಸ ಸಾಧ್ಯವಾಗುವುದು ಶಿಕ್ಷಣವನ್ನು ನಮ್ಮ ಮಾತೃ ಭಾಷೆಯಲ್ಲಿ ಕಲಿತಾಗ ಮಾತ್ರ. ಏಕೆಂದರೆ ಎಂಟನೇ ತರಗತಿ ನಂತರದ ಪಾಠಗಳಾವವೂ ನನ್ನನ್ನು ಕಾಡಿದ್ದಿಲ್ಲ.
ಆಗ ತಾನೇ ದೃಶ್ಯ ಮಾಧ್ಯಮ ಹೆಜ್ಜೆ ಇಡುತ್ತಿದ್ದ ಕಾಲಘಟ್ಟದಲ್ಲಿ ನಾನು ಕತೆಗಾಗಿ ವಿಜಯ ಕರ್ನಾಟಕ ಹಾಗೂ ಪ್ರಜಾವಾಣಿಯ ಭಾನುವಾರದ ಸಂಚಿಕೆಯನ್ನು ಮಾತ್ರ ಕೊಂಡು ಓದುತ್ತಿದ್ದೆ ಹಾಗೂ ಆ ಒಂದು ಭಾನುವಾರದ ಕತೆಗಳಿಗಾಗಿ, ಬರಹಗಳಿಗಾಗಿ ಇಡೀ ಆರು ದಿನ ಕಾಯುತ್ತಿದ್ದೆ. ಈಗೆಲ್ಲಾ ಬೆರಳ ತುದಿಯಲ್ಲಿ ಕತೆಗಳೊಂದಿಗೆ ಎಲ್ಲಾ ಮಾಹಿತಿಯೂ ಸಿಕ್ಕಿಬಿಡುತ್ತದೆ. ಬೌದ್ಧಿಕ ವಿಕಸನದ ಹಾದಿಗೆ ಈಗಿರುವಷ್ಟು ಪರಿಕರಗಳು ನಮಗೆ ದಕ್ಕಲಿಲ್ಲವಲ್ಲಾ ಎಂಬ ನೋವು ಈಗಲೂ ನನ್ನನ್ನು ಕಾಡುತ್ತದೆ.
ಕೂಡು ಕುಟುಂಬದ ಹುಡುಗಿಯಾಗಿ ಬೆಳೆದ ನಾನು ಆಟಕ್ಕೂ ಹೊರಗೆ ಹೋಗುವಂತೆ ಇರಲಿಲ್ಲ. ಬಹುಶಃ ಈ ನೋವು ಹಾಗೂ ಒಂಟಿತನವನ್ನು ನೀಗಲು ನನ್ನೊಳಗೆ ಕತೆಗಾರ್ತಿ ರೂಪುಗೊಳ್ಳಲು ಕಾರಣವಾಯಿತು ಎನಿಸುತ್ತದೆ. ಏನನ್ನೋ ಹೇಳುವ ಹಂಬಲ, ಮಾತನಾಡಲಾಗದ್ದನ್ನು, ಹೇಳಲಾಗದ್ದನ್ನು ಬರೆದಿಡುವ ತುಡಿತ ಇಂದು ಮಕ್ಕಳ ಕತೆಯಾಗಿ ಸಾಗಿ ಬಂದಿವೆ.

ನನ್ನೆಲ್ಲಾ ಕತೆಗಳೂ ಪತ್ರಿಕೆಗಳಲ್ಲಿ ಪ್ರಕಟವಾದಾಗ ಬೆನ್ನು ತಟ್ಟಿ ಪ್ರೋತ್ಸಾಹಿದವರು ಅಪ್ಪ. ನಮ್ಮ ಕುಟುಂಬವನ್ನು ಪೊರೆಯಲು ದೂರ ರಾಜ್ಯಗಳಲ್ಲಿ ಚಳಿ, ಬಿಸಿಲು, ಮಳೆಯಲ್ಲಿ ನಿಂತು ದೇಶ ಹಾಗೂ ನಮ್ಮನ್ನೂ ಕಾಯ್ದ ವೀರಯೋಧ ಅಪ್ಪನನ್ನೂ, ಹಾಗೇ ಅಪ್ಪ ದೂರವಿದ್ದಾಗ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಅನೇಕ ಮಕ್ಕಳಿಗೆ ಪಾಠ ಹೇಳುತ್ತಾ ನಮ್ಮನ್ನು ಜಾಗರೂಕತೆಯಿಂದ ದಡ ಸೇರಿಸಿ ಎರಡೂ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಅಮ್ಮನನ್ನೂ ನೆನೆಯದೆ ನನ್ನ ಪುಟ ಮುಂದೆ ಸಾಗುವುದಾದರೂ ಹೇಗೆ?. ಲವ್ಯೂ ಡ್ಯಾಡ್, ಲವ್ಯೂ ಅಮ್ಮ.
ನಾನು ಬರೆದ ಕಥೆಗಳಿಗೆ ಹಲವು ಸಲಹೆ ನೀಡಿ, ತಿದ್ದುಪಡಿ ಮಾಡಿಸಿ, ಉತ್ತಮ ಮಾರ್ಗದರ್ಶನ ನೀಡಿ ಈ ಕೃತಿಯ ಅಂದವನ್ನು ಹೆಚ್ಚಿಸಿದ ನನ್ನಿಷ್ಟದ ವಿಜ್ಞಾನ ಬರಹಗಾರ ಡಾ|| ನಾಗೇಶ್ ಹೆಗಡೆ ಅವರಿಗೆ ಪ್ರೀತಿಯ ಗೌರವ ಪೂರ್ವಕ ನಮನಗಳು. ಬದುಕಿಗೆ ಅನೇಕ ತಿರುವುಗಳು ಸಿಗುತ್ತವೆ ಆದರೆ ಕೆಲವು ಮಾತ್ರ ಪ್ರಾಮುಖ್ಯತೆ ವಹಿಸುತ್ತವೆ. ನಾನು ಬುಕ್ ಬ್ರಹ್ಮಕ್ಕೆ ಸೇರಿದಲ್ಲಿ ಸಿಕ್ಕವರಲ್ಲಿ ಇಬ್ಬರು. ನನ್ನ ಈ ಕೃತಿಗೆ ಪ್ರೀತಿಯಿಂದ ಬೆನ್ನುಡಿ ಬರೆದ ಗುರುಗಳಾದ ಸತೀಶ್ ಚಪ್ಪರಿಕೆ ಅವರಿಗೆ ಹಾಗೂ ಬದುಕಿನ ಏರುಪೇರಿನ ಪ್ರತಿ ಹಂತದಲ್ಲೂ ಪೊರೆಯುತ್ತಿರುವ ಅಪ್ಪನಂತಹ ಮೇಷ್ಟ್ರು ದೇವು ಪತ್ತಾರ್ ಅವರಿಗೆ ಒಲವನ್ನಲ್ಲದೆ ಮತ್ತೇನನ್ನು ನೀಡಲಿ?.
ಈ ಪಯಣದಲ್ಲಿ ಅನೇಕ ಸಲಹೆಯನ್ನು ನೀಡುತ್ತಾ ಬಂದ ಹನುಮಂತ ಹಾಲಿಗೇರಿ, ಕೇಶವ ಮಳಗಿ, ಟಿ. ಎಸ್. ಗೊರವರ ಅವರನ್ನೂ ನೆನಯದೆ ಇರಲಾರೆ. “ಚಿತ್ರ ಬಿಡಿಸಿಕೊಡಿ ಸರ್” ಎಂದಾಕ್ಷಣ ಒಪ್ಪಿ ಮಕ್ಕಳ ಮನಸ್ಸಿಗೆ ಮುದ ನೀಡುವಂತಹ ಸುಂದರ ಕಲಾಕೃತಿ ರಚಿಸಿಕೊಟ್ಟ ಗುಜ್ಜಾರ್ ಸರ್ ಅವರನ್ನು ನೆನೆಯುತ್ತೇನೆ.
ಕೃತಿಯನ್ನು ಪ್ರಕಟಿಸುತ್ತಿರುವ ವಸಂತ ಪ್ರಕಾಶನ, ಈ ಹಾದಿಯಲ್ಲಿ ಜೊತೆಯಾದ ಗೆಳತಿ ಶೃತಿ ಬಿ. ಆರ್., ದಾದಾಪೀರ್ ಜೈಮನ್ ಹಾಗೂ ಪುಸ್ತಕ ಪ್ರಕಟಣೆಗೆ ಅನೇಕ ಸಲಹೆ ನೀಡುತ್ತಲೇ ಬಂದ ಮೇಷ್ಟು ಸೋಮು ಕುದರಿಹಾಳ, ಬರಹಗಾರರಾದ ರಾಮಕೃಷ್ಣ ಸುಗತ, ವಿದ್ಯಾರಶ್ಮಿ ಪೆಲತ್ತಡ್ಕ, ನೇತ್ರಾ ಸಾಗರ್, ವೀರೇಶ ಹೊಗೆಸೊಪ್ಪಿನವರ್, ಮತ್ತೂರು ಸುಬ್ಬಣ್ಣ, ಕಾವ್ಯಾ ಸಮತಳ, ಶಂಕರ್ ಸಿಹಿಮೊಗೆ, ಅವರಿಗೆ ನನ್ನ ಧನ್ಯವಾದಗಳು. ಇಲ್ಲಿನ ಎಲ್ಲಾ ಕತೆಗಳು ಕನ್ನಡ ದಿನಪತ್ರಿಕೆಗಳಾದ ಪ್ರಜಾವಾಣಿ, ವಿಜಯ ಕರ್ನಾಟಕ, ಉದಯವಾಣಿ ಹಾಗೂ ಮಾಸ ಪತ್ರಿಕೆಯಾದ ಬಾಲ ಮಂಗಳದಲ್ಲಿ ಪ್ರಕಟವಾಗಿದೆ. ಈ ಎಲ್ಲಾ ಸಂಪಾದಕರಿಗೂ ನನ್ನ ಹೃತ್ಪೂರ್ವಕ ವಂದನೆಗಳು.
ನಡೆವ ಹಾದಿಯಲ್ಲಿ ಗೊತ್ತಿಲ್ಲದೆ ಎಡವಿದ ಹಾಗೆ ಇಲ್ಲಿಯೂ ಸಣ್ಣ ಪುಟ್ಟ ತಪ್ಪುಗಳು ನನ್ನ ಕಣ್ಣು ತಪ್ಪಿರಬಹುದು. ಆ ತಪ್ಪು ನಿಮ್ಮ ಗಮನಕ್ಕೆ ಬಂದರೆ ಮನ್ನಿಸಿ ಮುಂದೆ ಹೋಗುವ ಮುನ್ನ ನನಗೆ ತಿಳಿಸಿ. ಕತೆ ಓದುವ ರಂಗಿನ ಪುಟಾಣಿ ಕಣ್ಣುಗಳಿಗೆ ಪ್ರೀತಿಯ ಮುತ್ತುಗಳು. ಈ ಕಥೆಗಳನ್ನು ಓದಿ ನಿಮ್ಮ ಅನಿಸಿಕೆಗಳನ್ನು ತಪ್ಪದೆ ಬರೆಯಿರಿ.
ಪ್ರೀತಿಯಿಂದ
ಎಡೆಯೂರು ಪಲ್ಲವಿ
0 ಪ್ರತಿಕ್ರಿಯೆಗಳು