ಎನ್ ಎಸ್ ಶ೦ಕರ್ ಕಾಲ೦ : ಬರೀ ತರ್ಕದ ಬೆನ್ನು ಹತ್ತಿ ಹೋದರೆ …

– ಎನ್ ಎಸ್ ಶ೦ಕರ್

ಒಂದು ತಾರ್ಕಿಕ ಕಥೆ

ಸಾವಿರಾರು ವರ್ಷಗಳ ಹಿಂದೆ ಚೀನಾ ದೇಶದಲ್ಲಿ ತರ್ಕಶಾಸ್ತ್ರ ಕಲಿಸುವ ಗುರುಗಳಿರುತ್ತಿದ್ದರಂತೆ. ಅಪಾರ ಶುಲ್ಕ ತೆತ್ತು ಅವರ ಹತ್ತಿರ ಕಲಿತು ತರ್ಕ ಪಂಡಿತರಾದವರು ಮುಂದಕ್ಕೆ ಚಕ್ರವತರ್ಿಯ ಆಸ್ಥಾನದಲ್ಲಿ ವಾದ ವಿವಾದ ಮಂಡಿಸಿ ಹೊಟ್ಟೆ ಹೊರೆಯುತ್ತಿದ್ದರು- ಬಹುಶಃ ನಮ್ಮ ಈಗಿನ ಕೋಟರ್ು, ಲಾಯರ್ಗಳ ಥರದ ವ್ಯವಸ್ಥೆ ಇರಬೇಕು. ಆ ವ್ಯವಸ್ಥೆಗೆ ಸಂಬಂಧಪಟ್ಟಿದ್ದೊಂದು ಕಥೆ ಇಲ್ಲಿದೆ- ನಾನು ತುಂಬಾ ಹಿಂದೆ (ಹೈಸ್ಕೂಲಿನಲ್ಲಿದ್ದಾಗ) ಕೇಳಿದ್ದು. ಹೀಗೇ ಒಮ್ಮೆ ಒಬ್ಬ ಬಡ ವಿದ್ಯಾರ್ಥಿ ಪ್ರಖ್ಯಾತ ಗುರುಗಳೊಬ್ಬರ ಬಳಿ ವರ್ಷಗಟ್ಟಳೆ ಇದ್ದು ವಿದ್ಯೆ ಕಲಿತ. ಅವನಿಗೆ ದಕ್ಷಿಣೆ ಕೊಡುವ ಸಾಮಥ್ರ್ಯ ಇರಲಿಲ್ಲವಾದ್ದರಿಂದ ಗುರುಗಳಿಗೆ ಒಂದು ವಾಗ್ದಾನ ಮಾಡಿದ್ದ. ತಾನು ಕಲಿತು ಪಂಡಿತನಾದ ಮೇಲೆ ತೆಗೆದುಕೊಳ್ಳುವ ಮೊದಲ `ಕೇಸ್’ನಲ್ಲಿ ಗೆದ್ದರೆ ಗುರುಗಳಿಗೆ ಅವರ ದಕ್ಷಿಣೆ ಸಲ್ಲುತ್ತೆ. ಸೋತರೆ ಏನೂ ಕೊಡಬೇಕಿಲ್ಲ ಅಂತ. ಗುರುಗಳೂ ಒಪ್ಪಿಕೊಂಡರು. ಯಾಕೆಂದರೆ ಇವನೇನಾದರೂ ಶುಲ್ಕ ಕೊಡುವುದನ್ನು ತಪ್ಪಿಸುವ ಏಕೈಕ ಉದ್ದೇಶದಿಂದ ಕೇಸ್ ಸೋತರೆ ಮುಂದಕ್ಕೆ ಇವನ ಹತ್ತಿರ ಕಕ್ಷಿಗಳ್ಯಾರೂ ಬರುವುದಿಲ್ಲ. ಹಾಗಾಗಿ ಇವನು ಮೊದಲ ಕೇಸಂತೂ ಗೆದ್ದೇ ಗೆಲ್ಲುತ್ತಾನೆ, ತನ್ನ ದಕ್ಷಿಣೆಗೇನೂ ಮೋಸವಿಲ್ಲ ಎಂಬ ಭರವಸೆ. ಆಯಿತು. ವಿದ್ಯಾಭ್ಯಾಸ ಮುಗಿಯಿತು. ವಿದ್ಯಾರ್ಥಿ ಆಶೀರ್ವಾದ ಪಡೆದು ಹೊರಡುವಾಗ ಗುರುಗಳು ವಾಗ್ದಾನದ ವಿಷಯ ನೆನಪಿಸಿ ಕಳಿಸಿದ್ದೂ ಆಯಿತು. ಹೊರ ಬಂದ ಮೇಲೆ ಶಿಷ್ಯನಿಗೆ ಗುರುದಕ್ಷಿಣೆ ಕೊಡುವ ಮನಸ್ಸು ಉಳಿಯಲಿಲ್ಲ. ಮನುಷ್ಯಸಹಜ ದುರಾಸೆ! ಆದರೆ ಗುರು ಊಹೆ ಮಾಡಿದ್ದ ಹಾಗೆಯೇ- ಇವನು ಕೇಸ್ ತೆಗೆದುಕೊಂಡು ಬೇಕಾಗಿ ಸೋತುಬಿಟ್ಟರೆ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಂಡಂತೆ. ಭವಿಷ್ಯ ಹಾಳು. ಗೆದ್ದರಂತೂ ಶುಲ್ಕ ತೆರಲೇಬೇಕು. ಆದರೆ ಮನಸ್ಸಿಲ್ಲ. ಹಾಗಾಗಿ ಏನು ಮಾಡಿದ, ಸುಮ್ಮನೆ ಕೂತುಬಿಟ್ಟ. ಯಾವ ಕಕ್ಷಿದಾರನನ್ನೂ ಹಿಡಿಯಲಿಲ್ಲ, ಬಂದವರನ್ನೂ ಒಪ್ಪಿಕೊಳ್ಳಲಿಲ್ಲ. ಹೀಗೇ ಒಂದು ವರ್ಷವಾಯಿತು, ಎರಡು ವರ್ಷ ಕಳೆಯಿತು, ಗುರುಗಳಿಗೆ ಸಹನೆ ಮೀರಿತು. ಎಷ್ಟಾದರೂ ತರ್ಕಶಾಸ್ತ್ರದ ಗುರುಗಳಲ್ಲವೇ? ಈ ಶಿಷ್ಯ ತನ್ನ ದಕ್ಷಿಣೆ ನುಂಗಿಕೊಳ್ಳಲೆಂದೇ ಸುಮ್ಮನೆ ಕೂತಿದ್ದಾನೆಂದೂ, ತಾನು ಏನಾದರೂ ಮಾಡದಿದ್ದರೆ ದಕ್ಷಿಣೆ ಕೈ ತಪ್ಪಿಯೇ ಹೋಗುವುದೆಂದೂ ಮನವರಿಕೆಯಾಯಿತು. ಸೀದಾ ರಾಜನ ಬಳಿ ಸಾರಿ ದೂರು ಕೊಟ್ಟರು. ಸರಿ, ನಿಗದಿಪಡಿಸಿದ ದಿನ ಇಬ್ಬರಿಗೂ ಬುಲಾವ್ ಬಂತು. ವಾದಿ ಫಿರ್ಯಾದಿಗಳಿಬ್ಬರೂ ಆಸ್ಥಾನಕ್ಕೆ ಬಂದು ನಿಂತರು. ಗುರು ಶಿಷ್ಯರು- ಇಬ್ಬರೂ ತರ್ಕ ಪಂಡಿತರು. ತಂತಮ್ಮ ವಾದ ತಾವೇ ಮಂಡಿಸಲು ಮುಂದಾದರು. ಮೊದಲು ಗುರುಗಳ ಸರದಿ: ಮಹಾಸ್ವಾಮಿ, ನಡೆದಿದ್ದಿಷ್ಟು. ನೀವೀಗ ಅವನ ಪರವಾದರೂ ತೀರ್ಪು ಕೊಡಿ, ನನ್ನ ಪರವಾಗಿಯಾದರೂ ಕೊಡಿ. ಕೊನೆಗೆ ಗೆಲುವು ನನ್ನದೇ. ನೀವು ನನ್ನ ಪರ ತೀರ್ಪು ಕೊಟ್ಟರೆ- ಆಸ್ಥಾನದ ತೀಮರ್ಾನದಂತೆ ಅವನು ಸಹಜವಾಗಿಯೇ ನನ್ನ ದಕ್ಷಿಣೆ ನನಗೆ ಕೊಡಬೇಕು. ಇಲ್ಲ, ತೀರ್ಪು ಅವನ ಪರವಾದರೆ- ಅವನು ತನ್ನ ಮೊದಲನೇ ಕೇಸು ಗೆದ್ದಂತಾಗುತ್ತೆ, ಆಗ ನಮ್ಮ ಕರಾರಿನಂತೆ ಅವನು ದಕ್ಷಿಣೆ ಕೊಡಲೇಬೇಕಾಗುತ್ತೆ. ನನಗೇನೂ ಚಿಂತೆಯಿಲ್ಲ, ನೀವು ಹೇಗಾದರೂ ತೀರ್ಮಾನಿಸಿ…! ಮತ್ತೆ ಶಿಷ್ಯನ ಸರದಿ. ಅವನ ವಾದವೂ ಇಷ್ಟೇ ಸರಳ: ಸ್ವಾಮಿ, ನನ್ನ ವಾದವೂ ಇಷ್ಟೇ. ನೀವು ನನ್ನ ಪರವಾಗಿ ತೀರ್ಪು ಕೊಟ್ಟರೂ ಸರಿ, ಗುರುಗಳ ಪರ ತೀರ್ಪು ಕೊಟ್ಟರೂ ಸರಿ. ನಾನು ದುಡ್ಡು ಕೊಡುವ ಪ್ರಮೇಯವೇ ಬರುವುದಿಲ್ಲ. ಹೇಗನ್ನುತ್ತೀರೋ? ನನ್ನ ಪರ ತೀರ್ಮಾನ ಕೊಟ್ಟರೆ, ಆ ತೀರ್ಪಿನ ಅರ್ಥವೇ ನಾನು ದಕ್ಷಿಣೆ ಕೊಡಬೇಕಿಲ್ಲ ಅಂತ. ಅಥವಾ ತಾವು ಗುರುಗಳ ಪರ ತೀರ್ಮಾನಿಸಿದರೆ, ನಾನು ನನ್ನ ಮೊದಲ ಕೇಸು ಸೋತಂತಾಗುತ್ತೆ, ಹಾಗಾದಾಗ ನಮ್ಮ ಒಪ್ಪಂದವೇ ಹೇಳುತ್ತೆ- ನಾನು ದುಡ್ಡು ಕೊಡಬೇಕಿಲ್ಲ ಅಂತ…! ಕೊನೆಗೆ ಕಗ್ಗಂಟು. ನಾನು ಮೊದಲು ಈ ವೃತ್ತಾಂತ ಕೇಳಿದಾಗ `ಆಹಾ! ಎಂಥ ಜಾಣ ಕಥೆ’ ಎಂದು ಉದ್ಗರಿಸಿದ್ದೆ. ಹೊಸದಾಗಿ ಸಿಕ್ಕ ಗೆಳೆಯರಿಗೆಲ್ಲ ಇದೇ ಕಥೆ ಹೇಳಿ ಹೇಳಿ ನಾನೂ ಬುದ್ಧಿವಂತ ಅನ್ನಿಸಿಕೊಳ್ಳಲು ಪ್ರಯತ್ನಿಸಿದ್ದೆ. ಆದರೆ ಮುಂದಕ್ಕೆ ಆಗೀಗ ಯಾವಾಗಲಾದರೂ ಈ ಕಥೆ ನೆನಪಾದಾಗ, ಹೌದು ಇದರ ಇತ್ಯರ್ಥ ಹೇಗೆ? ಬಗೆಹರಿಸಲಾಗದ ಕಗ್ಗಂಟಲ್ಲವೇ? ಚಕ್ರವತರ್ಿಗೆ ನಿಜಕ್ಕೂ ತಲೆ ಕೆಟ್ಟುಹೋಗಿರಬೇಕು ಅನಿಸುತ್ತಿತ್ತು. ಇನ್ನೂ ಮುಂದಕ್ಕೆ, ಇದರಲ್ಲೇನೋ ಐಬಿದೆಯಲ್ಲ ಎಂಬ ಅಸ್ಪಷ್ಟವಾದ್ದೊಂದು ಕಸಿವಿಸಿ- ಉಂಡಿದ್ದು ಅರಗದಿದ್ದರೆ ಉಂಟಾಗುವಂಥ ಇರಿಸು ಮುರಿಸು.   ಇದು ಬರೀ `ಜಾಣ’ ಕಥೆಂೆು? ಜಾಣ ಅನ್ನುವ ಪದ ಸಾಮಾನ್ಯವಾಗಿ ಬಳಕೆಂಾಗುವುದು ಬುದ್ಧಿವಂತ ಅನ್ನುವ ಅರ್ಥದಲ್ಲಿ. ಬುದ್ಧಿವಂತಿಕೆ ಅಂತ ಮಾತ್ರ ಕರೆದುಬಿಟ್ಟರೆ ಒಳಗೆ ಯಾವುದೋ ಹುನ್ನಾರದ ವಾಸನೆಯಿದೆಯಲ್ಲ, ಅದನ್ನು ಹೇಳಿದಂತಾಗುವುದಿಲ್ಲವಲ್ಲ!? ಇಂಗ್ಲಿಷ್ನಲ್ಲಿ ಟಚಿಡಿಣ ಅಂತಾರಲ್ಲ, ಆ ಜಾತಿಯದಿದು. ಆ ಶಬ್ದದಲ್ಲಿ ಚಾಲಾಕಿ, ಅತಿ ಬುದ್ಧಿವಂತ ಅನ್ನುವ ದನಿಗಳೂ ಇವೆ. ಬಹುಶಃ ಹುಬ್ಬಳ್ಳಿ ಕಡೆ `ಶಾಣ್ಯಾ’ (ಅಥವಾ ಈ ಕಡೆಯ `ಛತ್ರಿ’?) ಅನ್ನುತ್ತಾರಲ್ಲ- ಅದು ಈ ಪದಕ್ಕೆ ಹೆಚ್ಚು ಸನಿಹವಾದದ್ದು. ನಿಜ, ಶಿಷ್ಯನದು ಬರೀ ಬುದ್ಧಿವಂತ ವಾದವಲ್ಲ, ಅತಿ ಬುದ್ಧಿವಂತಿಕೆಯದು. ಮೂಲತಃ ದಕ್ಷಿಣೆ ಕೊಡದೆ ತಪ್ಪಿಸಿಕೊಳ್ಳುವ- ಗುರುವಿಗೆ ಪಂಗನಾಮ ಹಾಕುವ ಸನ್ನಾಹದ್ದು. ಓಹೋ! ನನ್ನ ಕಸಿವಿಸಿಯ ಮೂಲ ಇಲ್ಲಿದೆ! ಬರೀ ತರ್ಕದ ಬೆನ್ನು ಹತ್ತಿ ಹೋದರೆ ಉಂಟಾಗುವುದು ಕಗ್ಗಂಟೇ! ಸಂಬಂಧಗಳು ಎಲ್ಲಿಯಾದರೂ ಕೇವಲ ತರ್ಕದ ಮೇಲೆ ನಿಲ್ಲಲು ಸಾಧ್ಯವೇ? ಎಲ್ಲ ಥರದ ಸಂಬಂಧಗಳು,- ದೇಶ ದೇಶದ ಸಂಬಂಧಗಳು, ಜನ ಸಮುದಾಯಗಳ ನಡುವೆ, ವ್ಯಕ್ತಿ ವ್ಯಕ್ತಿಗಳ ನಡುವೆ, ಕೊನೆಗೆ ಗಂಡ ಹೆಂಡಿರ ನಡುವಣ ನಂಟು ಕೂಡ- ತನ್ನ ಬಿಕ್ಕಟ್ಟುಗಳ ಸಮ್ಮುಖದಲ್ಲಿ ತರ್ಕವನ್ನು ಆಶ್ರಯಿಸಿದ ಗಳಿಗೆಯೇ, ಹಳಸತೊಡಗುತ್ತದೆ. ಸತ್ಯ ಬೇರೆಲ್ಲೋ ಇದೆಯೆಂಬ ಅರಿವಿದ್ದಾಗಲೇ ನಾವು ನಮ್ಮನ್ನು ಮತ್ತು ಎದುರಿನವರನ್ನು ಬೇರೊಂದು ದಿಕ್ಕಿಗೆ ಒಯ್ಯಲು ತರ್ಕದ ಮೊರೆ ಹೋಗುತ್ತೇವೆ… ಬೀಚಿ ತಮ್ಮ ಆತ್ಮಕಥೆ ಭಯಾಗ್ರಫಿಯಲ್ಲಿ ಹೆಂಗಸರಿಗೂ ತರ್ಕಕ್ಕೂ ಬಹಳ ದೂರ ಅಂತ ದೂರಿನ ಧಾಟಿಯಲ್ಲಿ ಬರೆಯುತ್ತಾರೆ. ಹಾಗಿರುವುದಕ್ಕೇ- ಅಂದರೆ ಹೆಂಗಸರು ತರ್ಕಕ್ಕೆ ಮೂರು ಕಾಸಿನ ಬೆಲೆ ಕೊಡದಿರುವುದರಿಂದಲೇ- ಬಹುಶಃ ನಮ್ಮ ಬಹುತೇಕ ಸಂಸಾರಗಳು ಉಳಿದುಕೊಂಡಿರುವುದು ಎಂಬ ತಲೆಹರಟೆ ಅನಿಸಿಕೆ ನನ್ನದು…! *** ಪ್ರೆಸ್ ಕ್ಲಬ್ ಪ್ರಕಾಶನ ಹೊರತಂದಿರುವ ಈ ಕೃತಿಯ ಆಯ್ದ ಭಾಗಗಳು ಇನ್ನು ಮುಂದೆ ವಾರಕ್ಕೆ ಎರಡು ಬಾರಿ ‘ಅವಧಿ’ಯಲ್ಲಿ ಪ್ರಕಟಗೊಳ್ಳಲಿದೆ. ಈ ಕೃತಿ ಐ ಬಿ ಎಚ್ ಪ್ರಕಾಶನದ ಆನ್ಲೈನ್ ಮಳಿಗೆಯಲ್ಲೂ ಲಭ್ಯ]]>

‍ಲೇಖಕರು G

March 2, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Sharadhi

    ಶಂಕರ್, ಮೇಲ್ನೋಟಕ್ಕೆ ಅದ್ಭುತ ಎನ್ನಿಸುವ ಕತೆ!. ಸ್ವಲ್ಪ ಬ್ರೈನ್ ಉಪಯೋಗಿಸಿ. ಆ ಶಿಷ್ಯನ ಆಯ್ಕೆಗಳು ಎರಡು, ೧) ಮೊದಲನೇ ಕೇಸ್ ಗೆದ್ದು, ಅದರ ಹಣ ಗುರುಗಳಿಗೆ ಕೊಟ್ಟರೆ ಅಲ್ಲಿಗೆ ಗುರು ದಕ್ಷಿಣೆಯ ಕತೆ ಮುಗಿಯಿತು, ಆತನಿಗೂ ಒಂದು ಉದ್ಯೋಗ, ಕೆರೀರ್ ಪ್ರಾಪ್ತವಾಯಿತು, ಇದು ಸುಖಾಂತ್ಯ ಅಥವಾ ಆರಂಭ. ೨) ವರ್ಷಗಟ್ಟಲೆ ಕೆಸುಗಳನ್ನೇ ತೆಗೆದುಕೊಳ್ಳದೆ , ಸಂಪಾದನೆಯೂ ಇಲ್ಲದೆ ಸುಮ್ಮನೆ ಕೂತುಕೊಲ್ಲುವುದು. ಮುಂದುವರೆಸುವುದೇ ಬೇಡ, ಇಲ್ಲಿ ಅದೇ ತರ್ಕ ಉಪಯೋಗಿಸಿ. ಭುಜದ ನಡುವೆ ತಲೆ ಇರುವ ವ್ಯಕ್ತಿ ಯಾವ ಆಯ್ಕೆ ಮಾಡಿಕೊಳ್ಳುತ್ತಾನೆ. ನೀವು ಓದಿದ ಪುರಾತನ ಕತೆ, ಮನುಷ್ಯನ ಮಸ್ತಿಸ್ಕ ಬೆಳೆಯದ, ಸುಲಭವಾಗಿ ಕಂಡಿದ್ದನ್ನು, ಕೇಳಿದ್ದನ್ನು ಎಲ್ಲವನ್ನೂ ನಂಬುವ ಭಾರತ ಹಾಗೋ ಚೀನಾದಂತಹ ಜಾನಪದ-ಆಧಾರಿತ ಸಮಾಜದಲ್ಲಿ ‘ವಾಹ್, ಅದ್ಭುತ’ ಎನ್ನಿಸಿಕೊಳ್ಳಬಹುದು.

    ಪ್ರತಿಕ್ರಿಯೆ
  2. ಉದಯಕುಮಾರ್ ಹಬ್ಬು

    ಕೆಲವು ಸಂಬಂಧಗಳು ತರ್ಕಾತೀತವಾಗಿರುತ್ತವೆ. ಪ್ರಯಾಣದಲ್ಲಿ ಸಿಗುವ ಅಪರಿಚಿತ ಮನುಷ್ಯರು ತುಂಬಾ ಆತ್ಮೀಯರಾಗುವುದು ಯಾರೋ ಎಲ್ಲಿಯೋ ಬೆಳೆದ ನಾವು ಎಲ್ಲಿಯೋ ಯಾರೋ ಹೆಣ್ಣನ್ನು ಮದುವೆಯಾಗುವುದು ಯಾರೋ ಅಪರಿಚಿತರು ನಮಗೆ ಸಹಾಯಮಾವುವುದು ಇತ್ಯಾದಿ. ಆದರೆ ಈ ಚೈನಾದ ಕತೆ ಅತಿ ಬುದ್ಧಿವಂತಿಕೆಯ ಕಥೆಯ ಮಾದರಿಯಾಗಿ ಕಂಡುಬರುವದು. ಉದಯಕುಮಾರ ಹಬ್ಬು ಕಿನ್ನಿಗೋಳಿ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: