ಎನ್ ಎಸ್ ಶಂಕರ್ ಕಾಲಂ: (ಇಂಗ್ಲಿಷ್) ಗುಮ್ಮನ ಕರೆಯದಿರೆ…

ಈ ಪ್ರಶ್ನೆ ಆಗಲೇ- ಅಂದರೆ ಎರಡು ದಶಕಗಳ ಹಿಂದೆಯೇ ಬರಬೇಕಿತ್ತು. ನಾಡಿನಾದ್ಯಂತ ಕನ್ನಡಾಭಿಮಾನಿಗಳು ಮತ್ತು ಸಾಹಿತಿ, ಕಲಾವಿದರು ಗೋಕಾಕ್ ಚಳವಳಿಯಲ್ಲಿ ತೊಡಗಿದ್ದಾಗ- ನಿಮಗೂ ನೆನಪಿರಬಹುದು- ಚಳವಳಿಗಾರರ ಕಡೆ ವ್ಯಂಗ್ಯಮಿಶ್ರಿತ ಪ್ರಶ್ನೆಯೊಂದು ತೂರಿಬಂತು: ಈಗ ಕನ್ನಡಕ್ಕಾಗಿ ಇಷ್ಟು ಜೋರಾಗಿ ಕೂಗುತ್ತಿರುವವರಲ್ಲಿ ಎಷ್ಟು ಜನ ತಮ್ಮದೇ ಮಕ್ಕಳು ಮೊಮ್ಮಕ್ಕಳನ್ನು ಕನ್ನಡ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ?…..! ಈ ಕುಹಕದ ಪ್ರಶ್ನೆಗೆ ಆಗ ಯಾರೂ ಗಟ್ಟಿಯಾಗಿ ಉತ್ತರಿಸುವ ಗೋಜಿಗೂ ಹೋಗಲಿಲ್ಲ. ಯಾಕೆಂದರೆ ಬಹುಪಾಲು ಚಳವಳಿಗಾರರು ತಮ್ಮ ಮನೆ ಮಕ್ಕಳನ್ನು ಇಂಗ್ಲಿಷ್ ಶಾಲೆಗಳಿಗೆ ಕಳಿಸುತ್ತಿದ್ದುದು ನಿಜವಾಗಿತ್ತು! ಇಂಥ ಬೂಟಾಟಿಕೆ ನಮ್ಮ ಸಮಾಜದ ಮೂಲ ಲಕ್ಷಣಗಳಲ್ಲಿ ಒಂದಾದರೂ, ಅದರಾಚಿನ ಪ್ರಶ್ನೆಗಳನ್ನು ನಾವು ಮರೆಯುವುದು ಬೇಡ. ಈಗ ನನ್ನ ಮಗುವನ್ನು ಕನ್ನಡ ಶಾಲೆಯಲ್ಲೇ ಓದಿಸುತ್ತೇನೆಂದು ನಾನು ಎಷ್ಟೇ ಉತ್ಕಟ ಪ್ರಾಮಾಣಿಕತೆಯಿಂದ ಪಣ ತೊಟ್ಟರೂ ನನ್ನ ನಂಬಿಕೆ ಕುದುರಿಸುವ ಒಳ್ಳೆಯ ಕನ್ನಡ ಶಾಲೆ ಎಲ್ಲಿದೆ? ಅಂದರೆ ನನ್ನ ಕನ್ನಡ ಪ್ರೇಮಕ್ಕಾಗಿ- ಕನ್ನಡವಿರಲಿ, ಯಾವುದನ್ನೂ ನೆಟ್ಟಗೆ ಕಲಿಸದ; ಮಗುವಿನ ಬೆಳವಣಿಗೆಗೆ ಯಾವ ರೀತಿಯಲ್ಲೂ ಪೂರಕ ವಾತಾವರಣ ಕಲ್ಪಿಸಲಾಗದ, ಶಾಲೆ ಎಂಬ ಹೆಸರಿನ ದೊಡ್ಡಿಗೆ ಅಟ್ಟಿ ಮಗುವಿನ ಭವಿಷ್ಯಕ್ಕೆ ನಾನೇ ಎರವಾಗಲೇ? ನನ್ನ ಈ ನೈಜ ಆತಂಕಕ್ಕೆ ಭಾಷಾಭಿಮಾನ ಮಾತ್ರದಿಂದ ಉತ್ತರ ದೊರೆಯುವುದಿಲ್ಲ. ಮುಚ್ಚುಮರೆಯೇನು?- ಅಂದೂ, ಇಂದೂ, ಇಡೀ ರಾಜ್ಯದಲ್ಲೇ ಉತ್ತಮ ಗುಣಮಟ್ಟದ ಕನ್ನಡ ಶಾಲೆಗಳು ಇಲ್ಲ- ಎಲ್ಲೋ ಒಂದೆರಡು ಅಪವಾದ ರೂಪದ ನಿದರ್ಶನಗಳ ಹೊರತು… ಗೋಕಾಕ್ ಚಳವಳಿಗಾರರು ಅಂದು ತಮಗೆದುರಾದ ಈ ಮುಜುಗರದ ಪ್ರಶ್ನೆಯಿಂದ ನಯವಾಗಿ ನುಣುಚಿಕೊಳ್ಳದೆ ನೇರವಾಗಿ ಎದುರಿಸಿದ್ದಿದ್ದರೆ,- ಅಂದರೆ ಒಂದೇ ಒಂದು ಹೆಜ್ಜೆ ಮುಂದೆ ಇಟ್ಟಿದ್ದಿದ್ದರೆ, ಭಾಷಾ ಚಳವಳಿ, ಗುಣಮಟ್ಟದ ಶಾಲೆ ಹಾಗೂ ಶಿಕ್ಷಣ ಸುಧಾರಣೆಯ ಆಯಾಮಗಳನ್ನೂ ಒಳಗೊಂಡು ಸಮಗ್ರವಾಗುತ್ತಿತ್ತು. ಅಂದು ಹಾಗಾಗಲಿಲ್ಲ. ಅದಕ್ಕೇ ಇಂದು ಇಂಗ್ಲಿಷನ್ನು ಎಷ್ಟನೇ ತರಗತಿಯಿಂದ ಕಲಿಸಬೇಕು ಎಂಬ ಸರಳ ಪ್ರಶ್ನೆ ರಣರಂಪವಾಗಿ ಕೂತಿದೆ. ಮತ್ತು ಅಂದಿಗಿಂತ ಇಂದು ಪರಿಸ್ಥಿತಿ ನೂರು ಪಟ್ಟು ಜಟಿಲವಾಗಿದೆ. ಈಗ ಸಕರ್ಾರದ ಸ್ವರೂಪವೇ ಬದಲಾಗಿಹೋಗಿದೆ. ಆಗ ನೌಕರಿಯ ಏಕೈಕ ಅಥವಾ ಬಹುದೊಡ್ಡ ಮೂಲವಾಗಿದ್ದ ಸಕರ್ಾರಕ್ಕೆ ಇಂದು ಉದ್ಯೋಗ ಸೃಷ್ಟಿಯ ಸಾಮಥ್ರ್ಯವೇ ಇಲ್ಲ. ಅಂದರೆ ಉದ್ಯೋಗ ಮೂಲಗಳು ಶಾಶ್ವತವಾಗಿ ಖಾಸಗಿ ವಲಯಕ್ಕೆ ವಗರ್ಾವಣೆಯಾಗಿಹೋಗಿವೆ. ಅದರರ್ಥ, ಇನ್ನು ಮುಂದೆ ಮೀಸಲಾತಿ ಅಥವಾ ಗ್ರಾಮೀಣ ಕೃಪಾಂಕದಂಥ ‘ಸಾಮಾಜಿಕ ನ್ಯಾಯ’ದ ಯಾವ ಆಸೆಗಳನ್ನೂ ನಮ್ಮ ಯುವಕರು ಇಟ್ಟುಕೊಳ್ಳುವಂತಿಲ್ಲ. ಈ ಪರಿಸ್ಥಿತಿಯಲ್ಲಿ ಇಂಗ್ಲಿಷ್ ಜ್ಞಾನವಿಲ್ಲದವನು ಆಧುನಿಕ ಅನಕ್ಷರಸ್ಥನಾಗಿ ಮಾರ್ಪಡುತ್ತಾನೆ. ಮತ್ತು ನಮ್ಮಲ್ಲಿ, ವಿಶೇಷವಾಗಿ ಗ್ರಾಮೀಣ ಭಾಗದಲ್ಲಿ ಇಂಗ್ಲಿಷ್ ಇನ್ನೂ ನಾವು ಏರಲಾಗದ ದೊಡ್ಡ ಪರ್ವತದಂತೆಯೇ ಇದೆ. ಇದಕ್ಕೇನು ಪರಿಹಾರ? ನಾಡಿನ ಹೆಸರಾಂತ ಚಿಂತಕರಲ್ಲಿ ಅನೇಕರು, ಮಕ್ಕಳಿಗೆ ಒಂದನೇ ತರಗತಿಯಿಂದಲೇ ಇಂಗ್ಲಿಷ್ ಕಲಿಸಬೇಕು ಎಂದು ಒತ್ತಾಯ ತರುತ್ತಿರುವುದು ಮುಖ್ಯವಾಗಿ ಈ ಕಾರಣಕ್ಕೇ- ಕಲಿಕಾ ವ್ಯವಸ್ಥೆಂು ಅಸಮಾನತೆ, ಮುಂದೆ ನವ ಅಸ್ಪೃಶ್ಯರ ಸಮೂಹವನ್ನೇ ಸೃಷ್ಟಿಸದಿರಲಿ ಎಂಬುದಕ್ಕೆ. ಇನ್ನು ಆ ಕಡೆ, ಮನಸ್ಸಿಗೆ ಬಂದಷ್ಟು ಶುಲ್ಕ ವಸೂಲು ಮಾಡುತ್ತಾ, ಅತ್ಯಾಧುನಿಕ ಸೌಕರ್ಯಗಳ ವೈಭವ ಪ್ರದಶರ್ಿಸುತ್ತಾ, ಉಳ್ಳವರ ಮಕ್ಕಳನ್ನು ಸೆಳೆದು ಇಂಗ್ಲಿಷ್ ವಾತಾವರಣವನ್ನೇ ಉಸಿರಾಡುತ್ತಿರುವ ಖಾಸಗಿ ಶಾಲೆಗಳನ್ನು ನಿಯಂತ್ರಿಸುವ ಶಕ್ತಿ ಅಥವಾ ಸಂಕಲ್ಪವಂತೂ ಸಕರ್ಾರಕ್ಕೆ ಇದ್ದಂತಿಲ್ಲ. ಅಲ್ಲಿ ಮಾಧ್ಯಮದ ಪ್ರಶ್ನೆಯಿರಲಿ, ಕನ್ನಡವನ್ನು ಒಂದು ಭಾಷೆಯಾಗಿ ಕಲಿಸುವ ಪ್ರಸ್ತಾಪವೇ ಪ್ರಗತಿವಿರೋಧಿಯಾಗಿ ಕಾಣುತ್ತಿದೆ. ಅಂದ ಮೇಲೆ ಸಕರ್ಾರಿ ಶಾಲೆಗಳನ್ನೇ ನೆಚ್ಚಿಕೊಳ್ಳಬೇಕಾದ ನತದೃಷ್ಟ ಮಕ್ಕಳನ್ನು ಸ್ವಲ್ಪ ಮಟ್ಟಿಗಾದರೂ ಪೈಪೋಟಿಗೆ ಸಜ್ಜುಗೊಳಿಸುವ ಹೊಣೆ ಹೊರುವವರಾರು? ಏಕ್ದಂ ಎಲ್ಲ ಖಾಸಗಿ ಶಾಲೆಗಳೂ ಸಕರ್ಾರದ ನೀತಿಯಂತೆ ಕನ್ನಡ ಮಾಧ್ಯಮದಲ್ಲೇ ಬೋಧಿಸಬೇಕು, ಮತ್ತು ಎಲ್ಲ ಸಕರ್ಾರಿ ಶಾಲೆಗಳೂ ನಾಳೆಯೊಳಗೆ ಖಾಸಗಿ ಶಾಲೆಗಳಷ್ಟೇ ಸುಸಜ್ಜಿತವಾಗಬೇಕು ಎಂಬುದು ನಮ್ಮೆಲ್ಲರ ಆಪ್ಯಾಯಮಾನವಾದ ಆಸೆಯೇನೋ ಸರಿ. ಆದರೆ ಕಾರ್ಯಸಾಧ್ಯವಾಗದ ಇಂಥ ಬೇಡಿಕೆಗಳನ್ನು ಒಮ್ಮಿಂದೊಮ್ಮೆಲೇ ಇಡುವುದು ಕೂಡ, ಮುನ್ನಡೆಯನ್ನು ತಡೆಯುವ ಕುಯುಕ್ತಿಯೇ ಆಗಿರುತ್ತಾದ್ದರಿಂದ- ಸಕರ್ಾರ ಸದ್ಯಕ್ಕೆ ಎಲ್ಲ ಶಾಲೆಗಳಲ್ಲಿ ಕನ್ನಡ ಮಾಧ್ಯಮವನ್ನು ತರಲಿ ಹಾಗೂ ಎಲ್ಲ ಸಕರ್ಾರಿ ಶಾಲೆಗಳಲ್ಲಿ ಇಂಗ್ಲಿಷನ್ನು ಒಂದು ಭಾಷೆಯಾಗಿ ಕಲಿಸಲು ಮೊದಲು ಮಾಡಲಿ. ಇನ್ನು ಇಂಗ್ಲಿಷ್ ಬೋಧನೆಯ ಸ್ವರೂಪ ಕುರಿತು ಒಂದೆರಡು ಸೂಚನೆಗಳನ್ನು ಮಂಡಿಸಬಹುದು: ಇಂಗ್ಲಿಷಿನ ಬಗ್ಗೆ ನಮಗೆಲ್ಲ ಉಂಟಾಗುವ ತೊಳ್ಳೆ ನಡುಕದ ಮೂಲ- ಒಂದೇ ಪಟ್ಟಿಗೆ ರೆನ್ ಅಂಡ್ ಮಾಟರ್ಿನ್ನಿಂದ ಹಿಡಿದು, ಷೇಕ್ಸ್ಪಿಯರ್ ಮಿಲ್ಟನ್ಗಳೆಲ್ಲರನ್ನೂ ಮಕ್ಕಳ ತಲೆಗೆ ತುರುಕಲೆತ್ನಿಸುವ ನಮ್ಮ ಕ್ರೂರ ಬೋಧನಾ ಪದ್ಧತಿ. ನಾವೆಲ್ಲ ಮೊದಲು ಭಾಷೆ ಕಲಿಯುತ್ತೇವೆ. ಲಿಪಿ, ವ್ಯಾಕರಣ (ಅಂದರೆ ಓದು ಬರಹ) ಎಲ್ಲಾ ನಂತರ. ನಮ್ಮ ಮನೆಭಾಷೆಯಾದ ಕನ್ನಡವನ್ನು ಕಲಿಯುವಾಗ ನಾವು ಅ ಆ ಇ ಈ ಎಂದು ಶುರು ಮಾಡಿದೆವೇ? ಮೊದಲು ಮಾತು, ಆಮೇಲೆ ಭಾಷೆಯ ಪಠ್ಯ. ಅಂದರೆ ಮಕ್ಕಳು ಶಾಲೆ ಸೇರುವುದರೊಳಗೇ ನುಡಿಯ ಹಿಡಿತ ಸಾಧಿಸಿರುತ್ತಾರೆ. ಅದಕ್ಕೇ ಓದು ಬರಹದ ಹಂತ ಅವರಿಗೆ ಹೊರೆಯೆನಿಸುವುದಿಲ್ಲ. ಇಂಗ್ಲಿಷ್ಗೂ ಇದೇ ಪದ್ಧತಿ ಅನುಸರಿಸಲು ತೊಂದರೆ ಏನು? ಬೇಕಾದರೆ ಇಂಗ್ಲಿಷ್ ಬೋಧನೆಯಲ್ಲಿ ಪ್ರಾಥಮಿಕ ಹಂತ ಪೂರೈಸುವವರೆಗೂ ಪುಸ್ತಕದ ತಂಟೆಗೇ ಹೋಗುವುದು ಬೇಡ; ಅಂದರೆ ನಾಲ್ಕು ವರ್ಷ ಇಂಗ್ಲಿಷ್ ಬರೀ ಆಡುಭಾಷೆಯಾಗಿ ಮಕ್ಕಳನ್ನು ತಲುಪಲಿ. (ವಾಸ್ತವಿಕವಾಗಿ ಇದು ಡಾ. ಯು.ಆರ್. ಅನಂತಮೂತರ್ಿಯವರು ಕೊಟ್ಟ ಸಲಹೆ.) ಐದನೇ ತರಗತಿಯಿಂದ ಓದು ಬರಹ ಆರಂಭಿಸಿದರೆ ಆ ವೇಳೆಗೆ ಭಾಷೆಯ ಬಗೆಗಿನ ಭೀತಿ ನಿವಾರಣೆಯಾಗಿರುತ್ತದೆ. ಮತ್ತು ಇಂಗ್ಲಿಷ್ ಗುಮ್ಮ ತನ್ನ ಭಯಾನಕ ಮುಖವಾಡ ಕಳೆದುಕೊಂಡು, ಅಳತೆ ಮೀರದ ಸವಾಲಾಗಿ ಮಕ್ಕಳ ಕೈಗೆಟಕುತ್ತದೆ. ಇದರ ಜೊತೆಗೆ ಸಕರ್ಾರಿ ಶಾಲೆಗಳ ಬಗ್ಗೆ ನಿಜವಾಗಿಯೂ ಪ್ರೀತಿ ತಳೆದು ಅಲ್ಲಿನ ಸೌಕರ್ಯಗಳನ್ನು ಕೈಲಾದ ಮಟ್ಟಿಗೆ ಏರಿಸುತ್ತಾ ಹೋದರೆ, ಕ್ರಮೇಣ ಸಕರ್ಾರಿ ಹಾಗೂ ಖಾಸಗಿ ಶಾಲೆಗಳ ‘ಪ್ರತಿಷ್ಠಾ ಅಂತರ’ವೂ ತಗ್ಗುತ್ತದೆ. 10 ಜೂನ್ 2005 *** ಪ್ರೆಸ್ ಕ್ಲಬ್ ಪ್ರಕಾಶನ ಹೊರತಂದಿರುವ ಈ ಕೃತಿಯ ಆಯ್ದ ಭಾಗಗಳು ಇನ್ನು ಮುಂದೆ ವಾರಕ್ಕೆ ಎರಡು ಬಾರಿ ‘ಅವಧಿ’ಯಲ್ಲಿ ಪ್ರಕಟಗೊಳ್ಳಲಿದೆ. ಈ ಕೃತಿ ಐ ಬಿ ಎಚ್ ಪ್ರಕಾಶನದ ಆನ್ಲೈನ್ ಮಳಿಗೆಯಲ್ಲೂ ಲಭ್ಯ]]>

‍ಲೇಖಕರು G

February 21, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This