ಎನ್ ಎಸ್ ಶ೦ಕರ್ ಕಾಲ೦ : ತತ್ವದ ಪರದೆಗಳು

– ಎನ್ ಎಸ್ ಶ೦ಕರ್

ತತ್ವದ ಪರದೆಗಳು

  ದೇವೇಗೌಡ ಮತ್ತು ಸಿದ್ದರಾಮಯ್ಯ ಈಗ ವಿರೋಧಿಗಳು. ಆದರೆ ಅವರಿಬ್ಬರ ಹೆಜ್ಜೆಗಳಲ್ಲಿ ಎಂಥ ಸಾಮ್ಯವಿದೆ ನೋಡಿ: ಸರಿಯಾಗಿ ಇಪ್ಪತ್ತು ವರ್ಷಗಳ ಹಿಂದೆ ಇಂದು ಸಿದ್ದರಾಮಯ್ಯನವರಿರುವ ಕವಲುದಾರಿಯಲ್ಲೇ ದೇವೇಗೌಡರಿದ್ದರು. ಅವರಿಗೂ ಆಗಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರಿಗೂ ಸಂಬಂಧ ಹಳಸಿಕೊಂಡಿತ್ತು- ಈಗ ಗೌಡರು ಸಿದ್ದರಾಮಯ್ಯನವರಿಗೂ ಆದಂತೆ. ಕಾಲಾಂತರದಲ್ಲಿ ಹೆಗಡೆ- ಗೌಡರ ವೈಮನಸ್ಸು ಮುಚ್ಚಲಾಗದ ಕಂದಕವಾಗಿ ಬೆಳೆದು ಅವರ ಹಾದಿಗಳು ಬೇರೆ ಬೇರೆಯಾದವು. ಯಾವ ವಿದಾಯವೂ ಹಲವು ಸಂಕಟ, ರಾಜಿ, ಗೋಳು, ಕಣ್ಣೀರುಗಳಿಲ್ಲದೆ ಪೂರ್ಣಗೊಳ್ಳುವುದಿಲ್ಲವಾದ್ದರಿಂದ ಗೌಡರು ಆಗ ಅನುಭವಿಸಿದ್ದರ ಹಿಂದೆಯೂ ಒಂದು ಗಂಭೀರ ವಿಷಾದದ ಕಥೆ ಇರಲು ಸಾಧ್ಯ… ಈಗ ದೇವೇಗೌಡರ ಸ್ಥಾನದಲ್ಲಿ ಸಿದ್ದರಾಮಯ್ಯನವರನ್ನು ಕಲ್ಪಿಸಿಕೊಳ್ಳಿ. ಆಗಿನ ಗೌಡರ ಸ್ಥಿತಿಗೂ, ಸಿದ್ದರಾಮಯ್ಯನರ ಈಗಿನ ತಳಮಳಕ್ಕೂ ಏನಾದರೂ ವ್ಯತ್ಯಾಸ ಕಾಣುತ್ತಿದೆಯೇ?!… ಹೋಲಿಕೆ ಇಲ್ಲಿಗೇ ನಿಲ್ಲುವುದಿಲ್ಲ. 83ರಲ್ಲಿ ಗುಂಡೂರಾಯರ ದರ್ಬಾರನ್ನು ಕಿತ್ತೆಸೆದು ಕನ್ನಡ ಜನತೆ ಜನತಾ ಪಕ್ಷವನ್ನು ಅಧಿಕಾರಕ್ಕೆ ತಂದಾಗ ಮುಖ್ಯಮಂತ್ರಿ ಹುದ್ದೆ ಆಕಾಂಕ್ಷಿಗಳಲ್ಲಿ ದೇವೇಗೌಡರೇ ಅಗ್ರಗಣ್ಯರು. ಆದರೆ ಆಗ ನಡೆಯಬಾರದ್ದೆಲ್ಲ ನಡೆದು ಅದುವರೆಗೆ ಎಲ್ಲೂ ಇರದಿದ್ದ ಹೆಗಡೆ ಬಂದು ಆ ಸ್ಥಾನದಲ್ಲಿ ಕೂತರು. ಗೌಡ- ಹೆಗಡೆ ವಿರಸದ ಮೂಲ ಇಲ್ಲಿದೆ- ತಮಗೆ ಸಲ್ಲಬೇಕಾದ ಅಧಿಕಾರವನ್ನು ಹೆಗಡೆ ಕಸಿದರು ಎಂಬಲ್ಲಿ… ಈಗ ಸಿದ್ದರಾಮಯ್ಯನವರ ಅತೃಪ್ತಿಯ ಬೀಜ ಎಲ್ಲಿಯದು? ರಾಜ್ಯದಲ್ಲಿ ಮೊದಲ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬರುವ ಸಂದರ್ಭದಲ್ಲಿ ಗೌಡರು ಮನಸ್ಸು ಮಾಡಿದ್ದರೆ ತಾನೇ ಮುಖ್ಯಮಂತ್ರಿ ಆಗುತ್ತಿದ್ದೆ; ಆದರೆ ಗೌಡರು ಬೇಕೆಂದೇ ಅದಕ್ಕೆ ಕಲ್ಲು ಹಾಕಿ ಕಾಂಗ್ರೆಸ್ಸಿಗೆ- ಅಂದರೆ ಧರಂಸಿಂಗ್ರಿಗೆ ಗಾದಿ ಸಲ್ಲುವಂತೆ ನೋಡಿಕೊಂಡರು ಎಂಬುದು ಸಿದ್ದರಾಮಯ್ಯನವರ ಬೇಗುದಿ. ‘ಪಟ್ಟ ತಮಗೆ ಸಿಕ್ಕರೆ ತಾವು ಗೌಡರನ್ನೂ ಮೀರಿಸಿ ಬೆಳೆಯಬಹುದು ಎಂಬ ಭಯ ಗೌಡರಿಗೆ, ಅದರ ಮೇಲೆ ಅಧಿಕಾರ ಬೇರೆಯವರ ಕೈ ಸೇರಲು ಬಿಡಲಾರದ ಗೌಡರ ಪುತ್ರವ್ಯಾಮೋಹ ಇನ್ನೊಂದು ಕಡೆ; ಇದರಿಂದಾಗಿಯೇ ತಾವು ಉಪಮುಖ್ಯಮಂತ್ರಿ ಎಂಬ ರಾಜಿ ಸ್ಥಾನಕ್ಕೆ ಮಣಿಯಬೇಕಾಯಿತು’ ಅನ್ನುವುದು ಸಿದ್ದರಾಮಯ್ಯನವರ ಕೊರಗು. ಇದು ನಿಜ ಹೌದೋ ಅಲ್ಲವೋ ಹೇಳುವವರು ಯಾರೂ ಇಲ್ಲ. ಸತ್ಯ ಅವರವರಿಗೇ ಗೊತ್ತು, ಅಷ್ಟೇ.   ಅಂತೂ ಮನಸ್ತಾಪದ ಮೂಲ ಇರುವುದು ಇಲ್ಲಿ. ಉಳಿದ ಆರೋಪ ಸಮಜಾಯಿಷಿಗಳೇನಿದ್ದರೂ ವಾದದ ಅನುಕೂಲಕ್ಕೆ ಹುಟ್ಟಿಕೊಂಡಂಥವು. ಈಗ ಇನ್ನೂ ಒಂದು ಮುಖ್ಯ ಹೋಲಿಕೆಗೆ ಬರೋಣ. ದೇವೇಗೌಡರು ಹೆಗಡೆಯಿಂದ ದೂರವಾಗುವಾಗ ನೀರಾವರಿ ಜಪ ಮಾಡುತ್ತಿದ್ದರು. ಈ ನಾಡಿನ ರೈತರ ಉದ್ಧಾರ ದೊಡ್ಡ ದೊಡ್ಡ ನೀರಾವರಿ ಯೋಜನೆಗಳಿಂದ ಮಾತ್ರ ಸಾಧ್ಯ, ಹೆಗಡೆ ಅಂಥ ನೀರಾವರಿಯನ್ನೇ ನಿರ್ಲಕ್ಷಿಸುತ್ತಿದ್ದಾರೆ, ಆದ್ದರಿಂದ ರೈತ ವಿರೋಧಿ ಹೆಗಡೆ ಸರ್ಕಾರರದಲ್ಲಿ ತನ್ನಂಥ ರೈತಬಂಧು ಮುಖಂಡ ಉಳಿದಿರಲು ಸಾಧ್ಯವೇ?- ಇದು ದೇವೇಗೌಡರು ಆಗ ಎತ್ತಲೆತ್ನಿಸಿದ ತಾತ್ವಿಕ ಪ್ರಶ್ನೆ. ದೊಡ್ಡ ನೀರಾವರಿ ಯೋಜನೆಗಳಿಂದಲೇ ಹುಟ್ಟುವ ತೊಡಕುಗಳನ್ನು ಅರಿಯುವುದು ಅಥವಾ ಪರ್ಯಾಯಗಳನ್ನು ಶೋಧಿಸುವುದು ಗೌಡರ ರಾಜಕೀಯದಲ್ಲಿ ಎಂದೂ ಇರಲಿಲ್ಲ ಎಂಬ ಮಾತು ಬೇರೆ! ಇನ್ನು ಸಿದ್ದರಾಮಯ್ಯ. ಇವರೇನು ಮಾಡುತ್ತಿದ್ದಾರೆ? ಹಿಂದುಳಿದ ವರ್ಗಗಳು ಅನ್ನುತ್ತಾರೆ. ಸಾಮಾಜಿಕ ನ್ಯಾಯ ಅನ್ನುತ್ತಾರೆ. ಅಹಿಂದ ಅನ್ನುತ್ತಾರೆ. ಹುಬ್ಬಳ್ಳಿಯಲ್ಲಿ ದೊಡ್ಡ ಪಕ್ಷಾತೀತ ಸಮಾವೇಶ ಮಾಡುತ್ತಾರೆ…! ಮತ್ತೆ ಗೌಡರ ಕಾಲಕ್ಕೇ ಹೋದರೆ, ಮುಂದಕ್ಕೆ ಅವರು ಮುಖ್ಯಮಂತ್ರಿಯೂ ಆದರು, ಪ್ರಧಾನಮಂತ್ರಿಯೂ ಆದರು. ಆದರೆ ತಮ್ಮ ಅಧಿಕಾರಾವಧಿಯಲ್ಲಿ ಅವರು ತಮ್ಮ ಹಿಂದಿನ ನಿರಂತರ ಜಪಕ್ಕೆ ಸರಿಸಾಟಿಯಾದ ನೀರಾವರಿ ಸಾಧನೆ ಮಾಡಿದ್ದನ್ನು ಯಾರೂ ಕಾಣಲಿಲ್ಲ! ಹಾಗೆಯೇ- ಅಹಿಂದದ ಮೂಲ ಚಿಂತಕರಾದ ಚಳವಳಿಗಾರರು, ಬರಹಗಾರರನ್ನು ಸನಿಹಕ್ಕೂ ಸೇರಿಸದೆ ಕೇವಲ ಗೌಡರ ವಿರೋಧಿಗಳನ್ನೇ ವೇದಿಕೆ ಮೇಲೆ ಒಟ್ಟುಗೂಡಿಸಿಕೊಂಡು ತಮ್ಮನ್ನು ಭಾವೀ ಮುಖ್ಯಮಂತ್ರಿ ಎಂದು ಬಿಂಬಿಸಿಕೊಂಡು ಸಂತೋಷಪಟ್ಟರು ಸಿದ್ದರಾಮಯ್ಯ. ಅವರ ಈ ಆರ್ಭಟದಿಂದ ಸಾಮಾಜಿಕ ನ್ಯಾಯ ಸಾಧ್ಯವೆಂದು ನಂಬಲು ಕಾರಣಗಳಿವೆಯೇ? ಹೇಗೆ ದೇವೇಗೌಡರು ಬಾಯಲ್ಲಿ ಸಾವಿರ ಹೇಳಿದರೂ ಇಂದಿಗೂ ಒಕ್ಕಲಿಗರ ನಾಯಕ ಮಾತ್ರರಾಗಿ ಗೋಚರವಾಗುತ್ತಿದ್ದಾರೆಯೋ, ಅದೇ ರೀತಿ ಸಿದ್ದರಾಮಯ್ಯ (ಅವರ ಸುತ್ತ ಮುತ್ತಿದವರನ್ನು ನೋಡಿದರೆ) ಸದ್ಯಕ್ಕಂತೂ ತಮ್ಮ ಜನಾಂಗವಾದ ಕುರುಬರ ವಲಯವನ್ನು ಮೀರಿ ಬೆಳೆಯುವ ಸೂಚನೆಗಳೂ ಕಾಣುತ್ತಿಲ್ಲ… ಮುಖ್ಯ ಪ್ರಶ್ನೆಯೆಂದರೆ, ಇವರು ನೇರಾನೇರವಾಗಿ ನಮಗೂ ನಿಮಗೂ ಸರಿ ಬರುವುದಿಲ್ಲ, ನಾವು ಬೇರೆಯಾಗೋಣ ಅನ್ನದೆ ಇಷ್ಟೆಲ್ಲ ತಾತ್ವಿಕ ಬಡಿವಾರಕ್ಕೇಕೆ ಇಳಿಯುತ್ತಾರೆ? ಬಹುಶಃ ಅದೇ ರಾಜಕೀಯ! ಅಲ್ಲಿಂದ ಇಲ್ಲಿಗೆ ಜಿಗಿಯುವ ಜಿಲ್ಲಾ ಪರಿಷತ್ತಿನ ಒಬ್ಬ ಮರಿ ಪುಢಾರಿಯೂ ತನ್ನ ಜಿಗಿತ ಭಾರತಮಾತೆಯ ಸೇವೆಯಲ್ಲಿ ಮಾಡಿದ್ದೆಂದು ನಂಬಿಸಲು ಯತ್ನಿಸುವ ಈ ನಾಡಿನಲ್ಲಿ ಇದೇನೂ ವಿಚಿತ್ರವಲ್ಲ. ಅಂದರೆ, ದೇವೇಗೌಡರ ಅಂದಿನ ನೀರಾವರಿ ಜಪಕ್ಕೂ, ಸಿದ್ದರಾಮಯ್ಯನವರ ಇಂದಿನ ಸಾಮಾಜಿಕ ನ್ಯಾಯದ ಕೀರ್ತನೆಗೂ ಯಾವ ವ್ಯತ್ಯಾಸವೂ, ಸದ್ಯಕ್ಕಂತೂ ಕಾಣುತ್ತಿಲ್ಲ. ಎರಡೂ ಕರುಣಾಜನಕವಾದ- ಕೇಳುವವರಲ್ಲಿ ಯಾವ ನಂಬುಗೆಯನ್ನೂ ಹುಟ್ಟಿಸದ, ಹಾಸ್ಯಾಸ್ಪದವಾದ ತಾತ್ವಿಕ ಹೊದಿಕೆಗಳು. ನಾಟಕದಲ್ಲಿ ಒಂದು ದೃಶ್ಯಕ್ಕೂ ಇನ್ನೊಂದಕ್ಕೂ ನಡುವೆ ವೇಷ, ಬಣ್ಣ ಬದಲಿಸಿ ಬರುವಾಗ ನಟರು ಇಳಿಬಿಟ್ಟು ಹೋಗುತ್ತಾರಲ್ಲ ಅಂಥ ಪರದೆಗಳಿವು. ಅಲ್ಲೂ ಅಷ್ಟೇ, ಇಲ್ಲೂ ಅಷ್ಟೇ: ರಂಗದ ಮೇಲೆ ಮಹತ್ವದ್ದು ನಡೆಯುವುದು ಪರದೆ ಬದಿಗೆ ಸರಿದಾಗಲೇ. ಆದರೆ, ನಾಟಕದವರಿಗೆ ಅದು ಗೊತ್ತು, ಪಾಪ, ರಾಜಕಾರಣಿಗಳಿಗೆ ಗೊತ್ತಿರುವುದಿಲ್ಲ! ಅದಕ್ಕೇ ನಮ್ಮ ಮುಖಂಡರು, ರಾಜಕೀಯ ನಡಾವಳಿಯ ಮುಖ್ಯ ದೃಶ್ಯಕ್ಕಿಂತ, ಅಂಕಗಳ ನಡುವಣ- ತತ್ವದ- ಈ ಪರದೆಗಳೇ ಮುಖ್ಯವೆಂದು ಪ್ರೇಕ್ಷಕರನ್ನು ನಂಬಿಸುವ ಯತ್ನದಲ್ಲೇ ಸದಾ ಮಗ್ನರು….!   5 ಆಗಸ್ಟ್ 2005 *** ಪ್ರೆಸ್ ಕ್ಲಬ್ ಪ್ರಕಾಶನ ಹೊರತಂದಿರುವ ಈ ಕೃತಿಯ ಆಯ್ದ ಭಾಗಗಳು ಇನ್ನು ಮುಂದೆ ವಾರಕ್ಕೆ ಎರಡು ಬಾರಿ ‘ಅವಧಿ’ಯಲ್ಲಿ ಪ್ರಕಟಗೊಳ್ಳಲಿದೆ. ಈ ಕೃತಿ ಐ ಬಿ ಎಚ್ ಪ್ರಕಾಶನದ ಆನ್ಲೈನ್ ಮಳಿಗೆಯಲ್ಲೂ ಲಭ್ಯ]]>

‍ಲೇಖಕರು G

March 13, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This