ಎನ್ ಎಸ್ ಶ೦ಕರ್ ಕಾಲ೦ : ಚೆಕ್ ಬುಕ್ ಎಂಬ ಭಯೋತ್ಪಾದಕ!

– ಎನ್ ಎಸ್ ಶ೦ಕರ್

ಈ ಹೆಣ್ಣುಮಗಳ ಕಥೆ ನೋಡಿ.

ಈಕೆ ಸಾರ್ವಜನಿಕ ಉದ್ದಿಮೆಯಲ್ಲಿ ಅಧಿಕಾರಿ. ಗಂಡ ಖಾಸಗಿ ಕಂಪನಿಯೊಂದರಲ್ಲಿ ಅಕೌಂಟೆಂಟ್. ಇಬ್ಬರು ಮಕ್ಕಳು. 1998ರ ಸುಮಾರಿನಲ್ಲಿ ಷೇರು ಮಾರುಕಟ್ಟೆಯಲ್ಲಿ ಹುರುಪು ತುಂಬಿದ್ದಾಗ, ಆ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದ ಗಂಡ ಷೇರು ವಹಿವಾಟಿನ ಮೇಲೆ ದುಡ್ಡು ಹೂಡತೊಡಗಿದ. ಆನತಿ ಕಾಲದಲ್ಲೇ ಒಳ್ಳೆ ಲಾಭವೂ ಬಂತು. ನಿಮಗೆ ಗೊತ್ತಿರಬಹುದು: ಇಂದಿಗೂ ಈ ಷೇರು ವ್ಯವಹಾರವನ್ನೇ ಸಟ್ಟಾ, ಜೂಜಿನಂತೆ ದಿನನಿತ್ಯ ಆಡಿ ತಲೆ ಕೆಡಿಸಿಕೊಳ್ಳುವ ದೊಡ್ಡ ಸಮೂಹವೇ ಇದೆ. ಅದಿರಲಿ. ಹೀಗೆ ಕೆಲವೇ ದಿನಗಳಲ್ಲಿ ದೊಡ್ಡ ಲಾಭ ಕಂಡ ಈ ಮಹಾಶಯ, ತನ್ನ ಸುತ್ತ ಮುತ್ತಲಿನವರಿಗೆಲ್ಲ ಅದರ ಬಗ್ಗೆ ಹೇಳಿ, ತನ್ನ ಸಲೀಸು ಗಳಿಕೆಯನ್ನು ತೋರಿಸಿ ಸಾಕಷ್ಟು ಜನರನ್ನು ಇದೇ ಚಾಳಿಗೆ ಸೆಳೆದ. ಹಾಗೆ ಆಸೆಪಟ್ಟು ಬಂದವರಲ್ಲಿ, ಕೆಲವರು ತಂತಮ್ಮ ಹೆಸರಿನಲ್ಲೇ ಹಣ ಹೂಡಿ ಆಡತೊಡಗಿದರೂ ಬಹಳಷ್ಟು ಜನ ನಾನಾ ಕಾರಣಗಳಿಗೆ ಇವನ ಹೆಸರಿನಲ್ಲಿ ಬಂಡವಾಳ ಹಾಕಿದರು. ಒಂದೆರಡು ವರ್ಷ ವ್ಯವಹಾರ ಸೊಗಸಾಗಿಯೇ ನಡೆಯಿತು. ಎಷ್ಟರ ಮಟ್ಟಿಗೆಂದರೆ, ಶುರುವಿನಲ್ಲಿ ಒಂದು ಒಂದೂವರೆ ಲಕ್ಷದಷ್ಟಿದ್ದ ವಹಿವಾಟು ಎರಡು ವರ್ಷಗಳಲ್ಲಿ ಐದಾರು ಕೋಟಿ ರೂಪಾಯಿ ಮುಟ್ಟಿತ್ತು! ದುಡ್ಡು ಹೂಡಿದವರೂ ಸಂತೋಷವಾಗಿಯೇ ಇದ್ದರು. ಈ ನಡುವೆ ಏನಾಯಿತು, ಅವರೆಲ್ಲ ತನ್ನ ಸುಪದರ್ಿಗೆ ಕೊಟ್ಟ ದುಡ್ಡಿನಲ್ಲಿ ಈತ ಷೇರು ವ್ಯವಹಾರವಷ್ಟನ್ನೇ ಮಾಡಲಿಲ್ಲ; ಬೆಂಗಳೂರಿನಲ್ಲಿ ನಾಲ್ಕೈದು ಕಡೆ ಒಳ್ಳೊಳ್ಳೆ ಆಸ್ತಿ ಮಾಡಲೂ ಆ ಹಣ ಬಳಸಿಕೊಂಡ. (ಅವೆಲ್ಲ ತುಸು ಮುಂಗಡ ಕೊಟ್ಟು ಮತ್ತೆ ಕಂತುಗಳಲ್ಲಿ ತೀರಿಸಬೇಕಾದ ಬಾಬತ್ತುಗಳು)… ಆದರೆ ಆ ವೈಭವ ಶಾಶ್ವತವಾಗಿರಲಿಲ್ಲ, ಎರಡು ವರ್ಷಗಳಲ್ಲಿ ಷೇರು ಮಾರುಕಟ್ಟೆ ದಢಾರನೆ ಕುಸಿದುಬಿತ್ತು. ಇವನನ್ನು ನಂಬಿ ಜನ ಸುರಿದಿದ್ದ ಕೋಟ್ಯಂತರ ದುಡ್ಡು- ಕೆಲವೊಮ್ಮೆ ಸ್ವಂತ ಆಸ್ತಿಯನ್ನೂ ಒತ್ತೆಯಿಟ್ಟು ತಂದದ್ದು- ಆ ಬಂಡವಾಳ- ಮುಳುಗಿಹೋಯಿತು. ಪಾಟರ್ಿ ಏಕಾಏಕಿ ನಾಪತ್ತೆಯಾದ! ಪೊಲೀಸ್ ಕಂಪ್ಲೇಂಟ್ಗಳಾದವು. ಕಡೆಗೆ ಕಾನೂನಿನ ಕೈ ಇವನವರೆಗೆ ತಲುಪಿ ಸಿಕ್ಕಿ ಬಿದ್ದ. ಮನೆ ಮಠ ಮಾರಿ ದುಡ್ಡು ಕೊಟ್ಟವರು ಬಿಡುತ್ತಾರಾ? ಪೊಲೀಸ್ ಸ್ಟೇಷನ್ನಿಗೆ ಕರೆಸಿ ತೋಳಗಳಂತೆ ಮೇಲೆ ಬಿದ್ದರು. ಇವನ ಹತ್ತಿರ ಹೇಗಿದ್ದರೂ ಕೋಟ್ಯಂತರದ ಆಸ್ತಿಯಿದೆ ಅಂತ ಅವರೆಲ್ಲರ ಲೆಕ್ಕ. ಇವನೂ ಹಾಗೇ ನಂಬಿಸಿದ್ದ. ಈಗ ಎಲ್ಲರ ದುಡ್ಡೂ ತೀರಿಸುತ್ತೇನೆ ಅಂತ ಒಪ್ಪಿಕೊಂಡ. ಆದರೆ ದುಡ್ಡು ತಕ್ಷಣ ಸಿಗುವುದಿಲ್ಲ, ಯಾಕೆಂದರೆ, ತನ್ನ ಗಂಟು ಇರುವುದೆಲ್ಲ ಮುಂಬಯಿಯಲ್ಲಿ, ಅಲ್ಲಿಂದ ಬರಲು ಕೆಲವು ದಿನಗಳು ಹಿಡಿದಾವು ಎಂದ. ಅದಕ್ಕೂ ಒಪ್ಪಿಕೊಂಡರು. ಗಂಡ ಸೀದಾ ಮನೆಗೆ ಬಂದ. ಹೆಂಡತಿಗೊಂದು ಬ್ಯಾಂಕ್ ಅಕೌಂಟ್ ಇದ್ದೇ ಇತ್ತು. ಅವಳ ಚೆಕ್ ಬುಕ್ ತೆಗೆದುಕೊಂಡು ಎಲ್ಲ ಹಾಳೆಗಳಿಗೆ ಅವಳ ಸಹಿ ಮಾಡಿಸಿಕೊಂಡ. ಗಂಡ ಕೇಳಿದಾಗ ಹೆಂಡತಿ ಹೇಗೆ ಇಲ್ಲವೆಂದಾಳು? ವಾಪಸು ಬಂದು ಆ ಹಾಳೆಗಳ ಮೇಲೆ ತನಗೆ ದುಡ್ಡು ಕೊಟ್ಟಿದ್ದವರೆಲ್ಲರ ಹೆಸರು ಬರೆದು- ಮುಂದಿನ ದಿನಾಂಕ ಹಾಕಿ, ಹತ್ತು ಲಕ್ಷ ಇಪ್ಪತ್ತು ಲಕ್ಷ- ಹೀಗೆ ಮೊತ್ತ ನಮೂದಿಸಿ ಅವರೆಲ್ಲರಿಗೆ ಹಂಚಿದ. ಇಷ್ಟು ಮಾಡಿ ಮತ್ತೆ ನಾಪತ್ತೆಯಾದ! ಇದು ನಡೆದಿದ್ದು 2000ನೇ ಇಸವಿಯಲ್ಲಿ. ಆ ಮಹಾನುಭಾವ ಇಂದಿನವರೆಗೂ ಪತ್ತೆಯಿಲ್ಲ. ಆ ಹೆಣ್ಣುಮಗಳ ದುರಂತ ಕಥೆ ಇಲ್ಲಿಂದ ಶುರು. ಅವರೆಲ್ಲ ಸಹಜವಾಗಿಯೇ ಈ ಚೆಕ್ಕುಗಳನ್ನು ಬ್ಯಾಂಕಿಗೆ ಹಾಕಿದರು. ಈಕೆ ಪಾಪ, ಎಲ್ಲಿಂದ ತಂದಾಳು ದುಡ್ಡು? ಎಲ್ಲ ಚೆಕ್ಕುಗಳೂ ವಾಪಸಾದವು. ಅವರು ಕೋಟರ್ಿನ ಮೊರೆ ಹೊಕ್ಕರು. ಅವಳ ಮೇಲೆ ದಾಖಲಾದ ಒಟ್ಟು ಕೇಸುಗಳು ಮೂವತ್ತೇಳು. ಒಂದೊಂದಾಗಿ ವಿಚಾರಣೆಗೆ ಬರತೊಡಗಿದವು. ಇದ್ದ ಸಕರ್ಾರಿ ನೌಕರಿ ಹೋಯಿತು. ಸಾಲ ಮಾಡಿ ತನ್ನ ಶ್ರಮದಿಂದ ಕಟ್ಟಿದ್ದ ಮನೆ ಮಾರಿ ಆ ದುಡ್ಡೂ ಇಲ್ಲಿಗೆ ವಜಾ ಆಯಿತು. ಶಿಕ್ಷೆ ಆದಂತಾದಂತೆಲ್ಲ, ಜೈಲಿಗೆ ಹೋಗುವುದು, ಹೊರಗೆ ಬರುವುದು; ಬರುತ್ತಿದ್ದಂತೆಯೇ ಇನ್ನೊಂದು ಕೇಸಿನಲ್ಲಿ ಶಿಕ್ಷೆ, ಮತ್ತೆ ಜೈಲು. ಮಕ್ಕಳು ತಬ್ಬಲಿಗಳಾಗಿ ಯಾರೋ ಸಂಬಂಧಿಕರ ಆಸರೆಗೆ ಹೋದವು. ಹದಿಮೂರು ಮತ್ತು ಹತ್ತು ವರ್ಷ ವಯಸ್ಸಿನ ಆ ಮಕ್ಕಳ ಬಾಳೇನೋ, ಭವಿಷ್ಯವೇನೋ ಗೊತ್ತಿಲ್ಲ. ಇತ್ತ, ಎಲ್ಲ ಕೇಸುಗಳಲ್ಲೂ ಒಟ್ಟು ಎಷ್ಟು ವರ್ಷ ಅಥವಾ ಎಷ್ಟು ದಶಕ ಜೈಲಿನಲ್ಲೇ ಕಳೆಯಬೇಕೋ ಈ ಹೆಂಗಸಿಗೂ ಗೊತ್ತಿಲ್ಲ…. ಒಟ್ಟು, ತನಗೆ ಸಂಬಂಧವೇ ಇಲ್ಲದ ಪ್ರಕರಣದಲ್ಲಿ ತಾಯಿ, ಇಬ್ಬರು ಮಕ್ಕಳ ನಿರಪರಾಧಿ ಕುಟುಂಬ ಸಂಪೂರ್ಣ ಆಹುತಿಯಾಗಿಹೋಯಿತು. ಆ ಹೆಂಗಸು ಏನೇನೆಲ್ಲ ಎದುರಿಸಿರಬಹುದು- ಊಹಿಸುವುದು ಅಷ್ಟು ಸುಲಭವಲ್ಲ. ತನ್ನ ಪಾಡಿಗೆ ತಾನು ಗೌರವವಾಗಿ ಕೆಲಸ ಮನೆ ನೋಡಿಕೊಂಡಿದ್ದ ಹೆಣ್ಣುಮಗಳ ಮನೆಗೆ ಪೊಲೀಸ್ ಬರುವುದು, ‘ಸಾಹೇಬ್ರು ಕರೀತಾವ್ರೆ ಬಾರಮ್ಮ’ ಅನ್ನುವುದು ಅಷ್ಟು ಹಗುರವಾದ ಮಾತಲ್ಲ. ‘ಚೆಕ್ ಬೌನ್ಸ್ ಕೇಸುಗಳೆಂದರೆ, ಮೊದಲಿನಂಗಲ್ಲಮ್ಮ ಗುರೂ! ಈಗ ಭಾಳಾ ಸ್ಟ್ರಿಕ್ಟು…’ ಎಂಬ ಮಾತು ಆಗೀಗ ಕೇಳುತ್ತಿದ್ದೆವಲ್ಲ, ಆ `ಸ್ಟ್ರಿಕ್ಟ್’ ಕಾನೂನಿನ ಪರಿಣಾಮ ಈಗ ಮೇಲಿನಂಥ ನೂರಾರು, ಸಾವಿರಾರು ಪ್ರಕರಣಗಳಲ್ಲಿ ಕಣ್ಣಿಗೆ ಹೊಡೆಯುತ್ತಿದೆ. ಮುಂಚೆ, ಈ ಥರದ ಕೇಸುಗಳು ಸಿವಿಲ್ ವಲಯಕ್ಕೆ ಸೇರುತ್ತಿದ್ದವು, ಕೇಸು ವರ್ಷಗಟ್ಟಳೆ ಎಳೆಯುತ್ತಿತ್ತು. ಮತ್ತು ಸಿವಿಲ್ ಮೊಕದ್ದಮೆಗಳಲ್ಲಿ- ಜೈಲು ಶಿಕ್ಷೆಯಿಲ್ಲ… ಹಾಗೆಯೇ, ಮೋಸ ಮಾಡುವ ಉದ್ದೇಶದಿಂದಲೇ ಚೆಕ್ ಕೊಟ್ಟು ಆಟವಾಡಿಸುತ್ತಿದ್ದ ನಿದರ್ಶನಗಳೂ ಅಪರೂಪವಾಗಿರಲಿಲ್ಲ. ನಿಜ, ವ್ಯವಹಾರದಲ್ಲಿ ದಗಾ ಮೋಸಗಳನ್ನು ನಿಯಂತ್ರಿಸಲೊಂದು ಕಾನೂನು ಬೇಕಿತ್ತು. ಬಹುಶಃ ಈ ಒಳ್ಳೆಯ ಉದ್ದೇಶಕ್ಕೇ ಕೇಂದ್ರ ಸಕರ್ಾರ 1989ರಲ್ಲಿ ನೆಗೋಷಿಯೆಬಲ್ ಇನ್ಸ್ಟ್ರುಮೆಂಟ್ಸ್ ಕಾನೂನಿಗೆ ತಿದ್ದುಪಡಿ ತಂದು- ಚೆಕ್ ವಾಪಸು ಪ್ರಕರಣಗಳನ್ನು ಕ್ರಿಮಿನಲ್ ಅಪರಾಧಗಳ ಪರಿಧಿಗೆ ತಂದಿದ್ದು. ಆ ಕಾನೂನು ಬಂದ ಮೇಲೆ ದೇಶಾದ್ಯಂತ ಮೊಕದ್ದಮೆಗಳು ನಡೆದು, ಎಷ್ಟೋ ಪ್ರಕರಣಗಳು ಸುಪ್ರೀಂ ಕೋಟರ್ಿನ ಮೆಟ್ಟಿಲೂ ಹತ್ತಿ, ಬರಬರುತ್ತಾ ಈ ಕಟ್ಟಳೆಗೆ ಈಗ ಯಾವ ಸ್ವರೂಪ ಬಂದಿದೆಯೆಂದರೆ, ಚೆಕ್ ನಿಮ್ಮದಾಗಿದ್ದು, ಅದರ ಮೇಲೆ ನಿಮ್ಮ ಸಹಿ ಇರುವುದು ನಿಜ ಎಂದಾದರೆ ಇನ್ನು ಯಾವ ವಿವರಣೆಯೂ ಬೇಕಾಗಿಯೇ ಇಲ್ಲ; ನಿಮಗೆ ಯಾವ ರಕ್ಷಣೆಯೂ ಇಲ್ಲ! ಅಂದರೆ ನೀವೀಗ ಹತ್ತು ಸಾವಿರ ಸಾಲ ಪಡೆಯುತ್ತೀರಿ, ಸಾಲ ಕೊಟ್ಟವನು ನಿಮ್ಮಿಂದ ಖಾಲಿ ಚೆಕ್ಕಿಗೆ ಸಹಿ ಮಾಡಿಸಿ ಇಟ್ಟುಕೊಳ್ಳುತ್ತಾನೆ. ಯಾವುದೋ ಕಾರಣಕ್ಕೆ ನಿಮಗೆ ಸಮಯದಲ್ಲಿ ಅದನ್ನು ತೀರಿಸಲಾಗಲಿಲ್ಲ. ಆಗ ಅವನೇನು ಮಾಡುತ್ತಾನೆ, ಚೆಕ್ಕಿನ ಮೇಲೆ ಒಂದು ಲಕ್ಷ ಬರೆದುಕೊಂಡು ಬ್ಯಾಂಕಿಗೆ ಹಾಕುತ್ತಾನೆ. ನೀವು ಒಂದು ಲಕ್ಷ ಕೊಡಲು ಸಾಧ್ಯವೇ? ಚೆಕ್ ವಾಪಸಾಗುತ್ತೆ. ಹಾಗಾದ ಕೂಡಲೇ, ಹದಿನೈದು ದಿನಗಳ ಗಡುವು ನೀಡಿ ನಿಮಗೆ ನೋಟೀಸ್ ಕೊಡುತ್ತಾನೆ. ಆ ಅವಧಿಯೂ ಮುಗಿದು ಒಂದು ತಿಂಗಳಲ್ಲಿ ನಿಮ್ಮ ಮೇಲೆ ಮೊಕದ್ದಮೆ ಹೂಡಿದರೆ- ನಿಮ್ಮ ಕತೆ ಮುಗಿಯಿತು. ಕೋಟರ್ು ಕೇಳುವುದಿಷ್ಟೇ: ಇದು ನಿಮ್ಮ ಚೆಕ್ಕಾ? ಇದು ನಿಮ್ಮ ಸಹಿಯಾ? ಹೌದು ಅಂದ ಕೂಡಲೇ, ಅಲ್ಲಿಗೆ ಖಲಾಸ್! ನಿಮಗೆ ಒಂದು ವರ್ಷದವರೆಗೆ ಜೈಲು ಶಿಕ್ಷೆ, ಅಥವಾ ಚೆಕ್ ಮೇಲೆ ಅವನು ಬರೆದುಕೊಂಡ ಮೊತ್ತದ ಎರಡರಷ್ಟರವರೆಗೆ ದಂಡ, ಅಥವಾ ಜೈಲು- ದಂಡ ಎರಡೂ! ಇದರಲ್ಲೇನು ತಪ್ಪು, ತಪ್ಪಿತಸ್ಥರಿಗೆ ಶಿಕ್ಷೆ ಆಗಬಾರದೇ? ಎಂದು ನೀವು ಕೇಳಬಹುದು. ಸರಿ, ಮೇಲೆ ಹೇಳಿದ ಆ ಹೆಣ್ಣುಮಗಳು ಮಾಡಿದ್ದ ತಪ್ಪೇನು ಹಾಗಾದರೆ? ನೂರು ಅಪರಾಧಿಗಳು ತಪ್ಪಿಸಿಕೊಂಡರೂ, ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಅನ್ನುವ ಪಾಠವೇನಾಯಿತು?… ಅದಕ್ಕಿಂತ ಹೆಚ್ಚಾಗಿ, ಇಲ್ಲಿ ಅತ್ಯಂತ ಸೂಕ್ಷ್ಮವಾದ ಹಾಗೂ ಗಂಭೀರವಾದ ಸಂಗತಿಯೆಂದರೆ, ಈ ಕಾನೂನು- ನ್ಯಾಯಪ್ರಕ್ರಿಯೆಯ ಮೂಲ ಬುನಾದಿಯನ್ನೇ ಬುಡಮೇಲು ಮಾಡಿದೆ ಅನ್ನುವುದು. ಅಪರಾಧಿ ಎಂದು ನಿಸ್ಸಂದಿಗ್ಧವಾಗಿ ಸಾಬೀತಾಗುವವರೆಗೂ ಪ್ರತಿಯೊಬ್ಬನೂ ನಿದರ್ೋಷಿಯೇ ಅನ್ನುವುದು ಇಡೀ ಜಗತ್ತಿನ ಕಾನೂನು ಮತ್ತು ನ್ಯಾಯವ್ಯವಸ್ಥೆಯ ಮೂಲ ತತ್ವ. ಈ ಚೆಕ್ ಬೌನ್ಸ್ ಕಾನೂನು ಅದನ್ನು ಹೇಗೆ ತಲೆಕೆಳಗು ಮಾಡಿದೆಯೆಂದರೆ, ಇಲ್ಲಿ ನಿದರ್ೋಷಿಯೆಂದು ಸಾಬೀತಾಗುವವರೆಗೂ ನೀವು ಅಪರಾಧಿ ಮತ್ತು ಶಿಕ್ಷಾರ್ಹ! ಅಷ್ಟೇ ಅಲ್ಲ, ಕೊಲೆಗಾರರಿಗೆ, ಅತ್ಯಾಚಾರಿಗಳಿಗೆ, ಕೊನೆಗೆ ದಂಡುಪಾಳ್ಯದಂಥ ಸರಣಿ ಕೊಲೆಗಡುಕರಿಗೂ- ಕಾನೂನು, ತಮ್ಮನ್ನು ತಾವು ಪಾರು ಮಾಡಿಕೊಳ್ಳುವ, ಪ್ರಾಸಿಕ್ಯೂಷನ್ನಿನ ವಾದವನ್ನು ಪ್ರಶ್ನಿಸಿ ತಂತಮ್ಮ ವಾದ ಮಂಡಿಸುವ ಆತ್ಮರಕ್ಷಣೆಯ ಅವಕಾಶ ಕೊಡುತ್ತದೆ. ಆದರೆ ಚೆಕ್ ವಾಪಸು ಕೇಸಿನಲ್ಲಿ- ನಿಮಗೆ ಆಶ್ಚರ್ಯವೆನಿಸಬಹುದು- ಆ ಅವಕಾಶವಿಲ್ಲ! ಬೇರೆಲ್ಲ ಕ್ರಿಮಿನಲ್ ಮೊಕದ್ದಮೆಗಳಲ್ಲಿ, ಆರೋಪಿಗಳ ಅಪರಾಧವನ್ನು ರುಜುವಾತುಪಡಿಸುವ ಹೊಣೆ ಪ್ರಾಸಿಕ್ಯೂಷನ್ನಿನದು. ಇಲ್ಲಿ, ತಾನು ತಪ್ಪಿತಸ್ಥನಲ್ಲ ಎಂದು ತೋರಿಸುವ ಹೊಣೆ ಆರೋಪಿಯದು! ಈ ಸ್ವರೂಪದ, ಅಂದರೆ ಆತ್ಮರಕ್ಷಣೆಯ ಆಸ್ಪದವೇ ಇಲ್ಲದ ಇನ್ನೊಂದು ಕಾನೂನು ಯಾವುದು ಗೊತ್ತೇ? ಭಯೋತ್ಪಾದನಾ ವಿರೋಧಿ ಕಾಯ್ದೆ! ಅಂದರೆ ಈ ನೆಲದ ನ್ಯಾಯವ್ಯವಸ್ಥೆಯಲ್ಲಿ, ಚೆಕ್ ವಾಪಸ್ ಮಾಡಿದವನಿಗೂ, ಭಯೋತ್ಪಾದಕನಿಗೂ ವ್ಯತ್ಯಾಸವೇ ಇಲ್ಲ! ಕೊಲೆಗಡುಕರಿಗೆ, ಅತ್ಯಾಚಾರಿಗಳಿಗೆ, ಸಾರ್ವಜನಿಕ ಹಣ, ಸೊತ್ತು ನುಂಗಿದವರಿಗೆ, ಅಷ್ಟೇಕೆ, ಛಾಪಾ ಕಾಗದದ ತೆಲಗಿಗೂ ಲಭ್ಯವಿರುವ ಇಂಥ ಅವಕಾಶದ ಬಾಗಿಲನ್ನು ಈ ಚೆಕ್ ಪ್ರಕರಣ ಮುಚ್ಚಿಬಿಟ್ಟಿದೆ. ಆದ್ದರಿಂದಲೇ ಈ ಕಾನೂನು ಭಾರತೀಯನ ಮೂಲಭೂತ ಹಕ್ಕುಗಳನ್ನು ಕಸಿಯುವ ಮೂಲಕ ಸಂವಿಧಾನದ ಮೂಲ ಆಶಯಗಳಿಗೇ ವಿರುದ್ಧವಾಗಿದೆ ಎಂಬ ವಾದಗಳು ಬಂದಿದ್ದು ಸಹಜವಾಗಿತ್ತು. ಆದರೆ ಸುಪ್ರೀಂ ಕೋಟರ್ು ಅದನ್ನು ಒಪ್ಪಲಿಲ್ಲ! ಏನು ಮಾಡಬೇಕು? ಈಗಂತೂ ಈ ಚೆಕ್ ವಾಪಸು ಕಾಯ್ದೆ ಬಡ್ಡಿ ವ್ಯವಹಾರದ ಲೇವಾದೇವಿಗಾರರಿಗೆ ಆನೆ ಬಲ ತಂದುಕೊಟ್ಟಿದೆ; ಮತ್ತು ಎಲ್ಲ ಕಾನೂನುಗಳಂತೆ, ಇಲ್ಲಿಯೂ ಬಲಿಷ್ಠರು ಆರಾಮವಾಗಿದ್ದು ದುರ್ಬಲರೇ ಸಿಕ್ಕಿಕೊಳ್ಳುತ್ತಿದ್ದಾರೆ. ಅಂಕಿ ಅಂಶಗಳ ಪ್ರಕಾರ, ಬೆಂಗಳೂರೊಂದರಲ್ಲೇ ದಿನವಹಿ ಆರು ನೂರರಿಂದ ಒಂದು ಸಾವಿರದವರೆಗೆ ಚೆಕ್ ಮೊಕದ್ದಮೆಗಳು ದಾಖಲಾಗುತ್ತಿವೆ. ಜೊತೆಗೆ, ಈ ಪ್ರಕರಣಗಳಲ್ಲಿ ಬಚಾವಾಗಿ ಬರುವವರ ಸಂಖ್ಯೆಯಂತೂ ತೀರಾ ಕಮ್ಮಿ. ದುರುಪಯೋಗದ ಅಪರಿಮಿತ ಅವಕಾಶಗಳನ್ನು ಒಡಲಲ್ಲಿಟ್ಟುಕೊಂಡ ಈ ಕುರುಡು ಕಾನೂನಿನ ಪ್ರಶ್ನೆಯನ್ನು ಕಾನೂನು ತಜ್ಞರು, ಚಿಂತಕರು ಮತ್ತು ಜನಪ್ರತಿನಿಧಿಗಳು ಈಗಲಾದರೂ ಕೈಗೆತ್ತಿಕೊಳ್ಳದಿದ್ದರೆ, ಚೆಕ್ ಪುಸ್ತಕವೇ ಜೇಬೊಳಗಿನ ಭಯೋತ್ಪಾದಕನಾಗಿ ಕಾಡುತ್ತಲೇ ಇರುತ್ತದೆ. (-ಈ ವಿಷಯದ ಬಗ್ಗೆ ಗಮನ ಸೆಳೆದು ವಿವರ ಒದಗಿಸಿದ ವಕೀಲ ಮಿತ್ರ ಬಿ.ಟಿ. ವೆಂಕಟೇಶ್ರಿಗೆ ಈ ಅಂಕಣಕಾರ ಋಣಿ. -ಈ ಲೇಖನ ಬರೆಯುವಾಗ ಪರಿಸ್ಥಿತಿ ಹೀಗಿತ್ತು. ಆದರೀಗ ಕೋಟರ್ುಗಳಲ್ಲಿ ತುಸು ನ್ಯಾಯಯುತವಾದ ವಿಚಾರಣಾ ವಿಧಾನಗಳನ್ನು ಅನುಸರಿಸುತ್ತಿದ್ದಾರೆ.)   16 ಸೆಪ್ಟೆಂಬರ್ 2005 *** ಪ್ರೆಸ್ ಕ್ಲಬ್ ಪ್ರಕಾಶನ ಹೊರತಂದಿರುವ ಈ ಕೃತಿಯ ಆಯ್ದ ಭಾಗಗಳು ಇನ್ನು ಮುಂದೆ ವಾರಕ್ಕೆ ಎರಡು ಬಾರಿ ‘ಅವಧಿ’ಯಲ್ಲಿ ಪ್ರಕಟಗೊಳ್ಳಲಿದೆ. ಈ ಕೃತಿ ಐ ಬಿ ಎಚ್ ಪ್ರಕಾಶನದ ಆನ್ಲೈನ್ ಮಳಿಗೆಯಲ್ಲೂ ಲಭ್ಯ    ]]>

‍ಲೇಖಕರು G

March 23, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This