ಎದೆ ಕಮಲ ಬಾಡದಿರಲಿ…

-ನವೋಮಿ

…ನಿಮ್ಮ ಮನೆಯಲ್ಲಿ ಯಾರಿಗಾದರೂ ಬ್ರೆಸ್ಟ್ ಕ್ಯಾನ್ಸರ್ ಇದೆಯಾ?
ತೀರಾ ಅನಿರೀಕ್ಷಿತ ಪ್ರಶ್ನೆಗೆ ಬೆಚ್ಚಿಬಿದ್ದೆ. ಕಾಲುಗಳಲ್ಲಿ ನಡುಕ. ಒಂದೆಡೆ ಅವಳಿಗೆ ಎರಡು ಬಿಗಿದು ಬಿಡುವಷ್ಟು ಕೋಪ ಬಂದರೆ, ಇನ್ನೊಂದೆಡೆ ಅವಳು ಆ ರೀತಿ ಟೆಸ್ಟ್ ಮಾಡಿದ್ದಕ್ಕೋ ಏನೋ ತೀವ್ರ ಎದೆನೋವು ಶುರುವಾಗಿತ್ತು.
ಮೇಡಂ ಯಾಕೆ ಹಾಗೆ ಕೇಳಿದ್ರಿ
ನನ್ನ ಪ್ರ್ನಶ್ನೆಗೆ ಉತ್ತರಿಸುವ ಅಗತ್ಯ ಕಂಡುಬರಲಿಲ್ಲ ಏನೋ.
ಡಾ.ಸೋ ಎಂಡ್ ಸೋ ಇದ್ದಾರೆ.ಅವರನ್ನು ಕಾಣಿ
ಅವಳಿಂದ ಬಂದ ಉತ್ತರ ಇಷ್ಟೇ.
ಇದೇನಪ್ಪಾ ಹೊರಗೆ ಬಂದೆ. ಒಂದು ಕ್ಷಣ ನನ್ನ ಜೀವನವೇ ಬದಲಾದಂತೆ ಕಂಡು ಬಂತು. ಒಬ್ಬಳೇ ಬೇರೆ ಬಂದಿದ್ದೇನೆ. ಯಾರಿಗೆ ಹೇಳಲಿ.ಅಲ್ಲೇ ಕಟ್ಟೆ ಮೇಲೆ ಕುಳಿತೆ.ಅವಳ ಆ ಸ್ಟೇಟ್ಮೆಂಟ್ ಗೆ ನನಗೆ ಅಳೋದು ಕೂಡ ಮರೆತುಹೋಯಿತೆನೋ.
ನನಗೆ ನಾನೇ ಸಮಾಧಾನ ಪಡಿಸಿದೆ.ಸಂತೈಸಿಕೊಂಡೆ. ಏನಾಗಿರಲಿಕ್ಕಿಲ್ಲ ಬಿಡು.
ಆದ್ರೂ…ನನಗೆ ಬ್ರೆಸ್ಟ್ ಕ್ಯಾನ್ಸರಾ
ನೋ…ವೇ.. ಒಂದು ವೇಳೆ ಆದರೆ…ಅರೆ ಏನು ಮಾಡಲಿ. ಏನೇನೋ ನೆನಪಾಯ್ತು. ಬ್ರೆಸ್ಟ್ ಕ್ಯಾನ್ಸರ್ ಆದ್ರೆ ಸಾಮಾನ್ಯವಾಗಿ ಬ್ರೆಸ್ಟ್ ತೆಗೆದುಬಿಡ್ತಾರೆ. ನಾನೇ ಒಮ್ಮೆ ಸ್ಟೋರಿ ಮಾಡಿದ್ನಲ್ವಾ. ಕಿಮೋಥೆರಪಿ ತುಂಬಾ ಭಯಂಕರ ಅಂಥ ರೋಗಿಯೊಬ್ಬರು ಹೇಳಿದ್ದು ನೆನಪಾಯ್ತು. ತಲೆಗೂದಲು ಇರೊಲ್ಲ. ಒಟ್ಟಾರೆ ನಮ್ಮ ಬದುಕು ಅರ್ಥಾತ್ ಇನ್ನು ಮುಂದೆ ನನ್ನ ಬದುಕು ಅಕ್ಕಪಕ್ಕದವರ ಥರ ಇರಲ್ಲ. ಇವನ್ನೆಲ್ಲ ನೆನಪಿಸಿಕೊಂಡೇ ಬೆವರಿದೆ.
ಅರ್ಧ ಘಂಟೆ ಮಂಕಾಗಿ ಕುಳಿತ ನನಗೆ ಎಂದೂ ಇಲ್ಲದ ದೇವರ ಮೇಲೆ ಪ್ರೀತಿ ಉಕ್ಕತೊಡಗಿದ್ದು ನನ್ನ ಹತಾಶ ಪರಿಸ್ಥಿತಿಯನ್ನು ನೆನಪಿಸತೊಡಗಿತ್ತು. ಹೇಳಿ ಕೇಳಿ ದೊಡ್ಡ ಖಾಸಗಿ ಆಸ್ಪತ್ರೆ.

ಏನಕ್ಕೂ ಇರಲಿ ಅಂಥ ವಾಲಂಟರಿಯಾಗಿ ಸುಮ್ಮನೆ ರೂಟಿನ್ ಹೆಲ್ತ್ ಚೆಕ್ ಅಪ್ಗೆ ಬಂದರೆ ಹೀಗೆ ಅಂದು ಬಿಟ್ಟಳಲ್ಲಾ ಮಾರಾಯ್ತಿ. ಇವಳ್ಯಾವಳೋ ಕೆಲಸಕ್ಕೆ ಬಾರದ ಡಾಕ್ಟರ್ ಇರಬೇಕು ಎಂದುಕೊಂಡು ಮತ್ತೆ ನನಗೆ ನಾನು ಸಂತೈಸಿಕೊಂಡೆ.ಅದ್ಯಾರೋ ಡಾಕ್ಟರ್ ಅಂದಳಲ್ಲಾ ಅಲ್ಲೇ ಹೋಗೋಣ ಅಂಥ ಹೋದೆ.
ಕೊನೆಗೂ ಆ ಡಾಕ್ಟರ್ ಸಿಕ್ಕ
ಏನು ಮಾಡ್ತಿದ್ದೀರಿ
ಜರ್ನಲಿಸ್ಟ್ ಅಂದೆ.
ಓಳ್ಳೇ ವ್ಯಕ್ತಿ.ಆ ಲೇಡಿ ಡಾಕ್ಟರ್ಗಿಂತ ಪರವಾಗಿಲ್ಲ.
ನೀವು ನ್ಯೂಸ್ ಮಾಡೋದು ಬಿಟ್ಟು ಇಲ್ಲಿಗೆ ಬಂದ್ರೆ ಹೇಗೆ ಮೇಡಂ.
ಅವರು ನಕ್ಕಾಗ ನಾನು ಕಷ್ಟಪಟ್ಟು ನಕ್ಕೆ.
ಸರಿ ಇನ್ನೇನೂ ಮತ್ತೆ ಮೇಲುಡುಪು ಬಿಚ್ಚಬೇಕಲ್ಲ.ಕಣ್ಮುಚ್ಚಿಕೊಂಡೆ.ಎಷ್ಟು ವಿಚಿತ್ರ ಈ ಜನ್ಮ.ಟೆಸ್ಟ್ ಆಯಿತು.
ನಥಿಂಗ್ ಟು ವರಿ.ಅಂಥದ್ದೇನೂ ಆಗಿಲ್ಲ ಬಿಡಿ. ಏನಕ್ಕೂ ಆಂಕಾಲಜಿ ಟೆಸ್ಟ್ ಆಗಲಿ ಎಂದರು.
ಅಷ್ಟೇ ಸಾಕೆನಿಸಿ ಅಲ್ಲಿಂದ ಧಾವಿಸಿದೆ. ಆಂಕಾಲಜಿ ಎಂಬುದು ಬ್ರೆಸ್ಟ್ ಕ್ಯಾನರ್ ಸಂಬಂಧಿಸಿದ್ದು ಎನ್ನುವುದು ನನಗೂ ಗೊತ್ತಿದೆ. ಆದರೆ ನನಗೇಕೆ ಈ ಟೆಸ್ಟ್.ಸುಮ್ಮನೆ ಸೇಫರ್ ಸೈಡ್ಗೇನೋ.ನನ್ನನ್ನು ಸಮಾಧಾನಿಸಿಕೊಳ್ಳುವುದು ಮುಂದುವರಿದಿತ್ತು.
ಅಲ್ಲಿಂದ ಅದ್ಯಾರೋ ನರ್ಸ್ ನನ್ನನ್ನು ಕತ್ತಲೆ ರೂಮಿಗೆ ಕರೆದೊಯ್ದಳು.ಆಂಕಾಲಜಿ ಟೆಸ್ಟ್ ಗಂತೆ. ಅಲ್ಲಿ, ಸತ್ತು ಹೋಗುವಷ್ಟು ನೋವು. ಎದೆಮೇಲೆ ಕಲ್ಲು ಎತ್ತಿ ಹಾಕಿದಷ್ಟು ಸಂಕಟ.ಎಲ್ಲೋ ಕಳೆದುಹೋಗಿದ್ದ ಕಣ್ಣೀರು ಇದ್ದಕ್ಕಿದ್ದಂತೆ ಮುಖ ಮೂತಿ ಒದ್ದೆ ಮಾಡಿತ್ತು. ಅದಾದ ನಂತರ ಒಂದರ ಮೇಲೊಂದು ಟೆಸ್ಟ್. ಏನೋ ಆಗಿದ್ದಂತೂ ಹೌದು. ನಂತರ ಅಲ್ಟ್ರಾಸೌಂಡ್. ಸೋತುಹೋದೆ ಅನ್ನಿಸಿತು ಇದ್ದಕ್ಕಿದ್ದಂತೆ ಆ ಪುಣ್ಯಾತ್ಮಗಿತ್ತಿ ನಥಿಂಗ್ ಕ್ಯಾನ್ಸರಸ್ ಅಂದಳು. ಎಲ್ಲೋ ಏನೋ ಕೇಳಿದಂತಾಗಿ ಮತ್ತೆ ಬೆಚ್ಚಿ ಬಿದ್ದೆ.ಅವಳನ್ನೊಮ್ಮೆ ನೋಡಿದೆ. ನನ್ನ ಕಣ್ಣಲ್ಲಿ ಕಂಡ ಧನ್ಯತಾಭಾವಕ್ಕೆ ಪ್ರತಿಯಾಗಿ ಯು ಆರ್ ಎ ಜರ್ನಲಿಸ್ಟ್.ನಿಮ್ಮಂಥೋರೆ ಇಷ್ಟು ಬೆಚ್ಚಿ ಬಿದ್ದರೆ ಹೇಗೆ ಅಂದಳು.
ಜರ್ನಲಿಸ್ಟ್ ಮನುಷ್ಯರಲ್ವಾ. ಸದ್ಯ ಏನೂ ಇಲ್ಲ ಅಂದೆಯಲ್ಲ ಅಂಥ ಮನಸ್ಸಲ್ಲೇ ಥ್ಯಾಂಕ್ಸ್ ಹೇಳಿ ಅಲ್ಲಿಂದ ಕಂಬಿ ಕಿತ್ತೆ.
ಮೈಮನ ಹಗುರಾಗಿತ್ತು.ಇನ್ನು ಕೊನೆಯ ರಿಪೋರ್ಟ್ ಗಾಗಿ ಕಾದು ಕುಳಿತೆ.
ಸರದಿ ಬಂದಾಗ ಒಳಗೆ ಹೋದೆ.ಡಾಕ್ಟರ್ ತಾತ.
ನೀವು ಎಲ್ಲದರಲ್ಲೂ ಫಿಟ್ ಅಂಡ್ ಫೈನ್.ಆದರೆ ಲೋ ಬಿಪಿ ಇದೆ. ಲೋ ಬಿಪಿ ಇರೋರು ಹೆಚ್ಚು ವರ್ಷ ಬದುಕುತ್ತಾರೆ.ಸೈಂಟಿಫಿಕಲಿ ಪ್ರೂವ್ ಆಗಿದೆ ಗೊತ್ತಾ ಅಂದ ತಾತ.
ಸರಿ ಅಂದೆ.
ಕೊನೆಯಲ್ಲಿ ಲೆಫ್ಟ ಬ್ರೆಸ್ಟ್ ನಲ್ಲಿ ಫ್ರೈಬ್ರಾಯಿಡಿಸಂ ಇದೆ. ಭಯಪಟ್ಕೊಳ್ಳುವಂಥದ್ೇನಿಲ್ಲ. ಇಟ್ಸ್ ಎ ಬೈನೈನ್ ಫೈಂಡಿಂಗ್. ಸಣ್ಣ ಸಣ್ಣ ಸಿಸ್ಟ್್ಗಳಿವೆ. ದಿಸ್ ಇಸ್ ಟೂ ಕಾಮನ್. ವರ್ಷ ಬಿಟ್ಟು ಬನ್ನಿ. ಆಂಕಾಲಜಿ ಟೆಸ್ಟ್ ಮಾಡಿಸೋಣ.
ಏಲ್ಲೋ ಒಂದು ಕಡೆ ಎಲ್ಲವೂ ಸರಿಯಾಗಿಲ್ಲ ಅನಿಸಿತು.ಒಬ್ಬೊಬ್ಬರು ಒಂದು ರೀತಿ ಹೇಳುತ್ತಿದ್ದಾರೆ.ಇದೇನಿದು. ದಾರಿಗುಂಟ ಬರಿ ಲೆಕ್ಕಾಚಾರ.ಆರಂಭದಲ್ಲಿ ಅವಳು ಹೇಳಿದ್ದು ಯಾರಿಗಾದ್ರೂ ಕ್ಯಾನ್ಸರ್ ಇದೆಯಾ ಅಂತ.ನಂತರ ಮತ್ತೊಬ್ಬರು ಹೇಳಿದ್ದು ಅಂತದ್ದೇನಿಲ್ಲ. ನಥಿಂಗ್ ಕ್ಯಾನ್ಸರಸ್ ಅಂಥ ಅಲ್ಟ್ರಾಸೌಂಡ್ ಮಾಡಿದ ಆಕೆ ಹೇಳಿದ್ಲಲ್ಲಾ.ಇದೀಗ ತಾತ ಹಿಂಗೆ ಅಡ್ಡಗೋಡೆ ಮೇಲೆ ದೀಪ ಇಟ್ಟು ಹೇಳ್ತಾ ಇದ್ದಾರೆ. ಮತ್ತೆ ಒಂದು ವರ್ಷ ಕಾಯಬೇಕಲ್ಲ. ಮನೆಯಲ್ಲಿ ಏನು ಹೇಳಲಿ. ಎಲ್ಲರಂತಿರಕ್ಕಾಗಲ್ವಲ್ಲ. ಹೊರಗಡೆಗೂ ಹೋಗಕ್ಕಾಗಲ್ಲ. ಸೀರೆ ಉಡಕ್ಕಾಗಲ್ಲ. ಒಳ್ಳೇ ಟೀಶರ್ಟ್ ಹಾಕಕ್ಕಾಗಲ್ಲ…ಅಯ್ಯೋ ಟೀ ಶರ್ಟ್ ಹಾಳಾಗ್ಲಿ. ಖಿಮೋಥೆರಪಿ ನೋವಿಗೆ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಮೊದಲು ಇದನ್ನು ಯೋಚಿಸು ನವೋಮಿ ಎಂದಿತು ಒಳ ಮನಸ್ಸು. ಗಂಭೀರ ಪರಿಸ್ಥಿತಿಯಲ್ಲೂ ನಾನು ಬಾಲಿಶವಾಗಿ ಚಿಂತಿಸತೊಡಗಿದ್ದು ಒಂದು ಕ್ಷಣಕ್ಕೆ ನನ್ನನ್ನು ಹಗುರ ಮಾಡಿತಾದರೂ ಹೇಗೋ ಸಾವರಿಸಿಕೊಂಡೆ. ಯಾರಿಗೂ ಹೇಳದಿರುವಂತೆ ನಿರ್ಧರಿಸಿದೆ.
ಅಲ್ಲಿಂದ ಶುರುವಾಯಿತು.
ಮರೆಯೋಕೆ ಏನಾದ್ರೂ ಮಾಡಲೇಬೇಕು.ಕಛೇರಿಯಲ್ಲಿ ಹೆಚ್ಚು ಸಮಯ ಕಳೆಯತೊಡಗಿದೆ.ಮಾಲ್ಸ್ಗೆ ಹೆಚ್ಚೆಚ್ಚು ಭೇಟಿ.
ಸಾಕಷ್ಟು ಸಿನೇಮಾ ನೋಡಿದೆ. ಏನೇ ಮಾಡಿದ್ರೂ ಅದನ್ನು ಮಾತ್ರ ಮರೆಯಕ್ಕಾಗಲಿಲ್ಲ.ಈ ಮಧ್ಯೆ ಎಡಗಡೆ ಆಗಾಗ ನೋವು ಕಾಣಿಸಿಕೊಳ್ಲತೊಡಗಿತು.ಅಂತೂ ಇಂತೂ 10 ತಿಂಗಳು ಮುಗಿದೇ ಹೋಗಿತ್ತು.ಇನ್ನು ಎರಡೂ ತಿಂಗಳಲ್ಲಿ ಮತ್ತೆ ಟೆಸ್ಟ್. ಏನಾಗಬಹುದು.ಡಾಕ್ಟರ್ ಎನು ಹೇಳಬಹುದು.ಇಷ್ಟೊಂದು ಕಾದಿದ್ದೀನಿ.ಇನ್ನು ಸ್ವಲ್ಪ ದಿನ ಕಾದರಾಯಿತು ಬಿಡು .ಆದದ್ದಾಗಲಿ.
ಹಾಗೇ ಒಂದುದಿನ…..ಟಿ.ವಿ.ಚಾನೆಲ್ ಚೆಂಜ್ ಮಾಡ್ತಾಇದ್ದೆ. ಅಪರೂಪಕ್ಕೆ ಕನ್ನಡ ಚಾನೆಲ್ ಬಂದಾಗ ಒಂದು ಕ್ಷಣ ಅಲ್ಲೇ ನಿಂತೆ. ಡಾಕ್ಟರ್ ಒಬ್ಬರಿಗೆ ಸನ್ಮಾನ ಮಾಡುತ್ತಿರುವ ಸುದ್ದಿ. ಹೆಸರು ಎಲ್ಲೋ ಕೇಳಿದ ನೆನಪು. ತಕ್ಷಣಕ್ಕೆ ನೆನಪಾಯಿತು. ನಾನೇ ಒಮ್ಮೆ ಸ್ಟೋರಿ ಮಾಡಿದ್ನಲ್ವಾ. ಬಡತನದಿಂದ ಬಂದ ಕುಟುಂಬದ ಅಕ್ಕತಂಗಿಯರು ಹೈಲೀ ಕ್ವಾಲಿಫೈಡ್.  ಬ್ರೆಸ್ಟ್ ಕ್ಯಾನ್ಸರ್ ವಿಷಯದಲ್ಲಿ ಪರಿಣಿತ ಡಾಕ್ಟರ್. ಫೋನ್ ನಂಬರ್ಗೆ ತಡಕಾಡಿದೆ.ಸಿಕ್ಕಿತು. ಮಾತನಾಡಿದೆ.
ನಾನು ನವೋಮಿ…
ಏನು ಆಗಿರಂಗಿಲ್ರೀ. ನಾನು ಅವಿವಾಹಿತೆ.ನಾನೇ ಹೈ ರಿಸ್ಕ್ ಗ್ರೂಪ್ನಲ್ಲಿ ಬರ್ತೀನಿ. ಬನ್ನಿ ನೋಡ್ತೀನಿ. ಇನ್ನೂ ಏನೇನಲ್ಲ ಮಾತಾಡಿದ್ರು.  ಸಮಾಧಾನವಾಗಿ ಅವರು ಮಾತನಾಡಿದ್ದನ್ನು ಕೇಳಿ ನಂಗೂ ಒಂಚೂರು ಖುಷಿ. ಇನ್ಯಾಕೆ ತಡ ಅಂತ ಮಾರನೇ ದಿನ ಹೊರಟೆ. ಅಲ್ಲಿಯವರೆಗೆ ಕಾಯಿಲೆಯ ಅಗಾಧತೆ ಅರಿವಿರದ ನನಗೆ ಆ ಬೋರ್ಡ್ ನೋಡಿದ್ದೇ ತಡ ಇನ್ನು ಒಂದು ಹೆಜ್ಜೆ ಮುಂದಿಡಲಾರೆ ಎನ್ನಿಸಿತು. ಬಂದದ್ದಾಗಿದೆ. ಧೃತಿಗೆಟ್ಟರೆ ಪ್ರಯೋಜನ ಇಲ್ಲ ಎಂದು ಒಳನಡೆದೆ.
ಆಸ್ಪತ್ರೆ ಆವರಣದೊಳಗೆ ಸ್ವಲ್ಪ ಮುಂದಕ್ಕೆ ಹೋಗಿ ಬಲಕ್ಕೆ ತಿರುಗಿದರೆ ಎಡಕ್ಕೆ ಕಂಡು ಬರುವುದೇ ಬ್ರೆಸ್ಟ್ ಆಂಕಾಲಜಿ.  ಅಲ್ಲಿನ ಸುತ್ತಮುತ್ತಲ ಪರಿಸರ ನೋಡಿ ನಾನೆಲ್ಲಿಯೋ ಲಾಲ್ ಬಾಗ್ ಕಬ್ಬನ್ ಪಾರ್ಕ್ನಲ್ಲಿದ್ದೇನೆ ಎಂದುಕೊಂಡೆ. ತಂಪುಗಾಳಿ ಸೋಕಿದಾಗ ಒಂದು ಕ್ಷಣ ನನ್ನ ದುಗುಡ ಮರೆತೆ. ಹಂಗೆ ಒಳಹೋದೆ. ಚಿಕ್ಕಚೊಕ್ಕದಾದ ಕೋಣೆಯಲ್ಲಿ ಬಡಕಲು ಶರೀರದ ಹೆಂಗಸು.ನವೋಮಿ ಎಂದೆ. ಅಯ್ಯೋ ಬನ್ರೀ…. ಅಲ್ಲಾ ಸಿಕ್ಕಾಪಟ್ಟೆ ಕೆಲ್ಸ ಇರ್ಬೇಕಲ್ವಾ. ನನಗೆ ಉತ್ತರಿಸಲು ಅವಕಾಶ ಕೊಡದೇ ಬಹಳ ವರ್ಷಗಳ ಪರಿಚಯ ಎಂಬಂತೆ ಒಂದೇ ಸಮ ಮಾತನಾಡತೊಡಗಿದ್ದು, ನನಗೆ ಅಚ್ಚರಿ ತರಿಸಿತು. ಮಾತು ಮಾತಿನ ಭರದಲ್ಲಿ ನಾವಿಬ್ಬರೂ ಪಕ್ಕದ ರೂಮಿಗೂ ತೆರಳಾಗಿತ್ತು. ಚುನಾವಣೆ ಮತ್ತೆ ಈಗಿನ ರಾಜಕಾರಣದ ಸ್ಥಿತಿಗತಿ ಮುಂತಾದ ಎಷ್ಟೊಂದು ವಿಚಾರಗಳ ನಡುವೆ ಮೊದಲು ಪಿಜಿಕಲ್ ಟೆಸ್ಟ್ ಮಾಡಬೇಕು ಎಂದು ಅವರು ಹೇಳಿದ್ದು, ನಂತರ ಈ ಮಧ್ಯೆ ನಾನು ಕೂಡ ರೆಡಿಯಾಗಿದ್ದು, ನನಗೇ ಅರಿವಾಗಲಿಲ್ಲ. ಸಂಭಾಷಣೆಯ ನಡುವೆ ನನ್ನ ಕುತ್ತಿಗೆಯ ಕೆಳಭಾಗದಲ್ಲಿ ಚಿಕಿತ್ಸೆ ಮಾಡುವಾಗ ಅವರ ಮುಖದಲ್ಲಿ ಚಿಂತೆಯ ಗೆರೆ ಮೂಡಿ ಮಾಯವಾಗಿದ್ದು ನನಗೆ ಗೊತ್ತಾಗದೇ ಇರಲಿಲ್ಲ. ಆದರೆ ಅಮ್ಮಾವ್ರು ಮಾತ್ರ ಒಂದೇ ಸಮ ಯಡಿಯೂರಪ್ಪ, ಖರ್ಗೆ ಅಂಥ ಶುರು ಹಚ್ಚಿಕೊಂಡವರು ನಾನು ಕಾಯಿಲೆ ಬಗ್ಗೆ ಏನೂ ಕೇಳದಿರುವಂತೆ ಮಾಡಿಬಿಟ್ಟದ್ದರು. ಅಷ್ಟೊತ್ತಿಗೆ ಬೆವನ್ ಅಂಥ ಟ್ಯಾಬ್ಲೆಟ್ ಕೂಡ ಅವರು ಬರೆದುಕೊಟ್ಟಾಗಿತ್ತು. ಇದು ನಮ್ಮ ಆಸ್ಪತ್ರೆಯಲ್ಲೇ ಸಿಗುತ್ತೆ. ಸಣ್ಣ ಲಂಪ್ ಇದೆ. ಹಾರ್ಮೋನಲ್ ಚೆಂಜಸ್್ನಿಂದ ಕೆಲವೊಮ್ಮೆ ಹೀಗಾಗುತ್ತೆ. ನಿಮಗೆ ಸ್ಟ್ರೆಸ್ ನೋಡಿ. ಸರಿಯಾದ ಟೈಮ್್ಗೆ ಊಟ ಮಾಡಲ್ಲ ಬೇರೆ. ಎಲೆಕ್ಷನ್ ಮುಗಿಲಿ ಇನ್ನೊಬ್ಬ ತಜ್ಞ ಡಾಕ್ಟರ್  ಬರ್ತಾರೆ ಅವರ ಸಲಹೆ ತೆಗೆದುಕೊಳ್ಳೋಣ. ಏನಿರಲ್ಲ ಬಿಡು ಅಂಥ ನನ್ನ ಬಾಗಿಲವರೆಗೂ ಬಂದು ಕಳಿಸೇ ಬಿಟ್ಟರು
ಎಂಥಹ ಫಜೀತಿ ಇದು. ನನಗೇನಾಗಿದೆ ಅಂಥ ಕೇಳಲು ಬಿಡ್ತಿಲ್ಲವಲ್ಲ. 20 ವರ್ಷದ ಅನುಭವವಿರುವ ಅವರಲ್ಲಿ ಎಲ್ಲೋ ಒಂದು ಚಿಕ್ಕ ಸಂಶಯ ಬಂದಿರುವುದಂತೂ ನಿಜ. ಆದರೆ ನನಗದು ಗೊತ್ತಾಗದ ರೀತಿಯಲ್ಲಿ ಹ್ಯಾಂಡಲ್ ಮಾಡಿದ ಅವರ ವೈಖರಿಗೆ ನಾನೇ ಬೆರಗಾದೆ. ಮೆಂಟಲ್ ಸ್ಟ್ರಾಂಗ್್ ಇದ್ದರೆ ಯಾವ ಕಾಯಿಲೆನೂ ಬರಲ್ಲ. ಹೆಚ್ಚಿನ ಸಮಯ ನಾವೇ ಇನ್ವೈಟ್ ಮಾಡ್ತೀವಿ ನೋಡು ನವೋಮಿ ಅಂಥ ಹೀಗೊಂದು ಇಂಡೈರೈಕ್ಟ ಪಂಚ್ ಕೊಟ್ರು.
ತಮ್ಮ ಪೋನ್ ನಂಬರ್ ಕೈಗೆ ಕೊಟ್ಟು. ಟೈಮ್ ಇದ್ರೆ ಫೋನ್ ಮಾಡ್ರಿ.ಪಾಲಿಟಿಕ್ಸ್ ಮಾತಾಡೋಣ ಎಂದ್ರು. ಸರಿ ಅಂಥ ಹೊರಟು ಬಂದೆ. ಒಳಗೆ ಹೋಗುವಾಗ ಇದ್ದ ಭಯ ಆತಂಕ ವಾಪಸು ಬರುವಾಗ ಇರಲಿಲ್ಲ. ಆದರೆ ಬೆಂಗಳೂರಿನ ಆ ಪ್ರತಿಷ್ಟಿತ ಖಾಸಗಿ ಆಸ್ಪತ್ರೆಯ ಲೇಡಿ ಡಾಕ್ಟರು ವರ್ತಿಸಿದ ರೀತಿ ನೆನಪಾಗಿ ಆಶ್ಚರ್ಯಪಟ್ಟೆ. ಸರಕಾರಿ ಆಸ್ಪತ್ರೆಯನ್ನ ಗಣನೆಗೂ ತೆಗೆದುಕೊಳ್ಳದೇ ಹೈಟೆಕ್ ಆಸ್ಪತ್ರೆಗೆ ಧಾವಿಸಿದ ನನಗೆ ಅವರು ಕೊಟ್ಟ ಟೆನ್ಶನ್ ಮತ್ತೊಮ್ಮೆ ನೆನಪಾಯಿತು. ಅತ್ಯಂತ ಕಡಿಮೆ ದರದಲ್ಲಿ ಬೇವನ್ ಮಾತ್ರೆ ದೊರೆಯಿತು.
ಆ ನಂತರ ನಾನು ಕೂಡ ಬಿಜಿಯಾದೆ ಈ ಮಧ್ಯೆ ಎರಡು ಬಾರಿ ಮಾತಿಗೆ ಸಿಕ್ಕರು.ಅಷ್ಟೋತ್ತಿಗೆ ಎಲೆಕ್ಶನ್ ಮುಗಿದು ಹೋಗಿತ್ತು. ಇನ್ನೇನೂ ಒಂದು ರೌಂಡ್ ಹೋಗಿಬರೋಣ ಅಂಥ ಫೋನ್ ಮಾಡಿದೆ.
ಅಯ್ಯೋ ಬಂದ್ ಬಿಡ್ರಿ ಅಂದ್ರು. ಬೆಳಿಗ್ಗೆ 9 ಘಂಟೆಗೆ ಹೋದೆ. ಅಷ್ಟೊತ್ತಿಗಾಗಲೇ ತಜ್ಞ ಡಾಕ್ಟರ್ ಸಹಾ ಕರೆತಂದಿದ್ದರು. ಅದು ಇದು ಮಾತನಾಡುತ್ತಲೇ ಮತ್ತೊಂದು ಟೆಸ್ಟ್ ಆಗಿಹೋಗಿತ್ತು.
ನಥಿಂಗ್…ಏನೂ ಇಲ್ಲ ಅಂಥ ಹೇಳಿದ್ರು. ಮೊದ್ಲೇ ಹೇಳಿದ್ನಲ್ಲಾ ಏನೂ ಇಲ್ಲ ಅಂಥ.ಆ ಬೆವನ್ ಮಾತ್ರೆಎಲ್ಲಾ ನಿಲ್ಸಿಬಿಡು. ಸಾಧ್ಯವಾದ್ರೆ 3 ತಿಂಗಳು ಬಿಟ್ಟು ಅಲ್ಟ್ರಾಸೌಂಡ್ ಮಾಡಿಸ್ಕೋ. 30 ದಾಟಿದವ್ರೆಲ್ಲ ಒಂದ್ಸಾರಿ ಮಾಡ್ಸಿಕೊಳ್ಳುವಂಥದ್ದು ಅಷ್ಟೇ. ಇನ್ನೇನು ಮತ್ತೆ …ಶುರು ಹಚ್ಚಿಕೋಂಡ್ರು.110 ಸೀಟು ಬಂತಲ್ಲಾ. ಒಟ್ಟಾರೆ ಒಂದು ಪಕ್ಷಕ್ಕೆ ಬಹುಮತ ಬಂತಲ್ಲಾ….ಹೀಗೆ ಮಾತನಾಡುತ್ತಲೇ ನನ್ನ ಮತ್ತೆ ಬೀಳ್ಕೊಟ್ಟರು
ಮತ್ತೆ ಬರ್ತೀನಿ ಅಂದೆ.
ಏ ಬೇಡ್ರೀ…ಬೇರೆಲ್ಲಾದ್ರೂ ಸಿಗೋಣ…ಇಲ್ಯಾಕೆ ಅಂದು ನಕ್ಕರು
ನಾನು ನಕ್ಕು ಹೊರ ಬಂದೆ
ಕಳೆದ ಒಂದು ವರ್ಷದ ಆತಂಕ ದುಗುಡಕ್ಕೆ ಕೊನೆಗೂ ಪುಲ್ಸ್ಟಾಪ್ ಹಾಕಿದ್ದರು
ನಾನೀಗ ನಿರಾಳವಾಗಿದ್ದೇನೆ. ಆದರೆ ಏನಕ್ಕೂ ಪ್ರತಿವರ್ಷ ಒಮ್ಮೆ ಅಲ್ಟ್ರಾಸೌಂಡ್ ಮಾಡಿಸ್ಕೊಳ್ಳೋಣ ಅಂಥ ಡಿಸೈಡ್ ಮಾಡಿದ್ದೇನೆ. 30 ವರ್ಷ ದಾಟಿದ ನಿಮ್ಮಲ್ಲಿ ಯಾರಾದ್ರೂ ಇದನ್ನು ಒದಿದ್ರೆ ಒಮ್ಮೆ ಕಿದ್ವಾಯಿ ಬ್ರೆಸ್ಟ್ ಗೆ ಭೇಟಿ ನೀಡಿ. ಇಲ್ಲದಿದ್ದರೆ ಬೇರೆಲ್ಲಾದರೂ ಸಾಧ್ಯವಾದ್ರೆ ಒಮ್ಮೆ ಅಲ್ಟ್ರಾಸೌಂಡ್ ಮಾಡಿಸ್ಕೋಬೇಕು ಆಯ್ತಾ
 
 
 

‍ಲೇಖಕರು avadhi

June 4, 2008

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

8 ಪ್ರತಿಕ್ರಿಯೆಗಳು

 1. vasu

  ಎಷ್ಟು ಸರಳವಾಗಿದೆ. ಒಂದು ದೊಡ್ಡ ಸಮಸ್ಯೆಯಾಗಿಬಿಡುವ ವಿಷಯವನ್ನು ಇವರು ನಿಜಕ್ಕೂ ಕೂಲ್ ಆಗಿಯೇ ಬರೆದಿದ್ದಾರೆ. ಇಂತಹ ಮನಸ್ಸನ್ನು ಬಿಚ್ಚಿಡುವ ಬರಹ ಬೇಕಿತ್ತು

  ಪ್ರತಿಕ್ರಿಯೆ
 2. chetana chaitanya

  ಚೆನ್ನಾಗಿದೆ ಬರಹ, ಶೈಲಿ, ನಿರೂಪಣೆ ಎಲ್ಲಾ. ಆದರೆ ಬರಹದ ವಸ್ತು ಚಿಂತೆಗೆ ಹಚ್ಚಿತು.
  ಥ್ಯಾಂಕ್ಸ್ ನವೋಮಿ. (ನವೋಮಿ?)
  – ಚೇತನಾ ತೀರ್ಥಹಳ್ಳಿ

  ಪ್ರತಿಕ್ರಿಯೆ
 3. amara

  ನಿಮ್ಮ ಬರವಣಿಗೆಯ ಶೈಲಿ ಇಷ್ಟವಾಯಿತು, ಅಮ್ಮನನ್ನ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ದಾಗ ನನ್ನಲ್ಲಿ ಹೇಳಿಕೊಳ್ಳಲಾದದೆ ತನ್ನಲ್ಲೆ ನುಂಗಿಕೊಂಡಿದ್ದ ನೋವನ್ನು ಸ್ಪಷ್ಟವಾಗಿ ಬಲ್ಲೆ, ಯಾವ ಹೆಣ್ಣು ಮಕ್ಕಳಿಗೂ ಈತರದ ಕಾಯಿಲೆಗಳು ಬೇರದಿರಲಿ. ಉಪಯುಕ್ತ ಮಾಹಿತಿಯನ್ನ ಎಗ್ಗಿಲ್ಲದೆ ಹಂಚಿಕೊಂಡಿದ್ದಿರಾ ಧನ್ಯವಾದಗಳು.
  -ಅಮರ

  ಪ್ರತಿಕ್ರಿಯೆ
 4. subramani

  ನಿಮ್ಮ ಲೇಖನ ಓದಿದ ಮೇಲೆ ಕೊಂಚ ಭಯವಾಯಿತು.ನಂತರ ರಿಲ್ಯಾಕ್ಸ್ ಆಯಿತು.
  ಆಪ್ತವಾಗಿ ಹೇಳಿದ್ದೀರಿ.ಇಷ್ಟವಾಯಿತು.
  ಸುಬ್ರಮಣಿ

  ಪ್ರತಿಕ್ರಿಯೆ
 5. malathi S

  Ladies about 35 should undergo this test like Naomi has mentioned at the end. Presently i am looking after a small child who has cancer. She is just three.
  simple narration. thankyou

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: