ಎನ್ ಎಸ್ ಶ೦ಕರ್ ಕಾಲ೦ : 'ಕರೋಡ್ ಪತಿ'ಯ ಜೂಜಿನ ಕಾತರ

       

– ಎನ್ ಎಸ್ ಶ೦ಕರ್

`ಕರೋಡ್ಪತಿ’ಯ ಜೂಜಿನ ಕಾತರ

ಶೂರ್? …. ಕಾನ್ಫಿಡೆಂಟ್? … ಲಾಕ್ ಕರ್ದೂ ಇಸೆ? … ಓಕೆ ಕಂಪ್ಯೂಟರ್ಜೀ… ಈ ಸುವಿಖ್ಯಾತ ದನಿ ಮತ್ತೆ ನಾಡಿನಾದ್ಯಂತ ಮೊಳಗುತ್ತಿದೆ. ಮತ್ತದೇ ಕಾತರ, ಅದೇ ಉದ್ವೇಗ. ‘ಹಾಟ್ ಸೀಟ್’ನಲ್ಲಿ ಕುಳಿತವನ ಜತೆಯೇ ಉಗುರು ಕಚ್ಚುತ್ತ, ವಾರಕ್ಕೆ ಮೂರು ದಿನ ಟಿವಿ ಮುಂದೆ ಕೂತು, ಗೊತ್ತಿದ್ದ ಉತ್ತರಗಳನ್ನು ಇಲ್ಲಿಂದಲೇ ಕಿರುಚಿ ಹೇಳುತ್ತ, ಹೇಳಲಾಗದವನ ದುರದೃಷ್ಟಕ್ಕೆ ಮರುಕಪಡುತ್ತ, ಯಾರು ಎಷ್ಟು ಗೆಲ್ಲುತ್ತಾರೆಂದು ಊಹಿಸುತ್ತ… ಒಟ್ಟು `ಕೌನ್ ಬನೇಗಾ ಕರೋಡ್ಪತಿ’ ಜ್ವರ ಮತ್ತೆ ಮನೆ ಮನೆಗೂ ಹಬ್ಬಿದೆ. ಈ ಕಾರ್ಯಕ್ರಮದ ಜನಪ್ರಿಯತೆಗೆ ಕಾರಣಗಳನ್ನು ಹುಡುಕುವುದೇನೂ ಕಷ್ಟವಲ್ಲ. ಬಿಬಿಸಿಯ `ಹೂ ವಾಂಟ್ಸ್ ಟು ಬಿ ಎ ಮಿಲಿಯನೇರ್’ ಮಾದರಿ ಅನುಸರಿಸಿ ಕ್ವಿಜé್ ಮಾಸ್ಟರ್ ಸಿದ್ಧಾರ್ಥ ಬಸು ರೂಪಿಸಿದ ಈ ಆಟದ ಮೊದಲ ಮತ್ತು ಬಹು ಮುಖ್ಯ ಆಕರ್ಷಣೆ ಅಮಿತಾಭ್ ಬಚನ್. ಮತ್ತು ಆತ ತನ್ನ ವರ್ಚಸ್ಸಿನ ಮೂಲಕವೇ ಜ್ಞಾನಪರೀಕ್ಷೆಗೆ ತಂದ ವಿನಯವಂತ ಘನತೆ. ಈ ಕಾರ್ಯಕ್ರಮ ಮೊದಲು ಶುರುವಾದಾಗ ದೇಶಾದ್ಯಂತ ಉಂಟಾದ ಸಂಚಲನ ಕಂಡು ದಂಗುಬಡಿದ ಇತರೆ ಚಾನಲ್ಗಳು ಬಹುಮಾನದ ಮೊತ್ತವನ್ನು ಹತ್ತು ಕೋಟಿಯವರೆಗೂ ಇಟ್ಟು ಪೈಪೋಟಿಗೆ ನಿಂತರೂ ಗಿಟ್ಟಲಿಲ್ಲ! ಆ ಕಾರ್ಯಕ್ರಮಗಳೆಲ್ಲ ಆಗ ಕೆಂಬೂತ ನರ್ತನದಂತೆ ಕಂಡಿದ್ದಕ್ಕೆ ಕಾರಣ- ಅಲ್ಲಿ ಅಮಿತಾಭ್ ಇರಲಿಲ್ಲ. ಮತ್ತು ಬಹುಮಾನದ ಒಂದು ಕೋಟಿಯ ಅವಾಸ್ತವಿಕ ಮೊತ್ತವೊಂದೇ ಕರೋಡ್ಪತಿಯ ಯಶಸ್ಸಿನ ಏಕೈಕ ಕಾರಣವಾಗಿರಲೂ ಇಲ್ಲ. ನಿಮಗೆ ನೆನಪಿದೆ. ಅಮಿತಾಭ್ ಅಸಾಧ್ಯಕ್ಕೆ ಕೈ ಚಾಚಿ ಪಾತಾಳ ತಲುಪಿದ್ದ ದಿನಗಳವು. ಎಬಿಸಿಎಲ್ ಸಂಸ್ಥೆ, ಆ ಮೂಲಕ ನಿಮರ್ಿಸಿದ, ವಿತರಿಸಿದ ಸಿನಿಮಾಗಳು, ವಿಶ್ವ ಸುಂದರಿ ಸ್ಪಧರ್ೆ… ದಶಕಗಳ ಕಾಲ ಹಿಂದಿ ಚಿತ್ರರಂಗದ ಅನಭಿಷಿಕ್ತ ಸಾಮ್ರಾಟನಾಗಿ ಮೆರೆದಿದ್ದ ಅಮಿತಾಭ್, ಊಹೆಗೂ ನಿಲುಕದ ಸೋಲಿನಲ್ಲಿ ಹೂತುಹೋಗಿದ್ದ. ವ್ಯವಹಾರ ಜ್ಞಾನವಿಲ್ಲದ ಚಟುವಟಿಕೆಗಳಿಂದ ಅವನ ಸ್ವಂತ ಮನೆಯೂ ಹರಾಜಿಗೆ ಬಂದಿತ್ತು. ದೊರೆ ಅಕ್ಷರಶಃ ಬೀದಿಪಾಲಾದ ಅಪರೂಪದ ದುರಂತವದು. ಇಂಥ ಸೋಲು- ಸರ್ವನಾಶದಂಥ ಸೋಲು- ಮನುಷ್ಯನಿಗೆ ಏನು ಮಾಡುತ್ತದೆ? ಎಲ್ಲಕ್ಕಿಂತ ಮೊದಲು ಗೆಳೆಯರು, ಹಿತೈಷಿಗಳು, ಆತ್ಮೀಯರು- ಯಾರೂ ತನ್ನ ದುಃಖವನ್ನು ಮತ್ತು ಅವಮಾನಗಳನ್ನು ಹಂಚಿಕೊಳ್ಳಲು ಸಾಧ್ಯವಿಲ್ಲ ಎಂಬ ಅರಿವು ಚಂಡಮಾರುತದಂತೆ ಬಂದು ಅಪ್ಪಳಿಸುತ್ತದೆ. ಒಬ್ಬಂಟಿತನದ ಅಂಧಕಾರ- ಕಡೆಗೂ ಮನುಷ್ಯ ತನ್ನ ಯಾತನೆಯಲ್ಲಿ ಏಕಾಂಗಿ ಎಂಬ ದಾರುಣ ಸತ್ಯವನ್ನು ಮನದಟ್ಟು ಮಾಡುತ್ತದೆ. ಇಷ್ಟರ ಮೇಲೆೆ ತನ್ನ ಬದುಕು ಹಂಚಿಕೊಂಡ ಹೆಂಡತಿ, ಮಕ್ಕಳ ಮರುಕ ಇಲ್ಲವೇ ದೂಷಣೆ ಅಥವಾ ನರಳಿಕೆೆಯ ನೋಟಗಳು… ಈ ಬದುಕು ನಿಜಕ್ಕೂ ಬದುಕಲು ಯೋಗ್ಯವೇ ಅನ್ನುವ ಮೂಲ ಸಂದಿಗ್ಧ ಎದುರಾಗುವುದು ಇಂಥ ಸೋಲಿನ ಸೂತಕದ ಮಬ್ಬಿನಲ್ಲೇ. ದಾಸರೇನೋ ಮಾನವ ಜನ್ಮ ದೊಡ್ಡದಯ್ಯಾ ಅನ್ನಬಹುದು. ಆದರೆ ಇಂಥ ಸಂದರ್ಭಗಳಲ್ಲಿ ಸೋಲಿನ ಹತಾಶೆ ಅದಕ್ಕಿಂತ ದೊಡ್ಡದು ಅನಿಸಿಬಿಟ್ಟರೆ ಆಶ್ಚರ್ಯವೇನೂ ಇಲ್ಲ… ಅಮಿತಾಭ್ ಅನುಭವಿಸಿದ್ದು ದೊಡ್ಡ ಸೋಲು. ದೊಡ್ಡವರಿಗೆ ಮಾತ್ರ ಒದಗುವ ದೊಡ್ಡ ಸೋಲು. ಆದರೂ ಅಮಿತಾಭ್ ಸೋಲಲಿಲ್ಲ! ಆತ ಅಕಸ್ಮಾತ್ ಆಗ ನಿಜಕ್ಕೂ ಧೃತಿಗೆಟ್ಟಿದ್ದರೂ ಹೊರಜಗತ್ತಿಗಂತೂ ಅದರ ಸುಳಿವು ಸಿಕ್ಕಿರಲಿಲ್ಲ. ಯಾಕೆಂದರೆ ಅಮಿತಾಭ್ ತನ್ನ ಸಂಕಟವನ್ನು ಎಂದಿನ ಮೌನ, ಘನತೆಗಳಿಂದ ತಾನೇ ನುಂಗಿಕೊಂಡಿದ್ದ, ಖಾಸಗಿ ವೇದನೆಯ ಬಹಿರಂಗ ಪ್ರದರ್ಶನಕ್ಕಿಂತ ಮಿಗಿಲಾದ ಅವಹೇಳನವಿಲ್ಲ ಎಂದು ಅರಿತವನಂತೆ. ಆದರೆ ಅವನಿಗೆ ದೊರೆತ ಮರುಹುಟ್ಟಿದೆಯಲ್ಲ, ಆ ಭಾಗ್ಯ ಮಾತ್ರ ಬಹಳ ಜನಕ್ಕೆ ಸಿಕ್ಕುವಂಥದಲ್ಲ. ನಿಮಗೂ ಗೊತ್ತು- ಬೆಳ್ಳಿತೆರೆಯ ಸಾಮ್ರಾಟನಿಗೆ ಮರುಜನ್ಮ ಕೊಟ್ಟಿದ್ದು ಕಿರುತೆರೆ,- ಇದೇ ಕರೋಡ್ಪತಿ ಕಾರ್ಯಕ್ರಮ. ಅಮಿತಾಭ್ ಬಹಳ ಅಳೆದೂ ತೂಗಿ ಈ ಕಾರ್ಯಕ್ರಮ ಒಪ್ಪಿಕೊಂಡನಂತೆ. ಒಂದು ರೀತಿಯಲ್ಲಿ ಅವನ ನಿಧರ್ಾರವೂ ಒಂದು ಜೂಜೇ. ಸೋತರೆ ಸಂಪೂರ್ಣ ನಾಮಾವಶೇಷ. ಆದರೆ, ಕಾರ್ಯಕ್ರಮ ಯಾರೂ ಊಹಿಸದ ಮಟ್ಟಿಗೆ ಜನಪ್ರಿಯವಾಯಿತು. ಅಮಿತಾಭ್ ಮತ್ತೆ ಹುಟ್ಟಿ ಬಂದ. ಹಾಗೆ ಬಂದವನಿಗೆ ಇನ್ನೂ ದೊಡ್ಡ ತಾರಾಪಟ್ಟ ಕಾದಿತ್ತು. ಇಂದು ಆತ ಮತ್ತೊಮ್ಮೆ ಎಳೆಯರನ್ನೂ ಮೀರಿಸಿದ ಸೂಪರ್ಸ್ಟಾರ್. ಯಾವ ಜಾಹೀರಾತು ನೋಡಿ, ಸಿನಿಮಾ ನೋಡಿ… ಎಲ್ಲೆಲ್ಲೂ ಅಮಿತಾಭ್. ಯಾವ ಸಮೀಕ್ಷೆ ನಡೆಸಿದರೂ ಮೊದಲ ಸ್ಥಾನ- ಅರವತ್ತು ಮೀರಿದ ಈ ಅಂಕಲ್ಗೇ. ಶಾರೂಕ್ ವಗೈರೆ ಎಲ್ಲ ಆಮೇಲೆ. ಬಿಬಿಸಿ ಸಮೀಕ್ಷೆ ಕೂಡಾ ಈತನನ್ನು ಸಹಸ್ರಮಾನದ ಸೂಪರ್ಸ್ಟಾರ್ ಎಂದು ಆರಿಸಿಯಾಯಿತಲ್ಲ! ಏನು ಈ ಮನುಷ್ಯನ ಗುಟ್ಟು?

ಅಮಿತಾಭ್ 70- 80ರ ದಶಕಗಳಲ್ಲಿ `ಕುಪಿತ ಯುವಕ’ನಾಗಿ ಮೇಲೆದ್ದಾಗ ಒಂದು ತಲೆಮಾರಿನ ಆಶೋತ್ತರಗಳು ಮತ್ತು ಭ್ರಮನಿರಸನದ ಪ್ರತಿನಿಧಿಯಾಗಿದ್ದ. ಎಮಜರ್ೆನ್ಸಿ ರಾಜಕೀಯದ ಸುತ್ತ ದೇಶಾದ್ಯಂತ ವ್ಯಕ್ತಗೊಂಡ ಬಂಡಾಯದ ಸುಪ್ತ ಆಶಯಕ್ಕೆ ದನಿಯಾಗಿದ್ದ. ಅಕ್ಷರಶಃ ಬೀದಿಗೆ ಬಿದ್ದವನ ಸಿಟ್ಟು ಆತಂಕಗಳ ಸಾಕಾರ ರೂಪವಾಗಿದ್ದ. ಈಗ ನೆನೆಸಿಕೊಂಡರೆ- ಆ ನೊಂದ ದಂಗೆಕೋರನ ಪಾತ್ರವನ್ನೂ ಅಮಿತಾಭ್ ನಿರ್ವಹಿಸಿದ ರೀತಿಯಲ್ಲಿ ಒಂದು ಘನತೆ, ಸಂಪನ್ನನ ಮೌನ ಅಂತರ್ಗತವಾಗಿದ್ದಿದ್ದು ಅರಿವಿಗೆ ಬರುತ್ತದೆ. ಈ ಮೌನ ಮತ್ತು ಘನತೆ, ಅಮಿತಾಭ್ ಬುದ್ಧಿಪೂರ್ವಕವಾಗಿ ಧರಿಸಿದ್ದಲ್ಲ, ನಟನೆಯದ್ದಲ್ಲ, ಅದು ಆ ಮನುಷ್ಯನ ಸಹಜ ಗುಣ ಎಂಬುದು ಈಗ ನಿತ್ಯ ಕರೋಡ್ಪತಿಯಲ್ಲೇ ಸಾಬೀತಾಗುತ್ತ್ತಿದೆ. ತನ್ನ ಎದುರು ಕೂತವನು ಎಂಥ ಸಾಮಾನ್ಯನೇ ಆದರೂ, ಅಥವಾ ದಡ್ಡನೇ ಆಗಿದ್ದರೂ, ಅಮಿತಾಭ್ ಆ ಎದುರಿನವನ ಘನತೆಗೆ ಎಳ್ಳಷ್ಟೂ ಕುಂದಾಗದಂತೆ, ಮುಜುಗರವಾಗದಂತೆ ನಿಭಾಯಿಸುತ್ತಾನೆ. ಸ್ಪಧರ್ಿಗಳನ್ನು ಈ ಮಹಾನ್ ತಾರೆ ಪರೋಕ್ಷವಾಗಿ ಕೈ ಹಿಡಿದು ಮುನ್ನಡೆಸುವ ಪರಿ, ಗೆದ್ದಾಗ ತೋರುವ ಸಂತಸ, ಸೋತಾಗಿನ ಸಹಾನುಭೂತಿ- ಎಲ್ಲ ಕಡೆ ನೈಜ ಸಾಚಾ ಕಳಕಳಿಯೇ ಕಾಣುತ್ತದೆ. ಮತ್ತು ಆತನ ವಿನಯವೂ ದುರ್ಬಲನ ಹಿಂಜರಿಕೆಯಂತಲ್ಲ; ಬದುಕಿನ ವಿಪಯರ್ಾಸಗಳನ್ನು, ಯಶಸ್ಸಿನ ಚಂಚಲತೆಯನ್ನು ಕಂಡವನ ಪ್ರೌಢಿಮೆ ಅಲ್ಲಿ ಅಡಕವಾಗಿದೆ. ಮತ್ತು ಜೂಜು. ಇದು ಜ್ಞಾನಪರೀಕ್ಷೆಯ ಉತ್ಕೃಷ್ಠ ಉದಾಹರಣೆ ಎಂದು ಯಾರೆಷ್ಟೇ ವಾದಿಸಿದರೂ, ಕರೋಡ್ಪತಿ ಕಾರ್ಯಕ್ರಮದ ಗೆಲುವು ಮೂಲತಃ ನಮ್ಮ ಜೂಜಿನ ಕಾತರದ ಮೇಲೆ ನಿಂತದ್ದು ಅನ್ನುವುದನ್ನು ಅಲ್ಲಗಳೆಯುವಂತಿಲ್ಲ. ಜೂಜಿನ ಅಂಶವಿಲ್ಲದಿದ್ದರೆ ಈ ಕಾರ್ಯಕ್ರಮಕ್ಕೆ ಇಂಥ ಅಭೂತಪೂರ್ವ ಯಶಸ್ಸು ಸಿಕ್ಕುತ್ತಲೇ ಇರಲಿಲ್ಲ. ನೋಡಿ: ಜೂಜಿನ ಮೊದಲ ಪರಿಕರವೇ ಅದೃಷ್ಟ. ಮೊಟ್ಟಮೊದಲಿಗೆ, ಕರೋಡ್ಪತಿಗೆ ಆಯ್ಕೆಯಾಗುವುದಕ್ಕೇ ಅದೃಷ್ಟ ಬೇಕು. ಕಾರ್ಯಕ್ರಮ ಆರಂಭವಾದಾಗ ಅದರಲ್ಲಿ ಪಾಲ್ಗೊಳ್ಳಲು ಬರುತ್ತಿದ್ದ ಕರೆಗಳು- ಒಂದು ಕಂತಿಗೆ ಒಂದೂವರೆ ಲಕ್ಷ! ಈಗ ಅದೇ ಒಂದು ಕಂತಿಗೆ 5.3 ಲಕ್ಷ ಜನ ಫೋನ್ ಕರೆ ಮಾಡುತ್ತಾರೆ!! ಆಷ್ಟು ಜನರಲ್ಲಿ ಲಾಟರಿ ಮೂಲಕ ಆರಿಸಿ ಬರುವ ಅದೃಷ್ಟ. ಮತ್ತೆ ಹಾಟ್ ಸೀಟಿಗೆ ಆಯ್ಕೆಯಾಗುವ ಅದೃಷ್ಟ. ಅದೂ ಆದ ಮೇಲೆ ಪ್ರಶ್ನೆಯಿಂದ ಪ್ರಶ್ನೆಗೆ ಬೆಳೆಯುವ- ಲಾಟರಿಯಂಥ ಕಡೆ ಮಾತ್ರ ಸಾಧ್ಯವಾಗುವ- ಬಹುಮಾನದ ಅವಾಸ್ತವಿಕ ಮೊತ್ತ… ಆ ಹದಿನೈದು ಪ್ರಶ್ನೆಗಳಿಗೆ ಉತ್ತರ ಹೇಳಬಲ್ಲ ಜ್ಞಾನಕ್ಕೆ, ಯಾವುದೇ ಲೆಕ್ಕಾಚಾರದಲ್ಲಿ, ಒಂದು ಕೋಟಿ- ಈಗಂತೂ ಎರಡು ಕೋಟಿ- ಮೌಲ್ಯವಿರಲು ಸಾಧ್ಯವೇ? ಹಾಗೇ ಅಲ್ಲಿನ ಅನಿಶ್ಚಯತೆ. ಐವತ್ತು ಲಕ್ಷ ಗೆದ್ದವನು ಮುಂದಿನ ಒಂದು ಪ್ರಶ್ನೆಗೆ ತಪ್ಪು ಉತ್ತರ ಕೊಟ್ಟರೆ- 6 ಲಕ್ಷ 40 ಸಾವಿರಕ್ಕೆ ಇಳಿದುಬಿಡುವ ಹಾವು ಏಣಿಯಾಟ. ಉತ್ತರಿಸಿಯಾದ ಮೇಲೆ, ಅದು ಸರಿಯೋ ತಪ್ಪೋ ತಿಳಿಯುವವವರೆಗೂ ಏರುತ್ತ ಹೋಗುವ ಉದ್ವಿಗ್ನ ಕಾತರ- ಇವೆಲ್ಲ ಜೂಜಿನ ಲಕ್ಷಣಗಳೇ. ಮತ್ತೆ ಅಮಿತಾಭ್ ಬಳಸುವ ಭಾಷೆಯೂ- ಈ ಪ್ರಶ್ನೆಯನ್ನು ಆಡಿ ಎಂಬಂಥ- ಇಸ್ಪೀಟು, ಮಟ್ಕಾಗಳ ನುಡಿಗಟ್ಟೇ. ನಿಜವೇ. ಮನುಷ್ಯನಿಗೆ ಭದ್ರತೆ, ಆಸರೆ, ಬದುಕಿನ ನಿಶ್ಚಿತ ಲಯ ಬೇಕು ಅನ್ನುವುದೆಷ್ಟು ನಿಜವೋ, ಅಷ್ಟೇ ಮಟ್ಟಿಗೆ ಜೂಜೂ ಬೇಕು. ತನ್ನ ಸಾಮಥ್ರ್ಯ, ಅದೃಷ್ಟಗಳನ್ನು ಒರೆಗೆ ಹಚ್ಚುವ ರಿಸ್ಕ್ ಬೇಕು. ಸಂಪೂರ್ಣ ನಿಯಮಬದ್ಧವಾಗಿ ನಿಗದಿಗೊಂಡ, ಯಾವ ಅನಿಶ್ಚಯತೆಯೂ ಇಲ್ಲದ ಬದುಕು- ಬಣ್ಣಗಳಿಲ್ಲದೆ ನೀರಸವಾಗಿಬಿಡುವುದು ಸಹಜ. ನಮ್ಮೆಲ್ಲರ ಜೂಜಿನ ಕಾತರದ ಬೇರು ಇಲ್ಲಿದೆ. ಮತ್ತು ಜೂಜು ಮನುಷ್ಯನ ಮೂಲಭೂತ ದಾಹಗಳಲ್ಲೊಂದು ಅನ್ನುವುದಕ್ಕೆ ಕರೋಡ್ಪತಿ ಕಾರ್ಯಕ್ರಮದಿಂದಲೇ ಸ್ವತಃ ಕರೋಡ್ಪತಿಯಾದ ಅಮಿತಾಭ್ನೇ ಸಾಕ್ಷಿಯಾಗಿದ್ದಾನೆ! ಅಷ್ಟಕ್ಕೂ ಭಾರತವನ್ನು ಬದುಕಿಸಿರುವ ರೈತನ ಬದುಕೇ- ಮುಂಗಾರಿನೊಂದಿಗೆ ನಡೆಯುವ ನಿರಂತರ ಜೂಜು ಅನ್ನುತ್ತಾರಲ್ಲ?!   9 ಸೆಪ್ಟೆಂಬರ್ 2005 *** ಪ್ರೆಸ್ ಕ್ಲಬ್ ಪ್ರಕಾಶನ ಹೊರತಂದಿರುವ ಈ ಕೃತಿಯ ಆಯ್ದ ಭಾಗಗಳು ಇನ್ನು ಮುಂದೆ ವಾರಕ್ಕೆ ಎರಡು ಬಾರಿ ‘ಅವಧಿ’ಯಲ್ಲಿ ಪ್ರಕಟಗೊಳ್ಳಲಿದೆ. ಈ ಕೃತಿ ಐ ಬಿ ಎಚ್ ಪ್ರಕಾಶನದ ಆನ್ಲೈನ್ ಮಳಿಗೆಯಲ್ಲೂ ಲಭ್ಯ    ]]>

‍ಲೇಖಕರು G

March 20, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This