ಎನ್ ಎಸ್ ಶಂಕರ್ ಕಾಲಂ: ಆ ಕಮಲ್ ಎಲ್ಲಿ?

ಎನ್ ಎಸ್ ಶಂಕರ್

ಶಾರುಕ್ ಖಾನ್ ಹೇಳಿದ್ದು ಈಗ ಸಾಕಷ್ಟು ಪ್ರಸಿದ್ಧವಾಗಿಹೋಗಿದೆ. ಕಮಲ್ ಹಾಸನ್ ರನ್ನು ಶಾರುಕ್ ಮೊದಲ ಬಾರಿ ಪ್ರಶಸ್ತಿ ಸಮಾರಂಭದಲ್ಲಿ ಕಂಡಾಗ- ಇಂಥ ಮನುಷ್ಯ ಇರಲು ಸಾಧ್ಯವೇ ಅಂತ ಕಮಲ್ರನ್ನು ಒಮ್ಮೆ ಮುಟ್ಟಿ ನೋಡಬೇಕು ಅನಿಸಿತಂತೆ! ( ತಿಚಿಟಿಣಜಜ ಣಠ ಣಠಣಛಿ ಟ, ಣಠ ಜಜ ಜಿ ಜ ತಿಚಿ ಡಿಜಚಿಟ!) ಉತ್ತರದವರಿಗೆ ಅದರಲ್ಲೂ ಚಿತ್ರರಂಗದವರಿಗೆ, ದಕ್ಷಿಣದವರು ಅಂದರೆ ಅಸೀಮ ಉಡಾಫೆ. ಉತ್ತರದ ಆ ಸೊಕ್ಕಿಗೆ ಮೊದಲು ಉತ್ತರ ಕೊಟ್ಟವರು- ನಿರ್ದೇಶಕ ಮಣಿರತ್ನಂ, ಜೊತೆಗೆ ಕಮಲ್ ಹಾಸನ್. ಇವರಿಬ್ಬರೂ ತಮ್ಮ ಕಲೆಗೆ ತಂದ ಪ್ರೌಢಿಮೆಯೆದುರು ಅಲ್ಲಿನವರು ತಗ್ಗಿ ಬಗ್ಗಿ ಮಾತಾಡುವುದು ಅನಿವಾರ್ಯವಾಯಿತು. ಹಾಗೆ ಶಾರುಕ್ ನ ಬೆರಗಿನ ಹಿಂದಿರುವುದು ಈ ವಿನಯವೇ. ಅಂಥ ಕಮಲ್ ಹಾಸನ್ ರನ್ನು ಭೇಟಿ ಮಾಡಲೆಂದು ಕಳೆದ ಶುಕ್ರವಾರ ಹೊರಟಾಗ ನನ್ನ ಚಿತ್ತದಲ್ಲಿ ಸುಳಿದ ಚಿತ್ರಗಳು ನೂರಾರು. ರಾಜಕುಮಾರ್ ಚಿತ್ರಗಳ ಮೂಲಕವೇ ಅಭಿರುಚಿಯ ಚೌಕಟ್ಟು ರೂಪಿಸಿಕೊಂಡ ನನ್ನ ಪೀಳಿಗೆಯವರಿಗೆ- ಬೇರೊಂದು ರುಚಿ ನೀಡಿದ್ದೇ ಕಮಲ ಹಾಸನ್. `ಹೀರೋಯಿಸಂ’ ಮೀರಿದ ಹೀರೋನನ್ನು ಸೃಷ್ಟಿಸಿದ್ದಷ್ಟೇ ಅಲ್ಲ; ಅಭಿನಯವೆಂಬುದು ಮನಃಸ್ಥಿತಿಯ ಶೋಧನೆ ಎಂಬ ಅರಿವು ಪ್ರೇಕ್ಷಕರಲ್ಲಿ ಮೂಡಿದ್ದೇ ಕಮಲ್ ಅಭಿನಯದಿಂದ. ಆ ಮಟ್ಟಿಗೆ ಅವರ ಅಭಿನಯ ಅಭಿನಯವನ್ನೇ ಹಿಗ್ಗಿಸಿತು. ಅಲ್ಲಿಂದಲೂ ಮುಂದಕ್ಕೆ ನನ್ನಂಥವರು ದೇಶ ವಿದೇಶಗಳ ಶ್ರೇಷ್ಠ ಕಲಾವಿದರಿಗೆ ತೆರೆದುಕೊಳ್ಳುತ್ತಾ ಮೆಚ್ಚುತ್ತಾ ಬಂದೆವಾದರೂ, ತನ್ನ ಪಾತ್ರದಲ್ಲಿ- ಅದು ಜೀವನ್ಮರಣದ ಪ್ರಶ್ನೆಯೋ ಎಂಬಂಥ ಸಮರ್ಪಣೆಯೊಂದಿಗೆ ನುಗ್ಗುತ್ತಿದ್ದ ಕಮಲ್  ರಂಥವರು ಎಲ್ಲಿಯೂ ಅಪರೂಪವೇ. ಸಾಗರ ಸಂಗಮಂ ಚಿತ್ರಕ್ಕೆ ಗೊಗ್ಗರು ದನಿ ಬೇಕೆಂಬ ಕಾರಣಕ್ಕೆ ದಿನಗಟ್ಟಲೆ ರೂಮಿನಲ್ಲಿ ಅರಚಿ ಅರಚಿ ತನ್ನ ಧ್ವನಿಪೆಟ್ಟಿಗೆಗೆ ಶಾಶ್ವತವಾಗಿ ಹಾನಿ ತಂದುಕೊಂಡ ಕಮಲ್; ನಾಯಗನ್ ಚಿತ್ರದ ಪಾತ್ರಕ್ಕಾಗಿ ಸ್ಟಿರಾಯ್ಡ್ ಸೇವಿಸಿ ದೇಹಕ್ಕೇ ಅಪಾಯ ಆಹ್ವಾನಿಸಿಕೊಂಡ ಕಮಲ್; ಇಲ್ಲಿಗೆ ದಾರಿ ಮುಗಿಯಿತು ಅನ್ನುವಾಗಲೂ ನಿಲ್ಲದೆ ತನ್ನದೇ ಕಾಲುಹಾದಿ ನಿರ್ಮಿಸಿಕೊಂಡು ಮುನ್ನಡೆದ ಕಮಲ್… ಎಷ್ಟೆಂದರೂ ಅದು ಕಮಲ್! ಮಿಕ್ಕವರು ತಾರಾಪಟ್ಟದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದಾಗ (ಆ ಕಾಳಜಿಯನ್ನೂ ಬಿಡದೆ) ತನ್ನ ಪಾತ್ರದ ವೈಶಿಷ್ಟ್ಯಗಳನ್ನು ಕಡೆದು ಅಚ್ಚರಿ ಹುಟ್ಟಿಸುತ್ತಿದ್ದ ಗೆರಿಲ್ಲಾ ನಟ ಕಮಲ್. ಇಷ್ಟು ಹೇಳಿದ ಮೇಲೆ ಈಚಿನ ವರ್ಷಗಳಲ್ಲಿ ಕಮಲ್ ಬಗ್ಗೆ ಉಂಟಾದ ನಿರಾಸೆಯನ್ನೂ ನೆನೆಯಬೇಕು. ಕುಂಟ, ಕುರುಡ, ಕುಳ್ಳ, ಡುಮ್ಮ, ಮುಗ್ಧ, ಕುರೂಪಿ, ನಡುವಯಸ್ಸಿನ ಹೆಂಗಸು, ಮುದುಕ… ಕಣ್ಣು ಕೋರೈಸುವ ಪಾತ್ರವೈವಿಧ್ಯವೇ. (ಕಲಾವಿದನಿಗಿರುವುದು ಒಂದೇ ಮುಖ; ಅದನ್ನಿಟ್ಟುಕೊಂಡೇ ಆತ ನೂರು ಪಾತ್ರಗಳನ್ನು ಬದುಕಬೇಕು ಅಂದಿದ್ದರು ಕಮಲ್). ಆದರೆ ಆ ಅದ್ಭುತ ಪ್ರತಿಭೆ ಈ ಮೇಕಪ್ ಚಮತ್ಕಾರಗಳಲ್ಲೇ ಸ್ಥಗಿತಗೊಳ್ಳಬೇಕೆ? ಹೊಸತಿನ ಹುಡುಕಾಟದಲ್ಲಿ ನಿತ್ಯ ಅರಳುತ್ತಿದ್ದ ಕಮಲ್ರನ್ನು ಈಗ ದಣಿವು ಆವರಿಸಿಕೊಂಡಿದೆಯೇ? ಅದಕ್ಕೇ ಈಚಿನ ಚಿತ್ರಗಳಲ್ಲಿ ಅವರು ಮಾಡಿದ್ದನ್ನೇ ಮಾಡುತ್ತಾ ಸವೆಯುತ್ತಿದ್ದಾರೆಯೇ?… ಗೆಳೆಯ ರಮೇಶ್ ಅರವಿಂದ್ ಚೊಚ್ಚಲ ನಿರ್ದೇಶನದ ‘ರಾಮ ಶಾಮ ಭಾಮ’ ಚಿತ್ರದಲ್ಲಿ ಅಭಿನಯಿಸಲು ಬಂದ ಕಮಲ್ ರನ್ನು ರಮೇಶ್ ಮುಖಾಂತರವೇ ಭೇಟಿ ಮಾಡಲು ಹೋದಾಗ, ವಯಸ್ಸು ಐವತ್ತು ಮೀರಿದ್ದರೂ ತಾರುಣ್ಯದ ಕಳೆ ಕಳೆದುಕೊಂಡಿರದ ಕಮಲ್ರನ್ನು ಏನು ಕೇಳಬೇಕೆಂಬುದು ಸ್ಪಷ್ಟವಾಗಿರಲಿಲ್ಲ. ಅಷ್ಟಕ್ಕೂ ಅವರ ಪಾತ್ರಗಳು, ವೃತ್ತಿಯ ಬಗ್ಗೆ ಈವರೆಗೆ ಯಾರೂ ಕೇಳದೆ ಉಳಿದ ಪ್ರಶ್ನೆಗಳಿರಲು ಸಾಧ್ಯವೇ? ಅದಕ್ಕೇ ಸುಮ್ಮನೆ ಹರಟೆ ಸಾಗಲಿ, ಆ ಮೂಲಕ ಅವರ ಅಂತರಂಗಕ್ಕೊ ಒಂದು ಇಣುಕುನೋಟ ಸಿಕ್ಕುವುದಾದರೆ ಆಗಲಿ ಅಂದುಕೊಂಡು ಹೋದೆ. ಬನಶಂಕರಿಯ ಭವ್ಯ ಮನೆಯೊಂದರಲ್ಲಿ ನಡೆದಿತ್ತು ಶೂಟಿಂಗ್. ಕಮಲ್, ಅವರ ಪಕ್ಕ ಹೆಂಡತಿ ಪಾತ್ರದಲ್ಲಿ ಶ್ರುತಿ, ಎದುರಿಗೆ ಊರ್ವಶಿ. ಕಮಲ್ ಹುಬ್ಬಳ್ಳಿ ಭಾಷೆಯಲ್ಲಿ ಸಂಭಾಷಣೆ ಅಭ್ಯಾಸ ಮಾಡುತ್ತ ಒಂದೊಂದು ರಿಹರ್ಸಲ್ಗೂ ಹದಗೊಳಿಸುತ್ತಾ ಕಡೆಗೆ ಟೇಕ್ ಆದ ಮೇಲೆ ಊಟದ ಬ್ರೇಕ್. ಮಾತುಕತೆ ಶುರುವಾಗಿದ್ದು, ಕಮಲ್ ತಲೆಯಲ್ಲಿ ಈಗೇನು ನಡೆದಿದೆ ಎಂಬ ಕುತೂಹಲದ ಪ್ರಶ್ನೆಯೊಂದಿಗೆ. ಅವರು ತೊಡಗಿಕೊಂಡಿರುವ ಅಥವಾ ಒಪ್ಪಿಕೊಂಡಿರುವ ಚಿತ್ರಗಳಿಗಿಂತ ಹೆಚ್ಚಾಗಿ ಇನ್ನೂ ಸ್ಪಷ್ಟ ರೂಪ ತಾಳದ ಲಹರಿಗಳ ಬಗ್ಗೆ ನನ್ನ ಪ್ರಶ್ನೆ. ಕಮಲ್ ಶಿಕಾಗೋದಲ್ಲಿ ನೆಲೆ ನಿಂತ ಭಾರತೀಯ ಮನೋವಿಜ್ಞಾನಿಯೊಬ್ಬ ಅಲ್ಲಿನ ಕರಿಯ , ಬಿಳಿಯರ ಸಮಸ್ಯೆಗೆ ಮುಖಾಮುಖಿಯಾಗುವ ಕಥಾವಸ್ತುವೊಂದರ ಕುರಿತು ಯೋಚಿಸುತ್ತಿದ್ದಾರೆ. ಈ ಪ್ರಸ್ತಾಪ- ಭಾರತದ ಜಾತಿಪದ್ಧತಿ, ಅಮೆರಿಕ ಅಧ್ಯಕ್ಷರ ಯುದ್ಧ ದಾಹ, ಮೈಕೇಲ್ ಮೂರ್ ನ ಸಾಕ್ಷ್ಯಚಿತ್ರ, ಹಸಿವಿನಿಂದ ಯಾರೂ ಸಾಯದ ಸ್ವೀಡನ್ನಿನ ಕಲ್ಯಾಣ ರಾಜ್ಯ, ಹೀಗೆ ನಾನಾ ದಿಕ್ಕುಗಳಲ್ಲಿ ಚರ್ಚೆಯನ್ನು ಮುನ್ನಡೆಸಿತು. ಮಾತು ನಿರ್ಧಿಷ್ಟ ಚಿತ್ರಗಳ ಕಡೆ ತಿರುಗಿದಾಗ ಕಮಲ್ ಹೇಳಿದ್ದು: ಕೆಲವು ವರ್ಷಗಳ ಹಿಂದೆ ಅರ್ಧಕ್ಕೆ ನಿಂತ ಮಹತ್ವಾಕಾಂಕ್ಷೆಯ ಮರುದನಾಯಗಂ ಚಿತ್ರವನ್ನು ಸಂಪೂರ್ಣಗೊಳಿಸಲು ಮಲೇಷಿಯಾದ ನಿರ್ಮಾಪಕರು ಮುಂದೆ ಬಂದಿದ್ದಾರೆ; ಅದಲ್ಲದೆ ಇನ್ನೊಂದು ಚಾರಿತ್ರಿಕ ಚಿತ್ರವೂ ಅವರ ತಲೆಯಲ್ಲಿದೆ. ಅವರಿಗೆ ಇಷ್ಟವಾಗುವ ಚಿತ್ರಗಳು ಎಂಥವು? ಯುರೋಪಿನ ಚಿತ್ರಗಳು (ಆ ಕಾಲದ ಫೆಲಿನಿ, bargಬಗರ್್ಮನ್ ಚಿತ್ರಗಳಷ್ಟೇ ಅಲ್ಲ, ಈಚಿನ ಚಿತ್ರಗಳೂ ಸಹ)- ಹಾಲಿವುಡ್ ಚಿತ್ರಗಳಿಗಿಂತ ಇಷ್ಟ. ಈಚಿನ ಜಪಾನ್ ಚಿತ್ರಗಳೂ ಪರವಾಗಿಲ್ಲ… ಅಷ್ಟಕ್ಕೂ ನಾನು ಸದ್ಯ ಯಾವ ಚಿತ್ರದಲ್ಲಿ ತೊಡಗಿರುತ್ತೇನೋ ಅದೇ ನನ್ನ ಅಚ್ಚುಮೆಚ್ಚಿನ ಚಿತ್ರ. ಅದು ಹೀಗೆ: ಹಸಿದಿದ್ದೇನೆ; ಕೈಲಿರುವ ಊಟವೇ ಇಷ್ಟ. ಅದು ಮುಗಿದ ಮೇಲೆ ನನಗೆ ಇಷ್ಟವಾಗದಿರಬಹುದು, ಅಥವಾ ದ್ವೇಷಿಸಲೂಬಹುದು. ಆದರೆ ಸದ್ಯಕ್ಕೆ ಅದೇ… ಅವರದೇ ಮುಂಚಿನ ಚಿತ್ರಗಳಲ್ಲಿ ಮೆಚ್ಚಿನದು ಯಾವುದು? ಅಥವಾ ಪಾತ್ರ? ಹಾಗೆ ಮೆಚ್ಚಿನ ಚಿತ್ರ, ಪಾತ್ರ ಯಾವುದೂ ಇಲ್ಲ ಎಂದಾಗ ಆಶ್ಚರ್ಯವಾಯಿತು. ಅದೆಲ್ಲ ಆಗಿನ ಕಾಲಕ್ಕೆ ತಕ್ಕಂತೆ ಮಾಡಿದ್ದಾಯಿತು. ಅಷ್ಟೇ ಅನ್ನುತ್ತಾರೆ. ಅಂದರೆ ಈಗ ಆ ಚಿತ್ರಗಳು ಅಪ್ರಸ್ತುತವೇ? ಹೌದು! ಹಾಗಾದರೆ ಅವರಿಗೆ ತಮ್ಮ ಯಾವುದೊಂದು ಚಿತ್ರವನ್ನೂ ಈಗ ರೀಮೇಕ್ ಮಾಡಬಹುದು ಅನಿಸುವುದಿಲ್ಲವೇ? ಸಾಗರ ಸಂಗಮಂ ಒಂದನ್ನು ಈಗ ಹಿಂದಿಗೆ ಮಾಡಬಹುದು. ಅಂದರೆ ಕಮಲ್, ಜಯಪ್ರದಾ ಇಬ್ಬರ ಯೌವನದ ಭಾಗಗಳನ್ನು ಹಾಗೇ ಉಳಿಸಿಕೊಂಡು, ಅವರ ವಯಸ್ಸಾದಾಗಿನ ಭಾಗಗಳನ್ನು ಈಗ ಮತ್ತೆ ಚಿತ್ರಿಸಿ ಸೇರಿಸಬೇಕು…! ಈಗಿನ ತಂತ್ರಜ್ಞಾನದ ಕಾಲದಲ್ಲಿ ಎಷ್ಟೆಲ್ಲ ಚೆನ್ನಾಗಿ ಮಾಡಬಹುದು?! ಮಾತು ಅನಿವಾರ್ಯವಾಗಿ ಅವರ ಈಚಿನ ಚಿತ್ರಗಳ ಕಡೆ ವಾಲಿತು. ಕಮಲ್ರಲ್ಲಿ ಮೊದಲಿನ ಸಾಹಸದ ಹುಮ್ಮಸ್ಸು ಈಗ ಉಳಿಯಲಿಲ್ಲವೇ? ಕಾಮಿಡಿ ಹೆಸರಿನಲ್ಲಿ ಮಾಡಿದ್ದನ್ನೇ ಮಾಡುತ್ತಿದ್ದಾರೆಯೇ? ಕಮಲ್ ಒಪ್ಪದೆ ಆತ್ಮಸಮರ್ಥನೆಗಿಳಿದರು. ಈ ಹಂತದಲ್ಲಿ ಒಂದು ಕನ್ನಡ ಚಿತ್ರದಲ್ಲಿ ನಟಿಸಲು ಒಪ್ಪಿ ಬಂದಿದ್ದೇ ತಮ್ಮ ಸಾಹಸಶೀಲತೆಗೆ ಸಾಕ್ಷಿ ಎಂದರು. ಇದು ಪ್ರೇಕ್ಷಕರಿಗೋಸ್ಕರ ಅಲ್ಲ, ನನಗೋಸ್ಕರ ಮುಂಬಯಿ ಎಕ್ಸ್ಪ್ರೆಸ್ನಲ್ಲಿ ಹೊಸದೇನಿದೆ ಎಂದು ಕೇಳಿದರೆ, ಯಾವುದೇ ಚಿತ್ರವನ್ನು ಆಳವಾಗಿ ನೋಡದವರಿಗೆ ಹೊಸದು ಕಾಣಿಸುವುದಿಲ್ಲ ಅನ್ನುವುದು ಅವರ ವಾದ. ಜನ ಮೇಲುಮೇಲಿನ ನೋಟಕ್ಕೇ ತೃಪ್ತರಾಗಿಬಿಡುತ್ತಾರೆ. ಶಿವಾಜಿ (ಗಣೇಶನ್) ಸಾಬ್ ಅಂಥವರೇ `ಚಾಪ್ಲಿನ್ ಏನು ಮಹಾ? ಅವನೊಬ್ಬ ಜೋಕರ್’ ಅನ್ನುತ್ತಿದ್ದರು. ಅವರಿಗೆ ಚಾಪ್ಲಿನ್ನನ ಮರುಪರಿಚಯ ಮಾಡಿಸಿ ವಿವರಿಸಿದಾಗ, `ಓ ಜನ ಇಷ್ಟು ಕೂಲಂಕುಷವಾಗಿ ಸಿನಿಮಾ ನೋಡ್ತಾರಾ?’ ಅಂತ ಕೇಳಿದರು!… ಈಗ ಕಾಡು ಸಿನಿಮಾ ಅಂದರೆ ಅದೇ ಅಮರೀಶ್ ಪುರಿ ಮಾಡಿದ ಕನ್ನಡ ಸಿನಿಮಾ ಅಂದರೆ ಮುಗಿಯಿತೇ? ಕಾಡು ಈವತ್ತಿಗೂ ನನ್ನ ಮೆಚ್ಚಿನ ಚಿತ್ರಗಳಲ್ಲಿ ಒಂದು… ಇಲ್ಲ, ಕಮಲ್ಗೆ ತಮ್ಮ ಹಾದಿಂುಲ್ಲಿ ಯಾವ ಅಳುಕು ಸಂದೇಹಗಳೂ ಇಲ್ಲ. ಆದರೆ ಅವರೇ ಸೃಷ್ಟಿಸಿದ ಅಗಾಧ ನಿರೀಕ್ಷೆಗಳ ಬೆನ್ನು ಹತ್ತಿ ಹೋಗುವ ನಾವು ನಿಡುಸುಯ್ಯುತ್ತೇವೆ. ಕಮಲ್ ಅದ್ಭುತಗಳನ್ನು ಸೃಷ್ಟಿಸುವ ಕಾಲ ಮುಗಿಯಿತೇನೋ ಎಂದು ನಿರಾಸೆಗೊಳ್ಳುತ್ತೇವೆ…. ಕಮಲ್ರನ್ನು ಯಾರಾದರೂ ನಿದರ್ೇಶಿಸುವುದು ಸಾಧ್ಯವೇ ಎಂದು ರಮೇಶ್ರನ್ನು ಕೇಳಿದರೆ ಅವರನ್ನು ನಿದರ್ೇಶಿಸುವ ಅಗತ್ಯವೇ ಇಲ್ಲ ಅಂದರು! (ಇಲ್ಲ, ನಮ್ಮಿಬ್ಬರ ಮಧ್ಯೆ ಎಷ್ಟು ಸಲಿಗೆಯಿದೆ ಎಂದರೆ ನನಗೇನೂ ತೊಂದರೆಯೇ ಇಲ್ಲ ಅಂತಲೂ ವಿವರಿಸಿದರು ರಮೇಶ್.) ಅಂದರೆ ಕಮಲ್ರ ಜ್ಞಾನ ಅಗಾಧ. ಚಿತ್ರನಿಮರ್ಿತಿಯ ಬಗ್ಗೆ ಅವರಿಗೆ ಗೊತ್ತಿಲ್ಲದ್ದು ಏನೂ ಇಲ್ಲ. ಆದರೆ ಜ್ಞಾನ ವಿಸ್ತರಿಸಿದಂತೆ ಸೃಷ್ಟಿಯ ಚಡಪಡಿಕೆ ಕ್ಷೀಣಿಸುತ್ತಾ ಹೋಯಿತೇ? ಗೊತ್ತಿಲ್ಲ. ಈಗೇನೋ ಕನ್ನಡಕ್ಕೆ ಕಮಲ್ ಮತ್ತೆ ಕಾಲಿಟ್ಟಿದ್ದಾರೆ. ಆ ಮೂಲಕ ಮತ್ತೆ ಅಪರಿಮಿತ ನಿರೀಕ್ಷೆ ಹುಟ್ಟಿಸಿದ್ದಾರೆ. ಈ ಬಾರಿಯೂ ಮತ್ತೊಂದು ಅಚ್ಚರಿ ಯಾಕೆ ಸಾಧ್ಯವಾಗಬಾರದು?… ಆದರೂ ಸುಮ್ಮಸುಮ್ಮನೆ ಒಳಗೊಂದು ಅಳುಕು: ಸೃಷ್ಟಿ ಶಕ್ತಿಯ ವಿಷಯದಲ್ಲಿ- ಅದು ಕಮಲ ಹಾಸನ್ನೇ ಆಗಿರಲಿ, ಯಾವಾಗ ಮುಟ್ಟು ನಿಂತುಹೋಗುವುದೋ, ಹೇಳಬಲ್ಲವರು ಯಾರು?….! *** ಪ್ರೆಸ್ ಕ್ಲಬ್ ಪ್ರಕಾಶನ ಹೊರತಂದಿರುವ ಈ ಕೃತಿಯ ಆಯ್ದ ಭಾಗಗಳು ಇನ್ನು ಮುಂದೆ ವಾರಕ್ಕೆ ಎರಡು ಬಾರಿ ‘ಅವಧಿ’ಯಲ್ಲಿ ಪ್ರಕಟಗೊಳ್ಳಲಿದೆ. ಈ ಕೃತಿ ಐ ಬಿ ಎಚ್ ಪ್ರಕಾಶನದ ಆನ್ಲೈನ್ ಮಳಿಗೆಯಲ್ಲೂ ಲಭ್ಯ   5 ಜೂನ್ 2005]]>

‍ಲೇಖಕರು G

February 10, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. bharathi

    kushi kodthu baraha … ಉತ್ತರದವರಿಗೆ ಅದರಲ್ಲೂ ಚಿತ್ರರಂಗದವರಿಗೆ, ದಕ್ಷಿಣದವರು ಅಂದರೆ ಅಸೀಮ ಉಡಾಫೆ .. nija !! devayani chaubal kamal hassan bagge bardiddu nenapaythu `thank god! even before i started learning how to spell his name .. he has vanished!!’ antha …

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: