ಎನ್ ಎಸ್ ಶಂಕರ್ ಯಾರಿಗೆ ಗೊತ್ತಿಲ್ಲ?

ಎನ್ ಎಸ್  ಶಂಕರ್  ಯಾರಿಗೆ ಗೊತ್ತಿಲ್ಲ? ಪತ್ರಕರ್ತ, ವಿಮರ್ಶಕ, ಚಲನಚಿತ್ರ ನಿರ್ದೇಶಕ ಹೀಗೆ ಶಂಕರ್ ಸದಾ ಹೊಸ ಚಿಂತನೆಯನ್ನು ಬೆಳಸಿದವರು. ‘ಪ್ರಜಾವಾಣಿ’ ಪತ್ರಿಕೆಯ ಶಂಕರ್ ನಂತರ ‘ಮುಂಗಾರು’ವಿಗೆ ವಲಸೆ ಹೋದರು. ಅಲ್ಲಿಂದ ಬಂದು ಹುಟ್ಟು ಹಾಕಿದ್ದು ‘ಸುದ್ದಿ ಸಂಗಾತಿ’ ವಾರಪತ್ರಿಕೆಯನ್ನು. ಈ ಮಧ್ಯೆ ವ್ಯಂಗ್ಯ ಚಿತ್ರಗಳನ್ನು ಬರೆದರು. ಅಷ್ಟೇ ಅಲ್ಲ ಈ ವ್ಯಂಗ್ಯಚಿತ್ರಗಳಿಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡರು. ಲಂಕೇಶರ ಸಣ್ಣಕತೆ ಆಧಾರಿತ ‘ಮುಟ್ಟಿಸಿಕೊಂಡವರು’ ಕಿರುಚಿತ್ರದ ಮೂಲಕ ದೃಶ್ಯ ಮಾಧ್ಯಮಕ್ಕೆ ಕಾಲಿಟ್ಟ ಶಂಕರ್  ‘ಬದುಕು ಜಟಕಾ ಬಂಡಿ’ ‘ಶೋಧ’ ‘ಪರಿಸರ’ ‘ಕ್ಷಮಯಾ ಧರಿತ್ರಿ’ ಹೀಗೆ ಹಲವಾರು ಕಿರುಚಿತ್ರ, ಸಾಕ್ಷ್ಯಚಿತ್ರ, ಟೆಲಿಚಿತ್ರ, ಜಾಹೀರಾತು ಚಿತ್ರಗಳನ್ನು ನಿರ್ದೇಶಿಸಿದರು. ‘ಉಲ್ಟಾ ಪಲ್ಟಾ’ ಮೂಲಕ ಹಿರಿತೆರೆಗೆ ಪ್ರವೇಶಿಸಿ ಅಲ್ಲಿಯೂ ಸೈ ಎನಿಸಿಕೊಂಡರು. ಎರಡು ರಾಜ್ಯಪ್ರಶಸ್ತಿಗಳೂ ಸೇರಿದಂತೆ ಹಲವು ಪುರಸ್ಕಾರಗಳನ್ನೂ, ಅಪಾರ ಜನಪ್ರೀತಿಯನ್ನೂ ಪಡೆದರು. ಎನ್ ಎಸ್ ಶಂಕರ್  ‘ಲಂಕೇಶ್ ಪತ್ರಿಕೆ’ಯ ಲ್ಲಿ ಬರೆಯುತ್ತಿದ್ದ ಬರಹಗಳಿಗೆ ಹರಿತ ನೋಟವಿತ್ತು, ಎಲ್ಲರಿಗೂ ಗೊತ್ತಿರುವ ವಿಚಾರಗಳನ್ನು ಕೈಗೆತ್ತಿಕೊಂಡು ಜಾಗತೀಕರಣದಂತಹ ವಿಷಯಗಳನ್ನೂ ಮನಕ್ಕೆ ಮುಟ್ಟಿಸುತ್ತಿದ್ದರು. ಬರ್ಲಿಂಗ್ಟನ್  ಕಾಚ’ದ ಬಗ್ಗೆ ಅವರು ಬರೆದ ಲೇಖನ ಜಾಗತೀಕರಣ ಹೇಗೆಲ್ಲಾ ಬಿಸಿ ಮುಟ್ಟಿಸಬಹುದು ಎಂದು ಬೆರಗು ಮೂಡಿಸಿತ್ತು ಶಂಕರ್  ಚಂಚಲೆ, ಮಾಯಾ ಬಜಾರ್, ಮೇಲೋಗರ, ಆವರಣ ಅನಾವರಣ, ಫೂಲನ್ ದೇವಿ, ಗೋಹತ್ಯೆ ಪಾಪವೇ?, ಈಗ ಅಳುವವರೂ ಇಲ್ಲ ಕೃತಿಗಳನ್ನ್ನು ಬರೆದಿದ್ದಾರೆ. ಅವರ ಈ ಎಲ್ಲಾ ಕೃತಿಗಳಲ್ಲೂ ಇಂತಹ ಹರಿತ ನೋಟವಿದೆ. ಅಂತಹ ನೋಟವುಳ್ಳ ಮತ್ತೊಂದು ಕೃತಿ ‘ಹುಡುಕಾಟ’ ಈಗ ಹೊರ ಬಂದಿದೆ. ಪ್ರೆಸ್ ಕ್ಲಬ್ ಪ್ರಕಾಶನ ಹೊರತಂದಿರುವ ಈ ಕೃತಿಯ ಆಯ್ದ ಭಾಗಗಳು ಇನ್ನು ಮುಂದೆ ವಾರಕ್ಕೆ ಎರಡು ಬಾರಿ ‘ಅವಧಿ’ಯಲ್ಲಿ ಪ್ರಕಟಗೊಳ್ಳಲಿದೆ. ಈ ಕೃತಿ ಐ ಬಿ ಎಚ್ ಪ್ರಕಾಶನದ ಆನ್ಲೈನ್ ಮಳಿಗೆಯಲ್ಲೂ ಲಭ್ಯ ಹುಡುಕಾಟ ಕೃತಿಗೆ ಎನ್ ಎಸ್ ಶಂಕರ್ ಬರೆದ ಪ್ರಸ್ತಾವನೆ ಇಲ್ಲಿದೆ. ‘ಡೆಡ್ ಎಂಡ್’ ನಂತರ.. -ಎನ್.ಎಸ್. ಶಂಕರ್ ‘ಡೆಡ್ ಎಂಡ್’ ಶಬ್ದ ಬಳಸಿದ್ದು ಮೈಸೂರಿನ ಕವಿಮಿತ್ರ ಪ್ರೊ. ಎಚ್. ಗೋವಿಂದಯ್ಯ. ನಾನು ಕೆಲವು ವರ್ಷ ಒಂದಕ್ಷರವನ್ನೂ ಬರೆದಿರಲಿಲ್ಲ. ಮತ್ತೆ ಬರೆಯಲು ಶುರು ಮಾಡಿದಾಗ ಗೋವಿಂದಯ್ಯ, ಎಲ್ಲ ಚಳವಳಿ ಕದಲಿಕೆಗಳೂ ಸ್ತಬ್ಧವಾದ ಆ ಘಟ್ಟವನ್ನು ಬಣ್ಣಿಸಲು ‘ಡೆಡ್ ಎಂಡ್’ ಅಂದರು; ಈಗ ಮತ್ತೆ ಬರೆಯಬೇಕು, ಹುಡುಕಬೇಕು ಎಂಬ ಅರ್ಥದಲ್ಲಿ. ಆದರೆ ಇನ್ನೊಂದು ಅರ್ಥದಲ್ಲಿ ನನ್ನ ಬದುಕೂ ಆಗ ‘ಡೆಡ್ ಎಂಡ್’ ಎನ್ನಬಹುದಾದ ಸ್ಥಿತಿ ಮುಟ್ಟಿತ್ತು! ಅದರ ವಿವರಗಳು ಇಲ್ಲಿ ಬೇಡ. ಆದರೆ ಹಾಗೆ ಕಣ್ಣೆದುರು ಬರೀ ಗವ್ವೆನ್ನುವ ಕತ್ತಲು ಕವಿದಿದ್ದ ಸ್ಥಿತಿಯಲ್ಲಿ ‘ಉಷಾಕಿರಣ’ ಪತ್ರಿಕೆಯಲ್ಲಿ ಸುದ್ದಿ ಸಂಪಾದಕರಾಗಿದ್ದ ಗೆಳೆಯ ಜಯರಾಮ ಅಡಿಗರು ನನಗೆ ವಾರದ ಕಾಲಂ ಬರೆಯಲು ಕೇಳಿದರು. 2005ರಲ್ಲಿ. ಬದುಕಿಗೇ ವಿಮುಖನಾಗಿದ್ದ ನನ್ನ ಆಗಿನ ಮನಃಸ್ಥಿತಿಯಲ್ಲಿ ಅದು ಆಗಹೋಗದ ಮಾತು. ಸುಮ್ಮನೆ ಹ್ಞೂಂ ಎಂದೆ. ಕೆಲವು ದಿನಗಳಲ್ಲಿ ಅವರು ಮರೆತುಹೋಗಬಹುದೆಂದು ಕಾದೆ. ಅವರು ಮರೆಯಲಿಲ್ಲ, ಬಿಡಲೂ ಇಲ್ಲ. ಪಟ್ಟು ಹಿಡಿದು ಬರೆಸಲು ಹಚ್ಚಿಯೇಬಿಟ್ಟರು. ಒಪ್ಪಿಕೊಂಡ ಮೇಲೆ ಯಾಕಾದರೂ ಒಪ್ಪಿಕೊಂಡೆನೋ ಎಂದು ವಾರವಾರವೂ ಪರಿತಪಿಸಿದೆ. ಬರವಣಿಗೆ ನನ್ನಿಂದ ಶಾಶ್ವತವಾಗಿ ಜಾರಿ ಹೋದಂತಿತ್ತು. ಪ್ರತಿ ವಾರವೂ ಯಾರೋ ವಿಧಿಸಿದ ಶಿಕ್ಷೆಯಂತಾಗಿತ್ತು. ಒಮ್ಮೊಮ್ಮೆ ಅಕ್ಷರಶಃ ಅಳು ಬರುತ್ತಿತ್ತು! ಆದರೆ ತಿಂಗಳೆರಡು ತಿಂಗಳಲ್ಲಿ ಈ ಒದ್ದಾಟ ತುಸು ತಹಬಂದಿಗೆ ಬಂತು. ನಾನು ಈಗಲೂ ನನ್ನ ತೊಡಕುಗಳಿಂದ ಇನ್ನೂ ಪೂರ್ಣ ಹೊರಬಂದಿಲ್ಲವೇನೋ ಹೌದು. ಆದರೆ ಆಗಂತೂ ನನ್ನೊಳಗೇ ಪೂತರ್ಿ ಹೂತುಹೋಗಿದ್ದ ನಾನು ಕಣ್ಣು, ಕತ್ತು ಆಚೆ ಚಾಚಿ ತುಸುವಾದರೂ ಹೊರಬರಲು, ಮತ್ತೆ ಗಟ್ಟಿಯಾಗಲು ಈ ವಾರ ವಾರದ ಬರವಣಿಗೆ ಎಷ್ಟೋ ನೆರವಾಯಿತು. ‘ಕಾವ್ಯ ಕನ್ನಿಕೆಯ ತೊಡೆಯ ಮೇಲೆ ಮುಖವಿಟ್ಟು ಅಳುವುದು’ ಎಂದು ಲಂಕೇಶರು ಬರೆದಿದ್ದರಲ್ಲ, ಅದೇನೆಂದು ಈಗ ಅರ್ಥವಾಯಿತು!… ಆ ಕಾರಣಕ್ಕೆ ಜಯರಾಮ ಅಡಿಗರಿಗೆ ಕೋಟಿ ಕೋಟಿ ವಂದನೆ. ಈ ಪುಸ್ತಕದಲ್ಲಿ ‘ತಲಪರಿಗೆ’ ಎಂಬ ಲೇಖನದವರೆಗೆ ಎಲ್ಲವೂ ‘ಉಷಾಕಿರಣ’ದಲ್ಲಿ ಪ್ರಕಟವಾದ ಅಂಕಣ ಬರಹಗಳು. (ಆ ಮಾಲಿಕೆಯಲ್ಲಿ ಇಲ್ಲಿ ಎರಡು ಮೂರನ್ನು ಕೈ ಬಿಟ್ಟಿದ್ದೇನೆ.) ನಂತರದ್ದೆಲ್ಲವೂ ನಾನು ಆಗಿಂದಾಗ್ಗೆ ಬರೆಯುತ್ತ ಬಂದಂಥವು. ‘ಅರಸು ನಿಂತ ನೆಲ’ ಎಂಬುದೊಂದು ಮಾತ್ರ ಹಳೆಯ ಬರಹ- ‘ಲಂಕೇಶ್ ಪತ್ರಿಕೆ’ಯಲ್ಲಿದ್ದಾಗ ಬರೆದದ್ದು. ಈಗ ಈ ಪುಸ್ತಕವನ್ನು ಹೊರತರುತ್ತಿರುವ ಪ್ರೆಸ್ಕ್ಲಬ್ ಪ್ರಕಾಶನ ಸಂಸ್ಥೆಯ ಎಲ್ಲ ಗೆಳೆಯರಿಗೆ ನನ್ನ ಕೃತಜ್ಞತೆ. ಮತ್ತು ಅಚ್ಚುಕಟ್ಟಾಗಿ ಮುದ್ರಿಸಿದ ‘ನಂದಿ ಪ್ರೋಸೆಸ್’ನ ಗೋಪಾಲ್ ಮತ್ತವರ ಸಿಬ್ಬಂದಿಗೂ ನಾನು ಋಣಿ. ಅಂಕಣ ಬರೆಯುತ್ತಿದ್ದ ಕಾಲದ ನನ್ನ ಮನಃಸ್ಥಿತಿಯ ಬಗ್ಗೆ ಆಗಲೇ ಹೇಳಿದ್ದೇನೆ. ಆಗ ನನ್ನನ್ನು ಬದುಕಿನ ಹಳಿಗೆ ಮರಳಿ ತರುವಲ್ಲಿ ಎಲ್ಲ ವಿಧದಲ್ಲೂ ಒತ್ತಾಸೆಯಾದವರು- ನನಗೆ ಹಿರಿಯಣ್ಣನಂತಿರುವ ‘ಜೇಸ್ ಮಾಮ್’ ಜೆಸುನಾ. ಈ ಕೃತಿಯನ್ನು ಅವರಿಗೇ ಅಪರ್ಿಸಿದ್ದೇನೆ.]]>

‍ಲೇಖಕರು G

February 7, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

 1. D.RAVI VARMA

  ಪ್ರಿಯ ಶಂಕರ್ ಸರ್,
  ನಮಸ್ಕಾರ. ನಿಮ್ಮ ಪುಸ್ತಿಕೆ “ಹುಡುಕಾಟ” ದ ಬಗ್ಗೆ odide. ee ಸಾಲುಗಳು ಹೃದಯ ತಟ್ಟಿದವು .
  ಕಾವ್ಯ ಕನ್ನಿಕೆಯ ತೊಡೆಯಮೇಲೆ ಮುಖವಿಟ್ಟು ಅಳುವುದು ಎಂದು ಲಂಕೇಶರು ಬರೆದಿದ್ದರಲ್ಲ ,ಅದೇನೆಂದು ಈಗ ಅರ್ಥವಾಯಿತು .
  ಕಣ್ಣೆದುರು ಬರೀ ಗವ್ವೆನ್ನುವ ಕಟ್ಟಲು ಕವಿದಿದ್ದ ಸ್ತಿತಿ ,ಬರವಣಿಗೆ ನನ್ನಿಂದ ಶಾಶ್ವತವಾಗಿಜಾರಿಹೊದಂತಿತ್ತು ಲ,ಪ್ರತಿ ವಾರವೂ ಯಾರೋ ವಿದಿಸಿದ ಶಿಕ್ಷೆಯನ್ತಾಗಿತ್ತು
  ಒಮ್ಮೊಮ್ಮೆ ಅಕ್ಷರಶಃ ಅಳು ಬರುತಿತ್ತು ,ತಿಂಗಳೆರಡು ತಿಂಗಳ ನಂತರ ತಹಬದಿಗೆ ಬಂತು .
  ಆಗ ಅತ್ಮಸ್ತಿರ್ಯ,ವಿಶ್ವಸ್ ನೀಡಿದ ಜಯರಾಮ ಅಡಿಗರಿಗೆ ಕೋಟಿ ಕೋಟಿ ವಂದನೆ .
  ಹುಡುಕಾಟ ಪುಸ್ತಿಕೆ title ನಿಜಕ್ಕೂ ಅರ್ಥಪುರ್ನವಾಗಿದೆ. ಬಹುಷಃ ನಮ್ಮ ಬದುಕೆಲ್ಲ ಹುಡುಕಾಟದಲ್ಲೇ ಕಳೆದುಹೋಗುತ್ತದೆ , udyoga,hendati, makkalu,mane,makkalige udyoga,ಅವರ ಮದುವೆ ಪ್ರಶಸ್ತಿ, ಅಸ್ತಿತ್ವ, ಏನನ್ನೋ ಕಳೆದುಕೊಂಡು ಅದನ್ನೇ ಹುಡುಕುವುದರಲ್ಲೇ ಇಡೀ ಬದುಕು ಕಳೆದುಹೊಗುತ್ತೇನೋ , ಇತ್ತೀಚಿಗೆ ಕುಸ್ವಂತ್ ಅವರ ಇತ್ತೀಚಿನ ಪುಸ್ತಕ ಓದುತಿದ್ದೆ,” absolute khushwant ” ಕುಸ್ವಂತ್ ಸಿಂಗ್ with humra quraishi ಅಲ್ಲಿ ಕುಸ್ವಂತ್ ಒಂದು ಅರ್ಥ ಪೂರ್ಣ ಮಾತು ಹೇಳುತ್ತಾರೆ ‘ ಏನು ಕೇಳುತ್ತೀರಿ ನನ್ನ ಕೆಲಸದ ಬಗ್ಗೆ ನಾನು ಕುರುಡರ ನಾಡಿನಲ್ಲಿ ಕನ್ನಡಿಗಳನ್ನು ಮಾರುತ್ತಿದ್ದೇನೆ ”
  ಅವಧಿಯ ಮೂಲಕ ನಿಮ್ಮ ಹುಡುಕಾಟದ ಬಗ್ಗೆ ತಿಳಿದು ತುಂಬಾ ಕುಶಿಯಯ್ತು ,ಪುಸ್ತಿಕೆ ತುಂಬಾ ಆಕರ್ಷಕವಾಗಿ ಬಂದಿದೆ, ತಕ್ಷಣ ಪುಸ್ತಕ ತರಿಸಿಕೊಂಡು ಓದಬೇಕೆಂಬ ಉತ್ಕಟತೆಯಿಂದ ಇದ್ದೇನೆ.
  ರವಿ ವರ್ಮ ಹೊಸಪೇಟೆ ‘

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: