ಎಲ್ಲಿ ಹೋದಿರಿ ಮುನಿಯಪ್ಪ..!

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ..

ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ ಸಾಕಷ್ಟು ಪ್ರಾಮುಖ್ಯತೆ ಪಡೆದಿದ್ದ ರಂಗನಾಥ ರಾವ್ ಅವರು ನಂತರ ‘ಪ್ರಜಾವಾಣಿ’ ‘ಸುಧಾ’ದಲ್ಲಿಯೂ ಮುಖ್ಯ ಹುದ್ದೆಗಳನ್ನು ನಿಭಾಯಿಸಿ ಕಾರ್ಯನಿರ್ವಾಹಕ ಸಂಪಾದಕರಾಗಿ ನಿವೃತ್ತರಾದರು.

ಸಂಯುಕ್ತ ಕರ್ನಾಟಕ’ ‘ವಾರ್ತಾ ಬಾರತಿ’ಯಲ್ಲಿ ಅಂಕಣ ಬರೆದ ರಂಗನಾಥರಾವ್ ಅವರು ‘ಅವಧಿ’ಯ ಆಹ್ವಾನವನ್ನು ಮನ್ನಿಸಿ ತಮ್ಮ ಮಾಧ್ಯಮ ಲೋಕದ ಪಯಣದ ಬಗ್ಗೆ ಬರೆಯಲಿದ್ದಾರೆ.

। ಕಳೆದ ವಾರದಿಂದ ।

ಮೈ ಬಣ್ಣವನ್ನೇ ಚೆಲುವೆಂದು ನಾವು ಭ್ರಮಿಸುತ್ತೇವೆ ಎನ್ನುವುದು ಲೋಹಿಯಾ ಅವರ ಮಾತು. ಅಂತರಂಗದ ಸೊಬಗು ಎನ್ನುವುದೊಂದು ಇದೆ, ಅದಕ್ಕೆ ನಾವು ಕುರುಡಾಗಿದ್ದೇವೆ ಎನ್ನುವುದೂ ಈ ಮಾತಿನ ತಾತ್ಪರ್ಯವಾದೀತು. ಅಂತರಂಗದ ಸೊಬಗು ಎನ್ನುವುದು ಮುಖ್ಯವಾಗಿ ನೈತಿಕತೆ ಮತ್ತು ಸ್ವಾತಂತ್ರ್ಯಗಳಿಗೆ ಸಂಬಂಧಿಸಿದ್ದು. ಸ್ವಾತಂತ್ರ್ಯ ಮತ್ತು ಮುಕ್ತತೆ ಮಾನವನ ಘನತೆಯನ್ನು ಒರೆಗೆ ಹಚ್ಚುವ ಎರಡು ಮಾನದಂಡಗಳು. ‘ಪ್ರಜಾವಾಣಿ’ಯಲ್ಲಿ ಹೆಜ್ಜೆಯಿಟ್ಟೊಡನೆಯೇ ಇಂಥದೊಂದು ಸೊಬಗನ್ನು ನನ್ನ ಆಂತರ್ಯ ಥಟ್ಟನೆ ಗುರುತಿಸಿತ್ತು.

ಮೊಟ್ಟಮೊದಲಿಗೆ ಸಂಪಾದಕೀಯ ವಿಭಾಗದಲ್ಲಿ ನಾನು ಗಮನಿಸಿದ್ದು ಮುಕ್ತವಾಗಿ ಮಾತನಾಡಬಹುದಾದಂಥ ಸ್ವಾತಂತ್ರ್ಯ. ಮುಕ್ತವಾದ ವಾತಾವರಣ. ಸಂಪಾದಕ, ಸುದ್ದಿ ಸಂಪಾದಕರಿಂದ ಹಿಡಿದು ಹಿರಿಯ ಕಿರಿಯ ಸಹೋದ್ಯೋಗಿಗಳ ಜೊತೆ ನಿರ್ಭೀತಿಯಿಂದ, ಮುಚ್ಚುಮರೆ ಇಲ್ಲದೆ ಯಾವ ವಿಷಯ ಬೇಕಾದರೂ ಚರ್ಚಿಸಬಹುದಿತ್ತು. ಟಿಎಸ್ಸಾರ್, ಖಾದ್ರಿ, ವೈಎನ್ಕೆ ಅವರಿಂದ ಹಿಡಿದು ಸಂಪಾದಕೀಯ ವಿಭಾಗದ ಒಂದೊಂದು ಭಾಗದಲ್ಲೂ ಇದ್ದವರ ವಿದ್ಯೆ, ಪರಿಣತಿ, ಅನುಭವ, ವರ್ಚಸ್ಸುಗಳೂ ಮುಕ್ತ ಚರ್ಚೆಯ ಸ್ವಾತಂತ್ರ್ಯಕ್ಕೆ ಪೂರಕವಾಗಿದ್ದವು.

ಎಲ್ಲ ಪತ್ರಿಕಾ ಕಚೇರಿಗಳ್ಲಿರುವಂತೆ ಇಲ್ಲಿಯೂ ಸಾರ್ವ ಲೌಕಿಕ ಸುದ್ದಿ ಮೇಜು (ಜನರಲ್ ನ್ಯೂಸ್ ಡೆಸ್ಕ್), ಗ್ರಾಮಾಂತರ ಸುದ್ದಿಮೇಜು (ಮೊಫಿಸಿಲ್ ನ್ಯೂಸ್ ಡೆಸ್ಕ್), ವರದಿಗಾರರ ವಿಭಾಗ, ಸಂಪಾದಕೀಯ ಪುಟದ ವಿಭಾಗ, ಕ್ರೀಡಾ ವಿಭಾಗ, ವಾಣಿಜ್ಯ ವಿಭಾಗ, ಸಾಪ್ತಾಹಿಕ ಪುರವಣಿ ವಿಭಾಗಗಳು `ಪ್ರಜಾವಾಣಿ’ಯಲ್ಲೂ ಇದ್ದವು. ಸಂಪಾದಕರು, ಸುದ್ದಿ ಸಂಪಾದಕರ ನಂತರ ಸಂಪಾದಕೀಯ ಪುಟ ನೋಡಿಕೊಳ್ಳಲು, ಸಂಪಾದಕೀಯ ಬರೆಯಲು ಇಬ್ಬರು ಸಹಾಯಕ ಸಂಪಾದಕರುಗಳಿದ್ದರು-ಅವರು ಮ. ಶ್ರೀಧರ ಮೂರ್ತಿ ಮತ್ತು ಗೋಪಾಲಕಣ್ಣನ್.

ಇಬ್ಬರೂ ಸಮರ್ಥ ಲೇಖಕರುಗಳಾಗಿದ್ದರು. ಚಿತ್ರದುರ್ಗ ಜಿಲ್ಲೆಯ ಮರಡಿಹಳ್ಳಿಯವರಾದ ಶ್ರೀಧರ ಮೂರ್ತಿಯವರು  ಕೆಲವು ಕಾದಂಬರಿಗಳು ಮತ್ತು ನಂದಿಕೇಶ್ವರನ ಅಭಿನಯ ದರ್ಪಣ, ವಾತ್ಸ್ಯಾಯನನ ಕಾಮ ಕಲೆ ಮೊದಲಾದ ಶಾಸ್ತ್ರ ಗ್ರಂಥಗಳನ್ನು ರಚಿಸಿ ಖ್ಯಾತರಾಗಿದ್ದರು. ತ.ರಾ.ಸು ಮತ್ತು ಇತಿಹಾಸಕಾರ  ಹುಲ್ಲೂರು ಶ್ರೀನಿವಾಸ ಜೋಯಿಸರ ನಿಕಟವರ್ತಿಗಳಾಗಿದ್ದರು.

ಕನ್ನಡ ಪತ್ರಿಕೋದ್ಯಮ ಸೇರಿದ ಮೊದಲ ಸ್ನಾತಕೋತ್ತರ ಎಂ.ಎ. ಪದವೀಧರರಾದ ಮಾಗಡಿ ಗೋಪಾಲ ಕಣ್ಣನ್ ಅವರೂ ರಾಜ್ಯ, ರಾಷ್ಟ್ರ, ವಿದೇಶಗಳ ವಿದ್ಯಮಾನಗಳಲ್ಲಿ ಜ್ಞಾನಿಗಳಾಗಿದ್ದರಲ್ಲದೆ ಸಂಗೀತ, ಕಲೆಗಳಲ್ಲೂ ಅಧ್ಯಯನ ಮಾಡಿದ್ದರು. ಕಣ್ಣನ್ ಅವರಿಗೆ ಸಾಹಿತ್ಯ, ಸಂಗೀತ, ನಾಟ್ಯ ಮೊದಲಾದ ಕಲೆಗಳಲ್ಲಿ ಪ್ರಕಾಂಡ ಪಂಡಿತರಾಗಿದ್ದ ಡಾ. ರಾಳ್ಳಪಳ್ಳಿ ಅನಂತಕೃಷ್ಣ ಶರ್ಮರೊಡನೆ ಒಡನಾಟವಿತ್ತು. ಅಲ್ಲದೆ ಅವರು  ಆರ್.ಎಸ್.ಎಸ್.ನ ಕಟ್ಟಾ ಅಭಿಮಾನಿಯಾಗಿದ್ದರು.

ವೈಎನ್ಕೆ ಮತ್ತು ಸಿ. ಸಿದ್ದಲಿಂಗಪ್ಪ ಉಪ ಸುದ್ದಿ ಸಂಪಾದಕರು. ಇವರಿಬ್ಬರೂ ಸರ್ವಲೋಕ ಸುದ್ದಿ ಮೇಜು, ಗ್ರಾಮಾಂತರ ಸುದ್ದಿ ಮೇಜು ಮತ್ತು ವರದಿಗಾರರ ಸುದ್ದಿ ವಿಭಾಗದ ಸುದ್ದಿಗಳ ನಿರ್ವಹಣೆ ಮಾಡುತ್ತಿದ್ದರು. ಸಾರ್ವ ಲೌಕಿಕ ಸುದ್ದಿ ಮೇಜಿನಲ್ಲಿ ರಾಶಾ, ಬಿ.ಎಂ.ಕೆ. ಮತ್ತು ಎಚ್. ನರಸಿಂಹ ಮೂರ್ತಿ ಮುಖ್ಯ ಉಪ ಸಂಪಾದಕರುಗಳಾಗಿದ್ದರು. ಗ್ರಾಮಾಂತರ ಸುದ್ದಿ ಮೇಜಿನಲ್ಲಿ ಮುನಿಯಪ್ಪ, ಗುರು ಮೂರ್ತಿ ಮತ್ತು ಟಿ,ನಾಗರಾಜು ಮುಖ್ಯ ಉಪ ಸಂಪಾದಕರುಗಳಾಗಿದ್ದರು. ಎಸ್.ವಿ. ಜಯಶೀಲ ರಾವ್ ಮುಖ್ಯ ವರದಿಗಾರರು.

ಸಿ.ವಿ. ರಾಜಗೋಪಾಲ, ಜಯತೀರ್ಥ ಹಿರಿಯ ವರದಿಗಾರರು. ಎಚ್.ಎಸ್. ಸೂರ್ಯನಾರಾಯಣ ಕ್ರೀಡಾ ವಿಭಾಗದ ಮುಖ್ಯ ಉಪ ಸಂಪಾದಕರಾಗಿದ್ದರು. ‘ಮಾವ’ ಎಂದೇ ಕರೆಯಲಾಗುತ್ತಿದ್ದ ಕೆ.ಎಚ್. ನರಸಿಂಹ ಮೂರ್ತಿ ವಾಣಿಜ್ಯ ಪುಟ ನೋಡಿಕೊಳ್ಳುತಿದ್ದರು. ಬಿ.ವಿ. ವೈಕುಂಠರಾಜು ಸಾಪ್ತಾಹಿಕ ಪುರವಣಿಯ ಮುಖ್ಯ ಉಪ ಸಂಪಾದಕರು. ಅವರ ಜೊತೆ ಜಿ.ಎಸ್. ಸದಾಶಿವ ಇದ್ದರು. ವೈಕುಂಠರಾಜು, ಸದಾಶಿವ ಹೊರತಾಗಿ ಇವರೆಲ್ಲರೂ ವೃತ್ತಿಯಲ್ಲಿ ನನಗಿಂತ ಹಿರಿಯರೂ ಅನುಭವಿಗಳೂ ಆಗಿದ್ದರು.

ಇವರೆಲ್ಲರೂ ತೆರೆದ ಮನಸ್ಸಿನವರಾಗಿದ್ದು ಕಿರಿಯರೊಂದಿಗೆ ಮುಕ್ತವಾಗಿ ಬೆರೆಯುತ್ತಿದ್ದುದು ನಾನು ಹೋದೊಡನೆಯೇ ಕಂಡುಕೊಂಡ ವಿಶೇಷ. ಹೀಗಾಗಿ ಇವರುಗಳ ಅನುಭವದ, ವಿಷಯ ಜ್ಞಾನ-ಪರಿಣಿತಿಗಳ ಲಾಭವನ್ನು ಪಡೆದುಕೊಳ್ಳುವ ಅದೃಷ್ಟ ನನ್ನಂಥವರದಾಗಿತ್ತು. ಚಿತ್ರಕಲೆ ಮತ್ತು ಸಂಗೀತ ಕಚೇರಿಗಳ ವಿಮರ್ಶೆ ಬರೆಯುತ್ತಿದ್ದ ಬಿ.ವಿ.ಕೆ ಶಾಸ್ತ್ರಿಗಳು ಪ್ರಜಾವಾಣಿಯ ಉದ್ಯೋಗಿಯಲ್ಲದಿದ್ದರೂ ಉದ್ಯೋಗಿಯಂತೇಯೇ ಇದ್ದರು. ಸಂಗೀತಜ್ಞರೂ ಕಲಾಭಿಜ್ಞರೂ ಆಗಿದ್ದ ಶಾಸ್ತ್ರಿಗಳು ಪೌರಾತ್ಯ ಮತ್ತು ಪಾಶ್ಚಿಮಾತ್ಯ ಸಂಗೀತ ಮತ್ತು ಕಲೆಗಳಲ್ಲಿ ನನ್ನಂಥವರಿಗೆ ಒಂದು ಆಕರ ಗ್ರಂಥದಂತಿದ್ದರು.

ನನ್ನ ಮಟ್ಟಿಗಂತೂ ಪ್ರಜಾವಾಣಿ ಒಂದು ಮುಕ್ತ ವಿಶ್ವವಿದ್ಯಾನಿಲಯವೇ ಆಗಿತ್ತು. ಜ್ಞಾನ, ಅನುಭವ, ಪರಿಣತಿಗಳನ್ನುಳ್ಳ ಮಾನವ  ಸಂಪತ್ತಿನ ಜೊತೆಗೆ ಸುಸಜ್ಜಿತವಾದ ಗ್ರಂಥಾಲಯವೂ ಇಲ್ಲಿತ್ತು. ಟಿ.ಎಸ್.ಆರ್. ಅವರ `ಛೂಬಾಣ’ ಅಂಕಣವೇ ಕಲಿಯವವರಿಗೆ ಒಂದು ಜ್ಞಾನದ ಗಣಿಯಂತಿತ್ತು. ಆ ಅಂಕಣದಲ್ಲಿ ನಮ್ಮ ದೇಶದ, ನಮ್ಮ ರಾಜ್ಯದ ಒಂದು ಸಣ್ಣ ಹಳ್ಳಿಯಿಂದ ಹಿಡಿದು ಪ್ರಪಂಚದ ಎಲ್ಲ ಮೂಲೆಗಳ ವಿಷಯಗಳು, ವ್ಯಕ್ತಿಗಳನ್ನು ಟಿಎಸ್ಸಾರ್ ತಮ್ಮ ಭೂತಗನ್ನಡಿಯಲ್ಲಿ ತೋರಿಸುತ್ತಿದ್ದರು.

ಮಾಹಿತಿ ಮತ್ತು ಕಚಗುಳಿ ಇಡುವ, ಕೂರಂಬಾಗುವ ಟೀಕೆ ಟಿಪ್ಪಣಿಗಳಿಂದ ಟಿಎಸ್ಸಾರ್ ವಿಷಯದ ಸರ್ವಾಂಗೀಣ ದರ್ಶನ ಮಾಡಿಸುತ್ತಿದ್ದರು. ಸಂಪಾದಕರಾಗಿ ಟಿಎಸ್ಸಾರ್ ನಮಗೆ ಕಲಿಸುತ್ತಿದ್ದ ಪರಿಯೂ ಪಾಠ ಹೇಳುವ ಮೇಷ್ಟ್ರು ರೀತಿಯದಾಗಿರಲಿಲ್ಲ, ಹಿರಿಯರು ಹೇಳುವ ಬುದ್ಧಿವಾದದ  ರೀತಿಯದೂ ಆಗಿರಲಿಲ್ಲ. ನೀರಿನ ಹತ್ತಿರ ಕರೆದಯ್ದು `ಇನ್ನು ನೀನುಂಟು ನೀರುಂಟು” ಎನ್ನುವ ರೀತಿಯದು. ಒಂದು ಮಾತಿನಲ್ಲಿ ಸೂಚನೆ ಇತ್ತು ಮುಂದೆ ಹೇಗೆ ಸಾಗ ಬೇಕು ಎನ್ನುವ ಬಗ್ಗೆ ನಮಗೆ ಪೂರ್ತಿಯಾಗಿ ಸ್ವಾತಂತ್ರ್ಯಕೊಟ್ಟು ಬಿಡುತ್ತಿದ್ದರು.

ಸುದ್ದಿ ಬರೆಯುವುದು, ಸುದ್ದಿಯ ಮೌಲ್ಯ ವಿವೇಚನೆ, ಅದಕ್ಕೆ ಕೊಡಬೇಕಾದ ಪ್ರಾಶಾಸ್ತ್ಯ, ಪುಟ ವಿನ್ಯಾಸ ಇತ್ಯಾದಿ  ಎಲ್ಲದರಲ್ಲೂ ನಮಗೆ ಸಂಪೂರ್ಣ ಸ್ವಾತಂತ್ರ್ಯ ಕೊಡುತ್ತಿದ್ದರು. ಇದೆಲ್ಲವನ್ನು ವಿಮರ್ಶಿಸುವ ಬೆಳಗುಬೈಗಿನ ಸಂಪಾದಕೀಯ ಸಭೆಯ ಸಂದರ್ಭದಲ್ಲೂ ನಮಗೆ ನಮ್ಮ ನಿರ್ಧಾರ, ವಿವೇಚನೆಗಳನ್ನು ಸಮರ್ಥಿಸಿಕೊಳ್ಲೂವ ಸ್ವಾತಂತ್ರ್ಯವಿತ್ತು. ಖಾದ್ರಿ ಶಾಮಣ್ಣನವರು ಹೇಳಿರುವಂತೆ “ರಾಮಚಂದ್ರ ರಾಯರು ಸಹೋದ್ಯೋಗಿಗಳಿಗೆ ಸ್ವಾತಂತ್ರ್ಯವನ್ನು ಕೊಟ್ಟು ಸಾಮರ್ಥ್ಯವನ್ನು ಬೆಳೆಸಿದರು”.

ನಾನು ಪತ್ರಿಕಾ ವ್ಯವಸಾಯಕ್ಕೆ ಕಾಲಿರಿಸಿದ ದಿನಗಳು ವಾತಾವರಣದ ತುಂಬ ಸಮಾಜವಾದ ಮತ್ತು ನವ್ಯ ಸಾಹಿತ್ಯದ ಗಾಳಿ ಆವರಿಸಿಕೊಂಡಿದ್ದ ದಿನಗಳು.`ಪ್ರಜಾವಾಣಿ’ ಇದರಲ್ಲಿ  ಮುಂಚೂಣಿಯಲ್ಲಿತ್ತು. ಖಾದ್ರ‍್ರಿ ಶಾಮಣ್ಣ ಲೋಹಿಯಾ ಸಮಾಜವಾದದ ಮುಂದಾಳಾದರೆ ವೈಎನ್ಕೆ ನವ್ಯ ಸಾಹಿತ್ಯದ ಸಂಚಲನ ಶಕ್ತಿ.

ಲೋಹಿಯಾ, ಜೆ.ಪಿ. ,ಅಶೋಕ್ ಮೆಹ್ತಾ, ಮೋಹನ್ ಧಾರಿಯಾ, ಮಧು ಲಿಮೆಯೆ, ಜಾರ್ಜ್ ಫರ್ನಾಂಡಿಸ್ ಮೊದಲಾದವರ ಬಗ್ಗೆ ಖಾದ್ರಿಯವರು ಸಮಯ-ಸಂದರ್ಭ ಒದಗಿ ಬಂದಾಗಲೆಲ್ಲ ನಮಗೆ ಹೇಳುತ್ತಿದ್ದರು. ಎಲಿಯಟ್, ಪೌಂಡ್, ಕಮೂ, ಕಾಫ್ಕ, ಲಾರೆನ್ಸ್, ಸಾರ್ತ್ರೆ, ಜಿನೆ, ರಿಚರ್ಡ್ಸ್ ಮೊದಲಾದವರನ್ನು ವೈಎನ್ಕೆ ನಮ್ಮಿಂದ ಓದಿಸುತ್ತಿದ್ದರು.

ಹಾಗೆಯೇ ಐಸೆನ್ಸೆ್ಟೈನ್‍ನ “ಬ್ಯಾಟಲ್ ಶಿಪ್‌ಪೊಟೆಮ್ ಕಿನ್’, (ರಷ್ಯದ ಕ್ರಾಂತಿ ಕುರಿತ ಚಿತ್ರ), ಕುರೊಸಾವಾನ `ರಶೋಮನ್’, ಸತ್ಯಜಿತ್ ರಾಯ್ ಅವರ `ಪಥೇರ್ ಪಾಂಚಾಲಿ’ ಮೊದಲಾದ ಅಭಿಜಾತ ಚಿತ್ರಗಳು, ಪೀಟರ್ ಬ್ರೂಕನ `ಮಹಾಭಾರತ’ ರಂಗಪ್ರಯೋಗ, ಎನ್.ಎಸ್.ಡಿಯ ಅಲ್ಕಾಜಿ, ಸತ್ಯು , ಬಿ.ವಿ.ಕಾರಂತರ ರಂಗಪ್ರಯೋಗಗಳ ಬಗ್ಗೆ; ಹೊಸ ಸಿನಿಮಾ,. ಹೊಸ ನಾಟಕ ಮತ್ತು ರಂಗಭೂಮಿ ಬಗ್ಗೆ; ಕೆ.ವೆಂಕಟಪ್ಪನವರ ಶಿಲ್ಪ ಕಲೆ, ಪಾವಂಜೆ, ರುಮಾಲೆ ಚೆನ್ನಬಸಪ್ಪ, ಎಸ್.ಜಿ.ವಾಸುದೇವ್, ಹೆಬ್ಬಾರ್, ಪಿಕಾಸೊ ಮೊದಲಾದವರ ವರ್ಣ ಚಿತ್ರಗಳ ಬಗ್ಗೆ; ಸಾಹಿತ್ಯ ಕಲೆಗಳ ಪಂಥಗಳ ಬಗ್ಗೆ ಬಗೆಬಗೆಯಾಗಿ `ಘಾ’ ಉವಾಚದೊಂದಿಗೇ ನಮ್ಮೊಂದಿಗೆ ಮಾತನಾಡುತ್ತಿದ್ದ ವೈ.ಎನ್.ಕೆ. ಒಂದು ಮಾಹಿತಿ ಕೋಶವೇ ಆಗಿದ್ದರು.

ಖಾದ್ರಿ ಶಾಮಣ್ಣನವರು  ಜರ್ನಲಿಸಂ ಆಫ್ ಹ್ಯುಮಾನಿಟಿ  ಬಗ್ಗೆ ಹೇಳುತ್ತಲೇ ಪತ್ರಕರ್ತರಿಗೆ, ಭಾಷೆ, ಚರಿತ್ರೆ, ಭೂಗೋಳ ಚೆನ್ನಾಗಿ ಗೊತ್ತಿರಬೇಕೆಂದು ಪದೇಪದೇ ನುಡಿಯುತ್ತಿದ್ದರು. ಬೇಗು ಸರಾಯ್ ಎಲ್ಲಿದೆ ಗೊತ್ತಾ? ನಕ್ಸಲ್ಬಾರಿ ಎಲ್ಲಿದೆ ಗೊತ್ತಾ? ಕಾಗೋಡು ಎಲ್ಲಿದೆ ಗೊತ್ತಾ? ಎಂದು ಕೇಳುತ್ತಲೇ, ಪಟನಾ ಅಂತ ಬರೀ ಬೇಡಿ, ಪಾಟಲೀಪುತ್ರ ಸರಿಯಾದದ್ದು, ಕರಣ್ ಸಿಂಗ್ ಅಲ್ಲ, ಕರಣ ಸಿಂಹ ಎಂದೇ ಬರೆಯ ಬೇಕು ಎಂದೆಲ್ಲ ತಾಕೀತು ಮಾಡುತ್ತಿದ್ದರು. ನಾವು ಹಾಗೆ ಬರೆದಾಗ- ಅಂಕಿತ ನಾಮವನ್ನು ನಮ್ಮ ಮನಸ್ಸಿಗೆ ಬಂದ ಹಾಗೆ ಬರೆಯಬಾರದು, ಯಾರದು `ಘಾ’ ಕರಣ ಸಿಂಹ ಅಂತ ಬರೆದದ್ದು, ಯಾರದು `ಘಾ’ ಹಾಗೆ ಹೇಳಿದ್ದು ಎಂದು ಮರುದಿನ ವೈಎನ್ಕೆ ಮಂತ್ರಪುಷ್ಪ ಸುರಿಮಳೆಯಾಗುತ್ತಿತ್ತು.

 ನಮಗೆ, ಇರುಸುಮುರಿಸು ಮೋಜು ಎರಡೂ…

 “ಸಾರ್ತರೋ, ಸಾತ್ರ್ರೇನೋ? ಸ್ಪೆಲಿಂಗ್ ಗೊತ್ತಾ? ಸರಿಯಾದ ಉಚ್ಚಾರಣೆ ಗೊತ್ತಾ? ಕಮೂನೋ ಕಾಮೂನೋ? ಒಟ್ಟಲ್ಲಿ ಎಲ್ಲ ಕಾಮವೇ, ಫುಲ್‌ಸ್ಟಾಪುಗಳೇ ಇಲ್ಲ. ಎಲ್ಲ `ಘಾ’ಗಳು.

-ಇದು ವೈಎನ್ಕೆಯರಿಗೆ ಖಾದ್ರಿ ತಿರುಗೇಟು.

ಕ್ರಿಯಾಪದವಿಲ್ಲದ ಬರವಣಿಗೆ ಕಂಡರೆ ಖಾದ್ರಿ ಕಿಡಿಕಿಡಿಯಾಗುತ್ತಿದ್ದರು. ಕ್ರಿಯೆಯೂ ಇಲ್ಲ, ಕರ್ಮವೂ ಇಲ್ಲ ಎಂದು ಗಹಿಗಹಿಸಿ ನಗುತ್ತಿದ್ದರು. ಸಂಜೆ ಮನೆಗೆ ಹೋಗುವಾಗ ರಾತ್ರಿ ಪಾಳಿಯವರಿಗೆ “ಜಯಶೀಲನ ಕಾಪಿ ಸರಿಯಾಗಿ  ನೋಡಬೇಕು. ಅವನ ಬರವಣಿಗೆಯಲ್ಲಿ ಕ್ರಿಯಾಪದಗಳೇ ಇರೋದಿಲ್ಲ” ಎಂದು ಎಚ್ಚರಿಕೆಯ ಮಾತುಗಳನ್ನು ಹೇಳುತ್ತಿದ್ದರು.

ಆದರೆ ವಿಪರ್ಯಾಸವೆಂದರೆ ಖಾದ್ರಿಯವರೇ ಕ್ರಿಯಾಪದವಿಲ್ಲದ ವಾಕ್ಯಗಳನ್ನು ಬರೆಯುತ್ತಿದ್ದು ಜಯಶೀಲರನ್ನು ಹಂಗಿಸುತ್ತಿದ್ದರು. ಈ ಕ್ರಿಯಾಪದವಿಲ್ಲದ ಬರವಣಿಗೆ ಶುರುವಾದದ್ದು ಸಿದ್ಧವನಹಳ್ಳಿ ಕೃಷ್ಣಶರ್ಮರಿಂದ- ‘ಮಾತಿನ ಮಂಟಪ’ ಅಂಕಣ ಮೊದಲಾದ ಬರಹಗಳಿಂದ ಎಂದು ಇನ್ನು ಕೆಲವರ ಅಂಬೋಣ. ಖಾದ್ರ‍್ರಿ, ಜಯಶೀಲ ರಾವ್ ಮೊದಲಾದವರು ಕೃಷ್ಣ ಶರ್ಮರ ಗರಡಿಯಲ್ಲಿ ಬೆಳೆದ ಪತ್ರಕರ್ತರೇ.

ಇಂಥ ಸಲ್ಲಾಪಗಳು ಬೇಕಾದಷ್ಟು ನಡೆಯುತ್ತಿದ್ದವು. ಇವೆಲ್ಲದರಿಂದ ನಾವು ಕಲಿಯಲು, ಬೆಳೆಯಲು ಸಹಾಯವಾಯಿತು. ನಮ್ಮನಮ್ಮಲ್ಲೇ ಒಂದು ಲೇಖನ, ವಿಶ್ಲೇಷಣೆ ಕುರಿತೋ ಸುದ್ದಿಯೊಂದಕ್ಕೆ ನೀಡಲಾದ ಮಹತ್ವ ಕುರಿತೋ ಶೀರ್ಷಿಕೆ, ಭಾಷಾಂತರದ ಬಗ್ಗೆಯೋ ಚರ್ಚೆಗಳಾಗುತ್ತಿದ್ದವು. ಜನರಲ್ ಡೆಸ್ಕಿನ ಉಪಸಂಪಾದಕರ ಸುದ್ದಿ ಪ್ರಜ್ಞೆ, ಸಂವೇದನೆಗಳ ಬಗ್ಗೆ ಟೀಕೆ ಬರುತ್ತಿದ್ದುದು ಗ್ರಾಮಾಂತರ ಸುದ್ದಿ ಮೇಜಿನ ಮುನಿಯಪ್ಪನವರಿಂದ.

ಅವರು ಪ್ರತಿದಿನ ರಾತ್ರಿ ಒಂಬತ್ತರವರೆಗೆ ಇದ್ದು ಮೈಸೂರು ಮತ್ತು ನಗರ ಮುದ್ರಣಗಳಿಗೆ ಹೋಗಲೇಬೇಕಾದ ಗ್ರಾಮೀಣ ಸುದ್ದಿಗಳ ಪಟ್ಟಿಯೊಂದನ್ನು ಕೊಟ್ಟು ಹೋಗುತ್ತಿದ್ದರು. ಸ್ಥಳದ ಒತ್ತಡದಿಂದಾಗಿಯೋ ಅಥವಾ ರಾಷ್ಟ್ರೀಯ/ಅಂತರರಾಷ್ಟ್ರೀಯ ಮಟ್ಟದ ಸುದ್ದಿ ಸ್ಫೋಟದಿಂದಲೋ ಗ್ರಾಮೀಣ ಸುದ್ದಿಗಳು ನಿಂತು ಹೋಗುತ್ತಿದ್ದವು ಅಥವಾ ಆಯಾ ಮುದ್ರಣಕ್ಕೆ ಹೋಗಿ ನಗರ ಮುದ್ರಣಕ್ಕೆ ಬರುತ್ತಿರಲಿಲ್ಲ.

ಇದು ಜನರಲ್ ಡೆಸ್ಕ್ನಲ್ಲಿರುವವರಿಗೆ ಸುದ್ದಿ ಪ್ರಜ್ಞೆ ಇಲ್ಲ, ಗ್ರಾಮೀಣ  ಸಂವೇದನೆ ಇಲ್ಲ ಎಂಬ ಮುನಿಯಪ್ಪನವರ ಟೀಕೆಗೆ ಕಾರಣವಾಗಿತ್ತು. ಗ್ರಾಮೀಣ ಬದುಕಿನ ಸಮಸ್ಯೆಗಳು, ರೈತಾಪಿ ವರ್ಗದ ಕಷ್ಟನಷ್ಟಗಳು ವಿಧಾನ ಸೌಧಕ್ಕೆ ಮುಟ್ಟಬೇಕಾದರೆ ಆ ಸುದ್ದಿಗಳು ನಗರ ಮುದ್ರಣಕ್ಕೆ ಬರಬೇಕೆಂಬ ಮುನಿಯಪ್ಪನವರ ಆಗ್ರಹ ಸರಿಯಾದುದೇ ಆಗಿತ್ತು. “ನಮ್ಮೂರ ಸುದ್ದಿ ಸಮಸ್ಯೆಗಳು ಬೆಂಗಳೂರಿನ ಅಧಿಕಾರಿಗಳಿಗೆ ತಿಳಿಯಬೇಡವೇ?”ಎನ್ನುವ ಗ್ರಾಮೀಣ ವರದಿಗಾರರ ದೂರಿಗೆ ಮುನಿಯಪ್ಪ ದನಿಯಾಗುತ್ತಿದ್ದರು.

ಮುನಿಯಪ್ಪ ಅಪ್ಪಟ ಗಾಂಧಿ ಅನುಯಾಯಿಗಳಾಗಿದ್ದರು. ಬೆಂಗಳೂರಿನ ಸಮೀಪದ ಗ್ರಾಮವೊಂದರ ಆಗರ್ಭ ಶ್ರೀಮಂತ  ಕುಟುಂಬಕ್ಕೆ ಸೇರಿದವರು. ಖಾದಿ ಸಿಲ್ಕ್ ಬಿಟ್ಟು ಬೇರೆ ತೊಡುತ್ತಿರಲಿಲ್ಲ. ಬ್ರಹ್ಮಚಾರಿಯಾಗಿದ್ದ ಅವರಿಗೆ ಕೃಷಿ ಮತ್ತು ಗ್ರಾಮೀಣ ಕಸುಬುಗಳ ಬಗ್ಗೆ, ಗ್ರಾಮೋದ್ಯೋಗದ  ಹೆಚ್ಚಿನ ಕಾಳಜಿ ಇತ್ತು. ಅವರ ಟೀಕೆಗಳ ಹಿನ್ನೆಲೆ ಇದು. ಕಟುವಾಗಿ ಮಾತನಾಡುತ್ತಿದ್ದರಾದರೂ ಅಂತ:ಕರಣದಲ್ಲಿ ಮೃದು.

ಗ್ರಾಮೀಣ ಸುದ್ದಿಗಳ ಪರಿಷ್ಕರಣೆಯಲ್ಲಿ, ಗ್ರಾಮೀಣ ವರದಿಗಾರರಿಗೆ ಫೋನ್ ಮಾಡಿ ಸುದ್ದಿಗಳನ್ನು ತರಿಸುವುದರಲ್ಲಿ ನಿಷ್ಣಾತರಾಗಿದ್ದರು. ಗ್ರಾಮೀಣ ಕರ್ನಾಟಕದ ಚರಿತ್ರೆ, ಭೂಗೋಳ, ಅರ್ಥ ಶಾಸ್ತ್ರಗಳ ಜ್ಞಾನ ಚೆನ್ನಾಗಿತ್ತು. ಮುನಿಯಪ್ಪ ಅಪ್ಪಟ ಗಾಂಧಿವಾದಿಯಾಗಿದ್ದರೂ ಮಾಂಸಾಹಾರಿಯಾಗಿದ್ದರು. ಪ್ರತಿ ದಿನ ಕುರಿ-ಕೋಳಿಯ ಖಾದ್ಯಗಳನ್ನು ಅವರು ಬಯಸುತ್ತಿದ್ದರು. ಮಧ್ಯಾಹ್ನ ೧-೨ ಊಟದ ಸಮಯ.

ಈ ಸಮಯದಲ್ಲಿ ಎದುರಾದವರನ್ನು ಊಟಕ್ಕೆ ಕರೆದುಕೊಂಡು ಹೋಗುವುದು ಮುನಿಯಪ್ಪನ್ನರಿಗೆ ರೂಢಿಗತವಾಗಿತ್ತು. ನನ್ನಂತೂ ” ಏ ಬಾಪ್ಲೋಡಾ ವಸ್ತಾವ ಬೋಜನಾಂಕಿ” ಎಂದು ಕರೆದುಕೊಂಡು ಹೋಗುತ್ತಿದ್ದರು. ನಾನು ಅವರ ಜೊತೆಹೊದಾಗ ಬಹುತೇಕ ಅವರೂ ಶಾಖಾಹಾರಿಗಳಾಗುತ್ತಿದ್ದರು ಇಲ್ಲವೇ ನನಗೆ ಶಾಖಾಹಾರಿ ಊಟ ಕೊಡಿಸಿ ತಮಗೆ ಪ್ರಿಯವಾದ ಮಾಂಸಾಹಾರಿ ಹೋಟೆಲಿಗೆ ಹೋಗುತ್ತಿದ್ದರು. 

ಧಾರಾಳಿಯಾಗಿದ್ದ ಮುನಿಯಪ್ಪನವರಿಂದ ನಾವು ತಿಂಗಳ ಕೊನೆಯಲ್ಲಿ  ಸಣ್ಣಪುಟ್ಟ  ಕೈಸಾಲ ಪಡೆಯುತ್ತಿದ್ದೆವು. ಸಂಜೆಯಾದ ಮೇಲೆ ಮುನಿಯಪ್ಪ ಇಷ್ಟು ಧಾರಾಳಿಯಾಗಿರುತ್ತಿರಲಿಲ್ಲ. ಆದರೆ ನಮ್ಮಲ್ಲಿ ಕೆಲವರಿಗೆ ಸಂಜೆ ಕೆಲಸದ ನಂತರ ದುಡ್ಡಿನ ಅಗತ್ಯ ಬೀಳುತ್ತಿತ್ತು. ಗಾಂಧೀವಾದಿ ಮುನಿಯಪ್ಪ ಈ ಸಂಜೆಯ ಅಗತ್ಯಗಳಿಗೆ ಕೈಗಡವಾಗಿಯೂ ಹಣ ಕೊಡುತ್ತಿರಲಿಲ್ಲ.

ಈ ಸಂಜೆಯ ಮಂದಿ ಆಗ ಸಮಾಜವಾದಿ ಖಾದ್ರಿ ಶಾಮಣ್ಣನವರ ಬಳಿ ಧಾವಿಸುತ್ತಿದ್ದರು. ಆಗ ಖಾದ್ರಿಯವರು ಚೂರುಪಾರು ಸತಾಯಿಸಿ ಇಪ್ಪತು ಮುವತ್ತು ಕೊಡುತ್ತಿದ್ದರು. ಜಯಶೀಲ ರಾವ್ ಅವರಿಗೆ ಖಾದ್ರಿಯವರಲ್ಲಿ ವಿಶೇಷ ಸಲುಗೆ. “ಒಂದನೆ ತಾರೀಕು ಬೀಸಾಕಿಸಿಕೊಳ್ಳೋರಂತೆ.. ಕೊಡ್ರೀ” ಎಂದು ದುಂಬಾಲು ಬೀಳುತ್ತಿದ್ದರು. ಖಾದ್ರಿಯವರು `ಇಲ್ಲ, ಇಲ್ಲ’ ಎನ್ನುತ್ತಲೇ  ಸಾವಧಾನವಾಗಿ ಜುಬ್ಬದ ಒಳ ಜೀಬಿನಿಂದ ಗರಿಗರಿ ನೋಟುಗಳನ್ನು ತೆಗೆದುಕೊಡುತ್ತಿದ್ದರು.

ಮುನಿಯಪ್ಪ ಟಿಎಸ್ಸಾರ್ ನಿಧನಾನಂತರ ಆಫೀಸಿಗೆ ಬರುವುದನ್ನು ನಿಲ್ಲಿಸಿ ಬಿಟ್ಟರು.. ಹಾಗೆಂದು ರಾಜೀನಾಮೆಯನೂ ಕೊಡಲಿಲ್ಲ. ಹಠಾತ್ತನೆ  ನಾಪತ್ತೆಯಾಗಿಬಿಟ್ಟರು. ಬಂಧುಗಳಿದ್ದ ತಮ್ಮ ಹಳ್ಳಿಗೂ ಹೋಗಲಿಲ್ಲ. ಎಲ್ಲಿ ಹೋದರೆಂಬುದು ನಿಗೂಢವಾಗಿಯೇ ಉಳಿಯಿತು.

। ಮುಂದಿನ ವಾರಕ್ಕೆ ।

October 8, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ಸಂಘರ್ಷ-ಸಂಭ್ರಮ

ಸಂಘರ್ಷ-ಸಂಭ್ರಮ

ಸಾಹಿತ್ಯ ಕ್ಷೇತ್ರದಲ್ಲಿ ಜಿ ಎನ್ ರಂಗನಾಥ ರಾವ್ ಎಷ್ಟು ಮುಖ್ಯರೋ ಹಾಗೇ ಪತ್ರಿಕೋದ್ಯಮದಲ್ಲೂ.. ನವ್ಯ ಸಾಹಿತ್ಯದ ಏರುಗತಿಯ ವೇಳೆ ತಮ್ಮ ಬರಹಗಳಿಂದ...

ಎದೆಬಿಲ್ಲೆಯೂ ಮಾತುಕತೆಯೂ…

ಎದೆಬಿಲ್ಲೆಯೂ ಮಾತುಕತೆಯೂ…

ಮಕ್ಕಳ ಹಕ್ಕುಗಳ ಬಗ್ಗೆ ಬಲವಾಗಿ ಪ್ರತಿಪಾದಿಸುವ ಬೆರಳೆಣಿಕೆಯ ಮಂದಿಯಲ್ಲಿ ವಾಸುದೇವ ಶರ್ಮಾ ಅತಿ ಮುಖ್ಯರು. ಪ್ರಸ್ತುತ  ‘ಚೈಲ್ಡ್ ರೈಟ್ಸ್...

‘ಲೇಖ’ಕಿ ‘ಲೋಕ’ದ ಅನಾವರಣ

‘ಲೇಖ’ಕಿ ‘ಲೋಕ’ದ ಅನಾವರಣ

ಗಿರಿಜಾ ಶಾಸ್ತ್ರಿ ಕರ್ನಾಟಕ ಲೇಖಕಿಯರ ಸಂಘವು ಕೆಲವು ವರ್ಷಗಳಿಂದ ಲೇಖಕಿಯರು ತಮ್ಮ ಜೀವನಾನುಭವಗಳನ್ನು ಹಂಚಿಕೊಳ್ಳುವ 'ಲೇಖಕಿಯರ ಆತ್ಮ ಕಥೆಗಳ...

5 ಪ್ರತಿಕ್ರಿಯೆಗಳು

 1. SUDHA SHIVARAMA HEGDE

  ಸ್ವಾತಂತ್ರ್ಯ ಮತ್ತು ಮುಕ್ತತೆ……

  ಬಹಳ ಸೇರಿತು

  ಪ್ರತಿಕ್ರಿಯೆ
 2. ವಾಸುದೇವ ಶರ್ಮಾ

  ಕುತೂಹಲಕರವಾಗಿ ಪತ್ರಿಕೋದ್ಯಮದ ಚರಿತ್ರೆ.

  ಪ್ರತಿಕ್ರಿಯೆ
 3. ಲಲಿತಾ ಸಿದ್ಧಬಸವಯ್ಯ

  ಪ್ರಜಾವಾಣಿಯನ್ನು ಸತತ ಐವತ್ತು ವರ್ಷಗಳಿಂದ ಓದುತ್ತಿರುವ ನನಗೆ , ನನ್ನಂತಹ ಅನೇಕರಿಗೆ ಈ ಒಳ‌ ವಿಷಯಗಳಲ್ಲಿ ಖಂಡಿತವಾಗಿ ರುಚಿಯಿದೆ. ಕಾಯ್ದು ಓದುತ್ತೇವೆ.

  ಪ್ರತಿಕ್ರಿಯೆ
 4. ಸಿ. ಎನ್. ರಾಮಚಂದ್ರನ್

  ಪ್ರಿಯ ಜಿ ಎನ್ ಆರ್: ಐದು ದಶಕಗಳ ಹಿಂದಿನ “ಪ್ರಜಾವಾಣಿ” ಕಛೇರಿಯ ಬೌದ್ಧಿಕ ವಾತಾವರಣವನ್ನು ಬಹಳ ಕುತೂಹಲಕಾರಿಯಾಗಿ ಕಟ್ಟಿಕೊಡುತ್ತಿದ್ದೀರಿ. “ಎಲ್ಲಾ ಬರೀ ಕಾಮ –ಫ಼ುಲ್‍ಸ್ಟಾಪೇ ಇಲ್ಲ” –ಇಂತಹ ಉದ್ಗಾರಗಳು ಬಹು ಕಾಲ ತಲೆಯಲ್ಲಿ ಗುನುಗುನಿಸುತ್ತಿರುತ್ತವೆ. ಧನ್ಯವಾದಗಳು. ಸಿ. ಎನ್. ರಾಮಚಂದ್ರನ್

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: