ಎಲ್ಲಾ ನಾದಮಯ…

ನೆನೆವುದೆನ್ನ ಮನಮ್ ಗುರುವರ್ಯನಮ್……

ಸಂತೋಷ್ ಅನಂತಪುರ

ತೆಂಕಣಗಾಳಿ ಸೋಂಕಿದೊಡಮೊಳ್ನುಡಿಗೆಯ್ದೊಡಮಿಂಪನಾಳ್ವ ಗೇ ಯಂ ಕಿವಿವೊಕ್ಕಡಂ ಬಿರಿದ ಮಲ್ಲಿಗೆಗಂಡೋಡಮಾದ ಕೆಂದಲಂ ಪಂ ಕೆಳಗೊಂಡೊಡಂ ಮಧುಮಹೋತ್ಸವಮಾದೊಡಮೇನನೆಂಬೆನಾ ರಂಕುಸವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ || …ಎಂದು ಪಂಪನ ಕಾವ್ಯವು ಕರ್ಣಗಳಿಗೆ ಬಡಿಯುತ್ತಿದ್ದರೆ, ಯಾರೋ ಎಲ್ಲೋ…ಯಕ್ಷಗಾನದ ಅರ್ಥಾಗಾರಿಕೆಯನ್ನು ಹೇಳುತ್ತಿದ್ದಾರೋ ಎಂಬ ಅನುಭವವಾಗುತ್ತಿತ್ತು. ಸಂತ ಅಲೋಷಿಯಸ್ ಕಾಲೇಜಿನ ಕನ್ನಡ ಮೇಜರ್ ವಿದ್ಯಾರ್ಥಿಯಾದ ನನಗೆ ವಾರದಲ್ಲಿ ಮೂರುದಿನ ಸರಿಯಾಗಿ ಮಧ್ಯಾಹ್ನದ ಹೊತ್ತಿಗೆ ಹಳೆಗನ್ನಡ ಕಾವ್ಯದ ತರಗತಿಗಳು ನಡೆಯುತ್ತಿದ್ದುವು. ಏನು ಹೇಳ್ತೀರಿ….! ಮಧ್ಯಾಹ್ನದ ಅನ್ನ ಬ್ರಹ್ಮನ ಕೃಪೆಯ ಜೊತೆಗೆ ‘ ತೆಂಕಣ ಗಾಳಿ ಸೋಂಕಿದೋಡೇ….’ ಕೇಳಬೇಕೇ…., ಕಣ್ಣ ರೆಪ್ಪೆಗಳು ಒಂದಿನಿತು ನನ್ನ ಮಾತ ಕೇಳದೆ ರೆಪ್ಪೆಗಳೆರಡೂ ಬೆಸೆದೇ ಬಿಡುತ್ತಿದ್ದುವು. ಕನ್ನಡ ವಿಭಾಗದ ಪಕ್ಕದಲ್ಲೇ ಇರುವ ಕ್ಲಾಸ್ ರೂಮಿನ ಕೊನೆಯ ಬೆಂಚಿನ ಖಾಯಂ ವಿದ್ಯಾರ್ಥಿಯಾದ ನನಗೆ ಇವೆಲ್ಲವನ್ನು ಕೇಳುತ್ತಿದ್ದಾಗ ಬಾಲ್ಯದಲ್ಲಿ ಅಮ್ಮನ ಮಡಿಲಲ್ಲಿ ಮಲಗಿ ಭಾಗವತ, ರಾಮಾಯಣ, ಭಾರತವನ್ನು ಕೇಳುತ್ತಿದ್ದ ಅನುಭವವಾಗುತ್ತಿತ್ತು. ಈ ಅನುಭವವೇ ನನ್ನನ್ನು ‘ತೂಗುವೆ ರಂಗನ, ತೂಗುವೆ ಕೃಷ್ಣನ ತೂಗಿ ಜೋ… ಜೋ… ಹಾಡುವೆ’ ಎಂಬ ಅಮ್ಮನ ಜೊಗುಳವನ್ನು ನೆನಪಿಸಿ ಹಾಗೆ ತೂಗಿಯೇ ಬಿಡುತ್ತಿದ್ದೆ. ಅಷ್ಟರಲ್ಲಿ….. ” ಆರಂಕುಸವಿಟ್ಟೊಡಂ… ನಿನ್ನ ತೂಕಡಿಸಲೂಮ್ ಬಿಡೆನುಮ್…..”ಎಂಬ ಅಬ್ಬರದ “ಪಂಪ ನಾದ”….. ಕಣ್ಣು ಬಿಟ್ಟು ನೋಡಿದರೆ ನಾ.ದ. ಮೇಷ್ಟ್ರು !!! ಸಂತೋಷಾ ಊಟ ಜಾಸ್ತಿಯಾಯ್ತಾ…?ಎಲ್ಲಿ ಒಂದ್ಸಲ ಎದ್ದೇಳು ಎಂದು ಎಬ್ಬಿಸಿ…ನಿಧಾನವಾಗಿ ತಮ್ಮ ಕೈಯನ್ನು ನನ್ನ ಕಿವಿಯ ಬಳಿ ತಂದು ಮೆಲ್ಲ ಮೆಲ್ಲನೇ ಕಿವಿಯನ್ನು ಉಜ್ಜಿ ಚರಕ್ ಎಂದು ಹಿಂಡಿದಾಗ ಎರಡು ಕಿವಿಯಿಂದ ಗಾಳಿ ಹೋದ ಅನುಭವ. ಅಲ್ಲಿಗೆ ಅಂದಿನ ತರಗತಿಯು ಕೊನೆಗೊಂಡಿತು. ೮೦ ರ ದಶಕದ ವರೆಗೂ ವಿದ್ಯುತ್ ಸಪರ್ಕವಿಲ್ಲದ, ಸರಿಯಾದ ರಸ್ತೆ, ಬಸ್ಸುಗಳ ಸೌಕರ್ಯಗಳಿಲ್ಲದ, ೯೦ ರ ದಶಕದಲ್ಲಿ ‘ದೂರ’ದರ್ಶನ ಭಾಗ್ಯವನ್ನು ಟಿ.ವಿ ಪರದೆಯಲ್ಲಿ ಕಾಣುವ ಯೋಗವನ್ನು ಕಂಡ, ಗಡಿನಾಡ ಜಿಲ್ಲೆಯಾದ ಕಾಸರಗೋಡಿನ ಕುಂಬಳೆ ಸಮೀಪದ “ಅನಂತಪುರ” ಎಂಬ ಪುಟ್ಟ ಹಳ್ಳಿಯಿಂದ ಬಂದ ಹುಡುಗ ನಾನು. ಅದು ೧೯೯೩ ನೇ ಇಸವಿ ಕಾಸರಗೊಡಿನಲ್ಲಿ ಪಿ.ಯು.ಸಿ (ಪಿ.ಡಿ.ಸಿ ಅಂತ ಅಲ್ಲಿ ಕರೆಯುತ್ತಾರೆ) ಮುಗಿಸಿ ಮತ್ತೆ ಏನು ? ಎಂಬ ಬೃಹತ್ ಪ್ರಶ್ನೆಯ ಹೊರೆಯನ್ನು ಹೊತ್ತು ಮಂಗಳೂರು ಕಡೆಗೆ ಮುಖ ಮಾಡಿದ್ದ ದಿನಗಳವು. ಇಲ್ಲಿಯೂ ಸಲ್ಲದೆ…ಅಲ್ಲಿಯೂ ಸಲ್ಲದೆ ತ್ರಿಶಂಕು ಸ್ವರ್ಗದಲ್ಲಿ ನರಳುವವರು ಗಡಿನಾಡ ಕನ್ನಡಿಗರು ! ಹೀಗಿರುವಾಗ ನಮ್ಮದೇ ಜಿಲ್ಲೆಯವರಾದ, ನಮ್ಮ ಮನೆಯಿಂದ ಸ್ವಲ್ಪ ದೂರದಲ್ಲೇ ಇರುವ, ನನ್ನ ಮನೆಯ ಹಿರಿಯರಿಗೆಲ್ಲ ಪರಿಚಿತರಾಗಿರುವ, ಜೊತೆಗೆ ನನ್ನ ಅಪ್ಪನ ಸಹಪಾಠಿಯೂ, ಮಿತ್ರರೂ ಆಗಿರುವ ನಾ.ದ.ಶೆಟ್ಟಿಯವರ ಬಳಿ ಪ್ರಶ್ನೆಯ ಹೊರೆಯನ್ನು ಹೊತ್ತುಕೊಂಡು ಅಪ್ಪ- ನಾನು ಹೋದೆವು. ಅದು ನಾನು ಮೇಷ್ಟ್ರನ್ನು ಮೊದಲ ಬಾರಿಗೆ ಭೇಟಿಯಾಗಿದ್ದು ಮತ್ತು ನೋಡಿದ್ದು ಕೂಡ. ಹಿಂದೆ ನೋಡಿದ್ದರೂ ನೆನಪಿರಲಿಲ್ಲ. ಸಂತ ಅಲೋಷಿಯಸ್ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ನಾ.ದ ಮೇಷ್ಟ್ರು ಬಲು ಆಪ್ತತೆಯಿಂದ ಬರ ಮಾಡಿಕೊಂಡರು. ಕಲ್ಲಿಕೋಟೆ ವಿ ವಿಯ ಅಡಿಯಲ್ಲಿ ಪಿ.ಯು.ಸಿ ಓದಿರುವುದರಿಂದ , ಅಲ್ಲಿ ಫಲಿತಾಂಶ ಬರುವುದು ತಡವಾಗಿ. ಅದು ಮಂಗಳೂರು ವಿ.ವಿಯ ವೇಳಾ ಪಟ್ಟಿಗೆ ಹೊಂದುತ್ತಿರಲಿಲ್ಲ. ಈ ವಿಷ್ಯದ ಅರಿವಿರುವ, ನಾವು- ನಾ.ದ.ಮೇಷ್ಟ್ರು ಚರ್ಚಿಸಿ ಒಂದು ನಿರ್ಧಾರಕ್ಕೆ ಬಂದೆವು. ಅದು, ಸಂತ.ಅಲೋಷಿಯಸ್ ಕಾಲೇಜಿನಲ್ಲಿ ಒಂದು ಸೀಟು ಕಾದಿರಿಸುವುದು ಎಂದಾಗಿತ್ತು. ಯಾವ ವಿಷಯಗಳು ಎಂಬುದರ ಬಗ್ಗೆ ನಮಗೆ ಖಚಿತತೆ ಇರಲಿಲ್ಲ. ಮೊದಲು ಬಂದವರಿಗೆ ಆದ್ಯತೆಯ ರೂಪದಲ್ಲಿ ಅಲ್ಲಿ ಸೀಟುಗಳು ಹಂಚಿಕೆಯಾಗುತ್ತಿದ್ದುವು. ಆದರಿಂದ ಇದೇ ಸೀಟು ಸಿಗುತ್ತದೆ ಎಂಬ ಗ್ಯಾರಂಟಿ ಇರಲಿಲ್ಲ. ಕೊನೆಗೂ ಕಲ್ಲಿಕೋಟೆ ವಿ ವಿ ಗೆ ಹೋಗಿ ಪ್ರೊವಿಷಿನಲ್ ಮಾರ್ಕ್ಸ್ ಕಾರ್ಡ್ಅನ್ನು ತಂದು ಸಂತ. ಅಲೋಷಿಯಸ್ ಕಾಲೇಜಿಗೆ ಕೊಟ್ಟಾಗ ಜುಲೈ 15 ಗಿತ್ತು. ಇತ್ತ ತರಗತಿಗಳು ಕಾಲೇಜಿನಲ್ಲಿ ಪ್ರಾರಂಭಗೊಂಡಿದ್ದುವು. ಭಾರತೀಯ ಸಿನೆಮಾಗಳಲ್ಲಿ ಎಲ್ಲವೂ ನಡೆದ ಮೇಲೆ ಎಂಟ್ರೀ ಕೊಡುವ ಪೋಲಿಸ್ ಪಾತ್ರದ ಹಾಗೆ ಇತ್ತು ತರಗತಿಗೆ ನನ್ನ ಅಂದಿನ ಎಂಟ್ರೀ ! ಪತ್ರಿಕೋದ್ಯಮ ವಿಷಯವು ಪ್ರಥಮ ಬಾರಿಗೆ ಪದವಿಯ ವಿಷಯವಾಗಿ ಅಲೋಷಿಯಸ್ ಕಾಲೇಜಿಗೆ ಪ್ರವೇಶಿಸಿದ ದಿನಗಳವು. ಸಹಜವಾಗಿಯೇ ನನಗೆ ಅದನ್ನು ಆರಿಸ ಬೇಕೆಂದಿತ್ತು. ಆರಿಸಿದೆ ಕೂಡ. ಆದರೆ ಜೊತೆಗೆ ಇತರ ಎರಡು ಯಾವ ವಿಷ್ಯಗಳನ್ನು ಆರಿಸಿಕೊಳ್ಳಬೇಕು ಎಂಬುದರ ಜಿಜ್ಞಾಸೆಯಲ್ಲಿರುವಾಗ, ನಾ.ದ. ಮೇಷ್ಟ್ರು ಅಪ್ಪನ ಬಳಿ ಬಂದು ಒಂದೇ ಒಂದು ಸೀಟು ಇದೆ. ಅದು ಕನ್ನಡ ಮೇಜರ್, ಜರ್ನಲಿಸಮ್, ಪೊಲಿಟಿಕಲ್ ಸೈನ್ಸ್ ಕೊಂಬಿನೇಷನ್ ನದ್ದು ಎಂದು ಹೇಳಿದರು. ಅದು ಬಿಟ್ಟರೆ ಬೇರೆ ಸಿಗುವುದು ಕಷ್ಟ. ಬೇರೆ ಯಾರಾದರೂ ವಿದ್ಯಾರ್ಥಿಗಳು ಬಿಟ್ಟು ಹೋದರೆ ಅಥವಾ ಇತರ ವಿಷ್ಯವನ್ನು ಆರಿಸಿದರೆ ಮಾತ್ರ ಇತರ ಸಾಧ್ಯತೆಗಳಿವೆ. ಇಲ್ಲವೆಂದಲ್ಲಿ ಇಲ್ಲ. ಇಲ್ಲಿ… ನನ್ನ ವಿಭಾಗದ ವಿಷಯವೇ ಮೇಜರ್ ಆಗಿರುವುದರಿಂದ ಒಂದು ಸೀಟನ್ನು ನನಗೆ ತೆಗೆದಿರಿಸುವ ಹಕ್ಕಿದೆ. ಆದ್ದರಿಂದ ಹುಡುಗ ಇದನ್ನೇ ತೆಗೆದುಕೊಳ್ಳುವುದು ಒಳಿತು ಎಂದು ಮೇಷ್ಟ್ರು ಅಪ್ಪನ ಬಳಿ ಹೇಳಿದರು. ಅವರು ಅಪ್ಪನಿಗೆ ಹೇಳಿದ ಮಾತು ವಿದ್ಯಾರ್ಥಿಗಳ ಗಲಾಟೆಯ ನಡುವೆ ನನಗೆ ಕೇಳಿಸಿಲ್ಲ. ಹಾಗಾಗಿ ನಾನು ಮೇಷ್ಟ್ರ ಬಳಿ, ಜರ್ನಲಿಸಮ್, ಪೊಲಿಟಿಕಲ್ ಸೈನ್ಸ್, ಸೈಕೊಲಜಿ ಕಾಂಬಿನೇಶನ್ ಸಿಗತ್ತಾ ಅಂತ ಕೇಳಿದೆ. ಅದಕ್ಕೆ ಅವರು ಸಂತೋಷಾ… ಕನ್ನಡದಲ್ಲಿ ಏನು ಕಡಿಮೆಯಾಗಿದೆ..? ಕನ್ನಡದ ಬಗ್ಗೆ ಯಾಕಿಷ್ಟು ಕೀಳರಿಮೆ..? ನಿನ್ನ ಅಪ್ಪ-ದೊಡ್ಡಪ್ಪ ಕನ್ನಡದ ಉತ್ತಮ ಕವಿ-ಕಥೆಗಾರರು ಅವರ ಬಳ್ಳಿಯಾದ ನೀನು ಹೀಗೆ ಯಾಕೆ ಚಿಂತಿಸುತ್ತಿ |? ಎಂದು ಕನ್ನಡ ವಿಭಾಗದ ಮುಂದಿರುವ ಕೋರಿಡಾರ್ ನಲ್ಲಿ ನಿಲ್ಲಿಸಿ ನನಗೆ ತಿಳಿ ಹೇಳಿದುದು ನನ್ನ ಮನ ಪಟಲದಲ್ಲಿ ಇಂದಿಗೂ ಅಚ್ಚೊತ್ತಿದಂತಿದೆ….

  ನಿರ್ವಾಹವಿಲ್ಲದಿರುವುದು ಒಂದು ಕಡೆಯಾದರೆ, ಇನ್ನೊಂದು ಕಡೆ ಸವಾಲು. ಜೊತೆಗೆ ಮೇಷ್ಟ್ರ ಅ:ತಕರಣದ ಮಾತುಗಳು ಆದಾಗಲೇ ಬಳ್ಳಿಯ ರೂಪದಲ್ಲಿ ನನ್ನನ್ನು ಸುತ್ತಿ ಬಿಟ್ಟಿದ್ದುವು. ಕೊನೆಗೂ ಅವರ ಮಾತಿನಂತೆ ನಾನು ಅವರೇ ಸೂಚಿಸಿದ ವಿಷ್ಯಗಳನ್ನು ಆರಿಸಿಕೊಂಡೆ. ಅಡ್ಮಿಶನ್ ಗೆ ಪ್ರಿನ್ಸಿಪಾಲರ ಬಳಿ ಅಪ್ಪನೂ- ನಾನು ಹೋದಾಗ, ಅಂದು ಪ್ರಿನ್ಸಿಪಾಲ್ ಆಗಿದ್ದ ಅಜಾನುಬಾಹು, ಗಂಭೀರವದನರಾದ ಫಾದರ್. ಅಲೋಷಿಯಸ್ ಅವರು ಅಪ್ಲಿಕೇಶನ್ ಗೆ ಸಹಿ ಹಾಕಲು ಸುತಾರಾಂ ಒಪ್ಪಲೇ ಇಲ್ಲ. ಕಾರಣ ನಾನು ಕರೆದುಕೊಂಡು ಬಂದಿದ್ದು ನನ್ನ ಅಪ್ಪನನ್ನಲ್ಲ, ಅಣ್ಣನನ್ನು ಎಂದಾಗಿತ್ತು ಅವರ ದೂರು. ಎಷ್ಟು ಸಮಜಾಶಿಕೆ ನೀಡಿದರೂ ಒಪ್ಪದ ಅವರು ನನ್ನ ಲೋಕಲ್ ಗಾರ್ಡಿಯನ್ ಆದ ನಾ.ದ. ಮೇಷ್ಟ್ರನ್ನು ಕರೆಸಿ, ನನ್ನ ಮತ್ತು ಅಪ್ಪನ ಸಂಬಂಧಕ್ಕೆ ಅವರಿಂದ ಋಜು ಬಿದ್ದ ನಂತರವೇ ಅರ್ಜಿಗೆ ಅವರು ಸಹಿ ಹಾಕಿ ಪ್ರವೇಶಕ್ಕೆ ಅನುವು ಮಾಡಿ ಕೊಟ್ಟದ್ದು ! ” ನಾ.ದ. ಇವನ್ ಕೊರ್ಚ ಪೊಕ್ರಿಯ…ಒನ್ನ್ ಕಣ್ಣ್ ವೆಚ್ಚೋಳೊಣೊ… ( ನಾ.ದ. ಇವನು ಸ್ವಲ್ಪ ತುಂಟ, ಒಂದು ಕಣ್ಣಿಟ್ಟಿರಬೇಕು)” ಎಂದು ಅಪ್ಪ ಹೇಳಿದಾಗ, ಮೇಷ್ಟರು ” ಹೇ…ನಿಂಗ ಒನ್ನು ಪೇಡಿಕಂಡ….ನಾ ನೋಕಿಕೊಳ್ಳ…ಎಲ್ಲಾ ಶೆರಿಯಾಕ… (ಹೇ…ನೀವು ಏನೂ ಹೆದರಿಕೊಳ್ಳಬೇಡಿ, ನಾನು ನೋಡ್ಕೋತೀನಿ..ಎಲ್ಲವನ್ನು ಸರಿ ಮಾಡುವ) ” ಎಂದು ಅಪ್ಪಟ ನಾ.ದ. ನಗೆಯನ್ನು ಬೀರಿ ಅಪ್ಪನನ್ನು ಬೀಳ್ಕೊಟ್ಟಿದ್ದರು. ಅದನ್ನು ಕೇಳಿಸ್ಕೊಂಡ ಅಪ್ಪ, ನನ್ನ ಕೈಯನ್ನು ಮೇಷ್ಟ್ರ ಕೈಯಲ್ಲಿಟ್ಟು ಮನೆಗೆ ಹೊರಟರು. ಮುಂದಿನ ೩ ವರ್ಷಗಳ ಕಾಲ ನಾನು ಮೇಷ್ಟ್ರ ಸುಪರ್ದಿಯಲ್ಲಿ ಪಳಗಿದೆ, ಬೆಳೆದೆ. ಗುರು ಇದ್ದರೆ ಗುರಿಯೂ ಇರುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೆ ಎಂತಹ ಗುರು ಇದ್ದರೆ ಎಂತಹ ಗುರಿ ಇರುತ್ತದೆ ಎನ್ನುವುದು ಕೂಡ ಅಷ್ಟೇ ಪ್ರಚಲಿತ ಮಾತು ! ವಯೋಮಾನದ ಸಹಜವಾದ ಆಕಾಕ್ಷೆ, ಅಬ್ಬರ, ಸಿಟ್ಟು-ಸೆಡವುಗಳ ಮಿಲನವಾಗಿತ್ತು ನನ್ನ ಅಂದಿನ ಕಾಲೇಜು ದಿನಗಳು. ಮನೆಯಿಂದ ದೂರ, ಹಾಸ್ಟೆಲಿನಲ್ಲಿ ವಾಸ… ಅದೂ ಮೊದಲ ಬಾರಿಗೆ ! ಹಾಸ್ಟೆಲಿನಲ್ಲಿ, ಕಾಲೇಜಿನಲ್ಲಿ ಒಂದಿಷ್ಟು ರೂಲ್ಸ್ ಅಂಡ್ ರೆಗ್ಯುಲೇಷನ್ಸ್ ಗಳಿದ್ದರೂ…ಬೇಲಿ ಹಾಯುವ ವಯಸ್ಸದು. ಅದಕ್ಕೆ ಹಿಂದಿಲ್ಲ, ಮುಂದಿಲ್ಲ…..ನೆಗೆದು ಓಡುವುದೇ ಆಗಿದ್ದುವು ಆ ದಿನಗಳು. ಆ ಓಟಕ್ಕೆ, ನೆಗೆತಕ್ಕೆ ಒಂದು ಗೂಟ ಕಟ್ಟಿ ಹದಕ್ಕೆ ತಂದವರೇ ನನ್ನ ನೆಚ್ಚಿನ ನಾ.ದ ಮೇಷ್ಟ್ರು. ಅಪ್ಪನ ಸಹಪಾಠಿಯೆಂಬ ಕಾರಣಕ್ಕೋ ಏನೋ ಅರಿಯೆ.., ಬಹಳಷ್ಟು ಬಾರಿ ನಾನು ಅವರಲ್ಲಿ ನನ್ನ “ಅಪ್ಪ” ನನ್ನೇ ಕಂಡಿದ್ದಿದೆ. ಇಂತಿಪ್ಪ ಮೇಷ್ಟ್ರ ಬಗ್ಗೆ ” ಅಭಿನಂದನಾ ಗ್ರಂಥ” ಹೊರ ಬರುತ್ತಿದೆ ಅದಕ್ಕಾಗಿ ಅವರ ವಿದ್ಯಾರ್ಥಿಯಾದ ನಾನು ಮೇಷ್ಟ್ರ ಕುರಿತಂತೆ, ಮೇಷ್ಟ್ರನ್ನು ಕಂಡಂತೆ ಬರೆಯಬೇಕೆಂದು ಬೆಳ್ಳಂ ಬೆಳಗ್ಗೆ ಮಂಗಳೂರಿನಿಂದ ಮೇಡಂ ಡಾ. ಸಬಿಹ ಭೂಮಿ ಗೌಡ ಫೋನಾಯಿಸಿದಾಗ, ಬೆಂಗಳೂರಿನ ಟ್ರಾಫಿಕ್ ಜಂಜಾಟದಲ್ಲಿ ಸಿಲುಕಿ ಅದರಿಂದ ಹೊರ ಬರಲು ಹವಣಿಸುತ್ತಿದ್ದೆ. ಇದನ್ನು ಕೇಳಿದ ನಾನು ಆರಂಭದಲ್ಲಿ ಒಂದಿಷ್ಟು ತಡವರಿಸಿದ್ದೂ ಹೌದು. ಹೇಗೆ ? ಏನು ? ಅಂತ ಬರೆಯಲಿ ಎಂದು ಕಸಿವಿಸಿಗೊಂಡಿದ್ದೂ ಹೌದು. ನಂತರ ನನ್ನ ಭಾವ ಜಗತ್ತು ಇದು ನಾನು ಮಾಡಲೇಬೇಕಾದ ಕರ್ತವ್ಯ ಎಂದು ಎಚ್ಚರಿಸಿದಾಗ ಟ್ರಾಫಿಕ್ ನಲ್ಲಿ ಗ್ರೀನ್ ಸಿಗ್ನಲ್ !!! ನನ್ನ ಅರಿವಿನಲ್ಲಿ ನಾನು ಕಂಡ, ನೋಡಿದ, ಅನುಭವಿಸಿದ, ಮೆಚ್ಚಿದ ನನ್ನ ನೆಚ್ಚಿನ ನಾ.ದ. ಮೇಷ್ಟ್ರ ಬಗ್ಗೆ ಇದಿಲ್ಲಿ ” ಅಕ್ಷರ ಸ್ಮರಣ ದರ್ಪಣ ”. ಮೇಷ್ಟ್ರ ಬಗ್ಗೆ ಬರೆಯುವುದು ಎಂದರೆ ನನಗೋ ಒಳಗೊಳಗೆ ಒಂದು ಸಣ್ಣ ನಡುಕ ! ತಿದ್ದಿ ರೂಪಿಸಿದವರು, ಮುಂದಿನ ದಾರಿ ತೋರಿದವರು, ಈಗಲೂ ನಾನು ನಡೆಯುತ್ತಿರುವ ದಾರಿಯ ಬಗ್ಗೆ ಕಾಳಜಿ ವಹಿಸುವವರು. ನನ್ನ ಹಾಗೂ ನನ್ನಂತೆ ಇರುವ ಮೇಷ್ಟ್ರ ಇತರ ಹಲವು ವಿಧ್ಯಾರ್ಥಿಗಳ ಬಗ್ಗೆ ಸದಾ ಒಳಿತನ್ನೇ ಬಯಸುವ ನಿಷ್ಕಲ್ಮಶ ಹೃದಯದ ವಾರಸುದಾರ ನನ್ನ ನಾ.ದ. ಮೇಷ್ಟ್ರು. ಸಾಮಾನ್ಯವಾಗಿ ಅಭಿನಂದನಾ ಗ್ರಂಥದಲ್ಲಿ ಏನು ಬರೆದರೂ ಅದು ಅಭಿನಂದಿಸಿ , ಹೊಗಳಿ ಬರೆಯುವುದು ಎಂಬುದು ಸಾಮಾನ್ಯರಲ್ಲಿ ಮೂಡಿರುವ ನಂಬಿಕೆ. ಆದರೆ ಇಲ್ಲಿ ನಾನು ಬರೆಯುತ್ತಿರುವ ವಿಷಯಗಳು ಬರೆಯಲೇಬೇಕೆಂಬ ಕಾಟಚಾರಕ್ಕೆ ಬಿದ್ದು ಬರೆದ ಸಂಗತಿಗಳಂತೂ ಅಲ್ಲವೇ ಅಲ್ಲ. ಒಬ್ಬ ಪ್ರಾಮಾಣಿಕ, ಸೃಜನಶೀಲ ಅಧ್ಯಾಪಕನ ಬಗ್ಗೆ ಅವರ ನೆಚ್ಚಿನ ವಿದ್ಯಾರ್ಥಿಯು ಬರೆಯುತ್ತಿರುವ ಸಾಲುಗಳಿವು. ಪ್ರಸಕ್ತ ದುಷ್ಟ ಜಗತ್ತಿನ ಕಷ್ಟದ ದಿನಗಳಲ್ಲಿ ಒಂದು ಸಹೃದಯುಕ್ತ ಮತ್ತು ಆರೋಗ್ಯಯುಕ್ತ ಮನಸ್ಸುಳ್ಳ ಸಮುದಾಯವಿರುವುದರ ಜೊತೆಗೆ ಒಬ್ಬ ಚಿಂತನಾಶೀಲ ಅಧ್ಯಾಪಕನಿರುವುದೂ ಅಷ್ಟೇ ಮುಖ್ಯ ! ಈ ನಿಟ್ಟಿನಲ್ಲಿ, ನಾಯ್ಕಪು ದಾಮೋದರ ಶೆಟ್ಟಿ ಉರುಫ್ ನಾ.ದ. ಶೆಟ್ಟಿ ಅವರು ಮೇಲಿನ ಸಾಲಿಗೆ ಸೇರುವ ಒಬ್ಬ ಅಧ್ಯಾಪಕ. ನನ್ನ ಮೂರೂವರ್ಷದ ಒಡನಾಟ ಹಾಗೂ ನಂತರದ ದಿನಗಳಲ್ಲಿ ಮತ್ತು ಇಂದಿಗೂ ನಾನು ಅವರ ಜೊತೆ ಇರಿಸಿಕೊಂಡ ಸಂಪರ್ಕವು ಅವರ ಬಗ್ಗೆ ಹೆಮ್ಮೆಯಿಂದ ಒಂದಿಷ್ಟು ಬರೆಯಲು ನನಗೆ ಸಹಕಾರಿಯಾಗಿದೆ. ಮೇಷ್ಟ್ರು ಮೂಲತಃ ಒಬ್ಬ ಕಲಾವಿದ. ಕಲೆ ಅವರಲ್ಲಿ ರಕ್ತಗತವಾಗಿ ಹರಿದು ಬಂದಿದೆ. ಜೊತೆಗೆ ಸಾಧಿಸಬೇಕೆನ್ನುವ ಛಲವು ಅವರನ್ನು ಇಂದು ಈ ಮಟ್ಟಕ್ಕೆ ಬೆಳೆಸಿದೆ ಎಂದರೆ ತಪ್ಪಾಗಲಾರದು. ಸಾಮಾನ್ಯ ಕುಟುಂಬದ ಹಿನ್ನಲೆಯಿಂದ ಬಂದ ಮೇಷ್ಟ್ರು, ತಮ್ಮ ಗ್ರಾಮೀಣ ಪರಿಸರದ ಅಷ್ಟೂ ಸೊಬಗನ್ನು, ಸೊಗಡನ್ನು ಹೀರಿ ಬೆಳೆದ ಜೀವ. ಜಾನಪದ, ಯಕ್ಷಗಾನ, ತಾಳಮದ್ದಳೆ, ನಾಟಕ, ಪಾಡ್ದನ, ಭೂತಕೋಲ, ಹಬ್ಬ-ಹರಿದಿನ, ಜಾತ್ರೆ – ಉತ್ಸವಗಳನ್ನೆಲ್ಲಾ ಕಂಡು – ಉಂಡು, ತನ್ನೊಳಗೆ ಇಳಿಸಿ – ಬೆಳೆಸಿದ ಸ್ವಪರಿಶ್ರಮಿ. ಹಾಗೆ ಬದುಕಲು ಕಂಡುಕೊಂಡ ಮಾರ್ಗ ಅಧ್ಯಾಪನ. ಬಗಲಲ್ಲಿ ತಮ್ಮ ಹತ್ತು ಹಲವು ಆಸಕ್ತಿಗಳನ್ನು ಇಟ್ಟುಕೊಂಡೇ ನಡೆದಾಡುವ ಮೇಷ್ಟ್ರದ್ದು ಬಹುಮುಖ ಪ್ರತಿಭೆ. ನಾಟಕ, ಸಿನೆಮಾ, ಕಾವ್ಯ, ಕಥೆ… ಹೀಗೆ ಅಭಿವ್ಯಕ್ತಿಸಲು ಎಲ್ಲೆಲ್ಲಿ ಅವಕಾಶಗಳಿವೆಯೋ ಅವುಗಳನ್ನೆಲ್ಲಾ ಸದುಪಯೋಗಪಡಿಸಿಕೊಂಡು, ಅನುಭವಿಸುವುದನ್ನು ಅನುಭವಿಸಿ ಅಭಿವ್ಯಕ್ತಿಸುವ, ಅನುಭವಕ್ಕೆ ದಕ್ಕದ್ದನ್ನು ಅನುಭಾವಿಸಿ ಅಭಿವ್ಯಕ್ತಿಸುವ ಕಲಾವಿದ ನನ್ನ ಮೇಷ್ಟ್ರು. ತರಗತಿಗಳಲ್ಲಿ ಅವರು ಕಾವ್ಯವನ್ನು, ಕಥನವನ್ನು ವರ್ಣಿಸುವ ಪರಿಯೇ ಬೇರೆ. ಎಂತಹ ಒಣ ವಿಷಯವಾದರೂ ಅದಕ್ಕೆ ಒಸರನ್ನು ತರಿಸಿ ಹಸಿರಾಗಿಸುವ ಶಕ್ತಿ ಮೇಷ್ಟ್ರರಲ್ಲಿದೆ. ಆದ್ದರಿಂದಲೇ ಅಲ್ಲವೇ, ಹಳೆಗನ್ನಡ ವಿಷಯದಂತಹ ಕಬ್ಬಿಣದ ಕಡಲೆಯನ್ನು ವಿಭಾಗದ ಮುಖ್ಯಸ್ಥರಾಗಿ ಸ್ವತಹ ತಾವೇ ಮುಂದೆ ನಿಂತು ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದುದು ! ಇದರಿಂದ ನಮ್ಮಂತಹ ಕೀಟಲೆ ವಿದ್ಯಾರ್ಥಿಗಳಿಗೆ ಇತರ ಅಧ್ಯಾಪಕರನ್ನು ಕಿಚಾಯಿಸುವ ಸದಾವಕಾಶವನ್ನು ತಪ್ಪಿಸಿದ್ದು !! ಇದು ಅವರಲ್ಲಿರುವ ಜಾಣ್ಮೆ ಮತ್ತು ಅವರ ಭೋದನಾ ಪ್ರತಿಭೆಗೆ ಒಂದು ನಿದರ್ಶನ. ಮೊದಲೇ ನಿಮಗೆ ಹೇಳಿದಂತೆ, ನನ್ನ ಅಬ್ಬರದ ನಾಗಲೋಟದ ದಿನಗಳಲ್ಲಿ ಮುಗ್ಗರಿಸಿ ಬಿದ್ದಾಗ ಮೇಷ್ಟ್ರು ತೋರಿದ ಕಾಳಜಿಯ, ನಿತ್ಯ ಸ್ಮರಣೆಯ ಘಟನೆಯೊಂದು ಹೀಗಿದೆ ; ಬೈಕ್ ಅಪಘಾತದಲ್ಲಿ ತೀವ್ರ ಸ್ವರೂಪದ ಹೆಡ್ ಇಂಜುರೀ ಇಂದ ಪ್ರಜ್ಞಾ ಶೂನ್ಯನಾಗಿ ರಸ್ತೆ ಬದಿ ಬಿದ್ದಾಗ ನನ್ನ ಸ್ನೇಹಿತರು ಎತ್ತಿ “ಸಿಟಿ ಆಸ್ಪತ್ರೆ” ಗೆ ದಾಖಲಿಸಿ ಮೇಷ್ಟ್ರಿಗೆ ವಿಷ್ಯ ತಿಳಿಸಿದಾಗ ಕಣ್ಣಿರೀಟ್ಟುಕೊಂಡು ಓಡಿ ಬಂದ ಮೇಷ್ಟ್ರು, ಅಪ್ಪ-ಅಮ್ಮ ನಿಂದ ದೂರವಿದ್ದ ನನಗೆ ಆ ಕ್ಷಣದಲ್ಲಿ ಸಿಗಬೇಕಾದ ಅಪ್ಪ-ಅಮ್ಮನ ಪ್ರೀತಿ, ಕಾಳಜಿ, ಆರೈಕೆಯನ್ನು ಉಣಿಸಿದವರು. ತಕ್ಷಣ ಮನೆಗೆ ಫೋನಾಯಿಸಲು ಅಂದು ನಮ್ಮ ಮನೆಗೆ ಸ್ಥಿರ ದೂರವಾಣಿ ಸಂಪರ್ಕವಿರಲಿಲ್ಲ. ನನ್ನ ಪರ್ಸ್ ನಲ್ಲಿದ್ದ ನಮ್ಮ ಕುಟುಂಬ ವೈದ್ಯರಾದ ಡಾ. ಸರ್ವೇಶ್ವರ ಭಟ್ ಅವರಿಗೆ ಫೋನಾಯಿಸಿ ಅವರ ಮೂಲಕ ಮನೆಯಲ್ಲಿ ವಿಷಯ ತಿಳಿಸಿ, ಮುಂದಿನ ಕ್ರಮಗಳ ಬಗ್ಗೆ ಸಂಪೂರ್ಣ ಕಾಳಜಿ ವಹಿಸಿದವರು ! ಪ್ರಜ್ಞಾಶೂನ್ಯನಾಗಿ ಮಲಗಿದ ನನಗೆ ಇದು ತಿಳಿದು ಬಂದದ್ದು, ಸ್ನೇಹಿತರಾದ ರಾಜು,ಸುದೀಪ್,ಸಂದೀಪ್ ಮತ್ತು ಧೀರಜ್ ರ ಮೂಲಕ. ಆ ಸ್ನೇಹ, ಕಾಳಜಿ, ಆರೈಕೆಯನ್ನು ನಾನು ಪ್ರಜ್ಞೆ ಪಡೆದ ಮೇಲೂ ಅನುಭವಿಸಿ ಸುಖಿಸಿದ್ದಿದೆ. ಅವರ ಜೊತೆಗಿನ ಒಡನಾಟವೇ ಒಂದು ಸುಂದರ ದಿನ ಕಳೆದಂತೆ. ಅವರು ನಮ್ಮಲ್ಲಿರುವ ಪ್ರತಿಭೆಯನ್ನು ಹೆಕ್ಕಿ ತೆಗೆದು, ಅದಕ್ಕೆ ಒಂದು ಮೂರ್ತ ರೂಪ ಕೊಡುವ ಬಗೆ ಇದೆಯಲ್ಲಾ ಅದನ್ನು ಅನುಭವಿಸಿದವರೇ ಭಾಗ್ಯವತರು. ಅಂತಹ ಭಾಗ್ಯ ನನ್ನ ಪಾಲಿಗೆ ಇತ್ತು ಅನ್ನುವುದೇ ನನಗೆ ಹೆಮ್ಮೆಯ ವಿಷ್ಯ. ರಂಗ ಚಟುವಟಿಕೆಗಳಲ್ಲಿ ನಮ್ಮನ್ನೆಲ್ಲಾ ತೊಡಗಿಸಿಕೊಳ್ಳುತ್ತಿದ್ದರು, ನಟನೆಯ ಮೂಲಭೂತ ವಿಷ್ಯಗಳ ಬಗ್ಗೆ ಮತ್ತು ಇತರ ಪರಿಕರಗಳ ಕುರಿತು ದಣಿವಿಲ್ಲದೇ ನಮಗೆ ಕಲಿಸಿದವರು. ನಾಟಕ, ಸ್ಕಿಟ್, ಕಾವ್ಯ, ಕಥೆ, ಲೇಖನ, ಸಂಗೀತ, ಛಾಯಾಗ್ರಹಣ ಹೀಗೆ ನನ್ನ ಅಷ್ಟೂ ಆಸಕ್ತಿಗಳಿಗೆ ರೂಪ ಕೊಟ್ಟು, ತಿದ್ದಿ ತೀಡಿ ಬೆಳೆಸಿದವರು. ಕಾಲೇಜು ರಾಜಕೀಯದಲ್ಲಿ ಭಾಗಿಯಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದಾಗ, ಅದೆಲ್ಲಿದ್ದರೊ ಮೇಷ್ಟ್ರು…. ವಿಷ್ಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿ ಗುಂಪನ್ನು ತಹಬದಿಗೆ ತಂದು ಮೆತ್ತಗೆ ಗುಂಪಿನಿಂದ ನನ್ನನ್ನು ಪಕ್ಕಕ್ಕೆ ಕರೆಸಿ, “ಸಂತೋಷಾ… ಇದು ನಿನಗೆ ಹೇಳಿದ ಕ್ಷೇತ್ರವಲ್ಲ, ನಿನ್ನ ಹಿನ್ನಲೆ ಇದಕ್ಕೆ ಸರಿ ತೂಗುವುದೂ ಇಲ್ಲ. ಆದ್ದರಿಂದ ನಿನ್ನ ಕಾರ್ಯ ಕ್ಷೇತ್ರವೇ ಬೇರೆ. ಹಾಗಂತ ರಾಜಕೀಯ ಬೇಡ ಅಂತಲೂ ಅಲ್ಲ. ಅದು ಒಂದು ಮೂಲೆಯಲ್ಲಿ ಇರಲಿ. ನೀನು ನಿನ್ನ ಪ್ರತಿಭೆಯನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯ ಪ್ರವರ್ತನಾಗಬೇಕು” ಎಂದು ಆಗಿಂದಾಗ್ಗೆ ಎಚ್ಚರವನ್ನೂ, ಮಾರ್ಗದರ್ಶನವನ್ನೂ ನೀಡುತ್ತಿದ್ದರು. ನನ್ನ ಹಲವು ಪುಂಡಾಟಗಳನ್ನು ಖುದ್ದು ತನ್ನ ಮಗನಲ್ಲೇ ಕಂಡಂತೆ ತಾವೇ ಸಹಿಸಿಕೊಂಡು, ಮನೆಯಲ್ಲಿ ಅಪ್ಪನಿಗೂ ವಿಚಾರ ತಿಳಿಸದೆ,ಅಪ್ಪನ ಸಿಟ್ಟಿನ ಉರಿಗಣ್ಣಿನಿಂದ ಪಾರು ಮಾಡಿದ್ದೂ ಇದೆ ! ಅವರು ಇರುತ್ತಿದ್ದುದೇ ಹಾಗೆ…ಸದಾ ನಗುಮುಖ. ಎಲ್ಲರೊಂದಿಗೆ ಬೆರೆಯುವ ಗುಣ, ಸಹನೆ ಇವೆಲ್ಲವೂ ಅವರತ್ತ ವಿದ್ಯಾರ್ಥಿಗಳನ್ನು ಹೆಚ್ಚು ಹೆಚ್ಚು ಆಕರ್ಷಿಸುತ್ತಿತ್ತು. ಸದಾ ಮಾತಿನಲ್ಲಿ ನಗೆ ಚಟಾಕಿ ಹಾರಿಸುವ, ತರಗತಿಗಳಲ್ಲಿ ವಿದ್ಯಾರ್ಥಿಗಳ ಮೂಡ ಅನ್ನು ಗಮನಿಸಿ. ಮೊದಲಿಗೆ ಅದನ್ನು ಟ್ಯೂನ್ ಮಾಡಿ ಹದಕ್ಕೆ ತಂದು ನಂತರ ತರಗತಿಗಳನ್ನು ಮುಂದುವರಿಸುತ್ತಿದ್ದರು. ನನ್ನ ಹಲವು ತಪ್ಪು ನಡವಳಿಕೆಗಳು ಅವರ ಗಮನಕ್ಕೆ ಬಂದಾಗಲೂ ವಿಭಾಗಕ್ಕೆ ಕರೆದು ಕ್ಲಾಸ್ ತೆಗೆದುಕೊಳ್ಳದೆ, ತರಗತಿಯಲ್ಲಿ ಎಲ್ಲರ ಮುಂದೆ ಅವಮಾನ ಮಾಡದೆ, ತರಗತಿಯಲ್ಲಿ ಮೆತ್ತಗೆ ತಮ್ಮ ಮಾತಿನ ಚಾಟಿಯ ಮೂಲಕ ಹೇಳಬೇಕಾದ್ದದ್ದನ್ನು ಹೇಳುತ್ತಿದ್ದರು. ನನ್ನನ್ನು ಸಂಪೂರ್ಣವಾಗಿ ಹದ್ದು ಬಸ್ತಿನಲ್ಲಿಡುವ ಎಲ್ಲಾ ರೀತಿಯ ಹಕ್ಕುಗಳಿದ್ದಾಗಲೂ ಅವರು ಹಾಗೆ ಯಾವತ್ತೂ ಮಾಡಿದವರಲ್ಲ ಮತ್ತು ಅದನ್ನು ಪ್ರದರ್ಶಿಸಿದವರೂ ಅಲ್ಲ. ಕೊಡಬೇಕಾದಲ್ಲಿ ಸ್ವಾತಂತ್ರ್ಯವನ್ನು ಕೊಟ್ಟವರು. ಹಾಕಬೇಕಾದಲ್ಲಿ ಅಂಕುಶವನ್ನು ಹಾಕಿದವರು. ಒಬ್ಬ ಸ್ನೇಹಿತನಾಗಿ ತಮ್ಮ ಚಿಂತನೆಯ ಮೂಲಕ, ತಿಳಿಹೇಳಿದವರು. ಇದಕ್ಕೆ ಪೂರಕವಾಗಿ ಒಂದು ಘಟನೆ ಹೀಗಿದೆ; ನಮ್ಮ ಕಾಲೇಜಿಗೆ ಆತುಕೊಂಡೇ ಕೋರ್ಟ್ ಇತ್ತು. ಅಲ್ಲೊಂದು ಕ್ಯಾಂಟಿನೂ ಇತ್ತು. ಕಾಲೇಜಿನ ಕ್ಯಾಂಟೀನಿನಲ್ಲಿ ” ಧೂಮಲೀಲೆ” ಗೆ ಅವಕಾಶವಿಲ್ಲ. ಹಾಗಾಗಿ ನಮ್ಮ ಧೂಮಕೇತುಗಳ ಗುಂಪು ಬಿಡುವಿನ ಸಮಯದಲ್ಲಿ ಕೋರ್ಟ್ ಕ್ಯಾಂಟೀನ್ ಗೆ ಹಾಜರ್. ತರಗತಿಯನ್ನಾದರೂ ತಪ್ಪಿಸುತ್ತಿದ್ದೆವು ಆದರೆ ಕೆ.ಕೆ (ಕೋರ್ಟ್ ಕ್ಯಾಂಟೀನ್) ಯನ್ನು ಮಾತ್ರ ಖಂಡಿತಾ ಇಲ್ಲ. ಹೀಗೆ ಅಂದು ನನ್ನ ಮತ್ತು ಸಂಗಡಿಗರ ಧೂಮಲೀಲೆಗೆ ಆಹುತಿಯಾಗುತ್ತಿದ್ದ ಬ್ರ್ಯಾಂಡ್ “ವಿಲ್ಸ್ ನೇವಿ ಕಟ್” ! ನನ್ನ ‘ಲೀಲೆ’ ಯ ಬಗ್ಗೆ ಖಚಿತವಾಗಿ ಅರಿತ ಮೇಷ್ಟ್ರು ಒಂದು ದಿನ ತರಗತಿಯಲ್ಲಿ ಪಾಠ ಮಾಡುತ್ತಾ…ಮಾಡುತ್ತಾ… ಅದು ಹೇಗೋ ತಾವು ತೆಗೆದುಕೊಳ್ಳುತ್ತಿದ್ದ ವಿಷಯಕ್ಕೆ ‘ನಕ್ಷತ್ರ’ ವನ್ನು ತಂದು ಮಾತನಾಡತೊಡಗಿದರು… ನನ್ನ ಲೀಲೆಯ ಜೊತೆಗಾರ ಹಾಗೂ ಪದವಿ ಶಿಕ್ಷಣದ ಸಹಪಾಠಿ ರಾಜು ಶರ್ಮ ಮತ್ತು ನಾನು ತದೇಕ ಚಿತ್ತದಿಂದ ಅವರ ಮಾತನ್ನು ಕೇಳುತ್ತಿದ್ದೆವು. ನಮ್ಮ ಗಮನವು ಅಲ್ಲಿ ಕೇಂದ್ರೀಕೃತಗೊಂಡದ್ದನ್ನು ಗಮನಿಸಿದ ಮೇಷ್ಟ್ರು… ” ನೋಡಿ…. ಸಂತೋಷನಿಗೆ ನಕ್ಷತ್ರ ಎಂದರೆ ಎಷ್ಟು ಇಷ್ಟ ಅಂತಾ ….. ಅವನು ಮೈಯೆಲ್ಲಾ ಕಿವಿಯಾಗಿ ಕೇಳುತ್ತಿದ್ದುದನ್ನು ನೋಡಿದರೆ ನಕ್ಷತ್ರ ಲೋಕಕ್ಕೇ ಸವಾರಿ ಹೊರಟಂತಿದೆ…ಅಲ್ವಾ ಸಂತೋಷಾ….ನಿಂತುಕೊಪ್ಪಾ…ಇವನಿಗೆ ಯಾವತ್ತೂ ನಕ್ಷತ್ರದ ಧ್ಯಾನ…ಬಿಡುವಿನ ವೇಳೆ, ಮಧ್ಯಾಹ್ನ ಊಟದ ನಂತರ, ಸಂಜೆ ಕಾಫಿಯ ನಂತರ…ಹೀಗೆ ದಿನಕ್ಕೆ ಎಷ್ಟು ನಕ್ಷತ್ರಗಳ ಸೇವನೆ ನಡೆಯುತ್ತದೆ ಹೇಳಪ್ಪಾ….” ಎಂದು ಚಾಟಿ ಬೀಸಿದಾಗ… ಧಸ್ಸಕ್ಕ್ ಎಂದಿತು ನನ್ನ ಎದೆ….! ಮನದಲ್ಲಿ, ಈಗಲೆ ಭೂಮಿ ಬಿರಿಯಬಾರದೇ ಎಂದು ನುಸುಳಿ ಹೋದದ್ದೂ ಸುಳ್ಳಲ್ಲ !! ಪಕ್ಕದಲ್ಲೇ ಇದ್ದ ರಾಜುವನ್ನೂ ನಿಲ್ಲಿಸಿ ಹೇಳಪ್ಪಾ ನಿಮ್ಮ ನಕ್ಷತ್ರ ಸೇವನೆ ದಿನಕ್ಕೆ ಎಷ್ಟು ಅಂತ….. ಅಂದ್ರೆ, ವಿಲ್ಸ್ ಸಿಗರೇಟಿನ ಪ್ಯಾಕ್ ನಲ್ಲಿ ನಕ್ಷತ್ರದ ಚಿಹ್ನೆಗಳಿದ್ದುವು. ಸಂಕೇತದ ಮೂಲಕ ಅದು ನಮಗೆ ಅರ್ಥವಾಗಬೇಕು ಹಾಗೆ ಅದು ಇತರ ಸಹಪಾಠಿಗಳಿಗೆ ಗೊತ್ತಾಗಿ ನನಗೆ ಮುಖಭಂಗವೂ ಆಗಬಾರದು. ಹಾವೂ ಸಾಯಬಾರದು, ಕೋಲೂ ಮುರಿಬಾರದು ಅಂತಾರಲ್ಲ ಹಾಗೆ !!! ಹೀಗೆ ಪಾಠದೊಳಗೇ…ಬದುಕಿನ ಪಾಠವನ್ನೂ ಹೇಳಿಕೊಡುತ್ತಿದ್ದ ಮೇಷ್ಟರಲ್ಲಿ ಪ್ರೀತಿಯ ಒರತೆಗೇನೂ ಕಡಿಮೆ ಇರಲಿಲ್ಲ. ಅದು ಎಂದೂ ಬತ್ತದ ಚಿಲುಮೆ. ತಮ್ಮ ವಿದ್ಯಾರ್ಥಿಗಳನ್ನು ಅವರು ತಮ್ಮ ಸ್ವಂತ ಮಕ್ಕಳಂತೆ ಕಂಡು, ಅವರನ್ನು ತಿದ್ದಿ ತೀಡಿದವರು. ಬಡ ವಿದ್ಯಾರ್ಥಿಗಳಿಗೆ ಸದಾ ಸಹಾಯ ಹಸ್ತವನ್ನು ಚಾಚುವ ಮೇಷ್ಟರದ್ದು ತಾಯಿ ಹೃದಯ. ನಗು ನಗುತ್ತಲೇ ಬದುಕಿನ ಅಷ್ಟೂ ಸವಾಲುಗಳನ್ನು ಎದುರಿಸುವ ಶಕ್ತಿ ಮೇಷ್ಟ್ರಿಗಿತ್ತು. ತಮ್ಮ ಸಂಸಾರ ಬದುಕಿನ “ನಾದಕ್ಕೆ” ಸಾಥ್ ನೀಡಿದ ಕೀರ್ತಿ ಮಾತ್ರ ನಿಸ್ಸಂಶಯವಾಗಿ ಅವರ ಅರ್ಧಾಂಗಿಗೆ ಸಲ್ಲಲೇಬೇಕು. ಮೇಷ್ಟರ ಆಸಕ್ತಿ, ಅದಕ್ಕೆ ಸರಿಯಾಗಿ ಅವರ ಸುತ್ತಾಟ, ಧುತ್ತೆಂದು ಮನೆಗೆ ನುಗ್ಗುವ ಸಮಾನ ಮನಸ್ಕ ಗೆಳೆಯರ ಗುಂಪು ಅವರ ತಿಂಡಿ ತೀರ್ಥದ ಉಪಚಾರದ ಜೊತೆಗೆ ತಮ್ಮ ನೆತ್ತರನ್ನೇ ಹಂಚಿಕೊಂಡು ಬಂದಿರುವ ಆರತಿಗೊಂದು, ಕೀರ್ತಿಗೋಂದನ್ನೂ ಸಂಭಾಳಿಸಿ, ನಿಭಾಯಿಸುವ ಶಕ್ತಿ ಅವರಲ್ಲಿತ್ತು. ಅದನ್ನವರು ಚೆನ್ನಾಗಿಯೇ ನಿರ್ವಹಿಸಿದರು ಕೂಡ. ಇಲ್ಲದಿದ್ದಲ್ಲಿ ಮೇಷ್ಟ್ರ ಇಷ್ಟೊಂದು ಪ್ರತಿಭೆಗಳು ಚಿಮ್ಮುತ್ತಿರಲಿಲ್ಲ, ತನ್ನ ವಿದ್ಯಾರ್ಥಿಗಳಿಗೆ ಮನಸೋ ಇಚ್ಛೆ ಪ್ರೀತಿಯನ್ನು ಧಾರೆ ಎರೆಯಲೂ ಸಾಧ್ಯವಾಗುತ್ತಿರಲಿಲ್ಲ, ಗೆಳೆಯರ ಗುಂಪಿನಲ್ಲಿ ಬೆರೆತು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲೂ ಆಗುತ್ತಿರಲಿಲ್ಲ….ಹುಣ್ಣಿಮೆಯ ರಾತ್ರಿಯಲಿ ಉಕ್ಕುವ ಕಡಲಂತೆ ನನ್ನ ನೆನಪುಗಳು ಮೊಗೆ ಮೊಗೆದು ಬರಲೂ ಸಾಧ್ಯವಿರುತ್ತಿರಲಿಲ್ಲ….! ಅದಕ್ಕಾಗಿ ಮತ್ತದರ ಜೊತೆಗೆ ಮೇಷ್ಟ್ರ ಹೆಗಲಿಗೆ ಹೆಗಲು ಕೊಟ್ಟು ಅವರ ಸುಖ ದು:ಖದಲ್ಲಿ ಸರಿ ಸಮಾನವಾಗಿ ಭಾಗಿಯಾದ ಮೇಡಂಗೆ ನನ್ನದೊಂದು ದೊಡ್ಡ ಸಲಾಮು !! ಹೇಳಿಕೊಳ್ಳುವ ಹಾಗೆ ೬೦ ರ ಈ ಇಳಿವಯಸ್ಸಲ್ಲಿ ಜನರು ಬದುಕಿನ ಓಟಕ್ಕೆ ಪ್ರತಿಸ್ಪರ್ಧಿಯಾಗಿ ಓಡಲು ಶಕ್ತರಿರುವುದಿಲ್ಲ ಅಂತಾರೆ. ಆದರೆ ಮೇಷ್ಟ್ರಲ್ಲಿರುವ ಅವರ ಬತ್ತದ ಜೀವನೋತ್ಸಾಹ, ಸದಾ ಒಂದಲ್ಲ ಒಂದು ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಕ್ರಿಯಾಶೀಲ ಮನಸ್ಸು, ಹೊಸತನ್ನು ಅರಿಯುವ ಹಂಬಲ, ಕಷ್ಟಗಳಿಗೆ ಸ್ಪಂದಿಸುವ ಮಾನವೀಯತೆ, ಇದ್ದುದರಲ್ಲೇ ಖುಷಿ ಪಡುವ ಜೊತೆಗೆ ಇನ್ನೊಬ್ಬರನ್ನೂ ಖುಷಿಪಡಿಸುವ ದೊಡ್ಡ ಗುಣ, ಬಿದ್ದಾಗ ಪೇಚು ಮುಖ ಹಾಕದೆ, ಗೆದ್ದಾಗ ಬೀಗದೆ ಇರುವ ಸ್ಥಿತಪ್ರಜ್ಞತೆ…ಹೀಗೆ ಹತ್ತು ಹಲವು ಉತ್ತಮ ಗುಣಗಳು ಪ್ರಾಯಶ: ಅವರನ್ನು ೬೦ ರ ಜವ್ವನಿಗನನ್ನಾಗಿ ಮಾಡಿದೆ ಎಂದರೆ ಅದು ಅತ್ತಿಶಯೊಕ್ತಿಯಾಗಲಾರದು. ನನ್ನ ಬದುಕನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಹಲವು ನೀರು-ಸಾರಗಳಲ್ಲಿ ನನ್ನ ನೆಚ್ಚಿನ ಮೇಷ್ಟ್ರದ್ದು ಒಂದು ಪಾಲಿದೆ ಎಂಬುದೇ ನನಗೆ ಹೆಮ್ಮೆಯ ವಿಚಾರ. ಋಣ ಭಾರ ತೀರಿಸಲಾರೆ ಎನ್ನುವುದು ಗೊತ್ತಿದ್ದರೂ ಅಂತಹ ಒಂದು ಸಣ್ಣ ಪ್ರಯತ್ನ ಈ ಅಭಿನಂದನಾ ಗ್ರಂಥದಲ್ಲಿ ಶಬ್ದಗಳ ಮೂಲಕ ಪೋಣಿಸಿದ್ದೇನೆ. ಎಡವಿದಾಗ ಮೇಲೆತ್ತಿ ಬೆನ್ನು ತಟ್ಟಿ ಹುರಿದುಂಬಿಸಿದ ನನ್ನ ನೆಚ್ಚಿನ ಮೇಷ್ಟ್ರ ಬದುಕಲ್ಲಿ “ನಾದ” ಹೀಗೆ ಹೊಮ್ಮುತ್ತಿರಲಿ ಅದಕ್ಕೆ ಸರಿಯಾದ ಸಾಥ್ ಅನ್ನು ನಾವೆಲ್ಲರೂ ನೀಡುವಂತಾಗಲಿ ಎನ್ನುವುದೇ ನನ್ನ ಆಸೆ. “ನೆನೆವುದೆನ್ನ ಮನಮ್ ಗುರುವರ್ಯನಮ್…” ಎನ್ನಲು ಖಂಡಿತಾ ಅಡ್ಡಿಯಿಲ್ಲ. ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭವು ಚೆನ್ನಾಗಿ ಮೂಡಿಬರಲಿ, ಮೇಷ್ಟ್ರು ನಡೆದಲ್ಲಿ-ಕುಳಿತಲ್ಲಿ-ನಿಂತಲ್ಲಿ-ಬದುಕಲ್ಲಿ, ಒಟ್ಟಿನಲ್ಲಿ ಅವರ ಮುಂದಿನ ಬಾಳು ” ನಾದಮಯ ” ವಾಗಿರಲಿ ಎಂಬುದೇ ನನ್ನ ಹಾರೈಕೆ.

****

(ನಾ ದಾಮೋದರ ಶೆಟ್ಟರ ಅಭಿನ೦ದನಾ ಗ್ರ೦ಥಕ್ಕಾಗಿ ಬರೆದ ಲೇಖನ)

]]>

‍ಲೇಖಕರು G

May 28, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಬರವಣಿಗೆ ಎಂಬ ಭಾವಲಹರಿ

ಬರವಣಿಗೆ ಎಂಬ ಭಾವಲಹರಿ

ಗೌರಿ ಚಂದ್ರಕೇಸರಿ ಬರೆಯುವ ಲಹರಿಯಲ್ಲೊಮ್ಮೆ ಬಂಧಿಯಾಗಿಬಿಟ್ಟರೆ ಅದರಿಂದ ಬಿಡುಗಡೆ ಹೊಂದುವುದು ಕಷ್ಟ. ಬಾಲ್ಯದ ಎಳಕಿನಲ್ಲಿಯೋ, ಹುಚ್ಚು...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

ಕಥೆಯೂ ಅದರ ಇತಿಹಾಸ ಪುರಾಣವೂ..

ಕಥೆಯೂ ಅದರ ಇತಿಹಾಸ ಪುರಾಣವೂ..

ಕತೆ ಬರೆಯುವವರ ಕೈಪಿಡಿ  ಮಹಾಂತೇಶ ನವಲಕಲ್ ಈವತ್ತು ಕನ್ನಡ ಕಥಾ ಜಗತ್ತು ತುಂಬಾ ಪ್ರಜ್ವಲವಾದ ಸ್ಥಿತಿಯಲ್ಲಿದ್ದರೂ ಮತ್ತು ಸಾಹಿತ್ಯ...

2 ಪ್ರತಿಕ್ರಿಯೆಗಳು

 1. sunil rao

  wonderfull write up santoshji..
  a great gratitude to NADA…he is simply amazing.

  ಪ್ರತಿಕ್ರಿಯೆ
 2. ಸುಬ್ಬಯ್ಯ ಭಟ್ ವರ್ಮುಡಿ

  ಸಂತೋಷ್; ನನ್ನ ಕಾಲೇಜು ದಿನಗಳು ಮರುಕಳಿಸಿದುವು. “ನಾದಾ” ಪುನಃ ಮೊರೆಯಿತು. ನಾನು ಕನ್ನಡದ ವಿದ್ಯಾರ್ಥಿಯಲ್ಲದಿದ್ದರೂ ಅವರ ಒಡನಾಟದ ರುಚಿ ಅರಿತವನೇ. ಬೆಲ್ಲದ ಸವಿಯನ್ನು ವಿವರಿಸುವುದು ಸಾಧ್ಯವಿಲ್ಲ. ಆದರೂ ವಿವರಿಸುವ ನಿಮ್ಮ ಪ್ರಯತ್ನ ಖುಶಿಕೊಟ್ಟಿತು. ನನಗಂತೂ ರುಚಿ ತಿಳಿದಿದೆಯಲ್ಲಾ. ಮತ್ತೆ ನಿಮ್ಮ “ಕಪಿಸೈನ್ಯ” ದ ನೆನಪು ಕೂಡಾ ಪುನರವತರಿಸಿತು.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: