ಎನ್ ಎಸ್ ಶಂಕರ್ ಕಾಲಂ: ಮುನ್ನಾಭಾಯಿಯ ಮಾಂತ್ರಿಕ ಅಪ್ಪುಗೆ!

ಈ ಚಿತ್ರ ಬಿಡುಗಡೆಯಾಗಿ, ಈ ಲೇಖನ ಪ್ರಕಟವಾಗಿ ವರ್ಷಗಳೇ ಉರುಳಿದರೂ ಈ ಲೇಖನ ಈಗಲೂ ಪ್ರಸ್ತುತ ಏಕೆ೦ದರೆ ಈ ಲೇಖನ ನಮ್ಮೆಲ್ಲರೊಳಗಿನ ಒ೦ಟಿತನವನ್ನೂ, ಒ೦ದು ಮಾ೦ತ್ರಿಕ  ಸ್ಪರ್ಶಕ್ಕಾಗಿ  ಹೃದಯ ಮಿಡಿಯುವ ರೀತಿಯನ್ನು ಅನನ್ಯವಾಗಿ ಹಿಡಿದಿಡುತ್ತದೆ. ಎಲ್ಲರೆದೆಯಲ್ಲೂ ಒ೦ದು ಮಾ೦ತ್ರಿಕ ಅಪ್ಪುಗೆಯ ಬೇಡಿಕೆ ಮಿಡಿಯುತ್ತಲೇ ಇರುತ್ತದೆ ಮತ್ತು ಆ ಸ್ಪರ್ಶಕ್ಕೆ ಕೊರಡಿನಲ್ಲೂ ಜೀವಜಲ ಹರಿಸಬಲ್ಲ ಮಾ೦ತ್ರಿಕತೆ ಇರುತ್ತದೆ….

– ಎನ್.ಎಸ್. ಶ೦ಕರ್

ಮುನ್ನಾಭಾಯಿಯ ಮಾಂತ್ರಿಕ ಅಪ್ಪುಗೆ!

  ಆ ಟೆಸ್ಟ್ ರಿಪೋಟರ್ುಗಳೇ ಅವನ ಮರಣಶಾಸನ. ಇಷ್ಟು ವರ್ಷ ಅವನು ತನ್ನ ಕುಟುಂಬದ ಜವಾಬ್ದಾರಿಗಳಲ್ಲಿ ಹೂತುಹೋಗಿದ್ದ. ಜೊತೆಗಾರರು ತಮ್ಮ ಸಂಪಾದನೆಯಲ್ಲಿ ಸಿಗರೇಟು, ಗುಂಡಿನಂಥ ಚಟಗಳಲ್ಲಿ, ಹುಡುಗಿಯರೊಂದಿಗೆ ಸುಖ ಅರಸುತ್ತ ಮೆರೆಯುತ್ತಿದ್ದರೆ, ಇವನು ತಾನು ಖರೀದಿಸಬೇಕಾದ ಫ್ಲಾಟ್, ನಡೆಯಬೇಕಾದ ತಂಗಿಯ ಮದುವೆ, ತಾಯಿಯ ಆರೈಕೆ ಇಂಥವಕ್ಕಾಗಿ ಹಲ್ಲು ಕಚ್ಚಿಕೊಂಡು ತನ್ನ ಕಾಮನೆಗಳನ್ನು ಹತ್ತಿಕ್ಕಿಕೊಂಡು, ತಲೆ ಬಗ್ಗಿಸಿ ದುಡಿಯುತ್ತಿದ್ದ. ‘ನನಗಾಗಿ ಜೀವಿಸುವ ಒಂದು ದಿನ ಬರಬಹುದು’ ಅನ್ನುವ ನಿರೀಕ್ಷೆಯಲ್ಲಿ. ಅವನಿಗೆ ಹೊಟ್ಟೆಯ ಕ್ಯಾನ್ಸರ್ ಬಂತು. ರಿಪೋಟರ್ುಗಳನ್ನು ನೋಡಿದ ಡಾಕ್ಟರ್ ಸುಮನ್ ನೀನು ಇನ್ನೂ ಸ್ವಲ್ಪ ಮುಂಚೆ ಬರಬೇಕಿತ್ತು ಅಂದಾಗಲೇ ಪ್ರಾಯದ ತರುಣ ಜಹೀರ್ಗೆ ಗೊತ್ತಾಗಿ ಹೋಯಿತು- ಇನ್ನು ತನಗುಳಿದಿರುವುದು ಕೆಲವೇ ದಿನದ ಆಯಸ್ಸು. ಮಾರನೇ ದಿನವೇ ಬಂದು ಆಸ್ಪತ್ರೆಗೆ ಸೇರಬೇಕು. ಜಹೀರ್ ಜಗತ್ತಿನ ಸಂಕಟವನ್ನೆಲ್ಲ ಹೊಟ್ಟೆಯಲ್ಲಿಟ್ಟುಕೊಂಡು ಅವಳ ರೂಮಿನಿಂದ ಹೊರಟಾಗ- ಇತ್ತ ಡಾಕ್ಟರ್ ಸುಮನ್ಳ ಪ್ರೇಮದ ಉತ್ತರಕ್ಕಾಗಿ ಕಾದಿರುವ ಮುನ್ನಾಭಾಯಿ- ಮುರಳಿ ಕೇಳುತ್ತಾನೆ- ನೀನೇಕೆ ಅವನಿಗೆ `ಜಾದೂ ಕಿ ಜಪ್ಪಿ’- ಮಾಂತ್ರಿಕ ಅಪ್ಪುಗೆ ನೀಡಲಿಲ್ಲ? ಅಂದರೆ? ಅವನನ್ನೇಕೆ ನೀನು ತಬ್ಬಿಕೊಳ್ಳಲಿಲ್ಲ? ಅವನಿಗೆ ಅದರ ಅಗತ್ಯವಿತ್ತು. ಸುಮನ್ ತಲೆಯಾಡಿಸುತ್ತಾಳೆ- ಮುರಳಿ, ಅಂಥದೆಲ್ಲ ಸಾಧ್ಯನಾ?…. ಇದಕ್ಕೆ ಮುಂಚಿನ ದೃಶ್ಯವೊಂದರಲ್ಲಿ, ಮುನ್ನಾ ಇದೇ ಸುಮನ್ಗೆ ಇದೇ ‘ಮಾಂತ್ರಿಕ ಅಪ್ಪುಗೆ’ಯ ಪರಿಣಾಮದ ನಿದರ್ಶನ ಒದಗಿಸಿರುತ್ತಾನೆ. ಆ ಆಸ್ಪತ್ರೆಯ ನೆಲ ಸಾರಿಸುವ ಮುದುಕ ಮಕ್ಸೂದ್, ತಾನು ಒರೆಸುತ್ತಲೇ ಇದ್ದರೂ ಅದರ ಮೇಲೆ ಓಡಾಡುತ್ತಲೇ ಮತ್ತೆ ಗಲೀಜು ಮಾಡುತ್ತಿರುವ ಜನರ ಮೇಲೆ ರೇಗಾಡುತ್ತ ತನ್ನ ಕೆಲಸ ಮಾಡುತ್ತಿದ್ದಾನೆ. ಮುನ್ನಾ ಹೋಗಿ ಇದ್ದಕ್ಕಿದ್ದಂತೆ ಅವನನ್ನು ಅಪ್ಪಿ ಹಿಡಿಯುತ್ತಾನೆ. ಮುದುಕ ಮತ್ತೂ ರೇಗುತ್ತಾನೆ. ಮುದುಕನ ಹೆಸರು ಕೇಳಿದರೆ, ಯಾಕೆ ದೂರು ಕೊಡೋದಿಕ್ಕಾ? ಕೊಟ್ಟುಕೋ ಹೋಗು, ನನ್ನ ಹೆಸರು ಮಕ್ಸೂದ್ ಅನ್ನುತ್ತಾನೆ. ಆದರೆ ಮುನ್ನಾ, ಇಲ್ಲ ನಾನು ನಿನಗೆ ಥ್ಯಾಂಕ್ಯೂ ಹೇಳಬೇಕು. ಇಲ್ಲಿ ಹುಷಾರಾಗಿ ಹೋಗುವ ರೋಗಿಗಳೆಲ್ಲ ವೈದ್ಯರಿಗೆ ಥ್ಯಾಂಕ್ಯೂ ಹೇಳಿ ಹೋಗುತ್ತಾರೆ. ನೀನು ಎಲ್ಲವನ್ನೂ ಶುಭ್ರ ಮಾಡುತ್ತೀ; ಅವರ ಗಾಯದ ಬಟ್ಟೆಗಳನ್ನೆಲ್ಲ ಎತ್ತಿ ಹಾಕುತ್ತೀ. ಆದರೆ ನಿನಗೆ ಯಾರೂ ಥ್ಯಾಂಕ್ಯೂ ಹೇಳುವುದಿಲ್ಲ. ಅದಕ್ಕೇ ನಿನಗೆ ಥ್ಯಾಂಕ್ಯೂ ಅನ್ನುತ್ತಾನೆ. ಮುದುಕನ ಕಣ್ಣಂಚಲ್ಲಿ ನೀರು. ಹೋಗು ನನ್ನನ್ನು ಅಳಿಸಬೇಡ ಹೋಗು ಎಂದು ಕಳಿಸುತ್ತಾನೆ. ಸ್ಪರ್ಶ. ಅಪ್ಪುಗೆ. ಮನುಷ್ಯನಿಗೆ ಅಥವಾ ಯಾವುದೇ ಜೀವಿಗೆ ಸ್ಪರ್ಶ ಏನು ಮಾಡುತ್ತದೆ? ಬುದ್ಧ ಮತ್ತು ಯೇಸುಕ್ರಿಸ್ತ ಸ್ಪರ್ಶ ಮಾತ್ರದಿಂದಲೇ ರೋಗಿಗಳನ್ನು ಗುಣಪಡಿಸುತ್ತಿದ್ದರೆಂಬ ಪ್ರತೀತಿಯಿದೆ. ನಿಜವೋ ಸುಳ್ಳೋ ಗೊತ್ತಿಲ್ಲ. ಆದರೆ ತಾಯಿಯ ನಿರಂತರ ಸ್ಪರ್ಶ, ಅಪ್ಪುಗೆಯಲ್ಲೇ ಮಗು ಈ ವಿಶಾಲ ಜಗತ್ತಿನ ಸವಾಲುಗಳಿಗೆ ಸಜ್ಜಾಗುತ್ತ ಬೆಳೆಯುತ್ತದೆಂದು ಅರಿಯಲು ವೈದ್ಯಕೀಯ ಜ್ಞಾನವೇನೂ ಬೇಕಿಲ್ಲ. ಹಾಗೆಯೇ ಸ್ಪರ್ಶಕ್ಕೆ, ಇನ್ನೊಂದು ಜೀವವನ್ನು ಪೊರೆಯುವ, ಚಿಗುರಿಸುವ ಮಾಂತ್ರಿಕ ಶಕ್ತಿ ಇದೆ; ಮತ್ತು ಯಾರಿಗಾದರೂ ಸಹಾನುಭೂತಿ ತೋರಿ ಸಾಂತ್ವನ ನೀಡಬೇಕೆಂದರೆ ಅದಕ್ಕೆ ಮುಟ್ಟಿ ತಬ್ಬುವುದಕ್ಕಿಂತ ಪರಿಣಾಮಕಾರಿ ವಿಧಾನಗಳಿಲ್ಲ- ಇವೆಲ್ಲ ನಮಗೆ ಸಹಜವಾಗಿಯೇ ಗೊತ್ತಿರುವ ವಿಷಯಗಳು. ಅಂದ ಮೇಲೆೆ ಒಂದು ಇಡೀ ಜನಸಮೂಹಕ್ಕೆ- ಎಲ್ಲ ಜೀವಿಗಳಿಗೂ ಸಹಜವಾದ, ಅಗತ್ಯವಾದ- ಮುಟ್ಟುವ ಅವಕಾಶವನ್ನೇ ನಿರಾಕರಿಸಿ, ಅಸೃಶ್ಯತೆಯನ್ನು ಧಾಮರ್ಿಕ ಕಟ್ಟಳೆ ಮಾಡಿ ದೂರವಿಟ್ಟ ನಮ್ಮ ಹಿಂದೂಧರ್ಮದ ಅನುಯಾಯಿಗಳಿಗಿಂತ ದೊಡ್ಡ ದುಃಖಿಗಳಿರಲು ಸಾಧ್ಯವೇ ಈ ಜಗತ್ತಿನಲ್ಲಿ?… ಈ ಮುಟ್ಟುವ, ತಬ್ಬುವ ತತ್ವ, ಎರಡು ವರ್ಷದ ಹಿಂದೆ ತೆರೆ ಕಂಡು ಅಪಾರ ಯಶಸ್ಸು ಪಡೆದ ಮುನ್ನಾಭಾಯಿ ಎಂಬಿಬಿಎಸ್ ಎಂಬ ವಿಶಿಷ್ಟ ಹಿಂದಿ ಚಿತ್ರದ ಮುಖ್ಯ ಸ್ಫೂತರ್ಿಗಳಲ್ಲಿ ಒಂದು. ಚಿತ್ರದ ನಾಯಕ ಮುನ್ನಾ- ಮುನ್ನಾಭಾಯಿ ಎಂದು ಬಿರುದಾಂಕಿತನಾದ `ಭಾಯಿ’- ಅಂದರೆ ಮುಂಬಯಿ ಶಹರದ ಗೂಂಡಾ. ಚಿಕ್ಕವಯಸ್ಸಿನಲ್ಲೇ ಮನೆ ಬಿಟ್ಟು ಓಡಿ ಬಂದವನು. ಇವನು ಹೆಸರಾಂತ ಡಾಕ್ಟರು ಎಂಬುದು ಊರಿನಲ್ಲೇ ನೆಲೆಸಿರುವ ತಂದೆ ತಾಯಂದಿರ ತಪ್ಪು ಕಲ್ಪನೆ. ಒಂದು ಸಂದರ್ಭದಲ್ಲಿ ಇವನು ಕೇವಲ ಗೂಂಡಾ ಎಂದು ಅವರಿಗೆ ಗೊತ್ತಾದಾಗ ಅವರು ಅನುಭವಿಸುವ ಅವಮಾನ, ಯಾತನೆ ನೋಡಿ ಇವನಿಗೆ ತಾನು ಡಾಕ್ಟರಾಗಬೇಕು ಅನಿಸಿಬಿಡುತ್ತದೆ. ಕಳ್ಳಮಾರ್ಗದಲ್ಲಿ ಮುಂಬಯಿನ ಪ್ರತಿಷ್ಠಿತ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಗಿಟ್ಟಿಸಿಕೊಳ್ಳುವ ಮುನ್ನಾ, ವಿದ್ಯಾಥರ್ಿಯಾಗಿ ತನ್ನ ಕಾಲೇಜಿಗೆ ಮತ್ತು ಆಸ್ಪತ್ರೆಗೆ ಏನು ಮಾಡುತ್ತಾನೆ ಅನ್ನುವುದೇ ಚಿತ್ರದ ಸಾರ. ಮುನ್ನಾ ಕಾಲೇಜಿಗೆ ಪ್ರವೇಶ ಪಡೆದು ಕಾಲಿಡುತ್ತಿದ್ದಂತೆಯೇ ಅವನು ಎದುರಿಸಬೇಕಾದ ಮುಖ್ಯ ಮುಖಾಮುಖಿಗಳಿಗೆ ಪೀಠಿಕೆ ಒದಗುತ್ತದೆ. ಆಸ್ಪತ್ರೆ ಮೊಗಸಾಲೆಯಲ್ಲಿ ಜನವೋ ಜನ. ಅಲ್ಲೇ ಒಂದು ಸ್ಟ್ರೆಚರಿನ ಮೇಲೆ ತೇಕುಸಿರು ಬಿಡುತ್ತ ಮಲಗಿದ ಹದಿವಯದ ತರುಣ. ಅವನ ತಾಯಿ ಕ್ಯೂನಲ್ಲಿ ನಿಂತು ಅಡ್ಮಿಷನ್ಗಾಗಿ ಬರೆಸಲು ಹೆಣಗುತ್ತಿದ್ದಾಳೆ. ಮುಖದಲ್ಲಿ ಆತಂಕ ಮಡುಗಟ್ಟಿದೆ. ಮುನ್ನಾ ವಿಚಾರಿಸುತ್ತಾನೆ. ಅವನು ಅವಳ ಮಗ. ವಿಷ ಕುಡಿದು ಆತ್ಮಹತ್ಯೆಯ ಪ್ರಯತ್ನ ಮಾಡಿದ್ದಾನೆ. ಯಾವ ಕ್ಷಣದಲ್ಲಿ ಏನಾಗುವುದೋ ಗೊತ್ತಿಲ್ಲ. ಮುನ್ನಾ ನೋಡಿ, ಆಚೀಚೆ ಓಡಾಡುವ ಡಾಕ್ಟರನ ಗಮನ ಸೆಳೆಯಲೆತ್ನಿಸುತ್ತಾನೆ. ಆಗುವುದಿಲ್ಲ. ಕಡೆಗೆ ತನ್ನ ಸ್ವಭಾವಕ್ಕೆ ತಕ್ಕಂತೆ ಒಬ್ಬ ಡಾಕ್ಟರನ ಕೊರಳಪಟ್ಟಿ ಹಿಡಿದ ಕೂಡಲೇ ಸಾಯುತ್ತ ಮಲಗಿದ ತರುಣನನ್ನು ಚಿಕಿತ್ಸೆಗೆ ಒಯ್ಯುತ್ತಾರೆ! ಈ ಘಟನೆ ಚಿತ್ರದಲ್ಲಿ ಮುಂದಕ್ಕೆ ಯಾವ ಬಗೆಯ ಪ್ರಶ್ನೆಗಳಿಗೆ ನಮ್ಮನ್ನು ಸಜ್ಜು ಮಾಡುತ್ತದೆ ನೋಡಿ: ಹೊಸ ವಿದ್ಯಾಥರ್ಿಗಳನ್ನುದ್ದೇಶಿಸಿ ಮಾತಾಡಲು ಬಂದ ಆ ಕಾಲೇಜಿನ ಡೀನ್ಗೆ ಮುನ್ನಾ ಒಂದು ಪ್ರಶ್ನೆ ಇಡುತ್ತಾನೆ- ಏ ಮಾಮೂ, ಸಾಯುತ್ತ ಬಿದ್ದಿರುವ ಒಬ್ಬ ರೋಗಿ ಫಾರಂ ತುಂಬಿಸಲೇಬೇಕಾ? ಅವನ ಪ್ರಶ್ನೆಯ ಧಾಟಿಗೆ ಇಡೀ ಕ್ಲಾಸು ಗೊಳ್ಳೆನ್ನುತ್ತದೆ. ಆದರೆ ನಮಗೆ- ಪ್ರೇಕ್ಷಕರಿಗೆ- ಇದು ನಗುವ ವಿಚಾರವಲ್ಲ. ತುಸು ಮುಂಚೆಯಷ್ಟೇ ಆ ಡೀನ್ ತನ್ನ ದೃಷ್ಟಿಯಲ್ಲಿ ಆದರ್ಶ ವೈದ್ಯನೆಂದರೆ ಯಾರು ಎಂದು ವಿವರಿಸಿ ಹೇಳಿದ್ದಾನೆ. ನಾನು ಎಂದೂ ನನ್ನ ರೋಗಿಗಳನ್ನು ಪ್ರೀತಿಸುವುದಿಲ್ಲ. ಈ ನನ್ನ ಕೈ ಇದೆಯಲ್ಲ, ನೂರಾರು ಆಪರೇಷನ್ ಮಾಡಿದ್ದಾವೆ. ಆದರೆ ಆಪರೇಷನ್ಗೆಂದು ನಿಂತಾಗ ಈ ಕೈ ಎಂದೂ ನಡುಗಿಲ್ಲ. ಅದೇ ನಾಳೆ ನನ್ನ ಮಗಳು ಆಪರೇಷನ್ ಟೇಬಲ್ಲಿನ ಮೇಲೆ ಮಲಗಿದ್ದಾಳೆಂದು ಊಹಿಸಿ, ಆಗ ಕೈ ತಂತಾನೇ ನಡುಗತೊಡಗುತ್ತೆ. ಯಾಕೆ? ಯಾಕೆಂದರೆ ನನಗೆ ನನ್ನ ಮಗಳು ಅಂದ್ರೆ ಪ್ರೀತಿ. ಅದಕ್ಕೇ ನಾವಿಲ್ಲಿ ಚಿಕಿತ್ಸೆ ಕೊಡೋದು ಹೇಳಿಕೊಡ್ತೀವಿಯೇ ಹೊರತು ಪ್ರೀತಿಸೋದನ್ನಲ್ಲ. ನೆನಪಿಡಿ, ರೋಗಿ, ನಮ್ಮ ಚಿಕಿತ್ಸೆಗಾಗಿ ಬಂದ ಒಂದು ದೇಹ ಅಷ್ಟೇ…. ಇದು ಬಹುತೇಕ ನಮ್ಮ ವೈದ್ಯಕೀಯ ಸಮೂಹದ ದೃಷ್ಟಿ ಮತ್ತು ವಾದವಲ್ಲವೇ? ಹೀಗೆ ಮುನ್ನಾಭಾಯಿ ಮತ್ತು ಆ ಡೀನ್ (ಅಂದರೆ ವೈದ್ಯ ಸಮೂಹದ ಮೌಲ್ಯವ್ಯವಸ್ಥೆಗಳ) ನಡುವಣ ತಾಕಲಾಟವಾಗಿ ಸಿನಿಮಾ ಬೆಳೆಯತೊಡಗುತ್ತದೆ. ಮತ್ತು ಈ ಸಂಘರ್ಷದ ನಿರೂಪಣೆಗೆ ನಿದರ್ೇಶಕ ಬಳಸುವುದು ಸರ್ವ ಕಾಲಕ್ಕೂ ಸಲ್ಲಬಹುದಾದ ವಿನೋದದ ಧಾಟಿಯನ್ನು. (ನನಗಿಂತ ಮೊದಲೇ ಈ ಸಿನಿಮಾ ನೋಡಿದ್ದ ಕೆಲವು ಗೆಳೆಯರು ಒಳ್ಳೆ ಕಾಮಿಡಿ ಚಿತ್ರ ಎಂದು ಶಿಫಾಸರ್ು ಮಾಡಿದ್ದರು. ಆದರೆ ನೋಡಿದ ಮೇಲೇ ನನಗೆ ಅರ್ಥವಾಗಿದ್ದು- ಇದು ಕಾಮಿಡಿಯ ಮುಸುಕಷ್ಟೇ ಹೊದ್ದ ಪ್ರೌಢ ಆಶಯಗಳ ಚಿತ್ರ- ಚಾಪ್ಲಿನ್ನನ ಮೇಲ್ಪಂಕ್ತಿಯಲ್ಲಿ ಅಂತ.) ಒಟ್ಟು ಈ ನಂಬಿಕೆ- ರೋಗಿ, ಔಷಧಿಗಾಗಿ ಬಂದ ಒಂದು ದೇಹ ಮಾತ್ರ ಅನ್ನುವುದು ಎಲ್ಲಿಯವರೆಗೆ ಹೋಗುತ್ತದೆ ಅನ್ನಲು ಈ ಚಿತ್ರದಲ್ಲೇ ಬರುವ ಆನಂದ್ ಎಂಬ ರೋಗಿಯ ಉದಾಹರಣೆ ನೋಡಬೇಕು. ಅವನು ಕಳೆದ ಹನ್ನೆರಡು ವರ್ಷಗಳಿಂದ ವೈದ್ಯಕೀಯ ಅರ್ಥದಲ್ಲಿ ಮಾತ್ರ ಬದುಕಿದ್ದಾನೆ. ಅಂದರೆ ಅವನಿಗೆ ಕಿವಿ ಕೇಳಿಸುತ್ತದೆ, ವಾಸನೆಯನ್ನು ಮೂಗು ಗ್ರಹಿಸಬಲ್ಲುದು. ಆದರೆ ಯಾವುದಕ್ಕೂ ಪ್ರತಿಕ್ರಿಯಿಸುವ ಶಕ್ತಿ ಅವನಿಗಿಲ್ಲ. ದೇಹ ಉಸಿರಾಡುತ್ತಿದೆ ಎಂಬುದನ್ನು ಬಿಟ್ಟರೆ ಅವನು ಹೆಣವೇ. ಅವನನ್ನು ಒಂದು ಕುತೂಹಲದ ಕೇಸ್ ಆಗಿ, ಅದೊಂದು ದೇಹ ಮಾತ್ರವೋ ಅನ್ನುವಂತೆ, ವಿದ್ಯಾಥರ್ಿಗಳ ಮುಂದೆ ಪ್ರದಶರ್ಿಸುವ ಡಾಕ್ಟರ್ನ ಧೋರಣೆ ಕಂಡಾಗ ಮುನ್ನಾಗೆ ಸಹಜವಾಗಿಯೇ ಸಿಟ್ಟು ಬರುತ್ತದೆ. ಏ ಮಾಮೂ, ಅವನ ಕಣ್ಣಿಗೆ ಟಾಚರ್್ ಬಿಡಬೇಡ. ಪಾಪ ಅವನಿಗೆ ಕಷ್ಟವಾಗುತ್ತೆ ಅನ್ನುತ್ತಾನೆ. ಆದರೆ ಡಾಕ್ಟರ್ಗೆ ಹಾಗನಿಸುತ್ತಿಲ್ಲ. ರೋಗಿಗೇನೂ ತಿಳಿಯುವುದೇ ಇಲ್ಲ ಅನ್ನುತ್ತಾನೆ ಆತ. ಆದರೆ ಯಾವುದಕ್ಕೂ ಸ್ಪಂದಿಸಲಾಗದ ಆನಂದ್ ಮೂಕಪ್ರಾಣಿಯಂತೆ ಅನುಭವಿಸುತ್ತಿರುವ ಚಿತ್ರಹಿಂಸೆಯನ್ನು ಮುನ್ನಾ ನೋಡಲಾರ. ಅವನ ವೀಲ್ಚೇರ್ ತಳ್ಳಿಕೊಂಡು ಕೂಡಲೇ ಅಲ್ಲಿಂದ ದೂರ ಒಯ್ಯುವುದಷ್ಟೇ ಅಲ್ಲ, ಇಂಥವರಿಗಾಗಿ ಆಸ್ಪತ್ರೆಯ ಬೆಡ್ ಇಡುವುದೇ ವ್ಯರ್ಥ ಅನ್ನುವ ಡಾಕ್ಟರರ ಮಾತಿಗೆ ಪ್ರತಿಕ್ರಿಯೆಯಾಗಿ, ತನ್ನ ಎಂದಿನ ಹುಂಬ ಧಾಟಿಯಲ್ಲಿ ತಾನೇ ಒಂದು ಮಂಚ ತರಿಸಿ ಅಲ್ಲಿ ಆನಂದ್ನನ್ನು ಮಲಗಿಸುತ್ತಾನೆ! ಆನಂದನಿಂದ ಪ್ರತಿಕ್ರಿಯೆ ಬರಲಿ ಬಿಡಲಿ, ಮೂರು ಹೊತ್ತೂ ಅವನೊಡನೆ ಮಾತಾಡುತ್ತ, ಕಡೆಗೆ ಅವನೊಂದಿಗೆ ಚುಕ್ಕಿ ಆಟವನ್ನೂ ಆಡತೊಡಗುತ್ತಾನೆ! ಅಷ್ಟಕ್ಕೂ ಮುನ್ನಾನ ಸಿದ್ಧಾಂತವೇನು? ಹೃದಯದ ನುಡಿ ಹೃದಯಕ್ಕೆ ತಲುಪಲೇಬೇಕು. ಈ ಹೃದಯದ ಭಾಷೆಯನ್ನು ಅವನು ಪರೀಕ್ಷೆಗೊಡ್ಡುವ ಸನ್ನಿವೇಶವೂ ಚೆನ್ನಾಗಿದೆ. ಡಾಕ್ಟರ್ ಸುಮನ್ ಇವನ ಮಾತಿಗೆ ತಲೆಯಾಡಿಸಿ ವಾಡರ್ಿನಿಂದಾಚೆಗೆ ಹೆಜ್ಜೆ ಹಾಕುತ್ತಿದ್ದಾಳೆ. ಇವನು ಮನಸ್ಸಿನಲ್ಲೇ ಅಂದುಕೊಳ್ಳುತ್ತಾನೆ. `ಹಲೋ ಹಲೋ ಹಲೋ, ಮೈಕ್ ಟೆಸ್ಟಿಂಗ್… ಸುಮನ್, ಸುಮನ್ ನನ್ನ ದನಿ ಕೇಳ್ತಿದೆಯಾ? ಸುಮನ್, ಸುಮನ್…’ ಅವಳು ಇನ್ನೇನು ವಾಡರ್ಿನಿಂದಾಚೆ ಕಾಲಿಡಬೇಕು, ಆಗ ಕ್ಷಣ ನಿಲ್ಲುತ್ತಾಳೆ. ತಿರುಗಿ ನೋಡುತ್ತಾಳೆ. ಯಾವುದೋ ಕರೆಗೆ ಓಗೊಟ್ಟವಳಂತೆ ಮುಗುಳ್ನಗುತ್ತಾಳೆ. ಅಲ್ಲಿಗೆ ಹೃದಯದ ದನಿ ಇನ್ನೊಂದು ಹೃದಯವನ್ನು ಮುಟ್ಟಿತು…! ಮುನ್ನಾಭಾಯಿಯ ಇಂಥ ಹೃದಯದ ದನಿ ಚಿತ್ರದುದ್ದಕ್ಕೂ ಯಾರ್ಯಾರನ್ನೋ ಬದುಕಿಸುತ್ತದೆ, ಅಥವಾ ವಿಮುಖರಾದವರನ್ನು ಬದುಕಿನ ತೆಕ್ಕೆಗೆ ಮರಳಿ ತರುತ್ತದೆ. ಆ ಹಾದಿಯಲ್ಲಿ ಎಷ್ಟೋ ಡಾಕ್ಟರುಗಳೂ ಸೇರಿದಂತೆ ಇಡೀ ಆಸ್ಪತ್ರೆಯ ಸಿಬ್ಬಂದಿ ಇವನ ಮೋಡಿಗೆ ಒಳಗಾಗಿದ್ದಾರೆ. ಆದರೆ ಇವನ ಹಾಗೂ ಆ ಡೀನ್ನ ಸಂಘರ್ಷ ಮಾತ್ರ ತೀವ್ರವಾಗುತ್ತಲೇ ಹೋಗಿದೆ. ಈ ಘರ್ಷಣೆಯ ಪರಾಕಾಷ್ಠೆ- ಚಿತ್ರದ ಅತ್ಯಂತ ಹೃದಯಂಗಮ ಸನ್ನಿವೇಶಗಳಲ್ಲೊಂದು. ಡೀನ್ಗೆ ಇವನು ಏನೇನೋ ಕಳ್ಳಮಾರ್ಗಗಳಲ್ಲಿ ತಾನೊಡ್ಡುವ ತೊಡಕುಗಳನ್ನೆಲ್ಲ ದಾಟಿ ಪಾರಾಗುತ್ತಿದ್ದಾನೆಂದು ಗೊತ್ತು. ಆದರೆ ಹೇಗೆಂದು ಅರ್ಥವಾಗುತ್ತಿಲ್ಲ. ಆದರೆ ಒಮ್ಮೆ ಅವನಿಗೆ ಮುನ್ನಾನನ್ನು ಸಿಕ್ಕಿಹಾಕಿಸುವ ಒಂದು ಅವಕಾಶ ಒದಗಿಬಿಡುತ್ತದೆ. ಆ ಕ್ಯಾನ್ಸರ್ ರೋಗಿ ಜಹೀರ್ನ ಕಡೇ ದಿನಗಳಿಗೆ ರಂಗು ತರಲು ಮುನ್ನಾ ಮಾದಕ ಬೆಡಗಿಯೊಬ್ಬಳನ್ನು ರಾತ್ರಿ ವಾಡರ್ಿಗೇ ಕಳಿಸಿದ್ದಾನೆ. ಆ ತುಂಡು ಬಟ್ಟೆಯ ಹುಡುಗಿ ವೈಯಾರವಾಗಿ ಕುಣಿಯುತ್ತ ಹಾಡುತ್ತಾಳೆ: ಬದುಕಿನಲ್ಲಿ ಎಷ್ಟು ಗಳಿಗೆಗಳು ಉಳಿದಿವೆಯೆಂದು ಲೆಕ್ಕ ಹಾಕಬೇಡ, ಇರುವ ಗಳಿಗೆಗಳಲ್ಲಿ ಎಷ್ಟು ಬದುಕು ಇದೆಯೆಂದು ನೋಡು!… (ಐಟಂ ಕುಣಿತವೊಂದು ಕಥೆಯ ಅನಿವಾರ್ಯ ಅಂಗವಾಗಿ ಬಂದ ಉದಾಹರಣೆ ನನಗೆ ಗೊತ್ತಿದ್ದಂತೆ ಇದೊಂದೇ.) ಆ ರಾತ್ರಿ ವಾಡರ್ಿಗೆ ಕಾಲಿಡುವ ಡೀನ್ಗೆ ಮುನ್ನಾನನ್ನು ಕಾಲೇಜಿನಿಂದ ಹೊರಹಾಕಲು ಈಗ ಐನಾತಿ ಕಾರಣ ಸಿಕ್ಕಂತಾಯಿತು. ಆದರೆ ಮರುದಿನ ಇಡೀ ವಿದ್ಯಾಥರ್ಿ ಸಮೂಹದ ಜೊತೆ ಕಾಲೇಜು ಸಿಬ್ಬಂದಿಯೂ ಸೇರಿ ಅಡ್ಡಗಾಲು ಹಾಕಿದಾಗ ಮುನ್ನಾಭಾಯಿಯನ್ನು ಕಾಲೇಜಿನಲ್ಲೇ ಉಳಿಸಿಕೊಳ್ಳಲು ಡೀನ್ ಒಂದು ಷರತ್ತು ವಿಧಿಸುತ್ತಾನೆ. ವಿದ್ಯಾಥರ್ಿಗಳೇ ಆರಿಸುವ ಮೂವರು ಪ್ರೊಫೆಸರುಗಳು ಮಾರನೇ ದಿನ ಮುನ್ನಾನ ಸಂದರ್ಶನ ಪರೀಕ್ಷೆ ನಡೆಸಬೇಕು. ಮುನ್ನಾ ಆ ಪರೀಕ್ಷೆಯಲ್ಲಿ ಗೆದ್ದರೆ ಅವನು ಕಾಲೇಜಿನಲ್ಲಿ ಉಳಿಯಬಹುದು. ಸರಿ, ರಾತ್ರಿಯಿಡೀ ಆಯ್ದ ಡಾಕ್ಟರುಗಳು ಮರುದಿನ ಕೇಳುವ ಪ್ರಶ್ನೆಗಳಿಗೆ ಉರು ಹಚ್ಚಿಸುವ ಕಸರತ್ತಿನಲ್ಲಿ ತೊಡಗಿದ್ದಾಗ ಸುದ್ದಿ ಬರುತ್ತದೆ: ಜಹೀರ್ ಕೊನೆಯುಸಿರು ಎಳೆಯುತ್ತಿದ್ದಾನೆ. ಮುನ್ನಾ ತಯಾರಿ ಅರ್ಧಕ್ಕೇ ಬಿಟ್ಟು ವಾಡರ್ಿಗೆ ಓಡುತ್ತಾನೆ. ಆಗ ಇವನನ್ನು ತಬ್ಬಿ ಶರಣಾಗುವ ಜಹೀರ್ ಬೇಡುತ್ತಾನೆ: ಮುನ್ನಾ ನಿನ್ನ ಕೈಯಲ್ಲಿ ಏನು ಬೇಕಾದರೂ ಸಾಧ್ಯವಿದೆ. ನಾಳೆ ನಮ್ಮಮ್ಮ ಬರುವವರೆಗಾದರೂ ನನ್ನನ್ನು ಉಳಿಸು. ಹಾಗೆ ಕೇಳಕೇಳುತ್ತಲೇ ಜಹೀರ್, ಮುನ್ನಾನ ಅಪ್ಪುಗೆಯಲ್ಲಿ ಪ್ರಾಣ ಬಿಡುತ್ತಾನೆ. ಮಾರನೇ ದಿನ ವಿದ್ಯಾಥರ್ಿ ಸಮೂಹದ ಸಮ್ಮುಖದಲ್ಲಿ ಆ ತೋರಿಕೆಯ ಪರೀಕ್ಷೆಯಲ್ಲಿ ಒಂದಾದ ಮೇಲೊಂದು ಉತ್ತರ ಹೇಳುತ್ತ ಹೋಗುವ ಮುನ್ನಾನ ಕಣ್ಣ ಮುಂದೆ ಮತ್ತೆ ಮತ್ತೆ ಬರುವ ದೃಶ್ಯ ಅದೇ. ಜಹೀರನ ಕಡೇ ಕ್ಷಣಗಳ ಯಾತನೆ. ಅವನ ಮೊರೆ. ತಾಳಲಾಗದೆ ಮುನ್ನಾ ಕೈ ಚೆಲ್ಲುತ್ತಾನೆ. ಯಾಕೆಂದರೆ, ಈ ಇಡೀ ಕಸರತ್ತಿನ ನಿರರ್ಥಕತೆ ಎಲ್ಲರಿಗಿಂತ ಚೆನ್ನಾಗಿ ಅರ್ಥವಾಗಿರುವುದು ಮುನ್ನಾಗೇ. ಹೌದು, ನಾನು ಮೋಸದಿಂದಲೇ ಎಲ್ಲ ಪರೀಕ್ಷೆ ಪಾಸು ಮಾಡುತ್ತಾ ಬಂದೆ. ನಾನೊಬ್ಬ ಮಾಮೂಲಿ ಗೂಂಡಾ. ಯಾವ ಜ್ಞಾನವೂ ಇಲ್ಲದ ಹುಂಬ. ಆದರೆ, ನೀವು ಇಷ್ಟೆಲ್ಲ ತಿಳಿದವರು, ಉತ್ತಮೋತ್ತಮ ವೈದ್ಯರು- ನೀವೆಲ್ಲ ಏನಾದರೂ ಮಾಡಿ ನಿಮ್ಮ ವಿದ್ಯೆ ಬಳಸಿ, ಒಂದು ರಾತ್ರಿಯ ಮಟ್ಟಿಗೆ ಯಾಕೆ ಅವನ ಜೀವ ಉಳಿಸಲಿಲ್ಲ?… ಈ ಪ್ರಶ್ನೆ ಹಾಕಿ, ಎಲ್ಲದಕ್ಕೆ ಬೆನ್ನು ಹಾಕಿ ಮುನ್ನಾ ತನ್ನ ಹೋರಾಟಕ್ಕೆ ತಾನೇ ಬೇಸತ್ತವನಂತೆ ಹೊರನಡೆದುಬಿಡುತ್ತಾನೆ. ಆಗ ನಡೆಯುತ್ತದೆ ಪವಾಡ. ಇಷ್ಟೂ ವರ್ಷ ಕೂತ ಗಾಲಿ ಕುಚರ್ಿಯಲ್ಲೇ ಕೊರಡಾಗಿದ್ದ ಆನಂದ್, ಈಗ ಕೈ ಕಾಲು ಆಡಿಸತೊಡಗುತ್ತಾನೆ! ಎಲ್ಲ ದಂಗಾಗಿ ನೋಡತೊಡಗುತ್ತಾರೆ. ಸ್ಪರ್ಶ, ಹೃದಯದ ನುಡಿಗಳ ಮುನ್ನಾನ ಮ್ಯಾಜಿಕ್ ಸಾಧಿಸುವ ಅಂತಿಮ ಹಾಗೂ ಪರಮೋಚ್ಚ ಗೆಲುವಿದು!… ಚಿತ್ರದಲ್ಲಿ ಈ ಬಗೆಯ ಸೂಕ್ಷ್ಮ ಜೀವಪರ ಕಂಪನಗಳು ಇನ್ನೂ ಎಷ್ಟೋ ಇವೆ. ಡೀನ್ ಮಗಳು ಸುಮನ್ಳೇ ತನ್ನ ಬಾಲ್ಯ ಸಖಿ ಎಂದು ತಿಳಿಯದೆಯೇ ಅವಳ ಕಡೆ ಹರಿಯುವ ಮುನ್ನಾನ ಒಲವು; ಜೀವಿಸುವ ಆಸೆಯೇ ಬತ್ತಿ ಹೋದ ಪಾಸರ್ಿ ಮುದುಕನನ್ನು ಅವನಿಗೆ ಪ್ರಿಯವಾದ ಕೇರಂ ಮೂಲಕ ಮರಳಿ ಬದುಕಿಗೆ ತರುವ ಪ್ರಸಂಗ; ರ್ಯಾಗಿಂಗ್ ಸನ್ನಿವೇಶ… ಒಂದೊಂದನ್ನೂ ವಿವರಗಳೊಂದಿಗೆ ಚಚರ್ಿಸಬೇಕೆಂದರೆ ಇಡೀ ಸಿನಿಮಾದ ಕಥೆಯನ್ನೇ ಹೇಳಬೇಕಾದೀತು. ಅದೇನೂ ಬೇಡ ಬಿಡಿ. ಆದರೆ ಸಂಜಯ್ದತ್ (ಮುನ್ನಾಭಾಯಿ), ಗ್ರೇಸಿ ಸಿಂಗ್ (ಸುಮನ್)ರಿಂದ ಹಿಡಿದು ಸಣ್ಣ ಪುಟ್ಟ ಪಾತ್ರಗಳವರೆಗೂ ನಿದರ್ೇಶಕ ರಾಜಕುಮಾರ್ ಹಿರಾನಿ ಆರಿಸಿರುವ ಕಲಾವಿದರು ಮತ್ತು ಅವರ ಅಭಿನಯ, (ಡೀನ್ ಆಗಿ ಬೋಮನ್ ಇರಾನಿಯಂತೂ ಹಲವಾರು ಛಾಯೆಗಳ ಅರ್ಥಸಮೃದ್ಧಿಯನ್ನೇ ತನ್ನ ಪಾತ್ರಕ್ಕೆ ತರುತ್ತಾನೆ) ಎಲ್ಲ ವಿಭಾಗಗಳಲ್ಲೂ ಎದ್ದು ಕಾಣುವ ಪರಿಣತಿ, ರಸವತ್ತಾದ ಉಲ್ಲಾಸಮಯ ನಿರೂಪಣೆ… ‘ಮುನ್ನಾಭಾಯಿ’ ಸಾಧಾರಣ ಮಟ್ಟದ ಚಿತ್ರವಲ್ಲ ಅನ್ನಲು ಅಷ್ಟೇ ಸಾಕು. ಅಷ್ಟಾಗಿಯೂ ಹಿರಾನಿ ತನ್ನ ಮೊದಲ ಪ್ರಯತ್ನದಲ್ಲೇ ಸಾಧಿಸಿದ ಗೆಲುವು ಕೇವಲ ತಾಂತ್ರಿಕ ಸ್ವರೂಪದ್ದಲ್ಲ,- ಜೀವನವನ್ನು ಮಮತೆಯಿಂದ ಮುಟ್ಟುವ ಮತ್ತು ಜೀವಂತವಾದುದನ್ನು ಗ್ರಹಿಸಿ ಪಕ್ಕದವನೊಂದಿಗೆ ಹಂಚಿಕೊಳ್ಳುವ ಉತ್ಸಾಹದ್ದು. ಅದಕ್ಕೇ ಮುನ್ನಾಭಾಯಿ- ಈಚಿನ ವರ್ಷಗಳಲ್ಲಿ ಭಾರತೀಯ ತೆರೆಯ ಮೇಲೆ ಬಂದ ಸಾರ್ಥಕ ಚಿತ್ರಗಳಲ್ಲೊಂದು. ಮತ್ತು ಜನಪ್ರಿಯ ನುಡಿಗಟ್ಟಿನ ಸಿನಿಮಾವೊಂದು ತನ್ನ ಚೌಕಟ್ಟನ್ನೂ ಮೀರಿ, ಬದುಕನ್ನೇ ತನ್ನ ಮಾಂತ್ರಿಕ ಅಪ್ಪುಗೆಯಲ್ಲಿ ಬಂಧಿಸುವ ವಿರಳಾತಿವಿರಳ ಉದಾಹರಣೆ ಕೂಡ.]]>

‍ಲೇಖಕರು G

February 14, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಹೆರಬೈಲು ದ್ಯಾವರ ಕೋಳಿಪಳ್ದಿ ಊಟ ಮತ್ತು ಬೊಚ್ಚ ಗಿರಿಯಣ್ಣ ಮಾಸ್ತರ

ಈ ಉತ್ತರ ಕರ್ನಾಟಕದ ಭಾಷೆಗೆ ಗಂಡು ಮೆಟ್ಟಿನ ನಾಡು, ನಾಡಿನ ಭಾಷೆ ಅಂತ ಅನ್ನುತ್ತಾರಲ್ಲ ಹಾಗೆ ಈ ಉತ್ತರ ಕನ್ನಡಕ್ಕೆ ಸಮುದ್ರ ಮೆಟ್ಟಿದ ನೆಲ,...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This