ಎನ್ ಎಸ್ ಶ೦ಕರ್ ಕಾಲ೦: ಸಿಗರೇಟು ಮತ್ತು ಕೆಲಸವಿಲ್ಲದ ಕುಂಬಾರ

ಇದಕ್ಕಿಂತ ಮುಟ್ಠಾಳತನವಿದೆಯೇ ?

ಇನ್ನು ಮುಂದೆ-ಆಗಸ್ಟ್ 1ರಿಂದ- ಬೆಳ್ಳಿತೆರೆಯ ಮೇಲೆ ಬೀಡಿ ಸಿಗರೇಟ್ ಸೇದುವುದನ್ನು ತೋರಿಸುವಂತಿಲ್ಲ! ಇದು ಕೇಂದ್ರ ಸೆನ್ಸಾರ್ ಮಂಡಳಿಯ ಹೊಸ ಫರ್ಮಾನು !! ಸ್ವತಃ ಮಂಡಳಿ ಅಧ್ಯಕ್ಷೆಯಾದ ಶರ್ಮಿಳಾ ಟಾಗೂರ್ ಇದು ಅತಿರೇಕದ ನಿರ್ಧಾರ ಎಂಬ ಉದ್ಗಾರವೆಳೆದಿದ್ದರೂ, ಆದೇಶ ಇನ್ನೂ ರದ್ದಾಗಿಲ್ಲವಾದ್ದರಿಂದ ಈ ಮೂರ್ಖ ಕಟ್ಟಪ್ಪಣೆ ಎಬ್ಬಿಸಿರುವ ಪ್ರಶ್ನೆಗಳತ್ತ ಗಮನ ಹರಿಸೋಣ. ಮೊದಲಿಗೆ ಈಗ- ಈ ಗಳಿಗೆ- ಇಂಥದೊಂದು ತೀರ್ಮಾನಕ್ಕೆ ಇದ್ದ ತುರ್ತು ಪ್ರೇರಣೆಯೇನು? ಯಾರೂ ವಿವರಿಸುವ ಗೋಜಿಗೆ ಹೋಗಿಲ್ಲ,- ಹೀರೋಗಳು ಸ್ಟೈಲಾಗಿ ಸಿಗರೇಟ್ ಸೇದುವುದನ್ನು ನೋಡುವ ನಮ್ಮ ಯುವಕರು ಆ ಚಟಕ್ಕೆ ಬಲಿಯಾಗುತ್ತಾರೆ ಎಂಬ ಸವಕಲು ಸಮಜಾಯಿಷಿಯ ಹೊರತು! (ಹೀರೋ ಸರಿ, ಆದರೆ ನಮ್ಮ ವಿಲನ್ ಯಾವ ಪಾಪ ಮಾಡಿದ್ದ, ಹೊಗೆ ಬಿಡುವ ಹಕ್ಕು ಕಳೆದುಕೊಳ್ಳುವುದಕ್ಕೆ?!)… ಇರಲಿ, ಈ ನಿರ್ಧಾರ ಈಗಲೇ ಯಾಕೆ? ಮುಂಚೆ ಅಥವಾ ಇನ್ಯಾವಾಗಲೋ ಯಾಕಲ್ಲ? ಯಾರೂ ಹೇಳುತ್ತಿಲ್ಲ. ಅದೂ ಹೋಗಲಿ, ಸೆನ್ಸಾರ್ ನ ಈ ನಿರ್ಧಾರಕ್ಕೇನಾದರೂ ವಾಸ್ತವಿಕ ಆಧಾರವಿದೆಯೇ?… ಎಳವೆಯಲ್ಲಿ ಕುತೂಹಲಕ್ಕೆ ಒಂದೆರಡು ದಮ್ಮು, ಖೊಕ್ ಖೊಕ್ ಕೆಮ್ಮು; ಪ್ರಾಯ ಬಲಿತಾಗ ಸ್ವಂತಿಕೆಯ ಸಂಕೇತವಾಗಿ- ಬಂಡಾಯದ ಘೋಷಣೆಯಾಗಿ ಕೈ ಬೆರಳುಗಳ ನಡುವೆ ಪ್ರತ್ಯಕ್ಷವಾಗುವ ಹಮ್ಮು; ಮುಂದಕ್ಕೆ ಬಿಡಬೇಕೆನಿಸದ ಚಟವಾಗಿ ಸಿಗರೇಟ್ ಬೀಡಿ ಅಂಟಲು ನೂರು ಕಾರಣ… ಸಿನಿಮಾ ಹೀರೋಗಳಿಂದ ದೊರೆಯುವ ಕುಮ್ಮಕ್ಕು ಆ ನೂರರಲ್ಲಿ ಒಂದು ಕಾರಣವಿರಬಹುದಷ್ಟೇ. ಅದು ಬಿಡಿ, ಧೂಮಪಾನದ ಸರಿ ತಪ್ಪುಗಳ ವಿವೇಚನೆಗೆ ಇದು ವೇದಿಕೆಯಲ್ಲ; ಆದರೆ ತೆರೆಯ ಮೇಲೆ ಏನನ್ನಾದರೂ ತೋರಿಸುವ ಅಥವಾ ಬಿಡುವ ನಮ್ಮ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಆ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಬಯಸುವ ಶಕ್ತಿಗಳ ವಿಚಾರವಿದು. ಈ ಸೆನ್ಸಾರ್ ದೊಣೆನಾಯಕರಿಗೆ ಬೇರೆ ಯಾವುದೂ ಯಾಕೆ ಕಣ್ಣಿಗೆ ಬಿದ್ದಿಲ್ಲ? ಈಗಿನ ಯಾವುದೇ ಹಿಂದಿ ಚಿತ್ರ ನೋಡಿ, ಅಲ್ಲಿ ಅದಮ್ಯ ಲೈಂಗಿಕ ದಾಹದ ನರಳಿಕೆಯಂತೆ ಕಾಣುವ ಒಂದು ಐಟಂ ಸಾಂಗ್ ಇರಲೇಬೇಕು. ಅದಕ್ಕಿಂತ ಹೆಚ್ಚಾಗಿ, ಮನೆ ಮನೆಗಳಲ್ಲಿ ಮಕ್ಕಳು ಮರಿ ಸೇರಿದಂತೆ ಯಾವ ನಿರ್ಬಂಧವಿಲ್ಲದೆ ನೋಡುವ ಟೀವಿಯಲ್ಲಿ ಆ ರೀಮಿಕ್ಸ್ ಹಾಡು ಕುಣಿತದ ಅತಿರೇಕ! ಆದರೆ ಸೆನ್ಸಾರಿನ ಯಾವ ಉದ್ದ ಕೈಯೂ ಅಲ್ಲಿಯವರೆಗೆ ತಲುಪುವುದಿಲ್ಲ. ಸುಮ್ಮನೆ ಮಾತಾಡುತ್ತಾರೆ ಅಷ್ಟೇ, ಅಶ್ಲೀಲ ಟೀವಿ ಕಾರ್ಯಕ್ರಮಗಳಿಗೆ ಸೆನ್ಸಾರ್ ಇರಬೇಕು ಅಂತ. ಆದರೆ ಈವರೆಗೆ ಯಾರಾದರೂ ಒಂದು ಹೆಜ್ಜೆ ಮುಂದಿಡಲು ಆಗಿದೆಯೇ? ಇಲ್ಲ. ಯಾಕೆಂದರೆ ಈಗಿನ ಟೀವಿ ಬರೀ ಟೀವಿಯಲ್ಲ- ಅದರ ಹಿಂದೆ ಅಂತಾರಾಷ್ಟ್ರೀಯ ವಾಣಿಜ್ಯ ಹಿತಾಸಕ್ತಿಗಳ ಜಾಲವೇ ಇದೆ! ಇಂದು ಸೆಕ್ಸ್ ಅನ್ನುವುದು ಜಾಗತಿಕ ಮಾರುಕಟ್ಟೆಯ ಮಂತ್ರ- ವ್ಯಾಪಾರದ ನುಡಿಗಟ್ಟು. ಮತ್ತು ಟೀವಿ ಚಾನಲ್, ಈ ಮಾರುಕಟ್ಟೆ ಯುದ್ಧದ ಅಗ್ರಗಣ್ಯ ಅಸ್ತ್ರ. ಜಾಗತೀಕರಣ ನಮ್ಮಂಥ ಎಲ್ಲ ದೇಶಗಳ ಮೇಲೆ ಬಲವಂತವಾಗಿ ಹೊರೆಸಿರುವ ಬಳುವಳಿಯಿದು. ಅದನ್ನು ತಡವಲು ಹೋದರೆ ಕಾಣದ ಮಹಾ ಪೆಡಂಭೂತಗಳನ್ನೆಲ್ಲ ಮೈಮೇಲೆ ಎಳೆದುಕೊಳ್ಳಬೇಕಾಗುತ್ತದೆ! ಅಷ್ಟು ಧೈರ್ಯ ಯಾರಿಗಿದೆ? ತೆರೆಯ ಮೇಲೆ ಸಿಗರೇಟು ತೋರಿಸಬೇಡಿ ಅನ್ನುವ ಇದೇ ಜನ ಒಮ್ಮೆ ಸಿಗರೇಟು ಕಂಪನಿಗಳನ್ನು ಮುಚ್ಚಿಸುವ ಮಾತಾಡಿ ನೋಡಲಿ, ಆಗ ತಾವು ಕೈ ಹಾಕಿದ್ದು ಯಾವ ಹುತ್ತಕ್ಕೆ ಎಂದು ಅರಿವಾಗುವ ಮೊದಲೇ ಘಟಸರ್ಪದ ಕಡಿತಕ್ಕೆ ಪ್ರಾಣ ಹೋಗಿಬಿಟ್ಟಿರುತ್ತದೆ!… ಇನ್ನೂ ಗಹನ ಸಮಸ್ಯೆಗಳೂ ಇವೆ. ಯಾವುದೇ ಗಂಭೀರ ನಿರ್ದೇಶಕ (ಆರ್ಟ್ – ಕಮರ್ಷಿಯಲ್ ಗೋಜು ಇಲ್ಲಿ ಬೇಡ) ತನ್ನ ಕಥೆಯ, ಹಾಗೂ ಆ ಕಥೆಯನ್ನು ತುಂಬಿಕೊಂಡ ಮನುಷ್ಯರ ಚಹರೆಯ ಸಾಕ್ಷಾತ್ಕಾರಕ್ಕಾಗಿ ಸೆಣೆಸಬೇಕಾಗುತ್ತದೆ. ಅಂತರಂಗ, ಬಹಿರಂಗದ ಓರೆಕೋರೆಗಳನ್ನು ಧ್ಯಾನಿಸಿ ದಕ್ಕಿದಷ್ಟನ್ನು ಪ್ರಾಮಾಣಿಕವಾಗಿ, ಸ್ವಾರಸ್ಯವಾಗಿ, ದಿಟ್ಟ ಗೆರೆಗಳಲ್ಲಿ ಮೂಡಿಸಬೇಕಾಗುತ್ತದೆ. ಒಂದು ತೀರಾ ಸರಳ ಉದಾಹರಣೆ ನೋಡಿ: ಚಾಮಯ್ಯ ಹೊತ್ತಾರೆ ಹೊಲದ ಕಡೆ ಹೊರಟಾಗ ಅವನ ಎತ್ತುಗಳು ನಿತ್ಯದ ಅಭ್ಯಾಸದಂತೆ ದ್ಯಾಮವ್ವನ ಟೀ ಅಂಗಡಿಂು ಮುಂದೆ ನಿಂತವು, ತಮ್ಮ ಯಜಮಾನ ಚಾ ಹೀರಿ ಬೀಡಿ ಎಳೆಯದೆ ಅಲ್ಲಿಂದ ಕಾಲ್ತೆಗೆಯುವುದಿಲ್ಲ ಎಂಬ ದಿವ್ಯ ಜ್ಞಾನದಿಂದಾಗಿ.. ಇದನ್ನು ತೆರೆಯ ಮೇಲೆ ತರುವಾಗ- ನಮ್ಮ ಯುವಕರ ಹಿತದೃಷ್ಟಿಯಿಂದ- ನಾನು ಚಾಮಯ್ಯನ ಬೀಡಿ ಚಟ ಬಿಡಿಸಿಬಿಡಲೇ?!…. ಕಮರ್ಷಿಯಲ್ ಸಿನಿಮಾ ಅಂದ ಕೂಡಲೇ ಅಷ್ಟು ಲಘುವಾಗಿ ನೋಡಬೇಡಿ ಸ್ವಾಮಿ. ಇಂದು ನಮ್ಮ ಸಮೂಹ ಸಂಸ್ಕೃತಿಯ ನಿಜ ಅಭಿವ್ಯಕ್ತಿ ಕಾಣುವುದು ಸಿನಿಮಾದಲ್ಲೇ. ನಿಜಜೀವನದಲ್ಲಿ ಯಾವನೂ ಹತ್ತು ಜನರನ್ನು ಹೊಡೆದುರುಳಿಸಲು ಸಾಧ್ಯವಿಲ್ಲ, ಒಪ್ಪಿಕೊಳ್ಳೋಣ. ಆದರೆ, ತೆರೆ ಮೇಲೆ ಹತ್ತು ಜನರನ್ನು ಬಡಿದು ಬಿಸಾಕುವ ಹೀರೋ- ತನ್ನ ಸಾಹಸದಲ್ಲಿ ನನ್ನನ್ನೂ ಒಳಗೊಂಡು, ನನ್ನ ಸುಪ್ತ ಆಸೆಗಳನ್ನು ಈಡೇರಿಸಿ ಸಂತೋಷಪಡಿಸಿ ಕಳಿಸುತ್ತಾನೆ. ನಮ್ಮ ಬದುಕು ಬರೀ ಒತ್ತಡಗಳನ್ನು ಪೇರಿಸುತ್ತಾ ಹೋಗುತ್ತದೆ, ಬಿಡುಗಡೆಯ ದಾರಿಗಳನ್ನು ಕೊಡುವುದಿಲ್ಲ. ಈ ಸನ್ನಿವೇಶದಲ್ಲಿ, ಸಿನಿಮಾ ಹಗಲುಗನಸನ್ನೇ ಸೃಷ್ಟಿಸಲಿ, ಆದರೆ ಆ ತಣಿವಿನ ಮೂಲಕವಾದರೂ ಒಂದು ಸುರಕ್ಷಿತ ನಿಃಶ್ವಾಸ ಸಾಧ್ಯವಾಗುವುದಲ್ಲ, ಅದನ್ನೇಕೆ ಬೇಡ ಅನ್ನುತ್ತೀರಿ? ನಮ್ಮ ಸಮಾಜ ಇಂದು ತೀರಾ ಹಿಂಸಾಮಯವಾಗಿಲ್ಲ ಅನ್ನುವುದಿದ್ದರೆ ಅದಕ್ಕೆ ನಮ್ಮ ಪಲಾಯನವಾದಿ ಸಿನಿಮಾ ನೀಡಿರುವ ಕೊಡುಗೆ ಕಮ್ಮಿಯಲ್ಲ. ಇದನ್ನು ಓದಿ ಸಿನಿಕರು ಹುಳಿ ನಗೆ ಬೀರುವ ಮುನ್ನ ನೆರೆಯ ಪಾಕಿಸ್ತಾನದ ಕಡೆ ಒಮ್ಮೆ ನೋಡಬೇಕೆಂದು ಕೋರುತ್ತೇನೆ. ಅಲ್ಲಿಯ ಪ್ರಸಿದ್ಧ ನಾಟ್ಯ ಕಲಾವಿದೆಯೊಬ್ಬಳು (ಗಾಂಧೀಜಿಗೆ ಪ್ರಿಯವಾದ `ರಘುಪತಿ ರಾಘವ ರಾಜಾರಾಂ’ ಗೀತೆಗೆ ಬ್ಯಾಲೆ ಸಂಯೋಜಿಸಿ ಪ್ರದರ್ಶಿಸಿದ್ದಾಳೆ ಈಕೆ) ಆನಂದ್ ಪಟವರ್ಧನ್ರ ಸ್ವರ್ಣಕಮಲವಿಜೇತ ಸಾಕ್ಷ್ಯಚಿತ್ರ ವಾರ್ ಆಂಡ್ ಪೀಸ್ನಲ್ಲಿ ತನ್ನ ನಾಡಿನ ಇಂದಿನ ಸಾಂಸ್ಕೃತಿಕ ಬಿಕ್ಕಟ್ಟಿನ ಬಗ್ಗೆ ಹೀಗೆ ಹೇಳುತ್ತಾಳೆ: ಪಾಕಿಸ್ತಾನದಲ್ಲಿ ಸಿನಿಮಾ ಇಲ್ಲ, ನಾಟಕ ಇಲ್ಲ, ಹಾಡು ನೃತ್ಯಗಳಿಲ್ಲ. ಒಟ್ಟಾರೆ ಹತ್ತು ಜನ ಒಟ್ಟಿಗೆ ಕಲೆತು ಹರಟುವ, ನಗುವ, ಜಗಳವಾಡುವ ಸಂದರ್ಭವೇ ಇಲ್ಲ. ಹಾಗಾಗಿ ಅಲ್ಲಿನ ಮನೆ ಮನೆಗಳಲ್ಲಿ, ಬೀದಿ ಬೀದಿಗಳಲ್ಲಿ, ರಾಜಕೀಯ, ಧರ್ಮ- ಎಲ್ಲೆಲ್ಲೂ ಮೇರೆ ಮೀರಿದ ಕ್ರೌರ್ಯ ಮತ್ತು ಹಿಂಸೆ ತಾಂಡವವಾಡುತ್ತಿದೆ. ಇಡೀ ದೇಶದ ಜನತೆ, ಯಾವ ಕ್ಷಣದಲ್ಲೂ ಸ್ಫೋಟಿಸಬಲ್ಲ ಹಿಂಸೆಯ ಅಗ್ನಿಪರ್ವತದ ಮೇಲೇ ಕುಳಿತಿದ್ದಾರೆ…. ಆ ಸ್ಥಿತಿ ನಮಗೆ ಬೇಕೇ? ಆಮೇಲೆ ನಮ್ಮ ಸೆನ್ಸಾರ್ ಈಗ ಹೊರಡಿಸಿರುವ ಸುತ್ತೋಲೆಗೆ ಯಾವ ವಿವರಣೆಯನ್ನೂ, ಸಮರ್ಥನೆಯನ್ನೂ ಕೊಡುವ ಸ್ಥಿತಿಯಲ್ಲಿಲ್ಲ ಎನ್ನುವುದು ಇನ್ನೊಂದು ಅಪಾಯದ ಕಡೆ ನಮ್ಮನ್ನು ಎಚ್ಚರಿಸಬೇಕು. ಸಮರ್ಥನೆಯೇ ಇಲ್ಲದ ಕಟ್ಟಳೆ- ಸರ್ವಾಧಿಕಾರದ ಮೊದಲ ಲಕ್ಷಣ. ಇದೇ ತಿಂಗಳಿನಲ್ಲಿ ಸರಿಯಾಗಿ ಮೂವತ್ತು ವರ್ಷಗಳ ಹಿಂದೆ ಹೇರಲ್ಪಟ್ಟ ಎಮರ್ಜೆನ್ಸಿಯ ಸಮಯದಲ್ಲೂ ಹೀಗೇ ಚಲನಚಿತ್ರಗಳಲ್ಲಿ ಸೆಕ್ಸ್ ಹಾಗೂ ಹಿಂಸೆಗೆ ಅವಕಾಶವಿಲ್ಲ ಎಂದು ಸಾರಲಾಗಿತ್ತು! ಅದು ಎಷ್ಟೋ ವಾಸಿ, ಇದು ಅದಕ್ಕಿಂತ ಕಡೆ! ಹೇಳುತ್ತಾರಲ್ಲ, ಕೆಲಸವಿಲ್ಲದ ಕುಂಬಾರ ಅದೇನೋ ತಟ್ಟಿದ ಅಂತ, ಹಾಗೆ!…   24 ಜೂನ್ 2005 ***

ಪ್ರೆಸ್ ಕ್ಲಬ್ ಪ್ರಕಾಶನ ಹೊರತಂದಿರುವ ಈ ಕೃತಿಯ ಆಯ್ದ ಭಾಗಗಳು ಇನ್ನು ಮುಂದೆ ವಾರಕ್ಕೆ ಎರಡು ಬಾರಿ ‘ಅವಧಿ’ಯಲ್ಲಿ ಪ್ರಕಟಗೊಳ್ಳಲಿದೆ.

ಈ ಕೃತಿ ಐ ಬಿ ಎಚ್ ಪ್ರಕಾಶನದ ಆನ್ಲೈನ್ ಮಳಿಗೆಯಲ್ಲೂ ಲಭ್ಯ

 ]]>

‍ಲೇಖಕರು G

February 29, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. V.N.Laxminarayana

    ನಮ್ಮ ಪತ್ರಕರ್ತರಿಗೆ, ಬರಹಗಾರರಿಗೆ ತಮ್ಮ ತೆವಲುಗಳಿಗೆ ಧಕ್ಕೆ ಬಾರದಿದ್ದರೆ ಸಾಕು ಪ್ರಜಾಪ್ರಭುತ್ವ ಜೀವಂತವಾಗಿದೆ ಅನ್ನಿಸಿಬಿಡುತ್ತದೆ. ನಿಮ್ಮ ಕಾಳಜಿ ತಂಬಾಕು ಸೇವನೆಯ ಹುಸಿ ನಿಷೇಧದ ವಿರುದ್ಧ ಇದ್ದು ನಿಜವಾದ ನಿಷೇಧದ ಪರವಾಗಿದ್ದರೆ ಒಳಿತಲ್ಲವೆ. ತಂಬಾಕು, ಮದ್ಯಗಳನ್ನು ನೈತಿಕವಾಗಿ ನೋಡುವುದಕ್ಕಿಂತ ಉದ್ಯಮಪತಿಗಳ ಹಿತ ಕಾಯುವ, ಬಡಜನರ ಬದುಕಿಗೆ ವಿರುದ್ಧವಾದ, ನಿಮ್ಮಂಥ ಮಧ್ಯಮವರ್ಗೀಯರ(ಸ್ವಯಂ ವಿನಾಶದ)ಸ್ವಾತಂತ್ರ್ಯಪ್ರಿಯತೆಯನ್ನು ಅಧಿಕೃತಗೊಳಿಸುವ ಕಾನೂನುಬದ್ಧ ವಿಷಗಳೆಂದು ನೋಡಿದರೆ ಅವುಗಳ ಉಪಯೋಗವನ್ನು ಯಾವುದೇ ರೂಪದಲ್ಲಿ ನಿಷೇಧಿಸುವುದರ ಮಹತ್ವ ಅರ್ಥವಾಗಬಹುದು. ಪ್ರತಿ ತಂಬಾಕು-ಮದ್ಯ ಚಟಗಾರನ ಹಿಂದೆ ತಂದೆಯೊಂದಿಗಿನ ಮುಗಿಸದ ಯುದ್ಧ,ಅಥವಾ ಸ್ವಯಂವಿನಾಶದ ಜೀವನ ಯೋಜನೆ ಇರುತ್ತದೆಯೆಂದು ಹೇಳುತ್ತಾರೆ. ಪ್ರತಿ ಕುಡುಕನ ಮನೆ ಮಂದಿ ದಿನವೂ ನರಕ ಅನುಭವಿಸುತ್ತಾರೆ ಎಂಬುದು ನಿಮ್ಮಂಥವರ ಮನಸ್ಸನ್ನು ಕಲಕಬೇಕು.’ತಂಬಾಕುಸೇವನೆ ಆರೋಗ್ಯಕ್ಕೆ ಹಾನಿಕರ’.’ಹೆಂಡ ಆತ್ಮವನ್ನು ನಾಶಮಾಡುತ್ತದೆ-ಗಾಂಧೀಜಿ’ ಎಂದೆಲ್ಲಾ ಪ್ರಚಾರ ಮಾಡುತ್ತಾ, ಈ ಉದ್ಯಮಗಳನ್ನು ಕಾನೂನುಬದ್ಧಗೊಳಿಸಿ ಅವುಗಳ ಫಲಾನುಭವಿಗಳಾಗುವ ರಾಜಕೀಯವನ್ನು ನಿಮ್ಮಂಥವರು ಮನಗಂಡರೆ, ನಿಮ್ಮ ಪ್ರಜಾಪ್ರಭುತ್ವ ಪ್ರೀತಿ ನಿಜವಾದುದಾಗುತ್ತದೆ. ಇಲ್ಲದಿದ್ದರೆ ಸೆನ್ಸಾರ್ ಮಂಡಲಿಯ ಸಿಗರೇಟ್ ನಿಷೇಧದಂತೆ ನಿಮ್ಮ ವಿರೋಧವೂ ಮೇಲ್ಪದರದ ತೇಪೆ ಅಷ್ಟೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: