ಎಲ್ಲೆ ಮೀರದಲ್ಲೇ ಇರುವ ಮೊಲ್ಲೆ ಮನದವಳು – ಮೋಹನ್ ವಿ ಕೊಳ್ಳೆಗಾಲ್ ಕವಿತೆ

ನಮ್ಮೂರಿನ ಸಿದ್ದಕ್ಕ…. – ಮೋಹನ್ ವಿ ಕೊಳ್ಳೇಗಲ್   ಅದ್ಯಾವುದೋ ತರಂಗ ಹಂಚಿಕೆಯಲ್ಲಿನ ಸಂಚು ಕಮಲ ಕೈಗಳ ಪ್ರತಿನಿತ್ಯದ ಹೊಂಚು ಭೂಕಬಳಿಕೆ, ರಾಜಕೀಯದಬ್ಬಾಳಿಕೆ ಅಣ್ಣಾ ಹಜಾರೆಯುಪವಾಸ__ಸದನದಶ್ಲೀಲ ದುಸ್ಸಾಹಸ ಯಾರೋ ಸತ್ತದ್ದು__ಮತ್ಯಾರೋ ಅತ್ತದ್ದು ಐಶ್ವರ್ಯ ರೈ ಹೆತ್ತದ್ದು__ಬಿನ್ ಲ್ಯಾಡೆನ್ ಕೊಂದಿದ್ದು ಲೋಕ ಹೊಳೆಯುತ್ತಿರುವುದು ಬೆಳೆಯುತ್ತಿರುವುದು ನವತಂತ್ರ ಕುತಂತ್ರ ಮೈದಳೆಯುತ್ತಿರುವುದು ಒಳ್ಳೆಯತನ ಕಾಲಡಿ ಕೊಳೆಯುತ್ತಿರುವುದು ಯಾವುದರ ಪರಿವೆಯೂ ಇಲ್ಲ ನಮ್ಮೂರ ಸಿದ್ದಕ್ಕನಿಗೆ   ಕೋಳಿ ಕೂಗಿಗೆ ಕಾಯಲ್ಲವಳು ಲೋಕ ಕಣ್ತೆರೆವ ಮುಂಚೆ ಮನೆ ಗುಡಿಸಿ ತಾರಿಸಿ ಸಗಣಿ ನೀರೆರಚಂಗಳಕ್ಕೆ ರಂಗವಲ್ಲಿಯಿಟ್ಟು ಕ್ಷಣಕಾಲ ಸೂರ್ಯನಿಗೆ ಮೈಕೊಟ್ಟು ಪುಳ್ಳೆ ತುರುಕಿ ಹೊಗೆಗೂಡನ್ನೂದಿ ಊದಿ ಮುಂಜಾನೆಗೇ ಮುದ್ದೆ ಜಡಿದು, ಸೊಪ್ಪುಪ್ಹೆಸರು ಬಸಿದು ನಿದ್ದೆಗಣ್ಣಿನ ಹೈಕಳ ಮಲ ತೊಳೆದು ಕುಡಿದ ಒಣ ಎದೆ ಗಂಡನನ್ನೆಬ್ಬಿಸೆಬ್ಬಿಸಿ ಗೋಡೆಗಳಿಲ್ಲದ ಸರ್ಕಾರಿ ಶಾಲೆಗೆ ಮಕ್ಕಳನ್ನಟ್ಟಿ ತೂಕಲಿಗೆ ಮುದ್ದೆ ಮುರಿದು ಪುಡಿಗಾಸಿನೊಡೆತನಕ್ಕೋಡುತ್ತಾಳೆ ಬಸವಳಿದಳಿದು ದುಡಿಯುತ್ತಾಳೆ, ಬಿಸಿಲಿನಲ್ಲುರಿಯುತ್ತಾಳೆ   ರಸ್ತೆಯ ಗುಡ್ಡ ಏರಿ ಬಂದ ನಾಲ್ಕರ ಬಸ್ಸು ಪಡುವಣ ದಿಗಂತದೆದೆಯಲ್ಲಿ ಕುಳಿತ ರವಿ ಆಗಷ್ಟೇ ಬಂದ ಗೌಡನ ಕೈ ಸನ್ನೆಗೆ ಕಾದು ಸುಸ್ತಾಗಿ ತಡವರಿಸಿ ಬರುತ್ತಾಳೆ ಪಾಪ ಸಿದ್ಧಕ್ಕ ಅರಳುಗಣ್ಗಳ ಮಕ್ಕಳ ಮೊಗವರಮನೆೆ ಎಂಟೆಂಟಾಣೆ ಕೊಟ್ಟು, ಮುಂದೆ ಮಂಡಕ್ಕಿ ತಂಬಿಟ್ಟಿಟ್ಟು ಮತ್ತದೇ ಕೆಲಸಕ್ಕೆ ಮೈಮುರಿಯುವ ಸರದಿ ಕತ್ತಲಾದಂತೆ, ಜಗತ್ತಿಗೆ ಚಂದ್ರ ಬೆತ್ತಲಾದಂತೆ ಕುಡುಕ ಗಂಡನ ತಡಕಿ, ಗಲ್ಲಿ ಗಲ್ಲಿಯಲ್ಲಿಣುಕಿ ಚರಂಡಿ ಛಾವಡಿಯಲ್ಲಿ ಹುಡುಕಿ ಹೆಗಲಿಗೆ ಕೈ ಏರಿಸಿ ಹೊತ್ತು ತರುತ್ತಾಳೆ ಅತ್ತತ್ತು ತುತ್ತು ತಿನ್ನಿಸಿ, ಮುದ್ದಿಸಿ ಮೈ ಒರೆಸಿ ಒಪ್ಪಿಕೊಂಡಪ್ಪಿಕೊಂಡು ಕಾಮಪ್ರೇಮದ ವಾಸನೆಯಲ್ಲೆಲ್ಲಾ ಮರೆತು ಬಿಡುತ್ತಾಳೆ   ಅವಳಿಗೀ ಜೀವನ ಬಟಾಬಯಲಲ್ಲ ಮನಸ್ಸು ಮನೆಮಂದಿ ಮೀರಲ್ಲ ನೋವಿನುರಿಯಲ್ಲಿ ನೋಯುತ್ತಾಳೆ, ಬೇಯುತ್ತಾಳೆ ಮರೆತೆಲ್ಲಾ ಸಂಕಟ ಬಾಳನೊಗ ಹೊರುತ್ತಾಳೆ ಕತ್ತಲು ಮುತ್ತಿಕೊಂಡಂತೆ ಛಾವಡಿಯಲ್ಲಿ ಕುಳಿತು ತತ್ವಪದ, ಭಜನೆಯಲ್ಲಿ ತನ್ನನ್ನೇ ಮರೆತು ಪಾರಮಾರ್ಥದ ಜೇನಲ್ಲಿ ಕರಗುತ್ತಾಳೆ ಮನೆಗೆ ಬಂದ ಚಣದಲ್ಲಿಯೇ ಮೂರು ಕಡ್ಡಿ ಹಚ್ಚಿ ಎಲ್ಲಾ ಭಗಂತನಿಚ್ಚೆ ‘ಶಿವಾ’ ಎನ್ನುತ್ತಾಳೆ ಊರ ನೂರು ದಾರಿಯಲ್ಲೆಲ್ಲೋ ಕುಳಿತು – ಪೆಪ್ಪರಮೆಂಟು ಚಪ್ಪರಿಸಿ, ಚರಕ್ಕನೇ ಸಂಡಿಗೆ ತಿಂದು ತಂಗಳು ಪಂಗಳು ನುಂಗಿ ಬೆಳೆಯುತ್ತವೆ ಮಕ್ಕಳು ಹಡೆವ ಕಾಲಕ್ಕೆ ಹಡೆಯುತ್ತವೆ ತೊಡೆದೆಲ್ಲಾ ನೋವ ಗಂಡನ ಹಾದರದ ಕೊಳೆ ತೊಳೆಯಲು ಒಂದು ಪಂಚಾಯಿತಿ ಕಟ್ಟೆ ಸಾಕು, ಅಲ್ಲೇ ಕೈ ಹಿಡಿಯುತ್ತಾಳೆ ಒಟ್ಟಿನಲ್ಲಿ ದುಃಖವನ್ನೊಪ್ಪಿಕೊಂಡಪ್ಪಿಕೊಂಡ ಸುಖಜೀವಿ ಎಲ್ಲೆ ಮೀರದಲ್ಲೇ ಇರುವ ಮೊಲ್ಲೆ ಮನದವಳು  ]]>

‍ಲೇಖಕರು G

May 25, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

9 ಪ್ರತಿಕ್ರಿಯೆಗಳು

 1. naresh mayya

  ಅದ್ಭುತವಾದ ವರ್ಣನೆ, ಬಹಳ ಅಪರೂಪದ ಚಿತ್ರಣ, ಎಲ್ಲೇ ಮೀರಿಸಲೇ ಮೀಸಲಾದ ಈ ಕೆಟ್ಟ ವಿದ್ಯುನ್ಮಾನ ಕಾಲದಲ್ಲಿ, ಮೊಲ್ಲೆ ಮನದವಳನ್ನ ಕಾಣಿಸಿಕೊಟ್ಟದ್ದಕ್ಕೆ ಕೋಟಿ ಸಲಾಮು.

  ಪ್ರತಿಕ್ರಿಯೆ
 2. badarinath palavalli

  ಗ್ರಾಮೀಣ ಅಮಾಯಕ ಜಗತ್ತನ್ನು ಬಿಡಿಸಿಡುತ್ತಲೇ ಕೊಳ್ಳೇಗಾಲರು ಪ್ರಸಕ್ತ ರಾಜಕೀಯ ದೊಂಬರಾಟವನ್ನೂ ಸರಿಯಾಗಿ ಝಾಡಿಸಿದ್ದಾರೆ.
  ಅಂದಹಾಗೆ ನಮ್ಮ ಹಳ್ಳಿಗಾಡೂ ಟೀವಿ ದೆಸೆಯಿಂದ ಇತ್ಲಾಗೆ ಒಸೀ ಚಪಲಕ್ಕೆ ಬಿದ್ದಿದೆ ಎನ್ನಿ!

  ಪ್ರತಿಕ್ರಿಯೆ
 3. ರವಿ ಮುರ್ನಾಡು, ಕ್ಯಾಮರೂನ್

  ಆನಂದ ತು೦ದಿಲನಾಗಿದ್ದೇನೆ. ಅವಧಿಗೆ ಸಾಷ್ಠಾ೦ಗ ಪ್ರಣಾಮಗಳು.
  ನೂರಾರು ಸೃಜನಶೀಲ ತೆರೆಮರೆಯ ಉದಯೋನ್ಮುಖ ಬರಹಗಾರರು ಕನ್ನಡ ಸಾಹಿತ್ಯದಲ್ಲಿ ಮತ್ತೆ ಜೀವ ಪಡೆಯಬೇಕಿದೆ. ಅದನ್ನು ಅವಧಿಯಲ್ಲಿ ಕಾಣುತ್ತಿದ್ದೇನೆ. ಈ ಗುರಿಯನ್ನು” ಪ್ಹೆಸ್ಬುಕು ಕನ್ನಡ ಬ್ಲಾಗ್ ಸಮುದಾಯ”ದ ಮೂಲಕ ಅರ್ಪಿಸಬೇಕೆಂಬ ಅಧಮ್ಯ ಆಸೆಯಿತ್ತು. 25ಸಾವಿರ ಕನ್ನಡಿಗರನ್ನು ಜಗತ್ತಿನಾದ್ಯ೦ತ ಒಂದೆಡೆ ಒಂದಾಗಿರುವ ಗುರಿಯಿತ್ತು. ನೂರು ಮಂದಿಯನ್ನು ಸಾಹಿತ್ಯಕ್ಕೆ ತಯಾರು ಮಾಡಿ ಕನ್ನಡ ಸಾಹಿತ್ಯವನ್ನು ಶ್ರೀಮ೦ತಗೊಳಿಸಬೇಕಿತ್ತು. ಕಾರಣಾ೦ತರದಿಂದ ಆ ಶಕ್ತಿಯನ್ನು ಕಳೆದುಕೊಂಡಿದ್ದೇನೆ. ಆ ಕಾರ್ಯವನ್ನು ಅವಧಿ ಮಾಡಬೇಕೆಂದು ಆಶಿಸುತ್ತೇನೆ. ಸೃಜನ ಶೀಲ, ಮೌಲ್ಯಯುತ ತೆರೆಮರೆಯ ಉದಯೋನ್ಮುಖರ ಹುಡುಕಾಟಕ್ಕೆ ತೊಡಬೇಕಾಗಿ , ವೇದಿಕೆ ಕಲ್ಪಿಸಿ ನಾಡಿಗೆ ಸಮರ್ಪಿಸಬೇಕಾಗಿ ಈ ಹೊರನಾಡ ಕನ್ನಡಿಗನ ಪ್ರಾರ್ಥನೆ.
  ಎಲ್ಲಾ ತೆರೆಮರೆಯ ಬರಹಗಾರರು ಚೈತನ್ಯ ಪಡೆದುಕೊಳ್ಳಿ, ಹೊಸ ಉತ್ಸಾಹದೊಂದಿಗೆ “ಸಾಹಿತ್ಯದ೦ಗಳ ಅವಧಿ”ಗೆ ಸಾಗರೋಪಾದಿಯಲ್ಲಿ ನುಗ್ಗಿ ಬರಲಿ. ಕನ್ನಡಿಗರ ಪ್ರೋತ್ಸಾಹ ಸದಾ ಇರಲಿ.
  ಮತ್ತೊಮ್ಮೆ ವಂದನೆಗಳು.
  ಶುಭ ಶುಕ್ರವಾರದ ಶುಭ ಸಂಜೆಯೊ೦ದಿಗೆ.
  -ಕ್ಯಾಮರೂನ್ , ಆಫ್ರಿಕಾದಿಂದ

  ಪ್ರತಿಕ್ರಿಯೆ
 4. ಪುಷ್ಪರಾಜ್ ಚೌಟ, ಬೆಂಗಳೂರು

  ಫೇಸ್ಬುಕ್ ಗುಂಪು ”ಕನ್ನಡ ಬ್ಲಾಗ್” [https://www.facebook.com/groups/kannadablog/] ಕಂಡ ಮೇರು ಕವಿ ಮನಸು ಮೋಹನ್ ಕೊಳ್ಳೇಗಾಲ. ನಮ್ಮೂರಿನ ಸಿದ್ದಕ್ಕ ಒಂದು ಸಾಮಾಜಿಕ ಕಳಕಳಿಯ ಆಶಯ ಹೊತ್ತ ಕವಿತೆ. ಈ ಕನ್ನಡ ಚೇತನದಿಂದ ಇನ್ನಷ್ಟು ಉತ್ತಮ ಕವಿತೆಗಳು ಹೊರಬರಲಿ.

  ಪ್ರತಿಕ್ರಿಯೆ
 5. Prasad V Murthy

  ಮೋಹನಣ್ಣ ನಮ್ಮ ಸಿದ್ದಕ್ಕ ಇನ್ನಷ್ಟು ಜನರಿಗೆ ಪರಿಚಿತಳಾಗುತ್ತಿದ್ದಾಳೆ ನಿಮ್ಮೂಲಕ.. ಅಭಿನಂದನೆಗಳು ನಿಮಗೆ.. ನಿಮ್ಮ ಶೈಲಿ ನನ್ನನ್ನು ಮೋಡಿ ಮಾಡುತ್ತದೆ ಮಾರಾಯ್ರೆ.. ಎಷ್ಟು ಸಲ ಓದಿದರೂ ಸರಾಗವಾಗಿ ಓದಿಸುವ ತಾಕತ್ತಿದೆ ನಿಮ್ಮ ಲೇಖನಿಗೆ.. ಜನಮನದಲ್ಲಿ ಬೆರೆತವಳು ಸಿದ್ದಕ್ಕ.. ಮಾತಾಗುತ್ತಾಳೆ ಅವರದೆ ಭಾಷೆಗೆ, ಅವರದೆ ಆಶಯಕ್ಕೆ.. ಮನದಾಳಕ್ಕಿಳಿಯುವ ಕವಿತೆ.. ಇಂತವುಗಳು ಇನ್ನಷ್ಟು ನಿಮ್ಮ ಲೇಖನಿಯಿಂದ ಹರಿದುಬರಲಿ.. ಶುಭವಾಗಲಿ, ನಿಮ್ಮ ಕೀರ್ತಿ ಪತಾಕೆ ಇನ್ನಷ್ಟು ಎತ್ತರಕ್ಕೇರಲಿ..:)))

  ಪ್ರತಿಕ್ರಿಯೆ
 6. Banavasi Somashekhar.

  ನಮ್ಮೂರ ಸಿದ್ಧಕ್ಕ ಗೆಳೆಯ ಮೋಹನ ಅವರ ಅದ್ಭುತ ಸಂವೇದನೆ ಮತ್ತು ಮನಸಿನ ತೀವ್ರ ತಾಕಲಾಟದಿಂದ ಹೊರಹೊಮ್ಮಿದ ಪರಿಣಾಮಕಾರಿ ಕವಿತೆ.ಅವರ ಚಿಂತನೆಯ ಧಾಟಿ ಆಳ ಮತ್ತು ವ್ಯಾಪಕ ಹರಿವನ್ನು ಹೋದಿದಾಗಿದೆ.ಸಿದ್ಧಕ್ಕನಂತವರ ಬದುಕಿನ ಹಸಿ ಚಿತ್ರಣವನ್ನು ಕಣ್ಣಿಗೆ ಕಟ್ಟುವ ಛಾತಿ ಮೋಹನ ಅವರ ಬರವಣಿಗೆಯ ತಾಕತ್ತು.ಅಭಿನಂದನೆಗಳು.

  ಪ್ರತಿಕ್ರಿಯೆ
 7. ಪ್ರಮೋದ್ ಶೆಟ್ಟಿ

  ಸುಂದರವಾದ ,ಅದ್ಭುತವಾದ ಕವಿತೆಕಟ್ಟುವಲ್ಲಿ ನಮ್ಮ ಮೋಹನ ಕೊಳ್ಳೇಗಾಲರು ನಿಸ್ಸೀಮರು. ಇದು ಕೂಡ ತುಂಬಾ ಸುಂದರವಾದ ಕವಿತೆ

  ಪ್ರತಿಕ್ರಿಯೆ
 8. Pramod Pammi

  ನಲ್ಮೆಯ ಮೋಹನಣ್ಣನ ಕಾವ್ಯ ಪ್ರೌಢಿಮೆ ಮೆಚ್ಚುವಂತದ್ದು., ಅವರ ಈ ಕವಿತೆ ಗ್ರಾಮೀಣ ಬದಿಕಿನ ಮಹಿಳೆಯ ಬದುಕಿನ ಚಿತ್ರಣವನ್ನು ತಂದೊಡ್ಡುತ್ತದೆ., ಗ್ರಾಮೀಣ ಬದುಕನ್ನು ಬಿಂಬಿಸಲು ಸಹ್ಯ ಪದಗಳನ್ನು ಹೆಕ್ಕಿ., ಒಕ್ಕಣಿಸಿ ಜೋಡಿಸಿರುವ ಪರಿ ಮನಕ್ಕೆ ಹೊಕ್ಕುತ್ತದೆ., ಅವರ ಕಾವ್ಯ ಯಾನ ಹೀಗೇ ಸಾಗುತ್ತಿರಲಿ..:))

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: