‘ಎಮ್ಮೆಗುಂಡಿ’ಯಲ್ಲಿ ನಾಟಕ, ಚಾರಣ, ಕಾಡೂಟ…

ಪ್ರಸನ್ನ ಚಲಂ

“ಎಮ್ಮೆ ಗುಂಡಿಯಲ್ ಒಂದು ದಿನ…” ಇದನ್ನು ಕೇಳುವಾಗಲೇ ಒಂದು ಹೊಸತನ ಎದ್ದು ಕಾಣುತ್ತದೆ. ಹಾಗಂತ ಇದೊಂದು ಕಾರ್ಯಕ್ರಮ. ಒಂದು ಕಾರ್ಯಕ್ರಮ ಮಾತ್ರವಲ್ಲ. ಮೂರು ಕಾರ್ಯಕ್ರಮಗಳ ಒಂದು ಗುಚ್ಚ.

ಕಾರ್ಯಕ್ರಮ ನಡೆಯುವ ಜಾಗದ ಹೆಸರು “ಎಮ್ಮೆಗುಂಡಿ” ಎಲ್ಲಿದೆ ಈ ಎಮ್ಮೆ ಗುಂಡಿ..? ಎಂಬ ಪ್ರಶ್ನೆಯೆ ಕಾರ್ಯಕ್ರಮ ನಡೆಯುವ ಜಾಗಕ್ಕೆ ನಮ್ಮನ್ನು ಸೆಳೆಯುತ್ತದೆ. ಎಮ್ಮೆ ಗುಂಡಿ ಇರುವುದು ಹಾಡ್ಲಹಳ್ಳಿ ಎಂಬ ಊರಿನ ಬಳಿ.

ಖ್ಯಾತ ಸಾಹಿತಿ ಹಾಡ್ಲಹಳ್ಳಿ ನಾಗರಾಜ್ ಅವರ ಮೂಲಕ ‘ಹಾಡ್ಲಹಳ್ಳಿ’ ಎಂಬ ಊರಿನ ಹೆಸರನ್ನು ಏನೋ ಕೇಳಿದ್ದೇವೆ. ಆಗಾಗ ಹಾಡ್ಲಹಳ್ಳಿ ಎಲ್ಲಿದೆ ಎಂಬ ಪ್ರಶ್ನೆ ಬಂದಾಗ ಅದು ಸಕಲೇಶಪುರ ತಾಲೂಕಿನ ಹೆತ್ತೂರಿನ ಬಳಿ ಇದೆ ಎಂಬುದು ಕುತೂಹಲವಿದ್ದವರಿಗೆಲ್ಲ ತಿಳಿದಿದೆ.

ಈಗ ಹಾಡ್ಲಹಳ್ಳಿ ಪಕ್ಕದಲ್ಲಿ ಇರುವ, ಅದೇ ಊರಿಗೆ ಸೇರಿರುವ ‘ಎಮ್ಮೆಗುಂಡಿ’ ಎಂಬ ಜಾಗ ಸಾಹಿತ್ಯಾಸಕ್ತರ ಕುತೂಹಲ ಕೆರಳಿಸಿದೆ.

“ನಿಲುವಂಗಿಯ ಕನಸು” ಹಾಡ್ಲಹಳ್ಳಿ ನಾಗರಾಜ್ ಅವರ ಮಹತ್ವದ ಕಾದಂಬರಿ. ಮಲೆನಾಡಿನ ರೈತ ಕುಟುಂಬವೊಂದು ಈ ಕಾದಂಬರಿಯ ಕೇಂದ್ರ. ಆ ಕೇಂದ್ರದ ಮೂಲಕವೇ ಇಡೀ ದೇಶದ ರೈತ ಸಮುದಾಯದ ದನಿಯನ್ನು ಪ್ರತಿನಿಧಿಸುವುದರಿಂದ ಈ ಕಾದಂಬರಿಯ ಸಾಹಿತ್ಯ ಕ್ಷೇತ್ರದಲ್ಲಿ ಬಹಳ ಮಹತ್ವವನ್ನು ಪಡೆದುಕೊಂಡಿದೆ.

ಈ ಕಾದಂಬರಿಯನ್ನು ಖ್ಯಾತ ರಂಗಕರ್ಮಿ ಪ್ರಸಾದ್ ರಕ್ಷಿದಿ ಅವರು ರಂಗರೂಪಕ್ಕೆ ತಂದಿದ್ದರು. ಹಿರಿಯ ರಂಗಕರ್ಮಿ ಉಲಿವಾಲ ಮೋಹನ್ ಕುಮಾರ್ ಅವರು ನಿರ್ದೇಶನ ಮಾಡಿ ಈಗಾಗಲೇ ಬೆಂಗಳೂರು ಸೇರಿದಂತೆ ಹಲವಾರು ಕಡೆ ಯಶಸ್ವಿ ಪ್ರಯೋಗವನ್ನು ಕಂಡಿದೆ.

ಈಗ ಆ ನಿಲುವಂಗಿಯ ಕನಸು ಹಾಡ್ಲಹಳ್ಳಿಯ ಎಮ್ಮೆ ಗುಂಡಿಯಲ್ಲಿ ನಡೆಯುತ್ತಿದೆ. ಈ ಬಾರಿಯ ವಿಶೇಷವೆಂದರೆ ನಿಲುವಂಗಿಯ ಕನಸು ಕಾದಂಬರಿಯಲ್ಲಿ ನಡೆಯುವ ಅಷ್ಟೂ ಸನ್ನಿವೇಶಗಳು, ಜಾಗಗಳು ಇರುವ ಜಾಗದಲ್ಲಿ ಅಂದರೆ ಹಾಡ್ಲಹಳ್ಳಿ, ಎಮ್ಮೆ ಗುಂಡಿ, ಕಾರೆಕಾಯ್ ಹಡ್ಲು ಮುಂತಾದ ಜಾಗಗಳಲ್ಲಿ ಪ್ರಮುಖವಾದ ಒಂದು ಜಾಗ ‘ಎಮ್ಮೆಗುಂಡಿ’ಯಲ್ಲಿ ಈ ನಾಟಕ ನಡೆಯುತ್ತಿದೆ.

ಎಮ್ಮೆಗುಂಡಿ ಎಂದರೆ ನಮ್ಮ ಪಶ್ಚಿಮಘಟ್ಟದ ಸಾಲಿನಲ್ಲಿ ಬರುವ ಒಂದು ಸಣ್ಣ ಪ್ರದೇಶ. ಆ ಸಣ್ಣ ಪ್ರದೇಶ ಎತ್ತರದ ಜಾಗದಲ್ಲಿದೆ ಮತ್ತು ಅಲ್ಲಿಂದ ಕುಮಾರಪರ್ವತ, ಪುಷ್ಪಗಿರಿ, ಮುಂಜರಾವಾದ್ ಕೋಟೆ, ಹೊಸಳ್ಳಿ ದೇವರ ಬೆಟ್ಟ ಸೇರಿದಂತೆ ಬಹುತೇಕ ಪಶ್ಚಿಮ ಘಟ್ಟ ಕಾಣಿಸುತ್ತದೆ. ಅಲ್ಲಿ ಕುಳಿತು ಒಂದು ನಾಟಕವನ್ನು ನೋಡುವುದು ಎಂದರೆ ಅದರ ಅನುಭೂತಿಯೇ ಬೇರೆ. ಆ ಖುಷಿಯನ್ನು ಯಾವ ಪದಗಳಲ್ಲಿ ವಿವರಿಸುವುದು..?

ಕಾರ್ಯಕ್ರಮದ ರೂಪು ರೇಷೆಯೂ ಕೂಡ ಚೆನ್ನಾಗಿದೆ. ಬೆಳಗಿನ ಎಂಟು ಗಂಟೆಯ ಹಿಮ ಕರಗುವ ಸಮಯದಲ್ಲಿ ಹಾಡ್ಲಹಳ್ಳಿಯ ತೊಡಮನಹರೆ ಎಂಬ ಜಾಗದಿಂದ ಚಾರಣ ಆರಂಭವಾಗುತ್ತದೆ. ಹೆತ್ತೂರಿನಿಂದ ತೊಡಮನಹರೆ ಎಂದರೆ ಏಳೆಂಟು ಕಿಲೋಮೀಟರ್ ದೂರ. ಅಲ್ಲಿಗೆ ವಾಹನದಲ್ಲಿ ಹೋಗುವುದೇ ಒಂದು ಚಂದ. ತೊಡಮನ ಹರೆ ತಲುಪಿದ ಮೇಲೆ ಅಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿ ಸೀದಾ ಕಾಡನಡುವೆ ನುಗ್ಗಿ ‘ಎಮ್ಮೆಗುಂಡಿ’ಯ ಕಡೆಗೆ ಸಾಗ ಬೇಕು. ಸ್ವಲ್ಪ ದೂರಕ್ಕೆ ಸಿಗುವ ಹನ್ನೆರಡು ಗದ್ದೆ ಎಂಬ ಬಯಲಿನ ಜಾಗದಲ್ಲಿ ಸಿಗುವ ಒಂದು ಸಣ್ಣ ತೊರೆ ಬೆಳ್ಳಂಬೆಳಗ್ಗೆ ನಮ್ಮ ಮನಸ್ಸನ್ನು ತೋಯಿಸುತ್ತದೆ.

ಒಂದು ಗಂಟೆ ಚಾರಣವಷ್ಟೇ. ಆ ಚಾರಣ ಎಮ್ಮೆಗುಂಡಿಯಲ್ಲಿ ಮುಗಿಯುತ್ತದೆ. ಎಮ್ಮೆ ಗುಂಡಿಯ ಎಡ ಮಗ್ಗಲಿನ ಒಂದು ಭಾಗದಲ್ಲಿ ನೈಸರ್ಗಿಕವಾಗಿ ನಿರ್ಮಿತವಾಗಿರುವ ರಂಗಸಜ್ಜಿಕೆ ಕಾಣಿಸುತ್ತದೆ. ಒಂಬತ್ತು ಗಂಟೆಗೆಲ್ಲ “ನಿಲುವಂಗಿಯ ಕನಸು” ನಾಟಕದ ಪಾತ್ರಗಳು ಮಾತನಾಡಲು ಆರಂಭಿಸುತ್ತವೆ. ಯಾವುದೇ ಸದ್ದುಗದ್ದಲವಿಲ್ಲದೇ, ಅನವಶ್ಯಕವಾಗಿ ನಾವೇ ನಿರ್ಮಿಸಿಕೊಂಡ ಮೌನವೂ ಇಲ್ಲದೇ ಪ್ರಕೃತಿಯ ಸಹಜ ದನಿಯ ಹಿನ್ನೆಲೆಯಲ್ಲಿ ನಾಟಕ ನಡೆಯುತ್ತದೆ. ಹುಲ್ಲುಹಾಸಿನ ಮೇಲೆ, ಒಣಗಿದ ಮರದ ದಿಮ್ಮಿಯ ಮೇಲೆ ಕುಳಿತು ನಾಟಕ ವೀಕ್ಷಣೆ ಮಾಡುವುದು ಒಂದು ವಿಶಿಷ್ಟ ಅನುಭವ.

ನಾಟಕ ಮುಗಿದ ನಂತರ ಎಮ್ಮೆಗುಂಡಿಯಿಂದ ಕೆಳಗಿನ ಕಾರೆಕಾಯ್ ಹಡ್ಲಿನ ಕಣಿವೆಯತ್ತ ಒಂದು ಪರ್ಲಾಂಗ್ ದೂರ ಇಳಿದರೆ ಒಂದು ಹೊಳೆ ಸಿಗುತ್ತದೆ. ಅಲ್ಲಿ ಸಿಗುವ ತೊಟ್ಲಹಬ್ಬಿ ಹಾಗು ದೀವರಮಕ್ಳ ಹಬ್ಬಿಗಳನ್ನು ನೋಡಿ ಆನಂದಿಸಬಹುದು. ಅಲ್ಲಿಯೇ ಸಿದ್ಧವಾಗಿರುವ ಮಾಂಸಾಹಾರ ಹಾಗು ಸಸ್ಯಾಹಾರ ಭೋಜನವನ್ನು ಸವಿದು ಮತ್ತೆ ಎಮ್ಮೆ ಗುಂಡಿಯ ಕಡೆಗೆ ಸಾಗಬಹುದು. ಎಮ್ಮೆ ಗುಂಡಿಯಿಂದ ವಾಪಸು ತೊಡಮನಹರೆಯಲ್ಲಿ ನಿಲ್ಲಿಸಿ ಹೋದ ತಮ್ಮ ವಾಹನವನ್ನು ಸೇರಿಕೊಳ್ಳಬಹುದು.

ಒಂದು ಚಾರಣ, ಒಂದು ನಾಟಕ ಹಾಗು ಒಂದು ಒಳ್ಳೆಯ ಕಾಡೂಟ… ಇದರ ಅನುಭವವನ್ನು ಮನದಲ್ಲಿ ತುಂಬಿಕೊಂಡು ವಾಪಸಾಗಬಹುದು. ಇಂತಹ ಒಂದು ಆಯೋಜನೆ ಮಾಡಿರುವ ಹಾಡ್ಲಹಳ್ಳಿ ಗ್ರಾಮಸ್ಥರು, ಜೇನುಗಿರಿ ದಿನಪತ್ರಿಕೆ ಹಾಗು ರಂಗಹೃದಯ ತಂಡದ ಶ್ರಮವನ್ನು ನಿಜಕ್ಕೂ ಮೆಚ್ಚಬೇಕು. ಇಡೀ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ನಲವತ್ತು ಜನರ ತಂಡ ಈಗಾಗಲೇ ಕೆಲಸ ಆರಂಭ ಮಾಡಿದೆ.

ಬನ್ನಿ… “ಎಮ್ಮೆ ಗುಂಡಿಯಲ್ ಒಂದು ದಿನ” ಕಳೆದ ನಂತರ ಆ ಪ್ರಕೃತಿಯ ಸೊಬಗನ್ನು ಸವಿದ ನಂತರ ತಮ್ಮ ತಮ್ಮ ಊರುಗಳಿಗೆ ಹೋದ ಮೇಲೆ ನಿಮ್ಮಲ್ಲೇ ಕೆಲವು ಪ್ರಶ್ನೆಗಳು ಏಳುತ್ತವೆ… ಆಗ ಆ ಪ್ರಶ್ನೆಗಳ ಮುಖಾಂತರ ಮತ್ತೆ ಮಾತನಾಡೋಣ.

ಇದೇ ಭಾನುವಾರ ಅಂದರೆ ಜನವರಿ 17ನೇ ತಾರೀಖಿನಂದು ಸಕಲೇಪುರದಿಂದ 26 ಕಿಲೋಮೀಟರ್ ದೂರದಲ್ಲಿರುವ ಹಾಡ್ಲಹಳ್ಳಿ ಗ್ರಾಮದ “ಎಮ್ಮೆಗುಂಡಿ” ಎಂಬ ಜಾಗಕ್ಕೆ ಸರಿಯಾಗಿ 8 ಗಂಟೆಗೆ ಚಾರಣ, ಚಾರಣದ ನಂತರ ನಾಟಕ, ನಾಟಕದ ನಂತರ ಊಟ… ಪ್ರಕೃತಿಯ ನಡುವೆ ಸಹಜವಾಗಿ ಬೆರೆಯಲು ಒಂದು ಚಂದದ ಅವಕಾಶ.

ಕಡ್ಡಾಯವಾಗಿ ಬೆಳಗ್ಗೆ ಎಂಟು ಗಂಟೆಗೆ ಬಂದವರಿಗೆ ಅನುಕೂಲ ಹೆಚ್ಚು. ಬರುವವರು 8747043485 ಹಾಗು 9448940891 ಸಂಖ್ಯೆಗೆ ಸಂಪರ್ಕಿಸಿ ನೊಂದಾಯಿಸಿಕೊಳ್ಳತಕ್ಕದ್ದು. ನೋಂದಣಿ ಶುಲ್ಕ ಒಬ್ಬರಿಗೆ 500 ರೂಗಳು.

ಪ್ರಕೃತಿಯ ನಡುವೆ ಸುಮ್ಮನೆ ಕುಳಿತು ಕೇಳಿಸಿಕೊಂಡು, ನಾಟಕವನ್ನು ನೋಡಿ, ಆದ ಒಂದಷ್ಟು ಬದಲಾವಣೆಗಳನ್ನು ಗಮನಿಸಿ… ನಂತರ ಒಂದಷ್ಟು ಮಾತುಗಳಿವೆ. ಬನ್ನಿ ಹಾಗಿದ್ರೆ, ಕಾರ್ಯಕ್ರಮ ಮುಗಿದ ನಂತರ ಮಾತನಾಡೋಣ!

‍ಲೇಖಕರು Avadhi

January 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

22ನೇ ವರ್ಷಕ್ಕೆ ಕಾಲಿಟ್ಟ ‘ಹೊಸತು’: ನೆಮ್ಮದಿಯ ನಾಳೆಗಾಗಿ ಪ್ರತಿರೋಧದ ಅಲೆಗಳು

22ನೇ ವರ್ಷಕ್ಕೆ ಕಾಲಿಟ್ಟ ‘ಹೊಸತು’: ನೆಮ್ಮದಿಯ ನಾಳೆಗಾಗಿ ಪ್ರತಿರೋಧದ ಅಲೆಗಳು

ಸಿದ್ದನಗೌಡ ಪಾಟೀಲ ಆತ್ಮೀಯ ‘ಹೊಸತು’ ಓದುಗರೆ, ತಮ್ಮ ಸಹಕಾರದಿಂದ ಪತ್ರಿಕೆ 22ನೇ ವರ್ಷಕ್ಕೆ ಕಾಲಿಟ್ಟಿದೆ. ವೈಚಾರಿಕ ನೆಲೆಗಟ್ಟಿನಿಂದ...

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This