ಎನ್ ಎಸ್ ಶ೦ಕರ್ ಕಾಲ೦ : ರಕ್ತ ಮತ್ತು ಸ್ವಾತಂತ್ರ್ಯ

– ಎನ್ ಎಸ್ ಶ೦ಕರ್

ರಕ್ತ ಮತ್ತು ಸ್ವಾತಂತ್ರ್ಯ

…ಮತ್ತು ಸಾದತ್ ಹಸನ್ ಮಂಟೊ

ದೇಶ ವಿಭಜನೆಯಾದ ಕೆಲ ವರ್ಷಗಳ ನಂತರ ಒಂದು ಆಲೋಚನೆ ಬಂತು: ಸೆರೆ ಸಿಕ್ಕ ಸೈನಿಕರನ್ನು ಭಾರತ ಪಾಕಿಸ್ತಾನಗಳು ವಿನಿಮಯ ಮಾಡಿಕೊಂಡ ಹಾಗೆಯೇ, ಎರಡೂ ದೇಶದ ಹುಚ್ಚಾಸ್ಪತ್ರೆಗಳಲ್ಲಿ ಉಳಿದುಕೊಂಡ ರೋಗಿಗಳನ್ನು ಆಯಾ ದೇಶಕ್ಕೆ ಒಪ್ಪಿಸಬಾರದೇಕೆ? ಮುಸ್ಲಿಂ ಹುಚ್ಚರನ್ನು ಪಾಕಿಸ್ತಾನಕ್ಕೂ, ಹಿಂದೂ- ಸಿಖ್ ಹುಚ್ಚರನ್ನು ಭಾರತಕ್ಕೂ ಯಾಕೆ ರವಾನಿಸಬಾರದು? ಯೋಚನೆ ಬಂದಿದ್ದೇ ತಡ, ಎರಡೂ ದೇಶಗಳ ಉನ್ನತ ಅಧಿಕಾರಿಗಳ ನಡುವೆ ಗಂಭೀರ ಸಮಾಲೋಚನೆಗಳು ನಡೆದು, ಒಂದು ಒಪ್ಪಂದಕ್ಕೂ ಸಹಿ ಹಾಕಲಾಯಿತು. ಈ ಸುದ್ದಿ ಲಾಹೋರಿನ ಹುಚ್ಚಾಸ್ಪತ್ರೆ ತಲುಪಿದಾಗ ಅಲ್ಲಿ ದೊಡ್ಡ ಗೊಂದಲವೇ ಶುರುವಾಯಿತು. ಅಲ್ಲಿದ್ದ ಹುಚ್ಚರು, ಅರೆ ಹುಚ್ಚರು, ಶಿಕ್ಷೆ ತಪ್ಪಿಸಿಕೊಳ್ಳಲು ಲಂಚ ಕೊಟ್ಟು ಹುಚ್ಚರೆಂಬ ಹೆಸರಲ್ಲಿ ಸೇರಿಕೊಂಡ ಕೊಲೆಗಡುಕರು, ಕಡೆಗೆ ಜೈಲು ಸಿಬ್ಬಂದಿಗೂ ಈ ಆಜ್ಞೆಯ ತಲೆಬುಡ ತಿಳಿಯಲಿಲ್ಲ. ಯಾಕೆಂದರೆ, ಪಾಕಿಸ್ತಾನ ಎಲ್ಲಿದೆ ಎಂಬ ಕಲ್ಪನೆ ಅವರಾರಿಗೂ ಇರಲಿಲ್ಲ. ತಾವಿರುವ ಜಾಗ ಪಾಕಿಸ್ತಾನವೋ, ಭಾರತವೋ ಗೊಂದಲ. ಇದು ಭಾರತವಾದರೆ, ಹಾಳಾದ್ದು ಆ ಪಾಕಿಸ್ತಾನ ಅನ್ನುವುದು ಎಲ್ಲಿದೆ? ಇದೇ ಪಾಕಿಸ್ತಾನ ಅನ್ನುವುದಾದರೆ ಮತ್ತೆ ನಿನ್ನೆ ಮೊನ್ನೆಯವರೆಗೂ ಭಾರತ ಅನ್ನಿಸಿಕೊಳ್ಳುತ್ತಿತ್ತಲ್ಲ?! ಆ ಹುಚ್ಚಾಸ್ಪತ್ರೆಯಲ್ಲಿ ಬಿಷನ್ ಸಿಂಗ್ ಎಂದೊಬ್ಬ ಹುಚ್ಚು ಮುದುಕ. ಗಂಟೆ, ದಿನ, ವಾರ ಯಾವುದೂ ಅವನ ಅರಿವಿನಲ್ಲಿರದಿದ್ದರೂ, ತನ್ನೂರು ತೋಬಾ ತೇಕ್ ಸಿಂಗ್ ಅನ್ನುವುದನ್ನು ಆತ ಮರೆತಿರಲಿಲ್ಲ. ಅವನು ಆ ಊರಿನ ಜಮೀನ್ದಾರನಾಗಿದ್ದು ಇದ್ದಕ್ಕಿದ್ದಂತೆ ಹುಚ್ಚು ಹಿಡಿದುಬಿಟ್ಟಿತ್ತು ಅನ್ನುತ್ತಿದ್ದರು. ಕೋಮುಗಲಭೆಗಳು ಶುರುವಾಗುವವರೆಗೂ ವಾರಕ್ಕೊಮ್ಮೆ ಅವನ ಬಂಧುಗಳು ಊರಿನಿಂದ ಬಂದು ಅವನನ್ನು ನೋಡಿ ಹೋಗುವುದು ಸಾಧ್ಯವಾಗುತ್ತಿತ್ತು. ಅವರು ಬರುವ ದಿನ ಅದು ಹೇಗೆ- ಆರನೇ ಇಂದ್ರಿಯದ ಮೂಲಕವೆಂಬಂತೆ ಗೊತ್ತಾಗುತ್ತಿತ್ತೋ, ಆವತ್ತು ಮಾತ್ರ ಬಿಷನ್ ಸಿಂಗ್ ಸ್ನಾನ ಮಾಡಿ, ತಲೆ ಬಾಚಿ ತಯಾರಾಗಿಬಿಡುತ್ತಿದ್ದ. ಈಗ ಅವರೂ ಬರುವುದು ನಿಂತುಹೋಗಿ ಹೊರಗಿನ ಸಂಪರ್ಕ ಸಂಪೂರ್ಣ ಕಡಿದುಹೋಗಿತ್ತು. ಅಷ್ಟಾದರೂ ಅವನು ಯಾವಾಗಲೂ ತನ್ನೂರಿನ ಬಗ್ಗೆ ವಿಚಾರಿಸುತ್ತಿದ್ದುದರಿಂದ ಅವನಿಗೂ ತೋಬಾ ತೇಕ್ ಸಿಂಗ್ ಎಂಬ ಹೆಸರೇ ಬಿದ್ದಿತ್ತು. ಅಂಥ ತೋಬಾ ತೇಕ್ ಸಿಂಗ್ ತಾನು ಆ ಆಸ್ಪತ್ರೆಯಲ್ಲಿದ್ದ ಹದಿನೈದು ವರ್ಷಗಳಲ್ಲಿ ಒಂದು ಗಳಿಗೆಯೂ ಕಣ್ಣು ರೆಪ್ಪೆ ಮುಚ್ಚಿ ನಿದ್ದೆ ಮಾಡಿಲ್ಲ ಅನ್ನುವ ಪ್ರತೀತಿಯಿತ್ತು. ಮತ್ತು ಸದಾ ನಿಂತೇ ಇರುತ್ತಿದ್ದ ಅವನ ಕಾಲುಗಳು ಬ್ರಹ್ಮಾಂಡವಾಗಿ ಬಾತುಕೊಂಡಿದ್ದರೂ ಆ ಕಡೆ ಅವನ ಲಕ್ಷ್ಯವಿರಲಿಲ್ಲ. ಮತ್ತು ಆಗಾಗ ಅಸಂಬದ್ಧವಾಗಿ ‘ಊಪರ್ ದಿ ಗೂಡ್ ದಿ ಅನೆಕ್ಸ್ ದಿ ಬೇ ಧಾಯನಾ ದಿ ಮೂಂಗ್ ದಿ ದಾಲ್ ಆಫ್ ದಿ ಲಾಲ್ತೇ…’ ಎಂದೇನೇನೋ ಗೊಣಗುತ್ತಿದ್ದ. ಅವನು ಈಗ ಸಿಕ್ಕಸಿಕ್ಕವರನ್ನೆಲ್ಲ ತನ್ನೂರು ತೋಬಾ ತೇಕ್ ಸಿಂಗ್ ಭಾರತದಲ್ಲಿದೆಯೋ ಪಾಕಿಸ್ತಾನದಲ್ಲೋ ಎಂದು ವಿಚಾರಿಸುತ್ತಿದ್ದರೂ ಯಾರಿಂದಲೂ ಸಮರ್ಪಕ ಉತ್ತರ ಸಿಗದೆ ಚಡಪಡಿಕೆ ಹೆಚ್ಚಾಗಿತ್ತು. ಒಮ್ಮೆ ಇನ್ನೊಬ್ಬ ಹುಚ್ಚನನ್ನು- ಆತ ತನ್ನನ್ನು ತಾನು ದೇವರು ಅಂದುಕೊಂಡಿದ್ದ- ಇದೇ ಪ್ರಶ್ನೆ ಕೇಳಿದಾಗ ಆ ಊರು ಭಾರತದಲ್ಲೂ ಇಲ್ಲ, ಪಾಕಿಸ್ತಾನದಲ್ಲೂ ಇಲ್ಲ; ಯಾಕೆಂದರೆ ತಾನಿನ್ನೂ ತಕ್ಕ ಆಜ್ಞೆ ಹೊರಡಿಸಿಲ್ಲ ಎಂಬ ಉತ್ತರ ಬಂತು! ಬಿಷನ್ ಹಾಗೂ ಬಿಡದೆ ತುತರ್ಾಗಿ ಆದೇಶ ಹೊರಡಿಸುವಂತೆ ಪೀಡಿಸಿದಾಗ ಆ ದೇವರು ಇನ್ನೂ ಬೇರೆ ಬೇರೆ ಮುಖ್ಯ ವಿಚಾರಗಳಲ್ಲಿ ಮಗ್ನವಾಗಿದ್ದರಿಂದ ಇವನ ಕಡೆ ಗಮನ ಕೊಡಲಿಲ್ಲ. ಕಡೆಗೆ ತೋಬಾ ತೇಕ್ ಸಿಂಗ್ ಅದೇ ‘ಊಪರ್ ದಿ ಗೂಡ್ ಗೂಡ್…’ ಗೊಣಗಿಕೊಂಡು ಹೋದ,- ‘ನೀನು ಮುಸ್ಲಿಂ ದೇವರಾದ್ದರಿಂದ ನನ್ನ ಪ್ರಾರ್ಥನೆಗೆ ಓಗೊಡಲಿಲ್ಲ. ಸಿಖ್ ದೇವರಾಗಿದ್ದರೆ ಉತ್ತರಿಸುತ್ತ್ತಿದ್ದೆ’ ಎಂಬರ್ಥದಲ್ಲಿ… ಕೊನೆಗೊಂದು ಚಳಿಗಾಲದ ಸಂಜೆ ಹುಚ್ಚರನ್ನು ಆಯಾ ದೇಶಕ್ಕೆ ವಿಧ್ಯುಕ್ತವಾಗಿ ಒಪ್ಪಿಸಲೆಂದು ಇವರನ್ನೆಲ್ಲ ಬಸ್ಸಿನಲ್ಲಿ ಹತ್ತಿಸಿಕೊಂಡು ಸಶಸ್ತ್ರ ಕಾವಲುಗಾರರು ಮತ್ತು ಅಧಿಕಾರಿಗಳು ವಾಘಾ ಗಡಿಗೆ ಬರುತ್ತಾರೆ. ಅಲ್ಲಿ ವಿನಿಮಯದ ವಿಧಿ ವಿಧಾನಗಳು ಮೊದಲಾಗುತ್ತಿದ್ದಂತೆಯೇ ದೊಡ್ಡ ಕೋಲಾಹಲವೇ ಎದ್ದುಬಿಡುತ್ತದೆ. ಮೊದಲಿಗೆ ಅವರಾರಿಗೂ ತಾವಿರುವ ಜಾಗದಿಂದ ಕದಲುವ ಮನಸ್ಸಿಲ್ಲ. ಇವರು ಯಾಕೆ, ಎಲ್ಲಿಗೆ ಕರೆತಂದಿದ್ದಾರೆ ಗೊತ್ತಿಲ್ಲ. ಅಧಿಕಾರಿಗಳು ಬಲವಂತ ಮಾಡಿದಾಗ ಒಬ್ಬೊಬ್ಬರು ಒಂದೊಂದು ದಿಕ್ಕಿನಲ್ಲಿ ಚೆಲ್ಲಾಪಿಲ್ಲಿ ಓಡತೊಡಗಿದರು. ಕೆಲವರಂತೂ ನಟ್ಟ ನಗ್ನರಾಗಿದ್ದರು. ಕೆಲವರು ಬೈಯುತ್ತಿದ್ದರೆ, ಇನ್ನು ಹಲವರು ಹಾಡುತ್ತಿದ್ದರು. ಮತ್ತೂ ಹಲವರು ಬಿಕ್ಕಳಿಸಿ ಅಳುತ್ತಿದ್ದರು. ಅಲ್ಲಲ್ಲೇ ಹೊಡೆದಾಟಗಳೂ ಶುರುವಾದವು. ಹೆಂಗಸರ ಗಲಾಟೆ ಇನ್ನೂ ಜೋರಾಗಿತ್ತು. ಕೊರೆಯುವ ಚಳಿ. ಬಿಷನ್ ಸಿಂಗ್ನ ಸರದಿ ಬಂದಾಗ ಆತ ಹೆಸರುಗಳನ್ನು ಬರೆದುಕೊಳ್ಳಲು ಕೂತಿದ್ದ ಗುಮಾಸ್ತನನ್ನು ಕೇಳಿದ: ತೋಬಾ ತೇಕ್ ಸಿಂಗ್ ಭಾರತದಲ್ಲಿದೆಯೋ, ಪಾಕಿಸ್ತಾನದಲ್ಲೋ? ಅದಕ್ಕೆ ಆತ ಅಸಭ್ಯವಾಗಿ ನಕ್ಕು ಪಾಕಿಸ್ತಾನದಲ್ಲಿ ಅಂದ. ಬಿಷನ್ ಸಿಂಗ್ ಉರುಫ್ ತೋಬಾ ತೇಕ್ ಸಿಂಗ್ ಇದ್ದಕ್ಕಿದ್ದಂತೆ ಅಲ್ಲಿಂದ ಓಡತೊಡಗಿದ. ಅಧಿಕಾರಿಗಳು ಬೆನ್ನಟ್ಟಿ ಹಿಡಿದು ಅವನನ್ನು ಭಾರತದ ಗಡಿಯ ಕಡೆ ದಬ್ಬಲೆತ್ನಿಸಿದರೂ ಆ ಹುಚ್ಚು ಮುದುಕ ‘ಇದೇ ತೋಬಾ ತೇಕ್ ಸಿಂಗ್’ ಅನ್ನುತ್ತ ಒಂದು ಕಡೆ ಚಂಡಿ ಹಿಡಿದು ವಿಗ್ರಹದಂತೆ ನಿಂತುಬಿಟ್ಟ. ಆತನೊಬ್ಬ ನಿರುಪದ್ರವಿ ಮುದುಕನಾದ್ದರಿಂದ ಅವನ ಪಾಡಿಗೆ ಅವನನ್ನು ಬಿಟ್ಟು ಉಳಿದ ಶಿಷ್ಟಾಚಾರಗಳನ್ನು ಮುಗಿಸಿದರು. ಕಡೆಗೆ ಬೆಳಕು ಹರಿಯುವ ಹೊತ್ತಿಗೆ ಆತ ಒಮ್ಮಿಂದೊಮ್ಮೆಲೇ ಚೀರಿಕೊಂಡಾಗ ಎರಡೂ ಕಡೆಯ ಅಧಿಕಾರಿಗಳು ಓಡಿಬಂದರು. ಆದರೆ ಅವರು ಹತ್ತಿರ ಬರುವುದರೊಳಗೇ, ಹದಿನೈದು ವರ್ಷಗಳಿಂದ ರೆಪ್ಪೆ ಮಿಟುಕಿಸದೆ ನಿಂತೇ ಕಳೆದಿದ್ದ ತೋಬಾ ತೇಕ್ ಸಿಂಗ್ ನಿಂತಲ್ಲೇ ಕುಸಿದು ನೆಲಕ್ಕೆ ಬಿದ್ದಿದ್ದ. ಈ ಕಡೆ ಮುಳ್ಳಿನ ತಂತಿ ಬೇಲಿಯ ಹಿಂದೆ ಭಾರತ; ಇನ್ನೊಂದು ಕಡೆ ಇನ್ನಷ್ಟು ಮುಳ್ಳು ಬೇಲಿಯ ಹಿಂದೆ ಪಾಕಿಸ್ತಾನ. ನಡುವೆ ಯಾರಿಗೂ ಸೇರದ, ಯಾವ ಹೆಸರೂ ಇರದ ತಟಸ್ಥ ಭೂಮಿಯ (ಟಿಠ ಟಚಿಟಿ’ ಟಚಿಟಿಜ) ಪುಟ್ಟ ತುಣುಕಿನ ಮೇಲೆ ಜೀವ ಕಳೆದುಕೊಂಡು ಬಿದ್ದ ತೋಬಾ ತೇಕ್ ಸಿಂಗ್… ಇದು ಸಾದತ್ ಹಸನ್ ಮಂಟೊ ಎಂಬ ಮೇರು ಲೇಖಕನ ಶ್ರೇಷ್ಠ ಕಥೆಯೊಂದರ ಸಾರ. ತನ್ನದಾದ ಭಾರತದಲ್ಲಿ ಮುಸ್ಲಿಮನಾಗಿ ಹುಟ್ಟಿ ತನ್ನದಲ್ಲದ ಪಾಕಿಸ್ತಾನದಲ್ಲಿ ಸತ್ತ ಮಂಟೊ, ಉಪಖಂಡದ ಎದೆ ಸೀಳಿದ ವಿಭಜನೆಯ ಶಾಪಕ್ಕೆ ತುತ್ತಾಗಿ ಮಹಾ ಕೋಮುವಾದಿಯಾಗಬಹುದಿತ್ತು; ಅಥವಾ ಹುಚ್ಚನಾಗಬಹುದಿತ್ತು; ಅಥವಾ ಭಂಡನಾಗಿದ್ದರೆ ಪಾಕಿಸ್ತಾನದ ಭಾರತವಿರೋಧಿ ರಾಜಕಾರಣಿಯಾಗಿ ಬೆಂಕಿ ಕಾರಬಹುದಿತ್ತು. ಆದರೆ ಮಂಟೊ ಅದೇನೂ ಆಗದೆ ತನ್ನ ಕಥಾನಾಯಕ ತೋಬಾ ತೇಕ್ ಸಿಂಗ್ನಂತೆ- ಈ ಕಡೆ ಭಾರತವಲ್ಲದ ಆ ಕಡೆ ಪಾಕಿಸ್ತಾನವಲ್ಲದ, ಹಿಂದೂ ಅಲ್ಲದ ಮುಸ್ಲಿಮನಲ್ಲದ, ಯಾರಿಗೂ ಸೇರದ, ಯಾವ ಹೆಸರೂ ಇಲ್ಲದ ತನ್ನದೇ ತಟಸ್ಥ ನೆಲದ ತುಣುಕು ಅರಸಿ ಬರೆಯತೊಡಗಿದ…. ಸ್ವಾತಂತ್ರ್ಯೋತ್ಸವದ ಈ ತಿಂಗಳಲ್ಲಿ, ನಾನು ಹುಟ್ಟುವ ಮೊದಲೇ ನಮ್ಮ ದೇಶ ಪಡೆದ ಸ್ವಾತಂತ್ರ್ಯ ಯಾವ ಯಾವ ಅರ್ಥಗಳಲ್ಲಿ ನನ್ನನ್ನು ಮುಟ್ಟಿದೆ ಎಂದು ನೋಡಿಕೊಳ್ಳುವಾಗ, ಈ ಸ್ವಾತಂತ್ರ್ಯಕ್ಕೆ ಮೆತ್ತಿಕೊಂಡ ರಕ್ತದ ವಾಸನೆ ಬೆನ್ನಟ್ಟಿ ಬರುತ್ತದೆ. ನಮ್ಮೆರಡು ದೇಶಗಳಲ್ಲಿ ಇನ್ನೂ ಆರದ ಗಾಯಗಳ ಹಸಿ ಚುಂಗು ಮೂಗಿಗೆ ಬಡಿಯುತ್ತ್ತದೆ. ಜೊತೆಗೆ, ಈ ಅರ್ಥವಿಲ್ಲದ ಹುಚ್ಚಿಗೆ ಕಂಗೆಟ್ಟು ತಡಕಾಡುವಾಗ, ವಿಭಜನೆಯ ದುರಂತಕ್ಕೆ ಎದೆಯೊಡ್ಡಿ ಮಾತಾಡಿದ ಸಾದತ್ ಹಸನ್ ಮಂಟೊ ನೆನಪಾಗುತ್ತಾನೆ… ಮಂಟೊ ಜೀವದ ಬೇರುಗಳು ಅಲ್ಲಾಡುವಂಥ ಸಂದಿಗ್ಧ ಎದುರಾದದ್ದು, ಭಾರತಕ್ಕೆ ಸ್ವಾತಂತ್ರ್ಯ ಬಂದ ಮುಂಚಿನ ಮತ್ತು ನಂತರದ ಕೋಮು ಹಿಂಸಾಕಾಂಡದ ಸಂದರ್ಭದಲ್ಲಿ. ವಿಭಜನೆಯಿಂದಾಗಿ ಉಪಖಂಡದಲ್ಲಿ ಹರಿದ ಧಾಮರ್ಿಕ ಮತ್ತು ಪ್ರತ್ಯೇಕತಾವಾದದ ರಕ್ತಕ್ಕೆ ಸಾಟಿಯಾದ ಉದಾಹರಣೆಗಳು ನಾಗರಿಕ ಮನುಷ್ಯ ಚರಿತ್ರೆಯಲ್ಲೇ ಅಪರೂಪ. ಆಗೊಮ್ಮೆ ಈಗೊಮ್ಮೆ ಎದುರಾಬದುರಾಗಿ ಕಚ್ಚಾಡಿದ್ದು ಬಿಟ್ಟರೆ ಶತಮಾನಗಳ ಕಾಲ ಸಾಮಾನ್ಯ ಸೈರಣೆಯಲ್ಲೇ ಬದುಕಿದ್ದ ಜನಾಂಗಗಳಿಗೆ ಆಗ ಒಮ್ಮಿಂದೊಮ್ಮೆಲೇ ಹುಚ್ಚು ಹಿಡಿದಿತ್ತು. ಸರ್ವನಾಶದ ಆ ಮೃಗೀಯ ರೊಚ್ಚು, ದೇಶದ ಆತ್ಮಕ್ಕೆ ಮೂಲಭೂತವಾದ ಯಾವುದೋ ಜೀವತಂತುವನ್ನೇ ಕಡಿದು ಹಾಕಿದಂತಿತ್ತು. ಆ ದಿನಗಳಲ್ಲಿ ಕೋಮುದ್ವೇಷಕ್ಕೆ ಬಲಿಯಾದವರ ಸಂಖ್ಯೆ ಇಂದಿಗೂ ನಿಖರವಾಗಿ ಗೊತ್ತಿಲ್ಲ. ಲಾಡರ್್ ಮೌಂಟ್ ಬ್ಯಾಟನ್ ಎರಡೂವರೆ ಲಕ್ಷದ ಸಂಖ್ಯೆ ದಾಟಲು ಹೆದರಿದರೆ, ಕೆಲವರು ಐದು ಲಕ್ಷ ಅಂದರು. ಇಪ್ಪತ್ತು ಲಕ್ಷವೆಂದ ಇತಿಹಾಸಕಾರರೂ ಇದ್ದಾರೆ! ನೆನಪಿಡಿ: ಇದು ಸುನಾಮಿ, ಭೂಕಂಪಗಳಂಥ ನೈಸಗರ್ಿಕ ದುರಂತವಲ್ಲ; ಜರ್ಮನಿಯಲ್ಲಾದಂತೆ ರಾಜಪ್ರಭುತ್ವವೇ ನಡೆಸಿದ ಮಾರಣಹೋಮವೂ ಅಲ್ಲ. ವರ್ಷಗಳ ಕಾಲ ಜೊತೆಗೇ ಇದ್ದ ಸ್ನೇಹಿತರು, ನೆರೆಹೊರೆಯವರೇ- ಹೆಂಗಸರು, ಮಕ್ಕಳು, ಮುದುಕರನ್ನೂ ಬಿಡದೆ ಪರಸ್ಪರ ಕೊಂದುಕೊಂಡ ಹಿಂಸಾಗಾಥೆ…. ಅಷ್ಟೂ ಕಾಲ ಜಾತ್ಯತೀತವಾಗಿಯೇ ಉಳಿದಿದ್ದ ಮುಂಬಯಿ ಚಿತ್ರರಂಗ ಕೂಡ ಈ ಕ್ಷೊಭೆಯಿಂದ ಪಾರಾಗುವುದು ಸಾಧ್ಯವಿರಲಿಲ್ಲ. ಮಂಟೊನ ಪ್ರತಿಭೆಗೆ ಮೊದಲ ಮನ್ನಣೆ ನೀಡಿದ್ದೇ ಹಿಂದಿ ಚಿತ್ರರಂಗ. ಕಟ್ಟುನಿಟ್ಟು ತಂದೆಯ ಎರಡನೇ ಹೆಂಡತಿಯ ಕೊನೆ ಮಗನಾಗಿ, ಹನ್ನೊಂದು ಜನ ಸೋದರ ಸೋದರಿಯರೊಂದಿಗೆ ಲೂಧಿಯಾನದ ಸಮ್ರಾಲದಲ್ಲಿ ಹುಟ್ಟಿದ (1912) ಮಂಟೊ ಬೆಳೆದಿದ್ದು, ಮಲತಾಯಿ ನೆರಳಿನ ಪ್ರೀತಿರಹಿತ ಕುಟುಂಬದಲ್ಲಿ. ತಂದೆಯೆಂದರೆ ಅತೀವ ಭಯ. ತಾರುಣ್ಯಕ್ಕೆ ಅಡಿಯಿಡುತ್ತಿದ್ದ ಮಂಟೊ, ಅಮೃತಸರದ ರಾತ್ರಿಗಳನ್ನು ಪೋಲಿ ಸಹವಾಸದಲ್ಲಿ ಕಳೆಯುತ್ತ ಮೆಟ್ರಿಕ್ನಲ್ಲಿ ಎರಡು ಸಲ ಡುಂಕಿ ಹೊಡೆದ. ಮೂರನೇ ಸಲ ಕಷ್ಟಪಟ್ಟು ಪಾಸಾದರೂ, ಆ ಸೋಲಿನ ಅವಮಾನದಿಂದ ಆತ ಕೊನೆಯವರೆಗೂ ಮುಕ್ತನಾಗಲಿಲ್ಲ. 1937ರಲ್ಲಿ ಸಿನಿಮಾ ಮಾಸಿಕವೊಂದರ ಸಂಪಾದಕನಾಗಿ ಮುಂಬಯಿಗೆ ಬಂದ ಮಂಟೊ- ತಾರೆಯರು, ಚೆಲುವೆಯರು, ಮೈ ಕಸುಬಿನವರು ಮತ್ತು ವಂಚಕರಿಂದ ತುಂಬಿದ್ದ ಚಿತ್ರಲೋಕವನ್ನು ಕಂಡ. ಮುಂದಕ್ಕೆ ಎರಡನೇ ವಿಶ್ವಯುದ್ಧದ ಸಮಯದಲ್ಲಿ (1941- 42) ದೆಹಲಿ ಆಕಾಶವಾಣಿಯಲ್ಲಿ ಬರಹಗಾರನಾಗಿ ದುಡಿದು ಅಲ್ಲೂ ಜಗಳವಾಡಿ ಹೊರಬಂದರೂ, ಅದಕ್ಕೆ ಮುಂಚೆಯೇ ಅಪ್ನೀ ನಗರಿಯಾ ಚಿತ್ರಕ್ಕೆ ಕಥೆ ಬರೆದು ಮಂಟೊ ಚಿತ್ರರಂಗದ ಭ್ರಮಾಲೋಕಕ್ಕೆ ಕಾಲಿರಿಸಿದ್ದಾನೆ. ಅದಕ್ಕೂ ಮುಂಚೆಯೇ ತೀಕ್ಷ್ಣ ಸ್ವಂತಿಕೆಯ ಬರಹಗಾರನಾಗಿಯೂ ಖ್ಯಾತನಾಗಿದ್ದಾನೆ. ಹಾಗಾಗಿ ಮುಂಬಯಿಗೆ ವಾಪಸು ಬಂದಾಗ ಅವನಿಗೆ ತುಂಬು ಹೃದಯದ ಸ್ವಾಗತ. ಬಾಂಬೇ ಟಾಕೀಸಿನ `ದಾದಾಮೋನಿ’ ಅಶೋಕ್ಕುಮಾರ್ನಂಥ ಸಮಾನ ಮನಸ್ಕ ಗೆಳೆಯರೊಂದಿಗೆ, ಆಠ್ ದಿನ್, ಮಿಜéರ್ಾ ಘಾಲಿಬ್ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡುವ ಅವಕಾಶ. ಚಿತ್ರರಂಗ ಅವನಿಗೆ ಹೆಸರು, ಹಣ, ಸ್ವಾತಂತ್ರ್ಯ ಎಲ್ಲ ಸುರಿದು ಕೊಟ್ಟರೂ ಉದ್ದಕ್ಕೂ ಪ್ರೀತಿಯಿಲ್ಲದೆ ಕಳೆದ ಅವನ ತಳಮಳ ನಿಂತಿಲ್ಲ. ತಾನು ಬೇಡದವನು ಎಂಬ ಅಶಾಂತಿ ತಗ್ಗಿಲ್ಲ…. ಆ ಸಮಯದಲ್ಲಿ ಬಾಂಬೇ ಟಾಕೀಸಿನಲ್ಲಿ ಪ್ರಮುಖ ಸ್ಥಾನಗಳನ್ನು ಪಡೆದಿದ್ದ ಮುಸ್ಲಿಂ ಪ್ರತಿಭೆಗಳ ವಿರುದ್ಧ ಅಶೋಕ್ ಕುಮಾರ್ಗೆ ಬೆದರಿಕೆ ಪತ್ರಗಳು ಬರತೊಡಗಿದಾಗ, ಮುಟ್ಟಿದರೆ ಮುನಿಯುವಂಥ ಸೂಕ್ಷ್ಮ ಪ್ರಕೃತಿಯ ಮಂಟೊ ಕೆಲಸಕ್ಕೆ ಹೋಗುವುದನ್ನೇ ನಿಲ್ಲಿಸಿದ. ಸದಾ ರೂಮಿನ ಸೋಫಾ ಮೇಲೆ ಶೂನ್ಯವನ್ನು ದಿಟ್ಟಿಸುತ್ತಾ ಬಿದ್ದುಕೊಂಡಿರುತ್ತಿದ್ದ. ನಿಜಕ್ಕೂ ಅವನಿಗೆ ದೇಶ ಬಿಟ್ಟು ಹೋಗುವ ಪ್ರಚೋದನೆ ಯಾವ ಗಳಿಗೆಯಲ್ಲಿ, ಯಾವ ಕಾರಣಕ್ಕೆ ಬಂತೋ ಗೊತ್ತಿಲ್ಲ. ಅವನ ಕಥೆಗಳಲ್ಲಿ ಸಿಗುವ ಸುಳಿವುಗಳನ್ನೇ ಆಧರಿಸಿ ಊಹೆ ಮಾಡಬೇಕಷ್ಟೇ. ಆ ಸಮಯದಲ್ಲೊಮ್ಮೆ ಮಂಟೊ ತನ್ನ ಪರಮಾಪ್ತ ಮಿತ್ರ ಶ್ಯಾಂ (ಆಗಿನ ಜನಪ್ರಿಯ ನಟ) ಜತೆ ಪಾಕಿಸ್ತಾನದ ರಾವಲ್ಪಿಂಡಿಯಿಂದ (ಶ್ಯಾಂನ ಹುಟ್ಟೂರು) ಬಂದ ಕೆಲವು ಸಿಖ್ ನಿರಾಶ್ರಿತರನ್ನು ಭೇಟಿಯಾಗುತ್ತಾನೆ. ಆ ಬಗ್ಗೆ ಮಂಟೊ ಬರೆಯುತ್ತಾನೆ: …ಅವರು ತಪ್ಪಿಸಿಕೊಂಡು ಬಂದ ಭಯಾನಕ ಕಥನವನ್ನು ಮೌನವಾಗಿ ಕೇಳುತ್ತ ದಿಗ್ಭ್ರಾಂತರಾಗಿದ್ದೆವು. ಶ್ಯಾಂ ತೀರಾ ವಿಚಲಿತನಾಗಿದ್ದ. ಅವನೊಳಗೆ ನಡೆದಿದ್ದ ಹೊಯ್ದಾಟ ನನ್ನ ಅರಿವಿಗೆ ಬರುತ್ತಿತ್ತ್ತು. ಅಲ್ಲಿಂದ ಹೊರ ಬಂದ ಮೇಲೆ ಕೇಳಿದೆ: ನಾನೂ ಮುಸ್ಲಿಂ. ನಿನಗೆ ನನ್ನನ್ನು ಕೊಲ್ಲಬೇಕು ಅನಿಸುತ್ತಿಲ್ಲವೇ? ಈಗಿಲ್ಲ- ಅವನು ಗಂಭೀರವಾಗಿ ಉತ್ತರ ಕೊಟ್ಟ-ಆದರೆ ಮುಸ್ಲಿಮರ ದೌರ್ಜನ್ಯಗಳ ಬಗ್ಗೆ ಅವರು ಹೇಳುತ್ತಿದ್ದ ಆ ಗಳಿಗೆಯಲ್ಲಿ ನಾನು ನಿನ್ನನ್ನು ಕೊಂದರೂ ಕೊಲ್ಲಬಹುದಿತ್ತು…! ಆ ಉತ್ತರ ಕೇಳಿ ನಾನು ತತ್ತರಿಸಿಹೋದೆ…. ಇದೇ ಬಗೆಯ ಸಂದರ್ಭ ಅವನದೊಂದು ಕಥೆಯಲ್ಲೂ ಬರುತ್ತದೆ. ಆಪ್ತ ಹಿಂದೂ ಗೆಳೆಯ ಜುಗಲ್ನ ಇಂಥದೇ ಒಂದು ಮಾತಿನಿಂದ ಮುಸ್ಲಿಂ ಕಥಾನಾಯಕ ಮುಮ್ತಾಜ್ ಯಾರ ಮಾತೂ ಕೇಳದೆ ಪಾಕಿಸ್ತಾನಕ್ಕೆ ಹೋಗಿಬಿಡುತ್ತಾನೆ. ಕಡೆಗೆ ಮಂಟೊ ಮಾಡಿದ್ದು ಅದೇ. ಅಶೋಕ್ಕುಮಾರ್ ಮತ್ತು ವಚ್ಚಾ ಅನ್ನುವ ಬಾಂಬೇ ಟಾಕೀಸಿನ ಗೆಳೆಯರ ಒತ್ತಾಯವನ್ನೂ ತಳ್ಳಿಹಾಕಿ ಲಾಹೋರಿಗೆ ಹೊರಟೇಬಿಡುತ್ತಾನೆ- 1948ರ ಜನವರಿಯಲ್ಲಿ. ಆಗಲೂ ಅವನಿಗೆ ತನ್ನ ತಾಯ್ನೆಲ ಯಾವುದೆಂಬ ನಿಶ್ಚಯವಿಲ್ಲ. ಹೆಂಡತಿ, ಮೂವರು ಹೆಣ್ಣುಮಕ್ಕಳ ಅವನ ಕುಟುಂಬ ಮೊದಲೇ ಅಲ್ಲಿಗೆ ಹೋಗಿ ನೆಲೆಸಿದ್ದರೂ, ಆಗಿನ್ನೂ ಅದು ಪಾಕಿಸ್ತಾನವಾಗಿರಲಿಲ್ಲ. ಮತ್ತು ಈ ವಿದಾಯ ಅವನಿಗೆ ಸುಲಭದ್ದಾಗಿರಲಿಲ್ಲ. ಯಾಕೆಂದರೆ ಸಾಯುವವರೆಗೂ ಮುಂಬಯಿ ಸೆಳೆತದಿಂದ ಅವನು ಪಾರಾಗಲಿಲ್ಲ. ಯಾವ ಪ್ರಶ್ನೆಗಳನ್ನೂ ಕೇಳದ ಮುಂಬಯಿ ಅವನ ಸ್ವಂತದ್ದಾಗಿತ್ತ್ತು. ಈಗ ಬಲಿತ ಮರದ ಬೇರು ಕಿತ್ತು ಇನ್ನೊಂದು ಕಡೆ ನೆಟ್ಟಂತೆ- ಮಂಟೊ ಬದುಕಿನ ಸೂತ್ರವೇ ಹರಿದುಹೋಯಿತು. ಹಾಗೆ ಲಾಹೋರ್- ಅಥವಾ ಪಾಕಿಸ್ತಾನ- ಅವನಿಗೆಂದೂ ಸ್ವಂತದ್ದಾಗಲೇ ಇಲ್ಲ. ತನ್ನ ಆತ್ಮಕ್ಕೆ ಕೊಳ್ಳಿಯಿಟ್ಟ ಈ ಹೃದಯವಿದ್ರಾವಕ ತಲ್ಲಣವನ್ನು ಅವನು ಅರಗಿಸಿಕೊಳ್ಳಲೇಬೇಕಿತ್ತು. ಚರಿತ್ರಕಾರರು ಮತ್ತು ಸಮಾಜವಿಜ್ಞಾನಿಗಳೂ ಹೆಜ್ಜೆ ಇಡಲಾಗದೆ ಸೋತ ಕಡೆ ಭೇದಿಸಿ ಅರಿಯುವುದು- ಬರಹಗಾರ ಮಂಟೊಗೆ ಜೀವನ್ಮರಣದ ಪ್ರಶ್ನೆಯಾಗಿತ್ತು: …ವಿಭಜನೆ ನಂತರ ಸಂಭವಿಸಿದ ವಿಪ್ಲವದ ಪರಿಣಾಮಗಳನ್ನು ನಾನು ಬಹಳ ದೀರ್ಘ ಕಾಲ ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ್ಲ. ಈಗಲೂ ನನ್ನ ಮನಃಸ್ಥಿತಿ ಅದೇ. ಆದರೆ ಕಡೆಗೊಮ್ಮೆ ಈ ಭಯಾನಕ ವಾಸ್ತವವನ್ನು ನಾನು ಆತ್ಮಮರುಕ ಅಥವಾ ಹತಾಶೆಯಿಲ್ಲದೆ ಸ್ವೀಕರಿಸಲು ಸಾಧ್ಯವಾಯಿತೇನೋ. ಮತ್ತು ಆ ಹಾದಿಯಲ್ಲಿ, ಈ ಮನುಷ್ಯನಿಮರ್ಿತ ನೆತ್ತರ ಕಡಲಿನಿಂದ ಅಪರೂಪ ರಂಗಿನ ಮುತ್ತುಗಳನ್ನು ಹೆಕ್ಕಿ ತೆಗೆಯಲು ಯತ್ನಿಸಿದೆ. ಮನುಷ್ಯ ಮನುಷ್ಯನನ್ನು ಕೊಲ್ಲುವಾಗಿನ ಏಕಚಿತ್ತ ದೃಢತೆ; ಕೆಲವರಲ್ಲಿ ಮೂಡಿದ ಪಶ್ಚಾತ್ತಾಪ; ತಮ್ಮಲ್ಲಿನ್ನೂ ಮನುಷ್ಯ ಭಾವನೆಗಳೇಕೆ ಉಳಿದಿವೆಯೆಂದು ದಿಗ್ಭ್ರಮೆಗೊಳ್ಳುವ ಕೊಲೆಗಡುಕರ ಕಣ್ಣೀರು… ಮತ್ತು ಈ ದುರಂತದ ನಿರರ್ಥಕತೆ. ಭಾರತ ತೊರೆದುಹೋದ ಕತೆಯಲ್ಲಿ ಮಂಟೊನ ನಾಯಕ ಹೇಳುತ್ತಾನೆ: …ಎರಡು ಲಕ್ಷ ಜನ ಪ್ರಾಣ ಕಳೆದುಕೊಂಡಿದ್ದಕ್ಕಿಂತ ದೊಡ್ಡ ದುರಂತವೆಂದರೆ- ಇಷ್ಟು ಜೀವಗಳ ನಷ್ಟ ಕೂಡ ವ್ಯರ್ಥವಾಯಿತು ಅನ್ನುವುದು. ಒಂದು ಲಕ್ಷ ಹಿಂದೂಗಳನ್ನು ಕೊಂದ ಮುಸ್ಲಿಮರು, ತಾವು ಹಿಂದೂಧರ್ಮವನ್ನೇ ನಾಶ ಮಾಡಿದೆವು ಅಂದುಕೊಳ್ಳಬಹುದು. ಆದರೆ ಹಿಂದೂಧರ್ಮ ಸತ್ತಿಲ್ಲ, ಸಾಯುವುದೂ ಇಲ್ಲ. ಅದೇ ರೀತಿ ಒಂದು ಲಕ್ಷ ಮುಸ್ಲಿಮರನ್ನು ಕೊಂದ ಹಿಂದೂಗಳು ಇಸ್ಲಾಂ ಧರ್ಮವನ್ನೇ ನಾಶ ಮಾಡಿದ್ದಾಗಿ ಸಂಭ್ರಮಪಡಬಹುದು. ಆದರೆ ಇಸ್ಲಾಂಗೆ ಯಾವ ಕೊಂಕೂ ತಾಗಿಲ್ಲ… (ಹಿಂದೂ ಗೆಳೆಯ ಜುಗಲ್ಗೆ) ನೀನು ನನ್ನನ್ನು ಕೊಂದಿದ್ದರೆ, ನೀನು ಸಾಯಿಸಿದ್ದು ನಿನ್ನ ಗೆಳೆಯನಾದ ಮುಮ್ತಾಜ್ ಎಂಬ ಮುಸ್ಲಿಮನನ್ನಲ್ಲ, ಒಬ್ಬ ಮನುಷ್ಯನನ್ನು ಎಂಬುದು ನಿನ್ನ ಅರಿವಿಗೆ ಬರುತ್ತಿತ್ತು. ಅಂದರೆ ಸತ್ತವನೊಬ್ಬ ಸೂಳೇಮಗನಾಗಿದ್ದರೆ ನೀನು ಅವನ `ಸೂಳೇಮಗತನ’ವನ್ನು ಕೊಲ್ಲಲು ಆಗುತ್ತಿರಲಿಲ್ಲ. ಅದೇ ರೀತಿ ನೀನು ಒಬ್ಬ ಮುಸ್ಲಿಮನನ್ನು ಕೊಂದರೂ ಅವನ ಮುಸ್ಲಿಂತನವನ್ನು ಕೊಲ್ಲಲು ಸಾಧ್ಯವಿಲ್ಲ. ಅಲ್ಲಿ ಬರೀ ಒಬ್ಬ ಮನುಷ್ಯ ಸತ್ತಿರುತ್ತಿದ್ದ….   ಮಂಟೊಗೆ ಲಾಹೋರ್ ಬದುಕುವ ಅವಕಾಶವನ್ನೇ ಕೊಡಲಿಲ್ಲ. ಅವನು ನೆಚ್ಚಬಹುದಾಗಿದ್ದ ಅಲ್ಲಿನ ಚಿತ್ರರಂಗ, ದೇಶ ವಿಭಜನೆ, ವಲಸೆಗಳಲ್ಲಿ ನಾಶವಾಗಿಹೋಗಿತ್ತು. ಹೆಂಡತಿ, ಮೂವರು ಹೆಣ್ಣುಮಕ್ಕಳ ಸಂಸಾರ. ಜೀವನಕ್ಕೇನು ಮಾಡುವುದು? ಬೆಳಗಾಗೆದ್ದು ಶುಭ್ರವಾಗಿ ತಯಾರಾಗಬಹುದು. ಆದರೆ ಹೋಗುವುದೆಲ್ಲಿಗೆ?! ಲಾಹೋರ್- ಅಪಾರ ವೈಯಕ್ತಿಕ ಶಿಸ್ತಿನ ಮನುಷ್ಯನಾಗಿದ್ದ ಮಂಟೊನ ಗೊತ್ತು ಗುರಿಗಳನ್ನೇ ಕಿತ್ತುಕೊಂಡಿತ್ತು. ಪರಿಣಾಮ, ಮಂಟೊ ದಿನವಿಡೀ ಕುಡಿಯುವ ವ್ಯಸನಿಯಾದ. ಬರೆದೇ ಬದುಕಬೇಕಿತ್ತು, ಬರೆದ. ಅದೂ ಹೇಗೆ ಬರೆದ! ಹಗಲೂ ರಾತ್ರಿ ಒಂದೇ ಸಮ. ಒಮ್ಮೆ ಬರೆದಿದ್ದನ್ನು ಮತ್ತೆ ತಿದ್ದದೆ, ಹಾಳೆಗೆ ಇಟ್ಟ ಪೆನ್ನಿಗೆ ಬಿಡುವು ಕೊಡದೆ… ಇನ್ನೂರೈವತ್ತು ಕತೆಗಳು, ಹಲವಾರು ನಾಟಕಗಳು, ಒಂದು ಕಾದಂಬರಿ, ಅನೇಕ ಪ್ರಬಂಧಗಳು… ಎಷ್ಟೋ ಸಲ, ಒಂದು ಪತ್ರಿಕಾ ಕಚೇರಿಗೆ ಹೋಗುವುದು. ಅಲ್ಲೇ ಮೂರು ನಾಲ್ಕು ಹಾಳೆ ಪಡೆದು ಕೂತು ಒಂದು ಕತೆ ಬರೆದು ಮುಗಿಸಿ ಕೊಟ್ಟುಬಿಡುವುದು. 15 ರಿಂದ 30 ರೂಪಾಯಿವರೆಗೆ ಸಂಭಾವನೆ- ಆ ಕಾಲದಲ್ಲಿ ಅದೇನೂ ಸಣ್ಣ ಮೊತ್ತವಲ್ಲ- ಆದರೆ ಅವನ ಕುಡಿತಕ್ಕೆ ಸಾಲದು! ಅವನ ಈ ಚಟ ಬಿಡಿಸಲು ಹೆಂಡತಿ ಒಮ್ಮೆ ಹುಚ್ಚಾಸ್ಪತ್ರೆಗೂ ಸೇರಿಸಿದ್ದಳು. (ಆ ಅನುಭವದ ಫಲವೇ- ಮೊದಲಲ್ಲಿ ಉಲ್ಲೇಖಿಸಿದ ತೋಬಾ ತೇಕ್ ಸಿಂಗ್ ಕತೆ)… ವರ್ಷಗಳ ಕಾಲ ಹೀಗೆ ದಿನವಿಡೀ ಎರಡು ತುಂಡು ಬ್ರೆಡ್ಡು ಮತ್ತು ಕುಡಿತ, ಬರಹಗಳಲ್ಲಿ ಕಳೆದ ಮಂಟೊ, ಜೀವಿಸುವ ಉದ್ದೇಶವೇ ಬತ್ತಿಹೋದವನಂತೆ ಬದುಕಿದ. ಇಷ್ಟರ ಮೇಲೆ ಅವನ ಸವರ್ೋತ್ಕೃಷ್ಟ ಕಥೆಗಳನ್ನು ಹೀಯಾಳಿಸಿ ‘ಅಶ್ಲೀಲತೆ’ಯ ಆರೋಪದ ಮೇಲೆ ಒಂದಾದ ಮೇಲೊಂದು (ಒಟ್ಟು ಐದು) ಕೋಟರ್ು ಖಟ್ಲೆಗಳು ಏರಿ ಬಂದಾಗ ಮಂಟೊಗೆ ರೋಸಿಹೋಯಿತು. ಈ ಅವಹೇಳನವನ್ನು ಅವನು ಮರೆಯಲೂ ಇಲ್ಲ, ಕ್ಷಮಿಸಲೂ ಇಲ್ಲ. ಮೊದಲೇ ಕಿರಿಕಿರಿಯ ವಿಕ್ಷಿಪ್ತ ಆಸಾಮಿಯಾಗಿದ್ದವನು ಇನ್ನಷ್ಟು ನಂಜು ತುಂಬಿಕೊಂಡು ತನ್ನಲ್ಲೇ ನಂಬಿಕೆ ಕಳೆದುಕೊಳ್ಳುತ್ತಾ ಬಂದ. ಆಶ್ಚರ್ಯವೆಂದರೆ ಮನುಷ್ಯನಲ್ಲಿ ಮಾತ್ರ ಅವನ ನಂಬಿಕೆ ಕುಸಿಯಲೇ ಇಲ್ಲ!… ಮತ್ತು ಈ ಮಾನವಪ್ರೇಮ ತೆಳು ಆದರ್ಶದ ಅಂತರಿಕ್ಷದಲ್ಲಿ ನೇತಾಡುವಂಥದಲ್ಲ. ಯಾಕೆಂದರೆ ಮಂಟೊ ಮನುಷ್ಯನ ಕ್ರೌರ್ಯದ ಎಲ್ಲೆಗಳನ್ನು ಕಂಡು ಬಂದಿದ್ದಾನೆ. ಅಂತರಾತ್ಮದ ಕಗ್ಗತ್ತಲನ್ನು ಮುಟ್ಟಿ ನೋಡಿದ್ದಾನೆ. ಎಲ್ಲ ಶ್ರೇಷ್ಠ ಬರಹಗಾರರಂತೆ ತನ್ನ ತಲೆಮಾರಿನ ಪಾಪ ಪುಣ್ಯಗಳ ಶಿಲುಬೆ ಹೊತ್ತು ನಡೆದಿದ್ದಾನೆ. ಅಶ್ಲೀಲತೆಯ ಆರೋಪ ಎದುರಿಸಿದ ಅವನದೊಂದು ಕತೆ ಹೀಗಿದೆ: ರೈಲು ಹಿಡಿದು ಲಾಹೋರ್ ತಲುಪಿದ ಸಿರಾಜುದ್ದೀನನ ಹೆಂಡತಿಯನ್ನು ಹೊಟ್ಟೆ ಸೀಳಿ ಕೊಂದಿದ್ದಾರೆ. ಮಗಳು? ಎಡಗೆನ್ನೆಯ ಮೇಲೆ ಕಪ್ಪು ಮಚ್ಚೆಯಳ್ಳ ಹದಿನೇಳು ವರ್ಷದ ಚೆಲುವೆ? ಅವಳೆಲ್ಲಿ ತಪ್ಪಿಸಿಕೊಂಡಳು? ಸಿರಾಜುದ್ದೀನ್ ದಿಕ್ಕೆಟ್ಟು ನಿರಾಶ್ರಿತರ ಶಿಬಿರಗಳನ್ನು ಒಂದೊಂದೇ ಹುಡುಕುತ್ತಾ ಹೋದರೂ ಮಗಳು ಸಕೀನಾಳ ಸುಳಿವಿಲ್ಲ. ಕೆಲವು ದಿನಗಳ ಮೇಲೆ ಬಂದೂಕುಗಳನ್ನು ಹಿಡಿದ ಆ ಎಂಟು ಯುವಕರ ಗುಂಪು ಇವನಿಗೆ ಭರವಸೆ ಕೊಡುತ್ತದೆ- ‘ನಿನ್ನ ಮಗಳು ಜೀವಂತವಾಗೇ ಇದ್ದರೆ ನಾವು ಖಂಡಿತ ಕರೆತರುತ್ತೇವೆ…’ ತಮ್ಮ ಜೀವವನ್ನೇ ಪಣವಾಗಿಟ್ಟು ಅವರು ತಮ್ಮದೇ ಟ್ರಕ್ಕಿನಲ್ಲಿ ಮತ್ತೆ ಮತ್ತೆ ಅಮೃತಸರಕ್ಕೆ ಹೋಗಿ ತಪ್ಪಿಸಿಕೊಂಡ ಮುಸ್ಲಿಂ ಕುಟುಂಬಗಳ ಸದಸ್ಯರನ್ನು ಹುಡುಕಿ ಹುಡುಕಿ ತರುತ್ತಿದ್ದಾರೆ. ಆದರೆ ಮಗಳು ಮಾತ್ರ ಇನ್ನೂ ಸಿಕ್ಕಿಲ್ಲ. ಮುದುಕ ಕಾದೇ ಕಾಯುತ್ತಾನೆ. ಸಕೀನಾ ಸಿಕ್ಕಿಲ್ಲ. ಒಂದು ದಿನ ಭಾರತದ ರಸ್ತೆ ಬದಿಯಲ್ಲಿ ಆ ಗುಂಪು ಇವಳನ್ನು ನೋಡುತ್ತದೆ. ಅದೇ ಎಡಗೆನ್ನೆ ಮೇಲಿನ ಮಚ್ಚೆ. ಹೆದರಿಕೊಂಡ ಅವಳಿಗೆ ಧೈರ್ಯ ಹೇಳಿ ಸಂತೈಸಿ ತಮ್ಮ ಟ್ರಕ್ಕಿಗೆ ಹತ್ತಿಸಿಕೊಳ್ಳುತ್ತದೆ. ಈ ಕಡೆ ಮುದುಕ ಶಿಬಿರ ಶಿಬಿರಕ್ಕೂ ಅಲೆಯುತ್ತಲೇ ಇದ್ದಾನೆ. ಆ ಆಪದ್ಬಾಂಧವರ ಗುಂಪು ಒಮ್ಮೆ ಕಣ್ಣಿಗೆ ಬಿದ್ದಾಗ ಕೇಳುತ್ತಾನೆ: ನನ್ನ ಮಗಳು ಸಿಕ್ಕಿದಳಾ? ಸಿಗ್ತಾಳೆ, ಸಿಗ್ತಾಳೆ.. ಅವರು ಆಶ್ವಾಸನೆ ಕೊಟ್ಟು ಹೋಗುತ್ತಾರೆ. ಇವನಿಗೆ ಅಷ್ಟಿಷ್ಟು ಸಮಾಧಾನ. ಅದೇ ಸಂಜೆ, ರೈಲು ಹಳಿಗಳ ಪಕ್ಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಯುವತಿಯ ದೇಹವನ್ನು ನಾಲ್ವರು ಯುವಕರು ಶಿಬಿರದ ಆಸ್ಪತ್ರೆಗೆ ಹೊತ್ತು ತರುತ್ತಾರೆ. ಸಿರಾಜುದ್ದೀನ್ ಹಿಂಬಾಲಿಸುತ್ತಾನೆ. ತುಸು ಹೊತ್ತು ಹೊರಗೇ ನಿಂತಿದ್ದು ಮತ್ತೆ ಒಳಹೋದಾಗ ಸ್ಟ್ರೆಚರ್ ಮೇಲೆ ಮಲಗಿದ ಯುವತಿಯ ದೇಹ. ಎಡಗೆನ್ನೆಯ ಮೇಲೆ ಅದೇ ಕಪ್ಪು ಮಚ್ಚೆ. ಸಿರಾಜುದ್ದೀನ್- ‘ಸಕೀನಾ’ ಎಂದು ಕಿರುಚಿಕೊಳ್ಳುತ್ತಾನೆ. ದೀಪದ ಸ್ವಿಚ್ ಹಾಕಿದ ಡಾಕ್ಟರ್ ಇವನನ್ನು ದಿಟ್ಟಿಸಿದಾಗ ‘ನಾನೇ ಇವಳ ಅಪ್ಪ’ ಅನ್ನುತ್ತಾನೆ. ಡಾಕ್ಟರು ನಾಡಿ ಹಿಡಿದು ಪರೀಕ್ಷಿಸುತ್ತಾ ಗಾಳಿಯಾಡಲೆಂದು ರೂಮಿನಲ್ಲಿದ್ದ ಒಂದೇ ಕಿಟಕಿ ಕಡೆ ತೋರಿಸಿ ತೆಗೆದುಬಿಡು ಅನ್ನುತ್ತಾನೆ. ಆ ದನಿಗೆ ಸ್ಟ್ರೆಚರಿನ ಮೇಲೆ ಸಣ್ಣ ಹೊರಳಾಟ. ಕಷ್ಟಪಟ್ಟು ತನ್ನ ಸೊಂಟದ ಹತ್ತಿರ ಸೆಲ್ವಾರಿನ ಲಾಡಿಯನ್ನು ಹುಡುಕುವ ಅವಳ ಕೈಗಳು. ತೆರೆದುಬಿಡು ಅನ್ನುವುದನ್ನು ಕೇಳಿಸಿಕೊಂಡ ಆ ಅರೆಜೀವ, ಅಪಾರ ಶ್ರಮದಿಂದ ನಿಧಾನವಾಗಿ ಹುಡುಕಿ ಲಾಡಿ ಬಿಚ್ಚಿ ತನ್ನ ಸೆಲ್ವಾರನ್ನು ಕೆಳಗಿಳಿಸಿ ತೊಡೆ ಅಗಲಿಸುತ್ತದೆೆ. ಅವಳಲ್ಲಿ ಈ ಚಲನೆ ಕಂಡ ಕೂಡಲೇ ಮುದುಕ ಹರ್ಷದಿಂದ ಚೀರುತ್ತಾನೆ: ಹೋ ನನ್ನ ಮಗಳು ಬದುಕಿದ್ದಾಳೆ… ಡಾಕ್ಟರ್ ನಡುಗತೊಡಗುತ್ತಾನೆ! ಎಲ್ಲಿದೆ ಇಲ್ಲಿ ಕೋಮುದ್ವೇಷ? ಹಿಂದೂ ಮುಸ್ಲಿಂ ಘರ್ಷಣೆ? ಇಮಾಂ ಸಾಬಿ, ಗೋಕುಲಾಷ್ಟಮಿ ಗಾದೆಯ ಸುಳಿಗೆ ಬಿದ್ದ ಮನಸ್ಸಿಗೆ ಮಂಟೊನ ಈ ನಿರಂಕುಶ ಪ್ರತಿಭೆ ದಕ್ಕುವುದಿಲ್ಲ. ಮಂಟೊ ತಾನು ಕಂಡಿದ್ದನ್ನು ದಿನಚರಿಯಂತೆ ನೇರವಾಗಿ ಒಪ್ಪಿಸುವ ಲೇಖಕನಲ್ಲ. ಅನುಭವ ಅವನ ಒಳಹೊಕ್ಕು ಸುಟ್ಟು, ಹೊಸ ಹುಟ್ಟು ಪಡೆದು ಮನುಕುಲದ ವ್ಯಾಕುಲ ಹಾಡಾಗಿ ಹೊಮ್ಮುತ್ತದೆ…. ಇದೇ ರೀತಿ, ಅಶ್ಲೀಲತೆಗಾಗಿ ಕೋಟರ್ು ಮೆಟ್ಟಿಲೇರಿದ ಇನ್ನೊಂದು ಕತೆ: ಕಲವಂತ ಕೌರ್ ತೋರ ನಿತಂಬ, ಮಾಂಸಲ ತೊಡೆಗಳು ಮತ್ತು ನಿಮಿರಿದ ಸ್ತನಗಳ, ತುಂಬಿದ ಹೆಣ್ಣು. ಅವಳ ಪ್ರಿಯಕರ ಈಶ್ವರ ಸಿಂಗ್ ಮಧ್ಯರಾತ್ರಿ ಕಳೆದು ಬಂದಿದ್ದಾನೆ. ತನ್ನ ಗಂಡಸುತನದಲ್ಲಿ ಕಲವಂತಳಿಗೆ ತಕ್ಕ ಜೋಡಿ ಅವನು. ಅವನು ಕಳೆದ ಬಾರಿ ಬಂದಾಗ, ಮುಸ್ಲಿಮರ ಮನೆಗಳನ್ನು ದೋಚಿ ತಂದಿದ್ದ ಒಡವೆಗಳನ್ನು ತನಗೆ ತೊಡಿಸಿ ತನ್ನ ಪಕ್ಕ ಮಲಗಿ ತನ್ನಲ್ಲಿ ಕಾಮನೆ ಕೆರಳಿಸಿ… ಇದ್ದಕ್ಕಿದ್ದಂತೆ ಎದ್ದುಹೋಗಿದ್ದ. ಇಲ್ಲ, ಅವನು ಈ ಸಲ ಉತ್ತರ ಹೇಳಲೇಬೇಕು. ಎಲ್ಲಿ ಹೋಗಿದ್ದೆ? ಪ್ರಶ್ನೆಗಳು, ಇವನು ಹೇಳಲಾರದ ಉತ್ತರಗಳು. ಈಗಲೂ ಅವಳನ್ನು ತಬ್ಬಿ ಮಲಗಿ ಅವಳನ್ನು ಕೆರಳಿಸಿ ಮತ್ತೆ ಸೋತುಹೋಗುತ್ತಿದ್ದಾನೆ. ಇವಳು ಕೇಳುತ್ತಾಳೆ- ಏನಾಗಿದೆ ನಿನಗೆ? ಈಶ್ವರ ಸಿಂಗ್ ತನ್ನ ಕೃಪಾಣ್ ತೋರಿಸಿ ಇದರಲ್ಲಿ ಆರು ಜನ ಮುಸ್ಲಿಮರನ್ನು ಕೊಂದೆ ಅನ್ನುತ್ತಾನೆ. ಅವಳು ಬಿಡುವುದಿಲ್ಲ. ಏನಾಯಿತು? ಇನ್ನೊಂದು ಹೆಣ್ಣಾ? ತನಗಾಗುತ್ತಿರುವುದನ್ನು ಹೇಗೆ ವಿವರಿಸುವುದೋ ತಿಳಿಯದೆ ಅವನು ಹ್ಞೂಂಗುಟ್ಟಿದ್ದೇ ತಡ, ಆ ಭರ್ಜರಿ ಹೆಣ್ಣು ಅವನದೇ ಕೃಪಾಣ್ ಎಳೆದು ಅವನ ಕುತ್ತಿಗೆ ಇರಿದುಬಿಡುತ್ತಾಳೆ. ಕತ್ತು ಎದೆ ನೆತ್ತರಲ್ಲಿ ನೆನೆಯುವಾಗ ಅವನು ಸಾಯುವ ಮುನ್ನ ಹೇಳುತ್ತಾನೆ: ಆ ಮನೆಯಲ್ಲಿ ಆರು ಜನ ಗಂಡಸರು. ಮುಸ್ಲಿಮರು. ಆ ಆರು ಜನರನ್ನೂ ಕೊಂದ ಮೇಲೆ ಕೆಳಗೆ ಬಿದ್ದಿದ್ದ ಆ ತರುಣಿಯನ್ನೂ ಸೀಳಬೇಕೆಂದವನು, ಮನಸ್ಸು ಬದಲಿಸಿ ಹೊತ್ತುಕೊಂಡು ಕಾಲುವೆಯ ಪಕ್ಕ ಒಯ್ಯುತ್ತಾನೆ. ಅಲ್ಲಿ ಇಳಿಸಿ ಇವಳ ರುಚಿ ನೋಡಬೇಕೆನಿಸಿ ಕೂಡುತ್ತಾನೆ. ಆಮೇಲೆ ಅರಿವಿಗೆ ಬರುತ್ತೆ- ಅವಳು ಸತ್ತು ಎಷ್ಟೋ ಹೊತ್ತಾಗಿದೆ! ತಾನು ಹೆಣದ ಜೊತೆ… ಹೆಣದೊಂದಿಗೆ ಮಲಗಿದವನು ತನ್ನ ಗಂಡಸುತನವನ್ನೇ ಕಳೆದುಕೊಂಡು ಬಂದಿದ್ದಾನೆ. ಈಗ ಬೇಡುತ್ತಾನೆ- ಕೈ ಕೊಡು ಕಲವಂತ್. ಇವಳು ಅವನ ಕೈ ಹಿಡಿದುಕೊಂಡರೆ ಅದು ಮಂಜುಗಡ್ಡೆಯಂತೆ ಶೀತಲವಾಗಿದೆ….!   1955 ಜನವರಿ 18ರ ಮುಂಜಾನೆ ಸಾದತ್ ಹಸನ್ ಮಂಟೊನ ಮೂಗಿನಿಂದ ರಕ್ತ ಸುರಿಯತೊಡಗಿತು. ಅವನನ್ನು ಸ್ಟ್ರೆಚರ್ ಮೇಲಿರಿಸಿ ಆಂಬುಲೆನ್ಸಿನಲ್ಲಿ ಆಸ್ಪತ್ರೆಗೆ ಒಯ್ಯುವ ಮುನ್ನ ಮಂಟೊ ತುಸು ಹೆಂಡಕ್ಕಾಗಿ ಯಾಚಿಸಿದನಂತೆ! ಆಸ್ಪತ್ರೆ ತಲುಪಿದಾಗ ವೈದ್ಯರು- ನೀವು ತಪ್ಪು ಜಾಗಕ್ಕೆ ಬಂದಿದ್ದೀರಿ ಅಂದರು- ಸೀದಾ ಸ್ಮಶಾನಕ್ಕೆ ಒಯ್ಯಬೇಕಿತ್ತು…! ಮಂಟೊ ಸತ್ತಾಗ ಅವನಿಗಿನ್ನೂ 43 ವರ್ಷವೂ ತುಂಬಿರಲಿಲ್ಲ. ಆದರೆ ಸ್ವತಃ ಅವನಿಗೇ ತೀರಾ ತಡವಾಯಿತು ಅನ್ನಿಸಿತ್ತು! ಯಾಕೆಂದರೆ ಮಂಟೊ ಎಲ್ಲವನ್ನೂ ನೋಡಿಯಾಗಿತ್ತು. ಅಥವಾ ಎಲ್ಲರೂ ಹೇಳುವಂತೆ ಕಂಡುಂಡಾಗಿತ್ತು. ಮತ್ತು ತಾನು ಕಂಡಿದ್ದಕ್ಕೆ ಅಸಾಧಾರಣ ಅಕ್ಷರ ರೂಪ ಕೊಟ್ಟಾಗಿತ್ತು. ಅವನು ಭಾರತ ಬಿಟ್ಟು ಹೋದ ಮೇಲೆ ಲಾಹೋರಿನಲ್ಲಿ ಕಳೆದಿದ್ದು ಏಳು ವರ್ಷ. ಬಾಳಿದ್ದು ನಿರಾಶ್ರಿತನ ಬದುಕು. ಆ ಏಳು ವರ್ಷ ಭಾವನಾತ್ಮಕವಾಗಿ ಮತ್ತು ಆಥರ್ಿಕವಾಗಿ ಅವನ ಪಾಲಿಗೆ ಅತ್ಯಂತ ದುರ್ದಮವಾದ ಕಾರ್ಪಣ್ಯದ ದಿನಗಳೂ ಹೌದು. ವಿಪಯರ್ಾಸವೆಂದರೆ ಮಂಟೊ ತನ್ನ ಜೀವಮಾನದ ಶ್ರೇಷ್ಠತಮ ಬರವಣಿಗೆ ಸಾಧಿಸಿದ್ದೂ ಈ ಅವಧಿಯಲ್ಲೇ… ತನ್ನನ್ನು ಸುಟ್ಟುಕೊಂಡು ಬೇರೆಯವರಿಗೆ ಬೆಳಕು ಕೊಟ್ಟಂತೆ ಆನ್ನುವುದು ಮಂಟೊ ವಿಷಯದಲ್ಲಿ ಅಲಂಕಾರದ ಮಾತಲ್ಲ. ನಮ್ಮೆರಡು ಸೋದರ ದೇಶಗಳು ಸ್ವಾತಂತ್ರ್ಯ ಗಳಿಸಿ ಅರ್ಧ ಶತಮಾನಕ್ಕೂ ಮಿಕ್ಕಿ ಕಳೆದುಹೋಗಿದೆ. ಆದರೆ ಮಂಟೊ ಎಂಬ ಬರಹಗಾರನನ್ನು ಅಲ್ಲಾಡಿಸಿಟ್ಟ ವಿಭಜನೆಯ ಶಾಪವಿನ್ನೂ ನೀಗಿಲ್ಲ. ದುಃಸ್ವಪ್ನ ಮತ್ತೆ ಮತ್ತೆ ಮರುಕಳಿಸುತ್ತಲೇ ಇದೆ- ಇನ್ನಷ್ಟು ಅಯೋಧ್ಯೆಗಳು, ಗೋಧ್ರಾ- ಗುಜರಾತುಗಳು, ದತ್ತಪೀಠಗಳ ರೂಪದಲ್ಲಿ- ಹಳೇ ಸಿನಿಮಾದ ಅಚ್ಚ ಹೊಸ ಕಾಪಿಗಳಂತೆ. ಹಾಗಾದರೆ ಮುಸ್ಲಿಂ ದ್ವೇಷಿಯ ಗುಂಡಿಗೆ ಗಾಂಧಿ ಈ ನೆಲಕ್ಕೆ ಚೆಲ್ಲಿದ ರಕ್ತ; ಮಂಟೊನ ಮೂಲಕ ನಮ್ಮ ಹೃದಯಗಳಲ್ಲಿ ಸ್ರವಿಸುವ ರಕ್ತ- ಯಾವುದಕ್ಕೂ ಬೆಲೆಯೇ ಇಲ್ಲವೇ? ಅನ್ನುವುದಾದರೆ ಮಂಟೊ ಯಾತಕ್ಕಾಗಿ ಬರೆದ? ಯಾರಿಗೋಸ್ಕರ ಬರೆದ?… ಮತ್ತೆ ಸ್ವಾತಂತ್ರ್ಯೋತ್ಸವ. ಹುಟ್ಟುತ್ತಲೇ ಪ್ರತಿಯೊಬ್ಬ ಭಾರತೀಯನೂ ಜಾತಿ ಉಪಜಾತಿಗಳ ಉಕ್ಕಿನ ಕೋಟೆಯೊಳಗೆ ಬಂದು ಬೀಳುವ- ಅಂದರೆ ಆಯ್ಕೆಯಿಲ್ಲದ ಸ್ವಾತಂತ್ರ್ಯಹೀನನಾಗೇ ಹುಟ್ಟುವ- ಈ ದೇಶದಲ್ಲಿ ಯಾವ ಸ್ವಾತಂತ್ರ್ಯದ ಸೊಲ್ಲು ತೆಗೆಯೋಣ? ರಕ್ತತರ್ಪಣವಿಲ್ಲದೆ ಮನುಷ್ಯನ ಇತಿಹಾಸದಲ್ಲಿ ಯಾವ ಜನಸಮೂಹವೂ ಸ್ವಾತಂತ್ರ್ಯ ಗಳಿಸಿಲ್ಲವೇನೋ! ನಮ್ಮಲ್ಲಿ ಬಾಪೂಜಿ ನೀಡಿದ ಅಹಿಂಸಾತ್ಮಕ ಜನಾಂದೋಲನದ ಹೆಮ್ಮೆಯೂ, ವಿಭಜನೆಯ ಘೋರ ಹತ್ಯಾಕಾಂಡದಲ್ಲಿ ಭಸ್ಮವಾಗಿಹೋಯಿತಲ್ಲ! ರಕ್ತ ಕುಡಿದ ಸ್ವಾತಂತ್ರ್ಯ, ಆ ರಕ್ತವನ್ನು ಜೀಣರ್ಿಸಿಕೊಂಡಿದ್ದು ಅಪರೂಪ. ಆದರೆ ರಕ್ತದಾಹದ ಭೂತ- ನಮ್ಮ ದೇಶದಲ್ಲಾಗುತ್ತಿರುವಂತೆ- ಮತ್ತೆ ಮೇಲೆದ್ದರೆ ಈ ಸ್ವಾತಂತ್ರ್ಯವೂ ನಮ್ಮ ಕೈ ತಪ್ಪಿ ಹೋಗಬಹುದು. ಮಂಟೊ ಯಾರಿಗೋಸ್ಕರ ಬರೆದ ಎಂಬುದಕ್ಕೆ ಬಹುಶಃ ಉತ್ತರ ಇಲ್ಲಿದೆ. ಅದು ನನಗಾಗಿ, ನಿಮಗಾಗಿ. ನಮ್ಮ ಸ್ವಾತಂತ್ರ್ಯ ನಮ್ಮದಾಗಿ ಜತನವಾಗಿ ಉಳಿಯಬೇಕಿದ್ದರೆ, ನಾವೂ ಅವನಂತೆ ನಂನಮ್ಮ ಹೃದಯಗಳಲ್ಲಿ, ಜಾತಿ ಭಾಷೆ ಮತ ಧರ್ಮಗಳ ಗಡಿ ದಾಟಿ, ಯಾರಿಗೂ ಸೇರದ, ಯಾವ ಹೆಸರಿರದ ತಟಸ್ಥ ಭೂಮಿಯ ಪುಟ್ಟ ಪುಟ್ಟ ತುಣುಕುಗಳನ್ನು (No man’s land) ನಮ್ಮದಾಗಿಸಿಕೊಳ್ಳಬೇಕು ಎಂದು ಒತ್ತಾಯಿಸುತ್ತಿದ್ದಾನೆ ಮಂಟೊ. ಅವನೆಂದೂ ಬಾಯಿ ಬಿಟ್ಟು ಎಲ್ಲ ಬಲ್ಲವನ ಧಿಮಾಕಿನಲ್ಲಿ, ಉಪದೇಶದ ಗತ್ತಿನಲ್ಲಿ ಬರೆದವನಲ್ಲ. ಹಾಗಾಗಿಯೇ ಮನುಷ್ಯರಲ್ಲಿ ತಾನಿಟ್ಟಿದ್ದ ಅಚಲ ಅನಘ್ರ್ಯ ಶ್ರದ್ಧೆಯ ಮೂಲಕ ಸೂಚಿಸುತ್ತಾನೆ… ಸುಲಭವಲ್ಲ. ಯಾವುದೂ ಸುಲಭವಲ್ಲ. ಆದರೆೆ- ಬೇರೆ ದಾರಿಯಿದೆಯೇ?… ಕೊನೆಯಲ್ಲಿ ಎರಡೇ ಸಾಲಿನ ಅವನದೊಂದು ಕಿರುಗತೆ: ಹೊಟ್ಟೆಯನ್ನು ನೇರವಾಗಿ ಸ್ಪಷ್ಟವಾಗಿ ಸೀಳುತ್ತಾ ಸಾಗಿದ ಆ ಚಾಕು, ಮುನ್ನಡೆದು ಅವನ ಪೈಜಾಮಾದ ಲಾಡಿಯನ್ನೂ ತುಂಡರಿಸಿ, ನಿಲ್ಲಲು ಆಧಾರವಿಲ್ಲದ ಪೈಜಾಮಾ ಜಾರಿ ಬಿತ್ತು. ಚಾಕು ಹಿಡಿದವನು ಒಂದು ಗಳಿಗೆ ದಿಟ್ಟಿಸಿ ನೋಡಿ ಪಶ್ಚಾತ್ತಾಪದಿಂದ ಲೊಚಗುಟ್ಟಿದ: `ಓ… ಮಿಷ್ಟೇಕ್…’   12, 19, 26 ಆಗಸ್ಟ್, 2 ಸೆಪ್ಟೆಂಬರ್ 2005  ]]>

‍ಲೇಖಕರು G

March 17, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Appi

    Shankar Sir,
    Istakke nillisa bedi, innu hechu hechu ei tharahada vicharagalu yellarigu tiliya beku, eiga naavu iruva paristitiyalli.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: